Saturday, December 29, 2012

ದೆಹಲಿಯಲ್ಲಿ ಕ್ರೌರ್ಯ ಎಂಬುದು ಅಪರೂಪವಲ್ಲ.
ದೆಹಲಿಯಲ್ಲಿ ಕ್ರೌರ್ಯ ಎಂಬುದು ಅಪರೂಪವಲ್ಲ. ಪೌರಾಣಿಕವಾಗಿ ಈ ಪ್ರದೇಶದಲ್ಲಿ ಕುರುಕ್ಷೇತ್ರ ಯುದ್ಧ ನಡೆಯಿತು. ಐತಿಹಾಸಿಕವಾಗಿ ಪಾನಿಪತ ಕದನಗಳು ನಡೆದವು. ಸ್ವಾತಂತ್ರ್ಯ ಹೋರಾಟ ಅಹಿಂಸಾತ್ಮಕವಾದರೂ ದೇಶ ವಿಭಜನೆಯ ಪರಿಣಾಮವಾಗಿ ನಡೆದ ಗಲಭೆಗಳಲ್ಲಿ  ಹಲವರು ನಿರಾಶ್ರಿತರಾಗುವ ಜತೆಗೆ ಜೀವಗಳ ಬಲಿದಾನವೂ ನಡೆಯಿತು. ಖಲಿಸ್ಥಾನ್ ಚಳುವಳಿಯ ಭಯೋತ್ಪಾದಕ ಕೃತ್ಯಗಳಿಗೆ ಅಮಾಯಕರು ಬಲಿಯಾದರು. ಇಂದಿರಾಗಾಂಧಿ ಹತ್ಯೆಯ ನಂತರ ಒಂದು ಸಮುದಾಯದವರನ್ನು ಕಂಡಲ್ಲಿ ಕೊಚ್ಚಿ ಕೊಲ್ಲಲಾಯಿತು. ಕಳೆದ ಶತಮಾನದ ಎಂಭತ್ತರ ದಶಕ ಮುಗಿಯುವಷ್ಟರಲ್ಲಿ ದೆಹಲಿ ಎಂಬುದು ಕ್ರೌರ್ಯದ ಕರಾಳ ಛಾಯೆಯಿಂದ ಹೊಸ ಬೆಳಕಿನತ್ತ ಹೊರಳುತ್ತಿತ್ತು. ಅಷ್ಟರಲ್ಲಿ ಬಾಬ್ರಿ ಮಸೀದಿ ಉರುಳಿ ಮುಂಬಯಿ ಭಯೋತ್ಪಾದನೆಯ ಕಿಡಿಗಳು ದೆಹಲಿಯ ಜನನಿಬಿಡ ಮಾರುಕಟ್ಟೆಗಳಾದ ಕರೋಲ್‍ಬಾಗ್, ಕನಾಟ್‍ಪ್ಲೇಸ್, ಲಾಜ್‍ಪತ್ ನಗರ, ಸರೋಜಿನಿ ನಗರ, ಹೈಕೋರ್ಟು ಮೊದಲಾದೆಡೆ ಬಾಂಬ್ ದಾಳಿಯಾಗುವುದರ ಮೂಲಕ ಕ್ರೌರ್ಯ ತನ್ನ ಕೆನ್ನಾಲಿಗೆಯನ್ನು ಹೊರ ಹಾಕುತಿತ್ತು. ತೊಂಭತ್ತರ ದಶಕದ ಆರಂಭದಲ್ಲಿ ಮಹಿಳೆಯೊಬ್ಬಳನ್ನು ಕೊಂದು, ನಗರದ ಮಧ್ಯಭಾಗದ ಧಾಭವೊಂದರ ರೋಟಿ ಬೇಯಿಸುವ ಒಲೆಯಲ್ಲಿ ಸುಟ್ಟ ಹಾಕಿದ ಪ್ರಕರಣ, ನಂತರ ಪತ್ರಕರ್ತೆಯೊಬ್ಬಳ ಹತ್ಯೆ, ಬಾರೊಂದರಲ್ಲಿ ಅಪರಾತ್ರಿಯ ನಂತರ ಮದಿರೆ ನೀಡಿಲ್ಲ ಎಂದು ಬಾರಿನ ಮಹಿಳೆಯೊಬ್ಬಳನ್ನು ಕೊಂದ ಪ್ರಕರಣ, ಪ್ರಭಾವಿ ರಾಜಕೀಯ ನಾಯಕನೊಬ್ಬನ ಮಗನಿಂದ ತನ್ನ ಗೆಳತಿಯ ಹತ್ಯೆ, ಗೋಣಿ ಚೀಲಗಳಲ್ಲಿ ತುಂಬಿ ರೈಲು ನಿಲ್ದಾಣಗಳಲ್ಲಿ ಬಿಟ್ಟು ಹೋದ ಹೆಣಗಳು, ಹಣದಾಸೆಗೆ ಮನೆ ಮಾಲೀಕರನ್ನೇ ಕೊಲ್ಲುವ ಕೆಲಸದವರು, ಹೀಗೆ ದೆಹಲಿಯ ಕ್ರೌರ್ಯಕ್ಕೆ ಸಾವಿರ ಮುಖಗಳು. ದೆಹಲಿಗೆ ಮೆಟ್ರೋ ರೈಲು ಬಂದು ಹತ್ತು ವರ್ಷವಾಯಿತು. ಅದಕ್ಕಿಂತ ಮುಂಚೆ ಖಾಸಗಿ ಕೆಂಪು ಗೆರೆಯ ಬಸ್ಸುಗಳು ಅಪರಾಧಗಳ ಕೇಂದ್ರವಾಗಿದ್ದವು. ತುಂಬಿದ ಬಸ್ಸುಗಳಲ್ಲಿ ಪ್ರಯಾಣಿಸುವ ಹೆಣ್ಣು ಮಕ್ಕಳ ಮೈಯೆಲ್ಲಾ ಕೈಯ್ಯಾಡಿಸುವವವರು ಅದೇ ಕಾರಣಕ್ಕೆ ಬಸ್ಸೇರುತ್ತಿದ್ದರು. ಇಷ್ಟೆಲ್ಲಾ ಕ್ರೌರ್ಯವನ್ನು ತುಂಬಿಟ್ಟಿರುವ ದೆಹಲಿಯಲ್ಲಿ ಜನ ನಿಟ್ಟುಸಿರನ್ನು ಎದೆಯೊಳಗೆ ಹಿಡಿದುಕೊಂಡು ಎಲ್ಲೆಡೆ ಓಡಾಡುತ್ತಿದ್ದರು.
ಹೊಸ ಶತಮಾನ. ಹೊಸ ತಲೆಮಾರಿನ ಜನರು. ಹೊಸ ತಲೆಮಾರಿನ ತಂತ್ರಜ್ಞಾನ. ದೆಹಲಿಯ ಬದುಕು ಇನ್ನಷ್ಟು ಸಂಕೀರ್ಣವಾಯಿತೋ ಅಥವಾ ಸರಳವಾಯಿತೋ. ನಗರದ ಹೊರವಲಯದಲ್ಲಿ ಗುರ್‌ಗಾಂವ್, ನೋಯ್ಡಾಗಳು ದೆಹಲಿಯನ್ನು ಹಿಮ್ಮೆಟ್ಟುವಷ್ಟರ ಮಟ್ಟಿಗೆ ಬೆಳೆಯಿತು. ಹರಿಯಾಣದ ಜಾಟರು, ಉತ್ತರ ಪ್ರದೇಶದ ಯಾದವರು ತಾವು ಉತ್ತು ಬೆಳೆಯುತ್ತಿದ್ದ ಹೊಲಗಳನ್ನು ಮಾರಿ ಅಲ್ಲಿ ಬೃಹತ್ ಬಹುಮಹಡಿ ಮಾಲ್‍ಗಳು, ಹೋಟೆಲ್‍ಗಳು, ಆಸ್ಪತ್ರೆಗಳು, ಶಾಲೆ ಕಾಲೇಜುಗಳು, ಗೃಹ ಸಮುಚ್ಚಯಗಳು ಏಳುವುದನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದರು. ಅವರ ಜೇಬುಗಳಲ್ಲಿ ಹಣ ತುಂಬಿತ್ತು. ಹುಡುಗರು ಮಾರುಕಟ್ಟೆಯಲ್ಲಿ ದೊರೆಯುವ ದೊಡ್ಡ ದೊಡ್ಡ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ಸ್‍ನಲ್ಲಿ ಕುಳಿತು, ನೆರೆಯ ಮಾಲ್‍ಗಳಲ್ಲಿ ದೊರೆಯುವ ಬೆಲೆಬಾಳುವ ವಾಚುಗಳನ್ನು ಕಟ್ಟು, ವಿದೇಶಿ ಬ್ರಾಂಡ್ ವೇಷ ಭೂಷಣಗಳಲ್ಲಿ ದೆಹಲಿಯ ರಸ್ತೆಗಳಲ್ಲಿ ಯಾರಿಗೂ ಕೇರ್ ಮಾಡದೇ ಓಡಾಡುತ್ತಿರುವರು. ಅವರಿಗೆ ತಮ್ಮ ಶೌರ್ಯವನ್ನು ಮೆರೆಯುವ ಅವಕಾಶ ಸಿಕ್ಕಿದೆ.
ದೆಹಲಿಯಲ್ಲಿ ಪ್ರತಿದಿನ ನಡೆಯುವ ಅಪರಾಧಗಳು ಪೋಲೀಸ್ ಠಾಣೆಗಳಲ್ಲಿ ನೋಂದಣಿಯಾದರೂ, ಮಾಧ್ಯಮಗಳಲ್ಲಿ ವರದಿಯಾಗಲು ಅವುಗಳು ವಿಭಿನ್ನವಾಗಿರಬೇಕು. ಅಥವಾ ಮಾಧ್ಯಮದ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳಿರಬೇಕು.
ಇಂತಹ ಅದೆಷ್ಟೋ ಬರ್ಬರ ಹತ್ಯೆ, ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲಿನ ಭೀಕರ ಅತ್ಯಾಚಾರಗಳ ಕ್ರೌರ್ಯದ ನಡುವೆ ಡಿಸೆಂಬರ್ 16 ರ ರಾತ್ರಿ ನಡೆದ ಘಟನೆ ಇಡೀ ಭಾರತವನ್ನು ಎಚ್ಚರಿಸಿದೆ. ಇದು ಸಮೂಹ ಮಾಧ್ಯಮಗಳು ತೋರಿಸಿದ ಆಸಕ್ತಿ ಮತ್ತು ಕಾಲೇಜು ವಿದ್ಯಾರ್ಥಿಗಳು ತಮ್ಮ ಕೊಠಡಿಗಳಿಂದ ಹೊರ ಬಂದು ದೆಹಲಿಯ ಕೇಂದ್ರಬಿಂದು ಇಂಡಿಯಾ ಗೇಟ್‍ನಲ್ಲಿ ಒಗ್ಗೂಡಿ ಪ್ರತಿಭಟನೆಯ ಒಂದು ಮಗ್ಗುಲನ್ನು ಮತ್ತು ದೇಶ ಆಳುವ ಮತ್ತು ರಾಜಕೀಯ ವರ್ಗ ತೋರಿಸಿದ ಆನಾಸಕ್ತಿ ಇನ್ನೊಂದು ಮಗ್ಗುಲನ್ನು ತೋರಿಸಿತು. ಕಳೆದೆರಡು ವರ್ಷಗಳಿಂದ ಅಣ್ಣಾ ಹಜಾರೆ, ಅರವಿಂದ ಕೇಜ್ರೀವಾಲ ನಡೆಸಿದ ಭ್ರಷ್ಟಾಚಾರದ ವಿರುದ್ಧದ ಹೋರಾಟಗಳು ಜನರನ್ನು ಬೀದಿಗೆ ಬಂದು ವ್ಯವಸ್ಥೆಯ ವಿರುದ್ಧ ಹೋರಾಡುವ ದಾರಿಯನ್ನು ತೋರಿಸಿತು. ಆದರೆ ಆ ಹೋರಾಟದ ಪರಿಣಾಮ ಸಂಸತ್ತಿನಲ್ಲಿ ಚರ್ಚೆಯಾಗಿ ಲೋಕಪಾಲ ಕಾಯಿದೆ ಜ್ಯಾರಿಗೊಳ್ಳುವಲ್ಲಿ  ವಿಫಲವಾಯಿತು. ಜತೆಗೆ ಯಾರ ವಿರುದ್ಧ ಹೋರಾಟ ಮಾಡುತ್ತಿದ್ದರೋ ಅದೇ ರಾಜಕೀಯ ವ್ಯವಸ್ಥೆಯನ್ನು ಅಪ್ಪಿಕೊಂಡ ಹೋರಾಟದ ಮುಖಂಡರ ನಡುವಿನ ನಿಲುವುಗಳು ಸಾಮಾನ್ಯ ಜನರನ್ನು ಭ್ರಮ ನಿರಶನಗೊಳಿಸಿತು.
ಯಾವುದೇ ಸಿದ್ದಾಂತದ ಹಿನ್ನಲೆಯನ್ನು ಪಡೆಯದೇ, ಯಾವುದೇ ರಾಜಕೀಯ ನಿಲುವನ್ನು ಹೊಂದದೇ ನಿರ್ಲಿಪ್ತ ವ್ಯವಸ್ಥೆಯ ವಿರುದ್ದ ಎಚ್ಚೆತ್ತ ಯುವಕರು ದೆಹಲಿಯ ಕ್ರೌರ್ಯದ ವಿರುದ್ದ ಸೆಟೆದು ನಿಂತಿದ್ದಾರೆ.
ಪ್ಯಾರ ಮೆಡಿಕಲ್ ಓದುತ್ತಿದ್ದ ಹುಡುಗಿಯೊಬ್ಬಳು ತನ್ನ ಗೆಳೆಯನೊಂದಿಗೆ ಸಿನಿಮಾ ನೋಡಿ ಮನೆಗೆ ಹೋಗಲು ಹಿಡಿದ ಖಾಸಗಿ ಬಸ್ಸೊಂದರಲ್ಲಿ ಅತ್ಯಂತ ಭೀಕರ ರೀತಿಯಲ್ಲಿ ಸಮೂಹ ಅತ್ಯಾಚಾರಕ್ಕೆ ಒಳಗಾದಳು. ಅತ್ಯಾಚಾರ ಎಸಗಿದವರು ದಕ್ಷಿಣ ದೆಹಲಿಯ ಆರ್.ಕೆ.ಪುರಂ ಪ್ರದೇಶದ ಕೊಳಗೇರಿಯೊಂದರಲ್ಲಿ ವಾಸಿಸುತ್ತಿದ್ದರು.
ದೆಹಲಿಯ ಪ್ರತಿಷ್ಟಿತ ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯುವ ಬಸ್ಸು ಅದಾಗಿತ್ತು. ಮಕ್ಕಳನ್ನು ಶಾಲೆಗೆ ಬಿಟ್ಟ ನಂತರ ವಸತಿ ಬಡಾವಣೆಗಳಿಂದ ಆಫೀಸುಗಳಿಗೆ ಜನರನ್ನು ಈ ಬಸ್ಸುಗಳು ಕರೆದೊಯ್ಯುತ್ತವೆ. ಅವಕ್ಕೆ ಚಾರ್ಟ್‌ರ್ಡ್ ಬಸ್ಸುಗಳೆಂದು ಹೆಸರು. ಅಂದು ಭಾನುವಾರ. ಶಾಲೆಗಳಿಗೆ ರಜೆ.  ಡ್ರೈವರ್ ರಾಮ್ ಸಿಂಗ್ ಬಸ್ಸನ್ನು ತನ್ನ ಕೊಳಗೇರಿಯ ಜೋಪಡಿಯ ಪಕ್ಕದಲ್ಲೇ ನಿಲ್ಲಿಸಿದ್ದ. ಸಂಜೆ ಹೊತ್ತಿಗೆ ಆತನ ಗೆಳೆಯರು ಸೇರಿ ಸಣ್ಣ ಪಾರ್ಟಿಯೊಂದು ಮಾಡಿದರು. ಕಂಠಪೂರ್ತಿ ಕುಡಿದರು. ಇನ್ನೂ ಕುಡಿಯ ಬೇಕೆಂದೆನಿಸಿದರೂ ಜೇಬು ಖಾಲಿಯಾಗಿತ್ತು. ಕುಡಿದು ಸುಮ್ಮನೆ ಕುಳಿತುಕೊಳ್ಳಲಾಗುವುದಿಲ್ಲವಲ್ಲ. ಹತ್ತಿರ ಇದ್ದ ಬಸ್ಸನ್ನು ಏರಿ ಒಂದು ಸುತ್ತು ಜಾಲಿಯಾಗಿ ತಿರುಗಾಡಿ ಬರೋಣ ಎಂದು ಹೊರಟರು. ಸಂಜೆ ಹೊತ್ತಿಗೆ ಯಾರಾದರೂ ಸಿಕ್ಕಿದರೆ ಸ್ವಲ್ಪ ಕೈಯಲ್ಲಿ ಕಾಸು ಸಿಗಬಹುದು ಎಂಬ ಆಲೋಚನೆಯೂ ಬಂತು. ಆರ್.ಕೆ. ಪುರಂ ಪಕ್ಕದ ಮುನಿರ್ಕಾದತ್ತ ಬಸ್ಸನ್ನು ಓಡಿಸುತ್ತಾ ಬಂದರು. ಒಬ್ಬ ವ್ಯಕ್ತಿ ಬಸ್ಸೇರಿದ. ಆತನನ್ನು ಹೆದರಿಸಿ ಅವನ ಮೊಬೈಲ್ ಫೋನ್ ಮತ್ತು ಪರ್ಸಿನಲ್ಲಿದ ಹಣವನ್ನು ದೋಚಿ ಅವನನ್ನು ರಸ್ತೆ ಮಧ್ಯೆ ಬಿಟ್ಟು ಬಿಟ್ಟರು. ಮತ್ತೆ ಬಸ್ಸನ್ನು ಓಡಿಸುತ್ತಾ ಮುನಿರ್ಕಾದತ್ತ ಬಂದರು. ಅಲ್ಲಿ ಪ್ಯಾರ ಮೆಡಿಕಲ್ ಓದುತ್ತಿದ್ದ ಯುವತಿಯೊಬ್ಬಳು ತನ್ನ ಗೆಳೆಯನೊಂದಿಗೆ ಸಿನಿಮಾ ನೋಡಿ ಮನೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದಳು. ರಾಮ್ ಸಿಂಗ್ ಬಸ್ ಬಿಡಲು ತನ್ನ ತಮ್ಮನಿಗೆ ಹೇಳಿದ. ಉಳಿದ ಗೆಳೆಯರೊಂದಿಗೆ ಹಿಂದಿನ ಸೀಟಿನಲ್ಲಿ ಹೋಗಿ ಕುಳಿತುಕೊಂಡ. ಬಸ್ಸೇರಿದ ಹುಡುಗಿಯ ಜತೆ ಆಕೆಯ ಗೆಳೆಯನೂ ಕುಳಿತ. ಗೆಳೆಯನೊಡನೆ ಆತ್ಮೀಯವಾಗಿದ್ದ ಯುವತಿಯನ್ನು ಕೆಣಕಲು ರಾಮ್ ಸಿಂಗ್ ಮುಂದಾದ. ಗೆಳೆಯ ರಾಮ್ ಸಿಂಗ್ ನನ್ನು ಸುಮ್ಮಗಿರುವಂತೆ ಒತ್ತಾಯಿಸಿದ. ಕುಡಿದ ಅಮಲಿನಲ್ಲಿದ್ದ ರಾಮ ಸಿಂಗನಿಗೆ ಜುಜುಬಿ ಹುಡುಗನೊಬ್ಬ ತನ್ನನ್ನು ಗದರಿಸುವುದು ಅಪ್ಯಾಯಮಾನವಾಗಿ ಕಂಡು ಬರಲಿಲ್ಲ. ಆತ ಯುವತಿಯ ಮೇಲೆ ಕೈ ಮಾಡಿದ.  ಯುವತಿ ರಾಮ್ ಸಿಂಗನ ಕೈ ಕಚ್ಚಿದಳು. ಯುವಕ ಎದ್ದು ರಕ್ಷಣೆಗೆ ಹೊರಟ. ಯುವಕನ ಸದ್ದಡಗಿಸಲು ರಾಮ್ ಸಿಂಗ್ ಬಸ್ಸಿನಲ್ಲಿದ್ದ ದೊಡ್ಡ ದೊಣ್ಣೆಯನ್ನು ಕೈಯಲ್ಲೆತ್ತಿ ಬೀಸಿದನು. ಯುವಕನನ್ನು ಬಿಟ್ಟು ಅವರೆಲ್ಲಾ ಹುಡುಗಿಯ ಮೈ ಮೇಲೆ ಕೈ ಹಾಕಿದರು. ಹುಡುಗಿಯನ್ನೆತ್ತಿ ಕೊನೆ ಸೀಟಿಗೆ ತಂದು ಒಬ್ಬರ ನಂತರ ಒಬ್ಬರು ಸಮೂಹ ಅತ್ಯಾಚಾರಗೊಳಿಸಿದರು. ಯುವತಿ ಅತ್ಯಂತ ಭೀಕರ ರೀತಿಯಲ್ಲಿ ಗಾಯಗೊಂಡಳು. ಅವರಿಬ್ಬರನ್ನೆತ್ತಿ ರಸ್ತೆ ಬದಿಯಲ್ಲಿ ಬಿಟ್ಟು ರಾಮ್ ಸಿಂಗ ಬಸ್ಸನ್ನು ತನ್ನ ಮಾಲೀಕ ಯಾದವನಿರುವ ನೋಯ್ಡಾಕ್ಕೆ ಓಡಿಸಿದ. ಅಲ್ಲಿ ಬಂದು ಬಸ್ಸನ್ನು ಚೆನ್ನಾಗಿ ತೊಳೆದು ಅಲ್ಲೇ ಮಲಗಿ ಬೆಳಗ್ಗೆ ಮತ್ತೆ ಆರ್ ಕೆ ಪುರಮ್ ನತ್ತ ಬಸ್ಸೋಡಿಸಿದ.
ಅಂದಿನ ಪತ್ರಿಕೆಯ ಸುದ್ದಿಗಳನ್ನು ಓದುವಷ್ಟು ವಿದ್ಯಾವಂತ ನಾಗಿರಲಿಲ್ಲ ರಾಮ್ ಸಿಂಗ್. ಆದರೆ ಆತನ ಕ್ರೌರ್ಯ ಇಡೀ ದೆಹಲಿಯನ್ನು ಅಲುಗಾಡಿಸಿತು. ಇಡೀ ದೇಶವನ್ನು ನೋಯಿಸಿತು.
ಬೆನ್ನಿಗೆ ಕ್ರೌರ್ಯದ ಭೀಕರತೆಯನ್ನೇ ಹೊದ್ದು ಕೊಂಡಿರುವ ದೆಹಲಿಯಲ್ಲಿ ಇದೇನು ಕೊನೆಯ ಕ್ರೌರ್ಯವಲ್ಲ.

Tuesday, December 4, 2012

ಮಂಗಳೂರು ಮೀನು ಮಾರ್ಕೇಟ್
ಮಂಗಳೂರಿನ ಮೀನು ಮಾರ್ಕೆಟಿನ ಒಣ ಮೀನು ವಿಭಾಗದಲ್ಲಿ. ಕೊನೆಯ ಚಿತ್ರದ ಮುಂಡಾಸಿನ ಅಣ್ಣನನ್ನು ಅಲ್ಲಿ ಕಂಡರೆ ಮಾತಾಡಿಸಿರಿ. ನಿಮ್ಮ ಮೀನಿನ ಮೂಟೆ ಹೊರಲು ತಯಾರಾಗಿರುತ್ತಾರೆ.