Sunday, November 18, 2012

ಪೊಂಟಿಯಿಲ್ಲದ ನೋಯ್ಡಾ

ಮುರದಾಬಾದಿನ ರಸ್ತೆಯಂಚಿನಲ್ಲಿದ್ದ ಗಡಂಗಿನಲ್ಲಿ ಶರಾಬು ಕುಡಿಯುವವರಿಗೇನೂ ಕಡಿಮೆಯಿರಲಿಲ್ಲ. ಅಲ್ಲಿನ ಲೋಹದ ಮೂರ್ತಿಗಳ ವ್ಯಾಪಾರಕ್ಕೆ ದಿಲ್ಲಿಯಿಂದ, ಲಕ್ನೋದಿಂದ, ಮುಂಬಯಿಯಿಂದ ಬರುವ ಸಾಹೇಬರುಗಳಿಂದ ಹಿಡಿದು ಕಾರ್ಮಿಕರು, ಕೂಲಿಯಾಳುಗಳ ವರೆಗೆ ಎಲ್ಲರೂ ಬಂದು ಅವರವರ ಅಂತಸ್ತು ಮತ್ತು ಜೇಬಿನ ಆಳಕ್ಕೆ ಅನುಸಾರವಾಗಿ ಅಲ್ಲಿ ದೊರೆಯುತ್ತಿದ್ದ ಸಾರಾಯಿ ಅಥವಾ ವಿದೇಶಿ ಮದ್ಯಕ್ಕೆ ಗಿರಾಕಿಗಳಾಗಿದ್ದರು. ಮದ್ಯದ ಜತೆಗೆ ನಂಜಲು ರಸ್ತೆ ಬದಿಯಲ್ಲಿ ತಿಂಡಿ ಸಿಗುತಿತ್ತು. ಅದನ್ನು ಮಾರುವ ಮುದುಕ ಗಜೋದರನಿಂದ ಅಥವಾ ಗಡಂಗಿನ ಮಾಲೀಕ ಕುಲವಂತ್‍ನ ಮಗ ಪೊಂಟಿಯಿಂದ ತೆಗೆದುಕೊಳ್ಳುತ್ತಿದ್ದರು.ಪೊಂಟಿಗೆ ಯಾವ್ಯಾವ ಗಿರಾಕಿಗಳು ಹೇಗೆ ಎನ್ನುವುದು ಚೆನ್ನಾಗಿ ಗೊತ್ತು.
ಪೊಂಟಿ ಚಡ್ಡಾ (ಚಿತ್ರ: ಬಿಸಿನೆಸ್ ಟುಡೇ)
ನಂಜಿಕೊಳ್ಳಲು ಮಿರ್ಚಿ ಬಜ್ಜಿಯಾಗಲೀ, ಮೊಟ್ಟೆಯ ಖಾರಾ ಸ್ಪೆಷಲ್ ಆಮ್ಲೇಟ್ ಆಗಲಿ, ಇನ್ನೇನಿಲ್ಲವೆಂದರೆ ಕಡಲೆಯಾಗಲೀ ಬಂದ ಕುಡುಕರು ಪೊಂಟಿಯ ಕಡೆ ಹೋಗುತ್ತಿದ್ದರು. ವ್ಯಾಪಾರಕ್ಕೆ ಬಂದ ಜನಗಳನ್ನು ನೋಡುತ್ತಾ ಮುರದಾಬಾದಿನ ರಸ್ತೆಯಂಚಿನಲ್ಲಿದ್ದ ಪೊಂಟಿ ತಾನೊಂದು ದಿನ ದೊಡ್ಡ ಬಿಸಿನೆಸ್ ಮ್ಯಾನ್ ಆಗಬೇಕೆಂದು ತನ್ನ ಮನದೊಳಗೇ ಯೋಚಿಸುತ್ತಿದ್ದ.
ಅಪ್ಪ ಕುಲವಂತನ ಜತೆಗೆ ಮಗ ಪೊಂಟಿಗೂ ರಾಜಕೀಯದ ಜನರ ಸಂಪರ್ಕವುಂಟಾಯಿತು. ಗೆಳೆತನ ಬೆಳೆಯಿತು. ಮುರದಾಬಾದಿನ ಗಡಂಗಿನ ಜತೆಗೆ ಬರೇಲಿ, ಮೀರತ್ ಮತ್ತು ಗಾಜೀಯಬಾದ್ ಗಳಲ್ಲಿ ಕೂಡ ಗಡಂಗಿನ ಗುತ್ತಿಗೆ ದೊರೆಯಿತು. ಉತ್ತರ ಪ್ರದೇಶದಲ್ಲಿ ಸಾರಾಯಿ ವ್ಯಾಪಾರದ ವಿಸ್ತಾರ ಮಾಡುತ್ತಿದ್ದ ಈ  ಸಿಖ್ ಯುವಕನು  ರಾಜಕೀಯ ಲಾಭ ಪಡೆದು ಪಂಜಾಬಿನಲ್ಲಿಯೂ  ಸಾರಾಯಿ ಉದ್ಯಮವನ್ನು ಬೆಳೆಸಿದ. ಲುಧಿಯಾನದಿಂದ ಆರಂಭವಾದ ವ್ಯಾಪಾರ ಇಡೀ ರಾಜ್ಯವನ್ನು ವ್ಯಾಪಿಸಿತು. ಪಂಜಾಬ್ ಮತ್ತು ಉತ್ತರ್ ಪ್ರದೇಶಗಳಲ್ಲಿ ಸಾರಾಯಿ ವ್ಯಾಪಾರ ಕುದುರುತ್ತಿದ್ದ ಹಾಗೇನೇ ಪೊಂಟಿ ಉತ್ತರಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆಗಳತ್ತ ಗಮನ ಹರಿಸಿದ. ಈ ವ್ಯವಹಾರಗಳಲ್ಲಿ ಗಳಿಸಿದ ಹಣವನ್ನು ಭೂವ್ಯವಹಾರದಲ್ಲಿ ತೊಡಗಿಸಿದ.
ಉತ್ತರ್ ಪ್ರದೇಶದಲ್ಲಿ ಮುಲಾಯಂ ಸಿಂಗ್‍ಗೆ ಹತ್ತಿರವಿದ್ದ ಪೊಂಟಿ ಮುಲಾಯಂ ಸರಕಾರ ಬಿದ್ದು ಮಾಯಾವತಿ ಬಂದಾಗ ಆಕೆಗೂ ಹತ್ತಿರದವನಾದ. ಉತ್ತರ್ ಪ್ರದೇಶದ ಅತ್ಯಂತ ಹೆಚ್ಚು ಕಂದಾಯ ಒದಗಿಸುತ್ತಿದ್ದ ನೋಯ್ಡಾದಲ್ಲಿ ಪೊಂಟಿಯ ಚಡ್ಡಾ ಗ್ರೂಪ್ ತನ್ನ ವೇವ್ ಬ್ರಾಂಡ್ ನೊಂದಿಗೆ ಸೆಂಟರ್ ಸ್ಟೇಜ್ ಮಾಲ್ ಆರಂಭಿಸಿತು. ದಿಲ್ಲಿ, ನೋಯ್ಡಾ ಆಸುಪಾಸುಗಳಲ್ಲಿ ವೇವ್ ಸಿನಿಮಾಗಳು ತಲೆಯೆತ್ತಿದವು. ಜತೆಗೆ ವೇವ್ ಬಿಯರ್ ಕೂಡಾ. ಬಿಯರ್ ಅಲ್ಲದೇ ರಮ್, ವಿಸ್ಕಿ, ವೋಡ್ಕಾ ಬ್ರಾಂಡ್‍ಗಳನ್ನು ಆತ ಹೊಂದಿದ್ದ.
ಸಿಖ್ ಧರ್ಮಾನುಯಾಯಿಯಾಗಿದ್ದ ಪೊಂಟಿಯ ಹೆಸರು ಗುರುದೀಪ್ ಸಿಂಗ್ ಚಡ್ಡಾ. ಪಾಕಿಸ್ಥಾನದ ಲಾಹೋರಿಗೆ ಚಿನ್ನಲೇಪಿತ ಪಲ್ಲಕಿಯೊಂದನ್ನು ನೀಡಿರುವ ಕೆಲಸದಲ್ಲಿಯೂ ಪೊಂಟಿಯ ಕೈಯಿದೆ ಯೆಂದು ಸಿಖ್ ಜನರು ಸಂಶಯಗೊಂಡು ಇಂತಹ ಸಂಪತ್ತಿನ ಪ್ರದರ್ಶನವನ್ನು ಖಂಡಿಸಿದ್ದರು.
ಮಾಧ್ಯಮದ ಎದುರು ಸುಲಭದಲ್ಲಿ ಸಿಗದ ಪೊಂಟಿ ಉತ್ತರ್ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ರಾಜಕೀಯ ಶಕ್ತಿಗಳ ಹಿಂದಿನ ಶಕ್ತಿಯಾಗಿದ್ದ. ಮುಲಾಯಂ ಹುಡುಗ ಅಖಿಲೇಶ್ ಉತ್ತರ್ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವ ಸಂದರ್ಭದಲ್ಲಿ ಹಾಜಾರಾಗಿ ಎಲ್ಲರ ಕಣ್ಣು ಬಾಯಿಗಳಿಗೆ ಆಹಾರವಾದ. ಕೆಲವೇ ದಿನಗಳಲ್ಲಿ ಆತ ಮತ್ತೆ ಸುದ್ದಿಯಾದ. ನೋಯ್ಡಾದಲ್ಲಿನ ಸೆಂಟರ್ ಸ್ಟೇಜ್ ಮಾಲ್ ನ ನೆಲಮಹಡಿಯಲ್ಲಿ ನೂರು ಕೋಟಿಗೂ ಮಿಕ್ಕಿ ನೋಟಿನ ಕಂತೆಗಳನ್ನು ಇಡಲಾಗಿದೆ. ಅದನ್ನು ಜಪ್ತಿ ಮಾಡಲು ಆದಾಯ ತೆರಿಗೆಯವರು ರೈಡ್ ಮಾಡುತ್ತಿದ್ದಾರೆ ಎಂದಾಗ ಇಡೀ ನೋಯ್ಡಾ ಜತೆಗೆ ಲಕ್ನೋ ಮತ್ತು ದೆಹಲಿಯಲ್ಲಿ ಸಣ್ಣ ಕಂಪನವಾಗಿತ್ತು. ಕಡೆಗೆ ಆದಾಯ ತೆರಿಗೆಯವರಿಗೆ ಏನೂ ಸಿಕ್ಕಿಲ್ಲ ಎಂಬ ಬ್ರೇಕಿಂಗ್ ಸುದ್ದಿ ಸಿಕ್ಕಿದಾಗ, ರಾಜಕೀಯ ತಾಳ ಮೇಳಗಳು ಅಡಿ ಮೇಲಾದಾಗ ಪೊಂಟಿಯಂತಹ ವ್ಯವಹಾರಸ್ಥರಿಗೆ ಎಲ್ಲಿ ಏಟು ಬೀಳಬಹುದು, ಎಲ್ಲಿಂದ ಅವರು ತಪ್ಪಿಸಿಕೊಳ್ಳಬಲ್ಲರು ಎಂಬುದರ ಸತ್ಯ ದರ್ಶನವಾಯಿತು.
ಈ ಪೊಂಟಿಯ ಕೈಚಳಕ ನೋಯ್ಡಾದ ಸಾಮಾನ್ಯ ಜನರಾದ ನಮ್ಮ ಕಣ್ಣೆದುರಿಗೆ ಕಂಡು ಬಂದಿದ್ದು ಕಳೆದ ಆರೇಳು ತಿಂಗಳ  ಹಿಂದಿನಿಂದ.
ದೆಹಲಿಯ ದ್ವಾರಕಾದಿಂದ ನೋಯ್ಡಾದ ಸಿಟಿ ಸೆಂಟರ್ ನಡುವೆ ಇರುವ ಬ್ಲೂ ಲೈನ್ ದೆಹಲಿ ಮೆಟ್ರೋದ ಅತ್ಯಂತ ಉದ್ದದ ಒಂದು ಮೆಟ್ರೋ ಲೈನ್. ನೋಯ್ಡಾ ಸಿಟಿ ಸೆಂಟರ್ ಮೆಟ್ರೋ ಇಳಿದು ನೀವು ಕಣ್ಣಾಡಿಸಿದರೆ ಎದುರುಗಡೆ ವಿಸ್ತಾರವಾದ ಖಾಲಿ ಮೈದಾನ ಕಾಣುತಿತ್ತು. ಅದರಲ್ಲಿ ಕೆಲವೊಮ್ಮೆ ಹಳ್ಳಿಯ ರೈತರು ತರಕಾರಿ ಬೆಳೆಸುತ್ತಿದ್ದರು. ಆದರೆ ಅದನ್ನು ಯಾರು ಯಾವುದೇ ಶಾಶ್ವತ ಉಪಯೋಗಕ್ಕೆ ಬಳಸಿರಲಿಲ್ಲ. ನಗರ ಮಧ್ಯದಲ್ಲಿ ಸುಮಾರು ಮುನ್ನೂರು ಎಕರೆಯಷ್ಟು ಖಾಲಿಜಾಗ ಕಂಡಾಗ ನಾವೂ ಕನಸು ಕಾಣುತ್ತಿದ್ದೇವು. ಇಲ್ಲಿ ನಮ್ಮದೂ ಒಂದು ವಿಶಾಲವಾದ ತೋಟದ ಮನೆ ಕಟ್ಟಿ ಇರಬಹುದೆಂದು. ಆದರೆ ಇಂತಹ ಕನಸುಗಳಿಗೆ ಆಗಲೇ ಜೀವ ತುಂಬಿಸಿಟ್ಟಿದ್ದರು. ನೋಯ್ಡಾದ ಸೆಕ್ಟರ್ 32 ಮತ್ತು  25 ರಲ್ಲಿ ಇದೀಗ ಸುಮಾರು ಆರೇಳು ತಿಂಗಳಿಂದ ಭರದಿಂದ ಕೆಲಸ ನಡೆಯುತ್ತಿದೆ. ವೇವ್ ಸಿಟಿ ಸೆಂಟರ್ ನ ಅಡಿಪಾಯಕ್ಕೆ ಈಗಾಗಲೇ ಸುಮಾರು 50 ಮೀಟರ್ ಆಳದಷ್ಟು ಮಣ್ಣನ್ನು ಅಗೆಯಲಾಗಿದೆ. ಕೆಲಸ ಭರದಿಂದ ಸಾಗುತ್ತಿದೆ. ಅದೆಷ್ಟೊ ಸಾವಿರ ಕೋಟಿ ವೆಚ್ಚದಲ್ಲಿ ಇಡೀ ಒಂದು ನಗರವೇ ನಗರ ಮಧ್ಯದಲ್ಲಿ ಏಳುತ್ತಿದೆ. ನಮ್ಮ ಕನಸಿನ ಮನೆಗೆ ಅದೆಷ್ಟೋ ಕೋಟಿ ಕೊಡಬೇಕು.
ವೇವ್ ಸಿಟಿ ನಕ್ಷೆ

ದೆಹಲಿಯ ಛತ್ತರ್ ಪುರ್ ಪ್ರದೇಶದಲ್ಲಿ ಬಹಳಷ್ಟು ಫಾರ್ಮ್ ಹೌಸ್‍ಗಳಿವೆ. ಅವುಗಳಲ್ಲೊಂದು ಪೊಂಟಿ ಮತ್ತು ಆತನ ಸಹೋದರ ಹರ್‌ದೀಪ ಸಿಂಗ್ ಚಡ್ಡ ನಡುವೆ ವ್ಯಾಜದಲ್ಲಿತ್ತು. ಕೋಟಿನಲ್ಲಿ ಕೇಸು ನಡೆದು ಹರ್‌ದೀಪನಿಗೆ ಆ ಫಾರ್ಮ್ ಹೌಸ್ ಸಿಕ್ಕಿದರೂ ಪೊಂಟಿಗೆ ಅದರ ಮೇಲೆ ಆಸೆಯಿತ್ತು. ಈ ಕುರಿತು ಮತ್ತೆ ಮತ್ತೆ ಜಗಳ ಮತ್ತು ಮಾತುಕತೆಗಳಾಗುತ್ತಿದ್ದವು. ಶನಿವಾರದಂದು ಪೊಂಟಿ ಮತ್ತು ಹರ್‌ದೀಪ್ ಸಿಂಗ್ ಚಡ್ಡ ಅದೇ ಫಾರ್ಮ್ ಹೌಸಿಗೆ ಬಂದು ಮಾತುಕತೆಯಾಡುತ್ತಿದ್ದರು. ಮಾತುಕತೆ ಜಗಳಕ್ಕೆ ತಿರುಗಿತು. ಪೊಂಟಿಯ ಕೈಯಲ್ಲಿ ಪಿಸ್ತೂಲು ಬಂತು. ಗುಂಡಿ ಅದುಮಿದ. ತಮ್ಮನಿಗೆ ತಾಗಿತು. ತಮ್ಮನ ಬಾಡಿಗಾರ್ಡ್ ಪೊಂಟಿಯ ಮೇಲೆ ಮತ್ತೊಂದು ಪಿಸ್ತೂಲಿನಲ್ಲಿ ಆಕ್ರಮಿಸಿದ.
ಎರಡು ಜೀವಗಳು ಹೋದವು.
ನಿನ್ನೆ ಶನಿವಾರ. ವಾರಾಂತ್ಯದ ಮೊದಲ ದಿನ. ಮುಂಜಾವಿನ ಕೆಲಸಗಳನ್ನೆಲ್ಲಾ ಮುಗಿಸಿ ಮಧ್ನಾಹ್ನದೂಟ ಮುಗಿಸಿ ದೀಪಾವಳಿಯ ನಂತರದ ಮೊದಲ ಶನಿವಾರ, ತಣ್ಣನೆಯ ವಾತಾವರಣಕ್ಕೆ ಟಿವಿಯಲ್ಲಿ ಬರುತ್ತಿರುವ ಅಯ್ಯ ಸಿನಿಮಾ ನೋಡುವ ಸಡಗರದಲ್ಲಿ ನಾವಿದ್ದೆವು. ಮೊಬೈಲಿನಲ್ಲಿ  ಮೆಸೇಜ್ ಬಂತು. ಇನ್ನು ಉಳಿದ ಕತೆ, ಬರೆವ ಕತೆ, ಪೊಂಟಿಯಿಲ್ಲದ ನೋಯ್ಡಾದ ಕತೆ. ಮುಂಜಾನೆಯ ಪೇಪರು ನೋಡಲೇ ಬೇಕಲ್ಲ.  ಯಾಕೆಂದರೆ  ಪೊಂಟಿಯ  ಕತೆ ಮುಗಿಯಿತ್ತಿದ್ದಂತೆ ಮುಂಬಯಿಯಲ್ಲಿ ಬಾಳ ಠಾಕ್ರೆಯೆಂಬ ಬಹಳಷ್ಟು ಹಳೆಯ ವ್ಯಂಗ್ಯಚಿತ್ರಕಾರನೊಬ್ಬ ತನ್ನ 86ನೇ ವಯಸ್ಸಿನಲ್ಲಿ ಇನ್ನಿಲ್ಲವಾದನಲ್ಲ! ಆತನ ಕುರಿತು .... ನೋಡೋಣ.
ಒಲವಿನಿಂದ
ಬಾನಾಡಿ
  

2 comments:

  1. ದೊರೆಯ ಇನ್ನೋಂದು ಮುಖದಂತಹ ಈ ಬರಹ ಮೆಚ್ಚುಗೆಯಾಯ್ತು.

    ReplyDelete
  2. ಅಬ್ಬಾ! ಬದುಕು ಎಷ್ಟು ವಿಚಿತ್ರವಾಗಿರುತ್ತದೆ!

    ReplyDelete