Tuesday, November 13, 2012

ಮುಗಿದ ಬೀಪಿ ಮಾತ್ರೆ ಮತ್ತು ಅವಲಕ್ಕಿ ಗುದ್ದು

ಅಣ್ಣಪ್ಪನ ಅಂಗಳದಂಚಿನಲ್ಲಿ ಕಟ್ಟಿ ಹಾಕಿದ್ದ ಮೈರ ಮತ್ತು ಕೆಂಪ ಹುಂಜಗಳು ಮುಂಜಾನೆಯ ನಾಲ್ಕು ಗಂಟೆಗೆ ಎದ್ದು ಊರನೆಲ್ಲಾ ಎಬ್ಬಿಸುತ್ತಿದ್ದವು. ಒಮ್ಮೆ ಕೆಂಪ ಕೊಕ್ಕೋಕ್ಕೋ ಎಂದು ಕೂಗಿ ಕೊಂಡರೆ ಅದಕ್ಕೆ ಪ್ರತಿಧ್ವನಿಯೆಂಬಂತೆ ಮೈರ ಕೂಗಿಕೊಳ್ಳುತ್ತಿದ್ದ. ಅವುಗಳ ಕೂಗು ಸುಮಾರು ಹತ್ತು ನಿಮಿಷ ನಡೆದು ಮತ್ತೆ ಸುಮ್ಮಗಾದವು. ಇನ್ನು ಸರಿಯಾಗಿ ಐದು ಗಂಟೆಗೆ ಮತ್ತೆ ಕೂಗುತ್ತವೆ ಎಂದು ಆ ಚುಮು ಚುಮು ಚಳಿಯ ಮಂಜಾವಿಗೆ ಎಚ್ಚರಗೊಂಡ ಪದ್ಮಕ್ಕ ಮತ್ತೆ ಮುಸುಕೆಳೆದು ಮಲಗಿದರು. ಅಣ್ಣಪ್ಪ ಮನೆಯ ಹೊರಗಿನ ಚಿಟ್ಟೆಯಲ್ಲಿ ಮಲಗಿದ್ದವನಿಗೆ ರಾತ್ರಿಯಿಡೀ ನಿದ್ದೆ ಬಾರದೇ ಇದೇ ಹೊತ್ತಿಗೆ ಕಣ್ಣು ಅಡ್ಡಾ ಆಗಿ ಅತ್ತ ನಿದ್ದೆಯ ಲೋಕದಲ್ಲೂ ಇರದೇ ಇತ್ತ ಎಚ್ಚರದ ಲೋಕದಲ್ಲೂ ಇರದೇ ಒಂದು ತರದ ಮಂಪಿನಲ್ಲಿಯೇ ಮೈರ ಮತ್ತು ಕೆಂಪರ ಕುರಿತು ಆಲೋಚಿಸುತ್ತಿದ್ದ. ಮಂಪಿನಲ್ಲಿಯೇ ಆಲೋಚನೆಗಳು ಒಂದು ತರವಾದ ಕನಸಾಗಿ ಮಾರ್ಪಡಾಗುತ್ತಾ ಹೋದವು.
ಅಣ್ಣಪ್ಪ ಮನೆಯ ಮಾಡಿನ ಬಿದಿರಿನ ಪಕ್ಕಾಸಿಗೆ ಕಟ್ಟಿದ ಅಂಕದ ಬಾಳನ್ನು ಸರಿಯಾಗಿ ಬೆಣಚು ಕಲ್ಲಿನಲ್ಲಿ ಸಾಣೆಯಿಕ್ಕಿ ಹರಿತಗೊಳಿಸಿದ. ತಲೆಗೆ ಕೆಂಪು ಬೈರಾಸಿನ ಮುಂಡಾಸು ಸುತ್ತಿದ. ಮನೆಯ ಮುಂದಿನ ಹಲಸಿನ ಮರದ ಬುಡದಲ್ಲಿ ಕಟ್ಟಿ ಹಾಕಿದ್ದ ಮೈರ ಮತ್ತು ಕೆಂಪನನ್ನು ನೋಡುತ್ತಾ ಒಂದು ನಿಮಿಷ ಕುಳಿತ. ಒಮ್ಮೆ ಮೈರನನ್ನು ಹಿಡಿದು ಅದರ ಗರಿಗಳನ್ನು ನೇವರಿಸಿದ. ಇನ್ನೊಮ್ಮೆ ಕೆಂಪನನ್ನು ಹಿಡಿದು ಅದನ್ನು ಪೂಸಿದ. ಇವತ್ತು ಶುಕ್ರವಾರ. ಕುಕ್ಕುಟ ಪಂಚಾಂಗದ ಪ್ರಕಾರ ಕೆಂಪನಿಗೆ ಬೊಳ್ಳೆ ಎದುರು ಸಿಕ್ಕಿದರೆ ಕೆಂಪ ಗೆಲ್ಲಬಹುದೋ ಎಂದು ಯೋಚಿಸಿದ. ಕುಕ್ಕುಟ ಪಂಚಾಂಗದಲ್ಲಿ ಬರೆದ ಕೋಳಿ ಪಂಚಾಂಗ ನೆನಪಿಗೆ ಬರಲೇ ಇಲ್ಲ. ಅದ್ಯಾವಗಲೋ ಮಂಗಳೂರಿನ ನಿತ್ಯಾನಂದ ಗ್ರಂಥಾಲಯದಿಂದ ತಂದ ಕುಕ್ಕುಟ ಪಂಚಾಂಗ ಮಾಡಿನ ಯಾವ ಮೂಲೆಯಲ್ಲಿ ಇದೆಯೋ ಎಂದು ಅದರ ಬೆನ್ನ ಹಿಂದೆ ಆಲೋಚನೆಗಳು ಹರಿದು ಹೋದವು. ನಿತ್ಯಾನಂದ ಗ್ರಂಥಾಲಯಕ್ಕೆ ಮತ್ತೆ ಯಾವಾಗ ಹೋಗುವುದು? ಇನ್ನೊಮ್ಮೆ ಅಲ್ಲಿಗೆ ಹೋದರೆ ಇನ್ನೊಂದು ಹೊಸ ಕುಕ್ಕುಟ ಪಂಚಾಂಗ ತರಲೇ ಬೇಕು. ಅಲ್ಲಿ ಮಾನ್ಯದ ವೆಂಕಟರಾಯರಲ್ಲಿ ಹೇಳಿ ಅದನ್ನು ಓದುವ ರೀತಿಯನ್ನು ಕೇಳಿಸಬೇಕು ಎಂದು ಕೊಂಡ. ಹಾಗೆಯೇ ಮಂಪಿನಲ್ಲಿದ್ದ ಅಣ್ಣಪ್ಪ ನಿದ್ದೆಗೆ ಜಾರಿದ್ದ.
ಮಳೆಗಾಲ ಮುಗಿದು ಇನ್ನು ಚಳಿ ಶುರುವಾಗುತ್ತಿದೆ ಅನ್ನುವ ಕಾಲ ಅದು. ತೋಟದ ಅಂಚಿನಲ್ಲಿದ್ದ ಕೆರೆಯಲ್ಲಿ ನೀರು ತುಂಬಿತ್ತು. ಕೆರೆಯ ಮೇಲಿನ ಗುಡ್ಡದಲ್ಲಿ ಬೆಳೆದು ನಿಂತ ಕಾಡಿನಾಚೆಯಿಂದ ನಿಧಾನವಾಗಿ ಬೀಸುವ ಒಣಗಾಳಿ ಕೆರೆ ದಾಟಿ ಅಣ್ಣಪ್ಪನ ಮನೆಯಂಗಳ ತಲುಪಿದಾಗ ತಂಪಾಗಿ ಸಣ್ಣಗೆ ಚಳಿಯ ಅನುಭವವನ್ನು ಕೊಡುತ್ತಿತ್ತು. ಈಚಣ್ಣ ಭಟ್ಟರು ಕಳೆದ ಸಲ ಬೈಹುಲ್ಲು ತರಲು ಸಕಲೇಶಪುರಕ್ಕೆ ಲಾರಿ ಹಿಡಿದು ಹೋಗಿ ಬರುವಾಗ ತಂದ ಕಂಬಳಿಯನ್ನು ಹೊದ್ದರೆ ಸೆಖೆಯಾಗುತ್ತಿತ್ತು. ಹೊದೆಯದಿದ್ದರೆ ಚಳಿಯಾಗುತ್ತಿತ್ತು. ಅಣ್ಣಪ್ಪನ ಮಂಪರಿನ ಆಲೋಚನೆಗಳು ಕನಸಾಗಿ ನಂತರ ಅವನು ಕನಸಿನಾಚೆ ಬಂದು ನಿದ್ದೆಯೊಳಗೆ ಸೇರಿ ಅಷ್ಟೊತ್ತಾಗ ಬೇಕೆಂದರೆ ಮೈರ ಮತ್ತು ಕೆಂಚರು ಕೊಕ್ಕೊಕ್ಕೋ ಎಂದು ಕೂಗಲು ಶುರು ಮಾಡಿದವು.
ರಾತ್ರಿ ನೆನೆಹಾಕಿದ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಈಗ ಕಡೆದು ಇಡದಿದ್ದರೆ ರಾತ್ರಿಗೆ ಇಡ್ಲಿ ಮಾಡಲಿಕೆ ಆದೀತಾ ಎಂದು ಒಳಗೆ ಮಲಗಿದ್ದ ಪದ್ಮಕ್ಕನಿಗೆ ಆಲೋಚನೆ ಬಂತು. ಇದು ಕೆಂಪ ಮೈರರ ಎರಡನೆ ಕೂಗು. ಸಮಯ ಐದು ಗಂಟೆಯಾಗಿರಲೇ ಬೇಕು. ಇನ್ನು ಒಂದು ಸ್ವಲ್ಪ ಹೊತ್ತಿನಲ್ಲಿ ಗೋಳಿಕಟ್ಟೆಯ ಪಳ್ಳಿಯಿಂದ ಮೂಸಬ್ಬ ಬಾಂಗ್ ಕೊಡುತ್ತಾನೆ. ಅಷ್ಟಕ್ಕೆ ಏಳದಿದ್ದರೆ ಆಗಲಿಕ್ಕಿಲ್ಲ ಎಂದು ಪದ್ಮಕ್ಕ ಕತ್ತಲೆಯಲ್ಲಿಯೇ ಚಿಮಿಣಿ ದೀಪ ಮತ್ತು ಬೆಂಕಿ ಪೆಟ್ಟಿಗೆಯನ್ನು ಹುಡುಕಲು ಕೈಯ್ಯಾಡಿಸಿದರು. ಮೈರ ಮತ್ತು ಕೆಂಚರು ಮತ್ತೆ ಕೊಕ್ಕೊಕ್ಕೋ ಎಂದು ಊರನ್ನೆ ಎಬ್ಬಿಸಲು ತೊಡಗಿದ್ದವು. ಚಿಮಿಣಿದೀಪ ಉರಿಸಿ ಪದ್ಮಕ್ಕ ಮೊದಲು ಒಲೆಯ ಬೂದಿ ಖಾಲಿ ಮಾಡಿದಳು. ಒಣಗಿದ ಕೊತ್ತಲಿಂಗೆ ಮತ್ತು ಮಡಲನ್ನು ಉರಿಸಿ ಬೆಂಕಿ ಮಾಡಿ ರಾತ್ರಿ ಮಾಡಿದ ಮೀನಿನ ಸಾರಿನ ಪಾತ್ರೆಯನ್ನು ಒಲೆ ಮೇಲಿಟ್ಟಳು. ನಿನ್ನೆ ತಂದ ಆರು ಬಂಗುಡೆಯ ತಲೆಯ ಭಾಗ ಮಾತ್ರ ಉಳಿದಿದೆ. ಬೆಳಗಿನ ಚಾಯಕ್ಕೆ ಮಾಡುವ ದೋಸೆ ಜತೆ ಕೊಡದಿದ್ದರೆ ಅಣ್ಣಪ್ಪ ಸಿಟ್ಟಾಗಬಹುದು ಎಂದು ಮೀನಿನ ಸಾರನ್ನು ಬಿಸಿ ಮಾಡಲು ಒಲೆ ಮೇಲೆ ಇಟ್ಟು ಅಕ್ಕಿ ಮತ್ತು ಉದ್ದಿನ ಬೇಳೆ ಕಡೆಯಲು ಕಲ್ಲಿನ್ನು ತೊಳೆಯಲು ಶುರು ಮಾಡಿದಳು.
ಗೋಳಿಕಟ್ಟೆಯ ಮಹಮ್ಮಾಯಿ ಭಜನಾ ಮಂದಿರದಿಂದ ಸುಪ್ರಭಾತ ಶುರುವಾಯಿತು. ಜತೆಗೆ ಪಳ್ಳಿಯಿಂದ ಬಾಂಗ್ ಕೂಡಾ.  ಮಂದಿರದಿಂದ ಮೊದಲು ಕೌಸಲ್ಯ ಸುಪ್ರಜಾದ ಕ್ಯಾಸೆಟ್ಟು, ನಂತರ ಎದ್ದೇಳು ಮಂಜುನಾಥ ಮತ್ತೆ ಅಯಗಿರಿ ನಂದಿನಿ ನಂದಿತ ಮೋಹಿನಿ .... ಪದ್ಮಕ್ಕನಿಗೆ ಸುಪ್ರಭಾತಗಳೆಲ್ಲಾ ಕಿವಿಯಲ್ಲಿ ಬಿದ್ದಾಗ ಇವೆಲ್ಲ ತನಗೆ ಬಾಯಿಪಾಠ ಬರುತ್ತದೆ ಎಂದೇ ಅನಿಸುತ್ತದೆ ಅಂದುಕೊಂಡಳು. ಅದು ಮಂಗಳವಾರ ಮತ್ತು ಶುಕ್ರವಾರ ಮಾತ್ರ ಕೇಳುವುದು. ಅಂದ ಹಾಗೆ ಇವತ್ತು ಶುಕ್ರವಾರ ಕೂಡ.
ಮಂದಿರದ ಸುಪ್ರಭಾತ, ಕೆಂಪ ಮೈರರ ಕೊಕ್ಕೊಕ್ಕೋ ಜತೆಗೆ ಕಾಡಿನಲ್ಲಿ ಮಲಗಿದ್ದ ಹಕ್ಕಿಗಳೂ ಎದ್ದು ಸ್ವರ ಹೊರಡಿಸಲು ಆರಂಭಿಸಿದವು. ಕಾಗೆಗಳೆರಡು ಬಂದು ಬಸಳೆ ಬಳ್ಳಿಯ ಚಪ್ಪರದ ಬುಡದಲ್ಲಿ ಪಾತ್ರೆ ಬಟ್ಟಲು ತೊಳೆದಾಗ ಚೆಲ್ಲಿದ ಅನ್ನದ ಅಗುಳನ್ನು ಹೆಕ್ಕುತಿದ್ದವು. ಗಳಿಗೆಗೊಮ್ಮೆ ಅವುಗಳು ಕೂಡ ತೆಂಗಿನ ಮರದ ಮಡಲಲ್ಲಿ ಕುಳಿತು ಕಾ ಕಾ ಅಂತ ಸ್ವರ ಹೊರಡಿಸಲು ಆರಂಭಿದ್ದವು. ಪದ್ಮಕ್ಕ ಅಕ್ಕಿಯನ್ನು ಕಡೆಯುವ ಕಲ್ಲಿನಲ್ಲಿ ಹಾಕಿ ಕಡೆಯುವ ಶಬ್ದ ಕೂಡ ಮುಂಜಾನೆಯ ಎಲ್ಲಾ ಸ್ವರ ಲಯಗಳಲ್ಲಿ ಲೀನವಾಗಿ ಅದ್ಯಾವುದೋ ರಾಗವನ್ನು ಹಿಡಿದು ಕೊಂಡಿತ್ತು.
ಒಟ್ಟಾರೆ ಉಟ್ಟ ಲುಂಗಿಯನ್ನೇ ಮುಸುಕು ಹಾಕಿ ಮಲಗಿದ್ದ ಅಣ್ಣಪ್ಪನಿಗೆ ಎಚ್ಚರ ಆಗಲು ಇನ್ನೇನು ಬೇಕಿರಲಿಲ್ಲ. ಮುಂಜಾನೆಯಷ್ಟೇ ಕಣ್ಣಿಗೆ ದಕ್ಕಿದ ನಿದ್ದೆಯನ್ನು ಹಾಳು ಮಾಡಲು ಅದೆಷ್ಟು ಸ್ವರಗಳು ಶಬ್ದಗಳು! ನಿದ್ದೆಯಿಂದ ಎದ್ದ ಅಣ್ಣಪ್ಪ ಚಾಪೆಯ ಆಚೆ ಇದ್ದ ಎಲೆಯಡಿಕೆಯ ತಟ್ಟೆಗೆ ಕೈಹಾಕಿದ. ನಿನ್ನೆ ಸಂಜೆಯಷ್ಟೇ ಒಂದು ಅಡಿಕೆಯನ್ನು ಹೋಳು ಮಾಡಿ ಹಾಕಿದ್ದು. ಅದೂ ಮುಗಿಯಿತಾ. ಈಚಣ್ಣ ಭಟ್ಟರ ತೋಟದಿಂದ ಹೆಕ್ಕಿ ತಂದ ಏಳೆಂಟು ಅಡಿಕೆಗಳು ಎರಡು ದಿನಕ್ಕೆ ಬಂದರೆ ಅದೇ ದೊಡ್ಡದು. ಇನ್ನೊಂದು ಅಡಿಕೆಯನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಹೋಳು ಮಾಡಲು ಕುಳಿತ ಅಣ್ಣಪ್ಪನಿಗೆ ಮಂಪರಿನಾಚೆ ಕಂಡ ಕನಸಿನ ನೆನಪಾಯಿತು. ಇವತ್ತು ಸಂಜೆ ಗೋಳಿಕಟ್ಟೆಯ ಕೋಳಿ ಅಂಕಕ್ಕೆ ಮೈರನನ್ನು ಕೊಂಡು ಹೋಗುವುದೋ ಅಥವಾ ಕೆಂಪನನ್ನೋ ಎಂದು ಯೋಚಿಸುತ್ತಿದ್ದ. ದೀಪಾವಳಿಯ ಅಮವಾಸ್ಯೆಯ ಶುಕ್ರವಾರ ಸಂಜೆಯ ಹೊತ್ತಿಗೆ ಮೂಡುಮುಖವಾಗಿ ಹೊರಟು ಕೆಂಪನನ್ನು ಕಟ್ಟಿದರೆ ಕೆಂಪ ಎದುರಾಳಿಯ ಹೊಟ್ಟೆಗೆ ಅಥವಾ ಕೊರಳಿಗೆ ಬಾಳಿನಲ್ಲಿ   ಗೀರಿ ಜಯಗಳಿಸುವುದರಲ್ಲಿ ಸಂಶಯವಿಲ್ಲ ಎಂದು ತನ್ನ ಕುಕ್ಕುಟ ಪಂಚಾಂಗವನ್ನು ತಾನೇ ಅಂದುಕೊಂಡ. ಬಹಳಷ್ಟು ಸಲ ಪಂಚಾಂಗದಲ್ಲಿ ಬರೆದದ್ದೆಲ್ಲಾ ನಡೆಯುವುದಿಲ್ಲ. ನಮ್ಮ ಆಲೋಚನೆಯಲ್ಲಿಯೇ ನಾವು ಯೋಜನೆ ಹಾಕಿ ಎರಡು ಕೂಡಿಸಿ ನಾಲ್ಕು ಕಳೆದು ಯಾವ ಕೋಳಿಯನ್ನು ಯಾವ ಕೋಳಿಯ ವಿರುದ್ದ ಕಟ್ಟ ಬೇಕು ಎಂದು ನಿರ್ಧರಿಸಬೇಕು. ಅಣ್ಣಪ್ಪನ ಇಂತಹ ನಿರ್ಧಾರಗಳು ಕೆಲವೊಮ್ಮೆ ಯಶಸ್ವಿಯಾದರೆ ಮತ್ತೆ ಕೆಲವೊಮ್ಮೆ ಸೋಲನ್ನು ಕಂಡಿವೆ. ರೊಟ್ಟಿ ಮಾಡಲು ಪದ್ಮಕ್ಕನ ಹತ್ತಿರ ಹೇಳಿ ಹೋದರೆ ಅವತ್ತು ತನ್ನ ಕೋಳಿ ಸೋತು ಇನ್ಯಾರದೋ ಬಿಸಲೆಯಲ್ಲಿ ಬೇಯುವಂತಾಗುತ್ತಿತ್ತು.
ರೊಟ್ಟಿ ತಿನ್ನಲು ಯಾವುದೋ ಪೆಟ್ಟಾದ ಹುಂಜವನ್ನೋ ಅಥವಾ ಹೇಂಟೆಯನ್ನೋ ಕತ್ತು ಹಿಸುಕಿ ಕೊಲ್ಲಬೇಕಾಗುತ್ತಿತ್ತು.
ಅಲ್ಲ ಇವಳು ಇಷ್ಟು ಹೊತ್ತಿನಿಂದ ಎಂತ ಕಡೆಯುತ್ತಾಳೆ ಅಂತ. ರೊಟ್ಟಿಗೇನಾದರೂ ಕಡೆಯುತ್ತಾಳೋ. ರೊಟ್ಟಿಗೆ ಬೆಳಿಗ್ಗೆ ಯಾಕೆ ಕಡೆಯಬೇಕು? ಇಡ್ಲಿಗೇ ಇರಬೇಕು. ಅಲ್ಲ ... ಸಂಜೆ ಇಡ್ಲಿ ಮಾಡಿದರೆ, ಅಂಕದಲ್ಲಿ ಗೆದ್ದು ತಂದ ಒಟ್ಟೆಕೋಳಿಯನ್ನು ತಿನ್ನಲು ಮತ್ತೆ ರೊಟ್ಟಿ ಮಾಡ್ತಾಳೊ ಇಲ್ಲ ಇಡ್ಲಿಯ ಜತೆಗೇ ತಿನ್ನಿ ಅಂತ ಹೇಳ್ತಾಲೋ? ಅಣ್ಣಪ್ಪನಿಗೆ ಸಿಟ್ಟು ನೆತ್ತಿಗೇರುತ್ತಿತ್ತು.
ಕಟ್ಟದ ಕೋಳಿ ಮತ್ತು ಅಕ್ಕಿಯ ರೊಟ್ಟಿಯ ಔತಣವನ್ನು ನೆನೆಯುತ್ತಿದ್ದ ಅಣ್ಣಪ್ಪನಿಗೆ ಇವಳು ಏನು ಮಾಡುತ್ತಿದ್ದಾಳೆ ಎಂದು ತಿಳಿಯದೇ ರೋಷವುಕ್ಕುತ್ತಿತ್ತು.
ಏನು ನಿನ್ನದು ಬೆಳಗೆದ್ದು ಕಡೆಯುವ ಕಲ್ಲಿನಲ್ಲಿ ಕೆಲಸ. ಯಾರಿಗೆ ಸಮಾರಾಧನೆಯಾಗುತ್ತದೆ. ನಿನಗೆ ಎಷ್ಟು ಸಲ ಹೇಳಿಲ್ಲ. ಅಂತ ಪದ್ಮ್ಕಕ್ಕನ ಬೆನ್ನಿಗೆ ಎರಡು ಗುದ್ದು ಕೊಟ್ಟೆ ಬಿಟ್ಟ. ಅಷ್ಟರೊಳಗೆ ಮೀನು ತರಲು ಹೊರಟ ಅದ್ರಾಮ ಬಾಳೆಗೊನೆ ಹೊತ್ತುಕೊಂಡು ಇವರ ಅಂಗಳಕ್ಕೆ ತಲುಪಬೇಕೇ? ಅದೆಂತದು ಪದ್ಮಕ್ಕ, ಅಣ್ಣಪಣ್ಣ ಗುದ್ದುವುದು ಎಂದು ಅವನು ಕೇಳಬೇಕೆ? ಪದ್ಮಕ್ಕ ನೋಯುತ್ತಿರುವ ಬೆನ್ನ ಕಡೆ ಗಮನವಿಡದೇ ಇವತ್ತು ದೀಪಾವಳಿಯಲ್ವ ಅದಕ್ಕೆ ಅವರು ಅವಲಕ್ಕಿ ಕುಟ್ಟುತ್ತಿದ್ದಾರೆ, ನಾನು ಇಡ್ಲಿಗೆ ಕಡೆಯುತ್ತಿದ್ದೇನೆ. ಮಧ್ಯಾಹ್ನ ಬರುವಾಗ ಒಳ್ಳೆಯ ಬಾಳೆಮೀನು ಅಥವಾ ಅಂಜಾಲ್ ಇದ್ದರೆ ನಮಗೆ ತಾ ಎಂದು ಅದ್ರಾಮನನ್ನು ಸಾಗಹಾಕಿದಳು.
ಇವರ ಬಿಪಿಯ ಮಾತ್ರೆ ಮುಗಿದಿದೆ. ಅದನ್ನು ತಂದು ಇವರು ತಿನ್ನುವವರೆಗೆ ನಾನು ಇವರಿಂದ ಗುದ್ದು ತಿನ್ನುತ್ತಿರಬೇಕು. ಅದಕ್ಕೆ ದೀಪಾವಳಿ ಅಂತ ಇಲ್ಲ ಅಮವಾಸ್ಯೆ ಅಂತ ಇಲ್ಲ ಎಂದು ಪದ್ಮಕ್ಕ ಕಲ್ಲಿಗೆ ನೆನೆದ ಉದ್ದಿನ ಬೇಳೆಯನ್ನು ಹಾಕಿ ಕಡೆಯತೊಡಗಿದಳು. ಕೆಂಪ ಮತ್ತು ಮೈರ ಕೊಕ್ಕೊಕ್ಕೋ ಅಂತ ಕೂಗುತ್ತಿದ್ದವು. ಇವತ್ತು ಯಾರ ದಿನ ಕೆಂಪಂದೋ, ಮೈರನದೋ ಎಂದು ಆಲೋಚನೆಯಲ್ಲಿಯೇ ಮುಳುಗಿದ ಅಣ್ಣಪ್ಪ.
ಒಲವಿನಿಂದ
ಬಾನಾಡಿ 

2 comments:

  1. ಹಳ್ಳಿ ಪರಿಸರವನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದೀರ.

    ReplyDelete
  2. ವಿನೋದ ಹಾಗು ವಾಸ್ತವತೆ ಬೆರೆತ ಸುಂದರ ಕತೆ.

    ReplyDelete