Sunday, November 18, 2012

ಪೊಂಟಿಯಿಲ್ಲದ ನೋಯ್ಡಾ

ಮುರದಾಬಾದಿನ ರಸ್ತೆಯಂಚಿನಲ್ಲಿದ್ದ ಗಡಂಗಿನಲ್ಲಿ ಶರಾಬು ಕುಡಿಯುವವರಿಗೇನೂ ಕಡಿಮೆಯಿರಲಿಲ್ಲ. ಅಲ್ಲಿನ ಲೋಹದ ಮೂರ್ತಿಗಳ ವ್ಯಾಪಾರಕ್ಕೆ ದಿಲ್ಲಿಯಿಂದ, ಲಕ್ನೋದಿಂದ, ಮುಂಬಯಿಯಿಂದ ಬರುವ ಸಾಹೇಬರುಗಳಿಂದ ಹಿಡಿದು ಕಾರ್ಮಿಕರು, ಕೂಲಿಯಾಳುಗಳ ವರೆಗೆ ಎಲ್ಲರೂ ಬಂದು ಅವರವರ ಅಂತಸ್ತು ಮತ್ತು ಜೇಬಿನ ಆಳಕ್ಕೆ ಅನುಸಾರವಾಗಿ ಅಲ್ಲಿ ದೊರೆಯುತ್ತಿದ್ದ ಸಾರಾಯಿ ಅಥವಾ ವಿದೇಶಿ ಮದ್ಯಕ್ಕೆ ಗಿರಾಕಿಗಳಾಗಿದ್ದರು. ಮದ್ಯದ ಜತೆಗೆ ನಂಜಲು ರಸ್ತೆ ಬದಿಯಲ್ಲಿ ತಿಂಡಿ ಸಿಗುತಿತ್ತು. ಅದನ್ನು ಮಾರುವ ಮುದುಕ ಗಜೋದರನಿಂದ ಅಥವಾ ಗಡಂಗಿನ ಮಾಲೀಕ ಕುಲವಂತ್‍ನ ಮಗ ಪೊಂಟಿಯಿಂದ ತೆಗೆದುಕೊಳ್ಳುತ್ತಿದ್ದರು.ಪೊಂಟಿಗೆ ಯಾವ್ಯಾವ ಗಿರಾಕಿಗಳು ಹೇಗೆ ಎನ್ನುವುದು ಚೆನ್ನಾಗಿ ಗೊತ್ತು.
ಪೊಂಟಿ ಚಡ್ಡಾ (ಚಿತ್ರ: ಬಿಸಿನೆಸ್ ಟುಡೇ)
ನಂಜಿಕೊಳ್ಳಲು ಮಿರ್ಚಿ ಬಜ್ಜಿಯಾಗಲೀ, ಮೊಟ್ಟೆಯ ಖಾರಾ ಸ್ಪೆಷಲ್ ಆಮ್ಲೇಟ್ ಆಗಲಿ, ಇನ್ನೇನಿಲ್ಲವೆಂದರೆ ಕಡಲೆಯಾಗಲೀ ಬಂದ ಕುಡುಕರು ಪೊಂಟಿಯ ಕಡೆ ಹೋಗುತ್ತಿದ್ದರು. ವ್ಯಾಪಾರಕ್ಕೆ ಬಂದ ಜನಗಳನ್ನು ನೋಡುತ್ತಾ ಮುರದಾಬಾದಿನ ರಸ್ತೆಯಂಚಿನಲ್ಲಿದ್ದ ಪೊಂಟಿ ತಾನೊಂದು ದಿನ ದೊಡ್ಡ ಬಿಸಿನೆಸ್ ಮ್ಯಾನ್ ಆಗಬೇಕೆಂದು ತನ್ನ ಮನದೊಳಗೇ ಯೋಚಿಸುತ್ತಿದ್ದ.
ಅಪ್ಪ ಕುಲವಂತನ ಜತೆಗೆ ಮಗ ಪೊಂಟಿಗೂ ರಾಜಕೀಯದ ಜನರ ಸಂಪರ್ಕವುಂಟಾಯಿತು. ಗೆಳೆತನ ಬೆಳೆಯಿತು. ಮುರದಾಬಾದಿನ ಗಡಂಗಿನ ಜತೆಗೆ ಬರೇಲಿ, ಮೀರತ್ ಮತ್ತು ಗಾಜೀಯಬಾದ್ ಗಳಲ್ಲಿ ಕೂಡ ಗಡಂಗಿನ ಗುತ್ತಿಗೆ ದೊರೆಯಿತು. ಉತ್ತರ ಪ್ರದೇಶದಲ್ಲಿ ಸಾರಾಯಿ ವ್ಯಾಪಾರದ ವಿಸ್ತಾರ ಮಾಡುತ್ತಿದ್ದ ಈ  ಸಿಖ್ ಯುವಕನು  ರಾಜಕೀಯ ಲಾಭ ಪಡೆದು ಪಂಜಾಬಿನಲ್ಲಿಯೂ  ಸಾರಾಯಿ ಉದ್ಯಮವನ್ನು ಬೆಳೆಸಿದ. ಲುಧಿಯಾನದಿಂದ ಆರಂಭವಾದ ವ್ಯಾಪಾರ ಇಡೀ ರಾಜ್ಯವನ್ನು ವ್ಯಾಪಿಸಿತು. ಪಂಜಾಬ್ ಮತ್ತು ಉತ್ತರ್ ಪ್ರದೇಶಗಳಲ್ಲಿ ಸಾರಾಯಿ ವ್ಯಾಪಾರ ಕುದುರುತ್ತಿದ್ದ ಹಾಗೇನೇ ಪೊಂಟಿ ಉತ್ತರಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆಗಳತ್ತ ಗಮನ ಹರಿಸಿದ. ಈ ವ್ಯವಹಾರಗಳಲ್ಲಿ ಗಳಿಸಿದ ಹಣವನ್ನು ಭೂವ್ಯವಹಾರದಲ್ಲಿ ತೊಡಗಿಸಿದ.
ಉತ್ತರ್ ಪ್ರದೇಶದಲ್ಲಿ ಮುಲಾಯಂ ಸಿಂಗ್‍ಗೆ ಹತ್ತಿರವಿದ್ದ ಪೊಂಟಿ ಮುಲಾಯಂ ಸರಕಾರ ಬಿದ್ದು ಮಾಯಾವತಿ ಬಂದಾಗ ಆಕೆಗೂ ಹತ್ತಿರದವನಾದ. ಉತ್ತರ್ ಪ್ರದೇಶದ ಅತ್ಯಂತ ಹೆಚ್ಚು ಕಂದಾಯ ಒದಗಿಸುತ್ತಿದ್ದ ನೋಯ್ಡಾದಲ್ಲಿ ಪೊಂಟಿಯ ಚಡ್ಡಾ ಗ್ರೂಪ್ ತನ್ನ ವೇವ್ ಬ್ರಾಂಡ್ ನೊಂದಿಗೆ ಸೆಂಟರ್ ಸ್ಟೇಜ್ ಮಾಲ್ ಆರಂಭಿಸಿತು. ದಿಲ್ಲಿ, ನೋಯ್ಡಾ ಆಸುಪಾಸುಗಳಲ್ಲಿ ವೇವ್ ಸಿನಿಮಾಗಳು ತಲೆಯೆತ್ತಿದವು. ಜತೆಗೆ ವೇವ್ ಬಿಯರ್ ಕೂಡಾ. ಬಿಯರ್ ಅಲ್ಲದೇ ರಮ್, ವಿಸ್ಕಿ, ವೋಡ್ಕಾ ಬ್ರಾಂಡ್‍ಗಳನ್ನು ಆತ ಹೊಂದಿದ್ದ.
ಸಿಖ್ ಧರ್ಮಾನುಯಾಯಿಯಾಗಿದ್ದ ಪೊಂಟಿಯ ಹೆಸರು ಗುರುದೀಪ್ ಸಿಂಗ್ ಚಡ್ಡಾ. ಪಾಕಿಸ್ಥಾನದ ಲಾಹೋರಿಗೆ ಚಿನ್ನಲೇಪಿತ ಪಲ್ಲಕಿಯೊಂದನ್ನು ನೀಡಿರುವ ಕೆಲಸದಲ್ಲಿಯೂ ಪೊಂಟಿಯ ಕೈಯಿದೆ ಯೆಂದು ಸಿಖ್ ಜನರು ಸಂಶಯಗೊಂಡು ಇಂತಹ ಸಂಪತ್ತಿನ ಪ್ರದರ್ಶನವನ್ನು ಖಂಡಿಸಿದ್ದರು.
ಮಾಧ್ಯಮದ ಎದುರು ಸುಲಭದಲ್ಲಿ ಸಿಗದ ಪೊಂಟಿ ಉತ್ತರ್ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ರಾಜಕೀಯ ಶಕ್ತಿಗಳ ಹಿಂದಿನ ಶಕ್ತಿಯಾಗಿದ್ದ. ಮುಲಾಯಂ ಹುಡುಗ ಅಖಿಲೇಶ್ ಉತ್ತರ್ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವ ಸಂದರ್ಭದಲ್ಲಿ ಹಾಜಾರಾಗಿ ಎಲ್ಲರ ಕಣ್ಣು ಬಾಯಿಗಳಿಗೆ ಆಹಾರವಾದ. ಕೆಲವೇ ದಿನಗಳಲ್ಲಿ ಆತ ಮತ್ತೆ ಸುದ್ದಿಯಾದ. ನೋಯ್ಡಾದಲ್ಲಿನ ಸೆಂಟರ್ ಸ್ಟೇಜ್ ಮಾಲ್ ನ ನೆಲಮಹಡಿಯಲ್ಲಿ ನೂರು ಕೋಟಿಗೂ ಮಿಕ್ಕಿ ನೋಟಿನ ಕಂತೆಗಳನ್ನು ಇಡಲಾಗಿದೆ. ಅದನ್ನು ಜಪ್ತಿ ಮಾಡಲು ಆದಾಯ ತೆರಿಗೆಯವರು ರೈಡ್ ಮಾಡುತ್ತಿದ್ದಾರೆ ಎಂದಾಗ ಇಡೀ ನೋಯ್ಡಾ ಜತೆಗೆ ಲಕ್ನೋ ಮತ್ತು ದೆಹಲಿಯಲ್ಲಿ ಸಣ್ಣ ಕಂಪನವಾಗಿತ್ತು. ಕಡೆಗೆ ಆದಾಯ ತೆರಿಗೆಯವರಿಗೆ ಏನೂ ಸಿಕ್ಕಿಲ್ಲ ಎಂಬ ಬ್ರೇಕಿಂಗ್ ಸುದ್ದಿ ಸಿಕ್ಕಿದಾಗ, ರಾಜಕೀಯ ತಾಳ ಮೇಳಗಳು ಅಡಿ ಮೇಲಾದಾಗ ಪೊಂಟಿಯಂತಹ ವ್ಯವಹಾರಸ್ಥರಿಗೆ ಎಲ್ಲಿ ಏಟು ಬೀಳಬಹುದು, ಎಲ್ಲಿಂದ ಅವರು ತಪ್ಪಿಸಿಕೊಳ್ಳಬಲ್ಲರು ಎಂಬುದರ ಸತ್ಯ ದರ್ಶನವಾಯಿತು.
ಈ ಪೊಂಟಿಯ ಕೈಚಳಕ ನೋಯ್ಡಾದ ಸಾಮಾನ್ಯ ಜನರಾದ ನಮ್ಮ ಕಣ್ಣೆದುರಿಗೆ ಕಂಡು ಬಂದಿದ್ದು ಕಳೆದ ಆರೇಳು ತಿಂಗಳ  ಹಿಂದಿನಿಂದ.
ದೆಹಲಿಯ ದ್ವಾರಕಾದಿಂದ ನೋಯ್ಡಾದ ಸಿಟಿ ಸೆಂಟರ್ ನಡುವೆ ಇರುವ ಬ್ಲೂ ಲೈನ್ ದೆಹಲಿ ಮೆಟ್ರೋದ ಅತ್ಯಂತ ಉದ್ದದ ಒಂದು ಮೆಟ್ರೋ ಲೈನ್. ನೋಯ್ಡಾ ಸಿಟಿ ಸೆಂಟರ್ ಮೆಟ್ರೋ ಇಳಿದು ನೀವು ಕಣ್ಣಾಡಿಸಿದರೆ ಎದುರುಗಡೆ ವಿಸ್ತಾರವಾದ ಖಾಲಿ ಮೈದಾನ ಕಾಣುತಿತ್ತು. ಅದರಲ್ಲಿ ಕೆಲವೊಮ್ಮೆ ಹಳ್ಳಿಯ ರೈತರು ತರಕಾರಿ ಬೆಳೆಸುತ್ತಿದ್ದರು. ಆದರೆ ಅದನ್ನು ಯಾರು ಯಾವುದೇ ಶಾಶ್ವತ ಉಪಯೋಗಕ್ಕೆ ಬಳಸಿರಲಿಲ್ಲ. ನಗರ ಮಧ್ಯದಲ್ಲಿ ಸುಮಾರು ಮುನ್ನೂರು ಎಕರೆಯಷ್ಟು ಖಾಲಿಜಾಗ ಕಂಡಾಗ ನಾವೂ ಕನಸು ಕಾಣುತ್ತಿದ್ದೇವು. ಇಲ್ಲಿ ನಮ್ಮದೂ ಒಂದು ವಿಶಾಲವಾದ ತೋಟದ ಮನೆ ಕಟ್ಟಿ ಇರಬಹುದೆಂದು. ಆದರೆ ಇಂತಹ ಕನಸುಗಳಿಗೆ ಆಗಲೇ ಜೀವ ತುಂಬಿಸಿಟ್ಟಿದ್ದರು. ನೋಯ್ಡಾದ ಸೆಕ್ಟರ್ 32 ಮತ್ತು  25 ರಲ್ಲಿ ಇದೀಗ ಸುಮಾರು ಆರೇಳು ತಿಂಗಳಿಂದ ಭರದಿಂದ ಕೆಲಸ ನಡೆಯುತ್ತಿದೆ. ವೇವ್ ಸಿಟಿ ಸೆಂಟರ್ ನ ಅಡಿಪಾಯಕ್ಕೆ ಈಗಾಗಲೇ ಸುಮಾರು 50 ಮೀಟರ್ ಆಳದಷ್ಟು ಮಣ್ಣನ್ನು ಅಗೆಯಲಾಗಿದೆ. ಕೆಲಸ ಭರದಿಂದ ಸಾಗುತ್ತಿದೆ. ಅದೆಷ್ಟೊ ಸಾವಿರ ಕೋಟಿ ವೆಚ್ಚದಲ್ಲಿ ಇಡೀ ಒಂದು ನಗರವೇ ನಗರ ಮಧ್ಯದಲ್ಲಿ ಏಳುತ್ತಿದೆ. ನಮ್ಮ ಕನಸಿನ ಮನೆಗೆ ಅದೆಷ್ಟೋ ಕೋಟಿ ಕೊಡಬೇಕು.
ವೇವ್ ಸಿಟಿ ನಕ್ಷೆ

ದೆಹಲಿಯ ಛತ್ತರ್ ಪುರ್ ಪ್ರದೇಶದಲ್ಲಿ ಬಹಳಷ್ಟು ಫಾರ್ಮ್ ಹೌಸ್‍ಗಳಿವೆ. ಅವುಗಳಲ್ಲೊಂದು ಪೊಂಟಿ ಮತ್ತು ಆತನ ಸಹೋದರ ಹರ್‌ದೀಪ ಸಿಂಗ್ ಚಡ್ಡ ನಡುವೆ ವ್ಯಾಜದಲ್ಲಿತ್ತು. ಕೋಟಿನಲ್ಲಿ ಕೇಸು ನಡೆದು ಹರ್‌ದೀಪನಿಗೆ ಆ ಫಾರ್ಮ್ ಹೌಸ್ ಸಿಕ್ಕಿದರೂ ಪೊಂಟಿಗೆ ಅದರ ಮೇಲೆ ಆಸೆಯಿತ್ತು. ಈ ಕುರಿತು ಮತ್ತೆ ಮತ್ತೆ ಜಗಳ ಮತ್ತು ಮಾತುಕತೆಗಳಾಗುತ್ತಿದ್ದವು. ಶನಿವಾರದಂದು ಪೊಂಟಿ ಮತ್ತು ಹರ್‌ದೀಪ್ ಸಿಂಗ್ ಚಡ್ಡ ಅದೇ ಫಾರ್ಮ್ ಹೌಸಿಗೆ ಬಂದು ಮಾತುಕತೆಯಾಡುತ್ತಿದ್ದರು. ಮಾತುಕತೆ ಜಗಳಕ್ಕೆ ತಿರುಗಿತು. ಪೊಂಟಿಯ ಕೈಯಲ್ಲಿ ಪಿಸ್ತೂಲು ಬಂತು. ಗುಂಡಿ ಅದುಮಿದ. ತಮ್ಮನಿಗೆ ತಾಗಿತು. ತಮ್ಮನ ಬಾಡಿಗಾರ್ಡ್ ಪೊಂಟಿಯ ಮೇಲೆ ಮತ್ತೊಂದು ಪಿಸ್ತೂಲಿನಲ್ಲಿ ಆಕ್ರಮಿಸಿದ.
ಎರಡು ಜೀವಗಳು ಹೋದವು.
ನಿನ್ನೆ ಶನಿವಾರ. ವಾರಾಂತ್ಯದ ಮೊದಲ ದಿನ. ಮುಂಜಾವಿನ ಕೆಲಸಗಳನ್ನೆಲ್ಲಾ ಮುಗಿಸಿ ಮಧ್ನಾಹ್ನದೂಟ ಮುಗಿಸಿ ದೀಪಾವಳಿಯ ನಂತರದ ಮೊದಲ ಶನಿವಾರ, ತಣ್ಣನೆಯ ವಾತಾವರಣಕ್ಕೆ ಟಿವಿಯಲ್ಲಿ ಬರುತ್ತಿರುವ ಅಯ್ಯ ಸಿನಿಮಾ ನೋಡುವ ಸಡಗರದಲ್ಲಿ ನಾವಿದ್ದೆವು. ಮೊಬೈಲಿನಲ್ಲಿ  ಮೆಸೇಜ್ ಬಂತು. ಇನ್ನು ಉಳಿದ ಕತೆ, ಬರೆವ ಕತೆ, ಪೊಂಟಿಯಿಲ್ಲದ ನೋಯ್ಡಾದ ಕತೆ. ಮುಂಜಾನೆಯ ಪೇಪರು ನೋಡಲೇ ಬೇಕಲ್ಲ.  ಯಾಕೆಂದರೆ  ಪೊಂಟಿಯ  ಕತೆ ಮುಗಿಯಿತ್ತಿದ್ದಂತೆ ಮುಂಬಯಿಯಲ್ಲಿ ಬಾಳ ಠಾಕ್ರೆಯೆಂಬ ಬಹಳಷ್ಟು ಹಳೆಯ ವ್ಯಂಗ್ಯಚಿತ್ರಕಾರನೊಬ್ಬ ತನ್ನ 86ನೇ ವಯಸ್ಸಿನಲ್ಲಿ ಇನ್ನಿಲ್ಲವಾದನಲ್ಲ! ಆತನ ಕುರಿತು .... ನೋಡೋಣ.
ಒಲವಿನಿಂದ
ಬಾನಾಡಿ
  

Tuesday, November 13, 2012

ಮುಗಿದ ಬೀಪಿ ಮಾತ್ರೆ ಮತ್ತು ಅವಲಕ್ಕಿ ಗುದ್ದು

ಅಣ್ಣಪ್ಪನ ಅಂಗಳದಂಚಿನಲ್ಲಿ ಕಟ್ಟಿ ಹಾಕಿದ್ದ ಮೈರ ಮತ್ತು ಕೆಂಪ ಹುಂಜಗಳು ಮುಂಜಾನೆಯ ನಾಲ್ಕು ಗಂಟೆಗೆ ಎದ್ದು ಊರನೆಲ್ಲಾ ಎಬ್ಬಿಸುತ್ತಿದ್ದವು. ಒಮ್ಮೆ ಕೆಂಪ ಕೊಕ್ಕೋಕ್ಕೋ ಎಂದು ಕೂಗಿ ಕೊಂಡರೆ ಅದಕ್ಕೆ ಪ್ರತಿಧ್ವನಿಯೆಂಬಂತೆ ಮೈರ ಕೂಗಿಕೊಳ್ಳುತ್ತಿದ್ದ. ಅವುಗಳ ಕೂಗು ಸುಮಾರು ಹತ್ತು ನಿಮಿಷ ನಡೆದು ಮತ್ತೆ ಸುಮ್ಮಗಾದವು. ಇನ್ನು ಸರಿಯಾಗಿ ಐದು ಗಂಟೆಗೆ ಮತ್ತೆ ಕೂಗುತ್ತವೆ ಎಂದು ಆ ಚುಮು ಚುಮು ಚಳಿಯ ಮಂಜಾವಿಗೆ ಎಚ್ಚರಗೊಂಡ ಪದ್ಮಕ್ಕ ಮತ್ತೆ ಮುಸುಕೆಳೆದು ಮಲಗಿದರು. ಅಣ್ಣಪ್ಪ ಮನೆಯ ಹೊರಗಿನ ಚಿಟ್ಟೆಯಲ್ಲಿ ಮಲಗಿದ್ದವನಿಗೆ ರಾತ್ರಿಯಿಡೀ ನಿದ್ದೆ ಬಾರದೇ ಇದೇ ಹೊತ್ತಿಗೆ ಕಣ್ಣು ಅಡ್ಡಾ ಆಗಿ ಅತ್ತ ನಿದ್ದೆಯ ಲೋಕದಲ್ಲೂ ಇರದೇ ಇತ್ತ ಎಚ್ಚರದ ಲೋಕದಲ್ಲೂ ಇರದೇ ಒಂದು ತರದ ಮಂಪಿನಲ್ಲಿಯೇ ಮೈರ ಮತ್ತು ಕೆಂಪರ ಕುರಿತು ಆಲೋಚಿಸುತ್ತಿದ್ದ. ಮಂಪಿನಲ್ಲಿಯೇ ಆಲೋಚನೆಗಳು ಒಂದು ತರವಾದ ಕನಸಾಗಿ ಮಾರ್ಪಡಾಗುತ್ತಾ ಹೋದವು.
ಅಣ್ಣಪ್ಪ ಮನೆಯ ಮಾಡಿನ ಬಿದಿರಿನ ಪಕ್ಕಾಸಿಗೆ ಕಟ್ಟಿದ ಅಂಕದ ಬಾಳನ್ನು ಸರಿಯಾಗಿ ಬೆಣಚು ಕಲ್ಲಿನಲ್ಲಿ ಸಾಣೆಯಿಕ್ಕಿ ಹರಿತಗೊಳಿಸಿದ. ತಲೆಗೆ ಕೆಂಪು ಬೈರಾಸಿನ ಮುಂಡಾಸು ಸುತ್ತಿದ. ಮನೆಯ ಮುಂದಿನ ಹಲಸಿನ ಮರದ ಬುಡದಲ್ಲಿ ಕಟ್ಟಿ ಹಾಕಿದ್ದ ಮೈರ ಮತ್ತು ಕೆಂಪನನ್ನು ನೋಡುತ್ತಾ ಒಂದು ನಿಮಿಷ ಕುಳಿತ. ಒಮ್ಮೆ ಮೈರನನ್ನು ಹಿಡಿದು ಅದರ ಗರಿಗಳನ್ನು ನೇವರಿಸಿದ. ಇನ್ನೊಮ್ಮೆ ಕೆಂಪನನ್ನು ಹಿಡಿದು ಅದನ್ನು ಪೂಸಿದ. ಇವತ್ತು ಶುಕ್ರವಾರ. ಕುಕ್ಕುಟ ಪಂಚಾಂಗದ ಪ್ರಕಾರ ಕೆಂಪನಿಗೆ ಬೊಳ್ಳೆ ಎದುರು ಸಿಕ್ಕಿದರೆ ಕೆಂಪ ಗೆಲ್ಲಬಹುದೋ ಎಂದು ಯೋಚಿಸಿದ. ಕುಕ್ಕುಟ ಪಂಚಾಂಗದಲ್ಲಿ ಬರೆದ ಕೋಳಿ ಪಂಚಾಂಗ ನೆನಪಿಗೆ ಬರಲೇ ಇಲ್ಲ. ಅದ್ಯಾವಗಲೋ ಮಂಗಳೂರಿನ ನಿತ್ಯಾನಂದ ಗ್ರಂಥಾಲಯದಿಂದ ತಂದ ಕುಕ್ಕುಟ ಪಂಚಾಂಗ ಮಾಡಿನ ಯಾವ ಮೂಲೆಯಲ್ಲಿ ಇದೆಯೋ ಎಂದು ಅದರ ಬೆನ್ನ ಹಿಂದೆ ಆಲೋಚನೆಗಳು ಹರಿದು ಹೋದವು. ನಿತ್ಯಾನಂದ ಗ್ರಂಥಾಲಯಕ್ಕೆ ಮತ್ತೆ ಯಾವಾಗ ಹೋಗುವುದು? ಇನ್ನೊಮ್ಮೆ ಅಲ್ಲಿಗೆ ಹೋದರೆ ಇನ್ನೊಂದು ಹೊಸ ಕುಕ್ಕುಟ ಪಂಚಾಂಗ ತರಲೇ ಬೇಕು. ಅಲ್ಲಿ ಮಾನ್ಯದ ವೆಂಕಟರಾಯರಲ್ಲಿ ಹೇಳಿ ಅದನ್ನು ಓದುವ ರೀತಿಯನ್ನು ಕೇಳಿಸಬೇಕು ಎಂದು ಕೊಂಡ. ಹಾಗೆಯೇ ಮಂಪಿನಲ್ಲಿದ್ದ ಅಣ್ಣಪ್ಪ ನಿದ್ದೆಗೆ ಜಾರಿದ್ದ.
ಮಳೆಗಾಲ ಮುಗಿದು ಇನ್ನು ಚಳಿ ಶುರುವಾಗುತ್ತಿದೆ ಅನ್ನುವ ಕಾಲ ಅದು. ತೋಟದ ಅಂಚಿನಲ್ಲಿದ್ದ ಕೆರೆಯಲ್ಲಿ ನೀರು ತುಂಬಿತ್ತು. ಕೆರೆಯ ಮೇಲಿನ ಗುಡ್ಡದಲ್ಲಿ ಬೆಳೆದು ನಿಂತ ಕಾಡಿನಾಚೆಯಿಂದ ನಿಧಾನವಾಗಿ ಬೀಸುವ ಒಣಗಾಳಿ ಕೆರೆ ದಾಟಿ ಅಣ್ಣಪ್ಪನ ಮನೆಯಂಗಳ ತಲುಪಿದಾಗ ತಂಪಾಗಿ ಸಣ್ಣಗೆ ಚಳಿಯ ಅನುಭವವನ್ನು ಕೊಡುತ್ತಿತ್ತು. ಈಚಣ್ಣ ಭಟ್ಟರು ಕಳೆದ ಸಲ ಬೈಹುಲ್ಲು ತರಲು ಸಕಲೇಶಪುರಕ್ಕೆ ಲಾರಿ ಹಿಡಿದು ಹೋಗಿ ಬರುವಾಗ ತಂದ ಕಂಬಳಿಯನ್ನು ಹೊದ್ದರೆ ಸೆಖೆಯಾಗುತ್ತಿತ್ತು. ಹೊದೆಯದಿದ್ದರೆ ಚಳಿಯಾಗುತ್ತಿತ್ತು. ಅಣ್ಣಪ್ಪನ ಮಂಪರಿನ ಆಲೋಚನೆಗಳು ಕನಸಾಗಿ ನಂತರ ಅವನು ಕನಸಿನಾಚೆ ಬಂದು ನಿದ್ದೆಯೊಳಗೆ ಸೇರಿ ಅಷ್ಟೊತ್ತಾಗ ಬೇಕೆಂದರೆ ಮೈರ ಮತ್ತು ಕೆಂಚರು ಕೊಕ್ಕೊಕ್ಕೋ ಎಂದು ಕೂಗಲು ಶುರು ಮಾಡಿದವು.
ರಾತ್ರಿ ನೆನೆಹಾಕಿದ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಈಗ ಕಡೆದು ಇಡದಿದ್ದರೆ ರಾತ್ರಿಗೆ ಇಡ್ಲಿ ಮಾಡಲಿಕೆ ಆದೀತಾ ಎಂದು ಒಳಗೆ ಮಲಗಿದ್ದ ಪದ್ಮಕ್ಕನಿಗೆ ಆಲೋಚನೆ ಬಂತು. ಇದು ಕೆಂಪ ಮೈರರ ಎರಡನೆ ಕೂಗು. ಸಮಯ ಐದು ಗಂಟೆಯಾಗಿರಲೇ ಬೇಕು. ಇನ್ನು ಒಂದು ಸ್ವಲ್ಪ ಹೊತ್ತಿನಲ್ಲಿ ಗೋಳಿಕಟ್ಟೆಯ ಪಳ್ಳಿಯಿಂದ ಮೂಸಬ್ಬ ಬಾಂಗ್ ಕೊಡುತ್ತಾನೆ. ಅಷ್ಟಕ್ಕೆ ಏಳದಿದ್ದರೆ ಆಗಲಿಕ್ಕಿಲ್ಲ ಎಂದು ಪದ್ಮಕ್ಕ ಕತ್ತಲೆಯಲ್ಲಿಯೇ ಚಿಮಿಣಿ ದೀಪ ಮತ್ತು ಬೆಂಕಿ ಪೆಟ್ಟಿಗೆಯನ್ನು ಹುಡುಕಲು ಕೈಯ್ಯಾಡಿಸಿದರು. ಮೈರ ಮತ್ತು ಕೆಂಚರು ಮತ್ತೆ ಕೊಕ್ಕೊಕ್ಕೋ ಎಂದು ಊರನ್ನೆ ಎಬ್ಬಿಸಲು ತೊಡಗಿದ್ದವು. ಚಿಮಿಣಿದೀಪ ಉರಿಸಿ ಪದ್ಮಕ್ಕ ಮೊದಲು ಒಲೆಯ ಬೂದಿ ಖಾಲಿ ಮಾಡಿದಳು. ಒಣಗಿದ ಕೊತ್ತಲಿಂಗೆ ಮತ್ತು ಮಡಲನ್ನು ಉರಿಸಿ ಬೆಂಕಿ ಮಾಡಿ ರಾತ್ರಿ ಮಾಡಿದ ಮೀನಿನ ಸಾರಿನ ಪಾತ್ರೆಯನ್ನು ಒಲೆ ಮೇಲಿಟ್ಟಳು. ನಿನ್ನೆ ತಂದ ಆರು ಬಂಗುಡೆಯ ತಲೆಯ ಭಾಗ ಮಾತ್ರ ಉಳಿದಿದೆ. ಬೆಳಗಿನ ಚಾಯಕ್ಕೆ ಮಾಡುವ ದೋಸೆ ಜತೆ ಕೊಡದಿದ್ದರೆ ಅಣ್ಣಪ್ಪ ಸಿಟ್ಟಾಗಬಹುದು ಎಂದು ಮೀನಿನ ಸಾರನ್ನು ಬಿಸಿ ಮಾಡಲು ಒಲೆ ಮೇಲೆ ಇಟ್ಟು ಅಕ್ಕಿ ಮತ್ತು ಉದ್ದಿನ ಬೇಳೆ ಕಡೆಯಲು ಕಲ್ಲಿನ್ನು ತೊಳೆಯಲು ಶುರು ಮಾಡಿದಳು.
ಗೋಳಿಕಟ್ಟೆಯ ಮಹಮ್ಮಾಯಿ ಭಜನಾ ಮಂದಿರದಿಂದ ಸುಪ್ರಭಾತ ಶುರುವಾಯಿತು. ಜತೆಗೆ ಪಳ್ಳಿಯಿಂದ ಬಾಂಗ್ ಕೂಡಾ.  ಮಂದಿರದಿಂದ ಮೊದಲು ಕೌಸಲ್ಯ ಸುಪ್ರಜಾದ ಕ್ಯಾಸೆಟ್ಟು, ನಂತರ ಎದ್ದೇಳು ಮಂಜುನಾಥ ಮತ್ತೆ ಅಯಗಿರಿ ನಂದಿನಿ ನಂದಿತ ಮೋಹಿನಿ .... ಪದ್ಮಕ್ಕನಿಗೆ ಸುಪ್ರಭಾತಗಳೆಲ್ಲಾ ಕಿವಿಯಲ್ಲಿ ಬಿದ್ದಾಗ ಇವೆಲ್ಲ ತನಗೆ ಬಾಯಿಪಾಠ ಬರುತ್ತದೆ ಎಂದೇ ಅನಿಸುತ್ತದೆ ಅಂದುಕೊಂಡಳು. ಅದು ಮಂಗಳವಾರ ಮತ್ತು ಶುಕ್ರವಾರ ಮಾತ್ರ ಕೇಳುವುದು. ಅಂದ ಹಾಗೆ ಇವತ್ತು ಶುಕ್ರವಾರ ಕೂಡ.
ಮಂದಿರದ ಸುಪ್ರಭಾತ, ಕೆಂಪ ಮೈರರ ಕೊಕ್ಕೊಕ್ಕೋ ಜತೆಗೆ ಕಾಡಿನಲ್ಲಿ ಮಲಗಿದ್ದ ಹಕ್ಕಿಗಳೂ ಎದ್ದು ಸ್ವರ ಹೊರಡಿಸಲು ಆರಂಭಿಸಿದವು. ಕಾಗೆಗಳೆರಡು ಬಂದು ಬಸಳೆ ಬಳ್ಳಿಯ ಚಪ್ಪರದ ಬುಡದಲ್ಲಿ ಪಾತ್ರೆ ಬಟ್ಟಲು ತೊಳೆದಾಗ ಚೆಲ್ಲಿದ ಅನ್ನದ ಅಗುಳನ್ನು ಹೆಕ್ಕುತಿದ್ದವು. ಗಳಿಗೆಗೊಮ್ಮೆ ಅವುಗಳು ಕೂಡ ತೆಂಗಿನ ಮರದ ಮಡಲಲ್ಲಿ ಕುಳಿತು ಕಾ ಕಾ ಅಂತ ಸ್ವರ ಹೊರಡಿಸಲು ಆರಂಭಿದ್ದವು. ಪದ್ಮಕ್ಕ ಅಕ್ಕಿಯನ್ನು ಕಡೆಯುವ ಕಲ್ಲಿನಲ್ಲಿ ಹಾಕಿ ಕಡೆಯುವ ಶಬ್ದ ಕೂಡ ಮುಂಜಾನೆಯ ಎಲ್ಲಾ ಸ್ವರ ಲಯಗಳಲ್ಲಿ ಲೀನವಾಗಿ ಅದ್ಯಾವುದೋ ರಾಗವನ್ನು ಹಿಡಿದು ಕೊಂಡಿತ್ತು.
ಒಟ್ಟಾರೆ ಉಟ್ಟ ಲುಂಗಿಯನ್ನೇ ಮುಸುಕು ಹಾಕಿ ಮಲಗಿದ್ದ ಅಣ್ಣಪ್ಪನಿಗೆ ಎಚ್ಚರ ಆಗಲು ಇನ್ನೇನು ಬೇಕಿರಲಿಲ್ಲ. ಮುಂಜಾನೆಯಷ್ಟೇ ಕಣ್ಣಿಗೆ ದಕ್ಕಿದ ನಿದ್ದೆಯನ್ನು ಹಾಳು ಮಾಡಲು ಅದೆಷ್ಟು ಸ್ವರಗಳು ಶಬ್ದಗಳು! ನಿದ್ದೆಯಿಂದ ಎದ್ದ ಅಣ್ಣಪ್ಪ ಚಾಪೆಯ ಆಚೆ ಇದ್ದ ಎಲೆಯಡಿಕೆಯ ತಟ್ಟೆಗೆ ಕೈಹಾಕಿದ. ನಿನ್ನೆ ಸಂಜೆಯಷ್ಟೇ ಒಂದು ಅಡಿಕೆಯನ್ನು ಹೋಳು ಮಾಡಿ ಹಾಕಿದ್ದು. ಅದೂ ಮುಗಿಯಿತಾ. ಈಚಣ್ಣ ಭಟ್ಟರ ತೋಟದಿಂದ ಹೆಕ್ಕಿ ತಂದ ಏಳೆಂಟು ಅಡಿಕೆಗಳು ಎರಡು ದಿನಕ್ಕೆ ಬಂದರೆ ಅದೇ ದೊಡ್ಡದು. ಇನ್ನೊಂದು ಅಡಿಕೆಯನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಹೋಳು ಮಾಡಲು ಕುಳಿತ ಅಣ್ಣಪ್ಪನಿಗೆ ಮಂಪರಿನಾಚೆ ಕಂಡ ಕನಸಿನ ನೆನಪಾಯಿತು. ಇವತ್ತು ಸಂಜೆ ಗೋಳಿಕಟ್ಟೆಯ ಕೋಳಿ ಅಂಕಕ್ಕೆ ಮೈರನನ್ನು ಕೊಂಡು ಹೋಗುವುದೋ ಅಥವಾ ಕೆಂಪನನ್ನೋ ಎಂದು ಯೋಚಿಸುತ್ತಿದ್ದ. ದೀಪಾವಳಿಯ ಅಮವಾಸ್ಯೆಯ ಶುಕ್ರವಾರ ಸಂಜೆಯ ಹೊತ್ತಿಗೆ ಮೂಡುಮುಖವಾಗಿ ಹೊರಟು ಕೆಂಪನನ್ನು ಕಟ್ಟಿದರೆ ಕೆಂಪ ಎದುರಾಳಿಯ ಹೊಟ್ಟೆಗೆ ಅಥವಾ ಕೊರಳಿಗೆ ಬಾಳಿನಲ್ಲಿ   ಗೀರಿ ಜಯಗಳಿಸುವುದರಲ್ಲಿ ಸಂಶಯವಿಲ್ಲ ಎಂದು ತನ್ನ ಕುಕ್ಕುಟ ಪಂಚಾಂಗವನ್ನು ತಾನೇ ಅಂದುಕೊಂಡ. ಬಹಳಷ್ಟು ಸಲ ಪಂಚಾಂಗದಲ್ಲಿ ಬರೆದದ್ದೆಲ್ಲಾ ನಡೆಯುವುದಿಲ್ಲ. ನಮ್ಮ ಆಲೋಚನೆಯಲ್ಲಿಯೇ ನಾವು ಯೋಜನೆ ಹಾಕಿ ಎರಡು ಕೂಡಿಸಿ ನಾಲ್ಕು ಕಳೆದು ಯಾವ ಕೋಳಿಯನ್ನು ಯಾವ ಕೋಳಿಯ ವಿರುದ್ದ ಕಟ್ಟ ಬೇಕು ಎಂದು ನಿರ್ಧರಿಸಬೇಕು. ಅಣ್ಣಪ್ಪನ ಇಂತಹ ನಿರ್ಧಾರಗಳು ಕೆಲವೊಮ್ಮೆ ಯಶಸ್ವಿಯಾದರೆ ಮತ್ತೆ ಕೆಲವೊಮ್ಮೆ ಸೋಲನ್ನು ಕಂಡಿವೆ. ರೊಟ್ಟಿ ಮಾಡಲು ಪದ್ಮಕ್ಕನ ಹತ್ತಿರ ಹೇಳಿ ಹೋದರೆ ಅವತ್ತು ತನ್ನ ಕೋಳಿ ಸೋತು ಇನ್ಯಾರದೋ ಬಿಸಲೆಯಲ್ಲಿ ಬೇಯುವಂತಾಗುತ್ತಿತ್ತು.
ರೊಟ್ಟಿ ತಿನ್ನಲು ಯಾವುದೋ ಪೆಟ್ಟಾದ ಹುಂಜವನ್ನೋ ಅಥವಾ ಹೇಂಟೆಯನ್ನೋ ಕತ್ತು ಹಿಸುಕಿ ಕೊಲ್ಲಬೇಕಾಗುತ್ತಿತ್ತು.
ಅಲ್ಲ ಇವಳು ಇಷ್ಟು ಹೊತ್ತಿನಿಂದ ಎಂತ ಕಡೆಯುತ್ತಾಳೆ ಅಂತ. ರೊಟ್ಟಿಗೇನಾದರೂ ಕಡೆಯುತ್ತಾಳೋ. ರೊಟ್ಟಿಗೆ ಬೆಳಿಗ್ಗೆ ಯಾಕೆ ಕಡೆಯಬೇಕು? ಇಡ್ಲಿಗೇ ಇರಬೇಕು. ಅಲ್ಲ ... ಸಂಜೆ ಇಡ್ಲಿ ಮಾಡಿದರೆ, ಅಂಕದಲ್ಲಿ ಗೆದ್ದು ತಂದ ಒಟ್ಟೆಕೋಳಿಯನ್ನು ತಿನ್ನಲು ಮತ್ತೆ ರೊಟ್ಟಿ ಮಾಡ್ತಾಳೊ ಇಲ್ಲ ಇಡ್ಲಿಯ ಜತೆಗೇ ತಿನ್ನಿ ಅಂತ ಹೇಳ್ತಾಲೋ? ಅಣ್ಣಪ್ಪನಿಗೆ ಸಿಟ್ಟು ನೆತ್ತಿಗೇರುತ್ತಿತ್ತು.
ಕಟ್ಟದ ಕೋಳಿ ಮತ್ತು ಅಕ್ಕಿಯ ರೊಟ್ಟಿಯ ಔತಣವನ್ನು ನೆನೆಯುತ್ತಿದ್ದ ಅಣ್ಣಪ್ಪನಿಗೆ ಇವಳು ಏನು ಮಾಡುತ್ತಿದ್ದಾಳೆ ಎಂದು ತಿಳಿಯದೇ ರೋಷವುಕ್ಕುತ್ತಿತ್ತು.
ಏನು ನಿನ್ನದು ಬೆಳಗೆದ್ದು ಕಡೆಯುವ ಕಲ್ಲಿನಲ್ಲಿ ಕೆಲಸ. ಯಾರಿಗೆ ಸಮಾರಾಧನೆಯಾಗುತ್ತದೆ. ನಿನಗೆ ಎಷ್ಟು ಸಲ ಹೇಳಿಲ್ಲ. ಅಂತ ಪದ್ಮ್ಕಕ್ಕನ ಬೆನ್ನಿಗೆ ಎರಡು ಗುದ್ದು ಕೊಟ್ಟೆ ಬಿಟ್ಟ. ಅಷ್ಟರೊಳಗೆ ಮೀನು ತರಲು ಹೊರಟ ಅದ್ರಾಮ ಬಾಳೆಗೊನೆ ಹೊತ್ತುಕೊಂಡು ಇವರ ಅಂಗಳಕ್ಕೆ ತಲುಪಬೇಕೇ? ಅದೆಂತದು ಪದ್ಮಕ್ಕ, ಅಣ್ಣಪಣ್ಣ ಗುದ್ದುವುದು ಎಂದು ಅವನು ಕೇಳಬೇಕೆ? ಪದ್ಮಕ್ಕ ನೋಯುತ್ತಿರುವ ಬೆನ್ನ ಕಡೆ ಗಮನವಿಡದೇ ಇವತ್ತು ದೀಪಾವಳಿಯಲ್ವ ಅದಕ್ಕೆ ಅವರು ಅವಲಕ್ಕಿ ಕುಟ್ಟುತ್ತಿದ್ದಾರೆ, ನಾನು ಇಡ್ಲಿಗೆ ಕಡೆಯುತ್ತಿದ್ದೇನೆ. ಮಧ್ಯಾಹ್ನ ಬರುವಾಗ ಒಳ್ಳೆಯ ಬಾಳೆಮೀನು ಅಥವಾ ಅಂಜಾಲ್ ಇದ್ದರೆ ನಮಗೆ ತಾ ಎಂದು ಅದ್ರಾಮನನ್ನು ಸಾಗಹಾಕಿದಳು.
ಇವರ ಬಿಪಿಯ ಮಾತ್ರೆ ಮುಗಿದಿದೆ. ಅದನ್ನು ತಂದು ಇವರು ತಿನ್ನುವವರೆಗೆ ನಾನು ಇವರಿಂದ ಗುದ್ದು ತಿನ್ನುತ್ತಿರಬೇಕು. ಅದಕ್ಕೆ ದೀಪಾವಳಿ ಅಂತ ಇಲ್ಲ ಅಮವಾಸ್ಯೆ ಅಂತ ಇಲ್ಲ ಎಂದು ಪದ್ಮಕ್ಕ ಕಲ್ಲಿಗೆ ನೆನೆದ ಉದ್ದಿನ ಬೇಳೆಯನ್ನು ಹಾಕಿ ಕಡೆಯತೊಡಗಿದಳು. ಕೆಂಪ ಮತ್ತು ಮೈರ ಕೊಕ್ಕೊಕ್ಕೋ ಅಂತ ಕೂಗುತ್ತಿದ್ದವು. ಇವತ್ತು ಯಾರ ದಿನ ಕೆಂಪಂದೋ, ಮೈರನದೋ ಎಂದು ಆಲೋಚನೆಯಲ್ಲಿಯೇ ಮುಳುಗಿದ ಅಣ್ಣಪ್ಪ.
ಒಲವಿನಿಂದ
ಬಾನಾಡಿ 

Friday, November 9, 2012

ದೆಹಲಿಯ ಆಕಾಶವೂ ಸ್ವಿಜರ‍್ ಲ್ಯಾಂಡಿನ ಗಾಳಿಯೂ ...

ಅಣ್ಣಾ ಹಜಾರೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಮೊದಲ ಬಾರಿ ಚಳವಳಿ ಆರಂಭಿಸಿದಾಗ ನಾವೂ ಕುತೂಹಲದಿಂದ ಎಲ್ಲವನ್ನು ನೋಡುತ್ತಿದ್ದೆವು. ಅಣ್ಣಾ ಚಳುವಳಿಯ ಭೀಕರ ಮಾರುತಕ್ಕೆ ಜನರು ಮಾರು ಹೋದಾಗ ಸಾಮಾಜಿಕ ಸಾಂಕ್ರಮಿಕಕ್ಕೆ ನಾವು ಬಲಿಯಾಗಬಾರದೆಂದು ದೂರವೇ ಉಳಿದಿದ್ದೆ. ಆದರೆ ಚಳುವಳಿಯ ಕೊನೆ ದಿನ ನನ್ನನ್ನು ಅಲ್ಲಿ ಕೊಂಡೊಯ್ದಿದ್ದು ನನ್ನ ಬಂಡಾಯ ಪ್ರವೃತ್ತಿಯೋ, ಪತ್ರಕರ್ತನಲ್ಲಿರಬಹುದಾದ ಕುತೂಹಲವೋ, ಸಮಾಜದ ಬಹುವರ್ಗಕ್ಕೆ ತಟ್ಟಿದ ಸಾಂಕ್ರಮಿಕತೆಯೋ ಗೊತ್ತಿಲ್ಲ.

ಅಣ್ಣಾ ಹಜಾರೆಯ ಮೇಲೆ ಭರವಸೆ ನನಗಿರಲಿಲ್ಲ.  ಆತನ ಜತೆಗೆ ಇದ್ದವರ ಮೇಲೆ ಬಹಳಷ್ಟು ಸಂಶಯವಿತ್ತು. ಅರವಿಂದ ಕೇಜ್ರಿವಾಲನ ಮೇಲಂತು ಬಹಳಷ್ಟು ಸಂಶಯವಿತ್ತು. ನನ್ನ ಸಂಶಯದ ಕುರಿತು ನನಗೆ ಭರವಸೆ ಬಂದಿದ್ದು, ಕೇಜ್ರಿವಾಲ ಅಣ್ಣ ತಂಡದಿಂದ ಹೊರ ಬಂದು ರಾಜಕೀಯ ಪಕ್ಷ ಕಟ್ಟಲು ಶುರು ಮಾಡಿದಂದಿನಿಂದ. ರಾಜಕೀಯ ಪಕ್ಷಗಳ ಮೇಲೆ ಬಹಳಷ್ಟು ಜನ ನಂಬಿಕೆ ಕಳಕೊಳ್ಳುತ್ತಿದ್ದರು. ಆರಂಭದಲ್ಲಿ ಜನರೆಲ್ಲ ಆಡಳಿತ ಪಕ್ಷ ಕಾಂಗ್ರೆಸಿನ ಬಗ್ಗೆ ಭ್ರಮನಿರಶನರಾಗಿದ್ದರು. ವಿರೋಧ ಪಕ್ಷ ಬಿಜೆಪಿಯ ಮೇಲೆ, ಅದರ ಒಡನಾಡಿ ನಿತೀಶ್ ಕುಮಾರ್ ಮೇಲೆ ಭರವಸೆ ಇಡಬಹುದು ಎಂಬ ಮನಸಿತ್ತು. ಇಷ್ಟೆಲ್ಲಾ ಕಾಂಗ್ರೆಸ್ ವಿರೋಧಿ ಅಲೆ ಇದ್ದಾಗ ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಪಾಸಾಗಬಹುದೆಂಬ ಆಸೆಯೂ ಇತ್ತು. ಸಂಸತ್ತಿನಲ್ಲಿ ನಡೆದ ಕಲಾಪಗಳನ್ನು ದಿನ ರಾತ್ರಿ ನೋಡಿಯೂ ಆಯಿತು.

ರಾಜಕಾರಣಿಗಳನ್ನು ನಂಬಬಾರದು ಎಂದೆಣಿಸುತ್ತಿರುವಾಗಲೇ ಅಣ್ಣ ತಂಡದಲ್ಲಿ ಬಿರುಕಾಯಿತು. ಕೇಜ್ರಿವಾಲನ ರಾಜಕೀಯ ಮಹತ್ವಾಕಾಂಕ್ಷೆಯ ಕುರಿತು ಹೇಸಿಗೆ ಅನಿಸಿತು. ಜತೆಗೆ ಕರ್ನಾಟಕದಲ್ಲಿ ಅಧೋಗತಿಗೆ ಬಿದ್ದಿದ್ದ ಬಿಜೆಪಿ ರಾಷ್ಟ್ರ ಮಟ್ಟದಲ್ಲಿಯಾದರೂ ಎಲ್ಲ ಭರವಸೆಗಳಿಂದಲೂ ಗೋಡೆಗಂಟಿದ್ದ ಜನಸಾಮಾನ್ಯನಿಗಿದ್ದ ಭರವಸೆಯೂ ಕುಸಿಯ ತೊಡಗಿತು. ನಿತಿನ್ ಗಡ್ಕರಿಯ ವ್ಯವಹಾರ ನೋಡಿದ ಮೇಲಂತೂ ರಾಜಕೀಯ ಎನ್ನುವುದು ಇನ್ನು ಅಧೋಗತಿಗೆ ತಲುಪಲು ಯಾರೂ ಏನೂ ಮಾಡಬೆಕೆಂದೇನು ಇಲ್ಲ ಅಂತನಿಸಿತು.

ಈ ಮಧ್ಯೆ ಕೇಜ್ರಿವಾಲನು ನಡೆಸುತ್ತಿರುವ ಎಕ್ಸ್‍ಪೋಸ್‍ಗಳು ಎಷ್ಟರ ಮಟ್ಟಿಗೆ ತನ್ನದೇ ಆದ ನಿರ್ಣಾಯಕ ಹಂತಕ್ಕೆ ಬರುತ್ತವೆ ಎನ್ನುವುದರ ಬಗೆಗೆ ನಮಗೇನೂ ಆಸಕ್ತಿಯಿಲ್ಲ. ಆತನಿಗೆ ಟಿವಿ ಯಲ್ಲಿ ತನ್ನ ಮಾತುಗಳನ್ನು ಜನ ಕೇಳ ಬೇಕು ಎಂಬಾಸೆ. ಟಿವಿಯವರಿಗೆ ಆತನೊಂದು ನಿರಾಳವಾಗಿ ಸಿಗುವ ಸುದ್ದಿ ವಸ್ತು ಅಷ್ಟೇ.

ನವಂಬರ ಒಂಬತ್ತ್ರಂದು ಅಂಬಾನಿ ಸಹೋದರರ, ಡಾಬರ್ ಮಾಲಕ ಬರ್ಮನ್ ಸಹೋದರರ, ಎಚ್ ಎಸ್ ಬಿ ಸಿ ಬ್ಯಾಂಕ್, ನರೇಶ್ ಗೋಯಲ್ (ಜೆಟ್) ಮತ್ತು ಅನ್ನು ಟಂಡನ್ ಅವರ ಕುರಿತು ಮಾಡಿದ ಎಕ್ಸ್‍ಪೋಸ್ ಗಳು ಯಾವ ದಾರಿ ತುಳಿಯುತ್ತವೆ ಎಂದು ನಮಗೆ ತಿಳಿದಿಲ್ಲ ವೆಂದರೆ ನಾವ್ಯಾಕೆ ಇಂಡಿಯದಲ್ಲಿದ್ದೇವೆ!

ನೋಡೋಣ... ದೆಹಲಿಯ ಕಲುಷಿತಗೊಂಡ ಆಕಾಶದಲ್ಲಿ ದೀಪಾವಳಿಯ ಸಂದರ್ಭದಲ್ಲಿ ಪಟಾಕಿಯಿಂದ ಹೆಚ್ಚು ಮಾಲಿನ್ಯವಾಗುವುದೋ ಅಥವಾ ರಾಜಕಾರಣಿಗಳ ಹಾದಿ ತಪ್ಪಿದ ನಡತೆಗಳಿಂದಲೋ ಎಂದು ಮುಂದಿನ ವಾರದ ತನಕ್ ಕಾದು ಕುಳಿತಿರುವೆ.

ದೀಪಾವಳಿಯ ಹಾರ್ದಿಕ ಶುಭಾಶಯಗಳು


ಬ್ಲಾಗ್ ಓದುಗರಿಗೆ
 ದೀಪಾವಳಿಯ ಹಾರ್ದಿಕ ಶುಭಾಶಯಗಳು


ಬ್ಲಾಗ್ ಬಾಗಿಲು ತೆರೆಯದೆ ತಿಂಗಳುಗಳು ತುಂಬಾ ಕಳೆದು ಹೋದವು
ಮನದ ಬಾಗಿಲು ತೆರೆಯಲು ಫೇಸ್‍ಬುಕ್‍ನಿಂದ ಆಚೆ ಬಂದು ಬ್ಲಾಗ್ ಲೋಕದಲ್ಲಿ ಸಂಚರಿಸಬೇಕು ಎಂದು ಆಲೋಚನೆಗಳು ಬರುತ್ತಾ ಇರುತ್ತವೆ.
ಈ ದೀಪಾವಳಿಯ ನಂತರ ಬರೆಯುತ್ತಲೇ ಇರಬೇಕೆಂದು ಕೊಂಡರೂ ಬರೆಯುವುದು ಎಷ್ಟೆಂದು ಮುಂದಿನ ದೀಪಾವಳಿಗಷ್ಟೇ ಗೊತ್ತಾದೀತು.

ದೀಪಾವಳಿಗಾಗಿ ಅಂತರ್ಜಾಲದಲ್ಲಿ ಹುಡುಕಿದಾಗ ಈ ಫೋಟೊ ಸಿಕ್ಕಿತು
ಯಾರು ತೆಗೆದರೋ ಗೊತ್ತಿಲ್ಲ. ನನಗೆ ಚಂದವಿದೆ ಅಂತನಿಸಿತು
ಹಂಚೋಣ ಎಂದು ಇಲ್ಲಿ ಸೇರಿಸಿದ್ದೇನೆ

ದೀಪಾವಳಿಯ ಸಿಹಿನೆನಪುಗಳು ಎಲ್ಲರನ್ನೂ ಕಾಡುತಿರಲಿ
ಮತ್ತೊಮ್ಮೆ ಪಟಾಕಿ, ಹೊಸ ಬಟ್ಟೆ, ಸಿಹಿ ತಿಂಡಿ, ಗೆಳೆಯರು, ಸಂಬಂಧಿಗಳು ಎಲ್ಲರೂ ಒಟ್ಟಾಗಿ ಸೇರಿ ಸಂತೋಷ ಹಚ್ಚಿ ಬದುಕನ್ನು ಉಜ್ವಲಗೊಳಿಸಿರಿ ಎಂದು ಆಶೀಸುತ್ತಿದ್ದೇನೆ.

ಒಲವಿನಿಂದ
ಬಾನಾಡಿ