Thursday, November 3, 2011

ಹಣ್ಣೆಲೆ

ಆ ದೊಡ್ಡ ಮರದ ಕೊಂಬೆಯಿಂದ
ಹಣ್ಣೆಲೆಯೊಂದು ಬಿದ್ದಾಗ
ಉಳಿದ ಎಲೆಗಳು ಸದ್ದಾಯಿತೆಂದು ಬೆಚ್ಚಿಬೀಳಲಿಲ್ಲ
ಬದಲು ಬೆಳೆಯುವ ಕೊಂಬೆಯಂಚಿನಲಿ
ಚಿಗುರೆಲೆಯೊಂದಕೆ ಜಾಗವಾಯಿತೆಂದು ಸುಮ್ಮನೆ
ಗಾಳಿಗೆ ತಲೆಯಲ್ಲಾಡಿಸಿದವು

ಅದೆಷ್ಟೋ ಹಣ್ಣೆಲೆಗಳನು ಕಳಚಿ
ಹೊಸ ಚಿಗುರನು ಅರಳಿಸಿ
ಆಕಾಶ ತುಂಬಾ ನಗುವನು, ಬುಡ ತುಂಬಾ ನೆರಳನು
ಹಂಚಿ ಬೆಳೆದಿತ್ತು ಮರ

ಬಿದ್ದ ಎಲೆ ಮಾತ್ರ
ಮರದ ಮೇಲೆ ಹೊದ್ದುಕೊಂಡ ಬಿಸಿಲು ಹೀರಿ
ಆ ಸಂಜೆಯ ಸೂರ್ಯನನು ತನ್ನೊಳಗಿಳಿಸಿ ಹಳದಿಯಾಗಿತ್ತು

ಮರದೆತ್ತರದಿಂದ ಸೂರ್ಯನನು ಹಿಡಿದ
ಹಸಿರು ದಿನಗಳ ನೆನೆಯುತ್ತಾ ಎಲೆ
ತುಟಿಯುದ್ದ ಮಾಡಿ ಮುತ್ತಿಟ್ಟ ಕ್ಷಣವನು
ಆ ತಂಪು ಗಾಳಿಗೆ ಮತ್ತೆ ನೆನೆಯಿತು

ಆ ಕಪ್ಪು ಸೆರಗಿನಲಿ ಸೂರ್ಯ ಮುತ್ತಿಟ್ಟಾಗ
ಮೋಡದೊಡನೆ ಆಡಿದ ಜಗಳಕೆ
ಸಿಟ್ಟಿನ ಕಾವು ಮೋಡದ ಕಣ್ಣೀರಾಯಿತು
ಮುತ್ತಿಟ್ಟ ಸೂರ್ಯ ಕರಗಿಸಿಯೇ ಬಿಟ್ಟ

ಮೋಡ ಕರಗಿ ಸುರಿದ ಮಳೆಯಲಿ
ಹಣ್ಣೆಲೆ ಹಾಯಾಗಿ ಈಜಾಡಿತು

1 comment:

  1. ಕವನರೂಪದಲ್ಲಿಯೇ ಸುಂದರವಾದ ಜೀವನದರ್ಶನವನ್ನು ಮಾಡಿಸಿದ್ದೀರಿ.

    ReplyDelete