Sunday, September 4, 2011

ಮದ್ದಿಲ್ಲದ ಭ್ರಷ್ಟಾಚಾರವೆಂಬ ಕ್ಯಾನ್ಸರ‍್ ಗೆ ಅಣ್ಣಾ ಹಜಾರೆಯೆಂಬ ಇಂಜೆಕ್ಷನ್

ಮದ್ದಿಲ್ಲದ ಭ್ರಷ್ಟಾಚಾರವೆಂಬ ಕ್ಯಾನ್ಸರ‍್ ಗೆ ಅಣ್ಣಾ ಹಜಾರೆಯೆಂಬ ಇಂಜೆಕ್ಷನ್
ಅಣ್ಣಾ ಹಜಾರೆ ಮತ್ತು ಸರಕಾರ (ಚಿತ್ರ: ಪ್ರಕಾಶ್ ಶೆಟ್ಟಿ ಉಳೆಪಾಡಿ)
ಎರಡನೇ ತಲೆಮಾರಿನ ತರಂಗಾಂತರಂಗ ಹಗರಣ, ಕಾಮನ್‍ವೆಲ್ತ್ ಹಗರಣ, ಆದರ್ಶ ಸೊಸೈಟಿ ಹಗರಣ ಮುಂತಾದ ಭ್ರಷ್ಟಾಚಾರ ಕ್ಯಾನ್ಸರ್ ಗುಳ್ಳೆಗಳಿಂದ ತತ್ತರಿಸುತ್ತಿರುವ ಕೇಂದ್ರ ಸರಕಾರದ ಅವಸ್ಥೆಯನ್ನು ಕಂಡು ದೇಶದ ಒಂದು ವರ್ಗದ ಜನರು ಸಿನಿಕರಾಗಿ ಹೋದರೆ ಇನ್ನೊಂದು ವರ್ಗದ ಜನ ಒಳಗಿಂದೊಳಗೆ ತತ್ತರಿಸುತ್ತಿದ್ದರು.
ವಿಶ್ವಮಟ್ಟದ ಪ್ರಖ್ಯಾತ ಅರ್ಥಶಾಸ್ತ್ರ   ತಜ್ಞರಾದ ಡಾ. ಮನಮೋಹನ್ ಸಿಂಗ್ ಅವರ ಮನಸ್ಸೂ ವಿಚಲಿತವಾದಂತೆ ಇತ್ತು. ಪ್ರಧಾನಿಯ ಕುರ್ಚಿಯ ನಾಲ್ಕು ಕಾಲುಗಳು ಗಟ್ಟಿಮುಟ್ಟಾಗಿದ್ದರೂ ಅದರಲ್ಲಿ ಕುಳಿತುಕೊಳ್ಳುವ ಮೆತ್ತೆಯ ಹಾಸಿನಲ್ಲಿ ಮುಳ್ಳುಗಳು ಅವರನ್ನು ಚುಚ್ಚುತ್ತಿದ್ದಾವೆ. ಚುಚ್ಚುವ ಕುರ್ಚಿಯಿಂದ ಎದ್ದು ನಿಂತು ತನ್ನ ಪಾಡನ್ನು ಹೇಳಲು ಅವರಿಗೆ ಅವರ ಮನೋಸ್ಥಿತಿಯ ಸ್ನೇಹಿತರಾಗಲೀ, ಸಲಹಾಗಾರರಾಗಲೀ ಸದ್ಯ ಸರಕಾರದಲ್ಲಿ ಅಥವಾ ಪಕ್ಷದಲ್ಲಿ ಯಾರೂ ಇಲ್ಲ. ಎಲ್ಲವನ್ನು ಮೂಕವಾಗಿ ಅನುಭವಿಸುತ್ತಿರುವ ಮನಮೋಹನ ಸಿಂಗ್ ಅವರನ್ನು ಜನ ’ಮೂಕ ಪ್ರಧಾನಿ’ ಎಂದು ಮೂದಲಿಸುತ್ತಿದ್ದಾರೆ.
ಇಂತಹ ಪ್ರಧಾನಿಯವರ ಮೂಕ ವೇದನೆಯನ್ನು ಅರಿತು ಅದರ ಹಲವು ಕಾರಣಗಳಲ್ಲಿ ಒಂದಾದ ಭ್ರಷ್ಟಾಚಾರದ ಕುರಿತು ಸಮಾಲೋಚಿಸಿ ಸಲಹೆ ನೀಡಲು ದೂರದ ಮಹಾರಾಷ್ಟ್ರದ ರಾಳೇಗಣ ಸಿದ್ದಿಯ ಮುದುಕ ಕಿಶನ್ ಬಾಪಟ್ ಬಾಬೂರಾವ್ ಕಳೆದ ವರ್ಷ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಪ್ರಧಾನಿ ನಿವಾಸದಲ್ಲಿ ಹಲವು ಗಂಟೆಗಳಷ್ಟು ಕಾಲ ಕುಳಿತು ಚರ್ಚಿಸಿದರು.
ಪ್ರಧಾನಿ ಮನಮೋಹನ್ ಸಿಂಗ್ ಅವರ ಗಂಟಿಕ್ಕಿದ ಮುಖದಲ್ಲಿ ನಗು ಹುಟ್ಟಿಸುವಂತಹ ಕೆಲಸ ಮಾಡಲು ಅವರು ತಯಾರಿದ್ದರು. ಕುರ್ಚಿಯ ಮೆತ್ತೆಯ ಮೇಲಿನ ಮುಳ್ಳುಗಳನ್ನು ಕಿತ್ತೆಸೆಯಲು ಉಪಾಯಗಳನ್ನು ಹುಟ್ಟುಹಾಕಿದ್ದರು. ಅವುಗಳಲ್ಲಿ ಒಂದು, ಕಳೆದ ನಾಲ್ಕು ದಶಕಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಲೋಕಪಾಲ್ ಮಸೂದೆ. ಆದಷ್ಟು ಬೇಗ ಅದನ್ನು ಕಾನೂನು ಆಗಿ ತರೋಣ ಎಂದು ಮನಮೋಹನ್ ಸಿಂಗ್ ಅವರಿಗೆ ಮನಮುಟ್ಟುವಂತೆ ಹೇಳಿದರು. ಸಿಂಗ್ ಅವರೂ ಆಗ ಮನಃಪೂರ್ವಕವಾಗಿ ಒಪ್ಪಿದ್ದರು.
ರಾಜಕೀಯ ಎನ್ನುವುದೇ ಹೀಗೆ. ಪ್ರಧಾನಿಯಾಗಬೇಕೆಂದು ಜೀವನವಿಡೀ ಕನಸುಗಳನ್ನು ಕಂಡವರು, ಅದಕ್ಕಾಗಿ ಹಲವಾರು ನೈಪುಣ್ಯಗಳನ್ನು ಕಳೆಗೂಡಿಸಿದವರು, ಅಂತಹ ಮಹಾತ್ವಾಕಾಂಕ್ಷೆಯಿಂದಲೇ ರಂಗಕ್ಕೆ ಇಳಿದವರು ಪ್ರಧಾನಿಯಾಗದೇ ಉಳಿಯುತ್ತಾರೆ. ಇನ್ಯಾರೋ ಆಗಿದ್ದಾರೆ. ಮನಮೋಹನ್ ಸಿಂಗ್ ಅವರ ಸುತ್ತಿರುವ ಮಂತ್ರಿಮಂಡಲದ ಬಹಳಷ್ಟು ಮಂದಿಗೆ ಲೋಕಪಾಲ್ ಮಸೂದೆ ಅಷ್ಟೊಂದು ಅಗತ್ಯವೂ ಆಗಿರಲಿಲ್ಲ, ಮುಖ್ಯವೂ ಆಗಿರಲಿಲ್ಲ. ರಾಜಕೀಯವನ್ನು ತಮ್ಮ ಎಳವೆಯಿಂದಲೇ ಬದುಕನ್ನಾಗಿ ಮಾಡಿದವರಿಗೆ ಇದೆಲ್ಲಾ ಬೇಕಾಗಿರಲಿಲ್ಲ. ಇಂದು ಅಧಿಕಾರದಲ್ಲಿ ನಾವಿದ್ದೇವೆ, ನಮ್ಮಲ್ಲಿ ಕೆಲವರು ಈಗಾಗಲೇ ಬಹಳಷ್ಟು ಬಾಚಿಕೊಂಡಿದ್ದಾರೆ. ನಾವೂ ಬಾಚಿಕೊಳ್ಳುತ್ತಿದ್ದೇವೆ. ಅದಕ್ಕೆ ಈಗ ಕಡಿವಾಣ ಯಾಕೆ. ಈಗಿರುವ ವ್ಯವಸ್ಥೆಯಲ್ಲಿಯೇ ನಮಗೆ ಬಾಚಿಕೊಳ್ಳಲು ಅವಕಾಶವೂ ಇದೆ. ಜೈಲಿಗೆ ಕಳುಹಿಸಲು ಮಾರ್ಗವೂ ಇದೆ. ಇದು ಅವರ ನಂಬಿಕೆಯಾಗಿತ್ತು.
ಅದ್ಭುತ ಧೈರ್ಯ, ಸ್ವತಂತ್ರ ಮನಸ್ಸು ಹಾಗೂ ತತ್ವಕ್ಕಾಗಿ ಜೀವ ಬೇಕಾದರೂ ನೀಡಲು ಸಿದ್ಧವಾಗಿರುವಂತಹ ನಿಲುವುಗಳನ್ನು ಹೊಂದಿರುವ ಕಿಶನ್ ಬಾಬೂರಾವ್ ಯಾನೆ ಅಣ್ಣಾ ಹಜಾರೆ ಈ ಬಾರಿ ಇದು ತನ್ನ ಕೊನೆಯ ಅವಕಾಶ ಎಂದು ಮನಗಂಡರು. ಪ್ರಧಾನಿಗೆ ಸಮಯದ ಗಡುವನ್ನು ಕೊಟ್ಟು ಹೇಳಿದರು. ನಿಮ್ಮ ಮುಖದಲ್ಲಿ, ಅಂತೆಯೇ ಜನರ ಮುಖದಲ್ಲಿಯೂ ನಾನು ನಗುವನ್ನು ಕಾಣಲು ಹಾತೊರೆಯುತ್ತಿದ್ದೇನೆ. ಸಮಯದೊಳಗೆ ನಿರ್ಧಾರಕ್ಕೆ ಬನ್ನಿ. ಜತೆಯಾಗಿ ಭ್ರಷ್ಟಾಚಾರವೆಂಬ ಕ್ಯಾನ್ಸರ್ ಅನ್ನು ನಿರ್ನಾಮ ಮಾಡೋಣ ಎಂದರು. ಡಾ. ಮನಮೋಹನ್ ಸಿಂಗ್ ಅವರ ಸರಕಾರ ಕೊಟ್ಟ ಮಾತು ನೆರವೇರಿಸುವಂತೆ ಕಾಣಲಿಲ್ಲ.
ಎಪ್ರಿಲ್ ತಿಂಗಳಲ್ಲಿ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್ ಮಂತರ್ ನಲ್ಲಿ ಐದು ದಿನ ಉಪವಾಸ ಕೂತರು. ಸರಕಾರದ ನಿರ್ಲಿಪ್ತತೆಯಿಂದಾಗಿ  ಅಣ್ಣಾ ಹಜಾರೆ ಅವರು ಆಗಸ್ಟ್ 16 ರಂದು ಮತ್ತೆ ಉಪವಾಸ ಆರಂಭಿಸುವ ಮಾತಾಡಿದರು. ಬೆಚ್ಚಿ ಬಿದ್ದ ಸರಕಾರದ ಚಿಲ್ಲರೆ ರಾಜಕೀಯ ವ್ಯಕ್ತಿಗಳು ನಿಜಕ್ಕೂ ಗಾಬರಿಗೊಂಡರು. ಅಣ್ಣ  ಹಜಾರೆ ತಿಹಾರ್ ಜೈಲಿಗೆ ಹೋದರೂ ತಮ್ಮ ಬೆದರದ ನಿಲುವಿನಿಂದಾಗಿ ಸರಕಾರವನ್ನು ಮಣಿಸುವಲ್ಲಿ 13 ದಿನಗಳ ಉಪವಾಸ ಕುಳಿತರು. ದೆಹಲಿಯ ರಾಮಲೀಲಾ ಮೈದಾನ ಮಾಧ್ಯಮಗಳಿಗೆ ’ಪೀಪ್ಲಿ ಲೈವ್’ ಆಯಿತು. ಒಂದೊಮ್ಮೆ ಅಣ್ಣಾ ಹಜಾರೆ ತೆಗೆದುಕೊಂಡ ನಿಲುವುಗಳು ಪ್ರಜಾಸತ್ತಾತ್ಮಕ ಧ್ಯೇಯಗಳನ್ನು ಪ್ರಶ್ನಿಸುವಂತೆ ಇದ್ದವು. ಭಾರತದ ಅಭಿವೃದ್ಧಿಯ ಆಧಾರಸ್ಥಂಭವಾದ ಪ್ರಜಾತಾಂತ್ರಿಕತೆಗೆ ಏಟು ಬೀಳುವ ಭಯವೂ ಉಂಟಾಯಿತು. ನಾವೇ ಆರಿಸಿ ಕಳುಹಿಸಿದ ನಮ್ಮ ಪ್ರತಿನಿಧಿಗಳನ್ನು ಓರ್ವ ನಿವೃತ್ತ ಸೇನಾ ಟ್ರಕ್ ಚಾಲಕನು ನಿಯಂತ್ರಿಸುವುದೆಂದರೆ ನಾವು ಕೊಟ್ಟ ಮತಗಳಿಗೆ ಬೆಲೆಯಿಲ್ಲದಂತಾಯಿತೇ ಎಂಬುದು ನಿಜವಾದ ಪ್ರಜೆಯ ಆತಂಕವಾಗಿರುವುದು ಸೋಜಿಗವೇನಲ್ಲ. ಅಣ್ಣಾ ಹಜಾರೆಯವರಿಗೆ ಈ ದಿನಗಳು ಹೊಸ ಹುಟ್ಟಿಗಾಗಿ ಕಾಡುವ ನೋವಾಗಿತ್ತು. ಕಣಿವೆಯಾಚೆಗಿನ ಬೆಳಕಿನಲ್ಲಿ ಅವರು ವಿಶ್ವಾಸ ವಿಟ್ಟಿದ್ದರು.  ಹತ್ತುದಿನಗಳ ನಂತರವಾದರೂ ಸರಕಾರ ವಿರೋಧ ಪಕ್ಷಗಳ ಜತೆಗೆ  ಕುಳಿತು ಅಣ್ಣ ಹಜಾರೆ ಮುಂದೆ ತನ್ನ ಅಸಹಾಯಕ ಕೈಯನ್ನು ಒಡ್ಡಿತು. ಐತಿಹಾಸಿಕ ಚರ್ಚೆ ಸಂಸತ್ತಿನ ಎರಡೂ ಸದನಗಳಲ್ಲೂ ನಡೆಯಿತು. ಮದ್ದಿಲ್ಲದ ಭ್ರಷ್ಟಾಚಾರವೆಂಬ ಕ್ಯಾನ್ಸರ‍್ ಗೆ ಅಣ್ಣಾ ಹಜಾರೆ ಕೊಟ್ಟ ಇಂಜೆಕ್ಷನ್‍ ಸರಕಾರವನ್ನು ನೋವಿಗೀಡುಮಾಡಿತು. ಅವರ ಉಪವಾಸ ದೇಶದೆಲ್ಲೆಡೆ ಜನರನ್ನು ಪ್ರಚೋದಿಸಿದ ರೀತಿ ಇತ್ತೀಚಿನ ವರ್ಷಗಳಲ್ಲಿ ದೇಶದ ಇಂದಿನ ಇತಿಹಾಸಕಾರರು ಕಂಡಿರಲಿಲ್ಲ. ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟ ತನಗೆ ಪ್ರೇರಕ ಎಂದ ಅಣ್ಣಾ ಹಜಾರೆಯವರಿಗೆ  ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಹಿಡಿದು ಪಂಜಾಬಿನ ಲುಧಿಯಾನದ ವರೆಗೂ ಬೆಂಬಲ ದೊರೆಯಿತು.  ಭ್ರಷ್ಟಾಚಾರದಿಂದ ದೇಶದ ಜನತೆ ರೋಸಿಹೋಗಿದ್ದರು. ಜನನಾಯಕರೆನಿಸಿಕೊಂಡಿರುವ ರಾಜಕಾರಣಿಗಳಿಂದ ಭ್ರಮನಿರಶನ ಗೊಂಡಿದ್ದರು.  ಜನಸಾಮಾನ್ಯರಲ್ಲಿ  ಸುಪ್ತವಾಗಿದ್ದ ಸಿಟ್ಟನ್ನು ಹೊರಗೆಡಹಲು ಹಜಾರೆಯವರ ಹೋರಾಟ ಒಂದು ಮಾಧ್ಯಮವಾಯಿತು. ಜನ ಬೀದಿಗಿಳಿದರು.
ತ್ರಿವರ್ಣ ದ್ವಜವನ್ನು ಹಾರಿಸಿದರು. ಭಾರತ ಮಾತೆಗೆ ಜಯಕಾರ ಹಾಕಿದರು. ದೇಶ ಪ್ರೇಮವನ್ನು ಮೆರೆದರು. ಜನರ ಆಕ್ರೋಶ ಶಾಂತರೂಪದ ಪ್ರತಿಭಟನೆಯಾಗಿ ಪರಿಣಮಿಸಿತು. ಒಂದು ಪ್ರಜಾಸತ್ತಾತ್ಮಕ ಚಳವಳಿ ಎಂದರೆ ಅದು ಅಧಿಕಾರ ನಡೆಸುವವರನ್ನು ಜನ ಸಮಷ್ಟಿಯಾಗಿ ಪ್ರಶ್ನಿಸುವ, ಅವರಿಂದ ಏನನ್ನೋ ಆಗ್ರಹಿಸುವ ಪ್ರಕ್ರಿಯೆ. ಒಂದು ಆರೋಗ್ಯಕರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೀಗೆ ಆಗ್ರಹಿಸುವ ಮತ್ತು ಸವಾಲೆಸೆಯುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರಬೇಕು.ಇದು ಜನತೆಯ ಒಗ್ಗಟ್ಟಿಗೆ ಸಂದ ಐತಿಹಾಸಿಕ ಜಯ, ನಾಗರಿಕ ಹೋರಾಟಗಾರರ ಶ್ರಮಕ್ಕೆ ಸಿಕ್ಕ ಪ್ರತಿಫಲ, ಇಂದು ಅಣ್ಣಾ ಹಜಾರೆ ಕೇವಲ ವ್ಯಕ್ತಿಯಾಗಿ ಉಳಿದಿಲ್ಲ. ನೋಡನೋಡುತ್ತಿದ್ದಂತೆ ಒಂದು ಪ್ರತೀಕವಾಗಿಬಿಟ್ಟಿದ್ದಾರೆ ಎಂದು ಮಾಧ್ಯಮಗಳು ಹೇಳತೊಡಗಿದವು. ಅಣ್ಣಾ ಹಜಾರೆ ಅವರಿಗೆ ಹೋರಾಟ ಇದೇನು ಮೊದಲ ಸಲವಲ್ಲ. ಮಾಹಿತಿ ಹಕ್ಕು ಕಾಯ್ದೆ ಅವರ ಹೋರಾಟದ ಪ್ರತಿಫಲ. ರಾಳೇಗಣ ಸಿದ್ದಿಯ ಅಭಿವೃದ್ಧಿಗಾಗಿ ಸರಕಾರದ ಜತೆ ಮಾಡಿದ ಹೋರಾಟ ಅವರಿಗೆ ಬಹಳಷ್ಟು ಸಫಲತೆಯನ್ನು ಕೊಟ್ಟಿದೆ. ಇಂದು ಆ ಗ್ರಾಮ ಒಂದು ಮಾದರಿ ಗ್ರಾಮವಾಗಿದೆ. ಅಣ್ಣಾ ಹಜಾರೆ ಅವರು ಭಾರತೀಯ ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದಾರೆ. ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ತನ್ನ ಹುಟ್ಟೂರಿನತ್ತ ಪಾದ ಬೆಳೆಸಿದ ಅವರು ಭ್ರಷ್ಟಾಚಾರಿ ವಿರೋಧಿ ಜನ ಆಂದೋಲನವನ್ನು 1991ರಲ್ಲಿ ಆರಂಭಿಸಿದರು. ಉಪವಾಸ ನಿಲ್ಲಿಸುವ ಮುನ್ನ ಅಣ್ಣಾ ಹಜಾರೆ ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ ಎಂದಿದ್ದಾರೆ.  ಭ್ರಷ್ಟಾಚಾರ ಹೋಗಲಾಡಿಸಲು ಪದೇಪದೇ ಇಂತಹ ಆಘಾತ ನೀಡಬೇಕು. ಅಧಿಕಾರದ ವಿಕೇಂದ್ರೀಕರಣ, ಕೃಷಿಕರು ಮತ್ತು ಕಾರ್ಮಿಕರನ್ನು ರಕ್ಷಿಸಲು ಶಾಸನ, ಸಾಮಾಜಿಕ ಸಬಲೀಕರಣ, ಶಿಕ್ಷಣದ ವಾಣಿಜ್ಯೀಕರಣಕ್ಕೆ ನಿಯಂತ್ರಣ ಮುಂತಾದ ವಿಷಯಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕಿದೆ ಎಂದು ಅಣ್ಣಾ ಹಜಾರೆ ಹೇಳುತ್ತಿದ್ದಾರೆ. ಕ್ಯಾನ್ಸರ್ ರೂಪದಲ್ಲಿ ಇಡೀ ಸಮಾಜಕ್ಕೆ ಅಂಟಿರುವ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡುವುದು ಒಂದು ಕಾನೂನಿನಿಂದ ಆಗುವ ಕೆಲಸವಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಬೃಹತ್ತಾದ ಒಂದು ಚಳವಳಿಯಿಂದಲೂ ಅದನ್ನು ಕಿತ್ತೆಸೆಯಲಾಗದು. ರಾಳೇಗಣ ಸಿದ್ದಿಯ ಮುದುಕ ಅಣ್ಣಾ ಹಜಾರೆ ಅವರ ಕೆಲವೊಂದು ನಿರ್ಣಯಗಳು ಅವರನ್ನು ಜನವಿರೋಧಿಯನ್ನಾಗಿ ಮಾಡುತ್ತವೆ.
ಅವರ ಸಹವರ್ತಿಗಳ ಅನುಮಾನಾಸ್ಪದ ವರ್ತನೆಗಳು, ಹೋರಾಟದ ಹಿಂದೆ ಮುಗ್ದ  ಜನರನ್ನು ಮೋಸಗೊಳಿಸಬಲ್ಲ ನಗರದ ಮುಖವಾಡಗಳು ಹಜಾರೆಯವರ ಬಿಳಿಟೋಪಿಯ ಮೇಲೆ ಮಸುಕಾಗಿ ಮೂಡುವ ಕಪ್ಪುಗೆರೆಗಳಾಗಿವೆ. ರಾಳೇಗಣ ಸಿದ್ಧಿಯಲ್ಲಿ ವ್ಯಾಪಕ ಕ್ಷೇತ್ರಕಾರ್ಯವನ್ನು ಮಾಡಿದರೂ ಅಣ್ಣಾ ಹಜಾರೆ ಅನುಸರಿಸಿದ ಮಾರ್ಗದಲ್ಲಿ  ಕೆಲವೊಮ್ಮೆ  ಹೊಂಡಗಳು ಎದ್ದು ಕಾಣುತ್ತವೆ.  ಕಳೆದ ಎರಡು ದಶಕಗಳಲ್ಲಿ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆಗಳನ್ನೇ ನಡೆಸದೆ, ರಾಷ್ಟ್ರೀಯ ಚುನಾವಣೆಗಳ ಸಂದರ್ಭಗಳಲ್ಲಿ ಪ್ರಚಾರಕ್ಕೇ ಅವಕಾಶ ನೀಡದೇ ಆಧುನಿಕ ಪ್ರಜಾಪ್ರಭುತ್ವದ ಆದರ್ಶಗಳನ್ನು ಗಾಳಿಗೆ ತೂರಿರುವುದು ಅವರ ನಡತೆಯಲ್ಲಿ ಹುಳುಕು ಹುಡುಕುವ ಕೆಲಸವಲ್ಲ. ನಿಜ ಸತ್ಯ. ಅಣ್ಣಾ ಹಜಾರೆ ಸಮಾಜದ ಹೊಸ ವರ್ಗಕ್ಕೆ ಆಶಾದೀಪವಾಗಿರುವುದು ನಿಜ. ಅಣ್ಣಾ ಬೆಂಬಲಿಗರು ಪ್ರಜಾತಂತ್ರವನ್ನು ಅರ್ಥೈಸಿ ಅದರ ತಳಹದಿಯ ಮೇಲೆ ನಿಂತು ಕೊಳೆತಿರುವ ವ್ಯವಸ್ಥೆಯನ್ನು ಪಕ್ಷಾತೀತರಾಗಿ ಪ್ರಶ್ನಿಸಬೇಕು. ಅಣ್ಣಾ ಹಜಾರೆಯವರ ಬೆಳಕು ಮುಂಜಾನೆಯ ಮಂದಕಿರಣವಾಗಿ ಸಮಾಜದಲ್ಲಿ ಹೊಸ ಚೈತನ್ಯವನ್ನು ತರಬೇಕು.

2 comments:

  1. ಸ೦ಗ್ರಹಯೋಗ್ಯ ಲೇಖನ. ಧನ್ಯವಾದಗಳು.

    ಅನ೦ತ್

    ReplyDelete
  2. ಅಣ್ಣಾ ಹಜಾರೆಯವರ ಬಗೆಗೆ ಉತ್ತಮ ಲೇಖನ. ಧನ್ಯವಾದಗಳು.

    ReplyDelete