Monday, August 1, 2011

ಅಂಕಣ ಬರೆಯುವುದು ಹೇಗೆ?

ಅಂಕಣ ಎನ್ನುವುದು ಸಂಪಾದಕರು, ಹಿರಿಯ ಪತ್ರಕರ್ತರು ಸಂಪಾದಕೀಯ ಪುಟವನ್ನು ತುಂಬಿಸಲು ಬರೆಯುವ ಬರಹ. ಪರಂಪರೆಯಂತೆ ಸಂಪಾದಕೀಯ ಪುಟದಲ್ಲಿ ಸದ್ಯಕ್ಕೆ ಜಾಹೀರಾತು ಪ್ರಕಟಿಸುತ್ತಿಲ್ಲ. ಇನ್ನು ಸದ್ಯದಲ್ಲಿಯೇ ಯಾರಾದರೂ ಉದ್ಯಮಿಗಳು, ವ್ಯಾಪಾರಿಗಳು ದುಪ್ಪಟ್ಟು ಹಣ ನೀಡುವುದಾದರೆ ಮತ್ತು ಸಂಪಾದಕರು ಮತ್ತು ಪತ್ರಕರ್ತರು ತಮಗೆ ತಮ್ಮ ವೃತ್ತಿಗಿಂತ ಪತ್ರಿಕೆಯನ್ನು ಇತರ ಉದ್ಯಮದಂತೆ ಐಷಾರಾಮದಲ್ಲಿ ನಡೆಸಲು ಬಯಸುವುದಾದರೆ ಸಂಪಾದಕೀಯ ಪುಟದಲ್ಲೂ ಜಾಹೀರಾತು ಪ್ರಕಟಿಸಿ ಅಂಕಣವೆಂಬುದನ್ನು ನಿಲ್ಲಿಸಿಬಿಡಬಹುದು.
ಅಂಕಣ ಬರೆಸುವುದೂ ಕೂಡಾ ಕೆಲವೊಮ್ಮೆ ಪತ್ರಿಕೆಯ ಸಂಪಾದಕರಿಗೆ ಅನಿವಾರ್ಯವಾಗಿ ಬಿಡುತ್ತದೆ. ತಮ್ಮ ಗೆಳೆಯರೋ, ಪರಿಚಯದವರೋ ತಮಗೆ ಯಾವುದಾದರೂ ಸಹಾಯ ಮಾಡಿದ್ದರೆ ಅದಕ್ಕೆ ಪ್ರತಿಯಾಗಿ ಅಂತಹವರಿಂದ ಅಂಕಣ ಬರೆಸಬಹುದು. ನನ್ನ ಬೆನ್ನು ನೀನು ತುರಿಸಿದ್ದೀಯಾ, ನಿನ್ನ ಬೆನ್ನು ನಾನು ತುರಿಸುತ್ತೇನೆ ಎಂದು.
 ಅಂಕಣ ಬರೆಯುವ ಕೆಲಸ ಬಹಳ ಸುಲಭವೆಂದೇನೂ ಅಲ್ಲ. ಬರೆಯುವವರು ಪತ್ರಿಕೆಯ ಹಿರಿಯ ಪತ್ರಕರ್ತರಾಗಿದ್ದರೆ, ತಮ್ಮ ಕಿರಿಯ ಸಹೋದ್ಯೋಗಿಗಳನ್ನು ಹೆದರಿಸಿಯೋ, ಪೂಸಿ ಹೊಡೆದೋ ಬರೆಸಬೇಕಾಗುತ್ತದೆ.
ಬರೆಯುವವರು ಓದಬೇಕೆಂದೇನೂ ಇಲ್ಲ. ಸ್ವಲ್ಪವಷ್ಟೇ ಓದುವ ಹವ್ಯಾಸವಿತ್ತೆಂದರೆ ಬಹಳವಾಯಿತು. ಓದಿದನ್ನು ಪೆನ್ನಿನಿಂದ ಮಾರ್ಕು ಮಾಡಿ ನಿಮ್ಮ ಕಿರಿಯ ಸಹೋದ್ಯೋಗಿಗೆ ಹೇಳಿ ಟೈಪ್ ಮಾಡಿಸಿ. ಓದಿದ್ದು ಒಂದೇ ಲೇಖನ, ಒಂದೇ ಪುಸ್ತಕ ಆಗ ಬೇಕೆಂದಿಲ್ಲ. ಸದ್ಯಕ್ಕೆ ನಿಮ್ಮಲಿದ್ದ ಸ್ಕೂಟರ್ ಅಥವಾ ಕಾರು ಪಾರ್ಕಿಂಗ್ ಟಿಕೇಟು ಆದರೂ ಆದೀತು. ಅದರಲ್ಲಿ ಅದೆಷ್ಟು ವಿಷಯವಿದೆ, ನಿಮ್ಮ ಓದುಗರಿಗೆ ತಿಳಿಸಲು. ಈ ವಾರದ ಅಂಕಣ ಅದರಿಂದಲೇ ತುಂಬಿಸಬಹುದು.
ನಿಮ್ಮ ಬಗ್ಗೆ ಓದುಗರಿಗೆ ಮತ್ತಷ್ಟು ಗೌರವ, ಆದರ ಮೂಡಿಸಬೇಕಾದರೆ ನೀವು ವಿಮಾನನಿಲ್ದಾಣಕ್ಕೆ ಯಾರನ್ನೋ ಬಿಡಲು ಅಥವಾ ಕರೆದು ತರಲು ಹೋಗಿದ್ದರೆ ಸಾಕು, ನೀವೇ ವಿದೇಶ ಪ್ರಯಾಣ ಮಾಡಿ ಬಂದ ಹಾಗೆ ಬರೆಯಬಹುದು. ನೀವು ಹೋಗಿದ್ದೀರೋ ಇಲ್ಲವೋ ಎಂದು ನಿಮ್ಮ ಓದುಗರು ನಿಮ್ಮನ್ನು ಕೇಳಲಿಕ್ಕೆ ಬರುವುದಿಲ್ಲ. ನಿಮ್ಮನ್ನು ಅತ್ಯಂತ ಹತ್ತಿರದಿಂದ ಬಲ್ಲವರು ನಿಮ್ಮ ಅಂಕಣವನ್ನು ಓದುವುದಿಲ್ಲ. ಹಾಗಾಗಿ ನೀವು ಚಿಂತೆ ಮಾಡಬೇಕಿಲ್ಲ.
ಅಂಕಣವನ್ನು ಇನ್ನಷ್ಟೂ ಉತ್ತಮಗೊಳಿಸಬೇಕು ಎಂದು ನೀವು ಬಯಸುವಿರಾದರೆ ಕೆಲವೊಂದು ಅಂಕೆಗಳನ್ನು ಓದುಗರು ನಂಬುವಂತೆ ಕೊಡಿರಿ. ಉದಾಹರಣೆಗೆ ವೀರಪ್ಪನ್ ಸಾಯುವುದಕ್ಕಿಂತ ಮೊದಲು ಒಟ್ಟಾರೆ 2419 ಪೊಲೀಸ್ ಅಧಿಕಾರಿಗಳನ್ನು ಕೊಂದಿದ್ದ ಎಂದು ಬರೆಯಿರಿ. ಈಗಿನ ಓದುಗರು ವೀರಪ್ಪನ್ ಅಂದರೆ ಯಾರು ಅಂತ ಕೂಡ ಕೇಳುವುದಿಲ್ಲ, ಅವನು ಯಾಕೆ ಸತ್ತ, ಹೇಗೆ ಸತ್ತ, ಪೋಲಿಸರನ್ನು ಯಾಕೆ ಕೊಂದ, ಅವನ ಮುಖ್ಯ ಉದ್ಯೋಗ ಏನಾಗಿತ್ತು ಎಂದು ಕೂಡ ಓದುಗರು ಕೇಳುವುದಿಲ್ಲ. ಇನ್ನು ನೀವು ಬರೆದ ಸಂಖ್ಯೆಯನ್ನು ಓದಿ ನಿಮ್ಮ ನೆನಪು ಶಕ್ತಿಯಬಗ್ಗೆ ಮತ್ತು ಅಂಕಣದ ಪರಿಪಕ್ವತೆಯ ಬಗ್ಗೆ  ಅಭಿಮಾನಿ ಓದುಗ ಕೂಡಾ ನೀವು ಎಲ್ಲಿಯಾದರೂ ರಸ್ತೆ ಬದಿಗೆ ಉಚ್ಚೆ ಹೊಯ್ಯಲು ನಿಂತಾಗ ಪಕ್ಕದಲ್ಲಿಯೇ ನೀವು ಮಾಡುತ್ತಿರುವ ಕೆಲಸವನ್ನೇ ಮಾಡುತ್ತಾ  ಅಭಿಮಾನಿ ಓದುಗ ನಿಮ್ಮನ್ನು ಗುರುತಿಸಿ ನಿಮ್ಮ ಅಂಕಣವನ್ನು ಹೊಗಳಿ ನಿಮ್ಮೊಂದಿಗೆ ಹಸ್ತಲಾಘವ ಮಾಡಲು ಕೈಚಾಚಿದರೆ ಯಾವುದೇ ಮುಜುಗರವಿಲ್ಲದೆ ಕೈಕೊಡಿ. ಮಂದಿನವಾರ ರಸ್ತೆಬದಿಯಲ್ಲಿ ಉಚ್ಚೆಹೊಯ್ಯುವ ಕುರಿತು ಅಂಕಣ ಬರೆಯಬಹುದೆಂದು ನಾನು ಬೇರೆ ಹೇಳಬೇಕಿಲ್ಲ ನಿಮಗೆ. ನೀವು ಈಗ ಜಾಣರಾಗಿರುತ್ತೀರಿ. ನಾವು ಮುಂದಿನ ವಾರ ಅದನ್ನೇ ಓದುತ್ತೇವೆ.
ಅಂಕಣಕಾರರಾಗಿ ನೀವು ಜನಪ್ರಿಯರಾಗಬೇಕಿದ್ದರೆ ಜನರ ಒಳತೋಟಿಯನ್ನು ಅರಿತವರಂತೆ ಬರೆಯ ಬೇಕಾಗುತ್ತದೆ. ಅದಕ್ಕೆ ನೀವು ದಿನಾ ಹೋಗುವ ಪಾನ್ ಅಥವಾ ಪಾನ ಅಂಗಡಿಯ ಮುಂದೆ ಸಿಗುವ ಸಂಭಾಷಣೆಗಳನ್ನು ಸ್ವಲ್ಪ ಹೊತ್ತು ಆಲಿಸದರೆ ಸಾಕು. ಬಿಜೆಪಿಯ ಮುಖ್ಯಮಂತ್ರಿಯಾಗಿ ಖಂಡಿತವಾಗಿಯೂ ಈ ಬಾರಿ ಬಂಗಾರಪ್ಪನವರು ಆರಿಸಿಬರುತ್ತಾರೆ ಎಂದು ಬರೆಯಿರಿ. ಬಂಗಾರಪ್ಪನವರು ಈಗ ಯಾವ ಪಕ್ಷದಲ್ಲಿದ್ದಾರೆ ಎಂದು ನಿಮ್ಮ ಅಂಕಣದ ಯಾವ ಓದುಗನಿಗೂ ಗೊತ್ತಿರುವುದಿಲ್ಲ. ಒಂದು ವೇಳೆ ನೀವು ಬರೆದುದು ಸತ್ಯವಾದರೆ ಅದರ ಕುರಿತು ಮತ್ತೊಂದು ಅಂಕಣ ಬರೆಯಿರಿ ಅಥವಾ ನೀವು ಅಂಕಣ ಬರೆಯುತ್ತಿರುವ ಪತ್ರಿಕೆಯ ಇನ್ನೋರ್ವ ಅಂಕಣಕಾರನಿಗೆ ಹೇಳಿ ನಿಮ್ಮ ಅಂಕಣದ ಕುರಿತು ಬರೆಯಲು ಹೇಳಿ.
ಅಂಕಣ ಬರೆಯುವ ಇನ್ನೊಂದು ರೀತಿಯಿದೆ. ಅದು ಕೂಡ ಅಷ್ಟೇನು ಸುಲಭವಲ್ಲ, ನೀವು ಸ್ವಲ್ಪ ಕೆಲಸ ಮಾಡಬೇಕಾಗುತ್ತದೆ. ನೀವು ಬರೆಯ ಬೇಕಾದ ವಿಷಯವನ್ನು ಗೂಗಲ್ ಮಾಡಿ. ಬಂದ ಫಲಿತಾಂಶಗಳನ್ನು ನಿಮ್ಮ ಕಿರಿಯ ಸಹೋದ್ಯೋಗಿಗೆ ಹೇಳಿ ಭಟ್ಟಿ ಇಳಿಸಿ.
ಇನ್ನೂ ಒಂದು ಉಪಾಯವೆಂದರೆ ಯಾವುದೇ ಬ್ಲಾಗಿನ  ಹಳೆಯ ಬರಹವೊಂದನ್ನು ಕಾಪಿ ಪೇಸ್ಟ್ ಮಾಡಿ. ಬ್ಲಾಗ್ ಬರಹಗಾರ ನಿಮ್ಮ ಅಂಕಣವನ್ನು ಓದುವುದಿಲ್ಲ ಮತ್ತು ನಿಮ್ಮ ಓದುಗರು ಆ ಬ್ಲಾಗ್ ಬರಹವನ್ನು ಓದಿರುವುದಿಲ್ಲ.
ನೀವು ಹೊಸ ಅಂಕಣಕಾರರಾಗಿ ಬರುವಿರಾದರೆ ನೀವು ಎರಡು ಪತ್ರಿಕೆಯ ಕೇವಲ ಎರಡು ಅಂಕಣಕಾರರ ಬರಹಗಳನ್ನು ಓದಿ. ಅವರು ಮಾಡುತ್ತಿರುವ ತಪ್ಪುಗಳನ್ನು ನೀವೂ ಮಾಡಿ. ಎಲ್ಲವೂ ಸರಿಯಾಗುತ್ತದೆ. ನಿಮ್ಮ ಅಂಕಣಗಳು ಆರು ತಿಂಗಳಿಂದ ಪ್ರಕಟವಾಗುತ್ತಿವೆ ಎಂದರೆ ಅವುಗಳನ್ನೆಲ್ಲಾ ಒಟ್ಟಾಗಿಸಿ ಪುಸ್ತಕಮಾಡಿ ಪ್ರಕಟಿಸಿ. ಬಿಡುಗಡೆ ಸಮಾರಂಭಮಾಡಿ ಇದ್ದವರಿಗೆಲ್ಲಾ ಉಚಿತವಾಗಿ ಪ್ರತಿಗಳನ್ನು ಹಂಚಿರಿ.  ಉಳಿದುದನ್ನು ನಿಮ್ಮ ಶಾಲೆಯ, ಹೈಸ್ಕೂಲಿನ ಮಾಸ್ತರುಗಳಿಗೆ ಕಳುಹಿಸಿ. ನಿಮಗೆ ಶ್ರೇಷ್ಟ ಅಂಕಣಕಾರ ಪ್ರಶಸ್ತಿಯನ್ನು ನಿಮ್ಮ ಊರಿನ ಭಜನಾ ಮಂಡಲಿಯವರು ಕೊಟ್ಟರೂ ಕೊಡಬಹುದು.
ಆಲ್ ದ ಬೆಸ್ಟ್.

3 comments:

  1. ಹಹ್ಹಹ್ಹಾ!! ಅಂಕಣಕಾರರ ಹೂರಣವನ್ನು ಚೆನ್ನಾಗಿ ಬಯಲಿಗೆಳೆದಿದ್ದೀರಿ!

    ReplyDelete
  2. ಎಂತದ್ದು ಮಾರಾಯ್ರೆ, ನಾನು ಅಂಕಣಕಾರನಾಗಲು ಹೊರಡುವಾಗಲೇ ಹೀಗೆ ಬರೆಯುವುದೇ?

    ReplyDelete