ಬಾನಾಡಿ

Loading...

Tuesday, July 19, 2011

ಮಕ್ಕಳು ಮತ್ತು ಭಗವದ್ಗೀತೆ

ಕರ್ನಾಟಕದ ಶಾಲೆಗಳಲ್ಲಿ ಭಗವದ್ಗೀತೆಯನ್ನು ಕಲಿಸಲಾಗುವುದು; ಕಲಿಯಬೇಡವೆನ್ನುವವರು ಈ ದೇಶ ಬಿಟ್ಟು ಹೋಗಿ. ಕರ್ನಾಟಕದ ಶಿಕ್ಷಣ ಸಚಿವರ ಕರೆನೀಡಿದ್ದಾರೆ. 
ಶಾಲೆಗಳ ಜಗಲಿಯಲ್ಲಿ, ಅಂಗಳದಲ್ಲಿ, ಮಾಸ್ತರು, ಮೇಡಂಗಳ ಕೋಣೆಗಳಲ್ಲಿ, ಸಾಮಾನ್ಯರ ಅಡ್ಡೆಗಳಲ್ಲಿ, ಎಲ್ಲೆಂದರಲ್ಲಿ ಚರ್ಚೆ ನಡೆಯುತ್ತಿದೆ. ಅದು ಅಂಕಣಕಾರರಿಂದ ಹಿಡಿದು, ಅಂತರ್ಜಾಲದ ವರೆಗೆ ಹಬ್ಬಿದೆ. 
ಭಗವದ್ಗೀತೆಯ ಕುರಿತು ಉತ್ತಮ ಭಾವನೆಯಿದ್ದವರೂ ಸಚಿವರ ಉದ್ದಟತನದ ಭಾಷಣದಿಂದ ಜನ  ರೋಸಿಹೋಗಿದ್ದಾರೆ. 
ಮಹಾತ್ಮಾ ಗಾಂಧಿ
ಕರ್ನಾಟಕದಲ್ಲಿ ನಡೆಯುವ ನಾಟಕದ ಮತ್ತೊಂದು ದೃಶ್ಯವೆಂಬಂತೆ ಈಗ ರಾಷ್ಟ್ರೀಯ ಮಾಧ್ಯಮಗಳೂ ಈ ಕುರಿತು ವರದಿ, ಅಭಿಪ್ರಾಯ ವ್ಯಕ್ತಪಡಿಸುತ್ತಿವೆ. ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸುವ ಕುರಿತು ಸಚಿವ ಸಂಪುಟ ಯಾವ ತರದ ನಿರ್ಧಾರ ತೆಗೆದುಕೊಂಡಿದೆ? ಶಿಕ್ಷಣ ಇಲಾಖೆ ಸುತ್ತೋಲೆಯನ್ನೂ ಜಾರಿಗೊಳಿಸಲಾಗಿದೆ - ಇದು ಸುದ್ದಿ.
ಮುಗ್ದ ಮತದಾರರನ್ನು ಮೋಸ ಮಾಡುವ ತಂತ್ರ ಆಡಳಿತಾರೂಡ ಪಕ್ಷಕ್ಕೆ ಹೊಸತೇನಲ್ಲ. ಮಂದಿರ ಕಟ್ಟುವೆ ಎಂದು ಅಧಿಕಾರಕ್ಕೆ ಬಂದೊಡನೆ ಮಂದಿರದ ಸುದ್ದಿಗೇ ಹೋಗದ ಅತಿರಥ ಮಹಾರಥರ ಎದುರು ಜುಜುಬಿ ಕಾಗೇರಿ ವಿಚಾರ ಇನ್ನೇನು ರಾಜ್ಯ ಚುನಾವಣೆಗೆ ತಯಾರಾಗಿದೆ ಎಂಬುದರ ಸೂಚಕವೇ?
ಮುಖ್ಯ ಮಂತ್ರಿಗಳು ಸುಳ್ಳುಗಾರ ಎಂಬುದು ಅವರದೇ ಅನುಯಾಯಿಗಳು ಮುಚ್ಚುಮರೆಯಿಲ್ಲದೆ ಒಪ್ಪಿ ಕೊಂಡಿದ್ದಾರೆ. ಇನ್ನು ಉಳಿದ ಸಚಿವರುಗಳು ಕನಿಷ್ಟ ತಮ್ಮ ಸೀಟುಗಳನ್ನು ಉಳಿಸಿ ಕೊಳ್ಳಲು ಅಥವಾ ಮತ್ತೊಮ್ಮೆ ಅಭ್ಯರ್ಥಿಯಾಗಿ ಕಣದಲ್ಲಿ ಇರಲು ಕಾಗೇರಿ ಮಾಡುವಂತಹ ಪ್ರಹಸನವನ್ನು ಮಾಡಬೇಕಾಗುತ್ತದೆ.
ಬಲಪಂಥೀಯ ವಿಚಾರಧಾರೆಯನ್ನು ತಲೆಯೊಳಗೆ ತುರುಕಿಕೊಂಡಿರುವ ಕರ್ನಾಟಕದ ಬುದ್ಧಿವಂತ ಜನರಿಗೆ ಗೀತೆಯಂತಹ ಪವಿತ್ರ ಗ್ರಂಥವನ್ನು ಹಿಡಿದು ಮತ ಗಳಿಸುವ ಯೋಜನೆ ಒಳ್ಳೆಯ ರಾಜಕಾರಣಿಯ ಬುದ್ಧಿವಂತಿಕೆ ಎಂದೇ ಮೆಚ್ಚಬೇಕು. ಪಾಪ ಬಲಪಂಥೀಯ ಮತದಾರರು!
ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸಬೇಕೆ ಎಂಬುದು ಹಲವಾರು ವ್ಯಕ್ತಿಗಳು, ಮಾಧ್ಯಮಗಳು  ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಕಲಿಸಬೇಕು ಎನ್ನುವುದು ಸಾಮಾನ್ಯ ಜನರ ಸಾಮಾನ್ಯ ಅನಿಸಿಕೆ. ಕಾರಣ ಗೀತೆ ನಮ್ಮ ಪವಿತ್ರ ಗ್ರಂಥ. ಕುರುಕ್ಷೇತ್ರದ ಯುದ್ಧದ ಸಂದಿಗ್ದ ಸ್ಥಿತಿಯಲ್ಲಿ ಅರ್ಜುನನಿದ್ದಾಗ ಕೃಷ್ಣ ನೀಡಿದ ಸಂದೇಶ. ಅದರಲ್ಲಿರುವ ಉಪಯುಕ್ತ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿದರೆ ಬದುಕಿನಲ್ಲಿ ಉತ್ತಮ ಮನುಷ್ಯನಾಗಲು ಕೆಲವು ಸೂತ್ರಗಳಿವೆ. ಹೀಗೆ ಸಾಮಾನ್ಯ ಜನರು ಅದನ್ನು ತಮ್ಮ ಮಕ್ಕಳಿಗೆ ಶಾಲೆಯಲ್ಲಿ ಕಲಿಸಲು ಯಾವುದೇ ವಿರೋಧ ವ್ಯಕ್ತ ಪಡಿಸುವುದಿಲ್ಲ. ಬದಲಾಗಿ ಅಂಥ ಕಾರ್ಯವನ್ನು ಕೈಗೊಳ್ಳುವವರನ್ನು ಹೊಗಳಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. 
ಜನ ತನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸಿದರೆ ರಾಜಕಾರಣಿಗೆ, ರಾಜಕೀಯ ಪಕ್ಷಕ್ಕೆ ಅದು ವೋಟ್ ಆಗಿ ಪರಿವರ್ತಿತವಾಗುವುದು ಎಂಬ ಭರವಸೆಯಿರುತ್ತದೆ.
ಯಾಕೆಂದರೆ ಹಳ್ಳಿ ಹಳ್ಳಿಯಿಂದ, ಪೇಟೆಯ ಗಲ್ಲಿ, ಗಲ್ಲಿಯಿಂದ ಇಟ್ಟಿಗೆ ಕೊಟ್ಟು ಮಂದಿರ ಕಟ್ಟಿಸುತ್ತೇವೆ ಎಂದು ನಂಬಿದ ಜನ ಅವರಿಗೆ ಓಟೂ ಕೊಟ್ಟರು. ಸ್ವಲ್ಪ ಕಾದೂ ನೋಡಿದರು. 

ಅವರು ಇತರ ರಾಜಕಾರಣಿಗಳಿಗಿಂತ ಭಿನ್ನವಲ್ಲ ಎಂದಾಗ ಮತ್ತದೇ ಹಳೆಯ ಶತ್ರು ಪಕ್ಷವನ್ನೇ ಒಪ್ಪಿದರು. ಎಲ್ಲಾ ಬುರುಡೆ ಎಂದು ಗೊತ್ತಾಗುವಾಗ ಹೊತ್ತು ನೆತ್ತಿಗೇರಿತ್ತು. ಪಾಪ ಬಲಪಂಥೀಯ ಮತದಾರರು!

ಭಗವದ್ಗೀತೆಯನ್ನು ಶಾಲೆಗಳಲ್ಲಿ ಯಾರದೇ ಅಭ್ಯಂತರವಿಲ್ಲದೆ ಕಲಿಸುವುದಕ್ಕೆ  ಸಚಿವರಾಗಲೀ ಸರಕಾರವಾಗಲೀ ಪ್ರಯತ್ನ ಪಟ್ಟಿಲ್ಲ, ಪಡುವುದೂ ಇಲ್ಲ. ಗೀತೆಯನ್ನು ಮುಗ್ದ ಮಕ್ಕಳು ಕಲಿತು ದೊಡ್ದವರಾದರೆ ಇಂದಿನ ದಗಾಕೋರರಿಗೆ ತಕ್ಕ ಪಾಠ ಕಲಿಸಬಹುದು. ಮುಗ್ದ ಮಕ್ಕಳು ಸರಳ ಮುಗ್ದರಾಗಿಯೇ ಉಳಿದರೆ ಅವರನ್ನು ಮೋಸ ಮಾಡುವುದು ಸುಲಭ!

ಸಚಿವರಾಗಲೀ, ಸರಕಾರವಾಗಲೀ ಭಗವದ್ಗೀತೆಯನ್ನು ಶಾಲೆಯಲ್ಲಿ ಕಲಿಸುವ ಕುರಿತು ಯಾವುದೇ ವೈಜ್ಞಾನಿಕ ಯೋಜನೆಯನ್ನು ಹಾಕಿಲ್ಲ. 
ಕರ್ನಾಟಕದ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಕಲಿಯುವ ಮಕ್ಕಳ ಸಂಖ್ಯೆ 10035093 (2009-10). 
ಅವರಲ್ಲಿ 1453299 ಮುಸ್ಲೀಮ್ ವಿದ್ಯಾರ್ಥಿಗಳು.
225056  ಇತರ ಅಲ್ಪಸಂಖ್ಯಾತ ವರ್ಗದವರು ಅಂದರೆ ಕ್ರಿಶಿಯನರು, ಜೈನರು, ಬೌದ್ಧರು, ಸಿಖ್ಖರು, ಇತ್ಯಾದಿ.
ಇನ್ನು ಉಳಿದ ಹಿಂ ದೂಗಳಲ್ಲಿ 3538551 ಮಂದಿ ಹಿಂದುಳಿದ ವರ್ಗದವರು ಅರ್ಥಾತ್ ಓಬಿಸಿ, 
771157 ಪರಿಶಿಷ್ಟ ವರ್ಗ ಅರ್ಥಾತ್ ಎಸ್‍ಟಿ ಮತ್ತು 1890518 ಪರಿಶಿಷ್ಟ ಜಾತಿ ಅರ್ಥಾತ್ ಎಸ್‍ಸಿಯವರು.
ಉಳಿದ 2156512 ಮಂದಿ ಸಾಮಾನ್ಯ ಹಿಂದೂಗಳು. ಅರ್ಥಾತ್  ಜನರಲ್ ವರ್ಗದವರು; ಮುಖ್ಯವಾಗಿ  ಬ್ರಾಹ್ಮಣ ಮುಂತಾದ ಮುಂದುವರಿದ ಜಾತಿಯವರು. 
ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸಲು ಆರಂಭಿಸಿದರೆ ಇಷ್ಟೆಲ್ಲಾ ಸಂಖ್ಯೆಯ ಒಬಿಸಿ, ಎಸ್‍ಸಿ, ಎಸ್‍ಟಿಗಳು ಭಗವದ್ಗೀತೆಯಲ್ಲಿರುವ ಜ್ಞಾನವನ್ನು ಪಡೆಯುವರು.

ಶಾಲೆಯಲ್ಲಿ ಕಲಿಸದಿದ್ದರೆ ಆ ಜ್ಞಾನ ಅವರಿಗೆ ಸುಲಭದಲ್ಲಿ ಈಗಲೂ ಸಿಗುವುದಿಲ್ಲ.
ಗಾಂಧಿ ಸಮಾಧಿ
ಇಂತಹ ಒಳ್ಳೆಯ ಕೆಲಸಕ್ಕೆ ಯಾರು ಒಪ್ಪುತ್ತಾರೆ. ಬಲಪಂಥೀಯರಂತೂ ಒಪ್ಪಲಾರರು. ಕಾರಣ ಒಬಿಸಿ, ಎಸ್‍ಸಿ, ಎಸ್‍ಟಿಗಳು  ಗೀತೆ ಕಲಿತು ಮುಂದುವರಿದರೆ ಅವರೂ ಈ ರಾಜ್ಯದ ಬೊಕ್ಕಸದ ಹಣವನ್ನು ಲೂಟಿ ಮಾಡಲು ಹಿರಿಯ ಅಧಿಕಾರಶಾಹಿ ಅಥವಾ ರಾಜಕೀಯ ಅಥವ ಉದ್ಯಮದಲ್ಲಿ ತೊಡಗಬಹುದು.

ಆವೇಶ ಭರಿತ ಭಾಷಣ, ಲೋಕಲ್‍ನಿಂದ ಹಿಡಿದು ನ್ಯಾಷನಲ್ ವರೆಗಿನ ಮಾಧ್ಯಮದಲ್ಲಿ ಮಿಂಚಿ, ಕಾಗೇರಿ ಎಂಬ ವ್ಯಕ್ತಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಸತ್ಯ.

ಆದರೆ ಶತಮಾನಗಳೇ ಉರುಳಲಿ, ಭಾರತದ ಬಿಡಿ ಕರ್ನಾಟಕದ ಪ್ರತಿ ಪ್ರಜೆ ಭಗವದ್ಗೀತೆಯನ್ನು ಕಲಿತು ಅದರಲ್ಲಿ ಇರಬಹುದಾದ ಜ್ಞಾನದ ತುಣುಕೊಂದನ್ನು  ತನ್ನದಾಗಿಸುವುದು ಕನಸಿನ ಮಾತು.

ರಾಜಕಾರಣಿಗಳ ಉದ್ವೇಗದಷ್ಟೆ ಮಾಧ್ಯಮದವರು, ಬಲಪಂಥೀಯ ಎನ್ನುವವರು ಮತ್ತು ಕೋಮು ಸೌಹಾರ್ದಿಗಳು ಎಲ್ಲಾ ಸೇರಿ ಆಗಬೇಕಾದುದನ್ನು ಆಗದಂತೆ ಮಾಡುವರು.

ನಾವು ದೇಶ ಬಿಟ್ಟು ತೊಲಗಲು ಯೋಜನೆ ಹಾಕಬೇಕಿದೆ.
ನಮ್ಮನ್ನು ಕರೆದು ಮಣೆಹಾಕುವ ದೇಶ ಯಾವುದಿದೆ ಎನ್ನುವುದು ಹುಡುಕುವುದೇ ಮುಂದಿನ ಕೆಲಸ.
ಒಲವಿನಿಂದ
ಬಾನಾಡಿ
 

5 ನೀವು ಹೇಳಿದ್ದು:

sunaath said...

ಒಳ್ಳೆಯ ವಿಶ್ಲೇಷಣೆ.

Ananda_KMR said...

ಮಾಧ್ಯಮಗಳು ಒಬ್ಬ ವ್ಯಕ್ತಿಯ ಅಭಿಪ್ರಾಯ ಅಥವಾ ಹೇಳಿಕೆಯನ್ನು ತಿರುಚುತ್ತವೆ ಅನ್ನೋದಕ್ಕೆ ಇದು ಒಂದು ಸಾಕ್ಷಿ . ಸಚಿವ ಕಾಗೇರಿ ಹೇಳಿದ್ದಿಷ್ಟು :

"ಯಾರು ಈ ದೇಶದ ಧರ್ಮ, ಸಂಸ್ಕೃತಿಯನ್ನು, ಈ ದೇಶದ ನಂಬಿಕೆಯ ವಿಷಯಗಳನ್ನು ಯಾರು ಗೌರವಿಸುವುದಿಲ್ಲವೋ, ಯಾರು ಅದಕ್ಕೆ ಮಾನ್ಯತೆ ಮಾಡುವುದಿಲ್ಲವೋ, ಯಾರು ವಿದೇಶೀ ತತ್ವದ, ಸಿದ್ಧಾಂತದ ಪ್ರೇರಣೆಗೆ ಒಳಪಟ್ಟಂಥವರಿದ್ದಾರೋ, ಅವರು ಇದನ್ನು (ಗೀತಾ ಅಭಿಯಾನವನ್ನು) ವಿರೋಧಿಸುತ್ತಾ ಇರೋದನ್ನ ನಾವು ಕಾಣ್ತೀವಿ. ಆ ವಿದೇಶೀಯರು ತಮ್ಮ ವಿಚಾರವನ್ನು ಮಂಡಿಸೋದಾದ್ರೆ, ಅವರು ವಿದೇಶಕ್ಕೇ ಹೋಗ್ಲಿ ಹೊರತು, ನಮ್ಮ ದೇಶದಲ್ಲಿ ಅವರಿಗೆ ಅವಕಾಶ ಇಲ್ಲ, ನಮ್ಮ ನಾಡಿನಲ್ಲಿ ಅವಕಾಶ ಇಲ್ಲ ಅನ್ನೋದನ್ನ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ."

ಇದರ ripple effect ನೀವು ನಮ್ಮ ದೇಶದ ಅಡಿಯಿಂದ ಮುಡಿವರೆಗು ಕೇಳಿದ್ದೀರಿ/ನೋಡಿದ್ದೀರಿ.
ನಮ್ಮ ಮಾಧ್ಯಮದವರು ಬಿಸಿ-ಬಿಸಿ ಸುದ್ದಿಯೆಂದು ಬಿತ್ತರಿಸಲು ತನ್ನಗಿರುವದನ್ನು ಬಿಸಿಮಾಡಿ ಪ್ರಸಾರಿಸುವ ಕೆಲ್ಸಕ್ಕೆ ಇಳಿದಿರುವುದು ದುರಾದೃಷ್ಟಕರ.

ವಿ.ಆರ್.ಭಟ್ said...

vishleshane chennaagide!

Anonymous said...

ಈ ಕೆಳಗಿನ ಬ್ಲಾಗ್ ಲಿಂಕ್ ನಲ್ಲೊಂದು ಲೇಖನ ಚೆನ್ನಾಗಿದೆ, ಓದಿ
http://prajaprabhutva.blogspot.com/2011/07/blog-post_20.html

Savitri

Unknown said...

ಸೂಪರ್ ಸ್ಟಾರ್ ರಜನಿ ಯಾವಾಗಲೂ ಗೀತಾ ಮತ್ತು ಅದರ ಬೋಧನೆಗಳು ಒಂದು ಸಾಮೂಹಿಕ ಬೆಂಬಲಿಗ ಮಾಡಲಾಗಿದೆ. ತನ್ನ ವ್ಯಾಖ್ಯಾನ ತಿಳಿಯುವ ಇಲ್ಲಿ ಕ್ಲಿಕ್ ಮಾಡಿ
http://bit.ly/n9GwsR