Friday, July 29, 2011

ಹಸಿದು ಹಲಸು ...

ನಮ್ಮ ಬಿತ್ತಿಲಿನಲ್ಲಿ ಈ ವರ್ಷ ಪೆಲಕ್ಕಾಯಿ ತುಂಬಾ ಉಂಟು. ಪೆಲಕ್ಕಾಯಿ ಬಿತ್ತಿಲಿನ ಮರಗಳಲ್ಲಿ ಇರುವುದು. ನಮ್ಮ ಹಳೆಯ ಮರಗಳನ್ನೆಲ್ಲಾ ಕಳೆದ ಮರಿಯಾಲ ಮುಗಿದ ನಂತರ ಕಡಿದದ್ದು. ಮಿತ್ತ ಪುಣಿಯಲ್ಲಿ ಹೊಸ ಮನೆ ಕಟ್ಟಿದ್ದಕ್ಕೆ ಪೆಲತ ಮರತ ಬಾಕಿಲು ಕಿಟಿಕಿ ಮಾಡಿದ್ದು. ಬಿತ್ತಿಲಿನಲ್ಲಿ ಹೊಸ ಮರಗಳು ಬಂದದ್ದು ನಮಗೆ ಗೊತ್ತಾದದ್ದು ಹಳೆ ಮರಗಳನ್ನು ಕಡಿದಾಗಲೇ. ನಾವೆಣಿಸಿದ್ದು ಈ ವರ್ಷ ಪೆಲಕ್ಕಾಯಿ ಸಿಗಲಿಕ್ಕಿಲ್ಲ ಎಂದು. ಆದರೆ ಬಿತ್ತಿಲಿನ ಎಲ್ಲಾ ಹೊಸ ಮರಗಳಲ್ಲಿ ಈ ವರ್ಷ ಎಂಚಿನ ಪಸಲ್ ಮಾರಯ್ರೆ. ಒಂದು ಮರದಲ್ಲಿ ಮಾತ್ರ ನೋಡಬೇಕು. ಸಪೂರದ ಗೆಲ್ಲಿನಲ್ಲಿ ಕೂಡ ಗುಜ್ಜೆ ಆಗಿದೆ. ಗುಜ್ಜೆ ದೊಡ್ಡದು ಆದರೆ ನಮ್ಮ ಮರದ ಎಗೆ ತುಂಡಾಗಿ ಕೆಳಗೆ ಬೀಳ ಬಹುದು ಅಂತ ಅದನ್ನು ಕಜಿಪು ಮಾಡಲಿಕ್ಕೆ ಹೇಳಿದ್ದು. ಈಗ ಈ ಮಳೆಗೆ ಪರ್ಂದ್ ಪೆಲಕ್ಕಾಯಿ ಯಾರಿಗೆ ಬೇಕು ಹೇಳಿ. ಸುಮ್ಮನೆ ಅದು ಬಿದ್ದು ಹಾಳಾಗುತ್ತದೆ. ಬಿತ್ತಿಲಿಗೆ ಹೊಗಲಿಕ್ಕೆ ಆಗುವುದಿಲ್ಲ. ಉಮಿಲ್ ಅಂದ್ರೆ ಮಾರಾಯ್ರೆ ಬೈರಾಸು ಸುತ್ತಿಕೊಂಡು ಎಲ್ಲಿಯಾದರೂ ಹೋದೆವಾ ನಮ್ಮ ಕಾಲು ಕೂಡ ಪೆಲಕ್ಕಾಯಿಯ ರೆಚ್ಚೆಯ ಹಾಗೆ ಆಗುತ್ತದೆ. ಉಮಿಲ್ ತುಚ್ಚಿ.
ಪೆಲಕ್ಕಾಯಿ ಮರದಲ್ಲೇ ಪರಿಂದಿದರೆ ಈ ಮಳೆಗೆ ಅದು ಅಷ್ಟು ರುಚಿ ಇರುವುದಿಲ್ಲ ಎಂದು ಒಳ್ಳೆ ಬುಲೆತ್ ನೋಡಿ ಮೊದಲೇ ಕಡ್ಪಿ ಅದನ್ನು ಸ್ವಲ್ಪ ಬೆಚ್ಚ ಜಾಗದಲ್ಲಿ ಇಟ್ಟರೆ ಅದು ಸೀಪೆ ಸೀಪೆ ಆಗುತ್ತದೆ. ಪೆಲಕ್ಕಾಯಿ ಮೂರಲಿಕ್ಕೆ ಮಾತ್ರ ಈಗ ಯಾರು ದುಂಬು ಬರುವುದಿಲ್ಲ. ಕೈಯಲ್ಲಿ ಮೇಣ ಆಗುತ್ತದೆ ಅಂತ. ಅದಕ್ಕೆ ಕೆಲವರು ಒಂದಾ  ಮೊದಲೇ  ತಾರಾಯಿದೆಣ್ಣೆ ಕೈಗೆ ಪೂಜಿ ಮೇಣ ಅಂಟದಂತೆ ನೋಡ್ತಾರೆ. ಇಲ್ಲದಿದ್ದರೆ ಮೂರಿದ ನಂತರ ತಾರಾಯಿದೆಣ್ಣೆ ಪೂಜುತ್ತಾರೆ.
ಮೊನ್ನೆ ಹೀಗೆಯೇ ನಾನು ಕೊಟ್ಯದಲ್ಲಿದ್ದ ಪೆಲಕ್ಕಾಯಿ ಪರಿಂದಿದೆ ಎಂದು ಪರಿಮಳ ಬರುವಾಗ ಅದನ್ನು ಮೂರಲಿಕ್ಕೆ ಕುಳಿತ್ತದ್ದು. ನಾನು ಮೊದಲೇ ತಾರಾಯಿದೆಣ್ಣೆ ಪೂಜಿಲಿಕ್ಕೆ ಮರೆತ್ತದ್ದು. ಮತ್ತೆ ಎಂತ ಮಾಡುವುದು. ಆಗಲಿ ಅಂತ ಮುಂದುವರಿಸಿದ್ದೇ. ಇಡೀ ಪೂರಾ ಪೆಲಕ್ಕಾಯಿ ಮೂರಿದ್ದು. ನಾಕು ನಾಕು ಪಚ್ಚಿಲ್ ಅಂತ ಹೇಳಿ ಎಲ್ಲರೂ ತಿಂದು ಪೆಲಕ್ಕಾಯಿ ಮುಗಿಯಿತು. ನಾನು ಮೇಣವನ್ನು ಕೈಗೆ ಕಾಲಿಗೆ ತಲೆಗೆ ಎಂದು ಎಲ್ಲ ಕಡೆ ಅಂಟಿಸಿದ್ದು. ಅದು ಉಮಿಲ್ ಓಡಿಸಬೇಕಲ್ಲವಾ. ಅದಕ್ಕೆ.
ಕೈಗೆ ಅಂಟಿದನ್ನು ಬಿಡಿಸುವುದು ಹೇಗೆ ಅಂತ ಮಂಡೆಬೆಚ್ಚದಲ್ಲಿದ್ದೆ. ತಾರಾಯಿದೆಣ್ಣೆ ಹಾಕಿದರೂ ಅದು ಸುಲಭದಲ್ಲಿ ಬಿಡಬೇಕಲ್ಲವ.
ಅಂಟುವುದು ಅದರ ಗುಣ. ಬೆಚ್ಚ ನೀರು ಹಾಕಿ ತೊಳೆದರೆ ಎಂಚಾ ಎಂದು ಕೂಡಾ ನೋಡಿ ಆಯಿತು. ಅದು ಮಯಣ ಮಾರಾಯ, ಕೈ ಬಿಡುವುದಿಲ್ಲ. ಅದು ಒಮ್ಮೆಗೇ ಹೋಗಲಿಕ್ಕಿಲ್ಲ. ನಿಧಾನವಾಗಿ ಹೋಗಬಹುದು. ನಾಳೆ ಆಗುವಾಗ ಎಲ್ಲಾ ಹೋಗಬಹುದು ಅಂತಾ ಎಲ್ಲ ಹೇಳಿದರು. ಯಾರೋ ಹೇಳಿದರು ಅಂತ ಅದು ಹೋಗುತ್ತದೋ. ಅಂಟಿದ್ದು ನನ್ನ ಕೈಗೆ ಅಲ್ಲವೋ. ಅದರ ಉಪದ್ರ ನನಗೆ ಮಾತ್ರ ಗೊತ್ತು ಅಲ್ಲವ.
ದಿಲ್ಲಿಯ ನಾಯ್ಕರು ಹೇಳಿದರೆ ಅದು ಬಿಡುತ್ತದೋ. ನಮ್ಮ ಕೈಗೆ ಎಷ್ಟು ಹೊತ್ತು ಅದು ಅಂಟಿಕೊಂಡಿರುತ್ತದೋ ಅಷ್ಟೂ ಹೊತ್ತು ನಮ್ಮ ಕೈ ಮತ್ತೆ ಮೈ ಎಲ್ಲಾ ಪೆಲಕ್ಕಾಯಿ ಪರಿಮಳ ಬರುತ್ತದೆ. ಹಾಗೆ ನಾವು ಎಲ್ಲಿಯಾದರೂ ಹೊರಗೆ ಜಗಲಿಯಲ್ಲಿ ಕುಳಿತೆವೋ ಅಲ್ಲಿಗೆ ನಾಯಿ ಕೂಡ ಬಂದು ನಮ್ಮನ್ನು ಮೂಸುತ್ತದೆ. ಅದಕ್ಕೆ ಹೇಳುವುದು, ಪೆಲಕ್ಕಾಯಿ ಮೂರಿದವರಿಗೆ ಮಾತ್ರ ಗೊತ್ತು ಅದರ ಸುಖ ಅಥವಾ ದುಃಖ. ನಾವು ಪೆಲಕ್ಕಾಯಿ ಪರಿಮಳ ಬರುತ್ತೇವೆ ಅಂತ ಹೇಳಿ ಇದ್ದ ಕಾಟುನಾಯಿಗಳಿಂದ ಮೂಸಿಸಲ್ಪಡಿಲಿಕ್ಕೆ ಆಗುತ್ತದೋ? ಪೆಲಕ್ಕಾಯಿ ನಾವೆ ಮೂರಿದ್ದು ಎಂದುದರಿಂದ ಅಲ್ಲವೋ ನಾವೇ ಪೆಲಕ್ಕಾಯಿ ಪರಿಮಳ ಬರುವುದು. ಪೆಲಕ್ಕಾಯಿ ತಿಂದವರು ಸ್ವಲ್ಪ ಹೊತ್ತು ಪೆಲಕ್ಕಾಯಿ ಪರಿಮಳ ಬರಬಹುದು. ನಾವು ಮೂರಿದ್ದರಿಂದ ನಾವು ತಿಂದಿದ್ದೇವೆ ಅಂತ ಕಾಟುನಾಯಿ ಕೂಡ ನಮ್ಮನ್ನು ಮೂಸಿಲಿಕ್ಕೆ ಬರುತ್ತದೆ.
ಈ ಮಳೆಗೆ ಎಲ್ಲಿಗೂ ಹೋಗಲಿಕ್ಕೆ ಆಗುವುದಿಲ್ಲ ಎಂದು ಆಚೆ ತೋಟದ ಭಟ್ರು  ಮತ್ತು ಈಚೆ ತೋಟದ ಶೆಟ್ರು ಟಿವಿ ನೋಡಿ ನೋಡಿ ಕಣ್ಣು ಕೆಂಪು ಮಾಡಿಕೊಂಡು ಬಯ್ಯದ ಪೊರ್ತುಗು ಮಳೆ ಬಿಟ್ಟಾಗ ನಮ್ಮ ಬಿತ್ತಿಲಿನ ಹತ್ತಿರದಲ್ಲಿ ಮಾತಾಡುವುದು ಕೇಳಿ ನಾನು ಕೂಡ ಅಲ್ಲಿಗೆ ಹೋದರೆ ಅವರು ಎಂತ ಹೇಳುವುದು ಗೊತ್ತುಂಟಾ? ಪೆಲಕ್ಕಾಯಿ ಮೂರಿ ಬಂದದ್ದಾ ಎಂದು. ನಾನು ಹೇಳಿದೆ ನೀವು ಎಂತದ್ದು ಮಾಡಿದ್ದು ಪುಲ್ಯದಿಂದ ಬಯ್ಯ ಮುಟ್ಟ ಎಂದು. ಅವರು ಹೇಳಿದರು: ಮುಖ್ಯಮಂತ್ರಿಗಳು ಯಾವಾಗ ರಾಜೀನಾಮೆ ಕೊಡುತ್ತಾರೆ ಅಂತ ಕಾದು ಕಾದು ಸಾಕಾಯಿತು ಅಂತ.  ಕಾದು ಕಾದು ನೀವು ಮುದುಕರಾಗುವಿರಿ. ಅವರು ರಾಜೀನಾಮೆ ಕೊಡುವ ಹಾಗೆ ಕಾಣುವುದಿಲ್ಲ. ಅವರು ಅಧಿಕಾರಕ್ಕೆ ಅಂಟಿದ್ದಾರೆ ಮಾರಾಯ್ರೆ, ನನ್ನ ಮೈಗೆ ಪೆಲಕ್ಕಾಯಿ ಪರಿಮಳ ಅಂಟಿದ ಹಾಗೆ, ಎಂದೆ. ನಾಳೆ ಅಮಾಸೆ ಮುಗಿಯಲಿ. ಮತ್ತೆ ನೋಡುವಾ ಆಯಿತಾ.
Saturday, July 23, 2011

ಬಾಜೀರಾವ್ ಸಿಂಗಮ್

ಗೋಲ್‍ಮಾಲ್ ಸರಣಿ ಚಿತ್ರಗಳನ್ನು ನಿರ್ದೇಶಿಸಿದ ರೋಹಿತ್ ಶೆಟ್ಟಿ ಸಿಂಗಮ್ ಎಂಬ ಮಸಾಲ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಗಮನಸೆಳೆದಿದ್ದಾರೆ. ವಾರದ ದುಡಿಮೆಯ ನಂತರ ರಿಲಾಕ್ಸ್ ಆಗಲು ಮಲ್ಟಿಪ್ಲೆಕ್ಸ್‍ಗೆ ಹೋಗಿ ಕಾಲು ಚಾಚಿ ಕುಳಿತರೆ ಸಾಕು. ಯಾವುದೇ ಯೋಚನೆ ಮಾಡಬೇಕಾದ ಪ್ರಮೇಯವೇ ಇಲ್ಲ. ಸ್ಲೋಮೋಷನ್ ಆಕ್ಷನ್ ದೃಶ್ಯಗಳು, ಫೈಟ್, ಸ್ಕಾರ್ಪಿಯೋ ಗಾಡಿಗಳ ಹೊಡೆದುರುಳುವ ಆಟ. ಜತೆಗೆ ಮನಸ್ಸಿಗೆ ನಾಟುವ ಡಯಲಾಗ್ ಬಾಜಿ.
ಶಿವಗಢದ ಪೊಲೀಸ್ ಅಧಿಕಾರಿ ಬಾಜಿರಾವ್ ಸಿಂಗಮ್ ನಾಯಕ. ಗೋವಾದ ಡಾನ್ ಜಯಕಾಂತ್ ಶಿಕ್ರೆ ಖಳನಾಯಕ.
ನಾಯಕ  ಶಿವಗಢದಿಂದ ಗೋವಾಕ್ಕೆ ವರ್ಗಾವಣೆಯಾದ ನಂತರ ಆಕ್ಷನ್ ದೃಶ್ಯಗಳೂ, ಡಯಲಾಗ್ ಬಾಜಿಯೂ ಹೆಚ್ಚುತ್ತವೆ.
ನಿರಾಳ ವಾರಾಂತ್ಯಕ್ಕೆ ಮುನ್ನುಡಿಯಾಗಿತ್ತು ಸಿಂಗಮ್!
***
 ತುಳುನಾಡಿನ ಮೂಲದ  ಫೈಟರ್ (ಎಂ.ಬಿ.)ಶೆಟ್ಟಿಯವರ ಮಗ ರೋಹಿತ್ ಶೆಟ್ಟಿ ಮತ್ತು  ತುಳುನಾಡಿನ ಇನ್ನೋರ್ವ ಸಮಕಾಲೀನ ಪ್ರತಿಭಾವಂತ ನಟ ಪ್ರಕಾಶ್ ರೈ (ರಾಜ್) ರಿರುವ ಈ ಸಿನಿಮಾದಲ್ಲಿ ಒಂದು ಪೂರ್ಣ ಪ್ರಮಾಣದ ದೃಶ್ಯದಲ್ಲಿ ತುಳುಭಾಷೆಯನ್ನು ಉಪಯೋಗಿಸಲಾಗಿದೆ. ಮುಂಬಯಿಯಲ್ಲಿರುವ ತುಳುವರ ಪ್ರಭಾವ ಬಾಲಿವುಡ್ ಸಿನಿಮಾದಲ್ಲಿ ಅಪಾರ.
***
ಚಿತ್ರದ ಕಾಲ: ಸಮಕಾಲೀನ; ಕಥೆ ನಡೆಯುವ ಸ್ಥಳ: ಮಹಾರಾಷ್ಟ್ರ, ಕರ್ನಾಟಕ ಗಡಿಯಲ್ಲಿರುವ ಗೋವಾದಲ್ಲಿ.
ಚಿತ್ರದ ಸಂಭಾಷಣೆಯೊಂದನ್ನು ಕುರಿತು ಕನ್ನಡಿಗರಿಗೆ ನೋವಾಗಿದೆ ಎಂದು ಕ.ರ.ವೇ. ಗದ್ದಲವೆಬ್ಬಿಸಿದೆ.
***
ಹೊರನಾಡಿನ, ಮುಖ್ಯವಾಗಿ ಮುಂಬಯಿಯ ಕನ್ನಡಿಗರು ಹೆಮ್ಮೆ ಪಡುವ ರೋಹಿತ್ ಶೆಟ್ಟಿ ಹಾಗೂ ಪ್ರಕಾಶ್ ರೈ ಅವರ ಚಿತ್ರಕ್ಕೆ ಹಾರ್ದಿಕ ಶುಭಾಶಯಗಳು.
***
ಉಳಿದಂತೆ "ಕುತ್ತೋಂ ಕಿ ಝುಂಡ್ ಜಿತ್ನೀಭೀ ಬಡೀ ಹೋ, ಉನ್ ಕೇ ಲಿಯೇ ಏಕ್ ಶೇರ್ ಕಾಫಿ ಹೈ"!
ಇಲ್ಲಿ ಬೊಗಳುವವರನ್ನು ನಾಯಿಗಳೆಂದು ಯಾರಾದರೂ ಗುರುತಿಸಿಕೊಂಡರೆ ಖಾಲಿ ತಲೆಯಲ್ಲಿ ಚಿತ್ರ ನೋಡಿ ಬಂದವರ ತಪ್ಪಿಲ್ಲವಲ್ಲ!

ಒಲವಿನಿಂದ
ಬಾನಾಡಿ

Tuesday, July 19, 2011

ಮಕ್ಕಳು ಮತ್ತು ಭಗವದ್ಗೀತೆ

ಕರ್ನಾಟಕದ ಶಾಲೆಗಳಲ್ಲಿ ಭಗವದ್ಗೀತೆಯನ್ನು ಕಲಿಸಲಾಗುವುದು; ಕಲಿಯಬೇಡವೆನ್ನುವವರು ಈ ದೇಶ ಬಿಟ್ಟು ಹೋಗಿ. ಕರ್ನಾಟಕದ ಶಿಕ್ಷಣ ಸಚಿವರ ಕರೆನೀಡಿದ್ದಾರೆ. 
ಶಾಲೆಗಳ ಜಗಲಿಯಲ್ಲಿ, ಅಂಗಳದಲ್ಲಿ, ಮಾಸ್ತರು, ಮೇಡಂಗಳ ಕೋಣೆಗಳಲ್ಲಿ, ಸಾಮಾನ್ಯರ ಅಡ್ಡೆಗಳಲ್ಲಿ, ಎಲ್ಲೆಂದರಲ್ಲಿ ಚರ್ಚೆ ನಡೆಯುತ್ತಿದೆ. ಅದು ಅಂಕಣಕಾರರಿಂದ ಹಿಡಿದು, ಅಂತರ್ಜಾಲದ ವರೆಗೆ ಹಬ್ಬಿದೆ. 
ಭಗವದ್ಗೀತೆಯ ಕುರಿತು ಉತ್ತಮ ಭಾವನೆಯಿದ್ದವರೂ ಸಚಿವರ ಉದ್ದಟತನದ ಭಾಷಣದಿಂದ ಜನ  ರೋಸಿಹೋಗಿದ್ದಾರೆ. 
ಮಹಾತ್ಮಾ ಗಾಂಧಿ
ಕರ್ನಾಟಕದಲ್ಲಿ ನಡೆಯುವ ನಾಟಕದ ಮತ್ತೊಂದು ದೃಶ್ಯವೆಂಬಂತೆ ಈಗ ರಾಷ್ಟ್ರೀಯ ಮಾಧ್ಯಮಗಳೂ ಈ ಕುರಿತು ವರದಿ, ಅಭಿಪ್ರಾಯ ವ್ಯಕ್ತಪಡಿಸುತ್ತಿವೆ. ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸುವ ಕುರಿತು ಸಚಿವ ಸಂಪುಟ ಯಾವ ತರದ ನಿರ್ಧಾರ ತೆಗೆದುಕೊಂಡಿದೆ? ಶಿಕ್ಷಣ ಇಲಾಖೆ ಸುತ್ತೋಲೆಯನ್ನೂ ಜಾರಿಗೊಳಿಸಲಾಗಿದೆ - ಇದು ಸುದ್ದಿ.
ಮುಗ್ದ ಮತದಾರರನ್ನು ಮೋಸ ಮಾಡುವ ತಂತ್ರ ಆಡಳಿತಾರೂಡ ಪಕ್ಷಕ್ಕೆ ಹೊಸತೇನಲ್ಲ. ಮಂದಿರ ಕಟ್ಟುವೆ ಎಂದು ಅಧಿಕಾರಕ್ಕೆ ಬಂದೊಡನೆ ಮಂದಿರದ ಸುದ್ದಿಗೇ ಹೋಗದ ಅತಿರಥ ಮಹಾರಥರ ಎದುರು ಜುಜುಬಿ ಕಾಗೇರಿ ವಿಚಾರ ಇನ್ನೇನು ರಾಜ್ಯ ಚುನಾವಣೆಗೆ ತಯಾರಾಗಿದೆ ಎಂಬುದರ ಸೂಚಕವೇ?
ಮುಖ್ಯ ಮಂತ್ರಿಗಳು ಸುಳ್ಳುಗಾರ ಎಂಬುದು ಅವರದೇ ಅನುಯಾಯಿಗಳು ಮುಚ್ಚುಮರೆಯಿಲ್ಲದೆ ಒಪ್ಪಿ ಕೊಂಡಿದ್ದಾರೆ. ಇನ್ನು ಉಳಿದ ಸಚಿವರುಗಳು ಕನಿಷ್ಟ ತಮ್ಮ ಸೀಟುಗಳನ್ನು ಉಳಿಸಿ ಕೊಳ್ಳಲು ಅಥವಾ ಮತ್ತೊಮ್ಮೆ ಅಭ್ಯರ್ಥಿಯಾಗಿ ಕಣದಲ್ಲಿ ಇರಲು ಕಾಗೇರಿ ಮಾಡುವಂತಹ ಪ್ರಹಸನವನ್ನು ಮಾಡಬೇಕಾಗುತ್ತದೆ.
ಬಲಪಂಥೀಯ ವಿಚಾರಧಾರೆಯನ್ನು ತಲೆಯೊಳಗೆ ತುರುಕಿಕೊಂಡಿರುವ ಕರ್ನಾಟಕದ ಬುದ್ಧಿವಂತ ಜನರಿಗೆ ಗೀತೆಯಂತಹ ಪವಿತ್ರ ಗ್ರಂಥವನ್ನು ಹಿಡಿದು ಮತ ಗಳಿಸುವ ಯೋಜನೆ ಒಳ್ಳೆಯ ರಾಜಕಾರಣಿಯ ಬುದ್ಧಿವಂತಿಕೆ ಎಂದೇ ಮೆಚ್ಚಬೇಕು. ಪಾಪ ಬಲಪಂಥೀಯ ಮತದಾರರು!
ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸಬೇಕೆ ಎಂಬುದು ಹಲವಾರು ವ್ಯಕ್ತಿಗಳು, ಮಾಧ್ಯಮಗಳು  ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಕಲಿಸಬೇಕು ಎನ್ನುವುದು ಸಾಮಾನ್ಯ ಜನರ ಸಾಮಾನ್ಯ ಅನಿಸಿಕೆ. ಕಾರಣ ಗೀತೆ ನಮ್ಮ ಪವಿತ್ರ ಗ್ರಂಥ. ಕುರುಕ್ಷೇತ್ರದ ಯುದ್ಧದ ಸಂದಿಗ್ದ ಸ್ಥಿತಿಯಲ್ಲಿ ಅರ್ಜುನನಿದ್ದಾಗ ಕೃಷ್ಣ ನೀಡಿದ ಸಂದೇಶ. ಅದರಲ್ಲಿರುವ ಉಪಯುಕ್ತ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿದರೆ ಬದುಕಿನಲ್ಲಿ ಉತ್ತಮ ಮನುಷ್ಯನಾಗಲು ಕೆಲವು ಸೂತ್ರಗಳಿವೆ. ಹೀಗೆ ಸಾಮಾನ್ಯ ಜನರು ಅದನ್ನು ತಮ್ಮ ಮಕ್ಕಳಿಗೆ ಶಾಲೆಯಲ್ಲಿ ಕಲಿಸಲು ಯಾವುದೇ ವಿರೋಧ ವ್ಯಕ್ತ ಪಡಿಸುವುದಿಲ್ಲ. ಬದಲಾಗಿ ಅಂಥ ಕಾರ್ಯವನ್ನು ಕೈಗೊಳ್ಳುವವರನ್ನು ಹೊಗಳಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. 
ಜನ ತನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸಿದರೆ ರಾಜಕಾರಣಿಗೆ, ರಾಜಕೀಯ ಪಕ್ಷಕ್ಕೆ ಅದು ವೋಟ್ ಆಗಿ ಪರಿವರ್ತಿತವಾಗುವುದು ಎಂಬ ಭರವಸೆಯಿರುತ್ತದೆ.
ಯಾಕೆಂದರೆ ಹಳ್ಳಿ ಹಳ್ಳಿಯಿಂದ, ಪೇಟೆಯ ಗಲ್ಲಿ, ಗಲ್ಲಿಯಿಂದ ಇಟ್ಟಿಗೆ ಕೊಟ್ಟು ಮಂದಿರ ಕಟ್ಟಿಸುತ್ತೇವೆ ಎಂದು ನಂಬಿದ ಜನ ಅವರಿಗೆ ಓಟೂ ಕೊಟ್ಟರು. ಸ್ವಲ್ಪ ಕಾದೂ ನೋಡಿದರು. 

ಅವರು ಇತರ ರಾಜಕಾರಣಿಗಳಿಗಿಂತ ಭಿನ್ನವಲ್ಲ ಎಂದಾಗ ಮತ್ತದೇ ಹಳೆಯ ಶತ್ರು ಪಕ್ಷವನ್ನೇ ಒಪ್ಪಿದರು. ಎಲ್ಲಾ ಬುರುಡೆ ಎಂದು ಗೊತ್ತಾಗುವಾಗ ಹೊತ್ತು ನೆತ್ತಿಗೇರಿತ್ತು. ಪಾಪ ಬಲಪಂಥೀಯ ಮತದಾರರು!

ಭಗವದ್ಗೀತೆಯನ್ನು ಶಾಲೆಗಳಲ್ಲಿ ಯಾರದೇ ಅಭ್ಯಂತರವಿಲ್ಲದೆ ಕಲಿಸುವುದಕ್ಕೆ  ಸಚಿವರಾಗಲೀ ಸರಕಾರವಾಗಲೀ ಪ್ರಯತ್ನ ಪಟ್ಟಿಲ್ಲ, ಪಡುವುದೂ ಇಲ್ಲ. ಗೀತೆಯನ್ನು ಮುಗ್ದ ಮಕ್ಕಳು ಕಲಿತು ದೊಡ್ದವರಾದರೆ ಇಂದಿನ ದಗಾಕೋರರಿಗೆ ತಕ್ಕ ಪಾಠ ಕಲಿಸಬಹುದು. ಮುಗ್ದ ಮಕ್ಕಳು ಸರಳ ಮುಗ್ದರಾಗಿಯೇ ಉಳಿದರೆ ಅವರನ್ನು ಮೋಸ ಮಾಡುವುದು ಸುಲಭ!

ಸಚಿವರಾಗಲೀ, ಸರಕಾರವಾಗಲೀ ಭಗವದ್ಗೀತೆಯನ್ನು ಶಾಲೆಯಲ್ಲಿ ಕಲಿಸುವ ಕುರಿತು ಯಾವುದೇ ವೈಜ್ಞಾನಿಕ ಯೋಜನೆಯನ್ನು ಹಾಕಿಲ್ಲ. 
ಕರ್ನಾಟಕದ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಕಲಿಯುವ ಮಕ್ಕಳ ಸಂಖ್ಯೆ 10035093 (2009-10). 
ಅವರಲ್ಲಿ 1453299 ಮುಸ್ಲೀಮ್ ವಿದ್ಯಾರ್ಥಿಗಳು.
225056  ಇತರ ಅಲ್ಪಸಂಖ್ಯಾತ ವರ್ಗದವರು ಅಂದರೆ ಕ್ರಿಶಿಯನರು, ಜೈನರು, ಬೌದ್ಧರು, ಸಿಖ್ಖರು, ಇತ್ಯಾದಿ.
ಇನ್ನು ಉಳಿದ ಹಿಂ ದೂಗಳಲ್ಲಿ 3538551 ಮಂದಿ ಹಿಂದುಳಿದ ವರ್ಗದವರು ಅರ್ಥಾತ್ ಓಬಿಸಿ, 
771157 ಪರಿಶಿಷ್ಟ ವರ್ಗ ಅರ್ಥಾತ್ ಎಸ್‍ಟಿ ಮತ್ತು 1890518 ಪರಿಶಿಷ್ಟ ಜಾತಿ ಅರ್ಥಾತ್ ಎಸ್‍ಸಿಯವರು.
ಉಳಿದ 2156512 ಮಂದಿ ಸಾಮಾನ್ಯ ಹಿಂದೂಗಳು. ಅರ್ಥಾತ್  ಜನರಲ್ ವರ್ಗದವರು; ಮುಖ್ಯವಾಗಿ  ಬ್ರಾಹ್ಮಣ ಮುಂತಾದ ಮುಂದುವರಿದ ಜಾತಿಯವರು. 
ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸಲು ಆರಂಭಿಸಿದರೆ ಇಷ್ಟೆಲ್ಲಾ ಸಂಖ್ಯೆಯ ಒಬಿಸಿ, ಎಸ್‍ಸಿ, ಎಸ್‍ಟಿಗಳು ಭಗವದ್ಗೀತೆಯಲ್ಲಿರುವ ಜ್ಞಾನವನ್ನು ಪಡೆಯುವರು.

ಶಾಲೆಯಲ್ಲಿ ಕಲಿಸದಿದ್ದರೆ ಆ ಜ್ಞಾನ ಅವರಿಗೆ ಸುಲಭದಲ್ಲಿ ಈಗಲೂ ಸಿಗುವುದಿಲ್ಲ.
ಗಾಂಧಿ ಸಮಾಧಿ
ಇಂತಹ ಒಳ್ಳೆಯ ಕೆಲಸಕ್ಕೆ ಯಾರು ಒಪ್ಪುತ್ತಾರೆ. ಬಲಪಂಥೀಯರಂತೂ ಒಪ್ಪಲಾರರು. ಕಾರಣ ಒಬಿಸಿ, ಎಸ್‍ಸಿ, ಎಸ್‍ಟಿಗಳು  ಗೀತೆ ಕಲಿತು ಮುಂದುವರಿದರೆ ಅವರೂ ಈ ರಾಜ್ಯದ ಬೊಕ್ಕಸದ ಹಣವನ್ನು ಲೂಟಿ ಮಾಡಲು ಹಿರಿಯ ಅಧಿಕಾರಶಾಹಿ ಅಥವಾ ರಾಜಕೀಯ ಅಥವ ಉದ್ಯಮದಲ್ಲಿ ತೊಡಗಬಹುದು.

ಆವೇಶ ಭರಿತ ಭಾಷಣ, ಲೋಕಲ್‍ನಿಂದ ಹಿಡಿದು ನ್ಯಾಷನಲ್ ವರೆಗಿನ ಮಾಧ್ಯಮದಲ್ಲಿ ಮಿಂಚಿ, ಕಾಗೇರಿ ಎಂಬ ವ್ಯಕ್ತಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಸತ್ಯ.

ಆದರೆ ಶತಮಾನಗಳೇ ಉರುಳಲಿ, ಭಾರತದ ಬಿಡಿ ಕರ್ನಾಟಕದ ಪ್ರತಿ ಪ್ರಜೆ ಭಗವದ್ಗೀತೆಯನ್ನು ಕಲಿತು ಅದರಲ್ಲಿ ಇರಬಹುದಾದ ಜ್ಞಾನದ ತುಣುಕೊಂದನ್ನು  ತನ್ನದಾಗಿಸುವುದು ಕನಸಿನ ಮಾತು.

ರಾಜಕಾರಣಿಗಳ ಉದ್ವೇಗದಷ್ಟೆ ಮಾಧ್ಯಮದವರು, ಬಲಪಂಥೀಯ ಎನ್ನುವವರು ಮತ್ತು ಕೋಮು ಸೌಹಾರ್ದಿಗಳು ಎಲ್ಲಾ ಸೇರಿ ಆಗಬೇಕಾದುದನ್ನು ಆಗದಂತೆ ಮಾಡುವರು.

ನಾವು ದೇಶ ಬಿಟ್ಟು ತೊಲಗಲು ಯೋಜನೆ ಹಾಕಬೇಕಿದೆ.
ನಮ್ಮನ್ನು ಕರೆದು ಮಣೆಹಾಕುವ ದೇಶ ಯಾವುದಿದೆ ಎನ್ನುವುದು ಹುಡುಕುವುದೇ ಮುಂದಿನ ಕೆಲಸ.
ಒಲವಿನಿಂದ
ಬಾನಾಡಿ
 

Saturday, July 16, 2011

ಒಂದೇ ಪತ್ರಿಕೆ - ಭಿನ್ನ ಸಂಪಾದಕೀಯ ನೀತಿ

ಒಂದೇ ಪತ್ರಿಕೆ - ಭಿನ್ನ ಸಂಪಾದಕೀಯ ನೀತಿ

ಪತ್ರಿಕೆಯ ಮುಖಪುಟ ಮತ್ತು ಮುಖ್ಯ ಸುದ್ದಿಗಳು ಒಂದು ಪತ್ರಿಕೆಯ ಸಂಪಾದಕೀಯ ನೀತಿಯನ್ನು ಸೂಚಿಸುವ ಚಿಹ್ನೆಗಳು. 
ಉದಯವಾಣಿಯ ಮಣಿಪಾಲ ಮತ್ತು ಬೆಂಗಳೂರು ಆವೃತ್ತಿಗಳು ಎರಡು ಪ್ರತ್ಯೇಕ ಪತ್ರಿಕೆಗಳಂತೆ ನಡೆಯುತ್ತಿವೆ. 
ಸಂಪಾದಕರೂ ಬೇರೆ ಬೇರೆ, ನೀತಿಯೂ ಬೇರೆ ಬೇರೆ.
ಕರಾವಳಿಯ ಓದುಗ ಬೆಂಗಳೂರಿಗೆ ಬಂದು ಉದಯವಾಣಿ ಓದಿ ದಿಗ್ಬ್ರಮೆ ಗೊಳ್ಳುವುದರಲ್ಲಿ ಆಶ್ಚರ್ಯವಿಲ್ಲ.