ಬಾನಾಡಿ

Loading...

Wednesday, June 29, 2011

ಬರುವಿರಾ, ಹಳೆಯ ಹೆಜ್ಜೆಗಳು ಕರೆದಾಗ...



ಬಿಟ್ಟು ಹೋದ ಹೆಜ್ಜೆಗಳನು ಮತ್ತೆ ಹೆಕ್ಕಲು ಬಂದಾಗ

ಬಿತ್ತಿದ ಬೀಜ ಮರವಾಗಿತ್ತು 
ಮರದ ನೆರಳಲಿ ಹೆಜ್ಜೆಗಳು ಮರೆಯಾಗಿ
ಕಲ್ಲಿನ ಶಿಖರವಾಗಿತ್ತು

ಎಲ್ಲೆಲ್ಲೋ ಅಲೆದು ಏನೇನೋ ಅಳೆದು
ಮುಷ್ಟಿಯೊಳಗಿನ ಮುತ್ತನು ಹಿಡಿದುಕೊಂಡು
ಬಿಟ್ಟು ಹೋದ ಹೆಜ್ಜೆಗಳ ಕಾಲುಗಳಿಗೆ 
ಗೆಜ್ಜೆ ಕಟ್ಟಿ ಕುಣಿಯಲೆಂದು ಬಂದರೆ

ಅಲ್ಲಿ ಪಾರ್ತಿಸುಬ್ಬನ ಪದ್ಯಗಳನು
ಯೂ ಟ್ಯೂಬ್ ನೊಳಗಿಟ್ಟ 
ಭಾಗವತರ ಬೋಳು ಮಂಡೆಗೆ ಮುಂಡಾಸು ಏರಿದೆ
ಕತ್ರಿನಾಳ ಶೀಲಾ ಕಿ ಜವಾನಿಯ ನೆನಪಲ್ಲಿ

ಇನ್ನೊಮ್ಮೆ ಸಿಗುವೆ ಎಂದು ವಾಗ್ದಾನ ನೀಡಿದ
ಮಾವಿನ ಮರದ ಕರುಳ ನೆರಳು 
ಬಟಾ ಬಯಲಾಗಿದೆ ಅಂತಸ್ತುಗಳನು ಲೆಕ್ಕ ಹಾಕುತ್ತಾ
ಬಾನೆತ್ತರ ಎದ್ದು ನಿಂತ ಮಹಾ ಮಹಡಿಗಳೊಳಗೆ

ಮುದ್ದುಕಂಗಳ ಮುಗ್ದೆಯ ತುಟಿಯಂಚಿನ ಸಣ್ಣ
ಸ್ಪರ್ಶಕೆ ಮರೆತು ಹೋದ ತರಗತಿಯ ಪಾಠಗಳು
ವಾರನ್ ಬಫೆಟ್‍ನ ಉಪನ್ಯಾಸದ ಸೀ.ಡಿ.ಗಳಲಿ
ಷೇರು ಮಾರುಕಟ್ಟೆಯ ವ್ಯವಹಾರದ ಪಂಚಾಂಗವನು ಹಾಕಿದೆ


ಜಾರಿ ಬಿದ್ದು ಗುರುತಿಗೊಂದು ಶಾಶ್ವತ ಕಳೆಯನು 
ಕೊಟ್ಟ ಬಯಲ ಕಲ್ಲು
ಕರಗಿ ಹೋಗಿದೆಯೋ, ಉರುಳಿ ಹೋಗಿದೆಯೋ
ಅಲ್ಲ ಅಂಚಿನೊಳಗಿನ ಮಸಣದ ಗೋರಿಗೆ ಆಸರೆಯಾಗಿದೆಯೋ


ಮತ್ತೆ ಹೆಕ್ಕಲು ಬಂದಾಗ ಆ ಹಳೆಯ  ಹೆಜ್ಜೆಗಳೇನಾದರೂ
ಕರಿಬೂಟಿಗೆ ತಗುಲಿ ಅಪ್ಪಾ ಎಂದು ಕರೆದರೆ
ಹೆಗಲ ಮೇಲಿನ ಚೀಲದೊಳಗೆ ತುಂಬಲು, ಗೆಳೆಯರೇ
ನೀವ್ಯಾರಾದರೂ ಹೊರಟು ಬರುವಿರಾ 

ಅಂತಸ್ತಿನ ಕಟ್ಟಡದ ಮೂವತ್ತನೇ ಮಹಡಿಯಿಂದ
ಸುಂದರ ಸಂಜೆಯನೂ ನುಂಗಿದ ಮಧ್ಯಾಹ್ನದ ಮೀಟಿಂಗ್‍ನಿಂದ
ಒಂದೊಂದಿಂಚೂ ಮುಂದುವರಿಯದ ಮಾರ್ಗದೊಳಗಿನ ದಟ್ಟಣೆಯಿಂದ
ಸ್ಥಿತಿಯನು ವಿಸ್ತರಿಸುವ ಫೇಸ್‍ಬುಕ್ಕಿನ ಸ್ಟೇಟಸ್‍ನಿಂದ.

ಬಾನಾಡಿ

3 ನೀವು ಹೇಳಿದ್ದು:

Prakash Shetty said...

ಅಧುನಿಕ ಜಾಲದೊಳಗೆ ಚಡಪಡಿಸುತ್ತಿರುವ ಕಾಲದೊಳು ಹಳೆಯ ನೆನಪುಗಳು ಮೆಲುಕು....

RAKESH. N.S said...

ಬಹುಶಃ ನೀವು ಊರಿಗೆ ಹೋಗಿದ್ದಾಗ ನಿಮಗೆ ಕಂಡದ್ದಿರಬೇಕು... ನನಗೂ ಹೀಗೆ ಅನಿಸುತ್ತದೆ...ಆದರೆ ಸಂತಸದ ನೆಲೆ ಯಾವುದು ಆ ಊರಿನ ಬದುಕಾ ಅಲ್ಲ ಈ ನಗರದ ಬದುಕಾ ಎಂಬ ಪ್ರಶ್ನೆಯನ್ನು ನನ್ನೊಳಗೆ ಕೇಳಿಕೊಂಡರೆ ತಬ್ಬಿಬ್ಬಾಗುತ್ತೇನೆ. ಸಂತಸ ಎಲ್ಲ ಕಡೆಯೂ ಇದೆ... ಹುಡುಕುವ ಮತ್ತು ಬದುಕುವ ಮನಸ್ಸಿದ್ದರೆ ಎಂದು ನನಗೆ ನಾನೇ ಹೇಳಿಕೊಂಡು ಸುಮ್ಮನಾಗುತ್ತೇನೆ... ಒಟ್ಟಿನಲ್ಲಿ ಬದುಕು ದ್ವಂದ್ವಗಳ ಸಂಗಮವಾಗಿದೆ... ಕವಿಗೆ ಆದಂತೆ.. ನನಗೆ ಆದಂತೆ ಮತ್ತು ಹಳ್ಳಿ ಜೀವನದ ಸುಖ ಉಂಡು.. ಈಗ ನಗರ ಜೀವನ ಹಾಳು ಹೊಗೆ ತಿನ್ನುತ್ತಿರುವ ಬಹುತೇಕರಿಗ ಆದಂತೆ... ಅಂದರೆ ಇಲ್ಲಿ ಕವಿಯ ಭಾವ ಅವರದ್ದು ಮಾತ್ರವಾಗದ ನಮ್ಮೆಲ್ಲರದ್ದಾಗಿದೆ. ಬಾಲಣ್ಣ ಮತ್ತೊಂದು ಅದ್ಭುತ ಕವನವಿದು...!

sunaath said...

Excellent!