Thursday, January 13, 2011

ಕೆಂಪು ಸೊಬಗು

ಕೆಂಪು ಸೊಬಗುಬೆಳ್ಳಿ ಬೆಳಕಿಗೆ ಅರಳುವ ಕೆಂಪು ಗುಲಾಬಿಯ ಪಕಳೆಗಳಿಗೆ ಮುತ್ತಿಟ್ಟ

ಇಬ್ಬನಿಯ ಹನಿಗಳು

ಮಾತಾಡಿಕೊಳ್ಳುತ್ತಿದ್ದವು

ಮೇಲೆ ಅರಳುವ ಸೂರ್ಯ ಕೆಂಪೋ

ಹಸಿರು ಗಿಡದ ಮುಳ್ಳಿನೆಡೆಯಿಂದ ಅರಳುವ ಈ ಗುಲಾಬಿ ಕೆಂಪೋ

ಮತ್ತೆ ಮಥಿಸಿದವು ತಮ್ಮೊಳಗಿನ ವಿಚಾರಗಳೂ

ಮೂಡಣದ ಮೋಡಗಳಲ್ಲೂ ಕೆಂಪು ಕಳೆಯನ್ನು ಮೂಡಿಸಿವೆಯೆಂದು

ರವಿಕಿರಣದ ಅರಿವಿಗೆ ಬಂದ ಆ ಕೆಂಪು ಪಕಳೆಗಳು

ಅರಳುತ್ತಾ ನಗುತ್ತಿದ್ದವು

ಹನಿಗಳಾಗಿದ್ದ ಇಬ್ಬನಿ ಕರಗಿ ಕರಗಿ

ಬಿಂದುವಾಗಿ ಬೆಳ್ಳಿ ಬೆಳಕಿನಲ್ಲಿ ಲೀನವಾಯಿತೋ

ಗುಲಾಬಿಯ ಕೆಂಪು ಪಕಳೆಗಳ ನಗುವಿನಲ್ಲಿ ಲೀನವಾಯಿತೋ


ಅರಳಿ ನಿಂತ ಗುಲಾಬಿಗಳಾದರೋ

ಸಂಜೆ ಮುಳುಗುವ ಸೂರ್ಯ

ಬೀರಿದ ಕೆಂಪು ಬಾನಿಗೆ ತಾವೇ ಬಣ್ಣ ಬಳಿದೆವೆನ್ನಲಿಲ್ಲ
ಮುಂದಿನೆರಡು ದಿನವಾದರೂ

ಅರಳಿಯೇ ನಿಂತವು

ಮುಂಜಾನೆಯ ಇಬ್ಬನಿಗಳ ಹನಿಗಳು

ಎಂದಿನಂತೆ ಅರಳಿ ನಿಂತ

ಪಕಳೆಗಳ ಕೆಂಪು ಬಣ್ಣ ಮತ್ತು

ಸೂರ್ಯೋದಯದ ಕೆಂಪು ಬಣ್ಣದ ಕುರಿತು

ವಿಚಾರ ವಿಮರ್ಶೆ ಮಾಡುತ್ತಿದ್ದವು


ಸೂರ್ಯಾಸ್ತದ ಆ ಕೆಂಪು ಸೊಬಗು

ಈ ಗುಲಾಬಿಗಳಿಗಷ್ಟೇ ಗೊತ್ತು