Thursday, November 11, 2010

ಬಂದು ಹೋದ ಒಬಾಮ

ಜ್ಯೂನಿಯರ್ ಬರಾಕ್ ಹುಸೈನ್ ಒಬಾಮ,
ನೀನು ಬರುವಾಗ ನಾವು ದೀಪಾವಳಿ ಹಬ್ಬದ ಸಡಗರದಲ್ಲಿದ್ದೆವು. ಪಟಾಕಿ ಸುಡುವುದು ಬೇಡವೆಂದು ಗೊತ್ತಿದ್ದರೂ, ಪಟಾಕಿಯಿಲ್ಲದ ದೀಪಾವಳಿ ಎಂತದ್ದು ಎಂದು ಮಕ್ಕಳೊಂದಿಗೆ ದೊಡ್ಡವರೂ ಪಟಾಕಿ ಅಂಗಡಿಗೆ ಹೋಗಿದ್ದೆವು. ನಮ್ಮ ನಮ್ಮ ಯೋಗ್ಯತೆಗನುಸಾರ ಕನಿಷ್ಟ ಒಂದು ದಿನದ ಸಂಬಳದಷ್ಟಾದರೂ ಪಟಾಕಿ ಖರೀದಿಸಿದ್ದೆವು. ನೀನು ಮಿಶೆಲ್ ಜತೆ ಏರ್ ಫೋರ್ಸ್ ಒನ್ ನಿಂದ ಮುಂಬಯಿಯಲ್ಲಿ ಇಳಿಯುವುದನ್ನು ಲೈವ್ ನೋಡಿದ್ದೆವು. ನಿನ್ನಷ್ಟೇ ಸಡಗರ ಸಂಭ್ರಮ ನಾವೂ ಪಟ್ಟಿದ್ದೆವು. ಮುಂಬಯಿ, ತಾಜ್ ಹೋಟೆಲ್ ನಮಗೆ ನಿನಗಿಂತಲೂ ಹೆಚ್ಚು ನೆನಪುಗಳು. ಗೇಟ್‌ವೇ ಆಫ್ ಇಂಡಿಯದಲ್ಲಿ ಅಪ್ಪಲಿಸುವ ಅರಬ್ಬೀ ಸಮುದ್ರದ ತೆರೆಗಳಂತೆ ಅವು ನಮ್ಮ ಮನದೊಳಗೆ ಅಪ್ಪಲಿಸುತ್ತಿದ್ದವು. ಛೇ ! ಅದು ಬಿಟ್ಟು ಬಿಡೋಣ.
ನೀನು ಉದ್ಯಮಿಗಳೊಂದಿಗೆ ಆಡಿದ ಮಾತುಗಳು ನಮ್ಮನ್ನು ಪುಲಕಿತಗೊಳಿಸಿದವು. ನಮಗೆ ಗೊತ್ತಿದೆ ನಿನ್ನ ಎದೆಯೊಳಗಿನ ಡವ ಡವ. ಅಮೇರಿಕಾದಲ್ಲಿ ನಿನ್ನ ವಿರೋಧ ಪಕ್ಷದವರಾದ ರಿಪಬ್ಲಿಕನರು ಚುನಾವಣೆಯಲ್ಲಿ ಮೇಲುಗೈಯನ್ನು ಪಡೆಯುತ್ತಿದ್ದರು. ಮಿಡ್ ವೇ ಕರೆಕ್ಷನ್ ನಿನಗೂ ಅಗತ್ಯ. ಭಾರತ ನಿಮ್ಮಲ್ಲಿನ ಐವತ್ತರಿಂದ ಅರುವತ್ತು ಸಾವಿರ ಜನರಿಗೆ ಉದ್ಯೋಗ ನೀಡಬಹುದು ಎಂದು ಜನರಿಗೆ ಹೇಳಿದ ಮೇಲೆ ನಮಗೇನು ಉಳಿಯಿತು ಎಂದು ನಾವು ಯೋಚಿಸುತ್ತಿದ್ದೇವು. ಜಾಣ ನೀನು ಎಂದು ನಾವಂದುಕೊಂಡಿದ್ದು ಸರಿ. ನಮ್ಮನೇ ಹೊಗಳಿ ಬಿಟ್ಟೆಯಲ್ಲಾ. ಲೈವ್ ಟಿವಿ ನೋಡುವ ಮಂದಿ, ಪತ್ರಿಕೆ ಓದುವ ಮಂದಿ, ಇಂಟರ್ ನೆಟ್ ಜಾಲಿಸುವ ಮಂದಿ ನಿನ್ನ ಮಾತಿನ ಮೋಡಿಗೆ ಮರುಳಾದೆವು ಮಾರಾಯ. ನಾವು ಎಮರ್ಜಿಂಗ್ ದೇಶವಲ್ಲ ಅದಾಗಲೇ ಎಮರ್ಜ್ ಆಗಿದ್ದೇವೆ ಎಂದಾಗ ಶೇಖರ ಎಸ್ಸೆಸ್ಸೆಲ್ಸಿಯಲ್ಲಿ ನಲ್ವತ್ತೆಂಟು ಪರ್ಸೆಂಟ್ ಪಡೆದು ಊರಿಡೀ ಮಿಠಾಯಿ ಹಂಚಿದ ನೆನಪಾಯಿತು.
ನಾವು ಅಂದರೆ ಮಾಧ್ಯಮವನ್ನು ಅರೆದು ತಿನ್ನುವ ಮಂದಿ ಈಗ ಸ್ವಲ್ಪ ಹೆಚ್ಚು ಆತ್ಮವಿಶ್ವಾಸದಿಂದ ಇದ್ದೇವೆ. ನಿನ್ನ ಮಾತುಗಳನ್ನೇ ಮೆಲುಕು ಹಾಕುತ್ತಿದ್ದೇವೆ. ಸಂಸದ್ ಭವನದೊಳಗಿನ ನಿನ್ನ ಭಾಷಣ ಲೈವ್ ನೋಡಿದ್ದೇ ಅಲ್ಲದೇ ಮತ್ತೆ ಮತ್ತೆ ತೋರಿಸುವ ಚಾನೆಲ್‌ಗಳನ್ನು ರಿಮೋಟ್ ಮೂಲಕ ಬದಲಿಸಿ ಬದಲಿಸಿ ನೋಡಿದ್ದೆ ಅಲ್ಲದೇ ಇನ್ನೊಮ್ಮೆ ನೋಡಲೆಂದು ಯೂ ಟ್ಯೂಬ್ ಗೂ ಹೋಗುತ್ತಿದ್ದೇವೆ. ಎನ್‌ಡಿಟಿವಿ ವೆಬ್ ಸೈಟ್ ನೀನು ಭಾಷಣ ಮುಗಿಸುವುದರೊಳಗೆ ನಿನ್ನ ಭಾಷಣದ ಪ್ರತಿಯನ್ನು ನಮಗೆಲ್ಲಾ ನೀಡಿತ್ತು. ನಿನ್ನ ಭಾಷಣದ ಕನ್ನಡ ಪ್ರತಿಯನ್ನು ಕೂಡ ನಾವು ಕಂಡಿದ್ದೇವೆ ಮರುದಿನದ ಪತ್ರಿಕೆಗಳಲ್ಲಿ. ನಿನ್ನ ನಿರರ್ಗಳ ಟೆಲಿಪ್ರಾಂಪ್ಟ್ ಭಾಷಣ ನಿಜಕ್ಕೂ ಇತ್ತೀಚಿನ ದಿನಗಳಲ್ಲಿ ಕೇಳಿದ ಅತ್ಯುತ್ತಮ ಭಾಷಣವಾಗಿತ್ತು.
ನಮ್ಮ ದೇಶದ ರಾಜಕಾರಣಿಗಳು ಠಾಗೋರರನ್ನು, ವಿವೇಕಾನಂದರನ್ನು ಮರೆತು ಹಲವು ದಶಕಗಳೇ ಸಂದವು. ನಿನ್ನ ಬಾಯಲ್ಲಿ ನಮ್ಮ ದೇಶದ ಗಾಂಧಿ, ಅಂಬೇಡ್ಕರ್ ಹೆಸರು ಬಂದಾಗ ನಮಗೆಲ್ಲಾ ಪುಳಕವುಂಟಾಯಿತು. ನೀನು ಮತ್ತು ಮಿಶೆಲ್. ಅಬ್ಬಾ ಅದೆಂತಹ ದಂಪತಿಗಳು ನೀವು. ಮದುವೆ ಮುರಿಯುತ್ತಿರುವ ನಮ್ಮ ಸಮಾಜಕ್ಕೆ ನಿಮ್ಮೊಳಗಿನ ಒಲವು, ಗೌರವ ಆದರ್ಶವಾಗಿತ್ತು.
ಮೂರೇ ದಿನ ನೀನು ಬಂದು ಹೋದರೂ ಲೈವ್ ಟಿವಿ, ಪತ್ರಿಕೆ, ಅಂತರ್ಜಾಲ ಮೂಲಕ ನಿನ್ನ ಬೆನ್ನು ಬಿದ್ದ ನಾವು ಖಾಲಿ ಖಾಲಿ ಆಗಿದ್ದೇವೆ. ದೀಪಾವಳಿ ಹಬ್ಬ ಈ ಸಲ ಬಹಳ ಗೌಜಿಯಾದುದು ನಿನ್ನಿಂದಲೇ. ಹಬ್ಬ ಮುಗಿದ ನಂತರದ ನಿರಾಳತೆ ನಮ್ಮನ್ನು ಕಾಡುತ್ತಿದೆ.
ಕಾಮನ್ ವೆಲ್ತ್ ಗೇಮ್ಸ್ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸುರೇಶ್ ಕಲ್ಮಾಡಿಯನ್ನು ಗೇಲಿ ಮಾಡುತ್ತಿದ್ದ, ಆದರ್ಶ ಕಟ್ಟಡದಡಿಯಲ್ಲಿ ಕಾರ್ಗಿಲ್ ಯೋಧರನ್ನು ಹುಡುಕುತ್ತಿದ್ದ ನಮಗೆ ನಿನ್ನ ಆಗಮನ ರಿಯಾಲಿಟಿ ಷೋ ನಡುವೆ ಬರುವ ಕೊಕಾ ಕೋಲಾದ ಜಾಹೀರಾತಿನಂತಿತ್ತು. ಆಗಾಗ ಬರುತ್ತಿರು ಎನ್ನಲು ಭಾರತವೇನೂ ನಿನ್ನ ಮಾವನ ಮನೆಯಲ್ಲ. ನಾವು ಎಮರ್ಜ್ ಆದರೂ ನಿನ್ನ ಸಮಾನಕ್ಕೆ ಎಮರ್ಜ್ ಆಗಿದ್ದೇವೆ ಎಂದು ನೀನಂದಿಲ್ಲ.
ಆದರೂ ನೀನು ಮತ್ತೊಮ್ಮೆ ಬಾ ಎನ್ನುತ್ತೇವೆ. ಬರುವಾಗ ಮಿಶೆಲ್ ಜತೆ ಮಾಲಿಯಾ ಮತ್ತು ನಟಾಶರನ್ನೂ ಕರೆದುಕೊಂಡು ಬಾ.
ಒಲವಿನಿಂದ
ಬಾನಾಡಿ

2 comments:

  1. ಅವರ ಸಿದ್ಧಾಂತಗಳೇನಾದರೂ ಇರಲಿ ದೀಪಾವಳಿಯಲ್ಲಿ ನಮ್ಮ ಅತಿಥಿಯಾಗಿ ಅವರು ನಮ್ಮೆಲ್ಲರನ್ನು ಖುಷಿಗೊಳಿಸಿದ್ದಾರೆ

    ReplyDelete
  2. "ನಮಗೆ ನಿನ್ನ ಆಗಮನ ರಿಯಾಲಿಟಿ ಷೋ ನಡುವೆ ಬರುವ ಕೊಕಾ ಕೋಲಾದ ಜಾಹೀರಾತಿನಂತಿತ್ತು. ಆಗಾಗ ಬರುತ್ತಿರು ಎನ್ನಲು ಭಾರತವೇನೂ ನಿನ್ನ ಮಾವನ ಮನೆಯಲ್ಲ."
    - ಸಕತ್ punch!

    ReplyDelete