Monday, November 29, 2010

ಖಜುರಾಹೋ ಪ್ರವಾಸ ಕಥನ - ಖಜ್ಜುಪುರದಲ್ಲಿ ಚಂಡೇಲಾ ರಾಜವಂಶ ಸ್ಥಾಪನೆ

ಹಿಂದಿಯ ಮೊದಲ ಕವಿ ಎಂದು ಗುರುತಿಸಿಕೊಂಡ ಚಂದ ಬರ್ದಾಯಿಯ ಕೃತಿ ಪೃಥ್ವಿರಾಜ್ ರಾಸೊ ಸುಮಾರು ಹತ್ತು ಸಾವಿರ ಛಂದಗಳ ಲಾವಣಿ ಕಾವ್ಯ. ಹನ್ನೆರಡನೇ ಶತಮಾನದಲ್ಲಿ ಚಂದ ಬರ್ದಾಯಿಯು ಪೃಥ್ವಿರಾಜ್ ಚೌಹಾಣನ ಆಸ್ಥಾನ ಕವಿಯಾಗಿದ್ದನು. ಪೃಥ್ವಿರಾಜ್ ರಾಸೋದ ಒಂದು ಭಾಗ ಮಹೋಬ ಖಾಂಡ. ಇದರಲ್ಲಿ ಮಧ್ಯಭಾರತವನ್ನು ಹತ್ತನೇ ಶತಮಾನದಿಂದ ಹನ್ನೆರಡನೇ ಶತಮಾನದ ವರೆಗೆ ಆಳಿದ ಚಂಡೇಲಾ ವಂಶದ ಸ್ಥಾಪಕ ರಾಜನ ಕಥೆಯನ್ನು ಒಂದು ಜಾನಪದ ಕಾವ್ಯವಾಗಿ ಹೇಳಲಾಗಿದೆ. ಒಂದು ದಂತಕತೆ ಎಂದೆನಿಸುವ ಚಂಡೇಲಾ ರಾಜವಂಶದ ಸ್ಥಾಪಕ ಚಂದ್ರವರ್ಮನ್‌ನ ಹುಟ್ಟಿನ ಕುರಿತಾದ ಕತೆಯು ತುಂಬಾ ರೋಚಕವಾಗಿದೆ.
ಉತ್ತರಭಾರತವನ್ನು ಆಳುತ್ತಿದ್ದ ಗಹಿರಾವಾರ ವಂಶದ ರಾಜ ಇಂದ್ರಜಿತ್ ಗಹಿರಾವಾರನ ರಾಜಮನೆತನದ ಬ್ರಾಹ್ಮಣ ಪುರೋಹಿತ ಹೇಮರಾಜ. ಕಾಶೀ ಪಟ್ಟಣದಲ್ಲಿದ್ದ ಹೇಮರಾಜ ಅತ್ಯಂತ ಸ್ನೇಹಶೀಲನಾಗಿದ್ದ. ತನಗೆ ಮಗಳೊಬ್ಬಳು ಹುಟ್ಟಿದಾಗ ಅವಳಿಗೆ ಹೇಮಾವತಿ ಎಂದು ಹೆಸರಿಟ್ಟ. ಅವಳು ರೂಪದಲ್ಲಿ ಅತ್ಯಂತ ಸುರಸುಂದರಿಯಾಗಿದ್ದಳು. ಅಂತೆಯೇ ಗುಣದಲ್ಲಿಯೂ ಆಕೆ ಶೀಲ ಶೋಭಿತೆಯಾಗಿದ್ದಳು. ದುರ್ದೈವದಿಂದ ಅವಳಿಗೆ ಇಂದ್ರನ ಶಾಪವೆರಗಿತು. ಹದಿನಾರನೇ ವಯಸ್ಸಿಗೆ ಅವಳು ವಿಧವೆಯಾದಳು.
ಅದೊಂದು ಗ್ರೀಷ್ಮ ಕಾಲದ ದಿನ. ಸೆಖೆಯಿಂದ ಬಸವಳಿದ ಹೇಮಾವತಿಯು ತಣ್ಣನೆಯ ನೀರಿನಲ್ಲಿ ಮೀಯಲೆಂದು ಹೊರಗೆ ಹೋದಳು. ಕುಮುದ ಪುಷ್ಪಗಳ ಸಖ ಚಂದ್ರದೇವ ಆಗಸದಲ್ಲಿ ಬೆಳಗುತ್ತಿದ್ದ. ಕೆಳಗೆ ಅತಿಲೋಕ ಸುಂದರಿಯಾದ ಹೇಮಾವತಿಯು ಸ್ವಚ್ಚಂದ ನೀರಿನಲ್ಲಿ ತನ್ನ ತನುವಿನ ಬೇಗೆಯನ್ನು ತಣಿಸುತ್ತಾ ಮೀಯುತ್ತಿದ್ದಳು. ನೀರಿನಿಂದ ತೋಯುತ್ತಿದ್ದ ಹದಿಹರೆಯದ ಅತಿ ಸುಂದರಿ ಹೆಣ್ಣೊಬ್ಬಳನ್ನು ಕಂಡ ಚಂದ್ರದೇವನ ಚಿತ್ತ ಚಂಚಲಗೊಂಡಿತು. ಭೂಮಿ ಮೇಲಿನ ಈ ನೋಟವನ್ನು ಕಂಡು ಆತ ಉಲ್ಲಸಿತನಾದ. ಚಂದ್ರದೇವ ಧರೆಗಿಳಿದು ಬಂದ. ಸುರ ಸುಂದರಿ ಹೇಮಾವತಿಯನ್ನು ಅಪ್ಪಿಕೊಂಡ. ಚಂದ್ರದೇವನು ಆ ರಾತ್ರಿಯಿಡೀ ಹೇಮಾವತಿಯೊಂದಿಗೆ ಕಳೆದ. ತನ್ನನ್ನು ಸಂಪೂರ್ಣ ಅರ್ಪಿಸಿಕೊಂಡ ಹೇಮಾವತಿಗೆ ಆತ ಯಾರೆಂದು ಗೊತ್ತಿರಲಿಲ್ಲ. ತನ್ನ ಕೆಲಸ ಮುಗಿಸುತ್ತಲೇ ಚಂದ್ರದೇವನು ಸ್ವಸ್ಥಾನ ಸೇರಲು ಹೊರಡಲನುವಾದ. ಹೊರಗಿನ ಸೆಖೆಯ ಬೇಗೆಯನ್ನು ಕಳೆಯಲೆಂದು ಮೀಯಲು ಬಂದ ಹೇಮಾವತಿಯ ಒಳಗಿನ ದಾಹವು ತಣಿದಿತ್ತು. ಜತೆಗೆ ಕ್ಷಣವೊಂದರಲ್ಲಿ ನಡೆದ ಲೋಪದ ಅರಿವೂ ಉಂಟಾಯಿತು. ಚಂದ್ರದೇವನ ಹಿಂದೆ ಓಡುತ್ತಾ ಹೇಮಾವತಿಯು ಅವನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಳು. ನನ್ನನ್ನು ಭೋಗಿಸಿ ಕಳಂಕಗೊಳಿಸಿದ ಏ ಪುರುಷನೇ ನಿನಗೆ ನನ್ನ ಶಾಪವಿದೆ ಎಂದು ಬೆದರಿಸಿದಳು.
ಹೊರಡುತ್ತಿದ್ದ ಚಂದ್ರದೇವ ಹಿಂದೆ ತಿರುಗಿ ಎಲೇ ಮದನಾಂಗಿ, ನಮ್ಮ ಪಾಪಕ್ಕೆ ನೀನು ನನಗೆ ಶಾಪ ನೀಡಬೇಡ. ನಿನ್ನೊಡಲಲ್ಲಿ ಒಬ್ಬ ರಾಜನಾಗುವ ಪುತ್ರನನ್ನು ಪಡೆಯುವ ಸಂಭ್ರಮವನ್ನು ಅನುಭವಿಸು. ಆಚರಿಸು. ನಿನ್ನೊಡಲಲ್ಲಿ ಹುಟ್ಟುವ ಮಗು ರಾಜನಾಗುವನಲ್ಲದೇ ಅನೇಕ ದೇಶಗಳನ್ನು ಜಯಿಸಿ ಸಾವಿರ ದಿಕ್ಕುಗಳಲ್ಲಿ ತನ್ನ ಹೆಸರನ್ನು ಮೆರೆಸುತ್ತಾನೆ ಎಂದ. ಬುದ್ಧಿವಂತೆಯಾಗಿದ್ದ ಹೇಮಾವತಿ ಚಂದ್ರದೇವನಿಗೆ ಶಾಪ ಕೊಡುವ ವಿಚಾರವನ್ನು ಬಿಟ್ಟು ಬಿಟ್ಟಳು. ಆದರೆ ಸಮಾಜದಲ್ಲಿ ತಾನೊಬ್ಬ ಕಳಂಕಿತೆ ಎಂದು ದೂಷಣೆಗೆ ಒಳಗಾಗುವ ಭೀತಿಯಿಂದ ಕರುಬಿದಳು. ಏ ಚಂದ್ರದೇವ, ನೀನು ಏನೇ ಹೇಳಿದರೂ ನನ್ನ ಕಳಂಕವನ್ನು ಹೇಗೆ ತೊಳೆಯಲಿ? ನನ್ನ ಶರೀರದಲ್ಲಿ ಯೌವನ ತುಂಬಿ ತುಳುಕುತ್ತಿರುವುದು ನಿಜವಿರಬಹುದು. ಅದು ಸೌಂದರ್ಯದಿಂದ ಬಳುಕುತ್ತಿರುವುದು ನಿಜವಿರಬಹುದು. ಆದರೆ ಈ ದೇಹಕ್ಕೆ ದೊರೆಯಿಲ್ಲದ, ಗಂಡ ಸತ್ತ ವಿಧವೆ ನಾನು ಎಂದು ಚಂದ್ರದೇವನಲ್ಲಿ ಮೊರೆಯಿಟ್ಟಳು.
ಹದಿಹರೆಯದ ಮೊಹಕ ವಿಧವೆ ಹೇಮಾವತಿಯಲ್ಲಿ ಗರ್ಭಾಂಕುರಗೊಳಿಸಿದ ಚಂದ್ರದೇವ ಧೈರ್ಯದ ಮಾತುಗಳನ್ನಾಡಿದ. ಚೆಲುವೆಯೇ ಬೆದರಬೇಡ ನೀನು. ಕರ್ಣಾವತಿ ನದಿತೀರದಲ್ಲಿ ನಿನಗೊಬ್ಬ ವೀರ ಸುಕುಮಾರನು ಜನಿಸುವನು. ನಂತರ ನೀನು ಖಜ್ಜುಪುರಕ್ಕೆ ಹೋಗು. ಅಲ್ಲಿ ಅವನೊಂದಿಗೆ ದಾನಧರ್ಮ, ಯಜ್ಞಯಾಗಾದಿಗಳನ್ನು ನಡೆಸು. ಆ ವೀರಪುತ್ರನು ತನ್ನ ಚದುರಂಗ ಬಲದಿಂದ ಎಲ್ಲಾ ರಾಜರುಗಳನ್ನು ಸೋಲಿಸಿ ಮಹೋಬಾದ ರಾಜ್ಯಭಾರವನ್ನು ಮಾಡುವನು. ಕಬ್ಬಿಣವನ್ನು ಚಿನ್ನಗೊಳಿಸುವ ಪರಶುಮಣಿಯು ಅವನಿಗೆ ದೊರೆಯುವುದು. ಅವನು ಅನೇಕ ದೇವಾಲಯಗಳನ್ನು ಕಟ್ಟುವನು. ಸರೋವರ, ಕೆರೆಗಳನ್ನು ನಿರ್ಮಿಸುವನು. ಪವಿತ್ರವಾದ ಕಾಲಿಂಜರಿನಲ್ಲಿ ಒಂದು ಕೋಟೆಯನ್ನು ಕಟ್ಟಿಸುವನು ಎಂದು ಚಂದ್ರದೇವನು ಭವಿಷ್ಯವಾಣಿಯನ್ನು ನುಡಿದನು.
ಹೇಮಾವತಿಗೆ ಚಂದ್ರದೇವನ ಈ ಮಾತುಗಳಿಂದ ಸಮಾಧಾನವಾಗುವುದಿಲ್ಲ. ತಾನು ಅಂಟಿಸಿಕೊಂಡ ಈ ಕಳಂಕದಿಂದ ನಾನು ನನ್ನ ಸಮಾಜದಿಂದ ದೂಷಣೆಗೆ ಒಳಗಾಗುವುದು ಮಾತ್ರವಲ್ಲ, ಈ ಪಾಪ ನನ್ನನ್ನು ಮುಂದಿನ ಜನ್ಮದಲ್ಲೂ ಕಾಡಬಹುದು. ನನಗೆ ಹುಟ್ಟಲಿರುವ ಮಗುವನ್ನೇನೋ ನೀನು ಭುವನಪುತ್ರನನ್ನಾಗಿಸುವೆ. ಆದರೆ ನಾನು ಅವಮಾನದ ನರಕಯಾತನೆಯಲ್ಲಿ ನರಳಬೇಕಲ್ಲವೇ ಎಂದು ಚಂದ್ರದೇವನಲ್ಲಿ ಗೋಳಿಡುತ್ತಾಳೆ.
ಆಗ ಚಂದ್ರದೇವನು ಅವಳಿಗೆ ಕೆಲವು ಪ್ರಾಯಶ್ಚಿತ ಕರ್ಮಕಾರ್ಯಗಳನ್ನು ತಿಳಿಸಿದ. ನಿನ್ನ ಉದರದಲ್ಲಿ ಜನಿಸುವ ಆ ವೀರಪುತ್ರನು ತನ್ನ ಷೋಡಸ ಪ್ರಾಯದಲ್ಲಿ ಭಾಂಡ್ಯಯಜ್ಞವನ್ನು ಮಾಡುತ್ತಾನೆ. ಆಗ ನಿನ್ನ ಎಲ್ಲಾ ಪಾತಕಗಳೂ ಹರಿದು ಹೋಗುತ್ತವೆ ಎಂದ. ಎಲೇ ಸುಮನೋಹರಿ ಸುಂದರಿ ಹೇಮಾವತಿ, ನೀನಿನ್ನು ಯಾವುದಕ್ಕೂ ಅಳುಕಬೇಕಾಗಿಲ್ಲ. ನಿನ್ನ ಪುತ್ರ ಉನ್ನತ ಗುಣಗಳ ಕ್ಷತ್ರಿಯ ರಾಜನಾಗಿ ಮೆರೆಯುತ್ತಾನೆ ಎಂದು ಹೇಳಿ ಚಂದ್ರದೇವನು ಅಲ್ಲಿಂದ ಮರೆಯಾಗುತ್ತಾನೆ.
ವಿಧವೆಯೊಬ್ಬಳು ಗರ್ಭವತಿಯಾಗಿ ಸಮಾಜದಲ್ಲಿ ಬದುಕುವುದು ಅಸಹಜ ಎಂದು ಅರಿತು ಹೇಮಾವತಿಯು ಕಾಲಿಂಜರಿಗೆ ಬರುತ್ತಾಳೆ. ತೀರ್ಥಸ್ನಾನ ಮಾಡುತ್ತಾ ನಾಲ್ಕು ತಿಂಗಳುಗಳನ್ನು ಅಲ್ಲಿಯೇ ಕಳೆಯುತ್ತಾಳೆ. ಕಾಲಿಂಜಾರಿನಿಂದ ಆಕೆ ಒಂದು ಗ್ರಾಮಕ್ಕೆ ಬರುತ್ತಾಳೆ. ಅಲ್ಲಿಯ ಗ್ರಾಮ ಮುಖ್ಯಸ್ಥನ ಮನೆಯಲ್ಲಿದ್ದು ತನ್ನ ಮಗುವಿಗೆ ಜನ್ಮ ನೀಡುತ್ತಾಳೆ.
ವೈಶಾಖಮಾಸದ ಏಕಾದಶಿಯ ಸೋಮವಾರದಂದು ಜನಿಸಿದ ಆ ಸುಂದರ ಮಗು ಇನ್ನೊಂದು ಚಂದ್ರನಂತೆ ಶೋಭಿಸುತ್ತಿತ್ತು. ಮಗುವಿಗೆ ಚಂದ್ರವರ್ಮನ್ ಎಂದು ಹೆಸರಿಡಲಾಯಿತು. ದೇವಲೋಕದಲ್ಲಿ ಸುರತಿಯರು ಮಂಗಳಗಾನ ಹಾಡಿದರು. ಚಂದ್ರದೇವನೂ ತನ್ನ ಪುತ್ರನನ್ನು ನೋಡಲು ಬಂದ. ಹೇಮಾವತಿಗೆ ಹುಟ್ಟಿದ ಮಗನ ಭವಿಷ್ಯವಾಣಿಯನ್ನು ಮತ್ತೊಮ್ಮೆ ಪಠಿಸಿದ. ತನ್ನ ಪುತ್ರನು ಸ್ಥಾಪಿಸುವ ರಾಜವಂಶವು ವರ್ಮನ್ ಎಂಬ ಉಪನಾಮವನ್ನು ಎಲ್ಲಿಯವರೆಗೆ ಉಳಿಸಿಕೊಳ್ಳುತ್ತಾರೊ ಅಲ್ಲಿಯವರೆಗೆ ಅವನ ರಾಜವಂಶವೇ ರಾಜ್ಯಭಾರಮಾಡುವುದು ಎಂದು ಚಂದ್ರದೇವನು ಮತ್ತೊಂದು ವರವನ್ನು ನೀಡಿದ. ಚಂದ್ರದೇವನು ಮಹೋತ್ಸವವನ್ನೇ ಆಚರಿಸಿದ. ಸುರಗುರು ಬೃಹಸ್ಪತಿಯೇ ಮಗುವಿನ ಜನ್ಮ ಕುಂಡಲಿಯನ್ನು ಬರೆದ.
ಚಂದ್ರವರ್ಮನ್ ಹದಿನಾರರ ಹರೆಯಕ್ಕೆ ಬರುವ ಮೊದಲೇ ಅನೇಕ ಶಕ್ತಿಶಾಲಿ ಹಾಗು ಧೈರ್ಯದ ಕಾರ್ಯಗಳನ್ನು ಮಾಡಿ ತೋರಿಸಿದ. ಹುಲಿಯನ್ನು ಸಣ್ಣ ಕಲ್ಲಿನ ತುಂಡಿನಿಂದಲೇ ಕೊಂದ. ಬಲಿಷ್ಟ ಸಿಂಹವನ್ನು ಸಣ್ಣ ಚೂರಿಯಿಂದ ಮಣಿಸಿದ. ತನ್ನ ಮಗನ ಅದ್ಭುತ ಸಾಧನೆಗಳನ್ನು ನೋಡಿ ಹೇಮಾವತಿ ಆನಂದ ತುಂದಿಲಿತಳಾಗಿ ಚಂದ್ರನ ಕುರಿತಾದ ಮಂತ್ರ ಪಠಣೆಗಳನ್ನು ಮಾಡಲು ಆರಂಭಿಸಿದಳು. ಹದಿನಾರರ ಪ್ರಾಯ ತುಂಬುತ್ತಲೇ ಚಂದ್ರದೇವನು ಚಂದ್ರವರ್ಮನ್‌ಗಾಗಿ ಪರಶುಮಣಿಯನ್ನು ತಂದುಕೊಟ್ಟ. ಚಂದ್ರವರ್ಮನ್‌ನನ್ನು ಈ ಮಾನವಲೋಕದ ರಾಜಾಧಿರಾಜ ನೀನು ಎಂದು ಹರಸಿದ. ಚಂದ್ರವರ್ಮನ್‌ನ ಪಟ್ಟಾಭಿಷೇಕಕ್ಕೆ ದೇವಲೋಕದ ದೇವತೆಗಳೆಲ್ಲಾ ಧರೆಗಿಳಿದು ಬಂದರು. ಬೃಹಸ್ಪತಿ, ಕುಬೇರಾದಿಯಾಗಿ ಎಲ್ಲ ದೇವಗಣಗಳು ಖಜ್ಜುಪುರಕ್ಕೆ ಬಂದರು.
ಐದು ಪ್ರಹಾರಗಳನ್ನೊಳಗೊಂಡ ಎರಡು ಜನಪದಗಳ ರಾಜನಾಗಿದ್ದ ಚಂದ್ರವರ್ಮನ್ ಮೂರು ಸಾವಿರ ಸೈನಿಕರೊಂದಿಗೆ ರಾಜ್ಯ ವಿಸ್ತರಣೆಗಾಗಿ ದಂಡಿಗೆ ಹೊರಟನು. ಈ ಚಂಡೇಲಾ ರಾಜನ ಸಾಧನೆಗಳನ್ನು ಕೇಳಿದ ಕಾಶಿಯ ಗಹಿರಾವಾರನು ತನ್ನ ರಾಜ್ಯವನ್ನು ಚಂದ್ರವರ್ಮನ್‌ಗೆ ಬಿಟ್ಟು ಕೊಟ್ಟು ಓಡಿ ಹೋದನು.
ಚಂದ್ರವರ್ಮನ್ ಕಾಲಿಂಜಾರಿನಿಂದ ಪತ್ನಿ ಸಮೇತ ಖಜ್ಜುಪುರಕ್ಕೆ ಬಂದು ತನ್ನ ತಾಯಿ ಹೇಮಾವತಿಯ ಕಾಲ ಬಳಿ ಕುಳಿತ. ತಾಯಿಯು ತಾನು ಪಟ್ಟ ಬವಣೆಯನ್ನು ಮತ್ತು ಕಳಂಕಿತಗೊಂಡ ವಿಚಾರವನ್ನು ಮಗನಿಗೆ ವಿವರಿಸಿದಳು. ಚಂದ್ರದೇವನು ತಿಳಿಸಿದಂತೆ ಭಾಂಡ್ಯಯಜ್ಞವನ್ನು ನಡೆಸಲು ಕೇಳಿಕೊಂಡಳು. ಖಜ್ಜುಪುರದಲ್ಲಿ ಸುಂದರವಾದ ಕೆರೆ ಹಾಗೂ ತೋಟಗಳನ್ನು ನಿರ್ಮಿಸಿ ಅಲ್ಲಿ ಎಂಬತ್ತೈದು ದೇವಾಲಯಗಳನ್ನು ಕಟ್ಟಲು ಹೇಮಾವತಿಯು ತನ್ನ ಪುತ್ರ ಚಂದ್ರವರ್ಮನ್‌ನನ್ನು ಕೇಳಿಕೊಂಡಳು.
ವೀರಪುತ್ರ ಚಂದ್ರವರ್ಮನ್ ತನ್ನ ತಾಯಿಯ ಅಭಿಲಾಶೆಗಳನ್ನೆಲ್ಲಾ ಪೂರೈಸಲು ಯಜ್ಞವನ್ನು ಮಾಡಿದನು. ದೇವಾಲಯಗಳನ್ನು ನಿರ್ಮಿಸಲು ದೇವಲೋಕದಿಂದ ವಿಶ್ವಕರ್ಮನನ್ನೇ ಒಲಿಸಿ ತರಿಸಿದ. ವಿಶ್ವಕರ್ಮನು ನಾಲ್ಕೇ ಗಂಟೆಗಳಲ್ಲಿ ಎಂಬತ್ತೈದು ದೇವಾಲಯಗಳನ್ನು ನಿರ್ಮಿಸಿದ. ಯಜ್ಞಯಾಗಾದಿಗಳ ನಂತರ ಹೇಮಾವತಿಯ ಎಲ್ಲಾ ಪಾತಕಗಳು ಕಳೆದವು. ಪಾಪಮುಕ್ತೆಯಾದ ಹೇಮಾವತಿ ನೇರವಾಗಿ ಸ್ವರ್ಗಲೋಕವನ್ನು ಸೇರುವಳು. ಮಂಗಳ ಕಾರ್ಯಗಳೆಲ್ಲಾ ಮುಗಿದ ನಂತರ ಚಂದ್ರವರ್ಮನ್ ಮಹೋಬದಲ್ಲಿ ಹೊಸ ರಾಜಧಾನಿಯನ್ನು ನಿರ್ಮಿಸಲು ತೊಡಗುತ್ತಾನೆ.
ಬಾನಾಡಿ
© All Photographs copyright BALAKRISHNA NAIK D.

Sunday, November 28, 2010

ಖಜ್ಜುರಪುರದ ಮಿಥುನ ಶಿಲ್ಪಗಳು - ಖಜುರಾಹೋ ಪ್ರವಾಸ ಕಥನ

ಭಾರತದ ಶಿಲ್ಪ ಕೇಂದ್ರಗಳಲ್ಲಿ ಖಜುರಾಹೋಗೆ ಅದರದೇ ಆದ ಮಹತ್ವದ ಸ್ಥಾನವಿದೆ. ದೇಶವಿದೇಶದ ಪ್ರವಾಸಿಗರು ನೋಡಬೇಕು ಎಂದು ಕನಸು ಕಾಣುತ್ತಿರುವ ಸ್ಥಳಗಳಲ್ಲಿ ಇದೊಂದು. ಖಜುರಾಹೋ ಎಂದೊಡನೆ ಪ್ರವಾಸಿಗರು ಅಲ್ಲಿನ ದೇವಾಲಯಗಳಲ್ಲಿ ಅಲಂಕರಿಸಿರುವ ಪ್ರಣಯ ಶಿಲ್ಪಗಳನ್ನು, ಪ್ರಣಯಕೇಳಿಯಲ್ಲಿ ತೊಡಗಿರುವ ಮಿಥುನ ಶಿಲ್ಪಗಳನ್ನು ಕಾಣಬೇಕೆಂದು ಹಂಬಲಿಸುತ್ತಾರೆ. ಕಾಮವನ್ನು ಅನುಭವಿಸದೇ ಅದರ ಕುರಿತು ಆಲೋಚಿಸುವ ಹದಿಹರೆಯದವರಂತೆ ಪ್ರವಾಸಿಗರೂ ಖಜುರಾಹೋವನ್ನು ನೋಡಲು ಕಾತುರರಾಗಿರುತ್ತಾರೆ. ಕಲ್ಲುಕಲ್ಲುಗಳಲ್ಲೂ ಪ್ರೇಮಗೀತೆ ಕೇಳಿ ಬರುವ ಪ್ರಣಯ ಕಾವ್ಯದ ಉಗಮಸ್ಥಾನವಾದ ಖಜುರಾಹೋ ಶೃಂಗಾರಮಯ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ.
ವಾರಾಂತ್ಯದ ಎರಡು ದಿನಗಳ ರಜೆಯನ್ನು ಕಳೆಯಲು ನಾವು ಈ ಬಾರಿ ಖಜುರಾಹೋಗೆ ಹೋಗಬೇಕೆಂದು ನಿರ್ಧರಿಸಿದೆವು. ಬಹಳಷ್ಟು ದಿನಗಳಿಂದ ಖಜುರಾಹೋಗೆ ಪ್ರವಾಸ ಹೋಗಬೇಕೆಂಬುದು ನಮ್ಮ ಆಶಯವಾಗಿತ್ತು. ದೆಹಲಿಯಿಂದ ಖಜುರಾಹೋ ಸುಮಾರು ಆರು ನೂರು ಕಿಲೋ ಮೀಟರ್ ದೂರವಿದೆ. ಝಾನ್ಸಿಯಿಂದ ಖಜುರಾಹೋಗೆ ರಸ್ತೆ ಅಷ್ಟೊಂದು ಚೆನ್ನಾಗಿಲ್ಲ ಎಂಬ ಕಾರಣದಿಂದ ನಾವು ರೈಲು ಪ್ರಯಾಣವನ್ನು ಅವಲಂಬಿಸಿದೆವು.
ದೆಹಲಿಯ ನಿಜಾಮುದ್ದಿನ್ ರೈಲ್ವೇ ನಿಲ್ದಾಣದಿಂದ ಶುಕ್ರವಾರದ ಸಂಜೆ ಹೊರಡುವ ಯು.ಪಿ. ಸಂಪರ್ಕ್‌ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ತತ್ಕಾಲ್ ಸೇವೆಯ ಮೂಲಕ ನಮ್ಮ ಟಿಕೇಟುಗಳನ್ನು ಖರೀದಿಸಿಯಾಗಿತ್ತು. ಅದು ಉತ್ತರಪ್ರದೇಶದ ಮಾಣಿಕ್‌ಪುರ್ ಗೆ ಹೋಗುವ ರೈಲಾಗಿತ್ತು. ನಮ್ಮ ಸೀಟುಗಳು ಎಸಿ ತ್ರಿಟಯರ್ ಕೋಚ್ ಬಿ ಎರಡು. ರೈಲ್ವೇ ನಿಲ್ದಾಣಕ್ಕೆ ತಲುಪಿದ ನಾವು ಗಾಡಿಗಾಗಿ ಕಾದೆವು. ಗಾಡಿ ಬಂತು. ಗಾಡಿಯ ಎಂಜಿನ್‌ನಿಂದ ಎ ಒಂದು, ಎ ಎರಡು, ಬಿ ಒಂದು ಕೋಚ್‌ಗಳಿದ್ದರೂ ಬಿ ಎರಡು ಕೋಚ್ ಸಿಗದೆ ನಾವು ಗಾಬರಿಯಾದೆವು. ಬಿ ಎರಡು ಕೋಚ್ ಗಾಡಿಯ ಕೊನೆಯ ಭಾಗದಲ್ಲಿದೆ ಎಂದು ಗೊತ್ತಾಗಿ ಅಲ್ಲಿಗೆ ಹೋದೆವು. ಅದು ನೇರವಾಗಿ ಖಜುರಾಹೋಗೆ ಹೋಗುವ ಡಬ್ಬಿಯಾಗಿತ್ತು. ಮಹೋಬಾ ರೈಲು ನಿಲ್ದಾಣದ ನಂತರ ಕೆಲವು ಕೋಚ್ ಖಜುರಾಹೋಗೆ ಹೋದರೆ ಇನ್ನೊಂದು ಭಾಗ ಮಾಣಿಕ್‌ಪುರ್‌ಗೆ ಹೋಗುವುದು.
ಹಿಂದಿನ ದಿನದಿಂದಲೂ ಜ್ವರದಿಂದ ಬಳಲುತ್ತಿದ್ದ ನಾನು ಇನ್ನೂ ಚೇತರಿಸಿರಲಿಲ್ಲ. ರೈಲು ಗಾಡಿಯೊಳಗೆ ಕಂಬಳಿಹೊದ್ದು ಸುಮ್ಮನೆ ಕುಳಿತು ಕೊಂಡಿದ್ದೆ. ನಮ್ಮ ಸಹಪ್ರಯಾಣಿಕರು ಫ್ರಾನ್ಸ್‌ನವರಾಗಿದ್ದರು. ಎರಡು ಮಕ್ಕಳು, ಗಂಡ ಹೆಂಡತಿಯರ ಕುಟುಂಬ ಅದಾಗಿತ್ತು. ನಿರರ್ಗಳ ಫ್ರೆಂಚ್ ಭಾಷೆಯಲ್ಲಿ ಮಾತಾಡುತ್ತಿದ್ದ ಅವರ ಮಾತುಗಳೇನಾದರು ಅರ್ಥವಾಗುತ್ತಿದೆಯೇ ಎಂದು ನನ್ನ ಹಿರಿಯ ಮಗ ಚಿನುಗೆ ಕೇಳಿದೆ. ಆತ ಶಾಲೆಯಲ್ಲಿ ಈ ವರ್ಷದಿಂದ ಫ್ರೆಂಚ್ ಕಲಿಯುತ್ತಿದ್ದಾನೆ. ಅವನಿಗೂ ಅರ್ಥವಾಗುತ್ತಿರಲಿಲ್ಲ. ಅವರು ನಮ್ಮನ್ನೂ ಸೇರಿಸಿ ಗಾಡಿಯೊಳಗೆ ಅವರ ಫೊಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ರಾತ್ರಿಯೂಟಕ್ಕೆ ಅವರು ಬ್ರೆಡ್ ತಿಂದು ನೀರು ಕುಡಿದರು. ನಾವೂ ನಮ್ಮೊಂದಿಗೆ ತಂದಿದ್ದ ಪೂರಿ ತಿಂದೆವು. ಎಲ್ಲರೂ ಬೇಗನೆ ನಿದ್ದೆ ಮಾಡಲು ತಯಾರಾದೆವು.
ಮುಂಜಾನೆಯ ಹೊತ್ತಿಗೆ ನಮಗೆ ಎಚ್ಚರವಾದಾಗ ನಾವು ಮಹೋಬ ರೈಲು ನಿಲ್ದಾಣದಲ್ಲಿದ್ದೆವು. ಅಲ್ಲಿಂದ ಖಜುರಾಹೋಗೆ ಸುಮಾರು ಒಂದು ಗಂಟೆಯ ಪ್ರಯಾಣ. ಇಬ್ಬನಿಯಿಂದ ತೋಯ್ದ ಗಿಡಮರಗಳು ಬೆಳಗಿನ ಬಿಸಿಲಿಗೆ ಹೊಳೆಯುತ್ತಿದ್ದವು. ಖಜುರಾಹೋ ನಿಲ್ದಾಣ ಹೊಸದಾಗಿತ್ತು. ಅಲ್ಲದೇ ಮಾಮೂಲಿ ನಿಲ್ದಾಣಗಳಂತೆ ಬಹಳ ಜನಜಂಗುಳಿಯಿರಲಿಲ್ಲ. ಎಲ್ಲರೂ ಆರಾಮವಾಗಿ ಇಳಿಯುತ್ತಿದ್ದೆವು. ವಿಶಾಲವಾದ ರೈಲ್ವೆ ನಿಲ್ದಾಣ ನಮ್ಮನ್ನು ಮಧ್ಯಪ್ರದೇಶದ ಈ ಹಳ್ಳಿ ಮೂಲೆಗೆ ಸ್ವಾಗತಿಸುತ್ತಿತ್ತು. ವಿಸ್ತಾರವಾದ ಪ್ರದೇಶವನ್ನು ರೈಲ್ವೇವಿಭಾಗವು ತನ್ನದಾಗಿಸಿ ಮುಂದೆ ಈ ನಿಲ್ದಾಣದ ವಿಸ್ತರಣೆಗೆ ಸಾಕಾಗುವಷ್ಟು ಜಾಗವಿದೆ.
ರೈಲ್ವೇ ನಿಲ್ದಾಣದಿಂದ ಹೊರಬಂದ ನಾವು ನಗರಕ್ಕೆ ಹೋಗಲು ಅಲ್ಲಿನ ರಿಕ್ಷಾವೊಂದನ್ನು ನಿಗದಿಪಡಿಸಿದೆವು. ಅದೇ ಅಟೋದವನು ನಮ್ಮನ್ನು ದೇವಾಲಯಗಳನ್ನೆಲ್ಲಾ ಸುತ್ತಾಡಿಸುವೆನೆಂದು ಹೇಳಿದ. ಸರಕಾರದಿಂದ ಅಂಗೀಕೃತ ದರಪಟ್ಟಿಯನ್ನೂ ನಮ್ಮ ಮುಂದಿಟ್ಟ. ನಗರದಲ್ಲಿ ನಮಗೆ ತಂಗಲು ಹೋಟೆಲೊಂದನ್ನು ಅವನ ಮೂಲಕವೇ ನಾವು ಹುಡುಕಲಾರಂಭಿಸಿದೆವು. ನಾವು ಹೋದ ದಿನ ಮಧ್ಯಪ್ರದೇಶದ ಮುಖ್ಯಮಂತ್ರಿಯವರು ಒಂದು ಸಮಾವೇಶಕ್ಕೆ ಖಜುರಾಹೋಗೆ ಆಗಮಿಸಿದ್ದರು. ಹಾಗಾಗಿ ಸಮಾವೇಶಕ್ಕೆ ಬಂದ ಜನಗಳಿಂದ ಹಾಗೂ ಪ್ರವಾಸಿಗರಿಂದ ಎಲ್ಲಾ ಹೋಟೆಲುಗಳು ತುಂಬಿದ್ದವು. ನಾವು ನೋಡಿದ ಕೆಲವು ಹೋಟೆಲುಗಳು ತಂಗಲು ಅರ್ಹವಾಗಿರಲಿಲ್ಲ. ಒಂದೆರಡು ಹೋಟೆಲುಗಳು ಚೆನ್ನಾಗಿದ್ದರೂ ಅವುಗಳಲ್ಲಿ ಖಾಲಿ ಕೋಣೆಗಳಿರಲಿಲ್ಲ. ಕೊನೆಗೆ ಹೋಟೆಲ್ ಲೇಕ್‌ವ್ಯೂನಲ್ಲಿ ನಾವು ತಂಗಿದೆವು.
ನಾವು ನಿಂತ ಹೋಟೆಲಿನಿಂದ ಹೊರಬಂದು ಬೆಳಗಿನ ಉಪಾಹಾರಕ್ಕೆ ಒಳ್ಳೆಯ ರೆಸ್ಟಾರೆಂಟ್ ಎಲ್ಲಾದರೂ ಇದೆಯಾ ಎಂದು ನೋಡುತ್ತಿದ್ದೆವು. ನಮ್ಮ ಹೋಟೆಲ್‌ನ ಪಕ್ಕದಲ್ಲಿದ್ದ ಸ್ಥಳೀಯರೊಬ್ಬರು ಅಲ್ಲೇ ಹತ್ತಿರವಿದ್ದ ಮದರಾಸು ಕಾಫೀ ಹೌಸ್ ಅನ್ನು ತೋರಿಸಿದರು. ಅಲ್ಲಿ ನಿಮಗೆ ಇಡ್ಲಿ, ದೋಸೆ ಸಿಗಬಹುದು ಎಂದು ಹೇಳಿದರು. ನಮ್ಮನ್ನು ನೋಡಿಯೇ ಅವರು ನಮ್ಮನ್ನು ದಕ್ಷಿಣ ಭಾರತೀಯರೆಂದು ಗುರುತಿಸಿರಬೇಕು. ದಿನಾ ತಿನ್ನುವ ದೋಸೆ ಇಡ್ಲಿಗಿಂತ ಇಲ್ಲೇ ಸ್ಥಳೀಯ ತಿಂಡಿಯೇನಾದರೂ ಸಿಗುವುದೇ ಎಂದು ನಾವು ಹುಡುಕ ಹೊರಟೆವು. ಅಂತಹ ರೆಸ್ಟಾರೆಂಟುಗಳ್ಯಾವುದೂ ನಮಗೆ ದೊರಕಲಿಲ್ಲ.
ಪಶ್ಚಿಮ ಗುಂಪಿನ ದೇವಾಲಯಗಳ ಎದುರೇ ಇದ್ದ ಹೋಟೆಲ್ ಸಿದ್ಧಾರ್ಥದ ಟೆಂಪಲ್ ವ್ಯೂ ಗೆ ಹೋದೆವು. ಅಲ್ಲಿ ಸ್ಥಳೀಯ ತಿಂಡಿಗಳಿಗಿಂತ ಅಲ್ಲಿದ್ದುದು ಕಾಂಟಿನೆಂಟಲ್ ತಿಂಡಿಗಳು. ನಾವೂ ಬ್ರೆಡ್ ಮತ್ತು ಮೊಟ್ಟೆಯನ್ನೇ ಆರ್ಡರ್ ಮಾಡಬೇಕಾಯಿತು. ಆಲ್ಲಿಯ ಸರ್ವರ್ ಗಳ ಸೇವೆ ನೋಡಿದಾಗ ನಮಗೆ ಬೆಳಗಿನ ಉಪಾಹಾರಕ್ಕೆ ಕನಿಷ್ಟ ಒಂದು ಗಂಟೆ ಹಿಡಿಯಬಹುದು ಎನಿಸಿತು. ನಾವು ಕುಳಿತು ಸುಮಾರು ಹತ್ತು ನಿಮಿಷಗಳ ನಂತರ ನಮ್ಮೆಡೆ ಆರ್ಡರ್ ತೆಗೆದುಕೊಳ್ಳಲು ಬಂದರು. ನಾವಾದರೋ ಆದಷ್ಟು ಬೇಗ ತಿಂಡಿ ಮುಗಿಸಿ ದೇವಾಲಯಗಳನ್ನು ಸುತ್ತುವ ಆತುರದಲ್ಲಿದ್ದೆವು. ರೆಸ್ಟಾರೆಂಟ್‌ನಲ್ಲಿ ತಿಂಡಿಗೆ ಕಾಯುತ್ತಿದ್ದರೂ ಕಿಟಿಕಿಯ ಮೂಲಕ ನಮಗೆ ದೇವಾಲಯ ಸಮೂಹದ ನೋಟ ಲಭಿಸುತ್ತಿತ್ತು. ವಿದೇಶಿ ಪ್ರವಾಸಿಗರು ಮುಂಜಾನೆಯ ಎಳೆ ಬಿಸಿಲಿನಲ್ಲಿ ದೇವಾಲಯದ ದೃಶ್ಯಗಳನ್ನು ಕ್ಯಾಮಾರದಲ್ಲಿ ಸೆರೆ ಹಿಡಿಯುತ್ತಿದ್ದರು.
ಬಹಳ ಒತ್ತಾಯದ ನಂತರ ನಮ್ಮ ಟೇಬಲ್‌ಗೂ ತಿಂಡಿ ಬಂತು. ತಿಂಡಿ ತಿಂದು ನಾವು ಹೊರ ಬಂದು ಗೊತ್ತು ಪಡಿಸಿದ ಅಟೋರಿಕ್ಷಾ ಎಲ್ಲಿದೆಯೆಂದು ಹುಡುಕುವಷ್ಟರಲ್ಲಿ ಅಟೋದವ ನಮ್ಮ ಹತ್ತಿರ ಬಂದು ನಿಂತ. ತಾನು ಬರಲಾಗುತ್ತಿಲ್ಲ. ನನ್ನ ಅಕ್ಕನ ಮಗ ಬಿಮ್ಮೋ ನಿಮ್ಮನ್ನು ದೇವಾಲಯ ಸುತ್ತಿಸಿ ತರುತ್ತಾನೆ ಎಂದ. ಆತ ಸ್ಥಳೀಯನಾಗಿದ್ದುದರಿಂದ ನಾವೇನು ಚಿಂತಿಸದೆ ಒಪ್ಪಿಕೊಂಡೆವು.
ಮಧ್ಯಪ್ರದೇಶದ ವಿಶಾಲವಾಗಿ ಹರಡಿರುವ ಪ್ರದೇಶದ ನಡುವೆ ಇದೆ ಖಜುರಾಹೋ. ನಡುವೆ ಸಣ್ಣ ಹಳ್ಳಿಗಳು. ಹಳ್ಳಿಗಳಿಂದ ಸ್ವಲ್ಪ ದೂರದಲ್ಲಿಯೇ ಎತ್ತರಕ್ಕೆ ಎದ್ದು ನಿಂತ ದೇಗುಲಗಳು. ಖಜುರಾಹೋ ದೇವಾಲಯಗಳನ್ನು ಮುಖ್ಯವಾಗಿ ಅವುಗಳಿರುವ ಪ್ರದೇಶಕ್ಕನುಗುಣವಾಗಿ ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ದೇವಾಲಯಗಳೆಂಬ ಗುಂಪುಗಳನ್ನು ಮಾಡಿದ್ದಾರೆ. ಖಜುರಾಹೋದಲ್ಲಿ ನಮ್ಮ ಪ್ರಯಾಣ ಮೊದಲು ಆರಂಭಗೊಂಡಿದ್ದು ದಕ್ಷಿಣ ಮತ್ತು ಪೂರ್ವ ಗುಂಪಿನ ದೇವಾಲಯಗಳನ್ನು ವೀಕ್ಷಿಸುವುದರೊಂದಿಗೆ. ದಕ್ಷಿಣ ಗುಂಪಿಗೆ ಸೇರಿದ ಚತುರ್ಭುಜ ದೇವಾಲಯವು ನಾವು ನೋಡಿದ ಮೊದಲ ದೇವಾಲಯವಾಗಿದ್ದುದರಿಂದ ಕುತೂಹಲ ಮತ್ತು ನಿರಾಶೆಗಳು ಒಟ್ಟಿಗೇ ಆಯಿತು. ಪಶ್ಚಿಮಾಭಿಮುಖವಾಗಿರುವ ಈ ವಿಷ್ಣು ದೇವಾಲಯದ ಗೋಡೆಗಳಲ್ಲಿ ಯಾವುದೇ ಮಿಥುನ ಶಿಲ್ಪಗಳಿರಲಿಲ್ಲ! ಶಿಖರ, ಗರ್ಭಗುಡಿ, ಅಂತರಾಳ, ಮಹಾಮಂಟಪಗಳು ಒಂದಕ್ಕೊಂದು ಸೇರಿಕೊಂಡು ಒಂದೇ ಅಕ್ಷದಲ್ಲಿ ನಿಂತಿವೆ. ವಿಶಾಲವಾದ ಜಾಗದಲ್ಲಿರುವ ಈ ದೇವಾಲಯವು ಚಿಕ್ಕ ಹಳ್ಳಿಯಲ್ಲಿ ಎದ್ದು ಕಾಣುತ್ತದೆ.
ಮುಂದುವರಿದ ನಾವು ಮುಂದೆ ನೋಡಿದ್ದು ಅರ್ಧ ಕಿಲೋಮೀಟರಿನಷ್ಟು ಸಮೀಪದಲ್ಲಿಯೇ ಇದ್ದ ದುಲ್ಹದೇವ ಮಂದಿರವನ್ನು. ಹನ್ನೆರಡನೇ ಶತಮಾನದಲ್ಲಿ ನಿರ್ಮಿಸಲಾದ ಈ ಶಿವ ದೇವಾಲಯವು ಪೂರ್ವಾಭಿಮುಖವಾಗಿದೆ. ದೇವಾಲಯದ ಹೊರಭಾಗದಲ್ಲಿ ಮೂರು ಸಾಲುಗಳಲ್ಲಿ ಶಿಲ್ಪ ಕೆತ್ತನೆಗಳಿವೆ. ಅತ್ಯಂತ ಮೇಲಿನ ಸಾಲುಗಳಲ್ಲಿ ಕೈಗಳಲ್ಲಿ ಆಯುಧ, ಹಾರ ಅಥವಾ ಸಂಗೀತದ ಉಪಕರಣಗಳನ್ನು ಹಿಡಿದುಕೊಂಡು ಹಾರಾಡುವ ಮೂರ್ತಿಗಳಿವೆ. ನಂತರದ ಸಾಲುಗಳಲ್ಲಿ ಹಯವದನ, ದಿಕ್ಪಾಲಕರು, ಶಿವಪಾರ್ವತಿಯರ ಶಿಲ್ಪ ಕೆತ್ತನೆಗಳಿವೆ. ಗರ್ಭಗುಡಿಯ ಒಳಗೆ ಶಿವಲಿಂಗವಿದೆ. ಈ ದೇವಾಲಯ ಖಜುರಾಹೋ ದೇವಾಲಯಗಳಲ್ಲಿ ಅತ್ಯಂತ ಆಧುನಿಕವಾದ ದೇವಾಲಯವಾಗಿದೆ.
ಈ ಎರಡು ದೇವಾಲಯಗಳನ್ನು ನೋಡಿದ ನಂತರ ನಾವು ನೇರವಾಗಿ ಪೂರ್ವ ಗುಂಪಿನ ದೇವಾಲಯಗಳನ್ನು ನೋಡಲು ಹೊರಟೆವು. ಸಣ್ಣ ಹಳ್ಳಿಯ ರಸ್ತೆಗಳಲ್ಲಿ ನಾವು ಕುಳಿತ ರಿಕ್ಷಾವು ಹಾರುತ್ತಾ ಓಡುತ್ತಾ ಕುಪ್ಪಳಿಸುತ್ತಾ ಹೋಗುತ್ತಿತ್ತು. ಎಮ್ಮೆಗಳ ಹಿಂಡುಗಳನ್ನು ಬಿಟ್ಟರೆ ರಸ್ತೆ ಹೆಚ್ಚಾಗಿ ಖಾಲಿಯೇ ಇತ್ತು. ನಮ್ಮಂತಹ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಕೆಲವು ರಿಕ್ಷಾಗಳು, ಕಾರುಗಳು ನಮಗೆ ಸಿಗುತ್ತಿದ್ದವಷ್ಟೇ.
ಪೂರ್ವ ಗುಂಪಿನ ದೇವಾಲಯಗಳ ಹತ್ತಿರ ಬರುತ್ತಿದ್ದಂತೆ ಹೊರಾಂಗಣದಲ್ಲಿ ಮಧ್ಯಪ್ರದೇಶದ ಕರಕುಶಲ ಸಾಮಾಗ್ರಿಗಳನ್ನು ಮಾರಾಟ ಮಾಡುವ ಮಳಿಗೆಗಳು ಎದುರಾದವು. ಹೊರಗಿನ ಆವರಣವನ್ನು ನೋಡುತ್ತಿದ್ದಂತೆ ಸಾಮಾನ್ಯ ಮಂದಿರಕ್ಕೆ ಬಂದಂತೆ ಕಂಡಿತು. ಕೆಲವು ಧರ್ಮಛತ್ರಗಳು, ಅಲ್ಲಿಗೆ ಬಂದವರು ಮತ್ತ್ತು ಸ್ಥಳೀಯರು ಅದೇನೊ ದೈನಂದಿನ ಚಟುವಟಿಕೆಗಳಲ್ಲಿ ಒಳಗೊಂಡಂತೆ ಕಂಡುಬಂತು. ಒಳಗೆ ಹೋಗುತ್ತಿದ್ದಂತೆ ನಮಗೆ ಜೈನ ಮಂದಿರಗಳ ಫಲಕ ಕಂಡಿತು. ಫಲಕವನ್ನು ದಾಟಿ ಮುಂದೆ ಹೋದಂತೆ ವಿದೇಶಿ ಪ್ರಯಾಣಿಕರ ಎರಡು ಮೂರು ಗುಂಪುಗಳಿದ್ದವು. ಆ ಗುಂಪಿನ ಜತೆ ಗೈಡ್‌ಗಳು ಅವರದೇ ಆದ ಜರ್ಮನಿ, ಫ್ರೆಂಚ್, ರಶ್ಯನ್ ಭಾಷೆಗಳಲ್ಲಿ ವಿವರಣೆ ನೀಡುತ್ತಿದ್ದರು. ಶಾಂತಿನಾಥ, ಪಾರ್ಶ್ವನಾಥ ಮತ್ತು ಆದಿನಾಥ ಮಂದಿರಗಳು ಒಂದೇ ಆವರಣದಲ್ಲಿವೆ. ಪಾರ್ಶ್ವನಾಥ ದೇವಾಲಯವು ಆವರಣದಲ್ಲಿರುವ ಅತ್ಯಂತ ದೊಡ್ಡ ದೇವಾಲಯವಾಗಿದೆ. ಇಲ್ಲಿನ ದೇವಾಲಯಗಳ ಹೊರಭಾಗದ ಶಿಲ್ಪ ಕೆತ್ತನೆಗಳು ಮನಮೋಹಕವಾಗಿವೆ. ಶಿಲ್ಪ ಕನ್ಯೆಯರು ಕಣ್ಣಿಗೆ ಕಾಡಿಗೆ ಹಚ್ಚುತ್ತಾ, ಕೈಗೆ ಬಳೆ ತೊಡುತ್ತಾ ತಮ್ಮನ್ನು ಅಂಕಾರಗೊಳಿಸುತ್ತಿದ್ದರು. ಈ ಪೂರ್ವದೇವಾಲಯ ಗುಂಪಿನಲ್ಲಿ ಜೈನ ದೇವಾಲಯಗಳಲ್ಲದೇ ಇನ್ನೂ ಕೆಲವು ದೇವಾಲಯಗಳಿವೆ. ಅವುಗಳಲ್ಲಿ ಕೆಲವನ್ನು ನಾವು ಸಂದರ್ಶಿಸಿದೆವು. ಅವುಗಳಲ್ಲಿ ಮುಖ್ಯವಾಗಿ ವಾಮನ ದೇವಾಲಯ, ಗಂಟೆ ದೇವಾಲಯ, ಜವರಿ ದೇವಾಲಯ, ಬ್ರಹ್ಮ ಮತ್ತು ಹನುಮಾನ್ ದೇವಾಲಯಗಳು ಸೇರಿವೆ. ಇತಿಹಾಸ, ವಾಸ್ತುಶಿಲ್ಪ, ಶಿಲ್ಪಕಲೆಯ ಆಸಕ್ತರಿಗೆ ಇಲ್ಲಿನ ದೇವಾಲಯಗಳು ಹಲವಾರು ಕುತೂಹಲಕಾರಿ ವಿಷಯಗಳನ್ನು ಹೊರಗೆಡಹುದು.
ದಕ್ಷಿಣ ಮತ್ತು ಪೂರ್ವ ಗುಂಪಿನ ದೇವಾಲಯಗಳನ್ನು ನೋಡಿ ಬಂದ ನಾವು ಬಹಳ ಮುಖ್ಯವಾದ ಪಶ್ಚಿಮ ಗುಂಪಿನ ದೇವಾಲಯಗಳನ್ನು ನೋಡಲು ಬಂದೆವು. ಒಂದೇ ಸಮುಚ್ಚಯದೊಳಗೆ ಹಲವಾರು ದೇವಾಲಯಗಳಿವೆ. ಈ ಸಮುಚ್ಚಯದೊಳಗೆ ಹೋಗಲು ಪುರಾತತ್ವ ವಿಭಾಗದ ಮೂಲಕ ಅಲ್ಲೇ ಇರುವ ಟಿಕೇಟು ಕೌಂಟರಿನಿಂದ ಟಿಕೇಟ್ ತೆಗೆದುಕೊಳ್ಳಬೇಕು. ಸಾಮಾನ್ಯ ಕ್ಯಾಮಾರಗಳನ್ನು ಒಳಗೆ ಕೊಂಡೊಯ್ಯಬಹುದಾದರೂ ಟ್ರೈಪಾಡ್ ಮತ್ತು ವಿಡಿಯೋ ಕ್ಯಾಮರಗಳಿಗೆ ವಿಶೇಷ ಅನುಮತಿಯನ್ನು ಪಡೆಯಬೇಕಾಗುತ್ತದೆ. ಸುಂದರ ಹುಲ್ಲು ಹಾಸು, ಒಂದು ದೇವಾಲಯದಿಂದ ಇನ್ನೊಂದು ದೇವಾಲಯಕ್ಕೆ ನಡೆದು ಹೋಗಲು ವ್ಯವಸ್ಥಿತ ಕಾಲುದಾರಿ, ಕುಡಿಯುವ ನೀರಿನ ವ್ಯವಸ್ಥೆಗಳನ್ನೆಲ್ಲಾ ಇಲ್ಲಿ ಮಾಡಲಾಗಿದೆ. ಈ ಸಮುಚ್ಚಯದೊಳಗೆ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಮಾತ್ರ ಪ್ರವೇಶವಿದೆ. ದೇವಾಲಯಗಳ ಕುರಿತು ವಿಶೇಷ ಮಾಹಿತಿ ನೀಡುವ ಗೈಡ್‌ಗಳೂ ಇಲ್ಲಿ ಲಭ್ಯ.
ಪಶ್ಚಿಮ ಗುಂಪಿನ ದೇವಾಲಯ ಸಮೂಹಕ್ಕೆ ಪ್ರವೇಶಿಸುವಂತೆ ನಾವು ಎಡದಿಂದ ನಮ್ಮ ದೇವಾಲಯ ವೀಕ್ಷಣೆಯನ್ನು ಆರಂಭಿಸಿದರೆ ನಮಗೆ ಲಕ್ಷ್ಮಿ ಮತ್ತು ವರಾಹ ದೇವಾಲಯಗಳು ಸಿಗುತ್ತವೆ. ವರಾಹ ಮಂದಿರದಲ್ಲಿ ದೊಡ್ಡದಾದ ವರಾಹ (ಹಂದಿಯ) ಮೂರ್ತಿಯಿದೆ. ಅತ್ಯಂತ ಸುಂದರ ಕೆತ್ತನೆಯನ್ನು ಈ ಮೂರ್ತಿಯಲ್ಲಿ ಕಾಣಬಹುದು. ಅದರ ಎದುರುಗಡೆಗೆ ವಿಶಾಲವಾದ ಲಕ್ಷ್ಮಣ ದೇವಾಲಯವಿದೆ. ಇದು ಹತ್ತನೆ ಶತಮಾನದ ಆರಂಭದಲ್ಲಿ ನಿರ್ಮಿಸಿದ ದೇವಾಲಯವಾಗಿದೆ. ಇಲ್ಲಿಯ ಗೋಪುರಗಳಲ್ಲಿಯೂ ಖಜುರಾಹೋದ ವಿಶಿಷ್ಟ ಶಿಲ್ಪ ಕೆತ್ತನೆಗಳನ್ನು ಕಾಣಬಹುದು. ಸ್ವಲ್ಪವೇ ದೂರವಿದ್ದ ಕಂದರಿಯಾ ದೇವಾಲಯ ನಮ್ಮನ್ನು ಇಲ್ಲಿಂದಲೇ ಕರೆಯುವಂತಿತ್ತು.
ಹನ್ನೊಂದನೆ ಶತಮಾನದ ಆರಂಭದಲ್ಲಿ ನಿರ್ಮಿಸಲಾದ ಕಂದರಿಯಾ ಮಹಾದೇವ ದೇವಾಲಯವು ಅತ್ಯಂತ ದೊಡ್ಡದಾಗಿದೆ, ಸುಂದರವಾಗಿದೆ, ಮಾತ್ರವಲ್ಲ ಶಿಲ್ಪ ಕಲೆಯ ವಿನ್ಯಾಸದಿಂದಲೂ ಆಕರ್ಷಣೀಯವಾಗಿದೆ. ಮಿಥುನ ಶಿಲ್ಪಗಳನ್ನು, ಸುಂದರ ಸುರಕನ್ನೆಯರನ್ನು ಕೆತ್ತಿದ ಶಿಲ್ಪಿಗಳ ಕೌಶಲ್ಯತೆಯನ್ನು ಮೆಚ್ಚಬೇಕಾದುದೇ. ಇದೇ ದೇವಾಲಯದ ಅಡಿಪಾಯದ ಮೇಲೆ ಜಗದಂಬಾ ದೇವಾಲಯವೂ ಇದೆ. ಇವೆರಡರ ನಡುವೆ ಶಾರ್ದೂಲಾ ವಿಗ್ರಹವೊಂದಿದೆ. ಜಗದಂಬಾ ದೇವಾಲಯವು ಮಿಥುನ ಶಿಲ್ಪಗಳಿಂದ ಶೋಭಿಸುತ್ತಿದೆ. ಇದೇ ಸಾಲಿನಲ್ಲಿ ಸ್ವಲ್ಪ ದೂರದಲ್ಲಿ ಸೂರ್ಯ ದೇವಾಲಯವೆಂದೂ ಕರೆಯಲಾಗುವ ಮಂದಿರ, ಪಾರ್ವತಿ, ವಿಶ್ವನಾಥ, ನಂದಿ ದೇವಾಲಯಗಳೂ ಇವೆ. ಶಿಲ್ಪ ಸೌಂದರ್ಯವನ್ನು ಕಂಡ ಕಣ್ಣುಗಳು ಬಳಲದಿದ್ದರೂ ಕಾಲುಗಳು ಸುಸ್ತಾದವು. ಮುಖ್ಯ ದೇವಾಲಯಗಳನ್ನು ವಿಶೇಷ ಆಸಕ್ತಿಯಿಂದ ನೋಡಿದ ನಾವು ಉಳಿದ ದೇವಾಲಯಗಳನ್ನು ಮೇಲಿಂದ ಮೇಲಷ್ಟೇ ನೋಡಿದೆವು.

ಒಂದೆಡೆ ಗಂಡು ಮತ್ತು ಹೆಣ್ಣಿನ ಮೈಥುನದ ವಿವಿಧ ಭಂಗಿಗಳು, ಮಿಗಿಲಾದ ಕಾಮಸುಖವನ್ನು ಪಡೆಯುವ ಗುಟ್ಟನ್ನು ವಿವರಿಸುವ ವಾತ್ಸಾಯನನ ಕಾಮಸೂತ್ರದಂತಹ ಕೃತಿ. ಇನ್ನೊಂದೆಡೆ ಆ ಕೃತಿಯ ಅಕ್ಷರಗಳಿಗೆ ರೂಪ ಕೊಟ್ಟ ಈ ಶಿಲಾ ಸುರಸುಂದರಿಯರು. ಖಜುರಾಹೋ ಒಂದು ಅವ್ಯಕ್ತ ಅನುಭವ. ಶಿಲ್ಪವನ್ನು ಕಡೆದ ಶಿಲ್ಪಿಗಳ ಕಾರ್ಯ ಕೌಶಲ್ಯತೆಗೆ ನಾವು ನಿಬ್ಬೆರಗಾದೆವು. ಹತ್ತನೇ ಶತಮಾನದ ಚಂಡೇಲ ರಾಜವಂಶದ ರಾಜರು ನಿರ್ಮಿಸಿದ ದೇವಾಲಯಗಳಲ್ಲಿ ಮೈಥುನದ ವಿವಿಧ ಭಂಗಿಗಳ ಶಿಲ್ಪಗಳು ಒಂದು ಸಾವಿರ ವರ್ಷಗಳು ಕಳೆದರೂ ನೋಡುಗರನ್ನು ಆಕರ್ಷಿಸುತ್ತವೆ.
ಖಜುರಾಹೋದಲ್ಲಿನ ಮಿಥುನ ಶಿಲ್ಪಗಳು ದೇವಾಲಯಗಳನ್ನು ಅಲಂಕರಿಸಿರುವ ಕುರಿತು ದೇಶವಿದೇಶದ ವಿದ್ವಾಂಸರು ಅನೇಕ ರೀತಿಯ ಸಿದ್ದಾಂತ ಮತ್ತು ಟಿಪ್ಪಣಿಗಳನ್ನು ನೀಡಿದ್ದಾರೆ. ಇಲ್ಲಿ ಶಿಲ್ಪಿಗಳು ತಮ್ಮ ಕಲಾಪ್ರತಿಭೆಯನ್ನು ಮೆರೆದುದನ್ನು ಕಂಡಾಗ ಆಧುನಿಕ ಕಲಾವಿದರ ವಿವಾದಕ್ಕೆ ಒಳಗಾಗುವ ಕಲಾಕೃತಿಗಳು ಏನೂ ಅಲ್ಲ ಎಂಬಂತಹ ಭಾವನೆ ಬರುತ್ತದೆ. ಸುಮಾರು ಸಾವಿರ ವರ್ಷಗಳಷ್ಟು ಹಿಂದಿನ ಮುಕ್ತ ವಾತಾವರಣ ಕಲಾವಿದನಿಗೆ ಅದೆಷ್ಟು ಸಾಧ್ಯತೆಗಳನ್ನು ಒದಗಿಸಿಕೊಟ್ಟಿದೆ ಎಂದನಿಸುತ್ತದೆ. ಧಾರ್ಮಿಕ ಭಕ್ತಿ ಮತ್ತು ಲೌಕಿಕ ಕಾಮಗಳೆರಡೂ ಇಲ್ಲಿ ಮಿಲನಗೊಂಡು ಬದುಕು ಮತ್ತು ಸಮಾಜ ಬಂಧಮುಕ್ತವಾಗಿದೆ.
ದೇವಾಲಯಗಳನ್ನು ನೋಡಿ ದಣಿದಿದ್ದ ನಮಗೆ ಹಸಿವು ಆಗುತ್ತಿತ್ತು. ಖಜುರಾಹೋದಲ್ಲಿ ಪ್ರಸಿದ್ಧವಾಗಿರುವ ರಾಜಾ ಕೆಫೆಗೆ ಹೋಗಿ ನಾವು ಸರಳವಾದ ಉತ್ತರಭಾರತೀಯ ಊಟವನ್ನು ಮಾಡಿದೆವು. ನಂತರ ಹೋಟೆಲಿಗೆ ಹೋಗಿ ದಣಿವಾರಿಸಿಕೊಂಡೆವು.
ಸಂಜೆ ಹೊತ್ತಿಗೆ ನಾವು ಪಶ್ಚಿಮ ದೇವಾಲಯಗಳ ಗುಂಪಿನ ಪಕ್ಕದಲ್ಲಿದ್ದ ಕೆಲವು ಅಂಗಡಿಗಳಲ್ಲಿ ಶಾಪಿಂಗ್‌ಗೆ ಹೋದೆವು. ಮಧ್ಯಪ್ರದೇಶದ ಕರಕುಶಲ ಸಾಮಾನುಗಳು, ಬಟ್ಟೆ ಬರೆಗಳು ಧಾರಾಳವಾಗಿ ಇದ್ದರೂ ಅವುಗಳ ಬೆಲೆ ಕಡಿಮೆಯೇನಿರಲಿಲ್ಲ. ಪಶ್ಚಿಮ ದೇವಾಲಯ ಸಮೂಹದೊಳಗೆ ಸಂಜೆ ಏಳಕ್ಕೆ ನಡೆಯುವ ಸೌಂಡ್ ಎಂಡ್ ಲೈಟ್ ಶೋ ಗಾಗಿ ನಾವು ಕಾಯುತ್ತಿದ್ದೆವು. ಸೂರ್ಯಾಸ್ತವನ್ನು ನಾವು ಅಲ್ಲಿನ ಶಿವಸಾಗರ ಸರೋವರದ ಮುಂದೆ ನಿಂತು ಆನಂದಿಸಿದೆವು. ನಂತರ ಪ್ರೇಮಸಾಗರ ಸರೋವರದ ದಂಡೆಗೆ ಬಂದೆವು.
ಖಜುರಾಹೋದಲ್ಲಿರುವ ಸುಮಾರು ಹದಿನೆಂಟು ದೇವಾಲಯಗಳಲ್ಲಿ ಒಂದರಲ್ಲಿ ಮಾತ್ರ ಈಗ ಪೂಜೆ ನಡೆಯುತ್ತಿದೆ. ಅದೆಂದರೆ ಮಾತಾಂಗೇಶ್ವರ ದೇವಾಲಯ. ಅದು ಸಮುಚ್ಚಯದ ಹೊರಗಿದ್ದು ಭಕ್ತರಿಂದ ತುಂಬಿರುತ್ತದೆ. ಶಿವಲಿಂಗದ ಜತೆಗೆ ಇಲ್ಲಿ ಯೋನಿಯನ್ನೂ ಪೂಜಿಸುತ್ತಾರೆ ಎಂದು ಹೇಳುತ್ತಾರೆ. ಕತ್ತಲಾಗಿದ್ದುದರಿಂದ ನಾವು ಹೊರಗಿನಿಂದಲೇ ನೋಡಿ ಬಂದೆವು. ಇದೇ ದೇವಾಲಯದ ಸ್ವಲ್ಪ ದೂರ ಶಿವಸಾಗರ ಸರೋವರದ ಬದಿಗೇ ಚೌಸಟ್ ಯೋಗಿನಿಗಳ ಮಂದಿರವಿದೆ. ಅದು ಶಿಥಿಲಾವಸ್ಥೆಯಲ್ಲಿದೆ. ಕಾಳಿಯ ಬೆಂಗಾವಲಿಗಿರುವ ಅರುವತ್ತನಾಲ್ಕು ಯೋಗಿನಿಯರ ಈ ಮಂದಿರ ಸುಮಾರು ಕ್ರಿಸ್ತ ಶಕ ೯೦೦ ರಲ್ಲಿ ರಚಿತವಾಗಿದೆ ಎನ್ನುತ್ತಾರೆ. ತಂತ್ರವಿದ್ಯೆಯಲ್ಲಿ ತೊಡಗಿಸಿಕೊಂಡವರು ಈ ಯೋಗಿನಿಯರನ್ನು ಪೂಜಿಸುತ್ತಾರೆ. ಇಂತಹ ಚೌಸಟ್ ಯೋಗಿನಿಯರನ್ನು ದೇಶದ ಇತರೆಡೆಯೂ ನಾನು ಕಂಡಿದ್ದೇನೆ.
ಸೌಂಡ್ ಎಂಡ್ ಲೈಟ್ ಶೋ ಗಾಗಿ ಬಹಳಷ್ಟು ಪ್ರವಾಸಿಗರು ಕಾಯುತ್ತಿದ್ದರು. ಈ ಕಾರ್ಯಕ್ರಮ ಪ್ರವಾಸಿಗರಲ್ಲಿ ಬಹಳ ಜನಪ್ರಿಯ ಎಂದನಿಸಿತು. ಅದರ ಪ್ರವೇಶ ದರವು ದೇಶೀಯ ಪ್ರವಾಸಿಗರಿಗೆ ಒಂದಾದರೆ, ವಿದೇಶಿ ಪ್ರವಾಸಿಗರಿಗೆ ಹೆಚ್ಚಾಗಿತ್ತು. ಈ ಪ್ರದರ್ಶನದಲ್ಲಿ ಅಮಿತಾಬ್ ಬಚ್ಚನ್ ಅವರ ಧ್ವನಿಯನ್ನು ಉಪಯೋಗಿಸಲಾಗಿದೆ ಎಂದು ಹೊರಗೆ ಹಾಕಿದ ಬೋರ್ಡ್ ತಿಳಿಸುತ್ತಿತ್ತು. ಈ ಪ್ರದರ್ಶನವು ಸುಮಾರು ನಲ್ವತ್ತು ನಿಮಿಷಗಳಷ್ಟಿದ್ದು ಪ್ರತಿ ದಿನ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಒಂದೊಂದು ಪ್ರದರ್ಶನ ನಡೆಯುತ್ತದೆ. ಟಿಕೇಟು ತೆಗೆದುಕೊಂಡ ನಾವೆಲ್ಲ ಒಳಗೆ ಹೋದೆವು. ಸೊಳ್ಳೆಗಳು ನಮ್ಮನ್ನು ಸುತ್ತುವರಿಯುತ್ತಿದ್ದವು. ದೆಹಲಿಯಿಂದ ಬಂದ ಮಹಿಳೆಯೊಬ್ಬಳು ತನ್ನ ಮಕ್ಕಳಿಗೆ ಒಡಾಮಸ್ ಹಚ್ಚಳು ಹೇಳುತ್ತಿದ್ದುದನ್ನು ಕೇಳಿ, ಎಲಾ, ಇವರು ಬಹಳಷ್ಟು ತಯಾರಿಯಿಂದಲೇ ಬಂದಿದ್ದಾರಲ್ಲ ಅಂತನಿಸಿತು.
ಖಜುರಾಹೋದ ಕತೆಯನ್ನು ತಿಳಿಸುವ ಈ ಪ್ರದರ್ಶನದಲ್ಲಿ ಅಮಿತಾಬ್ ಬಚ್ಚನ್‌ನ ಸ್ವರದಲ್ಲಿ ಓರ್ವ ಶಿಲ್ಪಿಯ ಮೂಲಕ ಕತೆಯನ್ನು ಹೇಳಲಾಗುತ್ತದೆ. ಶಿಲ್ಪಿಯ ಸ್ವರ ಬಂದಾಗಲೆಲ್ಲಾ ನಮ್ಮಿಂದ ಸ್ವಲ್ಪ ದೂರದಲ್ಲಿ ಬೆಳಕು ಮೂಡಿ ವಿಶಿಷ್ಟ ಆಕೃತಿ ಮೂಡುತ್ತಿತ್ತು. ನಮ್ಮ ಕಿರಿಮಗ ಚೇತು ಅದನ್ನು ನೋಡಿ ಅಮಿತಾಬ್ ಬಚ್ಚನ್ ಅದು ಭೂತವೋ ಎಂದು ಕೇಳುತ್ತಿದ್ದ. ಅವನಿಗೆ ವಿವರಣೆ ಕೊಡಲು ಬಹಳ ಕಷ್ಟವಾಯಿತು. ಅದು ಮುರಿದು ಬಿದ್ದ ಮೂರ್ತಿಗಳನ್ನು ಒಂದೆಡೆ ಇರಿಸಿ ಅದಕ್ಕೆ ಬೆಳಕು ಮೂಡಿಸಿದ್ದರು. ಕತ್ತಲ ರಾತ್ರಿಯ ಆ ವಾತಾವರಣದಲ್ಲಿ ಕತೆಯ ಹಿನ್ನಲೆಯಲ್ಲಿ ಅದು ಬಹಳಷ್ಟು ವಿಶಿಷ್ಟವಾಗಿ ಕಾಣುತ್ತಿತ್ತು.
ಖಜುರಾಹೋದಲ್ಲಿ ಚಂಡೇಲಾ ರಾಜವಂಶದ ಸ್ಥಾಪನೆ ಕುರಿತಾದ ವಿಸ್ಮಯಕಾರಿ ಕತೆಯೊಂದು ದೊರೆಯಿತು. ಜನಪದೀಯ ಮೂಲದ ಈ ಕತೆಯನ್ನು ಇತಿಹಾಸಕಾರರು ಸ್ವೀಕರಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ. ಈ ಕತೆಯನ್ನು ನಿಮಗೆ ಮುಂದಿನ ಪುಟಗಳಲ್ಲಿ ನೀಡುವೆ. ಖಜುರಾಹೋದ ದೇವಾಲಯಗಳನ್ನು ಹತ್ತನೆ ಶತಮಾನದಲ್ಲಿ ನಿರ್ಮಿಸಲಾಗಿದ್ದರೂ ಅದು ಬಹಳಷ್ಟು ವರ್ಷ ನಿಗೂಢವಾಗಿ ಮಧ್ಯಪ್ರದೇಶದ ಅರಣ್ಯಗಳ ನಡುವೆ ಮರೆಯಾಗಿತ್ತು.
ಸಾವಿರದ ಎಂಟುನೂರ ಮೂವತ್ತೆಂಟನೇ ಇಸವಿಯ ಫೆಬ್ರವರಿ ತಿಂಗಳಲ್ಲಿ ಬೆಂಗಾಲ್ ಇಂಜಿನೀಯರಿಂಗ್‌ನ ಯುವ ಬ್ರಿಟಿಷ್ ಅಧಿಕಾರಿ ಕ್ಯಾಪ್ಟನ್ ಟಿ.ಎಸ್. ಬರ್ಟ್ ಕೆಲಸದ ನಿಮಿತ್ತ ಮಧ್ಯಭಾರತಕ್ಕೆ ಬಂದಿದ್ದ. ಅವನು ಹೋಗುತ್ತಿದ್ದ ಪಲ್ಲಕಿಯನ್ನು ಹೊರುತ್ತಿದ್ದ ಸ್ಥಳೀಯರು ಖಜುರಾಹೋ ಎಂಬ ಅದ್ಭುತ ಸ್ಥಳದ ಕುರಿತು ವಿವರಣೆ ನೀಡಿದರು. ಅವರು ವಿವರಿಸಿದ ಸ್ಥಳವನ್ನು ನೋಡದೇ ಹೋಗಲು ಬರ್ಟ್‌ನ ಮನಸ್ಸು ಕೇಳಲಿಲ್ಲ. ರಾತ್ರಿಯಿಡೀ ಪ್ರಯಾಣಿಸಿ ಮುಂಜಾನೆಯ ಹೊತ್ತಿಗೆ ಖಜುರಾಹೋ ಪ್ರದೇಶಕ್ಕೆ ಬಂದನು. ಹಳ್ಳಿಯಲ್ಲಿದ್ದ ದೇವಾಲಯಗಳನ್ನು ಕಂಡು ಇನ್ನಷ್ಟು ಕುತೂಹಲಿಗನಾಗಿ ದಿನವಿಡೀ ಖಜುರಾಹೋ ಹಳ್ಳಿಯನ್ನು ಸುತ್ತುತ್ತಾ ಇದ್ದ ಎಲ್ಲಾ ದೇವಾಲಯಗಳನ್ನು ನೋಡಲು ಹೋದನು. ಅರಣ್ಯದ ನಡುವೆ ಮರೆತು ಹೋಗಿದ್ದ ಈ ರಮ್ಯ ಮನೋಹರ ದೇವಾಲಯಗಳ ಖಜುರಾಹೋಗೆ ಪ್ರವಾಸಿಗರು ಬರಲು ಆರಂಭವಾಯಿತು. ವಿಮಾನ ನಿಲ್ದಾಣ, ಪಂಚತಾರಾ ಹೋಟೆಲ್‌ಗಳು ನಿರ್ಮಾಣಗೊಂಡು ಜಗತ್ತಿನಾದ್ಯಂತದಿಂದ ಭಾರತಕ್ಕೆ ಬರುವ ಕುತೂಹಲಿ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ ಖಜುರಾಹೋ.
ರಾತ್ರಿಯೂಟಕ್ಕೆ ನಾವಿದ್ದ ಹೋಟೆಲ್‌ನ ಅಡುಗೆಯವನಿಗೆ ಹೇಳಿ ಮಾಡಿಸಿದ ಸರಳ ಉತ್ತರ ಭಾರತೀಯ ಊಟವನ್ನು ಮಾಡಿ ಚಂಡೇಲ ರಾಜರ ಕತೆಯನ್ನು ಮೆಲುಕು ಹಾಕುತ್ತಾ ಮಲಗಿದೆವು.
ಮರುದಿನ ನಾವು ಹೊರಡುವ ಕಾರ್ಯಕ್ರಮವಿತ್ತು. ನಾನು ಮುಂಜಾನೆ ಬೇಗ ಎದ್ದು ಸೂರ್ಯೋದಯದ ಹೊತ್ತಿಗೆ ಪಶ್ಚಿಮ ದೇವಾಲಯಗಳ ಸಮೂಹಕ್ಕೆ ಕ್ಯಾಮರಾ ಹಿಡಿದುಕೊಂಡು ಬಂದೆ. ಮುಂಜಾನೆಯ ಸೂಕ್ಷ್ಮ ಬಿಸಿಲು ಹೊರಾಂಗಣ ಛಾಯಾಗ್ರಹಣಕ್ಕೆ ಅತಿ ಸೂಕ್ತವಾದುದು ಎಂದುಕೊಂಡು ದೇವಾಲಯಗಳ ಚಿತ್ರಗಳನ್ನು ಕ್ಲಿಕ್ಕಿಸಲು ಆರಂಭಿಸಿದೆ. ಮಿಥುನ ಶಿಲ್ಪಗಳನ್ನು ಮತ್ತೊಮ್ಮೆ ಕಣ್ತುಂಬಾ ನೋಡಿದೆ.
ನಮ್ಮ ಮರುಪ್ರಯಾಣವು ಖಜುರಾಹೋದಿಂದ ಝಾನ್ಸಿ ವರೆಗೆ ರಸ್ತೆಮಾರ್ಗದಲ್ಲಿ. ಅಲ್ಲಿಂದ ದೆಹಲಿಗೆ ಹೊರಡುವ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ತತ್ಕಾಲ್ ಸೇವೆಯಲ್ಲಿ ಟಿಕೇಟು ಕಾದಿರಿಸಿ ಬಂದಿದ್ದೆವು. ರೈಲು ಝಾನ್ಸಿಯಿಂದ ಐದು ಗಂಟೆಗೆ ಹೊರಡುವುದರಿಂದ ನಾವು ಬೆಳಿಗ್ಗೆ ಎಂಟುಗಂಟೆಗೆ ಖಜುರಾಹೋದಿಂದ ಹೋಗುವ ಯೋಜನೆ ಹಾಕಿದ್ದೆವು. ಖಜುರಾಹೋದ ರಾಜಾ ಯಶೋವರ್ಮನ್ ಬಸ್ ನಿಲ್ದಾಣಕ್ಕೆ ಬಂದೆವು. ಬಸ್ಸು ಬರಲು ಇನ್ನೂ ಸಮಯವಿದ್ದುದರಿಂದ ಅಲ್ಲಿಯ ಸ್ಥಳೀಯರಂತೆ ನಾವೂ ಚಹಾ ಕುಡಿದೆವು. ಸ್ವಲ್ಪ ಹೊತ್ತಲ್ಲೇ ಬಸ್ ನಿಲ್ದಾಣದಿಂದ ನಮಗೆ ಛತ್ತರ್‌ಪುರಕ್ಕೆ ಹೋಗುವ ಬಸ್ಸು ಸಿಕ್ಕಿತು. ತುಂಬಿ ತುಳುಕುತ್ತಿದ್ದ ಬಸ್ಸಿನೊಳಗೆ ನುಸುಳುತ್ತಿದ್ದಂತೆ ಕಂಡಕ್ಟರ್ ನಮ್ಮನ್ನು ಡ್ರೈವರನ ಪಕ್ಕದ ಬಾನೆಟ್‌ನ ಮೇಲೆ ಹಾಸಿದ ಮೆತ್ತೆಯ ಮೇಲೆ ಕುಳಿತುಕೊಳ್ಳಲು ಹೇಳಿದ. ನೋಡಿದರೆ ಅಲ್ಲಿ ಮೊದಲೇ ಜನ ಕುಳಿತಿದ್ದರು. ಬೈಟಿಯೇ ಎಂದು ನಮ್ಮನ್ನು ಆದೇಶಿಸುವಂತೆ ಅಲ್ಲಿ ತನ್ನಷ್ಟಕ್ಕೇ ಜಾಗವಾಯಿತು.
ಈ ವರ್ಷ ಬಿಡುಗಡೆಯಾದ ಪೀಪ್ಲಿ ಲೈವ್ ಸಿನಿಮಾ ಮಧ್ಯಪ್ರದೇಶದಲ್ಲಿ ಚಿತ್ರಿತವಾಗಿತ್ತು. ಅದರ ಪಾತ್ರಗಳೂ ಅಲ್ಲಿಯದೇ ಸ್ಥಳೀಯ ಭಾಷೆಯನ್ನು ಮಾತಾಡುತ್ತಿದ್ದವು. ಸಿನಿಮಾದ ಪಾತ್ರದಲ್ಲ್ಲಿರುವಂತಹದೇ ವ್ಯಕ್ತಿಗಳು ಬಸ್ಸಿನಲ್ಲಿದ್ದರು. ಅವರ ವೇಷಭೂಷಣ, ಮಾತಿನ ಮೋಡಿಯನ್ನು ಕಂಡಾಗ ನತ್ತ ಮತ್ತು ಬುದ್ಯ ಪಾತ್ರಗಳೇ ಲೈವ್ ಆದಂತೆ ಅನಿಸಿತು. ನಾವು ಛತ್ತರ್‌ಪುರದಿಂದ ಇನ್ನೊಂದು ಬಸ್ಸನ್ನು ಝಾನ್ಸಿಗಾಗಿ ಹಿಡಿಯಬೇಕಿತ್ತು. ಆದಷ್ಟು ಬೇಗ ಝಾನ್ಸಿ ತಲಪುವುದು ನಮ್ಮ ಉದ್ದೇಶವಾಗಿತ್ತು. ಛತ್ತರ್‌ಪುರ ತಲುಪಿದೊಡನೆ ನಮಗೆ ಝಾನ್ಸಿಗೆ ಹೋಗುವ ಬಸ್ಸೇನೋ ಸಿಕ್ಕಿತು.
ಸ್ಥಳೀಯ ಬಸ್ಸಾಗಿದ್ದುದರಿಂದ ರಸ್ತೆಯುದ್ದಕ್ಕೂ ಪ್ರಯಾಣಿಕರನ್ನು ಹತ್ತಿಸುತ್ತಾ ಇಳಿಸುತ್ತಾ ಬಸ್ಸು ಮೌರಾಣಿಪುರ್ ಎಂಬ ಉತ್ತರಪ್ರದೇಶದ ಜಿಲ್ಲಾ ಕೇಂದ್ರವೊಂದಕ್ಕೆ ಬಂತು. ಮೌರಾಣಿಪುರದಲ್ಲಿ ಕಂಡಕ್ಟರನು ಈ ಬಸ್ಸು ಇಲ್ಲೇ ನಿಲ್ಲುವುದು. ಇದೇ ಕೊನೆ ಸ್ಟಾಪ್. ಝಾನ್ಸಿಗೆ ಹೋಗುವವರು ಇನ್ನೊಂದು ಬಸ್ಸಿಗೆ ಹೋಗಿ ಎಂದು ಬಸ್ಸನು ತೋರಿಸಿ ಅದರ ಕಂಡಕ್ಟರನಿಗೆ ನಮ್ಮೆಲ್ಲರ ಟಿಕೇಟನ್ನು ಮಾನ್ಯ ಮಾಡುವಂತೆ ಹೇಳಿದ. ಹೀಗೇಕೆ ಎಂದು ಸ್ಥಳೀಯರಲ್ಲಿ ಕೇಳಿದಾಗ ಡ್ರೈವರನಿಗೆ ಮನಸ್ಸಾಗದಿದ್ದರೆ ಆತ ಝಾನ್ಸಿಗೆ ಹೋಗಲಾರ. ನೀವೇನು ಚಿಂತಿಸಬೇಡಿ ನಿಮಗೆ ಝಾನ್ಸಿ ಬಸ್ಸು ಸಿಕ್ಕಿತಲ್ಲಾ ಎಂದ. ಕಾರಣ ಇನ್ನೇನೋ ಇರಬೇಕೆಂಬ ಗುಮಾನಿ ನನಗಾಯಿತು.
ನಮ್ಮಂತೆ ಖಜುರಾಹೋ ನೋಡಲು ಬಂದಿದ್ದ ಇಬ್ಬರು ಬಿಹಾರಿನ ಪ್ರವಾಸಿಗರೂ ಬಸ್ಸಲ್ಲಿದ್ದರು. ಅವರೂ ಝಾನ್ಸಿಯಿಂದ ಮುಂದೆ ಹೋಗಲು ರೈಲು ಹಿಡಿಯಲೆಂದೇ ಹೋಗುತ್ತಿದ್ದರು. ಝಾನ್ಸಿ ಬಸ್ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಎಷ್ಟು ದೂರವೆಂದೂ ಗೊತ್ತಿರಲಿಲ್ಲ. ಬಸ್ಸಿನ ಸರಾಸರಿ ವೇಗ, ಇನ್ನು ಹೋಗಲಿರುವ ದೂರ ನಮ್ಮಲ್ಲಿ ಇರುವ ಸಮಯ ಎಲ್ಲಾ ಲೆಕ್ಕ ಹಾಕಿ ಬಸ್ಸು ಐದು ಗಂಟೆಗೆ ತಲುಪುವ ಭರವಸೆ ನನಗೆ ಇತ್ತು. ಮತ್ತೊಂದು ಕಡೆ ಡ್ರೈವರ್ ಸುಮಾರು ಇಪ್ಪತ್ತು ನಿಮಿಷ ಬಸ್ಸು ನಿಲ್ಲಿಸಿ ನನ್ನ ಲೆಕ್ಕಾಚಾರವನ್ನೆಲ್ಲಾ ಬುಡಮೇಲು ಮಾಡುತ್ತಿದ್ದ. ಶತಾಬ್ದಿ ರೈಲು ತಪ್ಪಿದರೆ ಮುಂದಿನ ಯೋಜನೆಯ ಕುರಿತು ಯೋಚಿಸತೊಡಗಿದೆ.
ಕೊನೆಗೂ ಬಸ್ಸು ಐದು ಗಂಟೆಯ ಹೊತ್ತಿಗೆ ಝಾನ್ಸಿ ತಲುಪಿತು. ಬಸ್ಸಿನಿಂದ ಇಳಿಯುತ್ತಿದ್ದಂತೆ ಅಟೋರಿಕ್ಷಾವೊಂದನ್ನು ಹಿಡಿದು ಸೀದಾ ರೈಲ್ವೇ ನಿಲ್ದಾಣಕ್ಕೆ ಹೋದೆವು. ಸಂಜೆ ಐದು ಹದಿನೈದರ ಶತಾಬ್ದಿಗೆ ನಮ್ಮ ಟಿಕೇಟಿತ್ತು. ರೈಲ್ವೇ ನಿಲ್ದಾಣ ಒಳ ಹೋಗುವಾಗ ಅಲ್ಲಿನ ಗಡಿಯಾರ ಐದು ಹದಿಮೂರು ಎಂದು ತೋರಿಸುತ್ತಿತ್ತು. ರೈಲು ಯಾವ ಫ್ಲಾಟ್‌ಫಾರಂನಲ್ಲಿ ನಿಲ್ಲುವುದೆಂದೂ ಗೊತ್ತಿರಲಿಲ್ಲ. ಪೋಲೀಸರೊಬ್ಬರನ್ನು ಕೇಳಿದಾಗ ಅವರು ವಿರುದ್ದ ದಿಕ್ಕಿಗೆ ಹೋಗುತ್ತಿದ್ದ ನಮ್ಮನ್ನು ಸರಿಯಾದ ಫ್ಲಾಟ್‌ಪಾರಂ ಕಡೆ ಕಳುಹಿಸಿದರು. ಅದಾಗಲೇ ರೈಲು ಹೊರಡಲು ಹಸಿರು ನಿಶಾನೆ ತೋರಿಸಿಯಾಗಿತ್ತು. ನಾವೆಲ್ಲರೂ ಓಡಿ ಓಡಿ ಕೊನೆ ಕಂಪಾರ್ಟ್‌ಮೆಂಟ್ ಹತ್ತಿದೆವು. ಉಸಿರಾಡಲೂ ಆಗುತ್ತಿರಲಿಲ್ಲ. ಹತ್ತಿದ ರೈಲು ನಾವು ಹೋಗಬೇಕಾದ ರೈಲೇ ಎಂದು ಅಲ್ಲಿನ ಸಿಬಂದಿಗಳಲ್ಲಿ ವಿಚಾರಿಸಿ ನಮ್ಮ ಕಂಪಾರ್ಟ್‌ಮೆಂಟ್‌ಗೆ ಹೋಗಿ ಕುಳಿತು ನಿಟ್ಟುಸಿರು ಬಿಟ್ಟೆವು. ರೈಲಿನಲ್ಲಿ ಕುಳಿತು ಕ್ಯಾಮರಾದೊಳಗಿದ್ದ ಖಜುರಾಹೋ ಚಿತ್ರಗಳನ್ನು ನೋಡಿದಾಗ ಎಲ್ಲವೂ ಮರೆತಿತ್ತು. ಭಾನುವಾರದ ತಡರಾತ್ರಿ ಮನೆಗೆ ತಲುಪಿದಂತೆ ಮರುದಿನ ಕೆಲಸದ ದಿನವೆಂದು ನೆನೆದು ಮುಸುಕೆಳೆದು ಮಲಗಿದೆವು. ಮತ್ತೊಂದು ವಾರದ ಆರಂಭಕ್ಕೆ.
© All Photographs copyright BALAKRISHNA NAIK D.

Tuesday, November 16, 2010

ಸಣ್ಣ ತುಂಡುಗಳು

ಹೂವು
ಸುಂದರ
ಜೇನು


ಗಾಳಿ
ಹಗುರ
ಬೀಸಣಿಕೆ


ಬಣ್ಣದ
ಬಿಲ್ಲು
ಕಾಮ

ಕನಸು
ಎಚ್ಚರ
ದಿಗಿಲು

ಪ್ರಶ್ನೆ
ಹಲವು
ವಿಸ್ತಾರ

ದಿನ ಸೇರಿದೆ
ವಾರ
ಚಂದ್ರ


ಸೂರ್ಯನ
ಬಿಸಿಲು
ನರ್ತನ

ದಿಗಂತದಾಚೆ
ದೂರ
ಕನಸು


ಗಿಡುಗ
ಕೋಳಿ
ಬಾನು

Thursday, November 11, 2010

ಬಂದು ಹೋದ ಒಬಾಮ

ಜ್ಯೂನಿಯರ್ ಬರಾಕ್ ಹುಸೈನ್ ಒಬಾಮ,
ನೀನು ಬರುವಾಗ ನಾವು ದೀಪಾವಳಿ ಹಬ್ಬದ ಸಡಗರದಲ್ಲಿದ್ದೆವು. ಪಟಾಕಿ ಸುಡುವುದು ಬೇಡವೆಂದು ಗೊತ್ತಿದ್ದರೂ, ಪಟಾಕಿಯಿಲ್ಲದ ದೀಪಾವಳಿ ಎಂತದ್ದು ಎಂದು ಮಕ್ಕಳೊಂದಿಗೆ ದೊಡ್ಡವರೂ ಪಟಾಕಿ ಅಂಗಡಿಗೆ ಹೋಗಿದ್ದೆವು. ನಮ್ಮ ನಮ್ಮ ಯೋಗ್ಯತೆಗನುಸಾರ ಕನಿಷ್ಟ ಒಂದು ದಿನದ ಸಂಬಳದಷ್ಟಾದರೂ ಪಟಾಕಿ ಖರೀದಿಸಿದ್ದೆವು. ನೀನು ಮಿಶೆಲ್ ಜತೆ ಏರ್ ಫೋರ್ಸ್ ಒನ್ ನಿಂದ ಮುಂಬಯಿಯಲ್ಲಿ ಇಳಿಯುವುದನ್ನು ಲೈವ್ ನೋಡಿದ್ದೆವು. ನಿನ್ನಷ್ಟೇ ಸಡಗರ ಸಂಭ್ರಮ ನಾವೂ ಪಟ್ಟಿದ್ದೆವು. ಮುಂಬಯಿ, ತಾಜ್ ಹೋಟೆಲ್ ನಮಗೆ ನಿನಗಿಂತಲೂ ಹೆಚ್ಚು ನೆನಪುಗಳು. ಗೇಟ್‌ವೇ ಆಫ್ ಇಂಡಿಯದಲ್ಲಿ ಅಪ್ಪಲಿಸುವ ಅರಬ್ಬೀ ಸಮುದ್ರದ ತೆರೆಗಳಂತೆ ಅವು ನಮ್ಮ ಮನದೊಳಗೆ ಅಪ್ಪಲಿಸುತ್ತಿದ್ದವು. ಛೇ ! ಅದು ಬಿಟ್ಟು ಬಿಡೋಣ.
ನೀನು ಉದ್ಯಮಿಗಳೊಂದಿಗೆ ಆಡಿದ ಮಾತುಗಳು ನಮ್ಮನ್ನು ಪುಲಕಿತಗೊಳಿಸಿದವು. ನಮಗೆ ಗೊತ್ತಿದೆ ನಿನ್ನ ಎದೆಯೊಳಗಿನ ಡವ ಡವ. ಅಮೇರಿಕಾದಲ್ಲಿ ನಿನ್ನ ವಿರೋಧ ಪಕ್ಷದವರಾದ ರಿಪಬ್ಲಿಕನರು ಚುನಾವಣೆಯಲ್ಲಿ ಮೇಲುಗೈಯನ್ನು ಪಡೆಯುತ್ತಿದ್ದರು. ಮಿಡ್ ವೇ ಕರೆಕ್ಷನ್ ನಿನಗೂ ಅಗತ್ಯ. ಭಾರತ ನಿಮ್ಮಲ್ಲಿನ ಐವತ್ತರಿಂದ ಅರುವತ್ತು ಸಾವಿರ ಜನರಿಗೆ ಉದ್ಯೋಗ ನೀಡಬಹುದು ಎಂದು ಜನರಿಗೆ ಹೇಳಿದ ಮೇಲೆ ನಮಗೇನು ಉಳಿಯಿತು ಎಂದು ನಾವು ಯೋಚಿಸುತ್ತಿದ್ದೇವು. ಜಾಣ ನೀನು ಎಂದು ನಾವಂದುಕೊಂಡಿದ್ದು ಸರಿ. ನಮ್ಮನೇ ಹೊಗಳಿ ಬಿಟ್ಟೆಯಲ್ಲಾ. ಲೈವ್ ಟಿವಿ ನೋಡುವ ಮಂದಿ, ಪತ್ರಿಕೆ ಓದುವ ಮಂದಿ, ಇಂಟರ್ ನೆಟ್ ಜಾಲಿಸುವ ಮಂದಿ ನಿನ್ನ ಮಾತಿನ ಮೋಡಿಗೆ ಮರುಳಾದೆವು ಮಾರಾಯ. ನಾವು ಎಮರ್ಜಿಂಗ್ ದೇಶವಲ್ಲ ಅದಾಗಲೇ ಎಮರ್ಜ್ ಆಗಿದ್ದೇವೆ ಎಂದಾಗ ಶೇಖರ ಎಸ್ಸೆಸ್ಸೆಲ್ಸಿಯಲ್ಲಿ ನಲ್ವತ್ತೆಂಟು ಪರ್ಸೆಂಟ್ ಪಡೆದು ಊರಿಡೀ ಮಿಠಾಯಿ ಹಂಚಿದ ನೆನಪಾಯಿತು.
ನಾವು ಅಂದರೆ ಮಾಧ್ಯಮವನ್ನು ಅರೆದು ತಿನ್ನುವ ಮಂದಿ ಈಗ ಸ್ವಲ್ಪ ಹೆಚ್ಚು ಆತ್ಮವಿಶ್ವಾಸದಿಂದ ಇದ್ದೇವೆ. ನಿನ್ನ ಮಾತುಗಳನ್ನೇ ಮೆಲುಕು ಹಾಕುತ್ತಿದ್ದೇವೆ. ಸಂಸದ್ ಭವನದೊಳಗಿನ ನಿನ್ನ ಭಾಷಣ ಲೈವ್ ನೋಡಿದ್ದೇ ಅಲ್ಲದೇ ಮತ್ತೆ ಮತ್ತೆ ತೋರಿಸುವ ಚಾನೆಲ್‌ಗಳನ್ನು ರಿಮೋಟ್ ಮೂಲಕ ಬದಲಿಸಿ ಬದಲಿಸಿ ನೋಡಿದ್ದೆ ಅಲ್ಲದೇ ಇನ್ನೊಮ್ಮೆ ನೋಡಲೆಂದು ಯೂ ಟ್ಯೂಬ್ ಗೂ ಹೋಗುತ್ತಿದ್ದೇವೆ. ಎನ್‌ಡಿಟಿವಿ ವೆಬ್ ಸೈಟ್ ನೀನು ಭಾಷಣ ಮುಗಿಸುವುದರೊಳಗೆ ನಿನ್ನ ಭಾಷಣದ ಪ್ರತಿಯನ್ನು ನಮಗೆಲ್ಲಾ ನೀಡಿತ್ತು. ನಿನ್ನ ಭಾಷಣದ ಕನ್ನಡ ಪ್ರತಿಯನ್ನು ಕೂಡ ನಾವು ಕಂಡಿದ್ದೇವೆ ಮರುದಿನದ ಪತ್ರಿಕೆಗಳಲ್ಲಿ. ನಿನ್ನ ನಿರರ್ಗಳ ಟೆಲಿಪ್ರಾಂಪ್ಟ್ ಭಾಷಣ ನಿಜಕ್ಕೂ ಇತ್ತೀಚಿನ ದಿನಗಳಲ್ಲಿ ಕೇಳಿದ ಅತ್ಯುತ್ತಮ ಭಾಷಣವಾಗಿತ್ತು.
ನಮ್ಮ ದೇಶದ ರಾಜಕಾರಣಿಗಳು ಠಾಗೋರರನ್ನು, ವಿವೇಕಾನಂದರನ್ನು ಮರೆತು ಹಲವು ದಶಕಗಳೇ ಸಂದವು. ನಿನ್ನ ಬಾಯಲ್ಲಿ ನಮ್ಮ ದೇಶದ ಗಾಂಧಿ, ಅಂಬೇಡ್ಕರ್ ಹೆಸರು ಬಂದಾಗ ನಮಗೆಲ್ಲಾ ಪುಳಕವುಂಟಾಯಿತು. ನೀನು ಮತ್ತು ಮಿಶೆಲ್. ಅಬ್ಬಾ ಅದೆಂತಹ ದಂಪತಿಗಳು ನೀವು. ಮದುವೆ ಮುರಿಯುತ್ತಿರುವ ನಮ್ಮ ಸಮಾಜಕ್ಕೆ ನಿಮ್ಮೊಳಗಿನ ಒಲವು, ಗೌರವ ಆದರ್ಶವಾಗಿತ್ತು.
ಮೂರೇ ದಿನ ನೀನು ಬಂದು ಹೋದರೂ ಲೈವ್ ಟಿವಿ, ಪತ್ರಿಕೆ, ಅಂತರ್ಜಾಲ ಮೂಲಕ ನಿನ್ನ ಬೆನ್ನು ಬಿದ್ದ ನಾವು ಖಾಲಿ ಖಾಲಿ ಆಗಿದ್ದೇವೆ. ದೀಪಾವಳಿ ಹಬ್ಬ ಈ ಸಲ ಬಹಳ ಗೌಜಿಯಾದುದು ನಿನ್ನಿಂದಲೇ. ಹಬ್ಬ ಮುಗಿದ ನಂತರದ ನಿರಾಳತೆ ನಮ್ಮನ್ನು ಕಾಡುತ್ತಿದೆ.
ಕಾಮನ್ ವೆಲ್ತ್ ಗೇಮ್ಸ್ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸುರೇಶ್ ಕಲ್ಮಾಡಿಯನ್ನು ಗೇಲಿ ಮಾಡುತ್ತಿದ್ದ, ಆದರ್ಶ ಕಟ್ಟಡದಡಿಯಲ್ಲಿ ಕಾರ್ಗಿಲ್ ಯೋಧರನ್ನು ಹುಡುಕುತ್ತಿದ್ದ ನಮಗೆ ನಿನ್ನ ಆಗಮನ ರಿಯಾಲಿಟಿ ಷೋ ನಡುವೆ ಬರುವ ಕೊಕಾ ಕೋಲಾದ ಜಾಹೀರಾತಿನಂತಿತ್ತು. ಆಗಾಗ ಬರುತ್ತಿರು ಎನ್ನಲು ಭಾರತವೇನೂ ನಿನ್ನ ಮಾವನ ಮನೆಯಲ್ಲ. ನಾವು ಎಮರ್ಜ್ ಆದರೂ ನಿನ್ನ ಸಮಾನಕ್ಕೆ ಎಮರ್ಜ್ ಆಗಿದ್ದೇವೆ ಎಂದು ನೀನಂದಿಲ್ಲ.
ಆದರೂ ನೀನು ಮತ್ತೊಮ್ಮೆ ಬಾ ಎನ್ನುತ್ತೇವೆ. ಬರುವಾಗ ಮಿಶೆಲ್ ಜತೆ ಮಾಲಿಯಾ ಮತ್ತು ನಟಾಶರನ್ನೂ ಕರೆದುಕೊಂಡು ಬಾ.
ಒಲವಿನಿಂದ
ಬಾನಾಡಿ

Wednesday, November 10, 2010

ಸರಯೂ ನದಿಯಲ್ಲಿ ಕಾಲಾಡಿಸುತ್ತಾ

ಸರಯೂ ನದಿಯ ಹರಿವ ನೀರಿನೊಳಗೆ ಕಾಲಾಡಿಸುತ್ತಾ
ಕುಳಿತ ಸೀತಾಪತಿಗೆ ಹೇಮಂತದ ಕುಳಿರ್ಗಾಳಿ
ಮುಂದಲೆಯಲ್ಲಿ ಕಚಗುಳಿಯಿಡುವದರೊಂದಿಗೆ
ಕಾಲ ಬೆರಳು ಸಂಧಿಯಲ್ಲೂ ಹೊಸದೊಂದು ಪುಳಕವುಂಟಾಯಿತು

ಮಡದಿಯೊಂದಿಗೆ ಹರಿವ ನೀರಲ್ಲೇ ಕಾಲಾಡಿಸುತ್ತಾ ಕುಳಿತರೆ
ಅವಧದಲ್ಲಿ ಅಡುಗೆ ಮನೆಯೊಳಗೆ ಹೋದಾಗ ಅದೇನು ಸಿಗುವುದೋ
ಜಾನಕಿಗೇನು ಗೊತ್ತು ಹೊಸರುಚಿ ನನಗೆ ಹಿಡಿಸುವುದಿಲ್ಲವೆಂದು
ಸುಮ್ಮನೆ ಅವಳಿಗಾಗಿ ಸುಳ್ಳನ್ನೇ ನುಂಗುತ್ತೇನೆಂದು

ನುಂಗಿದ ಸುಳ್ಳುಗಳು ಇನ್ಯಾವುದೋ ಯುಗದಲ್ಲಿ
ನ್ಯಾಯವಾಗುವುದು, ಸಾಕ್ಷಿಯಾಗುವುದು
ಜನಕ ಕೊಟ್ಟ ಬಿಲ್ಲು ಮುರಿಯುವುದು
ಯೋಧನಾದ ನನಗೇನೂ ಅಲ್ಲ ಅಥವಾ
ಎಲ್ಲಾ ಅವಳಿಗಾಗಿಯೇ ಎಂಬಂತೆ

ಅಮ್ಮ ಕೂಡ ಜಗಲಿಯಲ್ಲೇ ಇದ್ದಳೇ ಅಥವಾ ಒಳಗಿದ್ದಳೇ
ನಾನು ಬರುವಾಗ
ಅಪ್ಪ ಎಲ್ಲಿದ್ದ
ಇದೇ ಸರಯೂ ನದಿಯಲ್ಲಿ ಚಿಕ್ಕಮ್ಮನವರೊಂದಿಗೆ
ನೀರಿಗಿಳಿದಿದ್ದನೇ

ಅವರಿಗೇನು ಗೊತ್ತು ಯುಗಪುರುಷ ನಾನು
ಪುರುಷೋತ್ತಮ
ಅಮ್ಮ ನನ್ನನ್ನು ಹೆತ್ತ ಬೇನೆಯಲ್ಲೂ ಸುಖದ ಕಣ್ಣೀರಿಳಿಸಿದಾಗ
ಅವರೆಲ್ಲಿದ್ದರು, ನಾನೆಲ್ಲಿದ್ದೇನೆಂದು
ಗಜ ಗಜ ನೆಲವನ್ನು ಅಳೆದು
ಒಂದು ದಿನ ಹಂಚಲಾಗುವುದೆಂದು

ಸರಯೂ ನದಿಯೇ ಹಾಗೆ
ನೀರೊಳಗೆ ಕಾಲಿರಿಸಿದರೆ ನೆನಪುಗಳು
ಯುಗದಾಚೆಯೂ ಹರಿದು
ಸಾಗರದ ತೆರೆಗಳಾಗುತ್ತವೆ.

Saturday, November 6, 2010

ದೀಪಾವಳಿ ಶುಭಾಶಯಗಳು

ದೀಪಾವಳಿ ಶುಭಾಶಯಗಳು

ತ್ರಯೋದಶಿ, ಚತುರ್ದಶಿ ಮುಗಿದು ಅಮಾವಾಸ್ಯೆಯ ಕಾರಿರುಳು
ಛಂಗನೆ ಬಾನಿಗೆ ನೆಗೆವ ಪಟಾಕಿ, ದುರುಸು, ಬಾಣಗಳು
ಬಾಳಿನೊಳಗಿನ ಕಗ್ಗತ್ತಲೆಯನು ಹರಿದು ಚೂರು ಮಾಡಲು
ಸಣ್ಣ ಹಣತೆಯೊಂದೇ ಸಾಕು ಬೆಳಗಿದರೆ ಮನೆ ಬಾಗಿಲಲಿ

ಕಪ್ಪು ಬಳಿದ ಬಾನಿಗೆ ಬೆಳಕ ಬಣ್ಣದ ಚಿತ್ತಾರ
ಪ್ರತಿಫಲಿಸುತಿವೆ ಮನದೊಳಗಿನ ಬಣ್ಣ ಬಣ್ಣದ ಕನಸುಗಳು
ಗೆಜ್ಜೆ ನಿನಾದದೊಂದಿಗೆ ಹೆಜ್ಜೆ ಇಡುವ ಪುಟ್ಟ ಪುಟ್ಟ ಮಣಿರತ್ನಗಳು
ದೀಪಾವಳಿಯೇ ಬೇಕೆ ಮಕ್ಕಳಿಗೆ ಕನಸುಗಳನು ಬಿಚ್ಚಿಡಲು

ಮನೆಮಂದಿಗೊಂದೇ ಹಬ್ಬ ಎಲ್ಲಾ ಸೇರಿ ಕುಣಿದು
ಬಿಸಿ ಸಿಹಿ ತಿಂಡಿಗಳು ಅಯ್ಯೋ ಇನ್ನೆಷ್ಟು ಬಾಕಿ
ಅಣ್ಣ ತಂಗಿ ಮಾವ ಸೊಸೆ ಮಗಳು ಇರಲು
ಹಬ್ಬ ಇವತ್ತೇ ಮರೆತು ಬಿಡಿ ಎಲ್ಲವನೂ

ಕೋರುವೆನು ಶುಭಾಶಯವನು
ಈ ಬೆಳಕ ಹಬ್ಬದಂದು
ಸುಖವಾಗಿರಲಿ, ಸಮೃದ್ಧವಾಗಿರಲಿ
ಬದುಕು
ಎಂದೆಂದೂ ಹಸನಾಗಿರಲಿ


Thursday, November 4, 2010

ಸಾಹೇಬರ ಬೆಲೆ

ಬೆಳಿಗ್ಗೆ ದಿಲ್ಲಿಗೆ ಹೋದ ಸಾಹೇಬರು
ಸಂಜೆ ವಿಮಾನನಿಲ್ದಾಣದಲ್ಲಿ ಬಂದಿಳಿಯುವರು.
ಅವರನ್ನು ಕರೆದುಕೊಂಡು ಬರಬೇಕು.
ಸಾಹೇಬರಲ್ಲಿ ಒಂದು ಅತ್ಯಂತ ಉತ್ತಮವಾದ ಲೆದರ್ ಬ್ಯಾಗ್ ಇದೆ
ಬೆಲೆ ಸುಮಾರು ಆರೂವರೆ ಸಾವಿರ ರೂಪಾಯಿ
ಅದರೊಳಗೆ ಒಂದು ಹೊಸ ಲ್ಯಾಪ್ ಟಾಪ್
ಬೆಲೆ ಸುಮಾರು ಅರುವತ್ತೈದು ಸಾವಿರ ರೂಪಾಯಿ
ಒಂದು ಹೊಸ ಎಸ್.ಎಲ್.ಆರ್ ಕ್ಯಾಮರಾ ಕೊಂಡಿದ್ದಾರೆ
ಬೆಲೆ ಸುಮಾರು ಇಪ್ಪತೈದು ಸಾವಿರ ರೂಪಾಯಿ
ಅವರ ಮೊಬೈಲ್ ಬ್ಲಾಕ್ ಬೆರಿ
ಬೆಲೆ ಸುಮಾರು ಮೂವತ್ತು ಸಾವಿರ ರೂಪಾಯಿ
ಕೈಯಲ್ಲಿ ವಾಚು ವಿದೇಶ ಕಂಪೆನಿಯದ್ದು
ಬೆಲೆ ಸುಮಾರು ಅರುವತ್ತು ಸಾವಿರ ರೂಪಾಯಿ
ಕೊರಳಲ್ಲಿ ಇಪ್ಪತ್ತು ಗ್ರಾಮ್ ಚಿನ್ನದ ಸರ
ಬೆಲೆ ಸುಮಾರು ನಲುವತ್ತು ಸಾವಿರ ರೂಪಾಯಿ
ಹಾಕಿಕೊಂಡ ಷೂ ಕೂಡಾ ಹೊಸತೇ
ಬೆಲೆ ಸುಮಾರು ಮೂರು ಸಾವಿರ ರೂಪಾಯಿ
ಸಾಕ್ಸ್ ಸುಮಾರು ಐನೂರು ರೂಪಾಯಿ
ಹಾಕಿದ ಪ್ಯಾಂಟ್ ಕೂಡಾ ಬೆಲೆಬಾಳುವದ್ದೇ
ಬೆಲೆ ಸುಮಾರು ಮೂರೂವರೆ ಸಾವಿರ ರೂಪಾಯಿ
ಶರ್ಟಿಗೆ ಬೆಲೆ ಸುಮಾರು ಎರಡು ಸಾವಿರ ರೂಪಾಯಿ
ಕಟ್ಟಿದ ಟೈ ಸುಮಾರು ಒಂದು ಸಾವಿರ ರೂಪಾಯಿಗಿಂತಲೂ ಹೆಚ್ಚು
ಸೊಂಟದ ಬೆಲ್ಟು ಸುಮಾರು ಒಂದೂವರೆ ಸಾವಿರ ರೂಪಾಯಿ
ಸಾಹೇಬರ ಜೇಬಲ್ಲಿ ಮಾಂಬ್ಲಾಂ ಪೆನ್ನಂತೆ
ಬೆಲೆ ಸುಮಾರು ಹದಿನೈದು ಸಾವಿರ ರೂಪಾಯಿ
ಕೈ ಬೆರಳ ಉಂಗುರ ಪಚ್ಚೆ ಮತ್ತು ಕೆಂಪು ಕಲ್ಲಿಂದು
ಬೆಲೆ ಸುಮಾರು ನಲುವತ್ತು ಸಾವಿರ ರೂಪಾಯಿ
ಸಾಹೇಬರ ದೃಷ್ಟಿ ಕನ್ನಡಕಕ್ಕೆ ಸುಮಾರು ಏಳು ಸಾವಿರ ರೂಪಾಯಿ
ಬಿಸಿಲ ಕನ್ನಡಕ ಕಡಿಮೆಯೆಂದರೂ ಹತ್ತು ಸಾವಿರ ರೂಪಾಯಿ
ಕೈಯಲ್ಲೊಂದು ಪುಸ್ತಕವಿತ್ತು
ಅದರ ಬೆಲೆ ಸುಮಾರು ಸಾವಿರದ ಐನೂರು ರೂಪಾಯಿ ಎಂದಿತ್ತು
ಸಾಹೇಬರ ಜೇಬಲ್ಲಿ ಒಂದು ಇಪ್ಪತ್ತು ಸಾವಿರ ರೂಪಾಯಿ ಇರಬಹುದು
ಕ್ರೆಡಿಟ್ ಕಾರ್ಡು, ಡೆಬಿಟ್ ಕಾರ್ಡು ಸಿಕ್ಕಿದರೆ ಎಟಿಎಂ ನಿಂದ
ಇಪ್ಪತ್ತರಿಂದ ನಲುವತ್ತು ಸಾವಿರ ಇಳಿಸಬಹುದು.
ಅರೆ ಐಪಾಡ್ ಇದೆಯಲ್ವ
ಬೆಲೆ ಸುಮಾರು ಐದು ಸಾವಿರ ರೂಪಾಯಿ
ಮತ್ತೊಂದು ಡಿಟ್ಯಾಚೇಬಲ್ ಹಾರ್ಡ್ ಡ್ರೈವ್ ಇತ್ತಲ್ಲ
ಬೆಲೆ ಸುಮಾರು ನಾಲ್ಕು ಸಾವಿರ ರೂಪಾಯಿ
ನನಗೆ ಲೆಕ್ಕ ಗೊತ್ತಿಲ್ಲ ಆದರೂ ಅಂದಾಜು ಮಾಡಿದರೆ
ಸಾಹೇಬರ ಒಟ್ಟು ಬೆಲೆ ಸುಮಾರು ನಾಲ್ಕು ಲಕ್ಷ ರೂಪಾಯಿ ಹತ್ತಿರವಾಗಬಹುದು
ರವಿಯನ್ನು ಕಳುಹಿಸುವೆ
ಕಡಿಮೆಯೆಂದರೂ ಎರಡು ಲಕ್ಷ ರೂಪಾಯಿಗೆ ಸಾಹೇಬರು ಸಿಗಬಹುದು.

Saturday, July 31, 2010

Wishes ...

A Government Department Spending Money on a Private Media
Is itn't wasting tax payers money? (BND)