Friday, October 2, 2009

ಎಂ.ಜಿ. ನಿನ್ನ ಜನುಮದಿನಕ್ಕೊಂದು ಸಾಲು.

ಪ್ರಿಯ ಎಂ.ಜಿ. ನೀನು ಎಂ.ಜಿ. ಆಗುವುದಕ್ಕಿಂತ ಮೊದಲು ಕಳ್ಳನಾಗಿದ್ದೆ. ಸುಳ್ಳನಾಗಿದ್ದೆ. ನಕಲು ಹೊಡೆದು ಬರೆಯುವವನಾಗಿದ್ದೆ. ಮಾಂಸ ತಿನ್ನುವವನಾಗಿದ್ದೆ. ನಿನ್ನ ಸತ್ಯದೊಂದಿಗಿನ ಒಂದು ಪ್ರಯೋಗ ನಮಗೆಲ್ಲಾ ಭಾಷಣ ಸ್ಪರ್ಧೆಗಳಲ್ಲಿ, ಪ್ರಬಂಧಗಳಲ್ಲಿ ಉಲ್ಲೇಖಿಸಲಷ್ಟೇ ಸಾಕಾಗುತ್ತಿದೆ. ನಿನ್ನೆಲ್ಲಾ ಅನುಭವಗಳನ್ನು, ಕಾರ್ಯಗಳನ್ನು ಓದಿದಾಗ ನೀನು ನಮ್ಮಂತೆ ರಕ್ತ ಮಾಂಸದ ಮುದ್ದೆಯಾಗಿರದೇ ಗುಡಿಯೊಳಗಿನ ಕಲ್ಲಾಗಿದ್ದೆ ಎಂದನಿಸುತ್ತದೆ. ಯಾಕೆಂದರೆ ಪವಾಡಗಳನ್ನೆಲ್ಲಾ ನಾವು ಗುಡಿಯ ಕಲ್ಲೊಳಗೆ ಇರುವ ದೇವರ ಮೇಲೆ ಆರೋಪಿಸುತ್ತೇವೆ. ಅದೇನು ನಂಬಿಕೆ ನಿನ್ನದು ಎನ್ನಬೇಕು. ಸತ್ಯ ಮತ್ತು ಅಹಿಂಸೆಯ ಅ ವನ್ನು ನಾವಿಂದು ಆಚೀಚೆ ಮಾಡಿಕೊಂಡಿದ್ದೇವೆ ಅಷ್ಟೆ. ನಮಗೆ ಇನ್ನೇನು ಗೊತ್ತು. ನೀನು ಊರಿಕೊಂಡಿರುವ ಕೋಲು ಮಾತ್ರ ನೇರವಿದೆ. ನೀನು ಹೊರಿಸಿದ ಸತ್ಯ, ನ್ಯಾಯ, ಸದ್ಧರ್ಮ, ಅಹಿಂಸೆಯ ಮೂಟೆಯನ್ನು ಹೊತ್ತುಕೊಂಡು ನಿನ್ನ ಬೆನ್ನಿನಂತೆ ನಾವು ಮಾತ್ರ ಬಾಗಿದ್ದೇವೆ. ಪ್ರಿಯ ಎಂ.ಜಿ. ನಿನ್ನ ರಸ್ತೆ, ವೃತ್ತ ಅಥವಾ ಮೈದಾನವಿಲ್ಲದ ಪೇಟೆಯಿಲ್ಲ. ಆದರೆ ಅವೆಲ್ಲ ಚಿಕ್ಕದಾಗುತ್ತಿವೆ.

ಬರೆಮೈಲಿದ್ದವ ಈಗ ನಮ್ಮ ದೇಶದ ಎಲ್ಲಾ ನೋಟುಗಳಲ್ಲಿ ರಾರಾಜಿಸುತಿದ್ದಿಯಲ್ಲಾ! ಭಳಾರೆ ಬನಿಯಾ! ಅನ್ನೋಣವೇ? ನಿನ್ನ ಜನುಮದಿನಕ್ಕೊಂದು ಸಲಾಮು. ಇಂದು ರಜೆ - ದೂರದರ್ಶನದಲ್ಲಿ ನಿನ್ನ ಕುರಿತು ಸಿನಿಮಾ ನೋಡಲು. ನಿನ್ನ ಹೆಸರಿರುವ ರಸ್ತೆಯಲ್ಲಿ ಸುತ್ತಿ ಬರಲು. ನೀನು ಮಾತ್ರ ಒಂದು ನಿಂತೇ ಇದ್ದಿಯಲ್ಲಾ ಆ ಮೂಲೆಯಲ್ಲಿ ಪ್ರತಿಮೆಯಾಗಿ. ನಮ್ಮೆಲ್ಲಾ ಗೊಂದಲಗಳನ್ನು ನೋಡುತ್ತಾ.
ಡಿಯರ್ ಎಂ.ಜಿ. ಹ್ಯಾಪಿ ಬಡ್ಡೇ, ಮ್ಯಾನ್!!

3 comments:

  1. ಹೌದು... ನಾವಿಂದು ಅವರನ್ನು ಮರೆತು.. ಕೇವಲ ರಜೆಯನ್ನು ಮಾತ್ರ ನೆನೆಸಿಕೊಳ್ಳುವಂತಾಗಿದೆ. ಎಂ.ಜಿ.ಯ ಮುಂದೆ ನಾವೆಲ್ಲಾ ತೀರಾ ಚಿಕ್ಕವರು.

    ReplyDelete
  2. ನಿಜ, ಅವರದು ಮೇರು ವ್ಯಕ್ತಿತ್ವ

    ReplyDelete
  3. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

    ReplyDelete