Friday, October 2, 2009

ಎಂ.ಜಿ. ನಿನ್ನ ಜನುಮದಿನಕ್ಕೊಂದು ಸಾಲು.

ಪ್ರಿಯ ಎಂ.ಜಿ. ನೀನು ಎಂ.ಜಿ. ಆಗುವುದಕ್ಕಿಂತ ಮೊದಲು ಕಳ್ಳನಾಗಿದ್ದೆ. ಸುಳ್ಳನಾಗಿದ್ದೆ. ನಕಲು ಹೊಡೆದು ಬರೆಯುವವನಾಗಿದ್ದೆ. ಮಾಂಸ ತಿನ್ನುವವನಾಗಿದ್ದೆ. ನಿನ್ನ ಸತ್ಯದೊಂದಿಗಿನ ಒಂದು ಪ್ರಯೋಗ ನಮಗೆಲ್ಲಾ ಭಾಷಣ ಸ್ಪರ್ಧೆಗಳಲ್ಲಿ, ಪ್ರಬಂಧಗಳಲ್ಲಿ ಉಲ್ಲೇಖಿಸಲಷ್ಟೇ ಸಾಕಾಗುತ್ತಿದೆ. ನಿನ್ನೆಲ್ಲಾ ಅನುಭವಗಳನ್ನು, ಕಾರ್ಯಗಳನ್ನು ಓದಿದಾಗ ನೀನು ನಮ್ಮಂತೆ ರಕ್ತ ಮಾಂಸದ ಮುದ್ದೆಯಾಗಿರದೇ ಗುಡಿಯೊಳಗಿನ ಕಲ್ಲಾಗಿದ್ದೆ ಎಂದನಿಸುತ್ತದೆ. ಯಾಕೆಂದರೆ ಪವಾಡಗಳನ್ನೆಲ್ಲಾ ನಾವು ಗುಡಿಯ ಕಲ್ಲೊಳಗೆ ಇರುವ ದೇವರ ಮೇಲೆ ಆರೋಪಿಸುತ್ತೇವೆ. ಅದೇನು ನಂಬಿಕೆ ನಿನ್ನದು ಎನ್ನಬೇಕು. ಸತ್ಯ ಮತ್ತು ಅಹಿಂಸೆಯ ಅ ವನ್ನು ನಾವಿಂದು ಆಚೀಚೆ ಮಾಡಿಕೊಂಡಿದ್ದೇವೆ ಅಷ್ಟೆ. ನಮಗೆ ಇನ್ನೇನು ಗೊತ್ತು. ನೀನು ಊರಿಕೊಂಡಿರುವ ಕೋಲು ಮಾತ್ರ ನೇರವಿದೆ. ನೀನು ಹೊರಿಸಿದ ಸತ್ಯ, ನ್ಯಾಯ, ಸದ್ಧರ್ಮ, ಅಹಿಂಸೆಯ ಮೂಟೆಯನ್ನು ಹೊತ್ತುಕೊಂಡು ನಿನ್ನ ಬೆನ್ನಿನಂತೆ ನಾವು ಮಾತ್ರ ಬಾಗಿದ್ದೇವೆ. ಪ್ರಿಯ ಎಂ.ಜಿ. ನಿನ್ನ ರಸ್ತೆ, ವೃತ್ತ ಅಥವಾ ಮೈದಾನವಿಲ್ಲದ ಪೇಟೆಯಿಲ್ಲ. ಆದರೆ ಅವೆಲ್ಲ ಚಿಕ್ಕದಾಗುತ್ತಿವೆ.

ಬರೆಮೈಲಿದ್ದವ ಈಗ ನಮ್ಮ ದೇಶದ ಎಲ್ಲಾ ನೋಟುಗಳಲ್ಲಿ ರಾರಾಜಿಸುತಿದ್ದಿಯಲ್ಲಾ! ಭಳಾರೆ ಬನಿಯಾ! ಅನ್ನೋಣವೇ? ನಿನ್ನ ಜನುಮದಿನಕ್ಕೊಂದು ಸಲಾಮು. ಇಂದು ರಜೆ - ದೂರದರ್ಶನದಲ್ಲಿ ನಿನ್ನ ಕುರಿತು ಸಿನಿಮಾ ನೋಡಲು. ನಿನ್ನ ಹೆಸರಿರುವ ರಸ್ತೆಯಲ್ಲಿ ಸುತ್ತಿ ಬರಲು. ನೀನು ಮಾತ್ರ ಒಂದು ನಿಂತೇ ಇದ್ದಿಯಲ್ಲಾ ಆ ಮೂಲೆಯಲ್ಲಿ ಪ್ರತಿಮೆಯಾಗಿ. ನಮ್ಮೆಲ್ಲಾ ಗೊಂದಲಗಳನ್ನು ನೋಡುತ್ತಾ.
ಡಿಯರ್ ಎಂ.ಜಿ. ಹ್ಯಾಪಿ ಬಡ್ಡೇ, ಮ್ಯಾನ್!!

Thursday, October 1, 2009

ನಡುವಿನಲ್ಲೊಂದು ಕೊಮಾ

ಆತನಿಗೆ ಸಂಜೆಯಾಗುತ್ತಿದ್ದಂತೆ ಶರಾಬಿನ ಕ್ವಾರ್ಟರ್ ಒಂದು ಬೇಕಾಗುತ್ತಿತ್ತು. ಸಣ್ಣ ಹುಡುಗನನ್ನು ನಾಗೂನ ಗಡಂಗಿಗೆ ಕಳುಹಿಸಿ ಕ್ವಾರ್ಟರ್ ಅನ್ನು ತರಿಸಿಕೊಳ್ಳುತ್ತಿದ್ದನು. ಕ್ವಾರ್ಟರ್ ಇಲ್ಲದಿದ್ದರೆ ಆತನಿಗೆ ಸಂಜೆ ಕಳೆದು ರಾತ್ರಿ ಆಗಲಾರದು ಎಂಬಷ್ಟು ಭೀತಿಯಿತ್ತು. ಸೂರ್ಯ ಪಡುವಣದ ಕಡಲಿನಲ್ಲಿ ಓಕುಳಿಯಾಡಲು ತೊಡಗುತ್ತಿದ್ದಂತೆ ಆತನ ತಲೆಯೊಳಗೆ ಕುಡಿಯಲಿರುವ ಶರಾಬಿನ ಕುರಿತು ಯೋಚನೆಗಳು ತಿರುಗುತ್ತಿದ್ದವು. ಶರಾಬು ಕುಡಿದು ತನ್ನ ಹಳೆಯ ನೆನಪುಗಳನ್ನು ಬಿಚ್ಚಲು ತೊಡಗಿದರೆ ಕೇಳುವವರಿಗೇನೂ ಕಡಿಮೆಯಿರಲಿಲ್ಲ. ಸ್ವಾತಂತ್ರ್ಯ ಪೂರ್ವದ ದಿನಗಳು, ಭಯಾನಕ ಬರದ ಸ್ಥಿತಿ, ಬ್ರಿಟಿಷರ ಕಾಲದ ಪೊಲೀಸರ ದಬ್ಬಾಳಿಕೆ, ತಾನು ಓಡಿಸುತ್ತಿದ್ದ ಎತ್ತಿನ ಗಾಡಿಯಲ್ಲಿ ಮಂಜೇಶ್ವರಕ್ಕೋ, ಪುತ್ತೂರಿಗೋ ಹೋಗಿ ಬಂದ ವಿಚಾರ, ಭಟ್ಟರ ಅಂಗಳದಲ್ಲಿದ್ದ ಅಡಿಕೆಯನ್ನು ಕದ್ದು ಮಾರಿದ ಅಂದುಂkಯನ್ನು ಬಚಾವ್ ಮಾಡಿದ್ದು, ಹೀಗೆ ದಿನಕ್ಕೊಂದು ಕತೆಗಳು ಹೊರಬೀಳುತ್ತಿದ್ದವು.
ಸಂಜೆ ಮಾತ್ರ ಕುಡಿಯುತ್ತಿದ್ದ ಆತ ಮಧ್ಯಾಹ್ನ ಕಳ್ಳು ಕುಡಿಯಲು ಆರಂಭಿಸಿದ. ಬೆಳಿಗ್ಗೆ ಹನ್ನೊಂದಕ್ಕೆ ಪದವಿಗೆ ಹೊರಟರೆ ಬಾಬು ಪೂಜಾರಿಯ ಶೇಂದಿ ಅಂಗಡಿಯ ಮೊದಲ ಗಿರಾಕಿಯೇ ಅವನಾಗುತ್ತಿದ್ದ. ಕುಡಿಯುತ್ತಾ ಕುಡಿಯುತ್ತಾ ಮಧ್ಯಾಹ್ನ ಕಳೆದು ಸಂಜೆಯಾಗುತ್ತಿತ್ತು. ಕುಡಿದ ಅಮಲಿನಲ್ಲಿ ಎದುರಿಗೆ ಸಿಕ್ಕ ಹುಡುಗರನ್ನಾಗಲಿ, ಹೆಂಗಸರನ್ನಾಗಲಿ ತಡೆದು ನಿಲ್ಲಿಸಿ ಅವರಿಗೆ ಕತೆಹೇಳುತ್ತಿದ್ದ. ಕೆಲವೊಮ್ಮೆ ಹುರುಪಿನಿಂದ ಕೆಲವು ಪೇಟೆ ನೋಡಿದ ಹುಡುಗರು ಆತನಿಗೆ ಪೇಟೆಯ ಸುದ್ದಿಯನ್ನೂ ತಿಳಿಸುತ್ತಿದ್ದರು. ಹುಡುಗರಿಂದ ಕೇಳಿದ ಸುದ್ದಿಯನ್ನೇ ಸಂಜೆ ಎಲ್ಲರಿಗೂ ಕತೆಯಾಗಿ ಹೇಳುತ್ತಿದ್ದ. ಊರಿಗೆ ಬರುವ ಒಂದು ಬಸ್ಸು, ಅದು ಡಾಮರಿಲ್ಲದ ರಸ್ತೆಯಲ್ಲಿ ಚಲಿಸುವಾಗ ಏಳುವ ಧೂಳು, ದಿಕ್ಕು ತಪ್ಪುತ್ತಿರುವ ಊರು, ಎಲ್ಲವೂ ಮತ್ತೆ ಕತೆಯಾಗುತ್ತಿದ್ದವು.
ಆತ ಇದ್ದಕ್ಕಿದ್ದಂತೆ ಕುಡಿಯುವುದನ್ನು ನಿಲ್ಲಿಸಿದ. ಬೆಳಗೆದ್ದು ತೋಟದ ಬಾಳೆಗಿಡಗಳಿಗೆ ನೀರು ಹಾಕುತ್ತಿದ್ದ. ಬಾವಿಯಲ್ಲಿ ನೀರು ಕಡಿಮೆಯಾಗುತ್ತಿದ್ದಾಗ ಅದರ ಹೂಳೆತ್ತುತ್ತಿದ್ದ. ಸಂಜೆಯಾದಂತೆ ಬೆಳೆದ ಬಾಳೆಗೊನೆಗಳನ್ನು ಪೇಟೆಗೆ ಹೋಗಿ ಮಾರುತ್ತಿದ್ದ. ಜತೆಗೆ ಆತ ಬಡಗಿಯ ಕೆಲಸವನ್ನು ಮಾಡಲು ತೊಡಗಿದ. ಹಿಂದೆ ಎಂದೋ ಕಲಿತಿದ್ದೆ ಎಂದು ಕೇಳಿದವರಿಗೆ ಹೇಳುತ್ತಿದ್ದ. ಅಲ್ಲಿ ಇಲ್ಲಿ ಬಿದ್ದಿದ್ದ ಮರದ ತುಂಡುಗಳು ಒಂದೆಡೆ ಸೇರಿದವು. ಭಟ್ಟರು ತೋಟದಲ್ಲಿ ಕಡಿಸಿ ಹಾಕಿದ್ದ ಮಾವಿನ ಮತ್ತು ಹಲಸಿನ ಮರಗಳನ್ನು ಗರಗಸದಲ್ಲಿ ಸಿಗಿಸಿದ. ಹಲಗೆಗಳು ರೀಪುಗಳು, ಅಡ್ಡಗಳು ತಯಾರಾದವು. ಕೆಲಸ ಭರದಿಂದ ಸಾಗುತಿತ್ತು. ನೋಡುನೋಡುತ್ತಿದ್ದಂತೆ ಮನೆಯಲ್ಲಿ ಮರದ ಕುರ್ಚಿಗಳು, ಮೇಜು, ಮಂಚ, ಬೆಂಚು, ಮಣೆ ಎಲ್ಲವೂ ತಯಾರಾದವು. ಈ ಮಧ್ಯೆ ಆತ ಕುಡಿಯುತ್ತಿರಲಿಲ್ಲ. ಆದರೆ ಸಂಜೆಯಾದಂತೆ ಯಾರಾದರೂ ಇವನನ್ನು ಕಾಣಲು ಬಂದರೆ ಕತೆ ಮಾತ್ರ ಅದೇ ಸೊಬಗಿನಲ್ಲಿ ಹೇಳುತ್ತಿದ್ದ.
ಮತ್ತೆ ಒಂದು ಸಂಜೆ ಹುಡುಗನನ್ನು ಕರೆದ. ನಾಗೂನ ಗಡಂಗಿಗೆ ಹೋಗಿ ಒಂದು ಕ್ವಾರ್ಟರ್ ಶರಾಬು ತಾ ಎಂದ. ಮತ್ತೆ ಕುಡಿಯಲು ತೊಡಗಿದ. ಮತ್ತೆ ಶುರುಮಾಡಿದೆಯಾ ಎಂದು ಕೇಳಿದವರಿಗೆ ನಾನೇನೂ ಶರಾಬಿನ ದಾಸನಲ್ಲ. ನನ್ನದು ಚಟವಲ್ಲ. ಅದೇನೋ ಆನಂದಕ್ಕೆ ಕುಡಿಯುತ್ತೇನೆ. ಬೇಡವೆಂದಾಗ ಬಿಡುತ್ತೇನೆ ಎಂಬ ಧೈರ್ಯ ನನಗಿದೆ, ಎಂದ. ನಾನು ಕುಡಿಯುವುದರಿಂದ ನಿಮಗೇನು ತೊಂದರೆಯಿಲ್ವಲ್ಲ ಎಂದ.
ಮತ್ತೆ ಬ್ಲಾಗ್ ಬರೆಯಲು ತೊಡಗಬೇಕು ಎಂದು ನನಗನಿಸಿದಾಗ ಅವನ ನೆನಪಾಯಿತು. ಅವನಂದಂತೆ ಬ್ಲಾಗ್ ಬರೆಯುವುದು ನನ್ನ ಚಟವಲ್ಲ. ಅದೇನೋ ಆನಂದಕ್ಕೆ ಬರೆಯುತ್ತೇನೆ. ಬೇಡವೆಂದಾಗ ಬಿಡುತ್ತೇನೆ ಎಂಬ ಧೈರ್ಯ ನನಗಿದೆ. ನಾನು ಬರೆಯುವುದರಿಂದ ನಿಮಗೇನು ತೊಂದರೆಯಿಲ್ವಲ್ಲ!
ಒಲವಿನಿಂದ
ಬಾನಾಡಿ