Monday, April 27, 2009

ಬುದ್ಧನ ನೆನಪುಗಳು


ತನ್ಮಯ ಬರುತ್ತಾನೆ ಎಂದು ನಮ್ಮ ಮನೆಮಂದಿಗೆಲ್ಲಾ ಸಂಭ್ರಮ. ತನ್ಮಯ ನಮ್ಮ ನೆರೆಮನೆಯ ಹುಡುಗ. ಆತನಿಗೆ ಎರಡು ವರ್ಷವಿದ್ದಾಗ ಆತನ ತಂದೆಗೆ ಗುಜರಾತಿಗೆ ಕೆಲಸದ ವರ್ಗವಾಗಿ ಈಗ ನಾಲ್ಕು ವರ್ಷವಾಯಿತು. ಮತ್ತೆ ಅವರು ನಮ್ಮ ಊರಿಗೆ ಬರುತ್ತಾರೆ. ಆತನಿಗೆ ಈಗ ಆರು ವರ್ಷ. ತನ್ಮಯನ ಅಪ್ಪ ನನಗೆ ಫೋನ್ ಮಾಡಿ ತನ್ಮಯನಿಗೆ ಶಾಲೆಯೊಂದನ್ನು ಹುಡುಕಿ ಇಡಲು ಹೇಳಿದ್ದಾನೆ. ನಮ್ಮ ಹತ್ತಿರದ ನಾಲ್ಕಾರು ಶಾಲೆಗಳ ದರ್ಶನ ಮಾಡಿ ಬಂದಿದ್ದೇನೆ. ಎಲ್ಲೂ ಪ್ರವೇಶವಿಲ್ಲ. ಒಂದೆರಡು ಶಾಲೆಯವರು ಅವರ ಎಪ್ಪತ್ತು ಕಿಲೋಮೀಟರ್ ದೂರದ ಶಾಖೆಯೊಂದರಲ್ಲಿ ಪ್ರವೇಶ ದೊರೆಯುವ ಸಾಧ್ಯತೆ ಇದೆ ಎಂದಿದ್ದಾರೆ. ತನ್ಮಯ ನಮಗೆಲ್ಲಾ ಅಚ್ಚುಮೆಚ್ಚು. ಹಾಗಾಗಿ ಅವನಿಗಾಗಿ ನಾವೇನೂ ಬೇಕಾದರೂ ಮಾಡಬಲ್ಲೆವು. ಶಾಲೆಯ ಪ್ರವೇಶಕ್ಕಾಗಿ ಬಹಳಷ್ಟು ಮಂದಿಯೊಡನೆ ಮಾತಾಡಿ ಇಟ್ಟಿದ್ದೇವೆ. ಆತ ಇಲ್ಲಿಗೆ ಬರುತ್ತಲೇ ಆತನ ಹುಟ್ಟಿದ ಹಬ್ಬ. ಹೌದು ನಮಗಿನ್ನೂ ನೆನಪಲ್ಲಿದೆ. ಆತನ ಅಮ್ಮ ಸ್ಮ್ರಿತಾ ಸಿಸೇರಿಯನ್ ಹೆರಿಗೆಯಾಗಲು ಇನ್ನೊಂದು ಮೂರು ದಿನಗಳಲ್ಲಿ ಯಾವಾಗ ಆಗಬಹುದೆಂದು ಕೇಳಿದಾಗ, ಒಳ್ಳೆಯದಿನವೆಂದು ಬುದ್ಧ ಪೂರ್ಣಿಮೆಯ ದಿನವನ್ನು ಆಯ್ಕೆ ಮಾಡಿದ್ದಳು. ಬರುವ ಬುದ್ಧ ಪೂರ್ಣಿಮೆಗೆ ತನ್ಮಯ ಬಂದೇ ಬರುತ್ತಾನೆ ನಮ್ಮ ನೆರೆಮನೆಗೆ. ಅವನ ಹುಟ್ಟಿದ ಹಬ್ಬ ನಮಗೂ ಗಮ್ಮತ್ತು.

ಏಪ್ರಿಲ್ ಆರಂಭದಲ್ಲಿ ನಾನು ಒರಿಸ್ಸಾದ ಕರಾವಳಿಯಲ್ಲಿದ್ದೆ. ಸುಡು ಬಿಸಿಲು ಆಗಷ್ಟೇ ಆರಂಭವಾಗಿತ್ತು. ಸಮುದ್ರ ಶಾಂತವಾಗಿತ್ತು. ನಿರಂತರ ರೌದ್ರ ರೂಪ ತಾಳುವ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸದಾ ಕಾಡುತ್ತಿರುತ್ತದೆ. ನಾವು ಹಿಂತಿರುಗಿದ ಕೆಲವು ದಿನಗಳಲ್ಲಿ ಬಿಜ್ಲಿ ಎಂಬ ಚಂಡಮಾರುತ ಬಂದು ಅಪ್ಪಲಿಸದೆ ಹೋಯಿತು. ಒರಿಸ್ಸಾದ ಕರಾವಳಿ ಮತ್ತು ಸಣ್ಣ ಪಟ್ಟಣ, ಹಳ್ಳಿಗಳನ್ನು ಸುತ್ತುತ್ತಿರುವಂತೆ ಅದು ಕಳಿಂಗರಾಜ್ಯ ಎಂದು ನನಗೆ ನೆನಪಾಯಿತು.

ಕ್ರಿಸ್ತ ಪೂರ್ವದಿಂದಲೇ ಕಳಿಂಗರಾಜ್ಯ ಒಂದು ಸ್ವತಂತ್ರ ದೇಶವಾಗಿತ್ತು. ಬುಡಕಟ್ಟು ವಂಶಸ್ತರು ರಾಜ್ಯವಾಳುತ್ತಿದ್ದರು. ವೇದಕಾಲದಲ್ಲೂ ಈ ರಾಜ್ಯ ಇತರ ದೇಶಗಳಂತೆ ವೇದಕಾಲದ ರಾಜರಿಗಿಂತ ಹೊರಗಿತ್ತು. ಹದಿನೈದನೆ ಶತಮಾನದ ವರೆಗೆ ಇಲ್ಲಿ ಬ್ರಾಹ್ಮಣರ ಪ್ರಭಾವ ಕಡಿಮೆಯಿತ್ತು. ಆಡಳಿತ ಮತ್ತು ಯುದ್ಧದಲ್ಲಿ ಅಲ್ಲದೆ ಕಲೆ ಮತ್ತು ಸಂಸ್ಕೃತಿಯಲ್ಲಿಯೂ ಈ ದೇಶ ಉತ್ತುಂಗದಲ್ಲಿತ್ತು. ಕ್ರಿಸ್ತ ಪೂರ್ವ ೨೧೦ ರ ಸುಮಾರಿಗೆ ಚಂದ್ರಗುಪ್ತ ಮೌರ್ಯನ ಮೊಮ್ಮಗ ಸಾಮ್ರಾಟ ಅಶೋಕನು ಕಳಿಂಗ ರಾಜ್ಯವನ್ನು ಕಬಳಿಸಲು ದಂಡೆತ್ತಿಕೊಂಡು ಬಂದನು. ಪರಾಕ್ರಮಿಗಳಾದ ಕಳಿಂಗದ ಸೈನಿಕರು ಸಾಮ್ರಾಟ ಅಶೋಕನ ಸೈನ್ಯವನ್ನು ಕೆಚ್ಚೆದೆಯಿಂದ ಎದುರಿಸಿದರು. ಆ ಯುದ್ಧ ಆ ಕಾಲದ ಅತ್ಯಂತ ಕರಾಳವಾದ ಯುದ್ಧವಾಗಿತ್ತು. ರಕ್ತದೋಕುಳಿಯಾದ ರಣರಂಗ ಭೀಭತ್ಸವಾಗಿತ್ತು. ಜಗತ್ತನ್ನೇ ಯುದ್ಧದಿಂದ ಗೆಲ್ಲಲು ಹೊರಟ ಸಾಮ್ರಾಟ್ ಅಶೋಕನ ಎದೆಯನ್ನೆ ಕರಗಿಸಿತು. ಅಹಿಂಸಯನ್ನೇ ಧರ್ಮವೆಂದು ಭೋದಿಸಿದ ಬುದ್ಧನ ಅನುಯಾಯಿಯಾಗಿ ಸಾಮ್ರಾಟ ಅಶೋಕನು ಉಳಿದ ಬದುಕನ್ನು ಕಳೆದನು. ಭುವನೇಶ್ವರದ ಬಳಿಯಲ್ಲಿರುವ ದೌಳಿ ಎಂಬಲ್ಲಿ ಅಶೋಕನ ಶಿಲಾಶಾಸನವಿದೆ. ೧೮೩೭ ರಲ್ಲಿ ಲೆ. ಕಿಟ್ಟೋ ಕಂಡುಹಿಡಿದ ಈ ಶಾಸನದಲ್ಲಿ ಕಳಿಂಗ ಯುದ್ಧದ ನಂತರ ಅಶೋಕನು ಕಳಿಂಗರಾಜ್ಯದ ಜನತೆಗೆ ಅಹಿಂಸೆಯ ಮತ್ತು ಭರವಸೆಯ ಮಾತುಗಳನ್ನು ಬರೆಸಿದ್ದಾನೆ. ಮಹಾರಾಜನ ಪಾಕಶಾಲೆಯಲ್ಲಿ ಮಾಂಸದಡುಗೆಯ ನಿರ್ಬಂಧ, ವೈದ್ಯಕೀಯ ಶುಶ್ರೂಸೆಗಾಗಿ ವ್ಯವಸ್ಥೆ, ರಾಜ್ಯದ ಜನತೆಗೆ ನೈತಿಕ ಧರ್ಮದ ಭೋಧನೆ ಇತ್ಯಾದಿಗಳನ್ನು ಪಾಲಿ ಭಾಷೆಯಲ್ಲಿ ಬರೆಸಲಾದ ಈ ಶಿಲಾಶಾಸನದಲ್ಲಿ ಕಾಣಬಹುದು. ಈ ಶಿಲಾಶಾಸನಗ ಬಂಡೆಯ ಮೇಲ್ಗಡೆ ಆನೆಯ ಕೆತ್ತಲಾಗಿದೆ. ಬುದ್ಧನು ಗಜೋತ್ತಮನಾಗಿ ತನ್ನ ತಾಯಿಯ ಗರ್ಭ ಸೇರಿದುದನ್ನು ಈ ಶಿಲ್ಪವು ಸಾರುತ್ತದೆ.

ಅಶೋಕನು ತನ್ನ ಮಗ ಮಹಿಂದನ ಮೂಲಕ ಬುದ್ಧ ಧರ್ಮವನ್ನು ಶ್ರೀಲಂಕಾಗೆ ಕಳುಹಿಸಿದನು. ಇಂದು ಶ್ರೀಲಂಕಾದ 70ಶೇಕಡಾ ಜನಸಂಖ್ಯೆ ಬೌದ್ಧಧರ್ಮದ ಅನುಯಾಯಿಗಳು. ಲಂಕೆ ಮತ್ತೆ ಉರಿಯುತ್ತಿದೆ. ಅಲ್ಲಿನ ಜನಸಾಮಾನ್ಯರು ದಿಕ್ಕೆಟ್ಟಿದ್ದಾರೆ. ಬುದ್ಧ ಮತ್ತೆ ಮತ್ತೆ ನೆನಪಾಗುತ್ತಾನೆ.

ಒಲವಿನಿಂದ

ಬಾನಾಡಿ

©Both Photo by Author

6 comments:

 1. ತನ್ಮಯನ ಮೂಲಕ ಬುದ್ಧನೆಡೆಗೆ ನೀವು ಚಲಿಸಿದ ರೀತಿ ಆಪ್ತವಾಗಿದೆ. ಬುದ್ಧಧರ್ಮವು ಇದ್ದಲ್ಲಿ ಈಗ ಯುದ್ಧಧರ್ಮವೇ
  ಕಾಣುತ್ತಿದೆ! ಇದಕ್ಕೆ ಕೊನೆ ಇದೆಯೆ?

  ReplyDelete
 2. ಬಾನಾಡಿ ಸರ್..
  ತನ್ಮಯನ ಶಾಲಾ ವಿಷ್ಯ ಅಂದುಕೊಂಡು ಓದ್ತಾ ಇದ್ರೆ ಬುದ್ಧನೆಡೆಗೆ! ತುಂಬಾ ಒಳ್ಳೆಯ ಬರಹ ಸರ್.
  -ಧರಿತ್ರಿ

  ReplyDelete
 3. ತನ್ಮಯ, ಬುದ್ಧ ಪೂರ್ಣಿಮೆ, ಕಳಿಂಗ, ಅಶೋಕ, ಬೌಧ್ಧ ಧರ್ಮ, ಮಹಿಂದ, ಶ್ರೀಲಂಕೆ, ಯುದ್ಧ ಒಂದೇ ಎಳೆಯಲ್ಲಿ ನಿರಾಳವಾಗಿ ಹೇಳಿದ್ದೀರಿ.

  ReplyDelete
 4. ಮಾಹಿತಿ ಪೂರ್ಣ ಲೇಖನ... ಥ್ಯಾಂಕ್ಸ್.

  ReplyDelete
 5. I am expecting something new, Why can't you upload your dehali poems?

  ReplyDelete
 6. Keep on writing, you are young and can do better

  ReplyDelete