Thursday, March 26, 2009

ನಾಲ್ಕನೆ ಸ್ಥಂಭ

ಕಳೆದ ಮಹಾಚುನಾವಣೆಯ ಈ ಚುನಾವಣೆಯ ನಡುವೆ ಸಾರ್ವಜನಿಕ ಬದುಕಿನಲ್ಲಿ ಮತ್ತು ಕೆಲವರಿಗೆ ವೈಯಕ್ತಿಕ ಬದುಕಿನಲ್ಲೂ ಮಾಧ್ಯಮಗಳು ಅತೀವ ಪರಿಣಾಮ ಬೀರಿವೆ. ಕೆಲವೊಮ್ಮೆ ಮಾಧ್ಯಮಗಳು ಅತಿರೇಕದ ವರದಿಗಳಿಂದ ಒಂದು ಓದುಗವರ್ಗದ ಒಲವನ್ನು ಗಳಿಸಿದರೆ ಅಷ್ಟೇ ಪ್ರಾಮುಖ್ಯವಾಗಿ ಸಾರ್ವಜನಿಕವಾಗಿ ತನ್ನ ಪ್ರತಿಷ್ಟೆಯನ್ನು ಕಳೆದುಕೊಳ್ಳುವಂತಹ ಮಟ್ಟಿಗೆ ಇಳಿದಿತ್ತು. ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಸ್ಥಂಭ ಎಂದು ಪರಿಗಣಿಸಿದ ಸಮಾಜವು ಅದು ಪ್ರಜಾಸತ್ತಾತ್ಮಕತೆ ಮತ್ತು ಮಾಹಿತಿ ಹಕ್ಕುಗಳ ಪರಿಮಿತಿಯಾಚೆ ವೈಯಕ್ತಿಕ ದಾಳಿ ನಡೆಸುವುದನ್ನು ಕಂಡು ಕೆಲವೊಮ್ಮೆ ದಂಗುಬಡಿದು ಭ್ರಮನಿರಶನಗೊಂಡದ್ದೂ ಇದೆ. ಗುಣಾತ್ಮಕ ಲಕ್ಷಣಗಳನ್ನು ಪರಿಗಣಿಸಿದಾಗ ಮಾಧ್ಯಮದ ಶಕ್ತಿಯಿಲ್ಲದೆ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಯು ಜನರ ಆಶೋತ್ತರಗಳನ್ನು ಈಡೇರಿಸಲಾರದು ಎಂದನಿಸುತ್ತದೆ. ಆದರೆ ಸಮಾಜವನ್ನು ಅಧೋಗತಿಗೆ ತೆಗೆದುಕೊಂಡು ಹೋಗುವ ಮಾಧ್ಯಮದ ದುಷ್ಪರಿಣಾಮಗಳು ಬಹಳಷ್ಟು ಮಾರಕಪ್ರಾಯವಾಗಿವೆ.
ಚುನಾವಣೆ ಘೋಷಣೆಗೆ ನಮ್ಮ ವಾಣಿಜ್ಯೀಕೃತ ಮಾಧ್ಯಮಗಳು ಹಾತೊರೆದು ಕಾದಿದ್ದವು. ಚುನಾವಣೆಯ ಕೆಲ ತಿಂಗಳ ಮೊದಲಿಂದ ಆರಂಭವಾದ ಸರಕಾರಿ ಜಾಹೀರಾತುಗಳು ಆರ್ಥಿಕ ವ್ಯವಸ್ಥೆ ಕುಸಿದು ಮಾಧ್ಯಮ ಸಂಸ್ಥೆಗಳು ಅನುಭವಿಸುತ್ತಿದ್ದ ನಷ್ಟವನ್ನು ನೀಗಲು ಸಹಾಯವಾಯಿತು. ವೃತ್ತಪತ್ರಿಕೆಗಳಲ್ಲಿ ಇಡೀಪುಟಗಳ ಜಾಹೀರಾತುಗಳು ತುಂಬಿ ತುಳುಕಾಡಿದವು. ಇಲೆಕ್ಟ್ರಾನಿಕ್ ಮಾಧ್ಯಮಗಳು ಮುಖ್ಯವಾಗಿ ರೇಡಿಯೋ, ಟಿವಿ ಮತ್ತು ವೆಬ್‌ಸೈಟ್‌ಗಳು ಕೂಡ ಈ ಸಲದ ಚುನಾವಣೆಯಲ್ಲಿ ಬಹಳಷ್ಟು ಹಣಮಾಡಿದವು. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಅವರ ವೆಬ್‌ಸೈಟ್‌ನ ಜಾಹಿರಾತು ಲಿಂಕ್‌ಗಳು ಎರಡು ಸಾವಿರಕ್ಕೂ ಹೆಚ್ಚು ವೆಬ್‌ಸೈಟ್‌ಗಳಲ್ಲಿ ಜಾಹಿರಾತು ನೀಡಿದೆ.
ಚುನಾವಣೆ ಆರಂಭವಾದಂತೆ ಮಾಧ್ಯಮಗಳಲ್ಲಿ ವರದಿಗಾರಿಕೆಯ ವಿಶ್ಲೇಷಣೆ ನಡೆಸಿದರೆ ಈಗಾಗಲೇ ಸ್ಥಾಪಿತವಾದಂತೆ ಬೆರಳೆಣಿಕೆಯ ಕೆಲವೊಂದು ಪತ್ರಿಕೆಗಳನ್ನು ಬಿಟ್ಟರೆ ಉಳಿದವೆಲ್ಲಾ ತಾವು ಬೆಂಬಲಿಸುವ ರಾಜಕೀಯ ಧೋರಣೆಗಳನ್ನು ಓದುಗರ ಮೇಲೆ ಹೇರುವ ಕೆಲಸವನ್ನು ನಾಚಿಕೆಯಿಲ್ಲದೆ ಮಾಡುತ್ತಿವೆ. ಸಮಾಜದ ನಾಲ್ಕನೆ ಸ್ಥಂಭದ ಜವಾಬ್ದಾರಿಯನ್ನು ಹೊತ್ತ ಮಾಧ್ಯಮಗಳು ಏನು ಮಾಡುತ್ತಿವೆ ಎಂದು ಆತ್ಮವಿಮರ್ಶೆಮಾಡಿಕೊಳ್ಳುವ ಅವಶ್ಯಕತೆಯನ್ನು ಅವರಾಗಿ ಮಾಡುವುದಿಲ್ಲ. ಇತರ ವೇದಿಕೆಯಲ್ಲಿ ಅಂತಹ ಕೆಲಸ ನಡೆದರೆ ಅದು ಸುದ್ದಿಯಾಗುವುದಿಲ್ಲ. ಇದೊಂದು ವ್ಯತಿರಿಕ್ತವಾದ ಆಭಾಸ.
ಇದರ ನಡುವೆ ನನ್ನ ಪರಿವೀಕ್ಷಣೆಯಲ್ಲಿ ಕಂಡ ಇನ್ನೂ ಕುತೂಹಲಕಾರಿ ಸಂಗತಿಯೆಂದರೆ ನಾಲ್ಕನೆ ಸ್ಥಂಭ ಎನ್ನುವ ಮಾಧ್ಯಮಕ್ಕಿಂತ ಹೆಚ್ಚು ಪರಿಣಾಮಕಾರಿ ಹಾಗೂ ಶಕ್ತಿಶಾಲಿಯಾದುದು ಭಾರತದ ರಾಜಕಾರಣ. ನಾವು ನಮ್ಮ ರಾಜಕಾರಣಿಗಳ ಬಗ್ಗೆ ಎಷ್ಟೇ ನಕರಾತ್ಮಕ ಭಾವನೆಯನ್ನೇ ಇಟ್ಟುಕೊಂಡರೂ ಕಟ್ಟಕಡೆಗೂ ಜಯಿಸುವುದು ಅವರೇ. ಎನ್‌ಡಿಎ, ಯುಪಿಎ, ಎಡ ಮತ್ತು ತೃತಿಯ ರಂಗಗಳೆಂದು ಮೂರ್ನಾಲ್ಕು ಮುಖ್ಯವಾಹಿನಿಯಾಗಿದ್ದ ರಾಜಕೀಯ ಧ್ರುವೀಕರಣ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ ಬಿಸಿಲ ಬೇಗೆಗೆ ಕರಗುವ ಹಿಮದಂತೆ ರಾಜಕೀಯ ಪಕ್ಷಗಳ ಒಕ್ಕೂಟಗಳು ಸಡಿಲಗೊಳ್ಳುತ್ತಿವೆ. ಒರಿಸ್ಸಾದಲ್ಲಿ ಬಿಜೆಡಿಯು ಬಿಜೆಪಿಯಿಂದ ದೂರ ಹೋದರೆ ಯುಪಿಎಯ ಅಂಗ ಪಕ್ಷಗಳು ನಾವು ನಮ್ಮದೇ ದಾರಿ ನೋಡುತ್ತೇವೆ ಎಂಬಂತೆ ವರ್ತಿಸುತ್ತಿವೆ. ಇಂದು ಇಡೀ ಭಾರತದ ಮಹಾಚುನಾವಣೆಯಲ್ಲಿ ಪ್ರಧಾನಿಯಾಗುವ ಆಕಾಂಕ್ಷಿಗಳು ಒಬ್ಬರಲ್ಲ, ಇಬ್ಬರಲ್ಲ. ಸಂಭವನೀಯ ಪ್ರಧಾನಿಗಳು ಯಾವುದೇ ಒಂದು ಕೂಟದಲ್ಲಿ ಇರಲು ಒಪ್ಪುವುದಿಲ್ಲ. ಅಡ್ವಾಣಿ, ಮನಮೋಹನ್ ಸಿಂಗ್, ಮಾಯಾವತಿ, ಮುಲಾಯಂ ಸಿಂಗ್, ಶರದ್ ಪವಾರ್, ಲಾಲು ಪ್ರಸಾದ್, ರಾಮ ವಿಲಾಸ್ ಪಾಸ್ವಾನ್, ದೇವೇಗೌಡ ಮೊದಲಾದವರು ಚುನಾವಣೆಯ ಪರಿಣಾಮದಲ್ಲಿ ಕಿಂಚಿತ್ ಏರುಪೇರುಗಳಾದರೂ ತಾವು ಪ್ರಧಾನಿಯಾಗಬಲ್ಲೆ ಎಂಬ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ತಮ್ಮ ತಮ್ಮ ದಾಳಗಳನ್ನು ಪಣಕ್ಕಿಡುತ್ತಿದ್ದಾರೆ.
ಈ ಬೆಳವಣಿಗೆಯಿಂದ ಮಾಧ್ಯಮಗಳಲ್ಲಿ ವಿಶ್ಲೇಷಣೆ ಮಾಡುತ್ತಿರುವ ಪರಿಣಿತರಿಗೆ ದಿಕ್ಕು ಕೆಟ್ಟಂತಾಗಿದೆ. ಮಹಾನ್ ಸಂಪಾದಕರುಗಳು ರಾಜಕೀಯ ಬೆಳವಣಿಗೆಗಳಿಂದ ಗಾಬರಿಯಾದಂತಿದೆ. ನಿಷ್ಟುರವಾದ ಸಂಪಾದಕೀಯಗಳು, ಓದುಗರಿಗೆ ಸ್ಪಷ್ಟದಿಶೆಯನ್ನು ನೀಡುವ ಅಗ್ರಲೇಖನಗಳು, ಪ್ರಜಾಪ್ರಭುತ್ವದ ಬೆಳವಣಿಗೆಗೆ ಪೂರಕವಾದ ರಾಜಕೀಯ ಅಭಿಪ್ರಾಯಗಳನ್ನು ಮೂಡಿಸುವ ಅಂಕಣಬರಹಗಳು ವೃತ್ತ ಪತ್ರಿಕೆಗಳ ಪುಟಗಳಿಂದ ಬಹಳ ದೂರ ಹೋಗಿವೆ. ಮಾಧ್ಯಮ ಉದ್ಯಮವಾಗಿ ಮತ್ತು ತಾಂತ್ರಿಕವಾಗಿ ಅತ್ಯಂತ ಉನ್ನತ ಸ್ಥಾನದಲ್ಲಿದೆ. ಆದರೆ ವೃತ್ತಿನಿಷ್ಟತೆ ಮತ್ತು ಪ್ರಜಾಪ್ರಭುತ್ವದ ನಾಲ್ಕನೆ ಸ್ಥಂಭವಾಗಿ ಇರಬೇಕಾದ ಮಾಧ್ಯಮ ಕುಸಿಯುತ್ತಿದೆ. ಸಂವಹನದ ವಿದ್ಯಾರ್ಥಿಯಾಗಿ ಒಳಗೊಳಗೆ ನಾನು ನೊಂದುಕೊಳ್ಳುತ್ತಿದ್ದೇನೆ. ಜಯ್ ಹೋ...

3 comments:

 1. ಪ್ರಜಾಪ್ರಭುತ್ವದ ಈ ನಾಲ್ಕನೆಯ ಕಂಬ, ಉಳಿದ ಮೂರು ಕಂಬಗಳಂತೆ ಯಾವಾಗಲೋ ಮುರಿದು ಬಿದ್ದು ಹೋಗಿದ!
  ಜೈ ಹೋ ಜಿ.

  ReplyDelete
 2. ಗುಜರಾತ್ ಚುನಾವಣೆಯಲ್ಲಿ ಮಾಧ್ಯಮಗಳು ಏನೇ ಹೇಳಿದರೂ ಜನ ಬೇರೆ ರೀತಿಯಲ್ಲಿ ಮತದಾನ ಮಾಡಿದರು. ಭಾರತದ ಜನರು ಹೇಗೆ ಮತ ಹಾಕುತ್ತಾರೆ ಎಂಬುದನ್ನು ವಿಶ್ಲೇಷಿಸುವಲ್ಲಿ ಮಾಧ್ಯಮಗಳು ದಯನೀಯವಾಗಿ ಸೋತಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿ ಅಧಿಕಾರಕ್ಕೆ ಬರುವುದಿಲ್ಲ ಅಂತ ಹೆಚ್ಚಿನವರು ಹೇಳಲಿಲ್ಲ. ನಮ್ಮ ಮಾಧ್ಯಮಗಳು ನಮ್ಮ ಕಾಲದ ಶಕ್ತಿ ರಾಜಕಾರಣದ ಭಾಗಗಳೇ ಆಗಿ ವರ್ತಿಸುವುದರಿಂದ ಅವಕ್ಕೆ ವರ್ತಮಾನ ಕಾಲದ ಸಮಾಜದಿಂದ ಸಿಡಿದು ದೂರನಿನ್ಥು ಜನಕ್ಕೆ ಮಾರ್ಗದರ್ಶನ ಮಾಡುವ ಅಧಿಕಾರವಾಗಲೀ ಶಕ್ತಿಯಾಗಲೀ ಇಲ್ಲವಾಗಿದೆ. ಈ ಕೆಲಸವನ್ನು ಅತ್ಯುತ್ತಮ ಕಲಾಕೃತಿಗಳು ಮಾಡುತ್ತವೆ ಎಂಬುದನ್ನು ಮರೆಯದಿರೋಣ. ಜನ ಸ್ವಾತಂತ್ರ್ಯದ ಅಮಲಿನಲ್ಲಿ ಇದ್ದಾಗ ಕಾರಂತರು ತಣ್ಣನೆ ಚೋಮನ ದುಡಿ ಬರೆದರಲ್ಲ ಹಾಗೆ.

  ReplyDelete
 3. ಮುರಿದ ಕಂಬಗಳ ಪುರಾತನ ಶಿಲಾಪ್ರಕಾರ ಆಗದಿರಲಿ ಎಂಬ ಎಚ್ಚರಿಸುವ ನಿಮ್ಮ ಮಾತುಗಳು ಅಕ್ಷರಶಃ ಸತ್ಯ.

  ReplyDelete