Thursday, March 5, 2009

ಮಹಾಚುನಾವಣೆ

ಮಹಾಚುನಾವಣೆ ಹೊಸ್ತಿಲಲ್ಲಿ ನಿಂತಿದೆ. ಜನ ಸಾಮಾನ್ಯ ನಿರ್ಣಾಯಕನಾಗಿದ್ದಾನೆಯೇ ಅಥವಾ ಗೊಂದಲದಲ್ಲಿದ್ದಾನೆಯೇ? ಫಲಿತಾಂಶಕ್ಕೆ ಕಾಯಬೇಕೇ ಅಥವಾ ಸಮೂಹ ಮಾಧ್ಯಮಗಳು ಜನಸಾಮಾನ್ಯರ ಎದೆಯೊಳಗಿನ ಬಿಸಿಯನ್ನು ಅಳೆಯುವ ಸಾಮಾರ್ಥ್ಯ ಹೊಂದಿವೆಯೆ? ಜನಪ್ರಿಯ ಮಾಧ್ಯಮಗಳಲ್ಲಿ ಸಮಗ್ರ ಚಿತ್ರಣವನ್ನು ವಸ್ತುನಿಷ್ಟತೆಯಿಂದ ನೀಡುವ, ಪಕ್ಷಾತೀತ ಧೋರಣೆಯಿದೆಯೇ? ನಾವು ನಂಬಬಹುದಾದ ಅಂಕಣಕಾರರು ಎಷ್ಟು ಮಂದಿ ಇದ್ದಾರೆ. ಯಾವುದೇ ಒಂದು ಪಕ್ಷವನ್ನು ಸಮರ್ಥಿಸುವ ಅಥವಾ ವಿರೋಧಿಸುವ ನೀತಿಯನ್ನು ಹೊಂದಿರುವ ನಿವೃತ್ತ ಸಂಪಾದಕರುಗಳಿಂದ ಹಿಡಿದು ದೇಶದ ಸಂವಿಧಾನವನ್ನು ಇನ್ನೂ ಓದದ ಕಬ್ ವರದಿಗಾರರ ಮಾಧ್ಯಮದ ಮಳೆಗೆ ವೈಯಕ್ತಿಕ ಸಿದ್ಧಾಂತಗಳ ಮೇಲೆ ನಿಂತು ದೇಶದ ಗಹನವಾದ ವಿಚಾರಗಳನ್ನು ಮತವಾಗಿ ಪರಿವರ್ತಿಸುವ ಜಾಣ್ಮೆಯನ್ನು ಜನಸಾಮಾನ್ಯ ಎಲ್ಲಿಂದ ಪಡೆಯಬೇಕು? ಪತ್ರಿಕೋದ್ಯಮದಲ್ಲಿ ವಸ್ತುನಿಷ್ಟತೆ ಅಗತ್ಯತೆ ಸದಾ ಇರಬೇಕು ಆದರೆ ಚುನಾವಣಾ ಸಂದರ್ಭದಲ್ಲಿ ಅದರ ಅನಿವಾರ್ಯತೆ ಇನ್ನೂ ಹೆಚ್ಚು. ಐದು ವರ್ಷ ಆಳಿದ ಯುಪಿಎ ಸರಕಾರದ ಸಾಧನೆಯೇನು? ಕಳೆದಬಾರಿ ಸೋಲುಂಡ ಎನ್‌ಡಿಎ ಮತ್ತೆ ತಲೆ ಎತ್ತಿ ಯಾಕೆ ನಿಲ್ಲಬೇಕು? ಐದು ವರ್ಷಗಳ ಹಿಂದೆ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಮತ್ತೆ ಈಗ ಮತ ಚಲಾಯಿಸಲು ಹೋಗುವ ಜನಸಾಮಾನ್ಯನಿಗೆ ವಸ್ತುನಿಷ್ಟ ಚಿತ್ರಣ ಯಾರು ನೀಡುತ್ತಾರೆ. ಕಲುಷಿತ ಚಿತ್ರಣದಿಂದ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ನಾಟಕ ಆರಂಭವಾಗಿ ಹಾಗೇ ಮುಗಿಯುತ್ತದೆ. ಯಾರೋ ಅಧಿಕಾರಕ್ಕೆ ಬರುತ್ತಾರೆ. ನಮಗೇನೂ ಸಂಬಂಧಿಸಿದಲ್ಲ ಎಂದು ಜನ ಸಾಮಾನ್ಯ ಮತ್ತೆ ಮುಸುಕೆಳೆದು ಮಲಗುತ್ತಾನೆ.
ಕ್ರೀಡಾರಂಗದ ಜನ, ಸಿನಿಮಾರಂಗದ ಜನ ಚುನಾವಣ ಕಣದಲ್ಲಿಳಿಯುತ್ತಾರೆ. ಅವರ ಕ್ಷೇತ್ರದ ಜನಪ್ರಿಯತೆಯನ್ನು ಕೈವಶಮಾಡಲು ಎಲ್ಲಾ ರಾಜಕೀಯ ಪಕ್ಷಗಳು ಕಾದು ಕುಳಿತಿವೆ. ಈ ಹಿಂದೆ ಅವರೆಲ್ಲ ಏನು ಮಾಡಿದ್ದಾರೆ. ತುಟಿ ಬಿಚ್ಚದ ನಟರು, ಅಧಿವೇಶನಕ್ಕೆ ಹಾಜರಾಗದವರು ಕಳೆದ ಐದು ವರ್ಷಗಳಲ್ಲಿ ತಮ್ಮ ಕ್ಷೇತ್ರಗಳಿಗೆ ಏನೂ ಮಾಡದವರು ದೇಶವನ್ನು ಎಲ್ಲಿ ಕೊಂಡೊಯ್ಯುವರು? ತಮ್ಮ ಜನಪ್ರಿಯತೆಯೇ ಬಂಡವಾಳವಾಗಿರುವ ಇವರಿಗೆ ಅದರ ಪ್ರಯೋಜನವನ್ನು ಸಂಸತ್ತಿನ ಮೂಲಕ ಪಡೆಯುವ ಸಾಮಾರ್ಥ್ಯವಿಲ್ಲ. ಕರ್ನಾಟಕದಿಂದ ಆರಿಸಿಬಂದ ಇಂಥ ನಟರೊಬ್ಬರು ಸಚಿವರಾದರೂ ಅದಕ್ಕೆ ರಾಜಿನಾಮೆ ಕೊಟ್ಟು, ಕೊಟ್ಟ ರಾಜಿನಾಮೆ ಸ್ವೀಕಾರವಾಗದೆ ಹಾಗೇ ಇದ್ದರು. ಅವರ ಕ್ಷೇತ್ರವೂ ಕಳೆದ ಐದುವರ್ಷಗಳಿಂದ ಹಾಗೇ ಇರಬೇಕು! ನಿಷ್ಟಾವಂತರಾಗಿ, ಜನರ ನಿಜವಾದ ಕಲ್ಯಾಣಕ್ಕಾಗಿ ರಾಜಕೀಯವನ್ನು ಒಂದು ಪ್ರೊಫೆಶನ್ ಆಗಿ ತೆಗೆದುಕೊಳ್ಳಬಲ್ಲ ಯುವ ಪೀಳಿಗೆ ಕಾರ್ಯನಿರತವಾಗಬಹುದೆ? ಇಂದಿನ ಯುವ ನೇತಾರ ಭಾವಿ ಯುವ ಪ್ರಧಾನಿ ಎಂದೆಣಿಸುವ ರಾಹುಲ ಗಾಂಧಿಯೂ ತನ್ನ ಮನೆತನದ ಭಾರದಿಂದ ಸರಿಯಾದ ಹೆಜ್ಜೆಯಿಟ್ಟು ಮುಂದುವರಿಯುವ ಕುರಿತು ಆತಂಕವಿದೆ. ಆತಂಕ ಈಗಿನ ತಲೆಮಾರಿಗಿಂತ ಎರಡು ತಲೆಮಾರು ಹಿಂದಿನ ಆಲೋಚನೆಗಳನ್ನು ಹೊಂದಿರುವ ಅಡ್ವಾಣಿಯವರ ಕುರಿತೂ ಇದೆ. ಆದರೆ ದೇಶಕ್ಕೆ ಸುದೃಡ ಸರಕಾರ ನೀಡುವ ಜವಾಬ್ದಾರಿ ಯಾರ ಮೇಲೂ ಇಲ್ಲವೆ?
ಮಿಂಚು
ಕಳೆದ ಎರಡು ಮಹಾ ಚುನಾವಣೆಗಳಲ್ಲಿ ಮಹತ್ತರ ಪಾತ್ರವಹಿಸಿದ ಪ್ರಮೋದ್ ಮಹಾಜನ್ ಈಗಿಲ್ಲ. ಅಡ್ವಾಣಿಯವರನ್ನು ಬಹಳಷ್ಟು ಎತ್ತರಕ್ಕೆ ಏರಿಸಿಟ್ಟಿರುವ ಪಕ್ಷದ ಎರಡನೆ ಸಾಲಿನ ನಾಯಕರು ತಮ್ಮ ಸಂಪೂರ್ಣ ಬಲವನ್ನು ನೀಡಿ ಪಕ್ಷವನ್ನು ರಕ್ಷಿಸುವರೇ? ದಿನ ಬಹಳವಿದೆ. ಕಾದು ನೋಡಬೇಕು.

1 comment:

  1. ಜನಸಾಮಾನ್ಯರ ಆಶೋತ್ತರಗಳನ್ನು ಈ ಮಹಾಚುನಾವಣೆ ಈಡೇರಿಸುವದೆ? ಉತ್ತಮ ವಿಶ್ಲೇಷಣೆ ಮಾಡಿರುವಿರಿ.

    ReplyDelete