Sunday, March 1, 2009

ಮಂಗಳೂರು ಎಂಬ ಭಾವನೆ


ಪಶ್ಚಿಮಘಟ್ಟದ ಇಳಿಜಾರಿನಿಂದ ಅರಬ್ಬೀ ಸಮುದ್ರದ ತಟದ ವರೆಗಿನ ಭೂಭಾಗದ ಜನ, ವ್ಯವಸ್ಥೆ, ಸಂಸ್ಕೃತಿ ವಿಭಿನ್ನವಾದುದು. ಈ ಸಂಸ್ಕೃತಿಯನ್ನು ಈ ಬರಹದ ಮಟ್ಟಿಗೆ ಮಂಗಳೂರು ಸಂಸ್ಕೃತಿ ಎಂದು ವ್ಯಾಖಿಸಲಾಗಿದೆ.
ಯಕ್ಷಗಾನ, ಭೂತದ ಕೋಲ, ಬೈದರ್ಕಳ ಗರಡಿ, ಕಂಬಳ, ಕೆಡ್ಡಸ ಮೊದಲಾದುವು ಇಲ್ಲಿನ ಅನುಪಮ ಸಂಸ್ಕೃತಿಯ ತುಣುಕುಗಳು. ತುಳು, ಕನ್ನಡ, ಕೊಂಕಣಿ, ಕುಂದಾಪ್ರ ಕನ್ನಡ, ಹವ್ಯಕ, ಬ್ಯಾರಿಭಾಷೆ, ಮಲಯಾಳಂ, ಮರಾಠಿ, ಅರೆಕನ್ನಡ ಇಲ್ಲಿನ ಭಾಷೆಗಳು. ಪ್ರತಿಯೊಂದು ಭಾಷೆಯ ಅನೇಕ ಕವಲುಗಳು. ಪುತ್ತೂರಿನ ತುಳು ಬೇರೆ, ಉಡುಪಿಯ ತುಳು ಬೇರೆ. ಶಿವಳ್ಳಿಯವರ ತುಳುಬೇರೆ, ಗೌಡರ ತುಳು ಬೇರೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಧರ್ಮಗಳು ಶತಮಾನಗಳಿಂದ ಅನ್ಯೋನ್ಯವಾಗಿ ಬೆಳೆದಿವೆ. ಒಂದು ಧರ್ಮದ ಆರಾಧ್ಯಕೇಂದ್ರಕ್ಕೆ ಇನ್ನೊಂದು ಧರ್ಮದ ಜನರು ಹೋಗುವುದು ಸಾಮಾನ್ಯ. ಧರ್ಮಸ್ಥಳ ಶೈವ, ವೈಷ್ಣವ, ಜೈನ, ಅಣ್ಣಪ್ಪನಂತಹ ದೈವದ ಆರಾಧನೆಯ ಒಂದು ಕೇಂದ್ರವಾಗುತ್ತದೆ. ಬಪ್ಪನಾಡು ಡೋಲು, ಬಪ್ಪ ಬ್ಯಾರಿ ಇಲ್ಲಿನ ಜನರ ಬದುಕಿನ ಅಂಗವಾಗುತ್ತದೆ.
ನಿರಂತರ ಸುರಿಯುವ ಮಳೆಗೆ ಶಾಲೆಗೆ ಹೋದ ಇದಿನಬ್ಬನ ಮಗ ಸುಲೇಮಾನ್, ಕೃಷ್ಣ ಭಟ್ಟರ ಮಗ ಚಂದ್ರಶೇಖರ, ದೂಜ ಸೋಜರ ಮಗಳು ಐರಿನ್ ಒಂದೇ ಕೊಡೆಯಡಿಯಲ್ಲಿ ತೋಟದ ಬದಿಯ ಗದ್ದೆಯ ಹುಣಿಯಲ್ಲಿ ಒಬ್ಬರನೊಬ್ಬರ ಕೈಹಿಡಿದುಕೊಂಡು ಮನೆಗೆ ತಲುಪುವಾಗ ಎಲ್ಲರ ಹೆತ್ತವರೂ ಮಕ್ಕಳು ಬಂದರಲ್ಲಾ ಎಂದು ನಿಟ್ಟುಸಿರು ಬಿಡುತ್ತಾರೆ. ಗುಡ್ಡ, ಬೆಟ್ಟ, ತೋಟ, ಗದ್ದೆ, ಪಡ್ಪು, ಅಡ್ಕ, ಪದವು, ಮಜಲುಗಳಿಂದ ಸಂಸ್ಕೃತಿಯ ತುಣುಕುಗಳು ಸೇರಿ ಮಂಗಳೂರು ಸಂಸ್ಕೃತಿಯಾಗುತ್ತದೆ. ಕಿನ್ನಿಗೋಳಿಯ ಪ್ರಮೋದ, ತುಂಬೆಯ ಅಬ್ದುಲ ಅಜೀಜ್, ಕೊಳ್ನಾಡಿನ ಕೃಷ್ಣ ಸಾಲ್ಯಾನ್, ನಾರಾವಿಯ ರಿಚಾರ್ಡ್, ಉಜಿರೆಯ ಭಾಗಿರಥಿ ಎಲ್ಲರಿಗೂ ಈ ಸಂಸ್ಕೃತಿಯ ಬಗ್ಗೆ ತಮ್ಮದೆಂಬ ಅತೀವ ಹೆಮ್ಮೆಯಿದೆ. ಕದ್ರಿಗುಡ್ಡೆಯ ಆಕಾಶ ಚುಂಬಿಸುವ ಪ್ಲ್ಯಾಟ್ ನಲ್ಲಿ ಮುಂಬಯಿಯಿಂದ ಈಗಷ್ಟೆ ಬಂದು ನೆಲೆಸಿದ ರತ್ನಾಕರ ಪೂಜಾರಿಯ ಮಗಳು ಸುಶ್ಮಿತಾಳಿಗೆ ತನ್ನ ನಾಲ್ಕು ತಲೆಮಾರು ಹಿಂದಿನ ಮೋನಪ್ಪ ಪೂಜಾರಿ ಸರಪಾಡಿಯಿಂದ ಮನೆಯಲ್ಲಿ ಹೇಳದೆ ಮುಂಬಯಿಗೆ ಓಡಿಹೋದ ಕತೆಯನ್ನು ಹೇಳಲು ಊರಿನಿಂದ ಯಾರಾದರೂ ಬಂದೇ ಬರುತ್ತಾರೆ.
ಜಗತ್ತು ಇಪ್ಪತೊಂದನೆಯ ಶತಮಾನಕ್ಕೆ ಅಡಿಯಿಡುತ್ತಿದ್ದಂತೆ ಮಂಗಳೂರಿನಲ್ಲೂ ಬದಲಾವಣೆ ಬಂದಿದೆ. ಮಂಗಳೂರು ಭೌತಿಕವಾಗಿ ಬದಲಾಗುತ್ತಿರುವುದು ಒಂದೆಡೆ. ಏರುತ್ತಿರುವ ಬೃಹತ್ ಮಹಡಿ ಕಟ್ಟಡಗಳು, ಮಾಲ್‌ಗಳು ಐಟಿಬಿಟಿ ಕಂಪನಿಗಳು, ಹೊರ ನಾಡಿನಿಂದ ಬಂದವರು ಹೀಗೆ ದಶಕಗಳ ಮುಂಚಿನ ಭೌತಿಕ ಮಂಗಳೂರು ಈಗ ಭಿನ್ನವಾಗಿದೆ. ಜತೆಗೆ ಮಂಗಳೂರು ಸಂಸ್ಕೃತಿಯೂ ಬದಲಾಗಿದೆ.
ವಿವಿಧ ಧರ್ಮಗಳು ಅನ್ಯೋನ್ಯವಾಗಿದ್ದ ಸಮಾಜದಲ್ಲಿ ಕೋಮುದಳ್ಳುರಿ ಹೆಚ್ಚಾಗತೊಡಗಿತು. ಭಾರತೀಯ ಜನತಾ ಪಕ್ಷ ದೇಶದಲ್ಲಿ ಬೆಳೆಯುತ್ತಿದ್ದಾಗ ಭಜರಂಗದಳ ಮಂಗಳೂರಿನಲ್ಲಿ ಬೇರು ಇಳಿಬಿಟ್ಟು ಗಿಡ ಮರವಾಗತೊಡಗಿತು. ರಾಮಮಂದಿರದ ಸುಳ್ಳು ಕನಸನ್ನು ಕಟ್ಟಿಕೊಂಡ ಜನ ಭಾವಾನಾತ್ಮಕವಾಗಿ ಸುಳಿಗೆಗೊಂಡರು. ಅವರು ಕಳೆದು ಕೊಂಡ ಕನಸುಗಳು ರಾಷ್ಟ್ರಮಟ್ಟದಿಂದ ಸ್ಥಳೀಯ ಸ್ತರಕ್ಕಿಳಿಯಿತು. ಅಧಿಕಾರ ಒಂದು ವರ್ಗದ ಜನರಲ್ಲಿ ಭ್ರಷ್ಟಚಾರವನ್ನು ಹೆಚ್ಚಿಸಿತು. ಕೆಳಸ್ತರದ ಕಾರ್ಯಕರ್ತರ ತನಕ ಹಣ ಹರಿಯಲಾರಂಭಿಸಿತು. ಬಲಪಂಥೀಯ ಧೋರಣೆಗಳಿಗೆ ಕೋಮುಸೌಹಾರ್ದತೆಯ ಸಮಾಜ ರಣರಂಗವಾಯಿತು. ನರೇಂದ್ರ ಮೋದಿ ಆದರ್ಶವಾಗತೊಡಗಿದರು.
ಒಂದು ತಲೆಮಾರಿನ ಜನ ಕಷ್ಟದಿಂದ ವಿದ್ಯಾಭ್ಯಾಸ ಪಡೆದು ಬ್ಯಾಂಕ್, ಖಾಸಗಿ ಕಂಪೆನಿ, ಉದ್ಯಮ, ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿತು. ನಂತರದ ತಲೆಮಾರಿಗೆ ಆರ್ಥಿಕ ಪರಿಸ್ಥಿತಿ ಕಠಿಣವಾಗಿರಲಿಲ್ಲ. ತಿಂದುಂಡು ತೇಗಿದ ಈ ತಲೆಮಾರು ಸ್ವಂತಕ್ಕೇನು ಮಾಡಬೇಕಾದ ಪ್ರಮೇಯ ಇರಲಿಲ್ಲ. ಕೆಲಸವಿಲ್ಲದ ಮನಸ್ಸು ಸಮಾಜದಲ್ಲಿ ಕೆಲಸ ಹುಡುಕಿತು. ಸುಳ್ಳು ಆದರ್ಶಗಳನ್ನು ಹಿಡಿದುಕೊಂಡು, ಗುಮಾನಿಗಳನ್ನು ಅಪ್ಪಿಕೊಂಡು, ವದಂತಿಗಳನ್ನು ಹಬ್ಬಿಸುತ್ತಾ ಅನ್ಯೋನ್ಯವಾಗಿದ್ದ ಜಾತಿಧರ್ಮಗಳ ನಡುವೆ ಬಿರುಕುತರುವಂತಹ ಕೆಲಸ ಆರಂಭವಾಯಿತು. ಮಂಗಳೂರು ಸಂಸ್ಕೃತಿಯ ಕ್ರೈಸ್ತರು ಮುಸಲ್ಮಾನರು ಇರುವ ಹಳ್ಳಿ ನಗರಗಳಲ್ಲಿ ಬೀಫ್ -ಎತ್ತು ಕೋಣಗಳ ಮಾಂಸ, ಗೋಮಾಂಸವಲ್ಲ, ಸಾಮಾನ್ಯವಾಗಿತ್ತು. ಗೋವು ಅತ್ಯಂತ ಪೂಜನೀಯವೆಂದು ಪ್ರತಿಪಾದಿಸುತ್ತಾ ಜನರ ಆಹಾರ ಪದ್ಧತಿಯನ್ನು ಅಸಾಮಾನ್ಯ ಮಾಡಲಾಯಿತು.
ಹದಿನೆಂಟನೆ ಶತಮಾನದಿಂದಲೂ ಇಲ್ಲಿರುವ ಕ್ರೈಸ್ತ ಜನ, ಹೆಚ್ಚಿನವರು ಇಲ್ಲಿಯವೇ ಮೇಲ್ವರ್ಗದ ಜನ ಧರ್ಮಾಂತರವಾದವರು, ಸ್ಥಳೀಯ ಹಿಂದೂ, ಜೈನ ಮತ್ತು ಮಸಲ್ಮಾನರೊಡನೆ ಅನ್ಯೋನ್ಯವಾಗಿ ಬಾಳಿದ್ದರು. ಆದರೆ ಇನ್ನೂರು ವರ್ಷಗಳ ಅನ್ಯೋನ್ಯತೆಗೆ ೨೦೦೮ ರಲ್ಲಿ ಪೆಟ್ಟು ಬಿತ್ತು. ಚರ್ಚುಗಳು ದಾಳಿಗೆ ಒಳಗಾದುವು. ನೆರೆಮನೆಯ ಬಾಯಮ್ಮ ಇದ್ದಕ್ಕಿದ್ದಂತೆ ಸಂಶಯಕ್ಕೆ ಒಳಪಟ್ಟರು. ದೇಶ ವಿದೇಶಗಳಲ್ಲಿ ನೆಲೆಸಿರುವ ಮಂಗಳೂರು ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದ ಜನಕ್ಕೆ ದಿಗಿಲಾಯಿತು. ಊರಲ್ಲಿ ಏನಾಗುತ್ತಿದೆ? ಮಾಧ್ಯಮವೆಲ್ಲಾ ಚರ್ಚ್ ದಾಳಿ ಸುದ್ದಿ, ಇದು ಮಂಗಳೂರು ಸಂಸ್ಕೃತಿ ಎನ್ನಲು ನಾಚಿಕೆಯಾಗತೊಡಗಿತು. ಕರ್ಫ್ಯೂ ಏನು ಎಂಬುದು ಇಲ್ಲಿನ ಶಾಂತಿಪ್ರಿಯ ಜನರಿಗೆ ಬಹಳ ಚೆನ್ನಾಗಿ ಅರ್ಥವಾಯಿತು. ಇಲ್ಲಿ ಇನ್ನು ಇಂತಹ ಘಟನೆಗಳು ಸದ್ಯದಲ್ಲಿ ನಡೆಯಲಾರವು ಎಂಬ ಭರವಸೆಯೊಂದಿಗೆ ದಕ್ಷಿಣದ ಪ್ರಥಮ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅಧಿಕಾರರೂಢವಾದಾಗ ಜನರಲ್ಲಿ ಒಳಗೊಳಗೆ ಭೀತಿಯೂ ಆವರಿಸಿತು. ಸ್ಥಳೀಯರೇ ಗೃಹ ಮಂತ್ರಿಯಾಗಿ ಪದ್ಮಪ್ರಿಯ ಘಟನೆ ನಡೆದಾಗ ಕರ್ನಾಟಕವು ಗುಜರಾತ್ ಮಾದರಿಯ ಬದಲು ಬಿಹಾರ, ಉತ್ತರ ಪ್ರದೇಶವಾಯಿತೋ ಎಂಬ ದಿಗಿಲು ಉಂಟಾಯಿತು. ಕಾನೂನು ವ್ಯವಸ್ಥೆಯಲ್ಲಿ ಸರಕಾರ ಸಂಪೂರ್ಣ ಸೋಲು ಕಂಡಿತು.
ಇದರ ನಡುವೆ ಏಕಾಏಕಿ ಪಬ್‌ದಾಳಿ ಘಟನೆ ನಡೆಯಿತು. ಮೊದಲೇ ಆಹ್ವಾನಿಸಿದ ಮಾಧ್ಯಮಗಳು ವರ್ಣರಂಜಿತ ವರದಿ, ನಿರಂತರ ಚರ್ಚೆಗಳ ಮೂಲಕ ಘಟನೆಯನ್ನು ರಾಷ್ಟ್ರೀಯ ವಿಷಯಮಾಡಿದವು. ಜನಾಭಿಪ್ರಾಯಗಳು ಮೂಡಿಬಂದವು. ದಕ್ಷಿಣದಿಲ್ಲಿಯ ಪತ್ರಕರ್ತೆಯೊಬ್ಬಳು ಕೆಂಪುಚಡ್ಡಿ ಚಳುವಳಿಯನ್ನೇ ಆರಂಭಿಸಿ ಇಂಟರ್ನೆಟ್ ಯುಗದ ಆಯುಧವನ್ನು ಬಲಪಂಥೀಯರ ಮೇಲೆ ಪ್ರಯೋಗಿಸಿದಳು. ಮಂಗಳೂರಿಗರ ಹೆಮ್ಮೆಯ ಮಂಗಳೂರು ಸಂಸ್ಕೃತಿ ಅಧಃಪತನಕ್ಕಿಳಿದ ದುಃಖ ಎಲ್ಲೆಡೆ ಕಂಡು ಬಂತು.
ಅನ್ಯೋನ್ಯ ಬದುಕಿನ, ಪ್ರಗತಿಪರ ಚಿಂತನೆಗಳ, ಸ್ವತಂತ್ರತೆಯನ್ನು ಗೌರವಿಸುವ, ಹೆಣ್ಣು-ಗಂಡು ಭೇದ ಭಾವಿಸದ ಮಂಗಳೂರು ಎಂಬ ಸಂಸ್ಕೃತಿಯ ಮೇಲೆ ಕಾಲಕ್ರಮೇಣದಲ್ಲಿ ಬಿದ್ದ ಪೆಟ್ಟು ಪಬ್‌ಗೆ ಹೋದ ಹೆಣ್ಣುಮಕ್ಕಳ ಮೇಲೆ ಅಚ್ಚೊತ್ತಿತು. ಮಂಗಳೂರು ಸಂಸ್ಕೃತಿ ಅಲುಗಾಡಿತು. ಈ ಸಂಸ್ಕೃತಿಯನ್ನು ಗೌರವಿಸುವ ದೇಶವಿದೇಶದ ಮಂಗಳೂರಿಗರು ಅಂತರಾಳದಲ್ಲಿ ರೋಧಿಸತೊಡಗಿದರು.
ಮಂಗಳೂರಿನ ಕಡಲ ತೆರೆಗಳು ತನ್ನಷ್ಟಕ್ಕೆ ದಡಕ್ಕೆ ಅಪ್ಪಳಿಸುತ್ತಿರುವಾಗ ದಡದಲ್ಲಿ ಕುಳಿತಿರುವವರು ಯಾರು ಎಂದು ಯಾವತ್ತೂ ಕೇಳಲಿಲ್ಲ. ಅದಕ್ಕೆ ಪ್ರಶೆಗಳು ಬೇಕಾಗಿಲ್ಲ.
ಹೀಗಿರುವಾಗ ಹೊಸ ತಲೆಮಾರಿಗೆ ಪಬ್‌ಗೆ ಹೋದವರು, ಬಸ್ಸಲ್ಲಿ ಹೋದವರು, ಹುಡುಗ ಹುಡುಗಿಯರ ನಡುವಿನ ಸಂಭಾಷಣೆ ಯಾಕೆ ಪ್ರಶ್ನೆಯಾಗಬೇಕು?

29 comments:

 1. very good observation and interpretation of society!

  ReplyDelete
 2. ಹೇಳಬೇಕಾದ್ದನ್ನು ನೇರವಾಗಿ ಹಾಗೂ ಸ್ಪಷ್ಟವಾಗಿ ಹೇಳಿದ್ದೀರಿ. ಇಷ್ಟವಾಯಿತು.

  ReplyDelete
 3. ನೀರಿರುವುದೇ ಹರಿಯಲು, ಬದುಕಿರುವುದೇ ಬದಲಾಗಲು ಎನ್ನುವುದನ್ನು ಮಂಗಳೂರಿನ ಜನತೆಗೆ ಹೇಳಿಕೊಡಬೇಕೆ? ಈ ಚರ್ಚು-ಪಬ್ಬುಗಳ ಗಲಾಟೆ ಕ್ಷಣಿಕ, ಬದಲಾವಣೆ ಶಾಶ್ವತ ಎಂದಷ್ಟೇ ಹೇಳಬಲ್ಲೆ.
  -ಕೇಶವ (www.kannada-nudi.blogspot.com)

  ReplyDelete
 4. ತುಳುನಾಡಿನ ಬಹುಸಂಸ್ಕೃತಿಯ ಬಗ್ಗೆ ನಾವೀಗ ಒತ್ತುಕೊಟ್ಟು ಮಾತಾಡಬೇಕಾಗಿದೆ. ಶಿವರಾಮ ಕಾರಂತ್, ಅಡಿಗ, ಹರಿದಾಸ್ ಭಟ್ , ಅಮೃತ ಸೋಮೇಶ್ವರ, ವಿವೇಕ ರೈ ಗಳಂತಹ ಧೀಮಂತರ ನಾಡದು. ಕೋಮುವಾದಿಗಳ ಕೈಯಲ್ಲಿ ಈ ಊರು ಹಾಳಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ.

  ReplyDelete
 5. ಮಂಗಳೂರಿನ ಬಗೆಗೆ ಬರೆಯುತ್ತ ನೀವು ಒಂದು ಜನಾಂಗದ ಸಾಂಸ್ಕೃತಿಕ ಬದಲಾವಣೆಯನ್ನೇ ಚಿತ್ರಿಸಿ ತೋರಿಸಿದ್ದೀರಿ. ಅಭಿನಂದನೆಗಳು.

  ReplyDelete
 6. ಕರಾವಳಿಯ ಅದ್ಭುತ ಸಂಸ್ಕೃತಿಯ ಬಗ್ಗೆ ಹೇಳುತ್ತ, ಈಗೀನ ತಳಮಳಗಳ ಬಗ್ಗೆ ತುಂಬಾ ಸರಳವಾಗಿ ಹೇಳಿದ್ದೀರಿ.

  ಮತ್ತೆ ಮಂಗಳೂರು ಹಿಂದಿನಂತಾಗಲಿ..

  ReplyDelete
 7. ತುಂಬಾ ಚನಾಗ್ ಬರ್ದಿದೀರಾ ಅನ್ನಿಸ್ತು ನಂಗೆ..

  ReplyDelete
 8. Beautiful writeup.. like the essential spirit of Mangalore. Every city has a negative face which should not discourage our positive outlooks.

  ReplyDelete
 9. ದನಿ ಇಲ್ಲದವರಂತೆ ಇದ್ದಾಗ ಎಲ್ಲಾ ಚೆನ್ನಾಗಿತ್ತು ಮಂಗಳೂರು, ಈಗ ತಮ್ಮ ಹಕ್ಕುಗಳ ಬಗ್ಗೆ ತಮಗಾದ ಆಗುತ್ತಿರುವ ಅನ್ಯಾಯಗಳ ಬಗ್ಗೆ ಎಚ್ಚೆತ್ತುಕೊಂಡಾಗ ಹಾಳಾಗಿ ಹೋಯಿತು ಮಂಗಳೂರು !! ಸದ್ದಿಲ್ಲದೇ ಮತಾಂತರ ನಡೆಯುತ್ತಿದ್ದಾಗ ಸುಮ್ಮನಿದ್ದ ಮಂಗಳೂರು ಅದನ್ನು ವಿರೋಧಿಸಿದಾಗ ಬದಲಾಗಿ ಹೋಯಿತು.!! ದೇಶದ್ರೋಹಿ ಚಟುವಟಿಕೆಗಳು ಶುರುವಾದಾಗ ಸುಮ್ಮನಿದ್ದ ಮಂಗಳೂರು ಉಗ್ರಗಾಮಿಗಳ ಬೀಡಾಗುವುದನ್ನು ವಿರೋಧಿಸಿದಾಗ ಬದಲಾಗಿ ಹೋಯಿತು! ಎಂತಹ ವಿಪರ್ಯಾಸ.

  - ಪ್ರವೀಣ

  ReplyDelete
 10. ತಾಲಿಬಾನೀಕರಣ ಎಂದರೆ ಇದುವೇ,

  ReplyDelete
 11. ಸರ್...ನಮಸ್ಕಾರ.
  ಕರಾವಳಿಯ ಜನತೆಯನ್ನು ಪರಿಚಯಿಸುತ್ತಲೇ ಕರಾವಳಿಯ 'ಬದುಕನ್ನು' ಚಿತ್ರಿಸಿದ್ದೀರಿ. ಸಂಸ್ಕೃತಿ ಅನ್ನೋದಕ್ಕಿಂತಲೂ 'ಬದುಕು' ಅನ್ನೋದು ಒಳ್ಳೆದು ಅನಿಸಿತ್ತು ನಂಗೆ.
  ಸರ್..ಮಂಗಳೂರು ಭೌತಿಕವಾಗಿ ಬದಲಾಗಿರಬಹುದು....ಭಜರಂಗಿಗಳು ಗಿಡವಾಗಿ ಮರವಾಗಿ ಬೆಳೆದಿರಬಹುದು...ಸುಳ್ಳು ಆದರ್ಶಗಳನ್ನು ನಂಬಿದವರಿಂದ ಅನೋನ್ಯ ಧರ್ಮಗಳ ನಡುವೆ ಬಿರುಕು ಮೂಡಿರಬಹುದು...ಇದೆಲ್ಲವನ್ನೂ ಒಪ್ಪಿಕೊಳುತ್ತೇನೆ. ನಂಗೂ ನೋವಾಗುತ್ತೆ..ಛೇ! ನಮ್ಮೂರು ಹೀಗಾಗಬಾರದಿತ್ತು...ಇನ್ನೆಂದೂ ಹೀಗೇ ಆಗದಿರಲಿ ಅಂತ ನೋವಿನ ಮನಸ್ಸು ದೈನ್ಯತೆಯಿಂದ ಬೇಡುತ್ತೆ. ನಮ್ಮ ಮನೆ ಪುತ್ತುರಿನ ಪುಟ್ಟ ಹಳ್ಳಿ..ಅಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನರು ಎಲ್ಲರೂ ಇದ್ದಾರೆ..ನಮ್ಮಲ್ಲಿ ಎಂದಿಗೂ ಜಗಳ ಆಗಿಲ್ಲ. ನೆಮ್ಮದಿಯಿಂದ ಇದ್ದೇವೆ. ಮಂಗಳೂರಿನಲ್ಲಿ ಇಂಥ ಎಷ್ಟೋ ಹಳ್ಳಿಗಳನ್ನು ನಾನು ಉದಾಹರಣೆಯಾಗಿ ಕೊಡಬಲ್ಲೆ. ಹೀಗಿರುವಾಗ ಆದರೆ ನಮ್ಮೂರು ತಾಲೀಬಾನೀಕರಣ ಆಗಿದೆಯೇ? ಇಲ್ಲಿ ಆಗುತ್ತಿರುವುದು ತಾಲೀಬಾನೀಕರಣವೇ? ಹಾಗಿದ್ದರೆ 'ತಾಲೀಬಾನೀಕರಣ 'ಅಂದ್ರೆ ಏನು ಎಂಬುವುದನ್ನು 'ಮಂಗಳೂರು ತಾಲೀಬಾನೀಕರಣ' ಎಂದು ಬೊಬ್ಬಿಡುತ್ತಿರುವವರು ಉತ್ತರಿಸುವ ಅಗತ್ಯ ಖಂಡಿತಾ ಇದೆ ಎಂದನಿಸುತ್ತೆ.
  -ಚಿತ್ರಾ

  ReplyDelete
 12. ದೂರದ ಊರಿನಲ್ಲಿ ಕುಂತು ಮಂಗಳೂರು ಹೀಗಾಗುತ್ತಿದೆ, ಹಾಗಾಗುತ್ತಿದೆ ಎನ್ನುವುದು ಸುಲಭ. ಆದರೆ ಎಲ್ಲಾ ಊರುಗಳಂತೆ ಮಂಗಳೂರೂ ಬದಲಾಗುತ್ತಿದೆ.ಬೆಂಗಳೂರು, ಮುಂಬಯಿಗಳೂ ಹಾಗಾಗಿಲ್ಲವೆ? ಕೆಲವೇ ವರ್ಷಗಳ ಮೊದಲು(೮-೧೦) ಮಂಗಳೂರಿಗರಿಗೆ ಪಬ್ ಎನ್ನುವ ಹೆಸರೇ ಸೋಜಿಗ ತರುತ್ತಿತ್ತು. ಅರೆಬೆತ್ತಲೆ(ಕೆಲವರ ಕಣ್ಣಲ್ಲಿ ಫ್ಯಾಶನ್) ಉಡುಗೆ ತೊಡುವವರು ಲಾಲ್ ಬಾಗಿನ ಅಕ್ಕಪಕ್ಕ ಸುಳಿದಾಡುತ್ತಿದ್ದರು. ಕಾಲೇಜು ಹುಡುಗಿಯರು, ಹುಡುಗರು ಬಾರ್ ಗೆ ಹೋಗುವಾಗಲೂ ಕದ್ದು ಮುಚ್ಹಿ ಹೋಗುತ್ತಿದ್ದರು. ಈಗ ಹಾಗಲ್ಲ. ಕಾಲದೊಂದಿಗೆ ಮಂಗಳೂರು ಹೆಜ್ಜೆ ಹಾಕಿದೆ.
  ಆದರೆ,
  ಒಂದಸ್ಟು ಕೋಮು ಗಲಭೆಗಳು, ಕ್ರೈಂ ಗಳು ಹೆಚ್ಹಾಗಿವೆ.
  ಮಂಗಳೂರು ಬಿಹಾರದಂತೆ ಆಗಿಲ್ಲ. ಬೆಂಗಳೂರಿನಲ್ಲಿ ದಿನಾ ಕೊಲೆಗಳಿ ಆಗುತ್ತಿವೆ. ಮಂಗಳೂರು ಆ ನಿಟ್ಟಿನಲ್ಲೂ ಸೇಫ್.
  ತಾಲಿಬಾನೀಕರಣ ಖಂಡಿತಾ ಆಗಿಲ್ಲ

  ReplyDelete
 13. ತಾಲೀಬಾನೀಕರಣ ಶಬ್ದವನ್ನು ಮಂಗಳೂರಿಗೆ ಅನ್ವಯಿಸುವಾಗ ಲಿಬರಲ್ ಆಗಿರುವ ಮಂಗಳೂರಿಗರಿಗೆ ನೋವಾಗುವುದು ಸಹಜ. ಆದರೆ ಮೂಲಭೂತವಾದಿಗಳು ತಾವು ಅಂದುದೇ ಇಲ್ಲಿ ನಿಯಮ ಅಂದಾಗ ಅದಕ್ಕೆ ತಾಲೀಬಾನಿಕರಣ ಅನ್ನದೆ ವಿಧಿಯಿಲ್ಲ. ತಾಲೀಬಾನಿಕರಣ ಆಗದಿದ್ದರೆ ಒಳ್ಳೆಯದು.

  ReplyDelete
 14. ಹುಡುಗ ಹುಡುಗಿಯರ ನಡುವಿನ ಸಂಭಾಷಣೆ ಯಾಕೆ ಪ್ರಶ್ನೆಯಾಗಬೇಕು? ಬಾನಾಡಿಯವರೆ ನಿಮ್ಮ ಮಾತು ಸತ್ಯ. ಆದರೆ ಇಂಥ ಸಂಭಾಷಣೆಗಳು ಸಂಬಂಧವಾದಾಗ ಮೂಲಭೂತವಾದ ಬೆಳೆಯುತ್ತದೆ.

  ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗನ ಸಂಭಂಧ, ಪ್ರಕರಣವನ್ನ್ನು ಜಾತ್ಯಾತೀತ ನೆಲೆಗಟ್ಟಿಂದ ನೋಡುವ ನಮ್ಮ ಪ್ರಗತಿಪರರು, ಮುಸ್ಲಿಂ ಸಂಘಟನೆಯವಹೇ ಹೆಚ್ಹಾಗಿರುವ ಕೋಮು ಸೌಹಾರ್ಧ ವೇದಿಕೆಯವರು ಮುಸ್ಲಿಂ ಹುಡುಗಿ ಮತ್ತು ಹಿಂದೂ ಹುಡುಗನ ನಡುವಯೂ ಸಂಬಂಧಕ್ಕೆ ಪ್ರೋತ್ಸಾಹ ಕೊಡಲಿ. ಬಿಳಿಮಲೆ ಬರೆದಂತೆ ಅಮೃತ ಸೋಮೇಶ್ವರ, ವಿವೇಕ ರೈ ಗಳಂತಹ ಧೀಮಂತರು ಇದಕ್ಕೆ ಸಹಾಯ ಮಾಡಲಿ. ಎಲ್ಲರೂ ಪರದೆಯ ಒಳಗೆ ಇರುವುದು ಯಾಕೆ

  ReplyDelete
 15. ಸರ್..ನನ್ನ ಒಂದೇ ಒಂದು ಪ್ರಶ್ನೆಗೆ ಉತ್ತರ ಕೊಡಿ 'ತಾಲೀಬಾನೀಕರಣ' ಎಂದರೆ ಏನು? ಮಂಗಳೂರಿಗೂ ಮತ್ತು ತಾಲಿಬಾನ್ ಗೂ ಇಲ್ಲಿ ಹೇಗೆ ಸಾಮ್ಯತೆಗಳನ್ನು ಗುರುತಿಸುತ್ತೀರಿ..ದಯವಿಟ್ಟು ಉತ್ತರ ಕೊಡಿ.
  -ಚಿತ್ರಾ

  ReplyDelete
 16. ಯಾರೋ ಬಾಯಿಬಡುಕ ರಾಜಕೀಯದ ಮಂದಿ ತಾಲಿಬಾನೀಕರಣ ಎಂದರು ಎಂದು ಇವರೂ ಕೂಡ ಸ್ವಂತಿಕೆ ಇಲ್ಲದವರಂತೆ ತಾಲಿಬಾನೀಕರಣ ಎಂದು ಬಡಬಡಿಸುತ್ತಿದ್ದಾರೆ.
  ಎಲ್ಲವನ್ನೂ ಸಹಿಸಿಕೊಂಡು ಮಂಗಳೂರು ಇದ್ದ ಹಾಗೇ ಇರಬೇಕು ಎಂದು ಬಯಸುವುದನ್ನೇ ಮೂಲಭೂತವಾದ, ತಾಲಿಬಾನೀಕರಣ ಎನ್ನಬಹುದು.

  -ಪ್ರವೀಣ

  ReplyDelete
 17. ಇಂದು ತಾಲಿಬಾನೀಕರಣ ಎನ್ನುವುದು ಮೂಲಭೂತವಾದಕ್ಕೆ ಇನ್ನೊದು ಹೆಸರು. ಯಾವುದೇ ಬದಲಾವಣೆಯನ್ನು ಒಪ್ಪದ ತಾಲಿಬಾನಿಗಳು ಮುಖ್ಯವಾಗಿ ಮಹಿಳೆಯನ್ನು ಮನೆಯೊಳಕ್ಕೆ ಇಡಲು ಬಯಸುತ್ತಾರೆ. ಶ್ರೀರಾಮ ಸೇನೆಯ ಜನರು ಬಯಸುವುದು ಇದನ್ನೇ. ತುಳುನಾಡಿನಲ್ಲಿ ಮಹಿಳೆಯರಿಗೆ ಸಾಮಾಜಿಕವಾಗಿ ಉನ್ನತ ಸ್ಥಾನ ನೀಡಲಾಗಿದೆ. ಸಿರಿ, ಕಲ್ಲುರ್ಟಿ, ಅಬ್ಬಗ, ದಾರಗ, ತನ್ನಿಮಾನಿಗ ಮೊದಲಾದವರು ನಮ್ಮ ತುಳು ಸಮಾಜದ ಮುಖ್ಯ ಧಾತುಗಳು. ಅಲಿ, ಬಬ್ಬರ್ಯ, ಬಪ್ಪ ಬ್ಯಾರಿಗಳು ನಮ್ಮನ್ನು ರಕ್ಷಿಸುವ ದೈವಗಳು. ದನ ಕಳೆದು ಹೋದರೆ ಬೈತದ್ಕ ಪಳ್ಳಿಗೆ ನನ್ನ ಅಮ್ಮ ಹರಕೆ ಹಾಕುತ್ತಿದ್ದರು. ಹೆಂಗುಸರು ತುಳುನಾದಿನುದ್ದಕ್ಕು ಮನೆಯ ಹೊರಗೆ ಕುಳಿತು ಕಳ್ಳು ಕುಡಿಯಲು ಯಾರಿಂದಲೂ ಅಡ್ಡಿ ಇರಲಿಲ್ಲ. ಈಗ ಮುತಾಲಿಕ್ ಅಂತ ಒಬ್ಬ ತುಳು ಗೊತ್ತಿಲ್ಲದವನು ತುಳುನಾಡಿನ ಹುಡುಗಿಯರಿಗೆ ಬುದ್ಧಿ ಕಲಿಸಲು ಬಂದಿರುವುದು ತುಳುನಾಡಿಗೆ , ತುಳು ಸಂಸ್ಕೃತಿಗೆ ಅವಮಾನ. ಜಾಗತೀಕರಣದ ಇಂದಿನ ಸಂಧರ್ಭದಲ್ಲಿ ನಾವು ಮಹಿಳೆಯರನ್ನು ಹಿಡಿದೆಳೆದು ಅವಮಾನಿಸುವುದು ದುಶ್ಯಾಸನ ಕೃತ್ಯ. ನಾವು ಮತ್ತೆ ಮಧ್ಯಕಾಲೀನ ಸಮಾಜಕ್ಕೆ ಹಿಂದಿರುಗುವುದು ಬೇಡ, ನಮ್ಮ ಮಕ್ಕಳು ರಕ್ತದ ಹೊಳೆಯಲ್ಲಿ ಮೀಯುವುದು ಬೇಡ. ಕೋಮುವಾದಕ್ಕೆ ಕೊಮುವದವೇ ಉತ್ತರ ವಾದರೆ, ಕೋಮುವಾದ ಇಮ್ಮಡಿಯಾಗುತ್ತದೆ, ನಾನು ದೂರದಲ್ಲಿ ಕುಳಿತು ತುಳುನಾಡಿನ ಮಾನ ಹರಜಾಗುವುದನ್ನು ಕಂಡು ದುಖ ಪಡುತ್ತಿದ್ದೇನೆ ಅಷ್ಟೇ.

  ReplyDelete
 18. ನಾನು ಹುಟ್ಟಿದ ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ.
  ನನ್ನ ಜಿಲ್ಲೆಯ ಬಗ್ಗೆ ನನಗೆ ಅತೀವ ಮೋಹ.
  ಬೋರ್ಗೆರೆವ ಕಡಲು, ಪಶ್ಚಿಮ ಘಟ್ಟ ಶ್ರೇಣಿ, ಝುಳು ಝುಳು ಹರಿಯುವ ನದಿ, ಹಚ್ಚ ಹಸಿರಿನ ವನಸಿರಿ, ಸದಾ ಕ್ರಿಯಾಶೀಲರಾಗಿರುವ ಜನ- ಪುರಾಣದಲ್ಲಿ ವರ್ಣಿತವಾಗಿರುವ ನಾಗಲೋಕವಿದು.
  ’ತುಳುನಾಡು’ ಎಂದು ಕರೆಯಲ್ಪಡುವ ಈ ಕರಾವಳಿ ಸಮೃದ್ದವಾದ ಕಲಾ ಪರಂಪರೆಯನ್ನು ಹೊಂದಿದೆ. ಇಲ್ಲಿ ನಾಗಾರಾಧನೆ, ಭೂತಾರಾಧನೆಯಂತ ಆರಾಧನ ಪದ್ದತಿಯಿದೆ. ಕಂಬಳ, ಚೆನ್ನೆಮಣೆ, ಕಾಯಿ ಕುಟ್ಟುವುದು, ಕೋಳಿ ಅಂಕದಂತ ಜಾನಪದ ಕ್ರೀಡೆಗಳಿವೆ. ಆಟಿಕಳಂಜ, ಚೆನ್ನುನಲಿಕೆಯಂತ ಜಾನಪದ ಕುಣಿತವಿದೆ. ಧರ್ಮ ಸಮನ್ವಯಕ್ಕೆ ಕಾರಣವಾದ ಅಲಿ, ಬಬ್ಬರ್ಯ ಭೂತವಿದೆ. ಸರ್ವಧರ್ಮದವರಿಂದಲೂ ಪೂಜಿಸಲ್ಪಡುವ ಅತ್ತೂರು ಚರ್ಚ್ ಇದೆ. ಜೈನ-ಶೈವ ಸಂಗಮದ ಧರ್ಮಸ್ಥಳವಿದೆ. ಉಳ್ಳಾಲದ ದರ್ಗವಿದೆ. ಬಪ್ಪಬ್ಯಾರಿಯಿಂದ ಕಟ್ಟಲಾಗಿದೆಯೆನ್ನುವ ಮುಲ್ಕಿಯ ಕಾರ್ನಾಡ್ ದುರ್ಗಪರಮೇಶ್ವರಿ ದೇವಸ್ಥಾನವಿದೆ.
  ಹಾಗಿದ್ದರೂ ನನ್ನ ಜಿಲ್ಲೆಯಿಂದು ಕೋಮು ಗಲಭೆಗಳಿಂದ ತತ್ತರಿಸಿದೆ. ಮಾತೃಮೂಲ ಸಂಸ್ಕೃತಿ ಇನ್ನೂ ಜೀವಂತವಾಗಿರುವ ಈ ನಾಡಿನಲ್ಲಿ ಮಹಿಳೆಯರ ಮೇಲೆ ನಿರಂತರ ಹಲ್ಲೆಗಳಾಗುತ್ತಿದೆ. ಜನ ಭಯಭೀತರಾಗಿದ್ದಾರೆ. ದನಿಯೆತ್ತಿದವರ ಧ್ವನಿಯನ್ನು ಅಡಗಿಸಲಾಗುತ್ತಿದೆ.
  ಏನಾದರೂ ಮಾಡಬೇಕಲ್ಲಾ....... ಎಂದಾಗ ಹುಟ್ಟಿಕೊಂಡದ್ದೇ ಈ ಆಲೋಚನೆ.
  ನಾನು ಮತ್ತು ಬೆಂಗಳೂರಿನ ಸುರಗಿಯವರು ಸೇರಿ 'ಕಡಲ ತಡಿಯ ತಲ್ಲಣ' ಎಂಬ ಪುಸ್ತಕವನ್ನು ಸಂಪಾದಿಸುತ್ತಿದ್ದೇವೆ. ಸೃಷ್ಟಿ ಪ್ರಕಾಶನದ ನಾಗೇಶ್ ಅದನ್ನು ಪ್ರಕಟಿಸುತ್ತಿದ್ದಾರೆ ನಮ್ಮ ಗೆಳೆಯರ ಬಳಗ ಒತ್ತಾಸೆಯಾಗಿ ನಿಂತಿದೆ. ದೆಹಲಿಯಲ್ಲಿ ಮುಂಬಯಿಯಲ್ಲಿ ಮತ್ತು ಬೆಂಗಳೂರಲ್ಲಿ ಪುಸ್ತಕ ಬಿಡುಗಡೆಯಾಗಲಿದೆ.
  ತುಳುನಾಡನ್ನು ಕೇಂದ್ರಿಕರಿಸಿರುವ ಈ ಪುಸ್ತಕದಲ್ಲಿ ಕಡಲ ಕಿನಾರೆಯ ಬಹಳಷ್ಟು ಲೇಖಕರ ಬರಹಗಳಿರುತ್ತವೆ. ಅವುಗಳು ಈಗ ತಾನೆ ಅಚ್ಚಿನ ಮನೆ ಪ್ರವೇಶಿಸುತ್ತಲಿದೆ.ಇನ್ನು ಕೆಲವೇ ದಿನಗಳಲ್ಲಿ ಅದು ನಿಮ್ಮ ಕೈ ಸೇರಲಿದೆ. ಅದಕ್ಕೆ ಮೊದಲು ನಿಮ್ಮನ್ನೊಂದು ಸಲಹೆ ಕೇಳೋಣ ಅನಿಸಿತು.’ಕಡಲ ತಡಿಯ ತಲ್ಲಣ’ ಕುರಿತಂತೆ ತಮ್ಮ ಸಲಹೆ ಸೂಚನೆಗಳಿಗೆ ಸ್ವಾಗತವಿದೆ. ನಾವು ಮುನ್ನಡೆಯುವಲ್ಲಿ ಅದು ಸಹಾಯಕವಾಗಬಹುದೆಂಬ ನಂಬಿಕೆ ನಮ್ಮದು.
  ಸುರಗಿ ಮತ್ತು
  ಪುರುಷೋತ್ತಮ ಬಿಳಿಮಲೆ

  ReplyDelete
 19. This comment has been removed by the author.

  ReplyDelete
 20. ''ಯಾವುದೇ ಬದಲಾವಣೆಯನ್ನು ಒಪ್ಪದ ತಾಲಿಬಾನಿಗಳು ಮುಖ್ಯವಾಗಿ ಮಹಿಳೆಯನ್ನು ಮನೆಯೊಳಕ್ಕೆ ಇಡಲು ಬಯಸುತ್ತಾರೆ. ಶ್ರೀರಾಮ ಸೇನೆಯ ಜನರು ಬಯಸುವುದು ಇದನ್ನೇ. ತುಳುನಾಡಿನಲ್ಲಿ ಮಹಿಳೆಯರಿಗೆ ಸಾಮಾಜಿಕವಾಗಿ ಉನ್ನತ ಸ್ಥಾನ ನೀಡಲಾಗಿದೆ.'' ಎಂದಿದ್ದೀರಿ.
  ವಿಚಿತ್ರವೆಂದರೆ ನಿನ್ನೆ ಶ್ರೀರಾಮಸೇನೆ ಬಡ(ಪಬ್ಬಿಗೆ ಹೋಗುವ ಶ್ರೀಮಂತ ಅಲ್ಲ) ಎಂಜಿನಿಯರಿಂಗ್ ವಿಧ್ಯಾರ್ಥಿನಿಯ ಸಂಪೂರ್ಣ ವಿಧ್ಯಾಭ್ಯಾಸದ ಹೊಣೆ ಹೊತ್ತುಕೊಂಡಿದೆ. ಇಂಥ ಪರಿವರ್ತನೆಯನ್ನೂ ಜಾತ್ಯಾತೀತವಾದಿಗಳಾದ ತಾವು ಸ್ವಾಗತಿಸಬಹುದಲ್ಲವೇ?
  ಸರ್, ನನ್ನ ಪ್ರಶ್ನೆ ಏನೆಂದರೆ, ಶ್ರೀರಾಮ ಸೇನೆಯವರಿಗೆ ಬುದ್ದಿ ಹೇಳಿದಂತೆ ಇತರ ಧರ್ಮದವರಿಗೂ ಹೇಳಿದರೆ ಇನ್ನೂ ಒಳ್ಳೆಯದು. ಮಹಿಳೆಯರನ್ನು ಪರದೆ ಧರಿಸಿ, ಮನೆಯೊಳಗೆ ಕುಳಿತು ಬೀಡಿ ಕಟ್ಟಲು ಮಾತ್ರ ಸೀಮಿತಗೊಳಿಸಿರುವ ಕೆಲವರನ್ನು ನಾವೆಲ್ಲರೂ ಮುಖ್ಯವಾಹಿನಿಗೆ ತರಬಹುದಲ್ಲವೇ?

  ReplyDelete
 21. ಬಿಳಿಮಲೆಯವರೇ, ಹಾಗೆಯೇ ತುಳುನಾಡಿನ ಹುಡುಗಿಯರಿಗೆ ಬುದ್ಧಿ ಕಲಿಸಲು ಮುತಾಲಿಕ್ ಬಂದಿಲ್ಲ ಎಂಬುದು ನಿಮ್ಮಂತಹ ದೂರದೂರಿನಲ್ಲಿ ಕುಳಿತು ಟೀಕೆ ಮಾಡುವವರಿಗೆ ಗೊತ್ತಾದರೆ ಒಳ್ಳೆಯದು. ಅದನ್ನು ತುಳುನಾಡಿನ ಜನರ ಹತ್ತಿರವೇ ಕೇಳಿ ತಿಳಿದುಕೊಳ್ಳಿ. ಸುಮ್ಮನೇ ವಿಷಯವನ್ನೂ ತಿರುಚಿ , ನಿಮ್ಮ ಮನಸ್ಸನ್ನೂ ತಿರುಚಿಕೊಳ್ಳಬೇಡಿ. ಪಬ್ ನಲ್ಲಿ ಕುಡಿಯುತ್ತಾ ಕುಳಿತ ಹುಡುಗಿ ಯರು ’ತುಳುನಾಡಿನ ಹುಡುಗಿ ’ಯರ ಪ್ರತೀಕ ಅಂತ ನಿಮಗೆ ಅನ್ನಿಸಿದರೆ ನಿಮಗೆ ಸಮಸ್ತ ಅವಿಭಜಿತ ದ.ಕ ಜನರು ಸಂತಾಪಗಳನ್ನು ಸಲ್ಲಿಸುತ್ತೇವೆ. -ಪ್ರವೀಣ

  ReplyDelete
 22. If Mr. Anonymous thinks that somebody will protect girls by beating them at pubs, I am sorry, they may join Talibans

  ReplyDelete
 23. ತಾಲೀಬಾನ್ ಅನ್ನೋದರ ಡೆಫಿನೇಶನ್ನು ನೀಡಿರುವುದಕ್ಕೆ ಧನ್ಯವಾದಗಳು ಬಿಳಿಮಲೆ ಸರ್ .

  ಹಾಗೇ, ಪ್ರಮೋದ್ ಮುತಾಲಿಕ್ ಅಥವಾ ಶ್ರೀರಾಮ ಸೇನೆಯವರು ಹೇಳಿದ ತಕ್ಷಣ ನಮ್ಮ ಮಂಗಳೂರಿನ ಯಾವ ಮಹಿಳೆಯರೂ ಮನೆಯೊಳಗೆ ಕುಳಿತಿಲ್ಲ..ನಾನೂ ಸಹ! ನಾನು ಶ್ರೀರಾಮ ಸೇನೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ..ಈ ಕುರಿತಾಗಿ ನನ್ನ ಬ್ಲಾಗಿನಲ್ಲಿ ಈ ಹಿಂದೆ ಬರೆದಿದ್ದೇನೆ. ಆದರೆ, ಮಂಗಳೂರು ತಾಲೀಬಾನ್ ಆಗಿದೆ ಅನ್ನೋದಕ್ಕಿಂತಲೂ ಮಂಗಳೂರು ತಾಲೀಬಾನ್ ಾಗಬೇಕು ಅನ್ನೋರ ಕುರಿತಾಗಿ ಆತಂಕ, ನಮ್ಮೂರು ತಾಲೀಬಾನ್ ಆಗೋತ್ತಿದೆ ಎನ್ನೋ ಆತಂಕ ..ಎಂದು ಹೇಳಿದರೆ 'ಪ್ರಸ್ತುತ ಮಂಗಳೂರಿಗೆ 'ಸರಿಯಾದ ಅರ್ಥ ಬರುತ್ತಿದೆಯೇ ಏನೋ
  -ನಮಸ್ಕಾರ,
  ಚಿತ್ರಾ

  ReplyDelete
 24. Chitra ji, You made it perfect! I agree with you, Regards

  ReplyDelete
 25. @ Yes, Correct Mr.Bilimale, I agree, they may join Talibans. But if somebody tells that those pub girls represent all 'tuLunaDu girls', then they may join NIMHANS !

  By the way my name is Praveen. Please read completely before commenting. Thanx. Bye

  ReplyDelete
 26. ಶ್ರೀ ಪ್ರವೀಣ್ ಅವರೇ, ಪಬ್ ನಲ್ಲಿ ಇದ್ದವರು ತುಳುನಾಡಿನವರು ಅಲ್ಲದಿದ್ದರೆ, ತುಳುನಾಡಿನವರು ಯಾರು ಹಾಗಾದರೆ, ? ತುಳುನಾಡಿನ ಮುಖ್ಯ ವಾಹಿನಿಯಲ್ಲಿ ಇರುವವರೆಲ್ಲರೂ ಹೊರಗಿನಿಂದ ಬಂದವರೇ. ಮುಸ್ಲಿಮರು, ಕ್ರೈಸ್ತರು, ಕೊಂಕನಿಯರು, ಗೌಡರು , ಕೊರಗರು... ಹೀಗೆ ಶತಮಾನದುದ್ದಕ್ಕೂ ತುಳುನಾಡಿಗೆ ಜನ ವಲಸೆ ಬಂದಿದ್ದಾರೆ. ಅಲ್ಲಿಯ ನೀರು ಕುಡಿಯುವವರು ನಮ್ಮವರೇ ಎಂಬ ಭಾವ ಬಂದಾಗ ಎಲ್ಲ ಸರಿಯಾಗುತ್ತದೆ. ಇಲ್ಲದಿದ್ದರೆ ನಾವು-ಅವರು ಎಂಬ ಭಾವ ಬೆಳೆದು ರಸ್ತೆಯಲ್ಲಿ ರಕ್ತ ಹರಿಯುತ್ತದೆ. ಸಾಧ್ಯ ಆದರೆ ಕರ್ನಾಟಕ ದಲ್ಲಿ ಪಬ್ ಗಳನ್ನೂ ಬಂದ್ ಮಾಡಿಸಿದರೆ ಒಳ್ಳೆಯದು. ಹುಡುಗರು ಕುಡಿಯಬಹುದೇ? ಈ ಬಗೆಯ ಲಿಂಗ ತಾರತಮ್ಯವು ಪುರುಷ ಪ್ರಧಾನ ವ್ಯವಸ್ಥೆಯ ಒಂದು ಭಾಗ. ನಾನದನ್ನು ಖಂಡತುಂಡವಾಗಿ ವಿರೋಧಿಸುತ್ತೇನೆ.

  ReplyDelete
 27. ಈ ಬರಹವನ್ನು ಇಂದು ನೋಡಿದೆ. ನಮ್ಮೊಳಗಿನ ತಲ್ಲಣಗಳನ್ನು ಚೆನ್ನಾಗಿ ಬಿಂಬಿಸಿದೆ ಈ ಬರಹ.

  @ಮಾಂಬಾಡಿ @ಪ್ರವೀಣ
  ದೂರದ ಊರಿನಲ್ಲಿದ್ದರೂ ನಾವು ಊರು ಬಿಟ್ಟವರಲ್ಲ. ಊರಿನಲ್ಲಾಗುತ್ತಿರುವ ಕ್ಷಣ ಕ್ಷಣದ ಬೆಳವಣಿಗೆಗಳು ನಿಮಗೆ ಹೇಗೆ ಲಭ್ಯವೋ ಅವೇ ಮೂಲದಿಂದ ನಮಗೂ ಲಭ್ಯ. ನಾವು ದೂರದಲ್ಲಿದ್ದರೂ ದಿನಬೆಳಗಾದರೆ ನೀವು ಓದುವ ಪತ್ರಿಕೆಗಳನ್ನೇ, ನೀವು ನೋಡುವ ಚ್ಯನಲುಗಳನ್ನೇ, ವೆಬ್ ಸೈಟ್ ಗಳನ್ನೇ ಸುದ್ದಿಗಾಗಿ ಆಶ್ರಯಿಸುವವರು. ಇನ್ನು ನಮಗೂ ಊರಿನಲ್ಲಿ ಬಂದುಗಳು ಮಿತ್ರರು, ಕ್ಷಣ ಕ್ಷಣಕ್ಕೂ ಸಂಪರ್ಕದಲ್ಲಿರುವವರು ಇದ್ದಾರೆ. ತಿಂಗಳಿಗೊಮ್ಮೆ ಊರಿಗೆ ಬಂದಾಗ ಊರಿನಲ್ಲಾಗುತ್ತಿರುವ ಭೌಗೋಳಿಕ, ಸಾಮಾಜಿಕ ಬದಲಾವಣೆಗಳು ನಮ್ಮ ಪ್ರಜ್ಞೆಗೂ ಬರುತ್ತವೆ.
  ಹಾಗಾಗಿ ನಿಮ್ಮ ಪ್ರತಿಕ್ರಿಯೆಗಳು ಬಿಂಬಿಸುತ್ತಿರುವ "ದೂರದ ಊರಿನಲ್ಲಿರುವವರಿಗೆ ಮಂಗಳೂರಿನ ಬಗ್ಗೆ ಸರಿಯಾದ ಕಲ್ಪನೆ ಇರುವುದು ಅಸಾಧ್ಯ" ಎಂಬ ಅಭಿಪ್ರಾಯವು ಈ ಕಾಲಕ್ಕೆ ಸಲ್ಲದು. ಹತ್ತು ವರ್ಷದ ಹಿಂದೆ ಈ ಮಾತು ನಡೆಯುತ್ತಿತ್ತು. ಈಗಲ್ಲ.

  ReplyDelete
 28. ಬಿಳಿಮಲೆ ಸರ್, ಪಬ್ ನಲ್ಲಿ ಇದ್ದವರು ತುಳುನಾಡಿನವರು ಅಲ್ಲ ಎಂದು ನಾನು ಹೇಳಿಲ್ಲ. ವಿಷಯ ತಿರುಚುವಿಕೆಯಲ್ಲಿ ಬಹಳ ಪರಿಣಿತರು ನೀವು. ನಾನು ಹೇಳಿದ್ದು ಅಲ್ಲಿ ಕುಡಿಯುವವರನ್ನು ಎಲ್ಲಾ ತುಳುನಾಡಿನ ಹುಡುಗಿಯರ ಪ್ರತೀಕವೆಂದು ಅಂದುಕೊಳ್ಳುವುದು ಹೀನ ಮನಃಸ್ಥಿತಿಯಾಗುತ್ತದೆ ಜೊತೆಗೆ ತುಳುನಾಡಿನ ಹುಡುಗಿಯರಿಗೆ ಮತ್ತು ಜನರಿಗೆ ಮಾಡುವ ಅವಮಾನವಾಗುತ್ತದೆ. ಹುಡುಗರು ಕುಡಿಯಬಹುದೋ ಇಲ್ಲವೋ ಅದೆಲ್ಲಾ ಇಲ್ಲಿ ಚರ್ಚೆಯ ವಿಷಯವಲ್ಲ. ನೀವು ಕುಡಿತವನ್ನು ವಿರೋಧಿಸುವುದಾದರೆ ವಿರೋಧಿಸಿ , ಅದರಲ್ಲೂ ಹುಡುಗರು ಕುಡಿದರೆ ಹುಡುಗಿಯರೂ ಕುಡಿಯಬಹುದು ಅನ್ನುತ್ತೀರಾ ಅನ್ನುವುದಾದರೆ ತಮ್ಮ ನಿಜವಾದ(!) ಸಮಾಜ ಕಳಕಳಿಯನ್ನು ತೋರಿಸುತ್ತದೆ! - ಪ್ರವೀಣ

  ReplyDelete
 29. 1. ಮಂಗಳೂರು ಬದಲಾಗಲು ಕೇವಲ ಒಂದು ಸಮಾಜದಲ್ಲಿನ ಬದಲಾವಣೆಗಳೇ ಕಾರಣವೇ? ಹೊರದೇಶದಿಂದ ಹರಿದು ಬಂದ ಹಣವೂ ಈ ಬದಲಾವಣೆಯಲ್ಲಿ ಪಾತ್ರ ವಹಿಸಿಲ್ಲವೇ? ಮೂಲಭೂತವಾದಿಗಳು ಕೇವಲ ಕೇಸರಿ ಬಣ್ಣ ಮಾತ್ರ ಧರಿಸಿದ್ದಾರೆಯೇ? ಎಲ್ಲದಕ್ಕೂ ಮೂಲ ಹುಡುಕುತ್ತಾ ಹೋದಲ್ಲಿ ಮಹಮದ್ ಘೋರಿ 17 ಬಾರಿ "ಭಾರತ"ದ ಮೇಲೆ ಮಾಡಿದ ದಾಳಿ ಹಾಗೂ ಆನಂತರದ ಶತಮಾನಗಳವರೆಗೂ ನಡೆದು ಬಂದ ಬೆಳವಣಿಗೆಗಳೆ ಈ ಎಲ್ಲವಕ್ಕೂ ಕಾರಣ ಎಂದು ಹೇಳಬಹುದಲ್ಲವೆ?
  2. ಪಕ್ಕದ ಮನೆಯ ಬಾಯಮ್ಮನ ಮೇಲೆ ಇತ್ತೀಚೆಗೆ ಮಾತ್ರ ಸಂಶಯ ಪಡುವಂತೆ ಮಾಡುತ್ತಿರುವ ಬೆಳವಣಿಗೆಯಾದರೂ ಏನು? ಇದರಲ್ಲಿ ಬಾಯಮ್ಮನ ಪಾತ್ರ ಏನೂ ಇಲ್ಲವೇ? ಎಂದಾದರೂ ಯಾರಾದರೂ ಭಗವದ್ಗೀತೆಯ ಯಾ ರಾಮಾಯಣ/ಮಹಾಭಾರತದ ಪ್ರತಿಗಳನ್ನು ಮಾಡಿಸಿ ಮನೆಮನೆಗೂ ಹೋಗಿ ಇದನ್ನೇ ಓದಿ, ಬೇರೆಲ್ಲವನ್ನೂ ಬಿಡಿ, ಇದೇ ಸರಿ, ಬೇರೆಯದೆಲ್ಲಾ ಢೋಂಗಿ ಎಂದು ಯಾರಾದರೂ ಹೇಳುತ್ತಿದ್ದರೆ? ಅನವಶ್ಯಕವಾಗಿ ತಮ್ಮ ಮತ ಪ್ರಚಾರ ಏಕೆ ಮಾಡಬೇಕು? ತಮ್ಮ ಪಾಡಿಗೆ ತಾವಿರಬಾರದೇಕೆ? ಹೈಕಮಾಂಡ್ ಮುಖ್ಯಸ್ಥರ ಬೆಂಬಲವಿದೆಯೆಂದು ಏಕೆ ಹಾರಾಡಬೇಕು?
  3. ಈ ಎಲ್ಲಾ ಮೂರು ಸಮಾಜಗಳು ಒಂದಾಗಿ ಪರ ರಾಜ್ಯದವರು ಮಂಗಳೂರಿನ ಮೇಲೆ ಮಾಡುತ್ತಿರುವ ಅನ್ಯಾಯವನ್ನು ಏಕೆ ತಡೆಗಟ್ಟುವುದಿಲ್ಲ? ರೈಲ್ವೆ ವಿಚಾರವಾಗಲಿ, ಕಾಸರಗೋಡು ಗಡಿ ವಿಚಾರವಾಗಲೀ, ಏಕೆ ಇವರಿಗೆ ಪ್ರಮುಖವಾಗಿ ಕಾಣುವುದಿಲ್ಲ? ಈಗಾಗಲೇ ಶೃಂಗೇರಿ, ಕಾರ್ಕಳ, ಕೊಡಗು ಇತ್ಯಾದಿ ಮಲೆನಾಡಿನ ಅತ್ಯುತ್ತಮ ಭಾಗಗಳನ್ನೆಲ್ಲಾ ಆಕ್ರಮಿಸಿಕೊಂಡಿರುವ ಮಲೆಯಾಳಿಗಳ ವಿರುದ್ದ ಏಕೆ ಇವರೆಲ್ಲಾ ಒಂದಾಗುವುದಿಲ್ಲ?

  ReplyDelete