Tuesday, February 3, 2009

ದೀರ್ಘ ರಜೆಗೆ ತಯಾರಾಗಿ

ರಾಮಣ್ಣನ ಮಗ ಹರೀಶ ದುಬಾಯಿಯಿಂದ ಊರಿಗೆ ಬರ್ತಾನೆ ಎಂಬ ಸುದ್ದಿ ನನಗೂ ಖುಷಿ ಕೊಟ್ಟಿತು. ಒಂದೂವರೆ ವರ್ಷದ ಹಿಂದೆ ದುಬಾಯಿಯ ಬಹು ಮಹಡಿ ಕಟ್ಟಡಗಳ ಏರ್ ಕಂಡೀಶನ್ ಗಳ ಮೆಕಾನಿಕ್ ಕೆಲಸಕ್ಕೆ ಹರೀಶ ಹೊರಟಾಗ ನಮ್ಮಲ್ಲಿ ಎಲ್ಲರಿಗೂ ಖುಷಿಯಾಗಿತ್ತು. ಊರಲ್ಲಿ ಸಿಗುವ ಕೆಲಸ ಅಷ್ಟಕಷ್ಟೇ. ದುಬಾಯಿಯಲ್ಲಿಯಾದರೂ ಇಂಪ್ರೂವ್ ಆಗಬಹುದು ಎಂದುಕೊಂಡಿದ್ದೆವು. ಅಲ್ಲಿ ಕೆಲಸ ಕಡಿಮೆಯಾಗಿ ಮಾಲೀಕರು ಅವನನ್ನು ಊರಿಗೆ ದೀರ್ಘರಜೆಯಲ್ಲಿ ಕಳುಹಿಸಿ ಕೊಟ್ಟಿದ್ದಾರೆ. ಆದರೆ ಹರೀಶ ಊರಿಗೆ ಬರುವ ಕಾರಣ ಆತನ ವೈಯಕ್ತಿಕವಾಗಿರದೇ ಜಾಗತಿಕವಾಗಿತ್ತು.
ವಿದೇಶದಲ್ಲಿದ್ದ ಕೆಲಸ ಬಿಟ್ಟು ಅನಿವಾಸಿ ಭಾರತೀಯನೊಬ್ಬ ನಗರದಲ್ಲಿ ಆರಂಭಿಸಿದ್ದ ಶಿಕ್ಷಣಕ್ಕೆ ಸಂಬಂಧಪಟ್ಟ ನಾಲೆಜ್ ಕಂಪನಿಯೊಂದನ್ನು ಇನ್ಯಾರಿಗೋ ಮಾರಾಟಮಾಡಿ ಮತ್ತೆ ವಿದೇಶಕ್ಕೆ ಹೊರಟಿದ್ದಾನೆ. ಆ ಸಂಸ್ಥೆಯಲ್ಲಿದ್ದ ಲಲಿತ್ ಕುಮಾರ್ ಎಂಬ ಹುಡುಗ ಮೊನ್ನೆ ಜನವರಿ ೩೧ರಂದು ಸಿಕ್ಕಿದಾಗ ತನ್ನ ಆರೋಗ್ಯ ಸರಿಯಿಲ್ಲ ಎಂದು ಹೇಳಿದ್ದ. ಕೆಲಸ ಹೇಗೆ ನಡೆಯುತ್ತಿದೆ ಎಂದು ಕೇಳಿದಾಗ ಸಾರ್, ನಾನು ಈಗಿರುವ ಕಂಪನಿಯಲ್ಲಿ ಇಂದು ಕೊನೆಯ ದಿನವೇ ಇರಬೇಕು. ನನ್ನನ್ನು ಕೆಲಸದಿಂದ ತೆಗೆದು ಹಾಕಬಹುದೆಂಬ ಸುದ್ದಿ ಇಡೀ ಆಫೀಸಿನಲ್ಲಿ ಹಬ್ಬಿಕೊಂಡಿದೆ. ಇನ್ನೀಗ ನಾನು ಇನ್ನೊಂದು ಕಂಪನಿಯಲ್ಲಿ ಕೆಲಸ ಕೇಳಲು ಹೊರಟಿದ್ದೇನೆ ಎಂದ. ಆದರೆ ಲಿತ್ ಕುಮಾರ್‌ನ ಕೆಲಸ ಹೋಗಲು ಕಾರಣ ಆತನ ವೈಯಕ್ತಿಕವಾಗಿರದೇ ಜಾಗತಿಕವಾಗಿತ್ತು.
ಬೆಳಿಗ್ಗೆದ್ದು ನೋಡಲೆಂದು ತರಿಸುವ ಅರ್ಧ ಡಜನ್ ದಿನಪತ್ರಿಕೆಗಳನ್ನು ತಿಂಗಳೊಳಗೆ ಕಬಾಡಿಯವನಿಗೆ ಕೊಡುವಂತೆ ಮನೆಯವರಿಗೆ ನನ್ನ ಕಟ್ಟಪ್ಪಣೆ. ಕಬಾಡಿಯವನು ತನ್ನ ಬಿಸಿನೆಸ್ ಡಲ್ ಆಗಲು ಪ್ರಾಪರ್ಟಿ ಮಾರ್ಕೆಟ್ ಕುಸಿದುದೇ ಕಾರಣ ಎನ್ನುತ್ತಿದ್ದಾನಂತೆ. ಪತ್ರಿಕೆ ಕೊಡುವ ಮನೆಯವರ ಮತ್ತು ಕೊಳ್ಳುವ ಕಬಾಡಿಯವನ ವ್ಯವಹಾರದಲ್ಲಿ ಇಬ್ಬರಿಗೂ ನಷ್ಟ ಆಗಲು ಕಾರಣ ಪ್ರಾಪರ್ಟಿ ಮಾರ್ಕೆಟ್ ಕುಸಿತ. ಅರ್ಥಶಾಸ್ತ್ರದಲ್ಲಿ ಆಸಕ್ತಿಯಿದ್ದು ಸ್ವಲ್ಪ ಓದಿದ ನನ್ನ ತಲೆಗೆ ಇದು ಅರ್ಥವಾಗಲು ಬಹಳ ಸಮಯವೇ ಬೇಕಾಯಿತು. ಪ್ರಾಪರ್ಟಿ ಬೆಲೆ ಕುಸಿದಿದೆ. ಕೊಳ್ಳುವವರ ಕೈಯಲ್ಲಿ ಹಣವಿಲ್ಲ. ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುವವರು ಅಲುಗಾಡುತ್ತಿದಾರೆ. ಶೇರ್ ಮಾರ್ಕೆಟ್‌ನಲ್ಲಿ ಹಣಹಾಕಿದವರು ಕೈಚೆಲ್ಲಿ ಕುಳಿತಿದ್ದಾರೆ. ಸಿಮೆಂಟು ಉಕ್ಕು ಸರಿಯಾದ ಬೆಲೆಗೆ ಕೊಂಡುಕೊಳ್ಳಲು ಹಣವಿಲ್ಲ. ಜಾಹಿರಾತು ಮಾಡಲು ಹಣವಿಲ್ಲ. ಹಾಗಾಗಿ ಪತ್ರಿಕೆಗಳ ಮುಖ್ಯ ಭಾಗಗಿಂತಲೂ ಹೆಚ್ಚು ಪುಟಗಳನ್ನು ಹೊತ್ತು ತರುತ್ತಿದ್ದ ಪ್ರಾಪರ್ಟಿ ಸಪ್ಲಿಮೆಂಟ್ ಗಳು ಮುಖ್ಯ ಪತ್ರಿಕೆಯ ಒಳಗೇನೆ ಮುದುಡಿಕೊಂಡಿವೆ. ಇಪ್ಪತ್ತು ಪುಟ ಬರುತ್ತಿದ್ದವು ಒಳಗಿನ ಎರಡು ಪುಟಗಳಲ್ಲಿ ಅರ್ಧ ಅರ್ಧ ಬರುತ್ತಿವೆ! ಕಬಾಡಿಯವನ ಬಿಸಿನೆಸ್ ಡಲ್ ಆಗಿದೆ! ಆದರೆ ಕಬಾಡಿಯವನ ಬಿಸಿನೆಸ್ ಡಲ್ ಆಗಲು ಕಾರಣ ಆತನ ವೈಯಕ್ತಿಕವಾಗಿರದೇ ಜಾಗತಿಕವಾಗಿತ್ತು.
ಆರ್ಥಿಕ ಕುಸಿತದ ಕುರಿತು ಕಂಪನಿಯ ಅಧ್ಯಕ್ಷರ, ನಿರ್ದೇಶಕರ ಭಾಷಣಗಳಲ್ಲಿ ರಿಸೆಶನ್ ಎಂಬ ಶಬ್ದ ತುರುಕಿಸಿ ಕಂಪನಿಯ ಲಾಭದ ಇಳಿಕೆಗೆ ಇಕಾನಮಿಕ್ ಕಾರಣಗಳನ್ನು ತೋರಿಸಿ ’ಅದ್ಭುತ’ ಭಾಷಣ, ಸಂದೇಶಗಳನ್ನು ಬರೆಯಬಹುದು. ಕಂಪನಿಯ ಅಧಿಕಾರಿಗಳಿಗೆ, ಕೆಲಸಗಾರರಿಗೆ ನೀಡುವ ಮೋಟಿವೇಟಿವ್ ಸಂವಹನ ಸಂದೇಶಗಳಲ್ಲಿ ಮ್ಯಾನೇಜ್‌ಮೆಂಟ್ ಜಾರ್ಗನ್‌ಗಳನ್ನು ಸೇರಿಸಿ ಅವರ ಮೊರೇಲ್ ಹೆಚ್ಚಿಸುವ ತಂತ್ರಗಾರಿಕೆ ನಡೆಸಬಹುದು.
ಆದರೆ ಬೀದಿಯಲ್ಲಿ ಸಿಗುವ ಹರೀಶ್, ಲಲಿತ್ ಕುಮಾರ್, ಕಬಾಡಿಯವರಿಗೆ ಈ ರಿಸೆಶನ್ ಬಗ್ಗೆ ಹೇಗೆ ವಿವರಿಸುವುದು? ಅವರಿಗೆ ಯಾಕೆ ವಿವರಿಸುವುದು. ಅವರೇ ಅದರ ಮೊದಲ ಏಟಿಗೆ ಬಲಿಯಾದಾಗ...

ಒಲವಿನಿಂದ

ಬಾನಾಡಿ