Saturday, January 17, 2009

ಕೊನೆಯ ಆ ದಿವ್ಯ ಕ್ಷಣಗಳು

ನಗರದ ಕೊನೆಯೆನ್ನಬಹುದಾದ ಸ್ಥಳ. ಈ ನಗರದಿಂದ ಇನ್ನೊಂದು ನಗರಕ್ಕೆ ಹೋಗುವ ಮುಖ್ಯರಸ್ತೆಯ ಮೇಲಿರುವ ಕೊನೆಯೆದೆಂಬುದಾದ ಕಟ್ಟಡ. ಅದೊಂದು ಪಂಚತಾರಾ ಅಲ್ಲವಾದರೂ ದೊಡ್ಡ ಮಟ್ಟಿನ ಆಸ್ಪತ್ರೆ. ರಾತ್ರಿಯ ಎರಡು ಗಂಟೆಯಿದ್ದಿರಬಹುದು. ಎಲ್ಲವೂ ಮೌನವಾಗಿದೆ. ಕಟ್ಟಡದ ಐದನೆ ಮಹಡಿಯ ಹವಾನಿಯಂತ್ರಿತ ಕೊಠಡಿಯಲ್ಲಿದ್ದರೂ ಹೊರಗಡೆ ರಾತ್ರಿ ಪಾಳಿಯ ಗಾರ್ಡ್ ರಸ್ತೆಯಂಚಿಗೆ ತನ್ನ ದೊಣ್ಣೆಯಿಂದ ಬಡಿಯುತ್ತಿರುವ ಟಡ್ ಟಡ್ ಸದ್ದು ಗೋಡೆ ಮೇಲಿದ್ದ ಗಡಿಯಾರದ ಸೆಕೆಂಡು ಮುಳ್ಳಿನ ಚಲನೆಯ ಸದ್ದನ್ನು ಹಿಂಬಾಲಿಸುತ್ತಿದ್ದಂತೆ ಅನಿಸುತ್ತಿತ್ತು. ರಾತ್ರಿಯ ಆ ನೀರವತೆ ಎಲ್ಲವನ್ನೂ ಬಿಟ್ಟ ಕಣ್ಣುಗಳಿಂದ ನೋಡುತ್ತಿತ್ತು.
ನರ್ಸುಗಳು, ಡಾಕ್ಟರರು ಅವಸರದಲ್ಲಿದ್ದರು. ಬೆಚ್ಚನೆ ಹೊದ್ದು ಮಲಗಿದ್ದವನ ಮೇಲೆ ಬಂದು ಅದೇನೋ ಕೈ ಮೈಗೆ ಚುಚ್ಚಿದರು. ಹತ್ತಿರದ ಸಂಬಂಧಿಗಳು ಬಹಳ ಹತ್ತಿರವಿದ್ದರು. ಪ್ರೀತಿಸುತ್ತಿದ್ದವರ ಹತ್ತಿರ ಹತ್ತಿರ ಹೋದಂತೆ ಅನಿಸಿತು. ಅವರೊಡನೆಲ್ಲಾ ಅದೆಷ್ಟು ಆಡದ ಮಾತುಗಳೆಲ್ಲ ಕಡಲಿನ ತೆರೆಗಳಂತೆ ಅಪ್ಪಲಿಸುತ್ತಾ ಬಂದವು. ಮಾತುಗಳಲ್ಲಿ ಮಾರ್ದವತೆ ಇತ್ತು. ಆತ್ಮೀಯತೆ ಇತ್ತು. ಪ್ರೀತಿಯಿತ್ತು. ಅಪೂರ್ವವಾದ ಆನಂದವಿತ್ತು. ಹಿಡಿದ ಕೈಯಲ್ಲಿ ಬೆಚ್ಚನೆಯಿತ್ತು. ನೆನಪುಗಳ ಸಾಗರದಿಂದ ಹೊರಟ ಹನಿಗಳು ಕಣ್ಣಂಚಿನಲ್ಲಿ ತುಂಬಿ ಬಂದವು.ಅತೀ ಹತ್ತಿರವಿದ್ದವರಿಗೆ ಎಲ್ಲವನ್ನೂ ಹೇಳಿದಂತಹ ಅನನ್ಯ ಆನಂದವಿತ್ತು.ನಿನ್ನೆ, ಮೊನ್ನೆ, ಅದಕ್ಕಿಂತ ಮೊನ್ನೆ. ದಿನಗಳು ಹಿಂದೆ ಹಿಂದೆ ಹೋದಂತೆ ಅನಿಸಿತು. ಇಂದು ಎಲ್ಲಿದ್ದೆ ಎಂಬುದರ ಮೆಟ್ಟಿಲುಗಳು ಒಂದೊಂದೆ ಬರತೊಡಗಿದವು. ಬದುಕಿನಲ್ಲಿ ಅದೆಂದೋ ಒಮ್ಮೆ ಬಂದು ಹೋದವರು ಸುಳಿದಾಡಿದರು. ಬೆನ್ನಿನಿಂದ ಇರಿದವರು ನೆನಪಾದರು. ನಿರ್ಮಲ ಮುಗ್ದ ಮನಸಿನ ಪ್ರೀತಿಯನ್ನು ಧಾರೆಯೆರೆದವರು ನೆನಪಾದರು. ಎಲ್ಲವೂ ಕಣ್ಣಂಚಿನಲ್ಲಿ ಕಂಡವು. ನೀಲಾಕಾಶದಂತೆ. ದಡವಿಲ್ಲದ ಸಾಗರದಂತೆ. ಮುಗಿಲೆಡೆಯತ್ತ ಮುತ್ತಿಡುವ ಪರ್ವತ ಶಿಖರದಂತೆ ರಾಶಿ ರಾಶಿ ನೆನಪುಗಳು. ಎಲ್ಲವೂ ಮುಗಿಯುತ್ತಾ ಬಂದಂತೆ ಅನಿಸಿತು. ಅದು ಸಾಕು. ಇದು ಸಾಕು. ಎದೆಯೊಳಗಿಂದ ತೃಪ್ತತೆಯ ತೇಗುಬಂತು.ಮುಪ್ಪು ಮುಪ್ಪಾಗಿದ್ದ ಅಪ್ಪ ಅಮ್ಮ ಬಂದರು. ಹತ್ತಿರವೇ ಕುಳಿತರು. ತಲೆಮೇಲೆ ಕೈಯಾಡಿಸಿದರು. ಖಾಲಿಯಾಗಿದ್ದ ತಲೆಯ ಮೇಲೆ ದಟ್ಟ ಕೂದಲಿದ್ದವು. ತೆರೆಯಲಾಗದ ಕಣ್ಣು ತುಂಬಿ ಬಂತು. ಮುಖ ಅರಳಿತು. ಸುಕ್ಕುಗಟ್ಟಿದ ಮುಖದ ಚರ್ಮದಲ್ಲಿ ಗಡಸು ತುಂಬಿತು. ಎಬ್ಬಿಸಲಾಗದ ಕೈಕಾಲುಗಳು ಎದ್ದು ಓಡೋಣ ಎಂಬಷ್ಟು ಬಲಿಷ್ಟವಾದವು. ಬಳಿಯಲ್ಲಿದ್ದ ಅಮ್ಮ ಮುಪ್ಪಾಗಿದ್ದವಳು ಯೌವನದ ಹೆಂಗಸಾಗಿದ್ದಳು. ಅಮ್ಮ. ನೀನೊಬ್ಬಳೇ. ಅದೆಷ್ಟು ಸುಂದರಿ ನೀನು. ಎದೆಗೆ ಕೈಯಿಟ್ಟ ಅಮ್ಮ ಹಣೆಗೊಂದು ಮುತ್ತು ಕೊಟ್ಟಳು. ಆ ಮುತ್ತಿನ ಶಕ್ತಿ ಅದೇನು.ಅಮ್ಮನ ತೊಡೆಯ ಮೇಲೆ ಆಡುವ ಮಗು ಎನಿಸಿತು. ಹೌದು. ಅದೆಷ್ಟೋ ವರ್ಷಗಳಿಂದ ಬಿಟ್ಟು ಹೋದವರು ಹತ್ತಿರ ಹತ್ತಿರವಾದರು. ಮುದಿ ಮುದಿಯಾದವರು ಯುವಕರಾಗಿ ಬರುತ್ತಿದ್ದಾರೆ. ಎಲ್ಲರೂ ಹತ್ತಿರ ಹತ್ತಿರ ಬರುತ್ತಿದ್ದಾರೆ. ಕೈ ಹಿಡಿದು ಆಡಿಸುತ್ತಿದ್ದಾರೆ. ಕೈಗೆ ಸಿಕ್ಕ ಹೊಸ ಮಗುವನ್ನು ಮುದ್ದಿಸಲು ಎಲ್ಲರೂ ಕಾತುರರಾಗಿದ್ದಾರೆ. ಎಲ್ಲರನ್ನೂ ದೂರ ಕಳುಹಿಸಿದ ಅಮ್ಮ ಹತ್ತಿರ ಬರುತ್ತಾಳೆ. ಬಿಸಿ ನೀರಿನಿಂದ ಸ್ನಾನ ಮಾಡಿಸುತ್ತಾಳೆ. ಮನಸ್ಸು ಖಾಲಿ ಖಾಲಿ ಎನಿಸುತ್ತದೆ. ಶುಭ್ರವೆನಿಸುತ್ತದೆ. ಶಾಂತವೆನಿಸುತ್ತದೆ. ನಿರಾಳವೆನಿಸುತ್ತದೆ. ಹಗುರವೆನಿಸುತ್ತದೆ. ಅಮ್ಮನ ಬೆಚ್ಚನೆಯ ಮಮತೆಗೆ ಕಣ್ಣುಗಳು ತನ್ನಷ್ಟಕ್ಕೆ ಮುಚ್ಚಿಕೊಳ್ಳುತ್ತವೆ. ಚಿರಂತನ ನಿದ್ರೆಗೆ ಹಾತೊರೆಯುತ್ತದೆ. ದಿವ್ಯ ಆನಂದ. ಅದರ ಅನುಭವಕ್ಕೆ ಅಂತ್ಯವಿಲ್ಲ. ಕಾಲದ ಗಣನೆಯಿಲ್ಲ. ಚಿರಂತನ. ದಿವ್ಯ ಲೋಕದ ಚಿರನಿದ್ರೆಗೆ ಎಲ್ಲವೂ ಮುಗಿಯುತ್ತದೆ.

4 comments:

 1. ಸಾವಿನ ಬಗ್ಗೆ ನಿಮ್ಮ ಅಪೂರ್ವ ಅನಿಸಿಕೆಯನ್ನು ಬರೆದಿದ್ದೀರಿ. ತುಂಬಾ ಆಪ್ತರ ಸಾವನ್ನು ಹತ್ತಿರದಿಂದ ನೋಡಿರಬೇಕು ನೀವು ಅಲ್ಲವೇ?!

  ReplyDelete
 2. ಅಪೂರ್ವ ಅನುಭವವಿದು.

  ReplyDelete
 3. ಕಣ್ಣಂಚು ಒದ್ದೆ ಒದ್ದೆ ಒದ್ದೆ ಒದ್ದೆ....

  ReplyDelete
 4. ಒಂದು ಕ್ಷಣ ದಿವ್ಯ ಮೌನ...

  ReplyDelete