Monday, January 19, 2009

ಜಾತ್ರೆ, ತೇರು, ನೇಮ, ಕೋಲ, ಬೈದರ್ಕಳ ಗರಡಿ, ಕಂಬಳ

ಭಾನುವಾರ ಮಂಗಳೂರಿನ ಪ್ರೇಮಕ್ಕನಿಗೆ ಫೋನ್ ಮಾಡಿದರೆ ಇನ್ನೂ ಹೊರಡಿಲ್ವಾ? ಎಂಬ ಪ್ರಶ್ನೆ.
ಯಾಕೆ? ಎಲ್ಲಿಗೆ? ನನ್ನದು ಮರು ಪ್ರಶ್ನೆ!
ಬುಧವಾರ ಕದ್ರಿ ತೇರು, ಮಂಗಳವಾರ ವಿಟ್ಲ ತೇರು!
ಕದ್ರಿ ತೇರಿಗೆ ಬರ್ತೇನೆ ಎಂದು ಸುಳ್ಳು ಭರವಸೆಗಳನ್ನು ಕೊಟ್ಟ ನಾನು ಈ ಸಲ ಜಾತ್ರೆಗೆ ಹೋಗುವ ಯೋಜನೆ ಹಾಕಿರಲಿಲ್ಲ. ಈಗಷ್ಟೆ ನೂರಕ್ಕೂ ಮಿಕ್ಕಿ ರಾಷ್ಟ್ರಗಳ 5000 ಪ್ರತಿನಿಧಿಗಳ ಐದು ದಿನಗಳ ಅಂತರಾಷ್ಟ್ರೀಯ ಕಾನ್ಫರೆನ್ಸ್ ನಡೆಸಿ ಸುಸ್ತಾಗಿದ್ದ ನಾನು ಜಾತ್ರೆಯನ್ನು ಮರೆತಿದ್ದೆ. ಕಳೆದ ಕೆಲ ವರ್ಷಗಳಿಂದ ಕದ್ರಿ ತೇರಿಗೆ ತಪ್ಪದೆ ಹಾಜಾರಾಗುತ್ತಿದ್ದ ನಾನು ಈ ಸಲವೂ ಬರುವೆನೆಂಬ ಕಾತರದಿಂದ ಪ್ರೇಮಕ್ಕ ಉತ್ಸುಕರಾಗಿದ್ದರು.
ಬಹಳಷ್ಟು ವರ್ಷಗಳಿಂದ ಕಂಬಳ ನೋಡದಿದ್ದ ನಾನು ಈ ಸಲ ಕಂಬಳಕ್ಕೆ ಬರುತ್ತೇನೆ ಎಂದು ಮತ್ತೊಂದು ಭರವಸೆ ನೀಡಿ ಫೋನಿಟ್ಟೆ.
ಯಾವ ಕಂಬಳ ಎಲ್ಲಿ ಅಂತ ಗುರು ಕೊಟ್ಟ ಮ್ಯಾಗ್ನಂ ಅವರ ತುಳುನಾಡು ಪಂಚಾಂಗ ಕ್ಯಾಲೆಂಡರ್ ನೋಡಿ ಜಾತ್ರೆ, ತೇರು, ನೇಮ, ಕೋಲ, ಬೈದರ್ಕಳ ಗರಡಿ, ಕಂಬಳ ಎಲ್ಲ ವಿವರಗಳನ್ನು ಕಳೆ ಹಾಕಿದೆ. ಪ್ರೇಮಕ್ಕನೊಡನೆ ಇನ್ನೊಮ್ಮೆ ಮಾತಾಡುವುದಕ್ಕಿಂತ ಮೊದಲು ನನ್ನ ಕಾರ್ಯಕ್ರಮ ನಿರ್ಧರಿಸಿಯೇ ಬಿಡ್ತೇನೆ ಎಂದು ಕೊಂಡಿದ್ದೇನೆ.
ದೂರದೂರಿನಲ್ಲಿರುವವರಿಗೆ ಊರಿನ ಜಾತ್ರೆ ಮತ್ತೆ ಮತ್ತೆ ಕರೆಯುತ್ತಿದೆ. ಒಂದೆರಡು ದಿನ ಅವಕಾಶಮಾಡಿ ಹೋಗಿಬರುವುದರಲ್ಲಿ ಇಡೀ ವರ್ಷದ ಸಂಭ್ರಮವಿರುತ್ತದೆ.
ಜಾತ್ರೆ, ತೇರು, ನೇಮ, ಕೋಲ, ಬೈದರ್ಕಳ ಗರಡಿ, ಕಂಬಳ
ಜನವರಿ 20 ಕಾಂತಾವರ ತೇರು, ವಿಟ್ಲ ತೇರು.
ಜನವರಿ 21 ಕದ್ರಿ ಮಂಜುನಾಥನ ತೇರು.
ಫೆಬ್ರವರಿ2 ಪಣಂಬೂರು ವಿಷ್ಣುಮೂರ್ತಿ ತೇರು ಮತ್ತು ಮಂಗಳೂರಿನ ವೆಂಕಟರಮಣ ತೇರು
ಫೆಬ್ರವರಿ 5 ಪಂಜ ಪಂಚಲಿಂಗೇಶ್ವರ ತೇರು
ಫೆಬ್ರವರಿ 11 ಹೆರ್ಗ ದುರ್ಗಾಪರಮೇಶ್ವರಿ ತೇರು
ಫೆಬ್ರವರಿ 14 ಹೆಬ್ರಿ ಅನಂತ ಪದ್ಮನಾಭ ತೇರು
ಫೆಬ್ರವರಿ 17 ಕಾಪು ಜನಾರ್ಧನ ತೇರು
ಫೆಬ್ರವರಿ 25 ಕಾರಿಂಜ ತೇರು ಮತ್ತು ಮಾರ್ಪಳ್ಳಿ ತೇರು
ಮಾರ್ಚ್ 1 ಉದ್ಯಾವರ ಸಿದ್ದಿವಿನಾಯಕ ತೇರು
ಮಾರ್ಚ್ 3 ಬಂಟ್ವಾಳ ತೇರು ಮತ್ತು ಮೂಡಬಿದ್ರೆ ಹಿರೇಬಸದಿ ತೇರು
ಎಪ್ರಿಲ್ 2 ಬಾರಕೂರು ಪಂಚಲಿಂಗೇಶ್ವರ ತೇರು
ಎಪ್ರಿಲ್ 4 ಕಾರ್ಕಳ ಅನಂತ ಶಯನ ತೇರು
ಎಪ್ರಿಲ್ 9 ಮೂಡಬಿದ್ರೆ ಬಸದಿ ತೇರು
ಎಪ್ರಿಲ್ 15 ಬಪ್ಪನಾಡು ತೇರು
ಎಪ್ರಿಲ್ 19 ಕಟೀಲು ತೇರು, ಕಡೇಶಿವಾಲಯ ತೇರು
ಎಪ್ರಿಲ್ 20 ಧರ್ಮಸ್ಥಳ ತೇರು
ಎಪ್ರಿಲ್ 21 ವೇಣೂರು ಮಹಾಲಿಂಗೇಶ್ವರ ತೇರು
ಜಾತ್ರೆಗಳು
ಫೆಬ್ರವರಿ 5 ಮಾಣಿ ಉಳ್ಳಾಲ್ತಿ ಜಾತ್ರೆ
ಫೆಬ್ರವರಿ 13 ಕೆಳಿಂಜೆ ಉಳ್ಳಾಲ್ತಿ ಜಾತ್ರೆ
ಫೆಬ್ರವರಿ 22 ಪೆರುವಾಯಿ ಜಾತ್ರೆ
ಫೆಬ್ರವರಿ 16, 23 ಮತ್ತು ಮಾರ್ಚ್ 10 ಉಪ್ಪಿನಂಗಡಿ ಮಖೆ ಜಾತ್ರೆ
ಎಪ್ರಿಲ್ 10 ಪೊಳಲಿ ಜಾತ್ರೆ
ಮೇ 6 ಉಬರಡ್ಕ ನಿಟ್ಟೂರು ಉಳ್ಳಾಕುಲು ಜಾತ್ರೆ
ಮೇ 24 ಬೆಟ್ಟಂಪಾಡಿ ಜಾತ್ರೆ
ಬೈದರ್ಕಳ ಗರಡಿ ಜಾತ್ರೆ ನೇಮ
ಜನವರಿ 13 ಕಂಕನಾಡಿ ಬೈದರ್ಕಳ
ಫೆಬ್ರವರಿ 8 ಕಿನ್ನಿಮೂಲ್ಕಿ ಗರಡಿ ನೇಮ, ಚಿಪ್ಪಾರು ಗರಡಿ ನೇಮ
ಫೆಬ್ರವರಿ 9 ಮೇಲಂತಬೆಟ್ಟು ಬೈದರ್ಕಳ, ಪಂಜ ಗರಡಿ ನೇಮ, ಆಲಂಗಾರು ಗರಡಿ ನೇಮ
ಫೆಬ್ರವರಿ 10 ವಾಲ್ಪಾಡಿ ಗರಡಿ ಜಾತ್ರೆ
ಫೆಬ್ರವರಿ 13 ಶಿರ್ಲಾಲು ಗರಡಿ ನೇಮ
ಫೆಬ್ರವರಿ 23 ತೋನ್ಸೆ ಗರಡಿ ನೇಮ
ಫೆಬ್ರವರಿ 26 ನಡ್ಯೋಡಿ ಗರಡಿ ನೇಮ
ಮಾರ್ಚ್ 10 ನೀರ ಮಜಲು, ಬೊಮ್ಮರೊಟ್ಟು, ದೈಲಬೆಟ್ಟು, ಕೈಪಂಗ ಮತ್ತು ಪಾಪೆ ಮಜಲಿನಲ್ಲಿ ಗರಡಿ ನೇಮ
ಮಾರ್ಚ್ 11 ಉಳಿಯ ಅರಸು ಉಳ್ಳಾಲ್ತಿ ಗರಡಿ ನೇಮ
ಮಾರ್ಚ್ 15 ಮಾರ್ನಾಡು ಗರಡಿ ನೇಮ
ಮಾರ್ಚ್ 24 ಬಡಕೋಡಿ ನೇರಳಗುಡ್ಡೆ ಗರಡಿ ನೇಮ
ಎಪ್ರಿಲ್ 4 ಬನ್ನಾಡಿ ಗರಡಿ
ಎಪ್ರಿಲ್ 13 ಪೊನ್ನೊಟ್ಟು ಗರಡಿ ಕೋಲ
ಎಪ್ರಿಲ್ 14 ರೆಂಜಲಾಡಿ ಗರಡಿ ನೇಮ
ಎಪ್ರಿಲ್ 16 ಅಂಡಾರು ಗರಡಿ ನೇಮ
ಕಂಬಳಗಳು
ಜನವರಿ 24 ನಂದಿಕೂರು ಕೋಟಿ ಚೆನ್ನಯ ಕಂಬಳ
ಜನವರಿ 31 ಐಕಳ ಬಾವ ಕಾಂತಾಬಾರೆ ಬೂದಬಾರೆ ಕಂಬಳ
ಫೆಬ್ರವರಿ 8 ವೇಣೂರು ಪೆರ್ಮುದೆ ಸೂರ್ಯ ಚಂದ್ರ ಕಂಬಳ
ಫೆಬ್ರವರಿ 14 ಕಾವಳಕಟ್ಟೆ ಮೂಡೂರು ಪಡೂರು ಕಂಬಳ
ಫೆಬ್ರವರಿ 21 ಪಜೀರು ಕೇದಗೆಬೈಲು ಲವ ಕುಶ ಕಂಬಳ
ಫೆಬ್ರವರಿ 28 ಈದು ಜಯ ವಿಜಯ ಕಂಬಳ
ಮಾರ್ಚ್ 8 ಪುತ್ತೂರು ಕೋಟಿ ಚೆನ್ನಯ ಕಂಬಳ
ಮಾರ್ಚ್ 15 ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ
ಉಳಿದಂತೆ...
ಮಾರ್ಚ್ 21 ಅಲೆತ್ತೂರು ಪಂಜಿರ್ಲಿ ನೇಮ
ಮಾರ್ಚ್ 27 ಮಲಾರು ಮಲರಾಯ ಕೊಡಿ
ಎಪ್ರಿಲ್ 8 ಬಪ್ಪನಾಡು ಕೊಡಿ
ಎಪ್ರಿಲ್ 15 ಧರ್ಮಸ್ಥಳ ಅಣ್ಣಪ್ಪ ದೈವಗಳ ನೇಮ
ಎಪ್ರಿಲ್ 17 ಪುತ್ತೂರು ಮಹಾಲಿಂಗೇಶ್ವರ ಕಡೇಬಂಡಿ
ಎಪ್ರಿಲ್ 29 ಬಾಯಾರು ಕಡೇ ಬಂಡಿ

Saturday, January 17, 2009

ಕೊನೆಯ ಆ ದಿವ್ಯ ಕ್ಷಣಗಳು

ನಗರದ ಕೊನೆಯೆನ್ನಬಹುದಾದ ಸ್ಥಳ. ಈ ನಗರದಿಂದ ಇನ್ನೊಂದು ನಗರಕ್ಕೆ ಹೋಗುವ ಮುಖ್ಯರಸ್ತೆಯ ಮೇಲಿರುವ ಕೊನೆಯೆದೆಂಬುದಾದ ಕಟ್ಟಡ. ಅದೊಂದು ಪಂಚತಾರಾ ಅಲ್ಲವಾದರೂ ದೊಡ್ಡ ಮಟ್ಟಿನ ಆಸ್ಪತ್ರೆ. ರಾತ್ರಿಯ ಎರಡು ಗಂಟೆಯಿದ್ದಿರಬಹುದು. ಎಲ್ಲವೂ ಮೌನವಾಗಿದೆ. ಕಟ್ಟಡದ ಐದನೆ ಮಹಡಿಯ ಹವಾನಿಯಂತ್ರಿತ ಕೊಠಡಿಯಲ್ಲಿದ್ದರೂ ಹೊರಗಡೆ ರಾತ್ರಿ ಪಾಳಿಯ ಗಾರ್ಡ್ ರಸ್ತೆಯಂಚಿಗೆ ತನ್ನ ದೊಣ್ಣೆಯಿಂದ ಬಡಿಯುತ್ತಿರುವ ಟಡ್ ಟಡ್ ಸದ್ದು ಗೋಡೆ ಮೇಲಿದ್ದ ಗಡಿಯಾರದ ಸೆಕೆಂಡು ಮುಳ್ಳಿನ ಚಲನೆಯ ಸದ್ದನ್ನು ಹಿಂಬಾಲಿಸುತ್ತಿದ್ದಂತೆ ಅನಿಸುತ್ತಿತ್ತು. ರಾತ್ರಿಯ ಆ ನೀರವತೆ ಎಲ್ಲವನ್ನೂ ಬಿಟ್ಟ ಕಣ್ಣುಗಳಿಂದ ನೋಡುತ್ತಿತ್ತು.
ನರ್ಸುಗಳು, ಡಾಕ್ಟರರು ಅವಸರದಲ್ಲಿದ್ದರು. ಬೆಚ್ಚನೆ ಹೊದ್ದು ಮಲಗಿದ್ದವನ ಮೇಲೆ ಬಂದು ಅದೇನೋ ಕೈ ಮೈಗೆ ಚುಚ್ಚಿದರು. ಹತ್ತಿರದ ಸಂಬಂಧಿಗಳು ಬಹಳ ಹತ್ತಿರವಿದ್ದರು. ಪ್ರೀತಿಸುತ್ತಿದ್ದವರ ಹತ್ತಿರ ಹತ್ತಿರ ಹೋದಂತೆ ಅನಿಸಿತು. ಅವರೊಡನೆಲ್ಲಾ ಅದೆಷ್ಟು ಆಡದ ಮಾತುಗಳೆಲ್ಲ ಕಡಲಿನ ತೆರೆಗಳಂತೆ ಅಪ್ಪಲಿಸುತ್ತಾ ಬಂದವು. ಮಾತುಗಳಲ್ಲಿ ಮಾರ್ದವತೆ ಇತ್ತು. ಆತ್ಮೀಯತೆ ಇತ್ತು. ಪ್ರೀತಿಯಿತ್ತು. ಅಪೂರ್ವವಾದ ಆನಂದವಿತ್ತು. ಹಿಡಿದ ಕೈಯಲ್ಲಿ ಬೆಚ್ಚನೆಯಿತ್ತು. ನೆನಪುಗಳ ಸಾಗರದಿಂದ ಹೊರಟ ಹನಿಗಳು ಕಣ್ಣಂಚಿನಲ್ಲಿ ತುಂಬಿ ಬಂದವು.ಅತೀ ಹತ್ತಿರವಿದ್ದವರಿಗೆ ಎಲ್ಲವನ್ನೂ ಹೇಳಿದಂತಹ ಅನನ್ಯ ಆನಂದವಿತ್ತು.ನಿನ್ನೆ, ಮೊನ್ನೆ, ಅದಕ್ಕಿಂತ ಮೊನ್ನೆ. ದಿನಗಳು ಹಿಂದೆ ಹಿಂದೆ ಹೋದಂತೆ ಅನಿಸಿತು. ಇಂದು ಎಲ್ಲಿದ್ದೆ ಎಂಬುದರ ಮೆಟ್ಟಿಲುಗಳು ಒಂದೊಂದೆ ಬರತೊಡಗಿದವು. ಬದುಕಿನಲ್ಲಿ ಅದೆಂದೋ ಒಮ್ಮೆ ಬಂದು ಹೋದವರು ಸುಳಿದಾಡಿದರು. ಬೆನ್ನಿನಿಂದ ಇರಿದವರು ನೆನಪಾದರು. ನಿರ್ಮಲ ಮುಗ್ದ ಮನಸಿನ ಪ್ರೀತಿಯನ್ನು ಧಾರೆಯೆರೆದವರು ನೆನಪಾದರು. ಎಲ್ಲವೂ ಕಣ್ಣಂಚಿನಲ್ಲಿ ಕಂಡವು. ನೀಲಾಕಾಶದಂತೆ. ದಡವಿಲ್ಲದ ಸಾಗರದಂತೆ. ಮುಗಿಲೆಡೆಯತ್ತ ಮುತ್ತಿಡುವ ಪರ್ವತ ಶಿಖರದಂತೆ ರಾಶಿ ರಾಶಿ ನೆನಪುಗಳು. ಎಲ್ಲವೂ ಮುಗಿಯುತ್ತಾ ಬಂದಂತೆ ಅನಿಸಿತು. ಅದು ಸಾಕು. ಇದು ಸಾಕು. ಎದೆಯೊಳಗಿಂದ ತೃಪ್ತತೆಯ ತೇಗುಬಂತು.ಮುಪ್ಪು ಮುಪ್ಪಾಗಿದ್ದ ಅಪ್ಪ ಅಮ್ಮ ಬಂದರು. ಹತ್ತಿರವೇ ಕುಳಿತರು. ತಲೆಮೇಲೆ ಕೈಯಾಡಿಸಿದರು. ಖಾಲಿಯಾಗಿದ್ದ ತಲೆಯ ಮೇಲೆ ದಟ್ಟ ಕೂದಲಿದ್ದವು. ತೆರೆಯಲಾಗದ ಕಣ್ಣು ತುಂಬಿ ಬಂತು. ಮುಖ ಅರಳಿತು. ಸುಕ್ಕುಗಟ್ಟಿದ ಮುಖದ ಚರ್ಮದಲ್ಲಿ ಗಡಸು ತುಂಬಿತು. ಎಬ್ಬಿಸಲಾಗದ ಕೈಕಾಲುಗಳು ಎದ್ದು ಓಡೋಣ ಎಂಬಷ್ಟು ಬಲಿಷ್ಟವಾದವು. ಬಳಿಯಲ್ಲಿದ್ದ ಅಮ್ಮ ಮುಪ್ಪಾಗಿದ್ದವಳು ಯೌವನದ ಹೆಂಗಸಾಗಿದ್ದಳು. ಅಮ್ಮ. ನೀನೊಬ್ಬಳೇ. ಅದೆಷ್ಟು ಸುಂದರಿ ನೀನು. ಎದೆಗೆ ಕೈಯಿಟ್ಟ ಅಮ್ಮ ಹಣೆಗೊಂದು ಮುತ್ತು ಕೊಟ್ಟಳು. ಆ ಮುತ್ತಿನ ಶಕ್ತಿ ಅದೇನು.ಅಮ್ಮನ ತೊಡೆಯ ಮೇಲೆ ಆಡುವ ಮಗು ಎನಿಸಿತು. ಹೌದು. ಅದೆಷ್ಟೋ ವರ್ಷಗಳಿಂದ ಬಿಟ್ಟು ಹೋದವರು ಹತ್ತಿರ ಹತ್ತಿರವಾದರು. ಮುದಿ ಮುದಿಯಾದವರು ಯುವಕರಾಗಿ ಬರುತ್ತಿದ್ದಾರೆ. ಎಲ್ಲರೂ ಹತ್ತಿರ ಹತ್ತಿರ ಬರುತ್ತಿದ್ದಾರೆ. ಕೈ ಹಿಡಿದು ಆಡಿಸುತ್ತಿದ್ದಾರೆ. ಕೈಗೆ ಸಿಕ್ಕ ಹೊಸ ಮಗುವನ್ನು ಮುದ್ದಿಸಲು ಎಲ್ಲರೂ ಕಾತುರರಾಗಿದ್ದಾರೆ. ಎಲ್ಲರನ್ನೂ ದೂರ ಕಳುಹಿಸಿದ ಅಮ್ಮ ಹತ್ತಿರ ಬರುತ್ತಾಳೆ. ಬಿಸಿ ನೀರಿನಿಂದ ಸ್ನಾನ ಮಾಡಿಸುತ್ತಾಳೆ. ಮನಸ್ಸು ಖಾಲಿ ಖಾಲಿ ಎನಿಸುತ್ತದೆ. ಶುಭ್ರವೆನಿಸುತ್ತದೆ. ಶಾಂತವೆನಿಸುತ್ತದೆ. ನಿರಾಳವೆನಿಸುತ್ತದೆ. ಹಗುರವೆನಿಸುತ್ತದೆ. ಅಮ್ಮನ ಬೆಚ್ಚನೆಯ ಮಮತೆಗೆ ಕಣ್ಣುಗಳು ತನ್ನಷ್ಟಕ್ಕೆ ಮುಚ್ಚಿಕೊಳ್ಳುತ್ತವೆ. ಚಿರಂತನ ನಿದ್ರೆಗೆ ಹಾತೊರೆಯುತ್ತದೆ. ದಿವ್ಯ ಆನಂದ. ಅದರ ಅನುಭವಕ್ಕೆ ಅಂತ್ಯವಿಲ್ಲ. ಕಾಲದ ಗಣನೆಯಿಲ್ಲ. ಚಿರಂತನ. ದಿವ್ಯ ಲೋಕದ ಚಿರನಿದ್ರೆಗೆ ಎಲ್ಲವೂ ಮುಗಿಯುತ್ತದೆ.

Thursday, January 1, 2009

ಹೊಸವರ್ಷದ ಶುಭಾಶಯಗಳು


ಒಲವಿನಿಂದ
ಬಾನಾಡಿ