Tuesday, December 30, 2008

ಮುಗಿಯಿತು ಎಂದೊಡನೆ ಆರಂಭವಾಗುವುದು

ಜನವರಿ ಒಂದರಂದು ಉತ್ತರ ಪ್ರದೇಶದ ರಾಮಪುರದಲ್ಲಿ ಸೆಂಟ್ರಲ್ ರಿಸರ್ವ್ ಪೋಲೀಸ್ ಫೋರ್ಸ್‌ನ ಕೇಂದ್ರಕ್ಕೆ ಭಯೋತ್ಪಾದಕರು ದಾಳಿಮಾಡಿ ಎಂಟು ಜನರ ಮಾರಣ ಹೋಮ ಮಾಡಿದರು. ಈ ಭಯೋತ್ಪಾದನೆ ೨೦೦೮ ರಲ್ಲಿ ಮೇ, ಜುಲೈ, ಸಪ್ಟಂಬರ್, ಅಕ್ಟೋಬರ್, ನವಂಬರ್ ತಿಂಗಳಲ್ಲಿ ಮುಂದುವರಿಯಿತು.
ಜೈಪುರದಲ್ಲಿ ೮೦, ಬೆಂಗಳೂರಿನಲ್ಲಿ ಒಂದು, ಅಹಮದಾಬಾದ್‌ನಲ್ಲಿ ೫೩, ದಿಲ್ಲಿಯಲ್ಲಿ ೨೬, ಗುವಾಹಟಿಯಲ್ಲಿ ೮೪ ಮತ್ತೆ ಮುಂಬಯಿಯಲ್ಲಿ ೧೮೪. ಇದು ಬಲಿಯಾದವರ ಸಂಖ್ಯೆ. ಇನ್ನೊಂದು ಜನವರಿ ಒಂದು ಬರಲು ಕೆಲವೇ ಘಂಟೆಗಳಿವೆ. ಅದರೊಳಗೆ ಇನ್ನೆಷ್ಟು ಬಲಿಯಾಗಬಹುದೆಂಬ ಆತಂಕದಲ್ಲಿಯೇ ಕುಟ್ಟುತ್ತಿದ್ದೇನೆ.
೨೦೦೮ ಆತಂಕದ ವರ್ಷವೇ ಎಂದು ಸಾಬೀತು ಪಡಿಸಿತು. ವರ್ಷದ ಆರಂಭದಲ್ಲಿ ೨೦೦೦೦ ತೋರಿಸುತ್ತಿದ್ದ ಮುಂಬಯಿ ಶೇರ್ ಮಾರುಕಟ್ಟೆಯ ಸೂಚ್ಯಂಕ ಇಂದು ಅದರ ನಾಲ್ಕನೇ ಒಂದರಷ್ಟು ಇಳಿದಿದೆ. ದುಮ್ಮಾನಗಳು ಬಹಳಷ್ಟು.
ಕೊನೆಯದೊಂದು ಆಶಾಕಿರಣ ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ವಿಜಯ.
ವರ್ಷದ ವಿಶ್ವ ಘಟನೆ: ಆಫ್ರಿಕಾ ಮೂಲದ ಕರಿಯ ಡೆಮಾಕ್ರೇಟ್ ಒಬಾಮಾ ಅಮೇರಿಕಾದ ಅಧ್ಯಕ್ಷನಾಗಿ ಆಯ್ಕೆ ಯಾಗಿದ್ದು.
ಇಂತಹ ಘಟನೆಗಳ ನಡುವೆಯೇ ಕರ್ನಾಟಕದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 'ಅಪರೇಶನ್ ಕಮಲ' ಎಂಬ ಹೊಸಪದ ಸೃಷ್ಟಿ ಆಯಿತು. ವರ್ಷಾಂತ್ಯದ ಉಪ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಸಮರ್ಥನೆ ಸಿಕ್ಕಿದೆ.
ಭಾರತ ಪಾಕಿಸ್ಥಾನದ ನಡುವೆ ಸಮರದ ನೆರಳು ಬೀಳುತ್ತಿದೆಯೇ? ಯುದ್ಧಕ್ಕೆ ಬಲಿಯಾಗುವಷ್ಟು ಎರಡೂ ದೇಶದ ರಾಜಕೀಯ ಮುತ್ಸದ್ಧಿಗಳು ಮೂರ್ಖರಲ್ಲದಿರಬಹುದು.
ಹೊಸವರ್ಷದಲ್ಲಿ ಭಾರತದಲ್ಲಿ ಹೊಸ ಸರಕಾರವನ್ನು ಚುನಾಯಿಸುವ ಅವಕಾಶ ಮತ್ತೊಮ್ಮೆ ಬರಲಿದೆ. ಆರ್ಥಿಕ ಬಿಕ್ಕಟ್ಟುಗಳು ದೂರವಾಗುವವೇ? ಭಯೋತ್ಪಾದನೆಯ ಆತಂಕ ಕಡಿಮೆಯಾಗುವುದೇ?
ಭರವಸೆಯಲ್ಲಿ ದಿನ ನೋಡುವುದೇ ಆಶಾವಾದಿಗಳ ಕರ್ತವ್ಯ.
ವರ್ಷವೊಂದು ಉರುಳಿದಾಗ ಮತ್ತೊಂದು ಅರಳುವುದು. ಗಿಡದಲ್ಲೊಂದು ಎಲೆ ಹಣ್ಣಾಗಿ ಉರುಳಿದಾಗಲೇ ಮತ್ತೊಂದು ಚಿಗುರುತ್ತದೆ. ಒಂದು ತಲೆಮಾರು ಅಳಿದಾಗಲೇ ಇನ್ನೊಂದು ತಲೆಮಾರು ಹುಟ್ಟುತ್ತದೆ. ಇದು ನಿತ್ಯಕ್ರಿಯೆ. ನಿಸರ್ಗ ಸಹಜ. ಇದೆಲ್ಲದರ ನಡುವೆ ಪ್ರಶ್ನೆಗಳು ಮೂಡುತ್ತವೆ.
ಕಾಲ ಎಂಬುದು ಆರಂಭವಾಗಿತ್ತೇ?
ವಿಶ್ವಕ್ಕೆ ಗಡಿಯಿದೆಯೇ?
ಕಾಲ ಎನ್ನುವುದು ಅತೀತವೇ?
ವಿಶ್ವವೆನ್ನುವುದು ಅನಂತವೇ?
ಹಾಗಾದರೆ ನಾನು ಎನ್ನುವುದು ಎಷ್ಟು ಚಿಕ್ಕ ಚುಕ್ಕೆ.
ಅನಂತವಾದ ವಿಶ್ವದಲ್ಲಿ ಹುಡುಕುವುದು ಹೇಗೆ? ಎಲ್ಲಿ?
ಹೊಸ ಕ್ಯಾಲೆಂಡರ್ ನೋಡುತ್ತಾ ಸೋಮವಾರ ಶುಕ್ರ, ಶನಿವಾರವಾಗಿದ್ದು ಗೊತ್ತಾಗದೇ ಕಳೆದ ಆ ಹಳೆಯ ವರ್ಷಗಳಿಗೆ ವಂದಿಸುವುದೇ?
ಅಥವಾ ಮುಂಬರುವ ದಿನಗಳು ಕೂಡಾ ಸೊಗಸಾಗುವವೆಂದೇ ತಿಳಿದು ವರ್ಷದ ಕೊನೆಗೆ ಉಳಿದುದೆಲ್ಲವನ್ನು ಸುರಿಯುವುದೇ?
ಬ್ಲಾಗು ನೋಡುವ ನಿಮಗೆಲ್ಲ ಹೊಸ ವರ್ಷ ಹೊಸತನ ತರಲಿ, ಉಲ್ಲಾಸದಾಯಕವಾಗಲಿ, ಸಂತೋಷ ತುಂಬಲಿ, ಸಿರಿ ಹರಿದು ಬರಲಿ.
ಬದುಕು ಬೆಳಕಾಗಲಿ.
ಹಾರೈಕೆಗಳು.

ಒಲವಿನಿಂದ
ಬಾನಾಡಿ

5 comments:

 1. ಬಾನಾಡಿ....

  ನಿಮ್ಮ ಮನಸ್ಸಿನ ತುಡಿತ ಚೆನ್ನಾಗಿ ಬಿಂಬಿಸಿದ್ದೀರಿ...


  ನಿಮಗೂ ಹೊಸ ವರುಷ..
  ಹೊಸ ಕನಸು.. ಹೊಸ ಆಸೆ...
  ಎಲ್ಲವೂ ನನಸಾಗಲಿ..

  ಶುಭ ಹಾರೈಸುವೆ...

  ReplyDelete
 2. ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಸಂತಸ, ನೆಮ್ಮದಿ, ಆರೋಗ್ಯಪೂರ್ಣ ಜೀವನ ನಿಮ್ಮದಾಗಲಿ.

  ReplyDelete
 3. ನಿಮಗೂ ಕೂಡಾ ನವ ವರ್ಷದ ಹಾರ್ದಿಕ ಶುಭಾಶಯಗಳು. ಮುಂದಿನ ವರುಷವಾದರೂ ದೇಶ ಭಯೋತ್ಪಾದಕರ ಧಾಳಿಗೆ ಆದಷ್ಟು ತುತ್ತಾಗದಿರಲೆಂದು ಮನಃಪೂರ್ವಕವಾಗಿ ಆಶಿಸುವೆ!

  ReplyDelete
 4. ಬಾನಾಡಿ,
  ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ.
  ಹೊಸ ವರ್ಷದ ಶುಭಾಷಯಗಳು.2009ರ ವರ್ಷ ನಿಮಗೆ ಹರ್ಷ ತರಲಿ.
  - ರಾಘವೇಂದ್ರ ಕೆಸವಿನಮನೆ.

  ReplyDelete
 5. ಬಾನಾಡಿ,
  ಹೊಸ ವರ್ಷದ ಶುಭಾಶಯಗಳು.
  ತೆರೆದ ಬಾನೆಲ್ಲ ನಿಮ್ಮ ಹಾರಾಟಕ್ಕೆ ಅನುವಾಗಲಿ!

  ReplyDelete