Wednesday, December 10, 2008

ಖಾಲಿ ಕೈಗಳಿಗೆ ಮೆಹಂದಿ ಯಾವಾಗಾ?

ಇಸ್ಸಾರ್ ಮತ್ತು ಅವನ ಕುಟುಂಬದವರು ನಮಗೆ ಪರಿಚಿತರಷ್ಟೇ. ಸ್ನೇಹಿತರೆನ್ನುವಷ್ಟು ಆತ್ಮೀಯರಲ್ಲ. ಸ್ನೇಹಿತರಲ್ಲ ಎನ್ನುವಷ್ಟೂ ದೂರದವರಲ್ಲ. ಹತ್ತಿರದಿಂದ ಕಂಡಾಗ ಮಾತಾಡುವ, ದೂರದಿಂದ ನೋಡಿದಾಗ ಕೈಬೀಸುವಷ್ಟು ನಮ್ಮೊಳಗಿನ ಸಂಬಂಧ. ಈದ್ ಮಿಲಾದ್ ದಿನ ಎಸ್‌ಎಂಎಸ್ ಕಳಿಸುವುದೋ, ಅಥವಾ ಕುರಾನ್‌ನ ಕೆಲವು ವೈಚಾರಿಕ ಸಂಗತಿಗಳನ್ನು ಸ್ಪಷ್ಟಪಡಿಸಲು ನಾನವನಿಗೆ ಫೋನ್ ಮಾಡುವುದೋ ಬಿಟ್ಟರೆ ನಮ್ಮೊಳಗೆ ಅಷ್ಟೇನು ನಂಟಿಲ್ಲ. ಆತನನ್ನು ದೂರದಿಂದ ಕಂಡ ನನಗೆ ಆತನೊಬ್ಬ ನಿರುಪದ್ರವಿ ಆದರೆ ನಿಷ್ಟ ಮುಸ್ಲಿಮನಾಗಿದ್ದ. ಸಮಯಕ್ಕೆ ಸರಿಯಾದ ಪ್ರಾರ್ಥನೆ, ರಂಜಾನ್ ಉಪವಾಸ, ಕುರಾನ್ ಪಠನ, ಅಸ್ಸಲಾಮ್ ಅಲೈಕುಂ ಎಂದು ಹತ್ತಿರದವರನ್ನು ವಂದಿಸುವುದು ಇತ್ಯಾದಿ ಮಾಡುತ್ತಿದ್ದ. ಕಳೆದ ವರ್ಷ ಈದ್ ಮಿಲಾದ್ ದಿನ ಸಿಕ್ಕವನೆ ನನ್ನನ್ನು ಎದೆಗಪ್ಪಿ ಈದ್ ಮುಬಾರಕ್ ಹೇಳಿದ್ದ. ನಾನು ಅವನಿಗೆ ಹಬ್ಬದ ಶುಭಾಶಯ ಹೇಳಿದ್ದೆ. ಮುಂದಿನ ಈದ್‌ಗೆ ನೀನು ನಮಗೆಲ್ಲ ಬಿರಿಯಾನಿ ತಿನಿಸಬೇಕೆಂದು ಹೇಳಿದ್ದೆ. ಒಪ್ಪಿದ್ದ.

ಇಸ್ಸಾರ್ ನಿನ್ನೆ ಮತ್ತೆ ಸಿಕ್ಕಿದ. ಜತೆಗೆ ಅವನ ಹೆಂಡತಿ ಮತ್ತು ಮಗಳು ಇದ್ದರು. ಕಿರಾಣಿ ಅಂಗಡಿಯ ಹತ್ತಿರ ಆತ ರಸ್ತೆ ದಾಟಿ ನನ್ನ ಕಡೆ ಬರುತ್ತಿದ್ದ. ನಾನು ಆತನ ಕಡೆ ಹೋಗುವವನಾಗಿದ್ದೆ. ನಾನು ದಾಟದೆ ಅಲ್ಲೇ ನಿಂತೆ. ಆತನನ್ನು ಮಾತಾಡಿಸೋಣ. ಬಕರಿ ಈದ್ ನಲ್ಲಿ ಎಷ್ಟು ಬಕರಿಗಳನ್ನು ತಿಂದ ಎಂದು ಕೇಳಲು. ಆಗ ನನಗೆ ಕಳೆದ ಈದ್ ನಲ್ಲಿ ಕೇಳಿದ ಬಿರಿಯಾನಿಯ ನೆನಪಾಗಿರಲಿಲ್ಲ. ಹೇಗಿದ್ದೀರಿ? ಅಂದ ಹಾಗೆ ಈದ್ ಮುಬಾರಕ್ ಹೊ ಎಂದು ಆತನ ಎದೆಗಪ್ಪಲು ಬಂದೆ. ಹೌದು ಎಂದಷ್ಟೆ ನುಡಿದ ಆತನ ಕೈ ನನ್ನ ಕೈಯ ಬೆರಳುಗಳನ್ನು ಅಮುಕುತ್ತಿದ್ದವು. ಆತನ ದೃಷ್ಟಿ ಎಲ್ಲೋ ಇತ್ತು. ಮನಸ್ಸಿಗೆ ತುಂಬಾ ನೋವಾದಂತೆ ಮುಖ ಹೇಳುತ್ತಿತ್ತು. ಇಸ್ಸಾರ್ ಎಲ್ಲಾ ಆರಾಮ ತಾನೆ ಎಂದೆ. ಹೌದು ಎಂದಷ್ಟೆ ಹೇಳಿದ. ಆತನ ಕೈ ನನ್ನ ಕೈಯನ್ನು ಬಿಟ್ಟಿರಲಿಲ್ಲ. ಆತನ ಹೆಂಡತಿ ಮತ್ತು ಮಗಳು ಹತ್ತಿರ ಬಂದು ನಿಂತರು. ಮತ್ತೇನು ವಿಶೇಷ? ಎಂದೆ. ಆತ ಈ ಜಗತ್ತಿನಲ್ಲಿ ಏನೆಲ್ಲಾ ಆಗುತ್ತದೆ ನೋಡಿ ಎಂದು ನಿಟ್ಟುಸಿರು ಬಿಟ್ಟ. ಏನಾಯಿತು ಎಂದೆ.

ಮುಂಬಯಿ ದುರಂತದ ಬಗ್ಗೆ ಇಸ್ಸಾರ್ ದುಃಖಿತನಾಗಿದ್ದ. ಬಹಳಷ್ಟು ಬೇಸರ ಹೊಂದಿದ್ದ. ವಿಟಿ ಯಲ್ಲಾಗಲಿ ತಾಜ್ ನಲ್ಲಾಗಲಿ ಭಯೋತ್ಪಾದಕರು ದಾಳಿ ಮಾಡಿದಾಗ ಅಲ್ಲಿ ಎಷ್ಟು ಮುಸ್ಲಿಮರಿದ್ದಾರೆ, ಎಷ್ಟು ಕ್ರಿಶ್ಚಿಯನರಿದ್ದಾರೆ, ಎಷ್ಟು ಹಿಂದೂಗಳಿದ್ದಾರೆ ಅಥವಾ ಎಷ್ಟು ಯಹೂದಿಯರಿದ್ದಾರೆ ಎಂದು ಯಾರು ಲೆಕ್ಕ ಹಿಡಿದಿಲ್ಲ. ಅಥವಾ ಭಯೋತ್ಪಾದಕರ ಸೆರೆಯಲ್ಲಿ ಸಿಕ್ಕವರನ್ನು ಬಿಡಿಸುವಾಗ ಯಾರು ಯಾವ ಧರ್ಮದವರು ಎಷ್ಟಿದ್ದಾರೆ ಎಂದು ಲೆಕ್ಕ ನೋಡಿಲ್ಲ.

ದೇವರ ಆದೇಶದಂತೆ ಪ್ರವಾದಿ ಅಬ್ರಹಾಮನು ತನ್ನ ಮಗ ಇಸ್ಮಾಯಿಲ್ ನನ್ನು ಬಲಿಕೊಟ್ಟ ದಿನವನ್ನು ಮಸ್ಲಿಮರು ಆಡು, ಕುರಿ ಯಾ ಹೋರಿಯನ್ನು ಬಲಿಕೊಟ್ಟು ಆಚರಿಸುವ ಹಬ್ಬವೇ ಬಕರಿ ಈದ್. ಈ ಬಾರಿ ಮುಸ್ಲಿಮರು ಬಕರಿ ಈದ್ ದಿನ ಹೋರಿಯನ್ನು ಬಲಿಕೊಡಬಾರದೆಂದು ಭಾರತದ ಮುಸ್ಲಿಮ್ ನಾಯಕರು ಎಲ್ಲರಿಗೂ ಕರೆ ನೀಡಿದ್ದರು. ಅಲ್ಲದೆ ಮುಂಬಯಿಯಲ್ಲಿ ಬಲಿಯಾದ ಭಯೋತ್ಪಾದಕರ ದಫನಕ್ಕೆ ಅಲ್ಲಿನ ಯಾವುದೇ ಮುಸ್ಲಿಮ್ ಸ್ಮಶಾನಗಳು ಅವಕಾಶ ಮಾಡಿಲ್ಲ. ಇವೆಲ್ಲ ಭಾರತದಂತಹ ದೇಶದಲ್ಲಿ ವಿಶೇಷ ಮಹತ್ವ ಪಡೆಯಬೇಕಾದ ವಿಷಯಗಳಲ್ಲ. ಆದರೆ ಮುಸಲ್ಮಾನರ ಬಗ್ಗೆ ಅತಿ ಸಂದೇಹ ಪಡುವಾಗ ಇವೆಲ್ಲ ಸಣ್ಣ ವಿಷಯಗಳಾಗುವುದಿಲ್ಲ. ಮುಸ್ಲಿಮ್ ವರ್ಗದ ಕೆಲವೊಂದು ಗುಂಪು ದಾರಿ ತಪ್ಪಿ ಹೋಗಿದೆ. ಅದರಲ್ಲಿ ಸಂದೇಹವಿಲ್ಲ. ಅವರನ್ನು ಸರಿದಾರಿಗೆ ತರಲು ಮುಸ್ಲಿಂ ಸಮಾಜ ಅಥವಾ ಭಾರತದ ಸಾಮಾಜಿಕ ವ್ಯವಸ್ಥೆಯಾಗಲಿ, ರಾಜಕೀಯ ವ್ಯವಸ್ಥೆಯಾಗಲಿ ಯಾವುದೇ ಕೆಲಸ ಮಾಡುತ್ತಿಲ್ಲ. ಅದಕ್ಕಾಗಿ ಸಮಗ್ರ ಮುಸ್ಲಿಂ ಸಮಾಜವೇ ಉಳಿದವರ ಸಿಟ್ಟಿಗೆ ಕಾರಣವಾಗಿದೆ. ಅವರನ್ನು ಪಾಕಿಸ್ಥಾನಿಗಳೆಂದು ಕರೆಯಲಾಗುತ್ತದೆ. ಭಾರತದ ಮುಖ್ಯವಾಹಿನಿಯಿಂದ ಹೊರಹೋಗುತ್ತಿದ್ದ ಮುಸ್ಲಿಂ ಸಮಾಜ ಮುಂಬಯಿ ದುರಂತದ ನಂತರ ಒಂದಾಗುವುದೇ? ಚಿಕ್ಕ ಪುಟ್ಟ ವೈಯಕ್ತಿಕ ಗಲಭೆಗಳಿಗೆ ಕೋಮು ಗಲಭೆಯ ಬಣ್ಣ ಲೇಪಿಸಲಾಗುವುದೇ? ಕಾದು ನೋಡಬೇಕು.

ನಾವು ಬೀಳ್ಕೊಡುವಾಗ ಇಸ್ಸಾರ್ ನ ಮಗಳು ಟಾಟಾ ಮಾಡಿದಳು. ಅವಳೇನು ಹೊಸ ಬಟ್ಟೆ ಹಾಕಿರಲಿಲ್ಲ. ಬಕ್ರೀದ್‌ಗೆ ಅವಳ ಕೈಯಲ್ಲಿ ಮದುರಂಗಿಯ ಬಣ್ಣವಿರಲಿಲ್ಲ. ಹುಡುಗಿಯ ಖಾಲಿ ಖಾಲಿ ಕೈ ನನ್ನನ್ನು ಬಹಳ ದೂರ ಕೊಂಡೊಯ್ಯಿತು.

3 comments:

 1. ಬಾನಾಡಿ....
  ಲೇಖನ ತುಂಬಾ ಚೆನ್ನಾಗಿದೆ...
  ಹೀಗೂ ಇರಬಹುದೆ..ಎಂದು ವಿಚಾರಮಾಡಲು.....
  ಸ್ವಲ್ಪ ಸಮಯ ಬೇಕಾಯಿತು....
  ಮುಂಬೈ ಘಟನೆಯ ನಂತರ ಇಂಥಹುದನ್ನು ಒಪ್ಪಲು..ಇನ್ನೂ ಸಮಯ ಬೇಕಾಗಬಹುದು....
  ಇದು ನನಗೆ ಅನ್ನಿಸಿದ್ದು...
  ಕ್ಷಮಿಸಿ...

  ಇಸ್ಸಾರನ ಬಗೆಗೆ ನನ್ನ ಅನುಕಂಪವಿದೆ....

  ReplyDelete
 2. ವಿಟಿಯಲ್ಲಾಗಲಿ ತಾಜ್ನಲ್ಲಾಗಲಿ ಭಯೋತ್ಪಾದಕರು ದಾಳಿ ಮಾಡಿದಾಗ ಅಲ್ಲಿ ಎಷ್ಟು ಮುಸ್ಲಿಮರಿದ್ದಾರೆ, ಎಷ್ಟು ಕ್ರಿಶ್ಚಿಯನರಿದ್ದಾರೆ, ಎಷ್ಟು ಹಿಂದೂಗಳಿದ್ದಾರೆ ಅಥವಾ ಎಷ್ಟು ಯಹೂದಿಯರಿದ್ದಾರೆ ಎಂದು ಯಾರು ಲೆಕ್ಕ ಹಿಡಿದಿಲ್ಲ. ಅಥವಾ ಭಯೋತ್ಪಾದಕರ ಸೆರೆಯಲ್ಲಿ ಸಿಕ್ಕವರನ್ನು ಬಿಡಿಸುವಾಗ ಯಾರು ಯಾವ ಧರ್ಮದವರು ಎಷ್ಟಿದ್ದಾರೆ ಎಂದು ಲೆಕ್ಕ ನೋಡಿಲ್ಲ.... ಲೋಕಸಭೆ ಅಧಿವೇಶನದಲ್ಲಿ ಮುಂಬೈ ಭಯೋತ್ಪಾದನೆ ಬಗ್ಗೆ ರಾಹುಲ್ ಗಾಂಧಿ ಕೂಡ ಇದನ್ನೇ ಹೇಳಿದ್ದರು.

  ಬರಹ ಚೆನ್ನಾಗಿದೆ... ಇಸ್ಸಾರ್ ಹಾಗೂ ಆತನ ಕುಟುಂಬ ಮಾತ್ರವಲ್ಲ, ಅದೆಷ್ಟೋ ಅಮಾಯಕ ಮುಸ್ಲಿಂ ಕುಟುಂಬಗಳು ಇಂದು ಕೆಂಗಣ್ಣಿಗೆ ಗುರಿಯಾಗಿವೆ.

  ಆದರೆ ರಕ್ತಬೀಜಾಸುರರು ಎಲ್ಲಾ ಕೋಮಿನಲ್ಲೂ ಇದ್ದಾರೆ. ಮುಸ್ಲಿಮರತ್ತ ಮಾತ್ರ ಕೈತೋರುವುದು ಸಲ್ಲದು.

  ReplyDelete
 3. ನೀವು ಹೇಳಿದಂತೆ ಭಯೋತ್ಪಾದನೆ ಅನ್ನುವುದು ಯಾವುದೋ ಒಂದು ಸಮಾಜದ ಕುಕೃತ್ಯ ಅಲ್ಲ,ಭಯೋತ್ಪಾದಕರೆಲ್ಲರೂ ಬಹುಪಾಲು ಮುಸ್ಲಿಂಮರೇ ಆಗಿದ್ದರೂ, ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ. ಉಗ್ರರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು. ಮುಂಬೈ ಘಟನೆಯ ಕಣ್ಣಿರು ಇನ್ನೂ ಎಲ್ಲೂ ಆರಿಲ್ಲ
  -ತುಂಬು ಪ್ರೀತಿ,
  ಚಿತ್ರಾ

  ReplyDelete