Tuesday, December 9, 2008

ಹೊಸವರ್ಷದ ನಿರೀಕ್ಷೆಯಲ್ಲಿ ....


ಡಿಸೆಂಬರ ೩೧ರ ರಾತ್ರಿ ಮಂಗಳೂರಿನ ಓಣಿಗಳಲ್ಲಿ ಮಕ್ಕಳು ಯುವಕರು ಎಲ್ಲಾ ಸೇರಿ 'ಅಜ್ಜೆರ್ ಸೈತೆರ್... ಅಜ್ಜೆರ್ ಸೈತೆರ್ ...' ಎಂದು ಖುಷಿಯಿಂದ ಕುಣಿಯುತ್ತಾ ಹುಲ್ಲಿನಿಂದ ಮಾಡಿದ ವ್ಯಕ್ತಿಯೊಬ್ಬನಿಗೆ ಹಳೆಯ ಅಂಗಿಯೊಂದನ್ನು ಹಾಕಿ ಅವನನ್ನು ಎತ್ತಿಕೊಂಡು ಹೋಗುತ್ತಿದ್ದೆವು. ಓಣಿಯಲ್ಲಿದ್ದ ಮನೆಯವರೆಲ್ಲರೂ ಹೊರಬಂದು ಒಮ್ಮೆ ನೋಡಿದಾಗ ಅಕ್ಕಾ, ಅಣ್ಣಾ, ಅಜ್ಜ ಸತ್ತರು ಅಜ್ಜ ಸತ್ತರು ಎಂದು ಕುಣಿದಾಡುತ್ತಿದ್ದೆವು. ಅಜ್ಜನನ್ನು ಓಣಿಯ ಒಂದು ಕೊನೆಗೆ ಕೊಂಡುಹೋಗಿ ಅಲ್ಲಿ ಅವನನ್ನು ಸುಟ್ಟು ಕುಣಿಯುತ್ತಿದ್ದೆವು. ಡಿಸೆಂಬರ್‌ನ ಕಚಗುಳಿಯಿಡುವ ಚಳಿಗೆ ಮೈ ಬೆಚ್ಚಾಗುತ್ತಿತ್ತು. ನಂತರ ಎಲ್ಲರಿಗೂ ಹೊಸ ವರ್ಷದ ಶುಭಾಶಯ ಹೇಳಿ ನಮ್ಮ ನಮ್ಮ ಮನೆಗೆ ವಾಪಾಸಾಗುತ್ತಿದ್ದೆವು. ಅಜ್ಜ ಅಂದರೆ ನಮಗೆಲ್ಲ ಹಳೆಯವರ್ಷ. ಆತ ಸತ್ತ. ಅಂದರೆ ಈ ವರ್ಷ ಮುಗಿಯಿತು. ಇನ್ನು ಹೊಸವರ್ಷ. ಹಳೆಯದೆಲ್ಲವೂ ಬೇಡಎನ್ನುವ ವಿಚಾರದಲ್ಲಿ ಅಜ್ಜನನ್ನು ಸುಡುತ್ತಿದ್ದೆವು. ಈ ಹೊಸವರ್ಷಾಚರಣೆಯ ಪದ್ಧತಿ ಈಗೀಗ ಕಡಿಮೆಯಾಗಿದೆಯಂತೆ. ಬೆಂಗಳೂರಿನಿಂದ ರಾಜೇಶ ಈ ಸಲ ಹೊಸವರ್ಷಕ್ಕೆ ಮಂಗಳೂರಿಗೆ ಹೋಗ್ತಾನೆ ಅಂದಾಗ ಅವನಿಗೆ ಕೇಳಿದೆ ಅಜ್ಜನನ್ನು ಸುಡಲೋ ಎಂದು. ಅಜ್ಜನನ್ನು ಸುಡುವ ಕ್ರಮ ಈಗ ಎಲ್ಲಿ ಎಂದು ಆತನೂ ಸ್ವಲ್ಪ ದುಃಖಗೊಂಡ. ಡಿಸೆಂಬರ್ ತಿಂಗಳು ನಮಗೆ ಬಹಳ ಖುಷಿಯ ತಿಂಗಳು. ನಮ್ಮ ಕ್ರಿಶ್ಚಿಯನ್ ಗೆಳೆಯರು, ಗೆಳತಿಯರು ಕ್ರಿಸ್‌ಮಸ್ ಸಂಭ್ರಮದಲ್ಲಿರುವಾಗ ನಮಗೂ ಅದರ ಸಂಭ್ರಮ. ಮನೆಯಲ್ಲಿ ತಂದಿಡುವ ಕ್ರಿಸ್‌ಮಸ್ ಮರ, ಅದರ ಸುತ್ತ ಸಣ್ಣ ಸಣ್ಣ ಬಲ್ಬ್‌ಗಳು. ಎಲ್ಲಕ್ಕಿಂತ ಹೆಚ್ಚಾಗಿ ಕೇಕ್‌ಗಳು. ಮಂಗಳೂರಿನ ಕೆಲವೊಂದು ಬೇಕರಿಗಳು ವಿವಿಧ ಆಕಾರದ, ವಿವಿಧ ಡಿಸೈನ್‌ನ ಕೇಕ್‌ಗಳನ್ನು ಮಾಡಿ ಪ್ರದರ್ಶಿಸುತ್ತಿದ್ದರು. ಉದಯವಾಣಿಯಲ್ಲಿ ಅದರ ಫೋಟೋ ಕೂಡ ಬರುತ್ತಿತ್ತು.
ಕೆಲವಾರು ವರ್ಷಗಳಿಂದ ನಮ್ಮ ಕಾಲೋನಿಗಳಲ್ಲಿ ನಡೆಯುವ ಹೊಸವರ್ಷದ ಗಾಲಾಗಳಲ್ಲಿ ಕಂಠಪೂರ್ತಿ ಕುಡಿದು ಮರುದಿನ ತಲೆನೋವಿನ ಹೊಸವರ್ಷದ ಹೊಸದಿನವನ್ನು ಆರಂಭಿಸುತ್ತಿದ್ದೇವೆ. ಕಳೆದ ವರ್ಷ ಟಿವಿ ಮುಂದೆ ಕುಳಿತು ಹೊಸವರ್ಷವನ್ನು ಆಚರಿಸಿದ ನಾವು ಈ ವರ್ಷ ಏನಾದರೂ ಹೊಸದು ಮಾಡಬೇಕು ಎಂದುಕೊಂಡಿದ್ದೆವು. ಮೂರ್ನಾಲ್ಕು ತಿಂಗಳ ಮೊದಲೇ ನಮ್ಮ ಸ್ನೇಹಿತ ವಿಕಾಸ್ ಮುಂಬಯಿಗೆ ಹೋಗೋಣ ಎಂದಿದ್ದ. ಅವನ ಹೆಂಡತಿ ಜೆಟ್ ಏರ್‌ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಟಿಕೇಟು ವ್ಯವಸ್ಥೆ ಆತನೇ ಮಾಡ್ತೇನೆ ಎಂದಿದ್ದ. ಗ್ಲೋಬಲ್ ಕಾನ್‌ಫರೆನ್ಸ್ ಒಂದು ಜನವರಿ ೧೦ರಿಂದ ಆರಂಭಮಾಡಬೇಕಾಗಿದ್ದುದರಿಂದ ನಾನು ಅದರ ಕೆಲಸದಲ್ಲಿ ಬಿಝಿ ಇರುವೆನೆಂದರೂ ಆತ ಬಹಳಷ್ಟು ಹುರಿದುಂಬಿಸಿದ್ದಾನೆ. ಜೆ.ಡಬ್ಲ್ಯೂ. ಮ್ಯಾರೆಟ್‌ನಲ್ಲಿ ಕತ್ರಿನಾ ಕೈಫ್ ಡಾನ್ಸ್ ಫಿಕ್ಸ್ ಮಾಡಿದ್ದಾರೆ ಮುಂತಾದ ವಿವರ ನೀಡಿ ಜೀವಮಾನದಲ್ಲಿ ಒಮ್ಮೆಯಾದರೂ ಬಾಲಿವುಡ್‌ನ ಒಂದು ಲೈವ್ ಕಾರ್ಯಕ್ರಮ ನೋಡಲು ನನ್ನನ್ನು ತಯಾರಿಗೊಳಿಸುತ್ತಿದ್ದ ನಮ್ಮ ವಿಕಾಸ್. ಈ ವರ್ಷ ಬೋನಸ್ ಹಣ ಬಂದಾಗ ಅದನ್ನು ಖರ್ಚುಮಾಡದೇ ಹೊಸವರ್ಷದ ಸಿಲಬ್ರೇಶನ್‌ಗೆ ಉಳಿಸು ಎಂದು ಅವನು ನನಗೆ ಖರ್ಚಿನ ಕುರಿತು ತಲೆಕೆಡಿಸದಂತಹ ಸಲಹೆಯನ್ನು ಕೊಟ್ಟಿದ್ದ. ಲೈವ್ ಕಾರ್ಯಕ್ರಮಗಳಿಗಿಂತ ಅವನ್ನು ಟಿವಿಯಲ್ಲಿ ನೋಡುವುದು ನಮಗೆ ಸಾಕು ಎಂಬುದು ನನ್ನ ಅಭಿಮತವಾಗಿತ್ತು.
ನಿರಂತರ ಅರುವತ್ತು ಗಂಟೆಗಳ ಲೈವ್ ಭಯೋತ್ಪಾದಕ ಕೃತ್ಯದ ಬಳಿಕ ನಮ್ಮ ಮುಂಬಯಿ ಕಾರ್ಯಕ್ರಮ ರದ್ದಾಗಿದೆ. ಕತ್ರಿನಾ ಕೈಫ್ ಕೂಡಾ ತನ್ನ ಕಾರ್ಯಕ್ರಮ ರದ್ದುಗೊಳಿಸಿದ್ದಾಳೆ ಎಂದು ತಿಳಿದುಬಂದಿದೆ. ಮುಂಬಯಿಯನ್ನು ದ್ವೇಷಿಸುವವರು ಭಯೋತ್ಪಾದಕರಲ್ಲದೇ ಇನ್ಯಾರು ಅದನ್ನು ದ್ವೇಷಿಸಲಾರರು. ಕಳೆದ ವರ್ಷ ಗಣೇಶ ವಿಸರ್ಜನೆಯಂದು ನಾನು ಸಂಜೆ ಹೊತ್ತಿಗೆ ಮುಂಬಯಿ ತಲುಪಿ ಏರ್‌ಪೋರ್ಟ್‌ನಿಂದ ನಗರವಿಡೀ ತುಂಬಿದ್ದ ಗಣೇಶ ಮೆರವಣಿಗೆಯ ನಡುವೆ ರಿಕ್ಷಾವೊಂದರಲ್ಲಿ ನಮ್ಮ ಹೋಟೆಲ್ ತಲುಪಿದೆ. ಮೆರವಣಿಗೆಯ ಮಧ್ಯದಲ್ಲಿ ಹೋಗಲು ಟ್ಯಾಕ್ಸಿಗಿಂತ ರಿಕ್ಷಾವೇ ಮೇಲು ಎಂದು ಹೇಳಿದ ನಿತಿನ್ ಮರುದಿನ ವಂದಿಸಿದೆ. ಆ ಮೆರವಣಿಗೆಯ ಸಂಬ್ರಮ ಉತ್ಸಾಹ ಕಂಡು ನಾನು ನಮ್ಮ ಊರಿನ ಜಾತ್ರೆಗಳ ನೆನಪು ಮಾಡಿಕೊಂಡೆ. ಎಲೆ ಮುಂಬಯಿ ನಾವು ನಿನ್ನನ್ನು ಪ್ರೀತಿಸುತ್ತಿದ್ದೆವೆ. ಬಹಳಷ್ಟು. ಗೇಟ್‌ವೇ ಎದುರು ನಿಂತು ಆ ತಾಜಮಹಲು ಹೋಟೆಲಿನ ಹಿನ್ನೆಲೆಯಲ್ಲಿ ತೆಗೆದ ಚಿತ್ರಗಳನ್ನು ಮತ್ತೆ ಮತ್ತೆ ನೋಡುತ್ತಿದ್ದೇನೆ.

ಸಿಡಿಲು

ಒಂದು ಹಳತ್ತಾಗುತ್ತಿರುವ ಜೋಕು: ಹಿಂದಿಯಲ್ಲಿ ಮಾತಾಡುವಾಗ ಮುಂಬಯಿಯನ್ನು ಸ್ತ್ರೀಲಿಂಗವಾಗಿಯೂ ದೆಹಲಿಯನ್ನು ಪುಲ್ಲಿಂಗವಾಗಿಯೂ ಯಾಕೆ ಕರೆಯುತ್ತಾರೆ? ಮುಂಬಯಿಯಲ್ಲಿ ಗೇಟ್ ವೇ ಆಫ್ ಇಂಡಿಯಾ ಇದೆ. ದೆಹಲಿಯಲ್ಲಿ ಕುತುಬ್ ಮಿನಾರ ಇದೆ!

3 comments:

 1. ಬಾನಾಡಿ....

  ನಾವು ಹೊಸ ವರ್ಷ ಆಚರಿಸುವ ವಿಧಾನ ಬದಲಾಗ ಬೇಕು...
  ನಾನೂ ಕೂಡ ತಲೆ ಕೆಡಿಸಿಕೊಳ್ಳುತ್ತಿದ್ದೇನೆ.....

  ReplyDelete
 2. ಎಲ್ಲೆಲ್ಲೋ ಸುತ್ತಿಕೊಂಡು ನಿಮ್ಮ ಬ್ಲಾಗಿಗೆ ಬಂದೆ. ಲೇಖನಗಳು ಮನಮುಟ್ಟುತ್ತವೆ. ನೀವು ಮಂಗಳೂರಿನವರೆ? ನಿಮ್ಮ ಪ್ರೊಫೈಲ್ ಚಿತ್ರ ಕಾರ್ಕಳದವನದ್ದೆ? ಬೆಳಗೊಳದವನದ್ದೆ?

  ಈ ಬರಹದ ಸರಳತೆಯನ್ನು, ಉದ್ದೇಶವನ್ನು ಮನಗಾಣುವ ಹೊತ್ತಿನಲ್ಲಿ ಕೊನೆಯ "ಸಿಡಿಲು" ಅದನ್ನು ಹೊಡೆದು ಹಾಕುತ್ತದೆ. ಕ್ಷಮಿಸಿ.

  ReplyDelete
 3. ಕಾರ್ಕಳದ ಗೋಮಟ...
  ಸಿಡಿಲು ಈ ಸಲ ಸರಿಹೊಡೆದಿಲ್ಲ ಅಲ್ವಾ...
  ನನಗೂ ಹಾಗನಿಸಿತು.
  ಸರಿಯಾದ ಪ್ರತಿಕ್ರಿಯೆಗೆ ಧನ್ಯ.
  ಒಲವಿನಿಂದ
  ಬಾನಾಡಿ.

  ReplyDelete