Wednesday, December 3, 2008

ಅಕ್ಕಿ ಅನ್ನವಾಗಲಿ

ಅಮೇರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಕಾಂಡೋಲೀಸಾ ರೈಸ್ ಅವರು ಬಹಳ ಅವಸರದಿಂದಲೇ ನವದೆಹಲಿಗೆ ಆಗಮಿಸಿದ್ದಾರೆ. ಮುಂಬಯಿ ದಾಳಿಗೆ ನೊಂದ ಭಾರತೀಯರಿಗೆ ಸಾಂತ್ವನ ನೀಡಲು ಆಕೆ ಬಂದಂತೆ ಕಾಣುತ್ತಿಲ್ಲ. ನೊಂದಿರುವ ಭಾರತೀಯರ ಭಾವನೆಗಳು ಇಲ್ಲಿನ ರಾಜಕೀಯ ನಾಯಕರ ಮೇಲೆ ಪರಿಣಾಮ ಬೀರಿ ಅವರೇನಾದರೂ ಪಾಕಿಸ್ಥಾನದ ಮೇಲೆ ಎರಗಬಹುದೇನೋ ಎಂಬ ಗುಮಾನಿ ಅಮೇರಿಕಾದಲ್ಲಿ ಬಂದಿರುವುದರಿಂದ ಆಕೆ ವೇಗವಾಗಿ ಹಾರುತ್ತಾ ಯುರೋಪಿನ ಪ್ರವಾಸವನ್ನು ಮೊಟಕುಗೊಳಿಸುತ್ತಾ ಭಾರತದೆಡೆಗೆ ಧಾವಿಸಿದ್ದಾಳೆ. ಅಮೇರಿಕಾದ ಅಧಿಕಾರಿಗಳೂ ಮುಂಬಯಿ ದಾಳಿಯಲ್ಲಿ ಪಾಕಿಸ್ಥಾನದ ಕೈ ಇದೆ ಎನ್ನುವುದನ್ನು ಒಳಗಿಂದೊಳಗೆ ನಂಬಿದರೂ ಇಲ್ಲವೆಂದು ಹೇಳುವಂತೆ ಕಾಣುತ್ತಾರೆ. ತಪ್ಪು ಮಾಡಿದ ಕಿರಿಯ ಹುಡುಗನಿಗೆ ಹಿರಿಯ ಹುಡುಗನಿಂದ ಬಚಾವ್ ಮಾಡಿಸುವ ತರ ಅಮೇರಿಕಾ ನಡೆಯುತ್ತಿದೆ. ಪಾಕಿಸ್ಥಾನದ ಲಸ್ಕರ್ ಇ ತಾಯಿಬಾ ಇದರಲ್ಲಿ ಪಾಲ್ಗೊಂಡಿದೆ ಎಂದು ಅಮೇರಿಕಾದ ಅಧಿಕಾರಿಗಳಿಗೆ ಮನವರಿಕೆಯಾಗಿದೆ. ಭಾರತವೆಲ್ಲಿಯಾದರೂ ಪಾಕಿಸ್ಥಾನದ ವಿರುದ್ಧ ದಂಡೆತ್ತಿ ಬರಬಹುದೆಂಬ ಭೀತಿಯಲ್ಲಿ ಓಡೋಡಿ ಬಂದ ರೈಸ್ ಇಲ್ಲಿನ ನಾಯಕರ ಬೆನ್ನು ತಟ್ಟಿ ಸುಮ್ಮನಾಗಿಸುವಲ್ಲಿ ಪ್ರಯತ್ನ ಪಡುತ್ತಿದ್ದಾಳೆ.
ಈ ಮಧ್ಯೆ ಪಾಕಿಸ್ಥಾನದಲ್ಲಿ ಬಲಹೀನ ಸರಕಾರದ ಬೆನ್ನಿಗೆ ಎಲ್ಲ ರಾಜಕೀಯ ಪಕ್ಷಗಳು, ಮಾಧ್ಯಮಗಳು, ಜನಾಭಿಪ್ರಾಯ ರೂಪಿಸುವವರು ನಿಂತಿದ್ದಾರೆ. ಅವರು ಪಾಕಿಸ್ಥಾನದ ಒಗ್ಗಟ್ಟನ್ನು ಬಲಪಡಿಸುತ್ತಿದ್ದಾರೆ. ಆಡಳಿತ ಯಂತ್ರದೊಂದಿಗೆ ಇವರೆಲ್ಲ ಸೇರಿ ಮುಂಬಯಿ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವೇನೂ ಇಲ್ಲ ಎಂಬ ಅಭಿಪ್ರಾಯವನ್ನು ವಿಶ್ವಮಟ್ಟದಲ್ಲಿ ರೂಪಿಸುತ್ತಿದ್ದಾರೆ. ಪಾಕಿಸ್ಥಾನದ ಅಧ್ಯಕ್ಷ ಅಸಿಫ್ ಅಲಿ ಜರ್ಧಾರಿ ಅಮೇರಿಕಾದ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಂಡು ತಪ್ಪು ನಮ್ಮದಲ್ಲ ಎಂದು ಹೇಳಿದ್ದಾರೆ. ಪಾಕಿಸ್ಥಾನಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ, ಭಯೋತ್ಪಾದನೆಯ ವಿರುದ್ಧ ನಾವಿದ್ದೇವೆ ಎಂದು ತೋರಿಸಿಕೊಳ್ಳಬೇಕು. ಜತೆಗೆ ಆಂತರಿಕವಾಗಿ ಭಾರತದ ಯಾವುದೇ ಎಚ್ಚರದ ಮಾತುಗಳಿಗೆ ನಾವು ಬಗ್ಗುವುದಿಲ್ಲ ಎಂದು ತೋರಿಸಬೇಕಾಗಿದೆ. ಎಲ್ಲರೂ ಒಂದಾಗಿ ಭಾರತದಲ್ಲಿ ಆದ ದುರಂತಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಭಾರತವು ಪಾಕಿಸ್ಥಾನವೇ ಇದಕ್ಕೆಲ್ಲ ಕಾರಣ ಎಂದು ಬೆರಳು ತೋರಿಸುವುದನ್ನು ಪಾಕಿಸ್ಥಾನ ತಳ್ಳಿಹಾಕುತ್ತಿದೆ.
ಭಾರತ ತನ್ನಲ್ಲಿರುವ ಸಾಕ್ಷಾಧಾರಗಳನ್ನು ಮುಂದಿಟ್ಟು ರಾಜಕೀಯ ನಿರ್ಧಾರಗಳ ಮೂಲಕ ಮತ್ತು ಮಾಧ್ಯಮಗಳ ಮೂಲಕ ಪಾಕಿಸ್ಥಾನವು ಹೇಗೆ ಭಯೋತ್ಪಾದನೆಯ ತೊಟ್ಟಿಲಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಬೇಕು. ಘಟನೆಯ ನಂತರದ ಮೊದಲ ಒಂದೆರಡು ದಿನಗಳಲ್ಲಿ ದೇಶದ ಆಡಳಿತ ನಾಯಕರು ಮಾತಾಡಿದ ಧ್ವನಿ ಇನ್ನೂ ಗಟ್ಟಿಯಾಗಿ ಬಹಳಷ್ಟು ದಿನ ಉಳಿಯಬೇಕು. ದೇಶದ ಜನತೆ ಯಾವುದಾದರೂ ಪರಿಣಾಮವನ್ನು ಕಾಣುವಂತಹ ನಿರ್ಧಾರಗಳನ್ನು ಸರಕಾರವು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕಾಂಡೋಲೀಸಾ ರೈಸ್ ನಂತಹವರು ಬಂದಾಗ ಬಾಲಬೀಸಿ ಕುಂಯ್‌ಗುಡುವ ಕುನ್ನಿಗಳು ನಾವಾಗುತ್ತೇವೆ.

2 comments:

  1. ಯಾವುದೇ ರೀತಿಯ ಬಲವಾದ ದೃಢ ನಿರ್ಧಾರಗಳನ್ನಾಗಲೀ, ಕಾರ್ಯಾಚರಣೆಗಳನ್ನಾಗಲೀ ಈಗಿರುವ ಸರಕಾರ ಮಾಡುವುದು ಎಂಬ ಭರವಸೆಯಿದೆಯೇ? ಖಂಡಿತ ಇಲ್ಲ. ಸೋನಿಯಮ್ಮಳ ತಾಳಕ್ಕೆ ಕುಣಿಯುತ್ತಿರುವ ಪ್ರಧಾನಿಯವರು ರೈಸ್ ಅವರ ಮೊಸಳೆಕಣ್ಣಿರಿಗೂ ಬಹಳ ಬೇಗ ಕರಗುತ್ತಾರೆ ನೋಡಿ. ಇಂತಹ ರಾಜಕಾರಣಿಗಳಿಂದ ಪಾಕಿಸ್ತಾನವನ್ನು ಎದುರಿಸಲಾಗದು. ಬರಿಯ ಬಾಯಿಮಾತಿನ ವೀರರು ಇವರೆಲ್ಲ :( ಅದೆಷ್ಟು ಬೋಂಬ್ ಸ್ಫೋಟಗೊಳ್ಳಬೇಕೋ?!! ಅದೆಷ್ಟು ಮುಗ್ಧಜೀವಿಗಳ ಬಲಿಯಾಗಬೇಕೋ ಪಾಕಿಸ್ಥಾನದ ನಾಪಾಕ್ ಇರಾದೆಗಳನ್ನು ಕೊನೆಗೊಳಿಸಲು...????!!

    ReplyDelete
  2. ಈಗಿರುವ ಕೈಗೊಂಬೆ ಸರ್ಕಾರದಿಂದ ಇಂಥ ಕ್ರಮವನ್ನು ನಿರೀಕ್ಷಿಸುವುದೇ ತಪ್ಪು.

    ReplyDelete