Monday, December 1, 2008

ಕೇಳಬಹುದೇ ಶಂಖನಾದ

ಭಾರತದ ಹೊಸ ಗೃಹ ಸಚಿವ ಪಲನಿಯಪ್ಪನ್ ಚಿದಂಬರಂ ತನ್ನ 'ಗೃಹ'ದಿಂದ ಹೊರಬಂದು ಪಾಕಿಸ್ಥಾನದ ರಾಯಭಾರಿಯನ್ನು ಕರೆದು ಮುಂಬಯಿ ದುರಂತದಲ್ಲಿ ಪಾಕಿಸ್ಥಾನದ ಕೈವಾಡ ಇರುವುದನ್ನು ತಿಳಿಸಿಹೇಳಿ ಎಚ್ಚರಿಸಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ಜನರನ್ನು ಬಳಿ ತೆಗೆದುಕೊಂಡ ಮುಂಬಯಿ ದುರಂತದ ಹಿಂದೆ ಪಾಕಿಸ್ಥಾನದ ಕೈವಾಡ ಇದೆ ಎಂದು ಭಾರತ ಸರಕಾರದ ವಿವಿಧ ಅಂಗಗಳಿಗೆ ಖಚಿತ ಮಾಹಿತಿಗಳು ಲಭ್ಯವಾಗಿವೆ. ಈ ಮಾಹಿತಿಗಳನ್ನು ಹಿಡಿದುಕೊಂಡು ಪಾಕಿಸ್ಥಾನವನ್ನು ಎತ್ತರದ ಸ್ವರದಲ್ಲಿ ಗದರಿಸುವ ಧೈರ್ಯ ಭಾರತ ಸರಕಾರಕ್ಕಿದೆಯೇ? ಧೃಢತೆಯಿಂದ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವಷ್ಟು ಭಾರತದ ರಾಜಕಾರಣಿಗಳಿಗೆ ಸ್ಥೈರ್ಯವಿದೆಯೇ? ಚಿದಂಬರಂ ಅವರು ಪ್ರತಿಕ್ರಿಯಲೇ ಬೇಕು. ಯಾಕೆಂದರೆ ಚುನಾವಣೆ ಇನ್ನು ತಿಂಗಳುಗಳ ಲೆಕ್ಕದಷ್ಟು ದೂರವಿದೆ. ರಾಜೀನಾಮೆ ನೀಡಿದ ಶಿವರಾಜ್ ಪಾಟೀಲ್ ಅವರ ಅಸಮರ್ಥತೆಯನ್ನು ಅಳಿಸಿ ಜನತೆಯ ಎದುರು ಯುನಾಯ್ಟೆಡ್ ಪ್ರೋಗ್ರೆಸ್ಸಿವ್ ಅಲಾಯನ್ಸ್ ಸರಕಾರವು ಚುನಾವಣೆಯನ್ನು ಎದುರಿಸಬೇಕು. ಜನರಲ್ಲಿ ಸಿಟ್ಟಿದೆ. ಅದು ಕೇವಲ ಕಾಂಗ್ರೆಸ್ ಅಥವಾ ಆಡಳಿತ ಪಕ್ಷದ ಮೇಲಲ್ಲ. ಇಡೀ ರಾಜಕೀಯ ವ್ಯವಸ್ಥೆಯ ಬಗ್ಗೆ ಜನ ರೊಚ್ಚಿಗೆದ್ದಿದ್ದಾರೆ. ಮುಂಬಯಿಯಲ್ಲಿ ಕೆಲವು ಕಾರ್ಪೋರೇಟ್ ಮುಂದಾಳುಗಳು ಮಹಾ ನಗರಗಳ ಕಾನೂನು ಮತ್ತು ಸುವ್ಯವಸ್ಥೆಗಾಗಿ ಖಾಸಗಿ ಸೆಕ್ಯೂರಿಟಿ ಬಲಗಳನ್ನು ವೃದ್ಧಿಸುವ ಕುರಿತೂ ಮಾತಾಡುತ್ತಾರೆ. ರೊಚ್ಚಿಗೆದ್ದಿರುವ ಜನತೆ ಸರಕಾರವನ್ನು ಮತ್ತು ರಾಜಕೀಯ ಪಕ್ಷಗಳನ್ನು ದೂರುತ್ತಿದ್ದಾರೆ. ಜನತೆಗೆ ಹೆದರಿ ರಾಜೀನಾಮೆ ನೀಡುವುದು ಕೆಲವೊಮ್ಮೆ ನಾಯಕರುಗಳಿಗೆ ಅನಿವಾರ್ಯವಾಗುತ್ತಿದೆ. ಚಿದಂಬರಂ ಅವರ ಎಚ್ಚರಿಕೆ ಪಾಕಿಸ್ಥಾನದಲ್ಲಿ ಎಷ್ಟು ಪರಿಣಾಮಕಾರಿಯಾಗಬಲ್ಲುದು? ಭಾರತದ ಜನತೆಯ ಸಿಟ್ಟು ಸರಕಾರದ ಮೂಲಕ ವಿಶ್ವನಾಯಕರನ್ನು ತಲುಪಬಲ್ಲುದೇ? ಇಸ್ಲಾಮಬಾದ್ ನಲ್ಲಿರುವ ಪಾಕಿಸ್ಥಾನದ ಅಧ್ಯಕ್ಷ ಅಸಿಫ್ ಅಲಿ ಝರ್ದಾರಿ ಅಥವಾ ಪಾಕಿಸ್ಥಾನದ ಪ್ರಧಾನಿ ಸಯದ್ ಯುಸುಫ್ ರಾಝ ಗಿಲಾನಿ ತಲೆಕೆಡಿಸಿಕೊಳ್ಳವಷ್ಟು ಭಾರತದ ಆಡಳಿತ ಬೊಬ್ಬೆ ಹೊಡೆಯುತ್ತಿದೆಯೇ? ಅಮೇರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಕ್ಯಾಂಡೋಲೀನಾ ರೈಸ್ ಭಾರತಕ್ಕೆ ತಲುಪುವಷ್ಟರಲ್ಲಿ ಆಡಳಿತ ಯಂತ್ರದಿಂದ ಪರಿಣಾಮಕಾರಿ ಅಭಿಪ್ರಾಯ ಬೀರುವ ಕೆಲಸಗಳು ನಡೆಯುತ್ತಿದೆಯೇ? ಭಾರತವು ಪಾಕಿಸ್ಥಾನವನ್ನು ಔಪಚಾರಿಕವಾಗಿಯೇ ಎಚ್ಚರಿಸಿದಾಗ ಪಾಕಿಸ್ಥಾನ ಸರಕಾರವು ಪೂರ್ಣಪ್ರಮಾಣದ ಪಾರದರ್ಶಿಕತೆ, ಸಹಕಾರದಿಂದ ಭಾರತವು ನೀಡುವ ಸಾಕ್ಷಿಗಳನ್ನು ಪರಿಶೀಲಿಸಿ ಕೆಲಸ ಕೈಗೊಳ್ಳುವುದೇ? ಪಾಕಿಸ್ಥಾನದ ಮಾಧ್ಯಮಗಳು ಅಲ್ಲಿನ ವಿಶ್ಲೇಷಣಕಾರರು ಭಾರತದ ಸೈನಿಕರ ಕುರಿತು ಕೀಳರಿಮೆಯಿಂದ ಜನಾಭಿಪ್ರಾಯವನ್ನು ಮೂಡಿಸಿದೆ. ಇಪ್ಪತ್ತನಾಲ್ಕು ಘಂಟೆಯಾದರೂ ಒಂದು ಹೋಟೆಲ್‌ನಲ್ಲಿರುವ ಬೆರಳೆಣಿಕೆಯಷ್ಟು ಭಯೋತ್ಪಾದಕರನ್ನು ಭಾರತದ ಸುರಕ್ಷಾ ಬಲಗಳಿಗೆ ಹೊರ ಹಾಕಲು ಆಗಿಲ್ಲ ಎಂದು ಅಲ್ಲಿನ ಮಾಧ್ಯಮಗಳು ಅಣಕವಾಡುತ್ತಿದ್ದವು. ನಮ್ಮ ಸರಕಾರವನ್ನು, ವ್ಯವಸ್ಥೆಯನ್ನು ಕುಹಕವಾಡುವ ಭಾರತದ ಮಾಧ್ಯಮಗಳು ಇಂತಹ ಭಯೋತ್ಪಾದಕ ಕೃತ್ಯಗಳಲ್ಲಿ ಪಾಕಿಸ್ಥಾನದ ಕೈ ಎಷ್ಟು ಆಳವಾಗಿದೆ ಎಂದು ಕಂಡುಹಿಡಿದು ಬಯಲಿಗೆಳಯಬೇಕು.
ಸಿಡಿಲು
ಪಾಕಿಸ್ಥಾನದ ಮಾಧ್ಯಮಗಳ ಪ್ರಕಾರ ಮುಂಬಯಿ ದುರಂತವನ್ನು ಭಾರತವೇ ಮಾಡಿಸಿದೆಯಂತೆ!
ಗುಡುಗು
ಒಬಾಮ, ಹಿಲರಿ ಕ್ಲಿಂಟನ್ ಅವರನ್ನು ಅಮೇರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಆಗಿ ನೇಮಿಸಿದ್ದಾರೆ.

2 comments:

  1. ಸಿಡಿಲು ಮತ್ತು ಗುಡುಗು ಹೊಡೆದದ್ದು ಆಯಿತು. ಮಳೆ ಬೀಳದೆ ಮೋಡ ಚದುರಿ ಹೋಗದಿರಲಿ ಅಂತಲೇ ಬೇಡಿಕೆ. :-)

    ReplyDelete
  2. ಸಮಸ್ಯೆ ನಾವು ಚಿಂತಿಸುವುದಕ್ಕಿನ್ತಲೂ ಹೆಚ್ಹು ಗಾಢವಾಗಿದೆ. ಈ ಶತಮಾನದ ಅತಿ ದೊಡ್ಡ ಸಮಸ್ಯೆ ಎಂದರೆ ದುರ್ಬಲ ಸರಕಾರಗಳು. ಖಾಸಗಿ ಕಂಪೆನಿಗಳು ಜಗತ್ತಿನ ಯಾವುದೇ ಸರಕಾರಕ್ಕಿಂತಲೂ ಹೆಚ್ಹು ಬಲಿಷ್ಟವಾಗಿವೆ. ಹಾಗಾಗಿ ಸರಕಾರಗಳು ಬಯಸಿದರೂ ಏನೂ ಮಾಡಲಾಗದ ಸ್ಥಿತಿಯಲ್ಲಿವೆ. ಜಪಾನ್, ಇಂಗ್ಲೆಂಡ್, ಮತ್ತಿತರ ದೇಶಗಳ ಸರಕಾರಗಳು ಈಗಾಗಲೇ ಖಾಸಗಿ ಕಂಪೆನಿಗಳ ಹಂಗಿನಲ್ಲಿ ಕೆಲಸ ಮಾಡುತ್ತಿವೆ. ಈ ಕಂಪೆನಿಗಳ ವಾರ್ಷಿಕ ಆದಾಯವು ರಾಷ್ಟ್ರದ ಒಟ್ಟು ಆದಾಯಕ್ಕೆ ಸರಿಸಮವಾಗಿವೆ. ಹೀಗಾಗಿ ನಮ್ಮ ರಾಷ್ಟ್ರದ ಕಲ್ಪನೆಯನ್ನು ನಾವು ಬದಲಾಯಿಸಿಕೊಂಡು ದೇಶವನ್ನು ರಕ್ಷಿಸುವ ಬಗ್ಗೆ ಚರ್ಚಿಸ್ಸ್ಬೇಕಾಗಿದೆ. ಪಾಕಿಸ್ತಾನ ಸರಕ್ಕಾರಕ್ಕು ಇದನ್ನು ನಿಲ್ಲಿಸುವ ಶಕ್ತಿ ಇದೆಯೆಂದು ನನಗೆ ಅನ್ನಿಸುವುದಿಲ್ಲ. ಅಲ್ಲಿನ ದುರ್ಬಲ ಸರಕಾರ ಇನ್ನ್ಯಾರದೋ ಮಾತು ಕೇಳಿಕೊಂಡು ಕೆಲಸ ಮಾಡುವ ಸಂಕಟದಲ್ಲಿದೆ.
    ಬಿಳಿಮಲೆ

    ReplyDelete