Tuesday, December 30, 2008

ಮುಗಿಯಿತು ಎಂದೊಡನೆ ಆರಂಭವಾಗುವುದು

ಜನವರಿ ಒಂದರಂದು ಉತ್ತರ ಪ್ರದೇಶದ ರಾಮಪುರದಲ್ಲಿ ಸೆಂಟ್ರಲ್ ರಿಸರ್ವ್ ಪೋಲೀಸ್ ಫೋರ್ಸ್‌ನ ಕೇಂದ್ರಕ್ಕೆ ಭಯೋತ್ಪಾದಕರು ದಾಳಿಮಾಡಿ ಎಂಟು ಜನರ ಮಾರಣ ಹೋಮ ಮಾಡಿದರು. ಈ ಭಯೋತ್ಪಾದನೆ ೨೦೦೮ ರಲ್ಲಿ ಮೇ, ಜುಲೈ, ಸಪ್ಟಂಬರ್, ಅಕ್ಟೋಬರ್, ನವಂಬರ್ ತಿಂಗಳಲ್ಲಿ ಮುಂದುವರಿಯಿತು.
ಜೈಪುರದಲ್ಲಿ ೮೦, ಬೆಂಗಳೂರಿನಲ್ಲಿ ಒಂದು, ಅಹಮದಾಬಾದ್‌ನಲ್ಲಿ ೫೩, ದಿಲ್ಲಿಯಲ್ಲಿ ೨೬, ಗುವಾಹಟಿಯಲ್ಲಿ ೮೪ ಮತ್ತೆ ಮುಂಬಯಿಯಲ್ಲಿ ೧೮೪. ಇದು ಬಲಿಯಾದವರ ಸಂಖ್ಯೆ. ಇನ್ನೊಂದು ಜನವರಿ ಒಂದು ಬರಲು ಕೆಲವೇ ಘಂಟೆಗಳಿವೆ. ಅದರೊಳಗೆ ಇನ್ನೆಷ್ಟು ಬಲಿಯಾಗಬಹುದೆಂಬ ಆತಂಕದಲ್ಲಿಯೇ ಕುಟ್ಟುತ್ತಿದ್ದೇನೆ.
೨೦೦೮ ಆತಂಕದ ವರ್ಷವೇ ಎಂದು ಸಾಬೀತು ಪಡಿಸಿತು. ವರ್ಷದ ಆರಂಭದಲ್ಲಿ ೨೦೦೦೦ ತೋರಿಸುತ್ತಿದ್ದ ಮುಂಬಯಿ ಶೇರ್ ಮಾರುಕಟ್ಟೆಯ ಸೂಚ್ಯಂಕ ಇಂದು ಅದರ ನಾಲ್ಕನೇ ಒಂದರಷ್ಟು ಇಳಿದಿದೆ. ದುಮ್ಮಾನಗಳು ಬಹಳಷ್ಟು.
ಕೊನೆಯದೊಂದು ಆಶಾಕಿರಣ ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ವಿಜಯ.
ವರ್ಷದ ವಿಶ್ವ ಘಟನೆ: ಆಫ್ರಿಕಾ ಮೂಲದ ಕರಿಯ ಡೆಮಾಕ್ರೇಟ್ ಒಬಾಮಾ ಅಮೇರಿಕಾದ ಅಧ್ಯಕ್ಷನಾಗಿ ಆಯ್ಕೆ ಯಾಗಿದ್ದು.
ಇಂತಹ ಘಟನೆಗಳ ನಡುವೆಯೇ ಕರ್ನಾಟಕದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 'ಅಪರೇಶನ್ ಕಮಲ' ಎಂಬ ಹೊಸಪದ ಸೃಷ್ಟಿ ಆಯಿತು. ವರ್ಷಾಂತ್ಯದ ಉಪ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಸಮರ್ಥನೆ ಸಿಕ್ಕಿದೆ.
ಭಾರತ ಪಾಕಿಸ್ಥಾನದ ನಡುವೆ ಸಮರದ ನೆರಳು ಬೀಳುತ್ತಿದೆಯೇ? ಯುದ್ಧಕ್ಕೆ ಬಲಿಯಾಗುವಷ್ಟು ಎರಡೂ ದೇಶದ ರಾಜಕೀಯ ಮುತ್ಸದ್ಧಿಗಳು ಮೂರ್ಖರಲ್ಲದಿರಬಹುದು.
ಹೊಸವರ್ಷದಲ್ಲಿ ಭಾರತದಲ್ಲಿ ಹೊಸ ಸರಕಾರವನ್ನು ಚುನಾಯಿಸುವ ಅವಕಾಶ ಮತ್ತೊಮ್ಮೆ ಬರಲಿದೆ. ಆರ್ಥಿಕ ಬಿಕ್ಕಟ್ಟುಗಳು ದೂರವಾಗುವವೇ? ಭಯೋತ್ಪಾದನೆಯ ಆತಂಕ ಕಡಿಮೆಯಾಗುವುದೇ?
ಭರವಸೆಯಲ್ಲಿ ದಿನ ನೋಡುವುದೇ ಆಶಾವಾದಿಗಳ ಕರ್ತವ್ಯ.
ವರ್ಷವೊಂದು ಉರುಳಿದಾಗ ಮತ್ತೊಂದು ಅರಳುವುದು. ಗಿಡದಲ್ಲೊಂದು ಎಲೆ ಹಣ್ಣಾಗಿ ಉರುಳಿದಾಗಲೇ ಮತ್ತೊಂದು ಚಿಗುರುತ್ತದೆ. ಒಂದು ತಲೆಮಾರು ಅಳಿದಾಗಲೇ ಇನ್ನೊಂದು ತಲೆಮಾರು ಹುಟ್ಟುತ್ತದೆ. ಇದು ನಿತ್ಯಕ್ರಿಯೆ. ನಿಸರ್ಗ ಸಹಜ. ಇದೆಲ್ಲದರ ನಡುವೆ ಪ್ರಶ್ನೆಗಳು ಮೂಡುತ್ತವೆ.
ಕಾಲ ಎಂಬುದು ಆರಂಭವಾಗಿತ್ತೇ?
ವಿಶ್ವಕ್ಕೆ ಗಡಿಯಿದೆಯೇ?
ಕಾಲ ಎನ್ನುವುದು ಅತೀತವೇ?
ವಿಶ್ವವೆನ್ನುವುದು ಅನಂತವೇ?
ಹಾಗಾದರೆ ನಾನು ಎನ್ನುವುದು ಎಷ್ಟು ಚಿಕ್ಕ ಚುಕ್ಕೆ.
ಅನಂತವಾದ ವಿಶ್ವದಲ್ಲಿ ಹುಡುಕುವುದು ಹೇಗೆ? ಎಲ್ಲಿ?
ಹೊಸ ಕ್ಯಾಲೆಂಡರ್ ನೋಡುತ್ತಾ ಸೋಮವಾರ ಶುಕ್ರ, ಶನಿವಾರವಾಗಿದ್ದು ಗೊತ್ತಾಗದೇ ಕಳೆದ ಆ ಹಳೆಯ ವರ್ಷಗಳಿಗೆ ವಂದಿಸುವುದೇ?
ಅಥವಾ ಮುಂಬರುವ ದಿನಗಳು ಕೂಡಾ ಸೊಗಸಾಗುವವೆಂದೇ ತಿಳಿದು ವರ್ಷದ ಕೊನೆಗೆ ಉಳಿದುದೆಲ್ಲವನ್ನು ಸುರಿಯುವುದೇ?
ಬ್ಲಾಗು ನೋಡುವ ನಿಮಗೆಲ್ಲ ಹೊಸ ವರ್ಷ ಹೊಸತನ ತರಲಿ, ಉಲ್ಲಾಸದಾಯಕವಾಗಲಿ, ಸಂತೋಷ ತುಂಬಲಿ, ಸಿರಿ ಹರಿದು ಬರಲಿ.
ಬದುಕು ಬೆಳಕಾಗಲಿ.
ಹಾರೈಕೆಗಳು.

ಒಲವಿನಿಂದ
ಬಾನಾಡಿ

Wednesday, December 24, 2008

ಕ್ರಿಸ್ಮಸ್ ಹಬ್ಬದ ಶುಭಾಶಯಗಳು


Sunday, December 21, 2008

ಅಕ್ಕಮ್ಮಕ್ಕನ ಆದರಾತಿಥ್ಯ

ನವಂಬರದ ಸಂಜೆಗೆ ಕೊಡಗಿನ ಮಡಿಲಲ್ಲಿ ಕುಳಿತು ಗೋವಾದಿಂದ ತಂದ ಗೇರುಹಣ್ಣಿನ ಫೆನ್ನಿಯ ಬಾಟಲಿಯನ್ನು ನೋಡುತ್ತಾ ಧ್ಯಾನಿಸುತ್ತಿರುವಾಗ ಅಕ್ಕಮ್ಮಕ್ಕ ಫಕ್ಕನೆ ತಮ್ಮಾ ಅದೇಕೆ ನೀನು ಅಷ್ಟು ಕೆಟ್ಟ ವಾಸನೆಯ ಆ ಫೆನ್ನಿಯನ್ನು ಕುಡಿಯುತ್ತಿ ಎಂದಳು. ಒಳಗೆ ಮಂಚದ ಕೆಳಗೆ ರಂ ಬಾಟಲಿಗಳಿವೆ. ಒಂದೆರಡು ಸ್ಕಾಚು ಬಾಟಲಿಗಳಲ್ಲಿ ನಿನಗೆ ಬೇಕಾಗುವಷ್ಟು ಮಿಕ್ಕಿರಲೂ ಬಹುದು ಎಂದಳು.
ಅಕ್ಕಮ್ಮಕ್ಕನ ಆದರಾತಿಥ್ಯಕ್ಕೆಂದೇನೋ ನಾನು ಮಡಿಕೇರಿಯಲ್ಲಿ ಇಳಿದು ಕೊಂಡದ್ದು. ಎರಡು ದಿನವಿತ್ತು. ಹಾಗೇ ನಿಶ್ಚಿತ ಕೆಲಸಗಳಿರಲಿಲ್ಲ. ಗೋವಾದಿಂದ ಸೀದಾ ಬೆಂಗಳೂರಿಗೆ ಹೊರಟು, ಅಲ್ಲಿಯ ಕೆಲಸ ಮುಗಿಸಿ ಬಸ್ಸಲ್ಲಿ ಮಂಗಳೂರಿಗೆ ಹೋಗುವ ಮನಸ್ಸಾಗಿತ್ತು. ಮಂಗಳೂರಿನ ಬಸ್ಸು ಬರುವ ಮೊದಲು ಬಂದ ಮಡಿಕೇರಿಯ ಬಸ್ಸನ್ನೇ ಏರಿ ಕುಳಿತಾಗ ನೆನಪಾದವಳು ಅಕ್ಕಮ್ಮಕ್ಕ. ಇನ್ನು ಏನೂ ಪ್ಲಾನಿಲ್ಲ. ಸೀದಾ ಮಡಿಕೇರಿಯಲ್ಲಿ ಅಕ್ಕಮ್ಮಕ್ಕನ ಮನೆಗೆ ಹೋಗಿ ಫೆನ್ನಿ ಕುಡಿದು ನಿದ್ದೆ ಮಾಡುವುದು. ಅಥವಾ ಗೋವಾದಲ್ಲಿ ಇನ್ನೂ ಓದಿ ಮುಗಿಯದ ಆ ಇಂಗ್ಲಿಷ್ ಕಾದಂಬರಿ ಮುಗಿಸುವುದು ಎಂದು ಯೋಚಿಸಿ ಬಸ್ಸಲ್ಲಿ ನಿದ್ದೆ ಹೋದೆ.
ಬಸ್ಸಿಳಿದು ಮನೆಗೆ ಬಂದ ನನಗೆ ಅಕ್ಕಮ್ಮಕ್ಕ ಕೊಟ್ಟ ಕಾಫಿ ಕುಡಿದು ಫ್ರೆಶ್ ಆದೆ. ಹೊಟ್ಟೆತುಂಬುವಷ್ಟು ಕಾಫೀನೇ ಕುಡಿದಿದ್ದೆ. ಮಂಗಳೂರಿನಿಂದ ಬಂದಿದ್ದ ಮೀನು ಮಧ್ಯಾಹ್ನದ ಊಟಕ್ಕೆ ಸರಿಯಾಗಿತ್ತು. ಅಕ್ಕಮ್ಮಕ್ಕನಿಗೆ ನಾನು ಹೋಗಿದ್ದು ಖುಷಿಕೊಟ್ಟ ವಿಚಾರ ಎಂದೇ ಅವಳ ಉತ್ಸಾಹದಲ್ಲಿ ತೋರುತ್ತಿತ್ತು. ಮಂಗಳೂರಿನ, ಪುತ್ತೂರಿನ, ಕಾಸರಗೋಡಿನ, ಕಾರ್ಕಳದ, ಬೆಂಗಳೂರಿನ, ಸೋಮವಾರಪೇಟೆಯ ಸುದ್ದಿಗಳನ್ನು ಬಿಚ್ಚಿಬಿಚ್ಚಿ ಹೇಳಿದಳು. ನನಗೆ ಅವಳು ಉಲ್ಲೇಖಿಸಿದ ಕೆಲವು ಜನರು ಯಾರು ಎಂಬುದೂ ಗೊತ್ತಾಗಲಿಲ್ಲ. ಅವಳ ಮಾತಿಗೆ ಕಿವಿಯಾಗಿದ್ದೆ. ಇಷ್ಟೆಲ್ಲಾ ವಿಷಯಗಳನ್ನು ನನಗಾಗಿಯೇ ಹೇಳುವುದು ಅವಳಿಗೆ ನನ್ನಲ್ಲಿರುವ ಪ್ರೀತಿಯಿಂದಲ್ಲದೆ ಬೇರಾವ ಕಾರಣದಿಂದಲ್ಲ.
ಸಂಜೆಯ ಅಡುಗೆಗೆ ಪಂದಿಕರಿ ಮಾಡ್ತೇನೆ ಎಂದಳು. ಆವಾಗಲೇ ಫೆನ್ನಿಯನ್ನು ಏರಿಸಿದ್ದ ನನಗೆ ಖುಷಿಯಾಯ್ತು. ಅಕ್ಕಮ್ಮಕ್ಕ ನೀನು ಪಂದಿಕರಿಯನ್ನು ನನ್ನಿಂದ ಮಾಡಿಸು ಎಂದೆ. ಮಾಂಸದ ಅಡುಗೆ ಮಾಡುವುದು ನನ್ನ ಹವ್ಯಾಸಗಳಲ್ಲೊಂದು ಎಂದುಕೊಂಡವ ನಾನು. ಅವಳು ಕೊಟ್ಟ ಮಾಂಸವನ್ನು ಸಣ್ಣಗೆ ತುಂಡು ಮಾಡಿದೆ, ಅದಕ್ಕೆ ಅವಳಂದಂತೆ ಅರಶಿನಹುಡಿ, ಮೆಣಸಿನ ಹುಡಿ, ಉಪ್ಪು ಹಾಕಿಡಲಾಯಿತು. ಬಹಳಷ್ಟು ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಕರಿಮೆಣಸುಗಳನ್ನು ಹಾಕಿ ಕಡೆದಿಡಲಾಯಿತು. ಕೊತ್ತಂಬರಿ, ಜೀರಿಗೆ, ಕರಿಮೆಣಸು, ಮೆಂತೆ, ಇತ್ಯಾದಿಯನ್ನು ಹುರಿದು ಹುಡಿಮಾಡಲಾಯಿತು. ಅದಕ್ಕಾಗಿಯೇ ಇರುವ ಕಚಂಪುಳಿಯನ್ನೂ ಸೇರಿಸಿಯಾಯಿತು. ಇವೆಲ್ಲವನ್ನೂ ಮಾಡುತ್ತಿದ್ದಂತೆ ಮಧ್ಯಮಧ್ಯ ನಾನು ಫೆನ್ನಿಯನ್ನು ಹೀರುತ್ತಿದ್ದುದರಿಂದ ಯಾವ ಯಾವ ಸಂಬಾರಗಳನ್ನು ಯಾವಾಗ ಹಾಕಿದೆ ಅಥವಾ ಇನ್ನೇನೆಲ್ಲಾ ಆಯಿತೆಂಬ ನೆನಪು ಈಗ ಆಗುತ್ತಿಲ್ಲ!
ಜತೆಗೆ ಉಣ್ಣಲು ಅಕ್ಕಿಯ ರೊಟ್ಟಿ ಮಾಡಲಾ ಅಥವಾ ಕುಚ್ಚಿಲಕ್ಕಿಯ ಪುಂಡಿ ಮಾಡಲಾ ಎಂದು ಅಕ್ಕಮ್ಮಕ್ಕ ಕೇಳಿದಾಗ ರೊಟ್ಟಿಯೇ ಮಾಡೆಂದೆ. ಒಲೆಯ ಮುಂದು ಬೆಚ್ಚಗೆ ಕುಳಿತು ಅವಳ ಕತೆಗಳನ್ನು ಕೇಳಿದಂತಾಯಿತು ಎಂದು ಕೊಂಡೆ. ಅಲ್ಲೆ ಕುಳಿತು ರೊಟ್ಟಿ ತಯಾರಾಗುತ್ತಿದ್ದಂತೆ ಪಂದಿಕರಿಯ ಪ್ಲೇಟಿನೊಂದಿಗೆ ನಾನು ಅದ್ಯಾವುದೋ ಲೋಕಕ್ಕೆ ಹೋದವನಂತಿದ್ದೆ.
ಪಂದಿಕರಿಯ ಜತೆಗೆ ಅಕ್ಕಮ್ಮಕ್ಕಳೂ ಫೆನ್ನಿಯನ್ನು ಗ್ಲಾಸಿನಲ್ಲಿ ಹಾಕಿ ಕುಳಿತಾಗ ನಾನು ಅವಳೊಡನೆ ಕೆಟ್ಟ ವಾಸನೆಯ ಆ ಫೆನ್ನಿಯನ್ನು ನೀನೇಕೆ ಕುಡಿಯುವೆ. ಸ್ಕಾಚ್ ತೊಗೋ ಎಂದೆ. ಅವಳು ಇದೇ ಒಳ್ಳೆಯದು ಎಂದು ಹೇಳಿದಳು.

ಮರುದಿನ ಮಂಗಳೂರಿನ ಬಸ್ಸಿಗೆ ಹೊರಡುವಾಗ ಮನಸ್ಸು ಭಾರವಾಗಿತ್ತು. ಅಕ್ಕಮ್ಮಕ್ಕನ ಆದರಾತಿಥ್ಯಕ್ಕೆ.

Wednesday, December 17, 2008

ಕತ್ತಲೆಯಿಂದ ಬೆಳಕಿಗೆ

ಮಾಧ್ಯಮಗಳು ಸಮಾಜದ ಕನ್ನಡಿ ಎನ್ನುತ್ತೇವೆ. ಸಮಾಜದಲ್ಲಿ ಒಳ್ಳೆಯತನವಿದ್ದರೆ ಮಾಧ್ಯಮವು ಅದನ್ನೇ ತೋರಿಸುತ್ತದೆ, ಕೆಟ್ಟದು ಇದ್ದರೆ ಕೆಟ್ಟದನ್ನು ತೋರಿಸುತ್ತದೆ ಎಂಬುದು ಮಾಧ್ಯಮದವರು ಅವರನ್ನು ಪ್ರಶ್ನಿಸಿದಾಗ ಹೇಳುವ ಉತ್ತರ. ಮುಂಬಯಿ ದುರಂತದ ನಂತರ ಕೆಲವು ಮ್ಯಾಗಝಿನ್ ಗಳ ಮುಖಪುಟವನ್ನು ನೋಡಿದಾಗ ನನಗೆ ಅನಿಸಿದ್ದು ಅವರೆಲ್ಲ ಅದೆಷ್ಟು ಚೆನ್ನಾಗಿ ಈ ದುರಂತದ ವಿವಿಧ ಮಜಲುಗಳನ್ನು ಸೆರೆಹಿಡಿದ್ದಾರೆ ಎಂದು.ಆದರೆ ಒಂದು ಸಣ್ಣ ಪತ್ರಿಕೆ ದೆಹಲಿ ಕರ್ನಾಟಕ ಸಂಘದ ಅಭಿಮತ ನನ್ನ ಮುಚ್ಚಿದ ಕಣ್ಣನ್ನು ತೆರೆಯಿತು. ಅದರ ಮುಖಪುಟದಲ್ಲಿ ಮುಂಬಯಿ ದುರಂತದ ಯಾವುದೇ ಭಯಾನಕ ಚಿತ್ರವಿರಲಿಲ್ಲ. ಕತ್ತಲೆಯ ಕಪ್ಪಿನಿಂದ ಮೊಂಬತ್ತಿಗಳನ್ನು ಉರಿಸುವ ಚಿತ್ರ. ಹೇಳಲಾಗದ ಅದೆಷ್ಟೋ ಮಾತುಗಳನ್ನು ಈ ಮುಖಪುಟ ನೀಡಿತು. ೬೦ ಗಂಟೆಗಳ ಭಯೋತ್ಪಾದನೆಯ ನೇರ ಪ್ರಸಾರ, ನೆಟ್‌ಗಳಲ್ಲಿ ಹರಿದಾಡಿದಾಗ ಕಂಡ ದುರಂತದ ಚಿತ್ರಗಳು, ಮತ್ತೆ ಪತ್ರಿಕೆಗಳಲ್ಲಿ ದುರಂತದ ಚಿತ್ರಗಳು.ಚಿತ್ರಗಳನ್ನು ಕಂಡವರೆಲ್ಲರ ಎದೆಯೊಳಗೆ ಈ ದುರಂತದ ಎಳೆಗಳು ಸ್ಥಾಯಿಯಾಗಿರದಿರದು.ಇಂತೆಲ್ಲಾ ಕ್ಷಣಗಳಲ್ಲಿ ಅಭಿಮತದ ಮುಖಪುಟ ಹೊಸ ಹೊಳಪನ್ನು ನೀಡಿತು. ಅದನ್ನು ರಚಿಸಿದ ಗುರುಬಾಳಿಗ ಬ್ಲಾಗಿಗರಿಗೆ ಅಪರಿಚಿತರಲ್ಲ. ಅವರು ಅತ್ಯಂತ ಸಂವೇದನಾಶೀಲ ಹೃದಯವಿರುವ ಒಬ್ಬ ಕಲಾವಿದ, ಬರಹಗಾರ.ಅವರ ಕತೆಗಳನ್ನು ಓದಿದವರಿಗೆ ಅವರ ಪ್ರತಿಭೆಯ ಸೆಳೆ ಕಂಡುಬರುತ್ತದೆ.ಮಹಾನಗರಗಳಲ್ಲಿ ಸಂವೇದನೆಯಿಂದ ಬದುಕುತ್ತಿರುವ ಇಂತಹವರಿಗೆ ಭಯೋತ್ಪಾದನೆಗಳ ನಡುವೆಯೂ ಬೆಳಕು ಕಂಡಾಗ ಸೃಜನಶೀಲತೆ ಮುಂದುವರಿಯುತ್ತದೆ.ಭಲೇ ಬಾಳಿಗ.
ಒಲವಿನಿಂದ

ಬಾನಾಡಿ

Friday, December 12, 2008

ಬೇರೆ ಮಾತಿಲ್ಲ. . .

ಇವತ್ತು ಈ ಲಿಂಕ್ ಕ್ಲಿಕ್ ಮಾಡಿ. ಅಷ್ಟೇ. ಮಾನಸ
ಬೇರೆ ಮಾತಿಲ್ಲ.

ಒಲವಿನಿಂದ
ಬಾನಾಡಿ

Wednesday, December 10, 2008

ಖಾಲಿ ಕೈಗಳಿಗೆ ಮೆಹಂದಿ ಯಾವಾಗಾ?

ಇಸ್ಸಾರ್ ಮತ್ತು ಅವನ ಕುಟುಂಬದವರು ನಮಗೆ ಪರಿಚಿತರಷ್ಟೇ. ಸ್ನೇಹಿತರೆನ್ನುವಷ್ಟು ಆತ್ಮೀಯರಲ್ಲ. ಸ್ನೇಹಿತರಲ್ಲ ಎನ್ನುವಷ್ಟೂ ದೂರದವರಲ್ಲ. ಹತ್ತಿರದಿಂದ ಕಂಡಾಗ ಮಾತಾಡುವ, ದೂರದಿಂದ ನೋಡಿದಾಗ ಕೈಬೀಸುವಷ್ಟು ನಮ್ಮೊಳಗಿನ ಸಂಬಂಧ. ಈದ್ ಮಿಲಾದ್ ದಿನ ಎಸ್‌ಎಂಎಸ್ ಕಳಿಸುವುದೋ, ಅಥವಾ ಕುರಾನ್‌ನ ಕೆಲವು ವೈಚಾರಿಕ ಸಂಗತಿಗಳನ್ನು ಸ್ಪಷ್ಟಪಡಿಸಲು ನಾನವನಿಗೆ ಫೋನ್ ಮಾಡುವುದೋ ಬಿಟ್ಟರೆ ನಮ್ಮೊಳಗೆ ಅಷ್ಟೇನು ನಂಟಿಲ್ಲ. ಆತನನ್ನು ದೂರದಿಂದ ಕಂಡ ನನಗೆ ಆತನೊಬ್ಬ ನಿರುಪದ್ರವಿ ಆದರೆ ನಿಷ್ಟ ಮುಸ್ಲಿಮನಾಗಿದ್ದ. ಸಮಯಕ್ಕೆ ಸರಿಯಾದ ಪ್ರಾರ್ಥನೆ, ರಂಜಾನ್ ಉಪವಾಸ, ಕುರಾನ್ ಪಠನ, ಅಸ್ಸಲಾಮ್ ಅಲೈಕುಂ ಎಂದು ಹತ್ತಿರದವರನ್ನು ವಂದಿಸುವುದು ಇತ್ಯಾದಿ ಮಾಡುತ್ತಿದ್ದ. ಕಳೆದ ವರ್ಷ ಈದ್ ಮಿಲಾದ್ ದಿನ ಸಿಕ್ಕವನೆ ನನ್ನನ್ನು ಎದೆಗಪ್ಪಿ ಈದ್ ಮುಬಾರಕ್ ಹೇಳಿದ್ದ. ನಾನು ಅವನಿಗೆ ಹಬ್ಬದ ಶುಭಾಶಯ ಹೇಳಿದ್ದೆ. ಮುಂದಿನ ಈದ್‌ಗೆ ನೀನು ನಮಗೆಲ್ಲ ಬಿರಿಯಾನಿ ತಿನಿಸಬೇಕೆಂದು ಹೇಳಿದ್ದೆ. ಒಪ್ಪಿದ್ದ.

ಇಸ್ಸಾರ್ ನಿನ್ನೆ ಮತ್ತೆ ಸಿಕ್ಕಿದ. ಜತೆಗೆ ಅವನ ಹೆಂಡತಿ ಮತ್ತು ಮಗಳು ಇದ್ದರು. ಕಿರಾಣಿ ಅಂಗಡಿಯ ಹತ್ತಿರ ಆತ ರಸ್ತೆ ದಾಟಿ ನನ್ನ ಕಡೆ ಬರುತ್ತಿದ್ದ. ನಾನು ಆತನ ಕಡೆ ಹೋಗುವವನಾಗಿದ್ದೆ. ನಾನು ದಾಟದೆ ಅಲ್ಲೇ ನಿಂತೆ. ಆತನನ್ನು ಮಾತಾಡಿಸೋಣ. ಬಕರಿ ಈದ್ ನಲ್ಲಿ ಎಷ್ಟು ಬಕರಿಗಳನ್ನು ತಿಂದ ಎಂದು ಕೇಳಲು. ಆಗ ನನಗೆ ಕಳೆದ ಈದ್ ನಲ್ಲಿ ಕೇಳಿದ ಬಿರಿಯಾನಿಯ ನೆನಪಾಗಿರಲಿಲ್ಲ. ಹೇಗಿದ್ದೀರಿ? ಅಂದ ಹಾಗೆ ಈದ್ ಮುಬಾರಕ್ ಹೊ ಎಂದು ಆತನ ಎದೆಗಪ್ಪಲು ಬಂದೆ. ಹೌದು ಎಂದಷ್ಟೆ ನುಡಿದ ಆತನ ಕೈ ನನ್ನ ಕೈಯ ಬೆರಳುಗಳನ್ನು ಅಮುಕುತ್ತಿದ್ದವು. ಆತನ ದೃಷ್ಟಿ ಎಲ್ಲೋ ಇತ್ತು. ಮನಸ್ಸಿಗೆ ತುಂಬಾ ನೋವಾದಂತೆ ಮುಖ ಹೇಳುತ್ತಿತ್ತು. ಇಸ್ಸಾರ್ ಎಲ್ಲಾ ಆರಾಮ ತಾನೆ ಎಂದೆ. ಹೌದು ಎಂದಷ್ಟೆ ಹೇಳಿದ. ಆತನ ಕೈ ನನ್ನ ಕೈಯನ್ನು ಬಿಟ್ಟಿರಲಿಲ್ಲ. ಆತನ ಹೆಂಡತಿ ಮತ್ತು ಮಗಳು ಹತ್ತಿರ ಬಂದು ನಿಂತರು. ಮತ್ತೇನು ವಿಶೇಷ? ಎಂದೆ. ಆತ ಈ ಜಗತ್ತಿನಲ್ಲಿ ಏನೆಲ್ಲಾ ಆಗುತ್ತದೆ ನೋಡಿ ಎಂದು ನಿಟ್ಟುಸಿರು ಬಿಟ್ಟ. ಏನಾಯಿತು ಎಂದೆ.

ಮುಂಬಯಿ ದುರಂತದ ಬಗ್ಗೆ ಇಸ್ಸಾರ್ ದುಃಖಿತನಾಗಿದ್ದ. ಬಹಳಷ್ಟು ಬೇಸರ ಹೊಂದಿದ್ದ. ವಿಟಿ ಯಲ್ಲಾಗಲಿ ತಾಜ್ ನಲ್ಲಾಗಲಿ ಭಯೋತ್ಪಾದಕರು ದಾಳಿ ಮಾಡಿದಾಗ ಅಲ್ಲಿ ಎಷ್ಟು ಮುಸ್ಲಿಮರಿದ್ದಾರೆ, ಎಷ್ಟು ಕ್ರಿಶ್ಚಿಯನರಿದ್ದಾರೆ, ಎಷ್ಟು ಹಿಂದೂಗಳಿದ್ದಾರೆ ಅಥವಾ ಎಷ್ಟು ಯಹೂದಿಯರಿದ್ದಾರೆ ಎಂದು ಯಾರು ಲೆಕ್ಕ ಹಿಡಿದಿಲ್ಲ. ಅಥವಾ ಭಯೋತ್ಪಾದಕರ ಸೆರೆಯಲ್ಲಿ ಸಿಕ್ಕವರನ್ನು ಬಿಡಿಸುವಾಗ ಯಾರು ಯಾವ ಧರ್ಮದವರು ಎಷ್ಟಿದ್ದಾರೆ ಎಂದು ಲೆಕ್ಕ ನೋಡಿಲ್ಲ.

ದೇವರ ಆದೇಶದಂತೆ ಪ್ರವಾದಿ ಅಬ್ರಹಾಮನು ತನ್ನ ಮಗ ಇಸ್ಮಾಯಿಲ್ ನನ್ನು ಬಲಿಕೊಟ್ಟ ದಿನವನ್ನು ಮಸ್ಲಿಮರು ಆಡು, ಕುರಿ ಯಾ ಹೋರಿಯನ್ನು ಬಲಿಕೊಟ್ಟು ಆಚರಿಸುವ ಹಬ್ಬವೇ ಬಕರಿ ಈದ್. ಈ ಬಾರಿ ಮುಸ್ಲಿಮರು ಬಕರಿ ಈದ್ ದಿನ ಹೋರಿಯನ್ನು ಬಲಿಕೊಡಬಾರದೆಂದು ಭಾರತದ ಮುಸ್ಲಿಮ್ ನಾಯಕರು ಎಲ್ಲರಿಗೂ ಕರೆ ನೀಡಿದ್ದರು. ಅಲ್ಲದೆ ಮುಂಬಯಿಯಲ್ಲಿ ಬಲಿಯಾದ ಭಯೋತ್ಪಾದಕರ ದಫನಕ್ಕೆ ಅಲ್ಲಿನ ಯಾವುದೇ ಮುಸ್ಲಿಮ್ ಸ್ಮಶಾನಗಳು ಅವಕಾಶ ಮಾಡಿಲ್ಲ. ಇವೆಲ್ಲ ಭಾರತದಂತಹ ದೇಶದಲ್ಲಿ ವಿಶೇಷ ಮಹತ್ವ ಪಡೆಯಬೇಕಾದ ವಿಷಯಗಳಲ್ಲ. ಆದರೆ ಮುಸಲ್ಮಾನರ ಬಗ್ಗೆ ಅತಿ ಸಂದೇಹ ಪಡುವಾಗ ಇವೆಲ್ಲ ಸಣ್ಣ ವಿಷಯಗಳಾಗುವುದಿಲ್ಲ. ಮುಸ್ಲಿಮ್ ವರ್ಗದ ಕೆಲವೊಂದು ಗುಂಪು ದಾರಿ ತಪ್ಪಿ ಹೋಗಿದೆ. ಅದರಲ್ಲಿ ಸಂದೇಹವಿಲ್ಲ. ಅವರನ್ನು ಸರಿದಾರಿಗೆ ತರಲು ಮುಸ್ಲಿಂ ಸಮಾಜ ಅಥವಾ ಭಾರತದ ಸಾಮಾಜಿಕ ವ್ಯವಸ್ಥೆಯಾಗಲಿ, ರಾಜಕೀಯ ವ್ಯವಸ್ಥೆಯಾಗಲಿ ಯಾವುದೇ ಕೆಲಸ ಮಾಡುತ್ತಿಲ್ಲ. ಅದಕ್ಕಾಗಿ ಸಮಗ್ರ ಮುಸ್ಲಿಂ ಸಮಾಜವೇ ಉಳಿದವರ ಸಿಟ್ಟಿಗೆ ಕಾರಣವಾಗಿದೆ. ಅವರನ್ನು ಪಾಕಿಸ್ಥಾನಿಗಳೆಂದು ಕರೆಯಲಾಗುತ್ತದೆ. ಭಾರತದ ಮುಖ್ಯವಾಹಿನಿಯಿಂದ ಹೊರಹೋಗುತ್ತಿದ್ದ ಮುಸ್ಲಿಂ ಸಮಾಜ ಮುಂಬಯಿ ದುರಂತದ ನಂತರ ಒಂದಾಗುವುದೇ? ಚಿಕ್ಕ ಪುಟ್ಟ ವೈಯಕ್ತಿಕ ಗಲಭೆಗಳಿಗೆ ಕೋಮು ಗಲಭೆಯ ಬಣ್ಣ ಲೇಪಿಸಲಾಗುವುದೇ? ಕಾದು ನೋಡಬೇಕು.

ನಾವು ಬೀಳ್ಕೊಡುವಾಗ ಇಸ್ಸಾರ್ ನ ಮಗಳು ಟಾಟಾ ಮಾಡಿದಳು. ಅವಳೇನು ಹೊಸ ಬಟ್ಟೆ ಹಾಕಿರಲಿಲ್ಲ. ಬಕ್ರೀದ್‌ಗೆ ಅವಳ ಕೈಯಲ್ಲಿ ಮದುರಂಗಿಯ ಬಣ್ಣವಿರಲಿಲ್ಲ. ಹುಡುಗಿಯ ಖಾಲಿ ಖಾಲಿ ಕೈ ನನ್ನನ್ನು ಬಹಳ ದೂರ ಕೊಂಡೊಯ್ಯಿತು.

Tuesday, December 9, 2008

ಹೊಸವರ್ಷದ ನಿರೀಕ್ಷೆಯಲ್ಲಿ ....


ಡಿಸೆಂಬರ ೩೧ರ ರಾತ್ರಿ ಮಂಗಳೂರಿನ ಓಣಿಗಳಲ್ಲಿ ಮಕ್ಕಳು ಯುವಕರು ಎಲ್ಲಾ ಸೇರಿ 'ಅಜ್ಜೆರ್ ಸೈತೆರ್... ಅಜ್ಜೆರ್ ಸೈತೆರ್ ...' ಎಂದು ಖುಷಿಯಿಂದ ಕುಣಿಯುತ್ತಾ ಹುಲ್ಲಿನಿಂದ ಮಾಡಿದ ವ್ಯಕ್ತಿಯೊಬ್ಬನಿಗೆ ಹಳೆಯ ಅಂಗಿಯೊಂದನ್ನು ಹಾಕಿ ಅವನನ್ನು ಎತ್ತಿಕೊಂಡು ಹೋಗುತ್ತಿದ್ದೆವು. ಓಣಿಯಲ್ಲಿದ್ದ ಮನೆಯವರೆಲ್ಲರೂ ಹೊರಬಂದು ಒಮ್ಮೆ ನೋಡಿದಾಗ ಅಕ್ಕಾ, ಅಣ್ಣಾ, ಅಜ್ಜ ಸತ್ತರು ಅಜ್ಜ ಸತ್ತರು ಎಂದು ಕುಣಿದಾಡುತ್ತಿದ್ದೆವು. ಅಜ್ಜನನ್ನು ಓಣಿಯ ಒಂದು ಕೊನೆಗೆ ಕೊಂಡುಹೋಗಿ ಅಲ್ಲಿ ಅವನನ್ನು ಸುಟ್ಟು ಕುಣಿಯುತ್ತಿದ್ದೆವು. ಡಿಸೆಂಬರ್‌ನ ಕಚಗುಳಿಯಿಡುವ ಚಳಿಗೆ ಮೈ ಬೆಚ್ಚಾಗುತ್ತಿತ್ತು. ನಂತರ ಎಲ್ಲರಿಗೂ ಹೊಸ ವರ್ಷದ ಶುಭಾಶಯ ಹೇಳಿ ನಮ್ಮ ನಮ್ಮ ಮನೆಗೆ ವಾಪಾಸಾಗುತ್ತಿದ್ದೆವು. ಅಜ್ಜ ಅಂದರೆ ನಮಗೆಲ್ಲ ಹಳೆಯವರ್ಷ. ಆತ ಸತ್ತ. ಅಂದರೆ ಈ ವರ್ಷ ಮುಗಿಯಿತು. ಇನ್ನು ಹೊಸವರ್ಷ. ಹಳೆಯದೆಲ್ಲವೂ ಬೇಡಎನ್ನುವ ವಿಚಾರದಲ್ಲಿ ಅಜ್ಜನನ್ನು ಸುಡುತ್ತಿದ್ದೆವು. ಈ ಹೊಸವರ್ಷಾಚರಣೆಯ ಪದ್ಧತಿ ಈಗೀಗ ಕಡಿಮೆಯಾಗಿದೆಯಂತೆ. ಬೆಂಗಳೂರಿನಿಂದ ರಾಜೇಶ ಈ ಸಲ ಹೊಸವರ್ಷಕ್ಕೆ ಮಂಗಳೂರಿಗೆ ಹೋಗ್ತಾನೆ ಅಂದಾಗ ಅವನಿಗೆ ಕೇಳಿದೆ ಅಜ್ಜನನ್ನು ಸುಡಲೋ ಎಂದು. ಅಜ್ಜನನ್ನು ಸುಡುವ ಕ್ರಮ ಈಗ ಎಲ್ಲಿ ಎಂದು ಆತನೂ ಸ್ವಲ್ಪ ದುಃಖಗೊಂಡ. ಡಿಸೆಂಬರ್ ತಿಂಗಳು ನಮಗೆ ಬಹಳ ಖುಷಿಯ ತಿಂಗಳು. ನಮ್ಮ ಕ್ರಿಶ್ಚಿಯನ್ ಗೆಳೆಯರು, ಗೆಳತಿಯರು ಕ್ರಿಸ್‌ಮಸ್ ಸಂಭ್ರಮದಲ್ಲಿರುವಾಗ ನಮಗೂ ಅದರ ಸಂಭ್ರಮ. ಮನೆಯಲ್ಲಿ ತಂದಿಡುವ ಕ್ರಿಸ್‌ಮಸ್ ಮರ, ಅದರ ಸುತ್ತ ಸಣ್ಣ ಸಣ್ಣ ಬಲ್ಬ್‌ಗಳು. ಎಲ್ಲಕ್ಕಿಂತ ಹೆಚ್ಚಾಗಿ ಕೇಕ್‌ಗಳು. ಮಂಗಳೂರಿನ ಕೆಲವೊಂದು ಬೇಕರಿಗಳು ವಿವಿಧ ಆಕಾರದ, ವಿವಿಧ ಡಿಸೈನ್‌ನ ಕೇಕ್‌ಗಳನ್ನು ಮಾಡಿ ಪ್ರದರ್ಶಿಸುತ್ತಿದ್ದರು. ಉದಯವಾಣಿಯಲ್ಲಿ ಅದರ ಫೋಟೋ ಕೂಡ ಬರುತ್ತಿತ್ತು.
ಕೆಲವಾರು ವರ್ಷಗಳಿಂದ ನಮ್ಮ ಕಾಲೋನಿಗಳಲ್ಲಿ ನಡೆಯುವ ಹೊಸವರ್ಷದ ಗಾಲಾಗಳಲ್ಲಿ ಕಂಠಪೂರ್ತಿ ಕುಡಿದು ಮರುದಿನ ತಲೆನೋವಿನ ಹೊಸವರ್ಷದ ಹೊಸದಿನವನ್ನು ಆರಂಭಿಸುತ್ತಿದ್ದೇವೆ. ಕಳೆದ ವರ್ಷ ಟಿವಿ ಮುಂದೆ ಕುಳಿತು ಹೊಸವರ್ಷವನ್ನು ಆಚರಿಸಿದ ನಾವು ಈ ವರ್ಷ ಏನಾದರೂ ಹೊಸದು ಮಾಡಬೇಕು ಎಂದುಕೊಂಡಿದ್ದೆವು. ಮೂರ್ನಾಲ್ಕು ತಿಂಗಳ ಮೊದಲೇ ನಮ್ಮ ಸ್ನೇಹಿತ ವಿಕಾಸ್ ಮುಂಬಯಿಗೆ ಹೋಗೋಣ ಎಂದಿದ್ದ. ಅವನ ಹೆಂಡತಿ ಜೆಟ್ ಏರ್‌ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಟಿಕೇಟು ವ್ಯವಸ್ಥೆ ಆತನೇ ಮಾಡ್ತೇನೆ ಎಂದಿದ್ದ. ಗ್ಲೋಬಲ್ ಕಾನ್‌ಫರೆನ್ಸ್ ಒಂದು ಜನವರಿ ೧೦ರಿಂದ ಆರಂಭಮಾಡಬೇಕಾಗಿದ್ದುದರಿಂದ ನಾನು ಅದರ ಕೆಲಸದಲ್ಲಿ ಬಿಝಿ ಇರುವೆನೆಂದರೂ ಆತ ಬಹಳಷ್ಟು ಹುರಿದುಂಬಿಸಿದ್ದಾನೆ. ಜೆ.ಡಬ್ಲ್ಯೂ. ಮ್ಯಾರೆಟ್‌ನಲ್ಲಿ ಕತ್ರಿನಾ ಕೈಫ್ ಡಾನ್ಸ್ ಫಿಕ್ಸ್ ಮಾಡಿದ್ದಾರೆ ಮುಂತಾದ ವಿವರ ನೀಡಿ ಜೀವಮಾನದಲ್ಲಿ ಒಮ್ಮೆಯಾದರೂ ಬಾಲಿವುಡ್‌ನ ಒಂದು ಲೈವ್ ಕಾರ್ಯಕ್ರಮ ನೋಡಲು ನನ್ನನ್ನು ತಯಾರಿಗೊಳಿಸುತ್ತಿದ್ದ ನಮ್ಮ ವಿಕಾಸ್. ಈ ವರ್ಷ ಬೋನಸ್ ಹಣ ಬಂದಾಗ ಅದನ್ನು ಖರ್ಚುಮಾಡದೇ ಹೊಸವರ್ಷದ ಸಿಲಬ್ರೇಶನ್‌ಗೆ ಉಳಿಸು ಎಂದು ಅವನು ನನಗೆ ಖರ್ಚಿನ ಕುರಿತು ತಲೆಕೆಡಿಸದಂತಹ ಸಲಹೆಯನ್ನು ಕೊಟ್ಟಿದ್ದ. ಲೈವ್ ಕಾರ್ಯಕ್ರಮಗಳಿಗಿಂತ ಅವನ್ನು ಟಿವಿಯಲ್ಲಿ ನೋಡುವುದು ನಮಗೆ ಸಾಕು ಎಂಬುದು ನನ್ನ ಅಭಿಮತವಾಗಿತ್ತು.
ನಿರಂತರ ಅರುವತ್ತು ಗಂಟೆಗಳ ಲೈವ್ ಭಯೋತ್ಪಾದಕ ಕೃತ್ಯದ ಬಳಿಕ ನಮ್ಮ ಮುಂಬಯಿ ಕಾರ್ಯಕ್ರಮ ರದ್ದಾಗಿದೆ. ಕತ್ರಿನಾ ಕೈಫ್ ಕೂಡಾ ತನ್ನ ಕಾರ್ಯಕ್ರಮ ರದ್ದುಗೊಳಿಸಿದ್ದಾಳೆ ಎಂದು ತಿಳಿದುಬಂದಿದೆ. ಮುಂಬಯಿಯನ್ನು ದ್ವೇಷಿಸುವವರು ಭಯೋತ್ಪಾದಕರಲ್ಲದೇ ಇನ್ಯಾರು ಅದನ್ನು ದ್ವೇಷಿಸಲಾರರು. ಕಳೆದ ವರ್ಷ ಗಣೇಶ ವಿಸರ್ಜನೆಯಂದು ನಾನು ಸಂಜೆ ಹೊತ್ತಿಗೆ ಮುಂಬಯಿ ತಲುಪಿ ಏರ್‌ಪೋರ್ಟ್‌ನಿಂದ ನಗರವಿಡೀ ತುಂಬಿದ್ದ ಗಣೇಶ ಮೆರವಣಿಗೆಯ ನಡುವೆ ರಿಕ್ಷಾವೊಂದರಲ್ಲಿ ನಮ್ಮ ಹೋಟೆಲ್ ತಲುಪಿದೆ. ಮೆರವಣಿಗೆಯ ಮಧ್ಯದಲ್ಲಿ ಹೋಗಲು ಟ್ಯಾಕ್ಸಿಗಿಂತ ರಿಕ್ಷಾವೇ ಮೇಲು ಎಂದು ಹೇಳಿದ ನಿತಿನ್ ಮರುದಿನ ವಂದಿಸಿದೆ. ಆ ಮೆರವಣಿಗೆಯ ಸಂಬ್ರಮ ಉತ್ಸಾಹ ಕಂಡು ನಾನು ನಮ್ಮ ಊರಿನ ಜಾತ್ರೆಗಳ ನೆನಪು ಮಾಡಿಕೊಂಡೆ. ಎಲೆ ಮುಂಬಯಿ ನಾವು ನಿನ್ನನ್ನು ಪ್ರೀತಿಸುತ್ತಿದ್ದೆವೆ. ಬಹಳಷ್ಟು. ಗೇಟ್‌ವೇ ಎದುರು ನಿಂತು ಆ ತಾಜಮಹಲು ಹೋಟೆಲಿನ ಹಿನ್ನೆಲೆಯಲ್ಲಿ ತೆಗೆದ ಚಿತ್ರಗಳನ್ನು ಮತ್ತೆ ಮತ್ತೆ ನೋಡುತ್ತಿದ್ದೇನೆ.

ಸಿಡಿಲು

ಒಂದು ಹಳತ್ತಾಗುತ್ತಿರುವ ಜೋಕು: ಹಿಂದಿಯಲ್ಲಿ ಮಾತಾಡುವಾಗ ಮುಂಬಯಿಯನ್ನು ಸ್ತ್ರೀಲಿಂಗವಾಗಿಯೂ ದೆಹಲಿಯನ್ನು ಪುಲ್ಲಿಂಗವಾಗಿಯೂ ಯಾಕೆ ಕರೆಯುತ್ತಾರೆ? ಮುಂಬಯಿಯಲ್ಲಿ ಗೇಟ್ ವೇ ಆಫ್ ಇಂಡಿಯಾ ಇದೆ. ದೆಹಲಿಯಲ್ಲಿ ಕುತುಬ್ ಮಿನಾರ ಇದೆ!

Sunday, December 7, 2008

ಬಿಲದೊಳಗಿಂದ ಹೊರಬಂದ ಇಲಿಗಳು


ಕಂಪ್ಯೂಟರ್ ಬಳಸುವವರು ಮೌಸ್ ಬಳಸುವುದು ಸಾಮಾನ್ಯ. ಐಟಿ ನಗರವಾದ ಬೆಂಗಳೂರಿನಲ್ಲಿ ಬಹಳಷ್ಟು ಇಲಿಗಳು ಅರ್ಥಾತ್ ಮೌಸ್‌ಗಳು ಇವೆ. ಆದರೆ ಬೆಂಗಳೂರು ನಗರದಂತೆ ಬಿಹಾರವನ್ನು ಐಟಿ ನಗರವನ್ನಾಗಿ ಮಾಡಲು ಹೊರಟ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ ಅವರು ಕೆಲದಿನಗಳ ಹಿಂದೆ ನಿಜವಾದ ಇಲಿಗಳ ಕುರಿತು ವಿವಾದಕ್ಕೆ ಸಿಕ್ಕಿದ್ದರು. ಬಿಹಾರದ ಅತಿ ಬಡವರು ಬಿಲಗಳಲ್ಲಿ ಅಡಗಿಕೊಂಡಿರುವ ಇಲಿಗಳನ್ನು ಹಿಡಿದು ಆಹಾರವನ್ನಾಗಿ ತಿನ್ನುತ್ತಿದ್ದರು. ಅಂತಹ ಜನರಿಗೆ ಇಲಿ ಖಾದ್ಯವನ್ನು ಸರಕಾರವೇ ಇಲಿ ಫಾರ್ಮ್‌ಗಳನ್ನು ಸ್ಥಾಪಿಸಿ ಸರಬರಾಜು ಮಾಡಬೇಕೆಂಬ ಕೋರಿಕೆ ಇತ್ತು. ಸರಕಾರದ ಆದೇಶಕ್ಕೆ ಜನ ಕಾದಿದ್ದರು. ಇಲಿ ಫಾರ್ಮ್ ಮಾಡದೇ ಇಲಿಗಳನ್ನು ಸಾಕಲೆಂದು ನಿಗದಿಪಡಿಸಿದ ಹಣವನ್ನು ತಮ್ಮ ಜೇಬೆಂಬ ಬಿಲದೊಳಗೆ ಇಳಿಬಿಟ್ಟು ಸುಖಿಸುವ ಕನಸನ್ನು ಕಟ್ಟಿಕೊಂಡಿದ್ದರು. ಆದರೆ ನಿನ್ನೆ ಶನಿವಾರ ನಿತೀಶ್ ಕುಮಾರ್ ಅವರು ಬಿಹಾರದ ಅತಿ ಬಡವರಿಗಾಗಿ ಇಲಿಫಾರ್ಮ್ ಮಾಡುವ ಯೋಚನೆಯನ್ನು ತಮ್ಮ ತಲೆಯಿಂದ ಹಾಗೂ ಸರಕಾರದ ಕಡತದಿಂದ ತೆಗೆದುಹಾಕಿದ್ದಾರೆ. ಇನ್ನು ಹೆಚ್ಚು ಹೆಚ್ಚು ಕಂಪ್ಯೂಟರ್ ಮೌಸ್ ಗಳನ್ನು ಬಿಹಾರದಲ್ಲಿ ಸಾಕುತ್ತಾರೋ ನೋಡಬೇಕು. ಇಲಿ ಅಥವಾ ಹೆಗ್ಗಣ ತಿನ್ನುವುದು ಬರೆ ಬಿಹಾರದಲ್ಲಿ ಅಲ್ಲ. ನಮ್ಮೂರಿನಲ್ಲೊಮ್ಮೆ ದೊಡ್ಡ ಹೆಗ್ಗಣ ನೋಡಿದಾಗ ನನ್ನಮ್ಮ ನನಗೆ ಹೇಳಿದ ಮಾತು ನೆನಪಿಗೆ ಬರುತ್ತಿದೆ: ಇದನ್ನು ಹಿಂದೆ ಆಗಿದ್ದರೆ ಯಾರದರೂ ತೆಗೆದುಕೊಂಡು ಹೋಗಿ ತಿನ್ನುತ್ತಿದ್ದರು. ಈಗ ಹೆಗ್ಗಣ ತಿನ್ನುವವರು ಯಾರೂ ಇಲ್ಲ ಎಂದು. ಸಣ್ಣ ಸಣ್ಣ ಪ್ರಾಣಿಗಳಾದ ಹೆಗ್ಗಣ, ಮೊಲ, ಆಮೆ, ಕಾಡುಕೋಳಿ, ಅಳಿಲು, ಬಾವಲಿ, ಕೆರೆಯ ಸಣ್ಣ ಮೀನು, ಕಾಡು ಹಂದಿ, ಬೆರು, ಇತ್ಯಾದಿ ಪ್ರಾಣಿಗಳನ್ನು ಜನರು ಬೇಟೆಯಾಡಿ ತಿನ್ನುತ್ತಿದ್ದ ದಿನಗಳು ಇಂದಿಗಿಂತ ಸುಮಾರು ನಲ್ವತ್ತು ವರ್ಷಗಳ ಹಿಂದೆ ಇತ್ತು ಎಂದು ನನ್ನ ಅಮ್ಮ ಹೇಳುತ್ತಾರೆ. ಕೋಳಿ, ಕುರಿ, ಆಡು, ಕೋಣ, ಹಂದಿಯ ಮಾಂಸ ತಿನ್ನುವ ಆಧುನಿಕ ನಗರದ ಮಂದಿಯೂ ಒಮ್ಮೊಮ್ಮೆ ಇಂಥ ಕಾಡುಪ್ರಾಣಿಗಳ ಮಾಂಸ ತಿನ್ನಲು ಹಳ್ಳಿಗಳಿಗೋ, ನಗರದಿಂದ ದೂರವಿರುವ ರಿಸಾರ್ಟ್‌ಗಳಿಗೋ ಹೋಗುತ್ತಾರೆ. ತಿತ್ತಿಭ ಹಕ್ಕಿಯ ಮಾಂಸ ತಿನ್ನಲು ನಗರಗಳಲ್ಲಿ ಕೆಲವು ಮಂದಿಯ ಗುಂಪೇ ಇದೆ. ಅವರಿಗೆ ಈ ಅಪರೂಪದ ಹಕ್ಕಿಯ ಮಾಂಸ ಎಲ್ಲಿ ಸಿಗುತ್ತದೆ, ಯಾವ ಕಾಲದಲ್ಲಿ ಸಿಗುತ್ತದೆ ಇತ್ಯಾದಿ ವಿವರಗಳು ಗೊತ್ತಿರುತ್ತವೆ. ಕೆಲವೊಮ್ಮೆ ಸರಕಾರಿ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿ ಗುಟ್ಟು ರಟ್ಟಾಗದಂತೆ ನೋಡಿಕೊಳ್ಳುತ್ತಾರೆ. ವಿಯೇಟ್ನಾಂ, ಚೀನಗಳಲ್ಲಿ ಅವರ ಹೊಸ ವರ್ಷಕ್ಕೆ ಇಲಿಮಾಂಸದ ಅಡುಗೆ ಅಗತ್ಯವೆಂದು ತಿಳಿದುಕೊಂಡಿದ್ದೇನೆ. ಚೀನಿಯರ ಇಲಿ ವರ್ಷವೂ ಇದೆಯಲ್ಲ. ಅಂದಹಾಗೆ ಇಲಿಮಾಂಸದಲ್ಲಿ ಅತ್ಯಂತ ಹೆಚ್ಚು ಪ್ರೋಟೀನ್ ಇರುತ್ತದೆಯಂತೆ. ಇಲಿಯ ಪ್ರೊಟೀನ್ ನಿಂದಲೇ ಇನ್ಸುಲಿನ್ ತಯಾರಿಸಿ ಸಕ್ಕರೆ ಕಾಯಿಲೆಯವರಿಗೆ ನೀಡುತ್ತಾರೆ ಎಂದರೆ ಸಕ್ಕರೆ ಕಾಯಿಲೆ ಇರುವವರು ಹೆಚ್ಚು ಇಲಿಮಾಂಸ ತಿನ್ನಬಹುದು ಅಲ್ಲವೇ?


ಸಿಡಿಲು


ನಾಗಾಲ್ಯಾಂಡ್‌ನ ಜನ ನಾಯಿ ತಿನ್ನುತ್ತಾರೆ ಎಂದು ನನ್ನ ವೃತ್ತಿ ಭಾಂಧವ ನನಗೆ ತಿಳಿಸಿದ್ದ. ಅದರ ಮಾಂಸದ ರುಚಿ ಹೇಗಿರುತ್ತದೆ? ಎಂದು ನಾನು ಕೇಳಿದಕ್ಕೆ ಅವನು ಕೊಟ್ಟ ಉತ್ತರ ಹೀಗಿದೆ. ಮುಖ್ಯವಾಗಿ ನಾಯಿಯ ಮಾಂಸವನ್ನು ಅಲ್ಲಿನ ಜನ ಇಷ್ಟ ಪಡುವುದಿಲ್ಲ. ಆದರೆ ಅದರ ಬಿರಿಯಾನಿ ಅವರಿಗೆ ಬಲು ಪ್ರೀತಿ. ಅದು ಹೇಗಿರುತ್ತದೆ? ನನ್ನ ಪ್ರಶ್ನೆ. ಅವನು ರಿಸಿಪಿಯನ್ನೇ ವಿವರಿಸಿದ. ನೀವು ಸಾಯಿಸಬೇಕಾದ ನಾಯಿಯನ್ನು ಒಂದೆರಡು ದಿನ ಯಾವುದೇ ಆಹಾರ ಕೊಡದೆ ಅದರ ಹೊಟ್ಟೆ ಖಾಲಿಯಾಗಿ ಹಸಿವಿನಿಂದ ನರಳುವಂತೆ ಮಾಡಿರಿ. ನೀವು ನಾಯಿಯನ್ನು ಕೊಲ್ಲುವುದಕ್ಕೆ ಒಂದೆರಡು ಗಂಟೆ ಮೊದಲು ಅದಕ್ಕೆ ನಾಗಲ್ಯಾಂಡ್‌ನಲ್ಲಿಯೇ ಬೆಳೆಯುವ ಅತ್ಯಂತ ಉತ್ತಮವೆಂದು ಪರಿಗಣಿಸಲಾದ ಅಕ್ಕಿಯನ್ನು ತಿನ್ನಿಸಿ. ಹಸಿವಿನಿಂದ ನರಳುತ್ತಿರುವ ನಾಯಿ ಅಕ್ಕಿಯನ್ನು ಗಬಗಬನೆ ತಿನ್ನುವುದು. ನಾಯಿ ಅಕ್ಕಿ ತಿಂದ ನಂತರ ಒಂದೆರಡು ಗಂಟೆಗಳಲ್ಲಿ ಆ ನಾಯಿಯನ್ನು ಸಾಯಿಸಿರಿ. ಅದರ ಹೊಟ್ಟೆಯನ್ನು ಸೀಳಿ ಅದರಲ್ಲಿರುವ ಅಕ್ಕಿಯನ್ನು ಬೇರ್ಪಡಿಸಿರಿ. ನಾಯಿಯ ಹೊಟ್ಟೆಯೊಳಗಿನ ವಿವಿಧ ರಸಗಳಿಂದ ಕೂಡಿದ ಈ ಅಕ್ಕಿಯನ್ನು ಹಬೆಯಿಂದ ಬೇಯಿಸಿ. ಅದು ಅನ್ನವಾಗುತ್ತದೆ. ಅದರ ರುಚಿಯನ್ನು ಸವಿದವರೇ ಬಲ್ಲರು.ಇದು ನಾನು ನನ್ನ ವೃತ್ತಿಯ ಆರಂಭದಲ್ಲಿ ನನ್ನ ವೃತ್ತಿ ಭಾಂಧವರೊಬ್ಬರಿಂದ ಕೇಳಿದ ಕಥೆ. ನನಗೆ ನಂಬಲು ಆಗುತ್ತಿಲ್ಲ. ಅವರು ನನ್ನನ್ನು ಫೂಲ್ ಮಾಡಲು ಹೇಳಿದ್ದಾರೋ ಅಥವಾ ನಿಜವಾಗಿಯೂ ಹಾಗೆಯೇ ಆಗುತ್ತದೋ? ನಾನಿನ್ನೂ ನಾಗಾಲ್ಯಾಂಡ್‌ಗೆ ಹೋಗಿಲ್ಲ. ಹೋದರೆ ಅಲ್ಲಿನ ಜನರನ್ನು ನೋಡಿ ಅಥವಾ ಕೇಳಿ ತಿಳಿದುಕೊಳ್ಳುವ ಕುತೂಹಲವಿದೆ ಮತ್ತು ಅಲ್ಲಿ ನಾನು ಅನ್ನವನ್ನು ಉಣ್ಣಲಾರೆ ಎಂಬ ಭಯವೂ ಇದೆ.

Friday, December 5, 2008

ಶಿಖರದಿಂದ ಕಣಿವೆಗೆ

ಪೆಟ್ರೋಲ್ ಬೆಲೆ ಐದು ರೂ ಕಡಿಮೆಯಾಗಿದೆ ಎಂಬ ಸುದ್ದಿಯನ್ನು ತೈಲ ಉದ್ಯಮದ ಜತೆ ಸಂಬಂಧ ಇಟ್ಟಿರುವ ಗೆಳೆಯನೊಡನೆ ಹಂಚಿಕೊಂಡಾಗ 'ಈ ಸರಕಾರ ತನ್ನ ಹೊರೆಯನ್ನು ಬರಲಿರುವ ಸರಕಾರದ ಮೇಲೆ ಹೊರಿಸುತ್ತಿದೆ' ಎಂದನು. ಪೆಟ್ರೋಲ್ ಬೆಲೆ ಕುರಿತು ಗೊತ್ತಿರುವವರು ಆಡುವ ಮಾತಿದು.

ಜನಸಾಮಾನ್ಯರಿಗೆ ಪೆಟ್ರೋಲ್ ಬೆಲೆ ಒಂದು ರೂ ಕಡಿಮೆಯಾದರೂ ಖುಷಿಯ ವಿಚಾರ. ಪೆಟ್ರೋಲ್, ಡಿಸೀಲ್, ಕೆರೋಸಿನ್, ಎಲ್‌ಪಿಜಿಯ ಉತ್ಪಾದನ ಮೂಲವಾದ ಕಚ್ಚಾತೈಲದ ಬೆಲೆ ಒಂದು ಬ್ಯಾರೆಲ್‌ಗೆ ೫೦ ಡಾಲರ್‌ನಿಂದ ೧೪೮ ಡಾಲರ್‌ಗೇರಿತ್ತು ಮತ್ತೆ ಈಗ ಸುಮಾರು ೪೮ ಡಾಲರ್‌ಗೆ ಇಳಿದಿದೆ. ಈ ನಡುವೆ ಭಾರತದಲ್ಲಿ ಪೆಟ್ರೋಲ್ ಮತ್ತು ಡಿಸೀಲ್ ಬೆಲೆ ಈ ವರ್ಷದ ಜೂನ್‌ನಲ್ಲಿ ರೂ ಐದು ಮತ್ತು ಮೂರು ಹೆಚ್ಚಾಗಿತ್ತು. ಅದೂ ತೈಲ ಕಂಪನಿಗಳು ನಷ್ಟ ಅನುಭವಿಸಿ ತಮ್ಮ ಅಸ್ತಿತ್ವವನ್ನೇ ಕಳಕೊಳ್ಳುವ ಭಯವನ್ನು ವ್ಯಕ್ತಪಡಿಸಿದಾಗ ಸರಕಾರ ತನ್ನ ಕೈಯನ್ನು ಸಡಿಲಿಸಿತು. ಕಚ್ಚಾತೈಲದ ಬೆಲೆ ಪರ್ವತ ಶಿಖರಕ್ಕೇರಿ ಮತ್ತೆ ಕಣಿವೆಗಿಳಿದಿದೆ. ಆದರೆ ಭಾರತದಲ್ಲಿ ತೈಲ ಬೆಲೆಗಳ ಏರುಪೇರು ಆಗಿಲ್ಲ. ಈಗ ಆಗುವುದು ಬಿಟ್ಟರೆ.


ನಾವು ದಿನನಿತ್ಯ ಉಪಯೋಗಿಸುವ ಪೆಟ್ರೋಲ್ ಡಿಸೀಲ್ ಬೆಲೆ ನಿಜ ಬೆಲೆಯೆ ಅಲ್ಲ. ಕಚ್ಚಾ ತೈಲದಿಂದ ಒಂದು ಲೀಟರ್ ಪೆಟ್ರೋಲ್ ಉತ್ಪಾದಿಸಲು ಭಾರತದ ತೈಲ ಕಂಪನಿಗಳಿಗೆ ಸುಮಾರು ಇಪ್ಪತ್ತೈದು ರೂ ಖರ್ಚು ತಗಲಿದರೆ ಉಳಿದ ಇಪ್ಪತ್ತೈದು ರೂ ನಾವು ನೇರವಾಗಿ ಸರಕಾರಕ್ಕೆ ತೆರಿಗೆ ರೂಪದಲ್ಲಿ ನೀಡುತ್ತೇವೆ. ಭಾರತದ ಆರ್ಥಿಕ ವ್ಯವಸ್ಥೆಯ ಅಡಿಪಾಯವೇ ಈ ತೈಲ ಕಂಪನಿಗಳು ಜನಸಾಮಾನ್ಯರಿಂದ ಪಡೆದು ನೀಡುವ ತೆರಿಗೆ ಹಣ. ಎಡ ಪಕ್ಷಗಳು ಹಣಕಾಸು ಸಚಿವರಿಂದ ಕೇಳುತ್ತಿದ್ದುದು ಇದನ್ನೆ. ತೆರಿಗೆ ಹಣ ಕಡಿಮೆ ಮಾಡಿ. ನೈಜವಾಗಿ ಜನಸಾಮಾನ್ಯರಿಗೆ ತೈಲಬೆಲೆ ಕಡಿಮೆಯಲ್ಲಿ ಸಿಗಬಹುದು ಮತ್ತು ತೈಲ ಕಂಪನಿಗಳು ನಷ್ಟ ಅನುಭವಿಸಬೇಕಾಗಿಲ್ಲ.
ತೈಲ ಬೆಲೆ ಇಳಿತವನ್ನು ಎಲ್ಲರಿಂದ ಹೆಚ್ಚು ವಿರೋಧಿಸಿದವರೆಂದರೆ ಹಿಂದಿನ ವಿತ್ತ ಸಚಿವ ಪಿ. ಚಿದಂಬರಂ. ಬೆಲೆಇಳಿಕೆಯಿಂದ ಸರಕಾರದ ಆದಾಯ ಇಳಿಯಬಹುದು ಎಂಬ ಚಿಂತೆ ಅವರದಾಗಿತ್ತು. ಡಾ. ಮನಮೋಹನ್ ಸಿಂಗ್ ಅವರು ವಿತ್ತಖಾತೆಯನ್ನು ವಹಿಸಿದೊಡನೆ ತೆಗೆದುಕೊಂಡ ಮೊದಲ ಆರ್ಥಿಕ ನಿರ್ಧಾರವಿದು. ಬೆಲೆಏರಿಕೆ ಈ ತಿಂಗಳಿನಿಂದ ಕಡಿಮೆಯಾಗಬಹುದೇ?
ಸರಕಾರ ತೊಂಬತ್ತರ ದಶಕದಲ್ಲಿ ತೈಲಬೆಲೆಗಳನ್ನು ಮಾರುಕಟ್ಟೆಯ ನಿರ್ಧಾರಕ್ಕೆ ಬಿಟ್ಟಿತ್ತು. ಆದರೆ ಒಂದೇ ಸವನೆ ಏರುತ್ತಿರುವ ಕಚ್ಚಾ ತೈಲದ ಬೆಲೆ ಮತ್ತು ಚುನಾವಣೆಗಳು ಸರಕಾರದ ಈ ಆರ್ಥಿಕ ನಿರ್ಣಯ ರಾಜಕೀಯವಾಗಿ ಲಾಭದಾಯಕವಾಗಿರಲಿಲ್ಲ. ಹಾಗಾಗಿ ಕೂಡಲೆ ಅಂದಿನ ಪೆಟ್ರೋಲಿಯಂ ಸಚಿವ ರಾಮನಾಯ್ಕ್ ತೈಲಬೆಲೆಯನ್ನು ಸರಕಾರ ನಿರ್ಧರಿಸುವುದು ಎಂದರು. ಬೆಲೆ ಹೆಚ್ಚಾಗಬೇಕಾದಾಗ ಕಂಪನಿಗಳು ಹೆಚ್ಚಿಸುವಂತಿರಲಿಲ್ಲ. ತೈಲ ಅರ್ಥ ವ್ಯವಸ್ಥೆ ಕುಸಿಯಿತು. ಖಾಸಗಿ ಕ್ಷೇತ್ರದ ಬೃಹತ್ ಕಂಪೆನಿಗಳಾದ ರಿಲಾಯನ್ಸ್ ಮತ್ತು ಎಸ್ಸಾರ್ ದೇಶಾದ್ಯಂತ ರಿಟೇಲ್ ಔಟ್‌ಲೆಟ್‌ಗಳನ್ನು ತೆರೆದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದಾಗ ಅವುಗಳನ್ನು ಮುಚ್ಚಿ ಕುಳಿತವು. ಈಗ ಮತ್ತೆ ತೆರೆದು ಜನರಿಗೆ ಮಾರುಕಟ್ಟೆ ದರದಲ್ಲಿ ಪಟ್ರೋಲ್ ಡಿಸೀಲ್ ಮಾರಲು ಪ್ರಯತ್ನಿಸುತ್ತಿವೆ.
ನನ್ನ ಗೆಳೆಯನ ಮಾತನ್ನು ವಿವರಿಸುವುದಾದರೆ ಈಗ ತೈಲ ಬೆಲೆ ಇಳಿಸಿದ ಸರಕಾರ ಇನ್ನು ಕೆಲವು ತಿಂಗಳುಗಳಲ್ಲಿ ಚುನಾವಣೆ ಎದುರಿಸಲಿದೆ. ಆಡಳಿತ ಪಕ್ಷ ಜನರಿಗೆ ಕಡಿಮೆ ಬೆಲೆಗೆ ಇಂಧನ ನೀಡಿದುದನ್ನು ಚುನಾವಣಾ ವಿಷಯವನ್ನಾಗಿಸಲಿದೆ. ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾದಾಗ ಹೊಸ ಸರಕಾರ (ಬಹುಷ: ಬೇರೆ ಪಕ್ಷದ್ದು) ತೈಲಬೆಲೆ ಏರಿಸಬೇಕಾಗುತ್ತದೆ. ಜನರ ಸಿಟ್ಟನ್ನು ಅದು ಎದುರಿಸಬೇಕಾಗುತ್ತದೆ.

ಸಿಡಿಲು

ನಾವು ಅನ್ನ ಬೇಯಿಸುವ ಅಡುಗೆ ಅನಿಲ ಸಿಲಿಂಡರ್ ಒಂದಕ್ಕೆ ತೈಲ ಕಂಪೆನಿಗಳು ರೂ ೧೪೮ ಹಾಗೂ ಕೆರೋಸಿನ್ ಲೀಟರ್ ಒಂದಕ್ಕೆ ರೂ. ೧೭ ನಷ್ಟ ಅನುಭವಿಸುತ್ತಿವೆ.

ಗುಡುಗು

೨೦೦೮-೦೯ರ ಸಾಲಿನ ರೂ ೯೨,೮೫೩ ಕೋಟಿ ನಷ್ಟವನ್ನು ಸಾರ್ವಜನಿಕ ಕ್ಷೇತ್ರದ ಇಂಡಿಯನ್ ಆಯಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ಥಾನ್ ಪೆಟ್ರೋಲಿಯಂ ಈಗಾಗಲೇ ತಮ್ಮ ಅರ್ಧವರ್ಷದ ಅಕೌಂಟಿಗೆ ಸೇರಿಸಿವೆ.

Thursday, December 4, 2008

ಅತಿ ಮೋಹದ ಪಾಕಿಸ್ಥಾನೀ ಮಾಧ್ಯಮ

ಭಾರತದ ಸೈನ್ಯ ಅಥವಾ ಆಡಳಿತ ವ್ಯವಸ್ಥೆಯೇ ಭಯೋತ್ಪಾದಕರನ್ನು ಸೃಷ್ಟಿಸಿ ಮುಂಬಯಿ ದುರಂತಕ್ಕೆ ಪಾಕಿಸ್ಥಾನಿ ಮೂಲದ ಭಯೋತ್ಪಾದಕರು ಕಾರಣ ಎಂದು ಸುಳ್ಳು ಹೇಳುತ್ತಿವೆ ಎಂದು ಪಾಕಿಸ್ಥಾನದ ಟಿವಿ ಚಾನೆಲ್‌ಗಳು ಜನಾಭಿಪ್ರಾಯ ಮೂಡಿಸುತ್ತಿವೆ. ಪಾಕಿಸ್ಥಾನದ ಬಲಹೀನ ಸರಕಾರಕ್ಕೆ ಅಲ್ಲಿನ ಎಲ್ಲಾ ರಾಜಕೀಯ ಶಕ್ತಿಗಳು ಮಾತ್ರವಲ್ಲ ಮಾಧ್ಯಮಗಳು ಮತ್ತು ವಿಶ್ಲೇಷಕರು ಸಮರ್ಥನೆ ನೀಡುತ್ತಿದ್ದಾರೆ. ಪಾಕಿಸ್ಥಾನದ ಮಾಧ್ಯಮಗಳು ಪ್ರಮುಖವಾಗಿ ಬ್ರಾಡ್‌ಕಾಸ್ಟ್ ಮಾಧ್ಯಮಗಳು ಭಾರತದ ರಾಜಕೀಯ ಪಕ್ಷಗಳನ್ನು, ಭದ್ರತಾ ಪಡೆಗಳನ್ನು ಮತ್ತು ಮುಖ್ಯವಾಗಿ ಭಾರತದ ಮಾಧ್ಯಮಗಳನ್ನು ಹೀಯಾಳಿಸುತ್ತಿವೆ. ಭಾರತದ ಬ್ರಾಡ್‌ಕಾಸ್ಟ್ ಮಾಧ್ಯಮಗಳು ಅರವತ್ತು ಗಂಟೆಗಳಷ್ಟು ಕಾಲ ಮುಂಬಯಿಯಿಂದ ನಿರಂತರ ಭಯೋತ್ಪಾದಕರ ಮತ್ತು ಭದ್ರತಾ ಪಡೆಗಳ ನಡುವಿನ ಕಾಳಗವನ್ನು ನೇರಪ್ರಸಾರಮಾಡಿ ಭಾರತದ ಪ್ರಜೆಗಳಿಗೆ ಮುಂಬಯಿಯಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ನೀಡಿವೆ. ಅದನ್ನು ನೋಡಿದ ವೀಕ್ಷಕರಿಗೆ ಕೆಲವೊಮ್ಮೆ ಅದು ರೋಚಕವಾದ ವರದಿಯೆಂದೆಣಿಸಿದರೂ ಪಾಕಿಸ್ಥಾನದ ಎಲ್ಲಾ ವ್ಯವಸ್ಥೆಗಳು ದಿಕ್ಕೆಟ್ಟು ಹೋದವು. ನಿರಂತರ ಟಿವಿ ನೋಡಿದ ಜನ ಕೈಗೆ ಸಿಕ್ಕಿದ ಆಯುಧವನ್ನು ಎತ್ತಿ ಪಾಕಿಸ್ಥಾನದತ್ತ ದಾಳಿಗೆ ಬರಬಹುದೆಂಬಷ್ಟು ಭೀತಿ ಅವರಲ್ಲಿ ಹುಟ್ಟಿತು.
ಭಾರತದ ಮಾಧ್ಯಮಗಳು ಈ ಮುಂಬಯಿ ದಾಳಿಗೆ ಪಾಕಿಸ್ಥಾನವೇ ಕಾರಣ ಎಂಬುದನ್ನು ಅಷ್ಟು ಬೇಗ ಹೇಗೆ ನಿರ್ಣಯಿಸಿತು ಎಂಬುದು ಅವರ ಪ್ರಶ್ನೆ. ಭಾರತದ ಮಾಧ್ಯಮಗಳು ಅತಿ ರಾಷ್ಟ್ರೀಯವಾದಿಯಾಗಿದ್ದು ಸುಳ್ಳುಗಳ ಸರಮಾಲೆಯನ್ನೆ ನೇಯುತ್ತಿವೆ ಎಂದು ಹೇಳುತ್ತಾರೆ. ಯಾವುದೇ ಪೂರಕ ಸಾಕ್ಷಾಧಾರವಿಲ್ಲದೆ ಭಾರತದ ಮಾಧ್ಯಮವು ನಿರ್ಣಯಕ್ಕೆ ಬಂದು ಬಿಡುತ್ತದೆ ಎಂದು ಪಾಕಿಸ್ಥಾನದ ಮಾಧ್ಯಮಗಳು ಬೊಬ್ಬಿಡುತ್ತಿವೆ. ಭಾರತದ ಕೆಲವು ಪತ್ರಿಕೆಗಳು ಜಗತ್ತಿನ ಮಾಧ್ಯಮಗಳು ಮುಂಬಯಿ ದಾಳಿಯನ್ನು ಹೇಗೆ ಪರಿಗಣಿಸಿವೆ ಎಂಬುದನ್ನು ತೋರಿಸಿವೆ. ಪಾಕಿಸ್ಥಾನದ ಸ್ವಘೋಷಿತ ಮಾಜಿ ಐಎಸ್‌ಐ ಹಮಿದ್ ಮೀರ್ ಎಂಬ ಅಂಕಣಕಾರ ಮುಂಬಯಿ ದಾಳಿಯನ್ನು ಹಿಂದೂ ಪರ ಸಂಘಟನೆಗಳೇ ನಡೆಸಿವೆ ಎಂಬ ತಲೆಬುಡವಿಲ್ಲದ ವಿಶ್ಲೇಷಣೆ ಮಾಡಿದ್ದಾನೆ. ಪಾಕಿಸ್ಥಾನದ ಮಾಧ್ಯಮಗಳು ಭಯೋತ್ಪಾದಕ ಕೃತ್ಯಕ್ಕೆ ಪಾಕಿಸ್ಥಾನ ಹೊಣೆಯೇ ಅಲ್ಲ ಎಂಬಂತೆ ವಾದ ಮಾಡಿವೆ. ಆಂಟಿ ಟೆರರಿಸ್ಟ್ ಸ್ಕ್ವಾಡ್‌ನ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಭಾರತದ ಸೈನ್ಯವೇ ಮುಗಿಸಿಬಿಟ್ಟಿದೆ ಎಂದು ಪಾಕಿಸ್ಥಾನ ಮಾಧ್ಯಮಗಳು ವರದಿ ಮಾಡುತ್ತಿವೆ.
ಭಾರತದ ಮಾಧ್ಯಮಗಳನ್ನು ಛೀಮಾರಿಮಾಡುವ ನಮ್ಮ ಜನ ಪಾಕಿಸ್ಥಾನದ ಬ್ರಾಡ್‍ಕಾಸ್ಟ್ ಮಾಧ್ಯಮವನ್ನು ಮತ್ತು ಅದು ಪಾಕಿಸ್ಥಾನದಲ್ಲಿ ಮಾಡುವ ಭಾರತದ ವಿರುದ್ಧದ ಜನಾಭಿಪ್ರಾಯಗಳನ್ನು ಕಂಡು ಭೀತಿಗೊಳ್ಳುವುದರಲ್ಲಿ ಸಂಶಯವಿಲ್ಲ.

Wednesday, December 3, 2008

ಅಕ್ಕಿ ಅನ್ನವಾಗಲಿ

ಅಮೇರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಕಾಂಡೋಲೀಸಾ ರೈಸ್ ಅವರು ಬಹಳ ಅವಸರದಿಂದಲೇ ನವದೆಹಲಿಗೆ ಆಗಮಿಸಿದ್ದಾರೆ. ಮುಂಬಯಿ ದಾಳಿಗೆ ನೊಂದ ಭಾರತೀಯರಿಗೆ ಸಾಂತ್ವನ ನೀಡಲು ಆಕೆ ಬಂದಂತೆ ಕಾಣುತ್ತಿಲ್ಲ. ನೊಂದಿರುವ ಭಾರತೀಯರ ಭಾವನೆಗಳು ಇಲ್ಲಿನ ರಾಜಕೀಯ ನಾಯಕರ ಮೇಲೆ ಪರಿಣಾಮ ಬೀರಿ ಅವರೇನಾದರೂ ಪಾಕಿಸ್ಥಾನದ ಮೇಲೆ ಎರಗಬಹುದೇನೋ ಎಂಬ ಗುಮಾನಿ ಅಮೇರಿಕಾದಲ್ಲಿ ಬಂದಿರುವುದರಿಂದ ಆಕೆ ವೇಗವಾಗಿ ಹಾರುತ್ತಾ ಯುರೋಪಿನ ಪ್ರವಾಸವನ್ನು ಮೊಟಕುಗೊಳಿಸುತ್ತಾ ಭಾರತದೆಡೆಗೆ ಧಾವಿಸಿದ್ದಾಳೆ. ಅಮೇರಿಕಾದ ಅಧಿಕಾರಿಗಳೂ ಮುಂಬಯಿ ದಾಳಿಯಲ್ಲಿ ಪಾಕಿಸ್ಥಾನದ ಕೈ ಇದೆ ಎನ್ನುವುದನ್ನು ಒಳಗಿಂದೊಳಗೆ ನಂಬಿದರೂ ಇಲ್ಲವೆಂದು ಹೇಳುವಂತೆ ಕಾಣುತ್ತಾರೆ. ತಪ್ಪು ಮಾಡಿದ ಕಿರಿಯ ಹುಡುಗನಿಗೆ ಹಿರಿಯ ಹುಡುಗನಿಂದ ಬಚಾವ್ ಮಾಡಿಸುವ ತರ ಅಮೇರಿಕಾ ನಡೆಯುತ್ತಿದೆ. ಪಾಕಿಸ್ಥಾನದ ಲಸ್ಕರ್ ಇ ತಾಯಿಬಾ ಇದರಲ್ಲಿ ಪಾಲ್ಗೊಂಡಿದೆ ಎಂದು ಅಮೇರಿಕಾದ ಅಧಿಕಾರಿಗಳಿಗೆ ಮನವರಿಕೆಯಾಗಿದೆ. ಭಾರತವೆಲ್ಲಿಯಾದರೂ ಪಾಕಿಸ್ಥಾನದ ವಿರುದ್ಧ ದಂಡೆತ್ತಿ ಬರಬಹುದೆಂಬ ಭೀತಿಯಲ್ಲಿ ಓಡೋಡಿ ಬಂದ ರೈಸ್ ಇಲ್ಲಿನ ನಾಯಕರ ಬೆನ್ನು ತಟ್ಟಿ ಸುಮ್ಮನಾಗಿಸುವಲ್ಲಿ ಪ್ರಯತ್ನ ಪಡುತ್ತಿದ್ದಾಳೆ.
ಈ ಮಧ್ಯೆ ಪಾಕಿಸ್ಥಾನದಲ್ಲಿ ಬಲಹೀನ ಸರಕಾರದ ಬೆನ್ನಿಗೆ ಎಲ್ಲ ರಾಜಕೀಯ ಪಕ್ಷಗಳು, ಮಾಧ್ಯಮಗಳು, ಜನಾಭಿಪ್ರಾಯ ರೂಪಿಸುವವರು ನಿಂತಿದ್ದಾರೆ. ಅವರು ಪಾಕಿಸ್ಥಾನದ ಒಗ್ಗಟ್ಟನ್ನು ಬಲಪಡಿಸುತ್ತಿದ್ದಾರೆ. ಆಡಳಿತ ಯಂತ್ರದೊಂದಿಗೆ ಇವರೆಲ್ಲ ಸೇರಿ ಮುಂಬಯಿ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವೇನೂ ಇಲ್ಲ ಎಂಬ ಅಭಿಪ್ರಾಯವನ್ನು ವಿಶ್ವಮಟ್ಟದಲ್ಲಿ ರೂಪಿಸುತ್ತಿದ್ದಾರೆ. ಪಾಕಿಸ್ಥಾನದ ಅಧ್ಯಕ್ಷ ಅಸಿಫ್ ಅಲಿ ಜರ್ಧಾರಿ ಅಮೇರಿಕಾದ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಂಡು ತಪ್ಪು ನಮ್ಮದಲ್ಲ ಎಂದು ಹೇಳಿದ್ದಾರೆ. ಪಾಕಿಸ್ಥಾನಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ, ಭಯೋತ್ಪಾದನೆಯ ವಿರುದ್ಧ ನಾವಿದ್ದೇವೆ ಎಂದು ತೋರಿಸಿಕೊಳ್ಳಬೇಕು. ಜತೆಗೆ ಆಂತರಿಕವಾಗಿ ಭಾರತದ ಯಾವುದೇ ಎಚ್ಚರದ ಮಾತುಗಳಿಗೆ ನಾವು ಬಗ್ಗುವುದಿಲ್ಲ ಎಂದು ತೋರಿಸಬೇಕಾಗಿದೆ. ಎಲ್ಲರೂ ಒಂದಾಗಿ ಭಾರತದಲ್ಲಿ ಆದ ದುರಂತಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಭಾರತವು ಪಾಕಿಸ್ಥಾನವೇ ಇದಕ್ಕೆಲ್ಲ ಕಾರಣ ಎಂದು ಬೆರಳು ತೋರಿಸುವುದನ್ನು ಪಾಕಿಸ್ಥಾನ ತಳ್ಳಿಹಾಕುತ್ತಿದೆ.
ಭಾರತ ತನ್ನಲ್ಲಿರುವ ಸಾಕ್ಷಾಧಾರಗಳನ್ನು ಮುಂದಿಟ್ಟು ರಾಜಕೀಯ ನಿರ್ಧಾರಗಳ ಮೂಲಕ ಮತ್ತು ಮಾಧ್ಯಮಗಳ ಮೂಲಕ ಪಾಕಿಸ್ಥಾನವು ಹೇಗೆ ಭಯೋತ್ಪಾದನೆಯ ತೊಟ್ಟಿಲಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಬೇಕು. ಘಟನೆಯ ನಂತರದ ಮೊದಲ ಒಂದೆರಡು ದಿನಗಳಲ್ಲಿ ದೇಶದ ಆಡಳಿತ ನಾಯಕರು ಮಾತಾಡಿದ ಧ್ವನಿ ಇನ್ನೂ ಗಟ್ಟಿಯಾಗಿ ಬಹಳಷ್ಟು ದಿನ ಉಳಿಯಬೇಕು. ದೇಶದ ಜನತೆ ಯಾವುದಾದರೂ ಪರಿಣಾಮವನ್ನು ಕಾಣುವಂತಹ ನಿರ್ಧಾರಗಳನ್ನು ಸರಕಾರವು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕಾಂಡೋಲೀಸಾ ರೈಸ್ ನಂತಹವರು ಬಂದಾಗ ಬಾಲಬೀಸಿ ಕುಂಯ್‌ಗುಡುವ ಕುನ್ನಿಗಳು ನಾವಾಗುತ್ತೇವೆ.

Tuesday, December 2, 2008

ಈಗಲ್ಲವಾದರೆ ಇನ್ಯಾವಾಗ...?

ಭಾರತದ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರು ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಿಯೊಂದು ಸಾರ್ವಭೌಮ ರಾಷ್ಟ್ರವೂ ತನ್ನ ಗಡಿಯನ್ನು ರಕ್ಷಿಸಲು ಯಾವಾಗ ಬೇಕಾದರೂ ಯಾವುದೇ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು ಎಂದಿದ್ದಾರೆ. ಪಾಕಿಸ್ಥಾನದ ಜತೆಗಿನ ಐದು ವರ್ಷಗಳಷ್ಟು ಹಳೆಯ ಶಾಂತಿ ಒಪ್ಪಂದದಲ್ಲಿ ಹೆಚ್ಚಿನದೇನೂ ಆಗಿಲ್ಲ ಎಂದೂ ಅವರು ಹೇಳಿದ್ದಾರೆ. ಶಾಂತಿ ಶಾಂತಿ ಎಂದು ಹೇಳುತ್ತಿರುವ ಭಾರತ ಈಗ ಎದ್ದು ನಿಂತು ಕೊಂಡರೆ ಪಾಕಿಸ್ಥಾನ ಏನೂ ಮಾಡಲಾಗದು. ಅಲ್ಲಿನ ಕ್ಷೀಣ ರಾಜಕೀಯ ವ್ಯವಸ್ಥೆ, ಅಮೇರಿಕಾದೊಂದಿಗಿನ ಅಷ್ಟಕಷ್ಟೇ ಇರುವ ಸಂಬಂಧ, ಅಣು ಸಂಬಂಧದ ನಂತರ ಹತ್ತಿರವಾದ ಭಾರತ ಮತ್ತು ಅಮೇರಿಕಾ ನಂಟು, ಅಮೇರಿಕಾ ಅಧ್ಯಕ್ಷನಾಗಿ ಬುಷ್ ನ ಕೊನೆ ದಿನಗಳು, ಅಧೋಗತಿಗಿಳಿದ ಜಾಗತಿಕ ಅರ್ಥವ್ಯವಸ್ಥೆ ಇವೆಲ್ಲಾ ಇದೀಗ ಭಾರತದ ಪರವಾಗಿಯೇ ಇವೆ. ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಾಯನ್ಸ್‌ನ ಮುತ್ಸದ್ಧಿಗಳು ಸಮಯದ ಸದುಪಯೋಗವನ್ನು ಪಡೆದು ಪಾಕಿಸ್ಥಾನದಿಂದ ಹೊರಡುವ ಭಯೋತ್ಪಾದನೆ ಚಟುವಟಿಕೆಗಳನ್ನು ನಿಗ್ರಹಿಸುವ ಕೆಲಸವನ್ನು ಮಾಡಿದರೆ ಮುಂದಿನ ದಿನಗಳು ಭಾರತದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಬಹುದು. ಒಂದು ಭಯೋತ್ಪಾದಕ ಕೃತ್ಯದಿಂದ ದಣಿದು ಎಲ್ಲವನ್ನು ಮರೆತು ಬಿಡುವಷ್ಟರಲ್ಲಿ ಇನ್ನೊಂದು ದಾಳಿ ಆಗುವುದು ನಿಂತರೆ ಮಾತ್ರ ಸರಕಾರ, ಉದ್ಯಮ, ಸಮಾಜ ಅಭಿವೃದ್ಧಿಯತ್ತ ನಿರಂತರ ನಡೆಯಬಹುದು.ಅಮೇರಿಕಾದ ಹಿರಿಯ ಅಧಿಕಾರಿಯೊಬ್ಬರು ಪಾಕಿಸ್ಥಾನದ ಕೈವಾಡದ ಬಗ್ಗೆ ಶಂಕಿಸುವುದಕ್ಕೆ ಕಾರಣಗಳನ್ನು ಕಂಡಿದ್ದಾರೆ. ತನಿಖೆ ಇನ್ನೂ ಪೂರ್ತಿಯಾಗದಿರುವುದರಿಂದ ಮಾಹಿತಿ ಪೂರ್ಣ ಲಭ್ಯವಿಲ್ಲ. ಭಾರತವೂ ಈಗಾಗಲೇ ಬೇಕಾದ ಭಯೋತ್ಪಾದಕರ ಪಟ್ಟಿಯನ್ನು ನೀಡಿ ಪಾಕಿಸ್ಥಾನವನ್ನು ಎಚ್ಚರಿಸಿದೆ. ಟೇಬಲ್ ಎದುರು ಕುಳಿತು ಮಾತಾಡಿ ಇದನ್ನೆಲ್ಲ ನಿರ್ವಹಿಸುವ ಕಾಲ ಮುಗಿದಿದೆ. ನ್ಯೂಕ್ಲಿಯರ್ ರಾಷ್ಟ್ರವಾಗಿರುವ ಭಾರತದ ಪ್ರತಿಯೊಂದು ಹೆಜ್ಜೆಯನ್ನು ನೋಡುತ್ತಿರುವ ಅಮೇರಿಕಾ ಕೂಡಾ ಭಾರತ ಎಚ್ಚೆತ್ತರೆ ಭಯಪಟ್ಟೀತು. ಆದರೆ ಭಾರತವನ್ನು ಮಣಿಸುವಷ್ಟು ಧೈರ್ಯವನ್ನು ಪಡೆಯಲಾರದು. ಭಯೋತ್ಪಾದನೆಯಿಂದ ಭಾರತಕ್ಕೆ ಆಗುತ್ತಿರುವ ನೋವು, ನಷ್ಟಗಳನ್ನು ಎದುರಿಸಲು ಈಗಿರುವಷ್ಟು ದೊಡ್ದ ನೈತಿಕ ಬಲ ಇನ್ನು ಸಿಗುವುದಾದರೆ ಅದಕ್ಕೆ ಪ್ರಜೆಗಳು ಯಾವ ಬೆಲೆ ನೀಡಬೇಕೇನೋ? ನೋವು ಎಲ್ಲರಿಗೂ ಆಗಿದೆ. ಆ ನೋವು ಇಡೀ ದೇಶವನ್ನು ಅಲುಗಾಡಿಸಿದೆ. ಮುಂಬಯಿಯಲ್ಲಿ ಸಿಡಿದ ಗುಂಡುಗಳು ಎಲ್ಲರ ಎದೆಯನ್ನೂ ಒಡೆದಿದೆ. ದೇಶದ ನಾಯಕತ್ವ ಬರೇ ಮುಲಾಮು ಹಚ್ಚಿ ನೋವನ್ನು ಕಡಿಮೆಗೊಳಿಸಬಹುದು ಎಂದುಕೊಂಡರೆ ಅದರ ಪರಿಣಾಮ ವಿಪರೀತವಾಗುವುದರಲ್ಲಿ ಸಂಶಯವಿಲ್ಲ. ದೇಶದ ಸರಕಾರ ವರ್ಷದೊಳಗಿನ ಚುನಾವಣೆಯನ್ನು ಮರೆತು, ನಿರ್ದಿಷ್ಟ ಹಾಗೂ ನಿಖರವಾದ ಭಾಷೆಯಲ್ಲಿ ಭಯೋತ್ಪಾದನೆಯ ವಿರುದ್ಧ ಜಗತ್ತಿನ ಅತ್ಯುನ್ನತ ಮಟ್ಟದಲ್ಲಿ ಹಾಗೂ ಅತ್ಯುತ್ತಮ ರೀತಿಯಲ್ಲಿ ತನ್ನ ಧ್ವನಿಯನ್ನು ಎತ್ತಬೇಕು. ಆ ಧ್ವನಿಗೆ ಕನಿಷ್ಟ ಭಾರತದ ಮಟ್ಟಿಗಾದರೂ ಭಯೋತ್ಪಾದನೆ ನಿಗ್ರಹವಾಗಲೇ ಬೇಕು. ಈಗಲ್ಲವಾದರೆ ಇನ್ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆ ಭಾರತದ ನಾಯಕತ್ವಗಳಿಗೆ ಕಾಡದಿದ್ದರೆ ನಮ್ಮ ಜೀವವನ್ನು ಒತ್ತೆಯಿಟ್ಟು ಬದುಕಬೇಕು. ಭಾರತದ ಬೆನ್ನು ಬಾಗಿ ಕುಸಿದು ಹೋಗಿದೆ. ಇನ್ನು ಸೆಟೆದು ನಿಲ್ಲದಿದ್ದರೆ ಇನ್ಯಾವಾಗ? ಅದಕ್ಕೆ ನೀಡಬೇಕಾದ ಬೆಲೆಯೇನು?
ಸಿಡಿಲು
ಮುಂಬಯಿಯಲ್ಲಿ ಇಸ್ರೇಲ್ ನ ರಬ್ಬಿ ಗೇವ್ರಿಯಲ್ ಹಾಲ್ಟ್ಜ್‌ಬರ್ಗ್ ಮತ್ತು ರಿವ್ಕಾ ಅವರು ಬಲಿಯಾದರು. ಅವರ ಅಂತಿಮ ಸಂಸ್ಕಾರದ ಸಂದರ್ಭ ಅವರ ಬದುಕುಳಿದ ಎರಡು ವರ್ಷದ ಮಗು ಮೋಶ್ ಹಾಲ್ಟ್ಜ್‌ಬರ್ಗ್ ನನ್ನು ಕಂಡ ಇಸ್ರೇಲಿಗರ ಒಂದೇ ಪ್ರಶ್ನೆ "ಯಾಕೆ? ಯಾಕೆ? ಯಾಕೆ?" ಎಂಬುದು.

ಚಿತ್ರ: AP

Monday, December 1, 2008

ಕೇಳಬಹುದೇ ಶಂಖನಾದ

ಭಾರತದ ಹೊಸ ಗೃಹ ಸಚಿವ ಪಲನಿಯಪ್ಪನ್ ಚಿದಂಬರಂ ತನ್ನ 'ಗೃಹ'ದಿಂದ ಹೊರಬಂದು ಪಾಕಿಸ್ಥಾನದ ರಾಯಭಾರಿಯನ್ನು ಕರೆದು ಮುಂಬಯಿ ದುರಂತದಲ್ಲಿ ಪಾಕಿಸ್ಥಾನದ ಕೈವಾಡ ಇರುವುದನ್ನು ತಿಳಿಸಿಹೇಳಿ ಎಚ್ಚರಿಸಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ಜನರನ್ನು ಬಳಿ ತೆಗೆದುಕೊಂಡ ಮುಂಬಯಿ ದುರಂತದ ಹಿಂದೆ ಪಾಕಿಸ್ಥಾನದ ಕೈವಾಡ ಇದೆ ಎಂದು ಭಾರತ ಸರಕಾರದ ವಿವಿಧ ಅಂಗಗಳಿಗೆ ಖಚಿತ ಮಾಹಿತಿಗಳು ಲಭ್ಯವಾಗಿವೆ. ಈ ಮಾಹಿತಿಗಳನ್ನು ಹಿಡಿದುಕೊಂಡು ಪಾಕಿಸ್ಥಾನವನ್ನು ಎತ್ತರದ ಸ್ವರದಲ್ಲಿ ಗದರಿಸುವ ಧೈರ್ಯ ಭಾರತ ಸರಕಾರಕ್ಕಿದೆಯೇ? ಧೃಢತೆಯಿಂದ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವಷ್ಟು ಭಾರತದ ರಾಜಕಾರಣಿಗಳಿಗೆ ಸ್ಥೈರ್ಯವಿದೆಯೇ? ಚಿದಂಬರಂ ಅವರು ಪ್ರತಿಕ್ರಿಯಲೇ ಬೇಕು. ಯಾಕೆಂದರೆ ಚುನಾವಣೆ ಇನ್ನು ತಿಂಗಳುಗಳ ಲೆಕ್ಕದಷ್ಟು ದೂರವಿದೆ. ರಾಜೀನಾಮೆ ನೀಡಿದ ಶಿವರಾಜ್ ಪಾಟೀಲ್ ಅವರ ಅಸಮರ್ಥತೆಯನ್ನು ಅಳಿಸಿ ಜನತೆಯ ಎದುರು ಯುನಾಯ್ಟೆಡ್ ಪ್ರೋಗ್ರೆಸ್ಸಿವ್ ಅಲಾಯನ್ಸ್ ಸರಕಾರವು ಚುನಾವಣೆಯನ್ನು ಎದುರಿಸಬೇಕು. ಜನರಲ್ಲಿ ಸಿಟ್ಟಿದೆ. ಅದು ಕೇವಲ ಕಾಂಗ್ರೆಸ್ ಅಥವಾ ಆಡಳಿತ ಪಕ್ಷದ ಮೇಲಲ್ಲ. ಇಡೀ ರಾಜಕೀಯ ವ್ಯವಸ್ಥೆಯ ಬಗ್ಗೆ ಜನ ರೊಚ್ಚಿಗೆದ್ದಿದ್ದಾರೆ. ಮುಂಬಯಿಯಲ್ಲಿ ಕೆಲವು ಕಾರ್ಪೋರೇಟ್ ಮುಂದಾಳುಗಳು ಮಹಾ ನಗರಗಳ ಕಾನೂನು ಮತ್ತು ಸುವ್ಯವಸ್ಥೆಗಾಗಿ ಖಾಸಗಿ ಸೆಕ್ಯೂರಿಟಿ ಬಲಗಳನ್ನು ವೃದ್ಧಿಸುವ ಕುರಿತೂ ಮಾತಾಡುತ್ತಾರೆ. ರೊಚ್ಚಿಗೆದ್ದಿರುವ ಜನತೆ ಸರಕಾರವನ್ನು ಮತ್ತು ರಾಜಕೀಯ ಪಕ್ಷಗಳನ್ನು ದೂರುತ್ತಿದ್ದಾರೆ. ಜನತೆಗೆ ಹೆದರಿ ರಾಜೀನಾಮೆ ನೀಡುವುದು ಕೆಲವೊಮ್ಮೆ ನಾಯಕರುಗಳಿಗೆ ಅನಿವಾರ್ಯವಾಗುತ್ತಿದೆ. ಚಿದಂಬರಂ ಅವರ ಎಚ್ಚರಿಕೆ ಪಾಕಿಸ್ಥಾನದಲ್ಲಿ ಎಷ್ಟು ಪರಿಣಾಮಕಾರಿಯಾಗಬಲ್ಲುದು? ಭಾರತದ ಜನತೆಯ ಸಿಟ್ಟು ಸರಕಾರದ ಮೂಲಕ ವಿಶ್ವನಾಯಕರನ್ನು ತಲುಪಬಲ್ಲುದೇ? ಇಸ್ಲಾಮಬಾದ್ ನಲ್ಲಿರುವ ಪಾಕಿಸ್ಥಾನದ ಅಧ್ಯಕ್ಷ ಅಸಿಫ್ ಅಲಿ ಝರ್ದಾರಿ ಅಥವಾ ಪಾಕಿಸ್ಥಾನದ ಪ್ರಧಾನಿ ಸಯದ್ ಯುಸುಫ್ ರಾಝ ಗಿಲಾನಿ ತಲೆಕೆಡಿಸಿಕೊಳ್ಳವಷ್ಟು ಭಾರತದ ಆಡಳಿತ ಬೊಬ್ಬೆ ಹೊಡೆಯುತ್ತಿದೆಯೇ? ಅಮೇರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಕ್ಯಾಂಡೋಲೀನಾ ರೈಸ್ ಭಾರತಕ್ಕೆ ತಲುಪುವಷ್ಟರಲ್ಲಿ ಆಡಳಿತ ಯಂತ್ರದಿಂದ ಪರಿಣಾಮಕಾರಿ ಅಭಿಪ್ರಾಯ ಬೀರುವ ಕೆಲಸಗಳು ನಡೆಯುತ್ತಿದೆಯೇ? ಭಾರತವು ಪಾಕಿಸ್ಥಾನವನ್ನು ಔಪಚಾರಿಕವಾಗಿಯೇ ಎಚ್ಚರಿಸಿದಾಗ ಪಾಕಿಸ್ಥಾನ ಸರಕಾರವು ಪೂರ್ಣಪ್ರಮಾಣದ ಪಾರದರ್ಶಿಕತೆ, ಸಹಕಾರದಿಂದ ಭಾರತವು ನೀಡುವ ಸಾಕ್ಷಿಗಳನ್ನು ಪರಿಶೀಲಿಸಿ ಕೆಲಸ ಕೈಗೊಳ್ಳುವುದೇ? ಪಾಕಿಸ್ಥಾನದ ಮಾಧ್ಯಮಗಳು ಅಲ್ಲಿನ ವಿಶ್ಲೇಷಣಕಾರರು ಭಾರತದ ಸೈನಿಕರ ಕುರಿತು ಕೀಳರಿಮೆಯಿಂದ ಜನಾಭಿಪ್ರಾಯವನ್ನು ಮೂಡಿಸಿದೆ. ಇಪ್ಪತ್ತನಾಲ್ಕು ಘಂಟೆಯಾದರೂ ಒಂದು ಹೋಟೆಲ್‌ನಲ್ಲಿರುವ ಬೆರಳೆಣಿಕೆಯಷ್ಟು ಭಯೋತ್ಪಾದಕರನ್ನು ಭಾರತದ ಸುರಕ್ಷಾ ಬಲಗಳಿಗೆ ಹೊರ ಹಾಕಲು ಆಗಿಲ್ಲ ಎಂದು ಅಲ್ಲಿನ ಮಾಧ್ಯಮಗಳು ಅಣಕವಾಡುತ್ತಿದ್ದವು. ನಮ್ಮ ಸರಕಾರವನ್ನು, ವ್ಯವಸ್ಥೆಯನ್ನು ಕುಹಕವಾಡುವ ಭಾರತದ ಮಾಧ್ಯಮಗಳು ಇಂತಹ ಭಯೋತ್ಪಾದಕ ಕೃತ್ಯಗಳಲ್ಲಿ ಪಾಕಿಸ್ಥಾನದ ಕೈ ಎಷ್ಟು ಆಳವಾಗಿದೆ ಎಂದು ಕಂಡುಹಿಡಿದು ಬಯಲಿಗೆಳಯಬೇಕು.
ಸಿಡಿಲು
ಪಾಕಿಸ್ಥಾನದ ಮಾಧ್ಯಮಗಳ ಪ್ರಕಾರ ಮುಂಬಯಿ ದುರಂತವನ್ನು ಭಾರತವೇ ಮಾಡಿಸಿದೆಯಂತೆ!
ಗುಡುಗು
ಒಬಾಮ, ಹಿಲರಿ ಕ್ಲಿಂಟನ್ ಅವರನ್ನು ಅಮೇರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಆಗಿ ನೇಮಿಸಿದ್ದಾರೆ.