Wednesday, November 19, 2008

ಕಾಲ ಸರಿಯಿಲ್ಲ.


ಕುಸಿಯುತ್ತಿರುವ ಭೌಗೋಲಿಕ ಆರ್ಥಿಕ ವ್ಯವಸ್ಥೆ. ಏರುತ್ತಿರುವ ಹಣದುಬ್ಬರ. ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಕುಸಿಯುತ್ತಿರುವ ಶೇರುಗಳ ಬೆಲೆ. ದೇಶಗಳ ಅರ್ಥವ್ಯವಸ್ಥೆಯನ್ನು ಹಿಡಿದಿಟ್ಟುಕೊಳ್ಳುವವರು ತಮ್ಮಲ್ಲಿರುವ ಎಲ್ಲಾ ಕುಟಿಲೋಪಾಯಗಳನ್ನು ಉಪಯೋಗಿಸಿ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಪ್ರಯತ್ನ ಪಡುತ್ತಿದ್ದಾರೆ. ಈ ಕುಸಿತ ಇನ್ನೂ ಒಂದು ವರ್ಷ ಮುಂದುವರಿಯಲಿದ್ದು ಜನಜೀವನ ಇನ್ನೂ ದುಸ್ತರವಾಗಲಿದೆ. ಆರ್ಥಿಕವಾಗಿ ಸುಧೃಢವಾಗಿದ್ದ ಜಪಾನ್ ಕೂಡ ಆರ್ಥಿಕ ಕುಸಿತಕ್ಕೊಳಗಾಗಿದೆ.
ಭಾರತದ ಶೇರು ಮಾರುಕಟ್ಟೆಯ ಸೂಚ್ಯಂಕವಾಗಿರುವ ಸೆನ್ಸೆಕ್ಸ್ ಒಂದೊಮ್ಮೆ 20000ದ ಗಡಿಯನ್ನು ತಲುಪಿದಾಗ ದೇಶದಲ್ಲಿ ಆರ್ಥಿಕ ವ್ಯವಹಾರ ಅತೀ ಉತ್ತಮವಾಗಿದ್ದು ಇದೇ ರೀತಿ ಇನ್ನು ಹತ್ತು ವರ್ಷಗಳೊಳಗೆ ಭಾರತ ಜಗತ್ತಿನ ಸುಪರ್ ಪವರ್ ಆಗುತ್ತದೆ ಎಂಬ ಆಶೆ ಎಲ್ಲರಲ್ಲೂ ಮೂಡಿತ್ತು. ಇಂದು ಶೇರು ಮಾರುಕಟ್ಟೆ ಸದ್ಯ ಏಳದಷ್ಟು ಕುಸಿದಿದೆ. ಇನ್ನು ಯಾವಾಗ ಸುಧಾರಿಸುತ್ತದೆ ಎಂದು ಯಾವ ಪಂಡಿತರೂ ಹೇಳಲು ಇಚ್ಚಿಸುವುದಿಲ್ಲ.
ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದಾಗ ಅದು ಕಟ್ಟಕಡೆಯ ನಾಗರಿಕನ ವರೆಗೆ ತಲುಪಲಿಲ್ಲ. ಸ್ಟಾಕ್ ಎಕ್ಸ್ಚೇಂಜ್‌ಗಳಲ್ಲಿ ಹಣ ಹೂಡಿದವರು, ವಿವಿಧ ಉದ್ದಿಮೆಗಳನ್ನು ನಡೆಸುವವರು, ದಲ್ಲಾಳಿಗಳು ಹಣಮಾಡಿದರು. ಬಡವರಿಗೆ ಅದರ ಪರಿಣಾಮವೇನೂ ತಟ್ಟಲಿಲ್ಲ. ಆದರೆ ಆರ್ಥಿಕ ಪರಿಸ್ಥಿತಿ ಕೆಟ್ಟುಹೋದಾಗ ಅದು ಶ್ರೀಮಂತರನ್ನಷ್ಟೇ ಅಲ್ಲ ಅಲುಗಾಡಿಸುವುದು. ಅದರ ಕಂಪನ ಅತೀ ಬಡವನವರೆಗೆ ಇರುತ್ತದೆ. ಇದರ ವೈರುಧ್ಯವೆಂದರೆ ಆರ್ಥಿಕ ಸುಧಾರಣೆಗೆ ಪಡುವ ಪ್ರಯತ್ನಗಳೆಲ್ಲಾ ಶ್ರೀಮಂತರ ಸುಧಾರಣೆಗೆ ಸಹಕಾರಿಯಾಗುತ್ತವೆ. ಬದಲು ಬಡವರಿಗೆ ತಲುಪುವುದಿಲ್ಲ.
ಜಗತ್ತಿನ ಮುಖ್ಯವಾಗಿ ಅಮೇರಿಕಾದ ಹಣಕಾಸಿನ ವ್ಯವಸ್ಥೆ ಕುಸಿದಿರದಿದ್ದರೆ ಬಾರಕ್ ಒಬಾಮ ಅಮೇರಿಕಾದ ಅಧ್ಯಕ್ಷನಾಗಿ ಚುನಾಯಿತನಾಗಿ ಬರುತ್ತಲೂ ಇರಲಿಲ್ಲ. ಆರ್ಥಿಕ ವ್ಯವಸ್ಥೆಯ ಕುಸಿತದಿಂದ ಅತ್ಯಂತ ಭೀತಿಗೊಳಗಾಗುವವರು ಮಧ್ಯಮ ವರ್ಗದ ಜನ. ಮಕ್ಕಳ ವಿದ್ಯಾಭಾಸ, ಕುಟುಂಬದ ನಿರ್ವಹಣೆ, ಸಾಮಾಜಿಕ ಸ್ಥಾನಮಾನಗಳನ್ನು ಉಳಿಸಿಕೊಳ್ಳುವುದು, ಭವಿಷದ ಬಗೆಗಿನ ಅಸ್ಪಷ್ಟತೆ, ಕೆಲಸವಿಲ್ಲದೇ ಮನೆಯಲ್ಲಿಯೇ ಕೂಡಬೇಕಾದ ಸಂದರ್ಭ, ಮನೆಯ ಬಾಡಿಗೆ ಕೊಡಲೂ ಪರದಾದುವ ಪರಿಸ್ಥಿತಿ, ಇವೆಲ್ಲವನ್ನೂ ಕಾಣಬೇಕಾದ ಅನಿವಾರ್ಯತೆ ಅವರನ್ನು ಕಾಡುತ್ತದೆ.
ಭಾರತದ ಸಂದರ್ಭದಲ್ಲಿ ೧೯೯೦ ರ ನಂತರ ತಮ್ಮ ಕಾಲಮೇಲೆ ತಾವೇ ನಿಂತಂತಹ ಯುವ ಪೀಳಿಗೆಗೆ ಈ ಸಮಸ್ಯೆಯನ್ನು ಈ ಹಿಂದೆ ಎದುರಿಸಿದ ಸಂದರ್ಭದ ನೆನಪಿರಲಾರದು. ಹೈಸ್ಕೂಲ್ ಮುಗಿದೊಡನೆ ಸಿಕ್ಕ ಇಂಜಿನಿಯರ್ ಅಥವಾ ಇನ್ಯಾವುದೋ ಪ್ರೊಫೆಶನಲ್ ಕೋರ್ಸ್, ಅದರ ನಂತರ ಕಷ್ಟವಿಲ್ಲದೆ ದೊರೆತ ಕೆಲಸ, ಕೆಸಕ್ಕಿಂತಲೂ ಹೆಚ್ಚು ದೊರೆಯುವ ಸಂಬಳ, ಜತೆಗೆ ಹಲವಾರು ಸವಲತ್ತುಗಳು, ಓಡಾಡಲು ಸ್ವಂತ ವಾಹನ, ಉಣ್ಣಲು, ಕುಡಿಯಲು, ಕೊಳ್ಳಲು, ಮನರಂಜಿಸಲು ನಗರಗಳಲ್ಲಿ ತಲೆಯೆತ್ತಿದ ಮಾಲುಗಳು, ಮೊಬೈಲು, ಕಂಪ್ಯೂಟರ್, ಇಂಟರ್ನೆಟ್, ಅದಕ್ಕೆಲ್ಲಾ ತಕ್ಕುದಾದ ಮನೋವೃತ್ತಿ. ಇವೆಲ್ಲ ಕ್ಷಣಿಕವೆಂದು ಈ ಪೀಳಿಗೆಯ ಕೆಲವರಿಗಾದರೂ ಈಗ ತಲೆದೋರುತ್ತಿರಬಹುದು.
ಬೌಗೋಲಿಕ ಆರ್ಥಿಕ ವ್ಯವಸ್ಥೆಯ ಕುಸಿತಕ್ಕೊಳಗಾದ ಯುವಪೀಳಿಗೆಯ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿಯಲು ಕಾದಿರುವೆನು.

2 comments:

 1. ಕಾಲ ಸರಿಯಿಲ್ಲ ಎಂದು ಕಾಲವನ್ನು ಬೈದ ಜನ ಕಾಲಾತೀತ ಆಗಿ ಉಳಿದರೆ? ನಿಮ್ಮ ಕಾಲಂನ್ನು ಓದಿ ಮತ್ತೆ ಕಾರ್ಲ್ ಮಾರ್ಕ್ಸ್ ನ್ನು ಓದಬೇಕನ್ನಿಸುತ್ತಿದೆ , ಬಾನಾಡಿಯ ಬರಹಗಳು ಕಚಗುಳಿಯಿದುತ್ತಿವೆ, ಬಿಳಿಮಲೆ

  ReplyDelete
 2. ಎಕಾನಮಿ ಏರುವಾಗ ಸಿರಿವಂತರಿಗೆ ಸಿಹಿ ಅದರಲ್ಲಿ ಬಡವರಿಗೆ ಪಾಲಿಲ್ಲ
  ಆದರೆ ಎಕಾನಮಿಯ ಕಹಿ ಬಡವರಿಗೆ ಹೆಚ್ಚು.

  ನಿಮ್ಮ ಈ ಯೋಚನಾ ಲಹರಿ ನನಗೆ ಒಂದರೆಗಳಿಗೆ ಹಿಡಿದಿಟ್ಟಿದ್ದು ಮತ್ತೆ ಮತ್ತೆ ಯೋಚಿಸುವಂತೆ ಮಾಡಿತು.
  ಚೆಲುವಾದ ಚಿಂತನ ಬಾಲಾಜಿ

  ReplyDelete