Friday, October 17, 2008

ಅಡಿಗ ಮತ್ತು ಕನ್ನಡಿಗ

ಕಳೆದ ಜೂನನಲ್ಲಿ ಅರವಿಂದ ಅಡಿಗ ಮಂಗಳೂರಿನ ಬಗ್ಗೆ ಒಂದು ನುಡಿಚಿತ್ರವನ್ನು ಖ್ಯಾತ ಟೈಮ್ ಪತ್ರಿಕೆಯಲ್ಲಿ ಪ್ರಕಟಿಸಿದಾಗ ನನಗೆ ಯಾರೀತ ಎಂಬ ಕುತೂಹಲ ಮೂಡಿತ್ತು. ಆತನ ಬರಹ ಮತ್ತು ವಿಚಾರಗಳು ಅಂತರಾಷ್ಟ್ರೀಯ ಮಟ್ಟದಲ್ಲಿದ್ದವು. ನಾನು ಅವನ ಬರಹಗಳತ್ತ ಸೆಳೆಯಲ್ಪಟ್ಟೆ. ಆತ ಅಡಿಗನಾಗಿದ್ದುದರಿಂದ ಕನ್ನಡಿಗನಾಗಿರಬೇಕು ಅದೂ ದಕ್ಷಿಣ ಕನ್ನಡಿಗನಾಗಿರಬೇಕು ಎಂದು ಕೊಂಡೆ. ಆತನ ಪುಸ್ತಕ ಪ್ರಕಟವಾದಾಗ ಅದನ್ನು ಕೊಳ್ಳಲೆಂದು ಪುಸ್ತಕದಂಗಡಿಗೆ ಹೋಗಿದ್ದೆ. ಅಲ್ಲಿ ಅದಿರಲಿಲ್ಲ. ಅರವಿಂದ ಅಡಿಗ ಮತ್ತು ವಯ್ಟ್ ಟೈಗರ್ ಬಗ್ಗೆ ಪುಸ್ತಕದಂಗಡಿಯವನಿಗೂ ಗೊತ್ತಿರಲಿಲ್ಲ. ನಾನೂ ಆ ಪುಸ್ತಕ ತೆಗೆದುಕೊಳ್ಳಲೇಬೇಕೆಂದು ಒಂದು ಸಣ್ಣ ಚೀಟಿಯಲ್ಲಿ ಪುಸ್ತಕದ ಹೆಸರನ್ನು ಬರೆದಿಟ್ಟಿದ್ದೆ. ಕಳೆದವಾರ ಮತ್ತೆ ನೆನಪಾಯಿತು. ಬೂಕರ್ ಪ್ರಶಸ್ತಿ ಕುರಿತು ಚರ್ಚೆಗಳೂ ಪತ್ರಿಕೆಗಳಲ್ಲಿ ಬರಲು ಆರಂಭಗೊಂಡವು. ಪುಸ್ತಕ ಕೊಂಡು ಓದಲು ಮತ್ತೆ ನಿರ್ಧರಿಸಿದ್ದೇನೆ. ದೀಪಾವಳಿ ಮುಗಿಯುತ್ತಿದ್ದಂತೆ ಈ ತಿಂಗಳಂತ್ಯದಲ್ಲಿ ಕಚೇರಿ ಮತ್ತು ಮನೆಯಿಂದ ದೂರ ಹೋಗಿ ಕಡಲ ಬದಿಯಲ್ಲಿ ಕುಳಿತು ಪುಸ್ತಕ ಓದಬೇಕೆಂದು ಕೊಂಡಿದ್ದೇನೆ. ಪ್ರಯಾಣದ ಟಿಕೇಟಿನ ಜತೆಗೆ ಪುಸ್ತಕಕ್ಕೂ ಹೇಳಿದ್ದೇನೆ.

ಅಡಿಗ ಹುಟ್ಟಿದ್ದು ಮದರಾಸಿನಲ್ಲಿ (ಕನ್ನಡದಲ್ಲಿ ಬರೆಯುವಾಗ ಮದರಾಸು ಚೆನ್ನೈ ಗಿಂತ ಸೊಗಸಾಗುತ್ತದೆ!). ಓದಿದ್ದು ನಮ್ಮ ಕೆನರಾ ಮತ್ತು ಅಲೋಸಿಯಸ್ ನಲ್ಲಿ. ಕರ್ನಾಟಕದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಆತ ಮೊದಲ ರ್ರ್ಯಾಂಕ್ ಗಳಿಸಿದ್ದ. ಆತನ ಅಪ್ಪ ಸರ್ಜನ್ ಆಗಿದ್ದು ಈಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಇವೆಲ್ಲ ಮಾಹಿತಿ ಆತನಿಗೆ ಬೂಕರ್ ಅವಾರ್ಡ್ ಸಿಕ್ಕ ಮೇಲೆ ದೊರೆತಿದ್ದು.

ಕನ್ನಡದ ಕೆಲವು ಮಂದಿ ಅಡಿಗ ಕನ್ನಡ ಮತ್ತು ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾನೆ ಎಂಬಂತೆ ಚರ್ಚಿಸುತ್ತಿದ್ದಾರೆ. ಆತ ಕನ್ನಡದಲ್ಲಿ ಬರೆಯಬೇಕಿತ್ತು. ಆತನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸರಕಾರ ಮುಂದಾಗಬಹುದು. ಆತನ ತಾಯ್ನುಡಿಯನ್ನು ಬಳಸಿ ಆತ ಸಾಹಿತ್ಯ ರಚಿಸಬೇಕಿತ್ತು. ಕರ್ನಾಟಕದಿಂದ ಹೊರಗಿರುವ ಕನ್ನಡಿಗರು ತಮ್ಮನ್ನು ತುಳುವರೆಂದೋ ಕೊಂಕಣಿಗರೆಂದೋ ಕೊಡಗರೆಂದೋ ಅಷ್ಟೇ ಗುರುತಿಸಿಕೊಳ್ಳುತ್ತಾರೆ, ಕನ್ನಡಿಗರೆಂದಲ್ಲ ವೆಂದು ಅಣಕವಾಡುತ್ತಾರೆ. ಹೊರನಾಡಿನಲ್ಲಿದ್ದು ದೇಶದಲ್ಲಿ ಅಥವಾ ವಿಶ್ವದಲ್ಲಿ ಪ್ರಖ್ಯಾತರಾದ ಕನ್ನಡಿಗರಲ್ಲಿ ಕನ್ನಡದ ಸ್ವಾಭಿಮಾನ ಇಲ್ಲ ಎಂಬಂತಹ ಮಾತುಗಳು ಚರ್ಚಿತವಾಗುತ್ತಿವೆ. ಅಡಿಗನನ್ನೂ ಮಂಗಳೂರಿನವನು ಎಂದು ಮಾಧ್ಯಮಗಳು ಗುರುತಿಸಿದರೂ ಕರ್ನಾಟಕದವನೆಂಬ ವಿಚಾರ ಹೇಳಲಿಲ್ಲ ಎಂದು ಈ ಕನ್ನಡದ ಅಭಿಮಾನಿಗಳಿಗೆ ರೊಚ್ಚು. ಆತ ತಮ್ಮವನಲ್ಲ ಎಂಬಷ್ಟು ತಿರಸ್ಕಾರ ಕೂಡ ಮೂಡಿದೆ. ನಮ್ಮ ಬೇಂದ್ರೆ, ಕುವೆಂಪು, ಕಾರಂತ, ಮಾಸ್ತಿಯವರೆಲ್ಲ ಇಂಗ್ಲಿಷಿನಲ್ಲಿ ಬರೆಯುತ್ತಿದ್ದರೆ ನೋಬೆಲ್ ಬಹುಮಾನ ಬರುತ್ತಿತ್ತು ಎನ್ನುವ ನಮಗೆ ಅರವಿಂದ ಅಡಿಗ ಇಂಗ್ಲಿಷ್ ನಲ್ಲಿ ಬರೆದು ಬೂಕರ್ ಪ್ರಶಸ್ತಿ ಬಂದಾಗ ಹೆಮ್ಮೆಯಾಗುತ್ತಿಲ್ಲವೇ? ಆತ ಕನ್ನಡದಲ್ಲಿ ಬರೆಯಬೇಕು ಎಂದು ನಾವು ಒತ್ತಾಯಿಸಬೇಕೆ? ಸಾಹಿತ್ಯವಿರಲಿ, ಇನ್ಯಾವುದೇ ಕ್ಷೇತ್ರವಿರಲಿ ಕನ್ನಡ ಮಣ್ಣಿನ ಮಗನೊಬ್ಬ ಅಂತರಾಷ್ಟ್ರೀಯ ಸ್ಥಾನವನ್ನು ಗಳಿಸುವಾಗ ನಾವು ಹೆಮ್ಮೆ ಪಟ್ಟುಕೊಳ್ಳಬೇಕಲ್ಲದೆ ಅದರ ಬಗ್ಗೆ ಅನಾವಶ್ಯಕ ಚಕಾರವೆತ್ತುವುದರಿಂದ ಅವರ ಗೌರವಕ್ಕೇನು ಕಡಿಮೆಯಾಗುವುದಿಲ್ಲ ಎಂಬುದನ್ನು ನಾವು ತಿಳಿಯಬೇಕು. ಅಡಿಗನನ್ನು ಸಾಹಿತ್ಯದ ವಿದ್ಯಾರ್ಥಿಯಾಗಿ ನಾವು ಓದಬೇಕೆ ಅಥವಾ ಆತ ಕನ್ನಡಿಗನೆಂಬ ಹೆಮ್ಮೆಯಿಂದ ಓದಬೇಕೆ?

ಒಲವಿನಿಂದ

ಬಾನಾಡಿ

7 comments:

 1. nice article
  -anonymous

  ReplyDelete
 2. ಸಾಹಿತ್ಯದ ಸೊಬಗು ಹಾಗೂ ಸೊಗಡು ಭಾಷೆ, ಪ್ರದೇಶ, ದೇಶವನ್ನೂ ಮೀರಿದ್ದು. ಭಾಷೆ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತದೆ. ಅದಕ್ಕೊಂದು ಆಕರವನ್ನು ಕೊಡುತ್ತದೆ. ಹಾಗೆಂದು ಭಾಷೆಯೇ ಸಾಹಿತ್ಯವಲ್ಲ ಎನ್ನುವುದು ನನ್ನ ಅಭಿಮತ.

  ReplyDelete
 3. Article on Adiga is an excellant effort to bring all conflicts together. It exposes our own problems rather than Adiga's problems. I congratulate the writer, Regards-P. Bilimale

  ReplyDelete
 4. ಬೂಕರ್ ಬಹುಮಾನ ದೊರೆತದ್ದಕ್ಕಾಗಿ ಶ್ರೀ ಅಡಿಗರಿಗೆ ಅಭಿನಂದನೆಗಳು. ತಾನು ಕನ್ನಡಿಗನೆಂದು ಅವರೇ ಹೇಳಬೇಕಲ್ಲದೆ, ನಾವಲ್ಲ. ಆತ ಕನ್ನಡಿಗರಲ್ಲದಿದ್ದರೂ ಪರವಾ ಇಲ್ಲ. ಭಾರತೀಯರಾಗಿದ್ದರಲ್ಲ, ಸಾಕು.

  ReplyDelete
 5. ಮೊದಲನೆಯದಾಗಿ ಅಡಿಗ ಕನ್ನಡದಲ್ಲಿ ಬರೆಯಬೇಕಿತ್ತು ಎಂದು ಹೇಳಿದವರ್ಯಾರು!! ಅವನು ಕನ್ನಡಿಗನಾಗಿರಲಿ , ಯಾರಾದರು ಆಗಿರಲಿ ಆ ಪುಸ್ತಕವನ್ನು ಓದಬೇಕೆ ಹೊರತು ಅವನನ್ನಲ್ಲ. ಹಾಗು ತಾನು ಕರ್ನಾಟಕದವನು ಅಂತ ಆತ ಹೇಳಿಕೊಂಡ ಮೇಲೆ ನಾವು ಸಂಭ್ರಮಪಡಬೇಕೇ ಹೊರತು ಸುಮ್ಮನೆ ನಂ ಹುಡುಗ ಅಂತ ತಲೆ ಮೇಲೆ ಹೊರುವುದರಲ್ಲಿ ಅರ್ಥವಿಲ್ಲ.

  ಬುಕರ್ ಪ್ರಶಸ್ತಿ ಕಾಮನ್ ವೆಲ್ತ್ ದೇಶಗಳ ಇಂಗ್ಲಿಶ್ ಸಾಹಿತ್ಯಕ್ಕೆ ಮಾತ್ರ ಕೊಡುವಂಥದ್ದು ಅಲ್ಲವೇ? ಅದು ದೊಡ್ಡ ಅಂತಾರಾಷ್ಟ್ರೀಯ ಸಾಧನೆ ಎಂಬುದು ಮಾಧ್ಯಮಗಳ ಸೃಷ್ಟಿ . ಇತರ ಭಾಷೆಗಳಲ್ಲೂ ಇದಕ್ಕಿಂತ ಒಳ್ಳೆಯ ಕೃತಿಗಳು ಇವೆ. ವಾಸ್ತವದಲ್ಲಿ ಬೇರೆ ಭಾಷೆಯ ಕೃತಿಗಳಿಗೆ ಅಂತಹ ಪ್ರಶಸ್ತಿ ಯಾರೂ ಕೊಡುತ್ತಿಲ್ಲ ಅಷ್ಟೆ.

  ReplyDelete