Saturday, September 13, 2008

ಅಂತಿಮ ವಿದಾಯರಾತ್ರಿ ಮುಗಿದಿತ್ತು. ಮೂಡಣದಲ್ಲಿ ಕೆಂಪು ಕಣ್ಣು ತೆರೆಯುವ ಸನ್ನಾಹವಿತ್ತು.
ರಾತ್ರಿ ಎರಡು ಗಂಟೆಗೆ ಮುಗಿದ ಸಂಗೀತ, ನೃತ್ಯದ ನಂತರ ಮತ್ತೆ ಎರಡು ಗಂಟೆಯಷ್ಟಾದರೂ ಬೇಕಾಗಿ ಇದ್ದಿರಬಹುದು ಅವರಿಗೆ. ಅವನು, ಅವಳು, ಇವನು, ಇವಳು. ಗಾಡಿಯ ಗಾತ್ರ ದೊಡ್ಡದಿದ್ದರೂ ತುಂಬಬಹುದಿತ್ತು ನಾಲ್ವರನ್ನೇ.ಡ್ಯಾನ್ಸ್ ಹಾಲ್ ನಿಂದ ಹೊರಟ್ಟಿದ್ದು ಗೊತ್ತು. ಗಾಡಿ ಏರಿದ್ದು ಗೊತ್ತು. ಅವನ ಕೈಯಲ್ಲಿದ್ದ ಸಿಗರೇಟು ಇವಳ ಸ್ಕರ್ಟ್ ಕೆಳಗಿನ ತೊಡೆಗೆ ತಗುಲಿದಾಗ ಅವಳು ಚೀರಿದಳು.
ಸಿಟ್ಟಿನಿಂದ ಕಚ್ಚಿದಳು ಅವನ ತುಟಿಗಳನ್ನು. ಅವನು ಬರಸೆಳೆದಾಗ ಇವಳು ಇನ್ನೂ ಗಟ್ಟಿಯಾಗಿ ಹಿಡಿ ಎಂದಳು. ಗಾಡಿಯ ಹಿಂದಿನ ಸೀಟಿನಲ್ಲಿ ಬೆಂಕಿ ಬಿದ್ದಿದೆ ಎಂದು ಗೊತ್ತಾಗಲಿಲ್ಲ. ಸೀಟು ಒದ್ದೆಯಾಗಿತ್ತು. ಚಾಲಕನ ಕಣ್ಣುಗಳು ಅರೆ ಮುಚ್ಚುತಿದ್ದವು. ಅವಳು ಅವನಿಗೆ ಎಚ್ಚರವಿರಲಿ ಎಂದು ಕಿರುಚಾಡಿಕೊಂಡೇ ಮಾತಾಡುತ್ತಿದ್ದಳು.
ಡಿಸ್ಕ್ ನಿಂದ ಬರುತ್ತಿರುವ ಸಂಗೀತಕ್ಕೆ ಅವಳ ಕಿರುಚಾಟ ಪಲ್ಲವಿಯಾಗಿತ್ತು. ಹಿಮ್ಮೇಳದ ಕೋರಸ್ ಆಗದೆ. ಶಬ್ದಗಳು ಸಾಯುತ್ತಿದ್ದವು.
ಹೊಂಡಗಳಿದ್ದ ನಗರದ ರಸ್ತೆಯಲ್ಲಿ ಹೋಂಡಾ ಸಿಟಿ ಹಾರುತ್ತಿತ್ತು. ಇವನು ಓಡಿಸುತ್ತಿರಲಿಲ್ಲ. ಕಾಲು ಆಕ್ಸಿಲೇಟರನ್ನು ಒತ್ತುತಿತ್ತಷ್ಟೇ.
ಅಪಾರ್ಟ್‍ಮೆಂಟ್‍ನ ಗೇಟ್ ಬಳಿ ಬಂದಾಗ ಹಾಕಿದ ಬ್ರೇಕಿನ ಸದ್ದಿಗೆ ಟವರಿನಲ್ಲಿ ಮನೆಮಾಡಿದ್ದ ಗೂಬೆ ಹಾರಿಹೋಯಿತು. ಪಾರಿವಾಳಗಳು ಎದ್ದವು. ರಸ್ತೆಯಾಚೆ ಮುದುಡಿ ಮಲಗಿದ್ದ ನಾಯಿಗಳಿಗೊಮ್ಮೆ ಸಿಡಿಲು ಬಡಿದಂತಾಯಿತು. ಕುರ್ಚಿಯಲ್ಲಿ ತೂಕಡಿಸುತ್ತಿದ್ದ ಗೇಟ್ ಕೀಪರ್ ನಡುಗಿ ಕುರ್ಚಿಯೊಂದಿಗೆ ಬಿದ್ದ. ಬೀಳಲಿಲ್ಲ ಎಂದುಕೊಂಡೇ ಕುರ್ಚಿಯನ್ನು ಸರಿಯಿಡುತ್ತಲೇ ಗೇಟ್ ಹತ್ತಿರ ಹೋದ. ಕಳೆದ ತಿಂಗಳಷ್ಟೇ ಬಂದ ಗಾಡಿಯ ಪರಿಚಯವಿತ್ತು. ಒಳಗೆ ಯಾರು ಯಾರು ಎಂದು ಗುರುತಿಸುವುದು ಹೇಗೆ ಮತ್ತು ಯಾಕೆ?
ಗೇಟು ತೆರೆಯಿತು. ಲಿಫ್ಟ್‍ನ ಬಾಗಿಲೂ ತೆರೆಯಿತು. ಮನೆಯ ಬಾಗಿಲೂ ತೆರೆಯಿತು. ತೆರೆದ ಬಾಗಿಲು ಮುಚ್ಚಿದರು. ಮುಚ್ಚಿದೆಲ್ಲವನ್ನೂ ತೆರೆದರು.
ಕೇಕೆ, ಜಗಳ, ವಸ್ತುಗಳನ್ನು ಎಸೆದ ಶಬ್ದಗಳು ಮುಂಜಾನೆಯ ನೀರವತೆಯಲ್ಲಿ ಅಲೆಗಳನ್ನುಂಟು ಮಾಡಿದವು. ರಾತ್ರಿ ಮುಗಿಯುತ್ತಿದ್ದಂತೆ ಕಣ್ಣುಗಳು ಮುಚ್ಚುತಿದ್ದವು.
ದೊಪ್ಪೆಂದು ಬಿದ್ದ ಶಬ್ದವೋ, ಢಂ ಎಂದು ಸಿಡಿದ ಶಬ್ದವೋ ಗೊತ್ತಾಗಲಿಲ್ಲ.
***
ಕೆಳಗಿನ ಮನೆಯವನು ಮುಂಜಾನೆ ವಾಕ್ ಹೋಗಬೇಕೆಂದು ನಿರ್ಧರಿಸಿ ಮಲಗಿದ್ದವನಿಗೆ ಬೇಗ ಎಚ್ಚರವಾಯಿತು. ಕಿಟಿಕಿಗೆ ಹಾಕಿದ್ದ ಕರ್ಟನ್ ಡ್ರೈ ಕ್ಲೀನಿಂಗ್ ಗೆ ಕೊಟ್ಟಿದ್ದರಿಂದ ಬಾಲ್ಕನಿಯಿಂದ ಹುಟ್ಟುವ ಸೂರ್ಯ ಕಾಣುತಿದ್ದ. ವಾಕ್ ಹೋಗುವ ಮನಸಿರಲಿಲ್ಲ. ನಿದ್ದೆ ಬಿಟ್ಟ ಕಣ್ಣುಗಳನ್ನು ಉಜ್ಜುತ್ತಾ ಬಾಲ್ಕನಿಯಿಂದಲೇ ನೋಡಿದ. ಸೂರ್ಯೋದಯದ ಸುಂದರತೆಯನ್ನು. ಈ ಸೊಬಗನ್ನು ಈ ನಗರದಲ್ಲಿ ಸವಿಯಲು ಭಾಗ್ಯ ಬೇಕಷ್ಟೆ ಎಂದುಕೊಂಡ. ರಾತ್ರೆ ಮಿಸ್ಸಾದ ಎಸ್‍ಎಮ್‍ಎಸ್ ಗಳನ್ನು ನೋಡಲೆಂದು ತೆಗೆದುಕೊಂಡ ಮೊಬೈಲ್‍ನಿಂದಲೇ ಸೂರ್ಯೋದಯದ ಚಿತ್ರಗಳನ್ನು ತೆಗೆಯಲು ಆರಂಭಿಸಿದ.
ಪೇಪರ್ ಓದಿ ಆದ ನಂತರ ಸುದ್ದಿ ನೋಡೋಣವೆಂದು ಟಿ.ವಿ. ಆನ್ ಮಾಡಿದರೆ ಫ್ಲ್ಯಾಟ್ ವೊಂದರಲ್ಲಿ ಇಂದು ಮುಂಜಾನೆ ವೇಳೆ ನಡೆದ ಕೊಲೆಯೋ, ಆತ್ಮಹತ್ಯೆಯೋ ಎಂಬ ಸುದ್ದಿ ಬ್ರ್‍ಏಕ್ ಆಗುತ್ತಿತ್ತು. ಹೊರಗಡೆ ಸದ್ದು. ಬಾಲ್ಕನಿಯಲ್ಲಿ ಬಂದು ನೋಡಿದರೆ ಟಿ.ವಿ. ಕ್ಯಾಮರಗಳು, ಒಬಿ ವ್ಯಾನ್ ಗಳು ಅಪಾರ್ಟ್‍ಮೆಂಟ್‍ನ ಹೊರಗೆ ನಿಂತಿವೆ. ಗೇಟಿನವನೊಡನೆ ಸೆಣಸಾಡುತ್ತಾರೆ. ಒಳಗೆ ಬರಲು.
ಸುದ್ದಿ ಬ್ರೇಕ್ ಆಗಿದ್ದು ತನ್ನ ಮನೆಯ ಮೇಲಿನ ಪ್ಲ್ಯಾಟ್‍ನಲ್ಲಿಯೇ ಎಂದು ಗೊತ್ತಾಯಿತು. ಟಿವಿ ಆರಿಸಿ ಮೊಬೈಲ್ ನಲ್ಲಿದ್ದ ಫೋಟೋಗಳನ್ನು ಡೌನ್‍ಲೋಡ್ ಮಾಡಿ ಗೆಳೆಯರಿಗೆ ಕಳುಹಿಸಬೇಕೆಂದು ಕಂಪ್ಯೂಟರ್ ಆನ್ ಮಾಡಿದ.
ಒಲವಿನಿಂದ
ಬಾನಾಡಿ

5 comments:

 1. "ಇದು ಬರಿ ಬೆಳಗಲ್ಲೋ ಅಣ್ಣಾ" ಅದ್ಭುತ ಚಿತ್ರಗಳು!

  ಅಂದಹಾಗೆ ಇದು ನೀವು ರಾತ್ರಿಕಂಡ ಕನಸೋ ಇಲ್ಲಾ ಹಗಲು ಕಂಡ ಹಗಲುಗನಸೋ? :)

  ಇದು ನಿಜವಾಗಿಯೂ ನಿಮ್ಮ ಫ್ಲಾಟ್ ನಲ್ಲೇ ನಡೆದ ಘಟನೆಯೇ?!!

  ReplyDelete
 2. ಸರ್..
  ನಮಸ್ತೆ..ನಿಮ್ಮ ಕಟ್ಟಡದಲ್ಲೇ ನಡೆದ ಘಟನೆಯನ್ನು ಚೆನ್ನಾಗಿ ನಿರೂಪಿಸಿದ್ದೀರಿ..ನಿಜವಾಗ್ಲೂ ತುಂಬಾ ಚೆನ್ನಾಗಿದೆ ಬರಹ.
  -ಒಲವಿನಿಂದ
  ಚಿತ್ರಾ

  ReplyDelete
 3. ಚಿತ್ರಗಳು ತುಂಬಾ ಚೆನ್ನಾಗಿವೆ.
  ಕತೆಯ ವಿವರಗಳು ಕಣ್ಣಿಗೆ ಕಟ್ಟುವಂತಿವೆ.
  ಎರಡಕ್ಕೂ ಅಭಿನಂದನೆಗಳು.

  ReplyDelete
 4. ವೇಗ..! ಬದುಕು ಮತ್ತು ಸಾವು ಎರಡಕ್ಕೂ ಇದೆ ...
  ಇಂಥ ಜೀವನಕ್ಕೆ ಅಸ್ಟೊಂದು ಆವಿಷ್ಕಾರಗಳು, ಸಂಶೋಧನೆಗಳು ಬೇಕಾ?

  ReplyDelete
 5. ಚೆಂದದ ಚಿತ್ರಗಳು:)

  ReplyDelete