Thursday, August 28, 2008

"ಶಕ್ತಿಶಾಲಿ" ಹಳ್ಳಿ

ಅದೊಂದು ಬೃಹತ್ ಕಂಪನಿ ತನ್ನ ಉತ್ಪಾದನೆಗಳಿಂದ ಭಾರತದ ಹಳ್ಳಿಗಳನ್ನು ಹೇಗೆ "ಶಕ್ತಿಶಾಲಿ"ಗೊಳಿಸುತ್ತಿದೆ ಎಂದು ತನ್ನ ಪಾಲುದಾರರಿಗೆ ತಿಳಿಸಲು ಒಂದು ಸಂವಹನ ಪ್ರಕ್ರಿಯೆಯನ್ನು ತಯಾರು ಮಾಡುವ ಕೆಲಸದಲ್ಲಿ ನಾನೂ ಒಳಗೊಂಡೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಉತ್ಪಾದನೆಗಳನ್ನು ಮಾರಾಟಮಾಡುವ ಆ ಕಂಪನಿಯ ಕೆಲಸದ ತಾಣವೊಂದು ಪಂಜಾಬಿನ ಹಳ್ಳಿಯೊಂದರಲ್ಲಿತ್ತು. ನಗರದಿಂದ ರೈಲು ಅಥವಾ ಡೀಲಕ್ಸ್ ಬಸ್ಸುಗಳಿರದಿದ್ದುದರಿಂದ ನಾನು ಮತ್ತು ಕ್ಯಾಮರಮ್ಯಾನ್ ಗೌತಮ್ ಸಾಮಾನ್ಯ ಬಸ್ಸೊಂದರಲ್ಲಿ ರಾತ್ರಿಯಿಡೀ ಪ್ರಯಾಣಬೆಳೆಸಿ ಹಳ್ಳಿಯನ್ನು ತಲಪಿದೆವು. ಅಲ್ಲಿ ಕಂಪೆನಿಯ ಅತಿಥಿ ಗೃಹದಲ್ಲಿ ಫ್ರೆಷ್ ಆಗಿ ಮುಂಜಾನೆ ನಮ್ಮ ಕೆಲಸದಲ್ಲಿ ತೊಡಗಿದೆವು. ಕಂಪೆನಿಯು ಹಳ್ಳಿಯ ಶಾಲೆಗಳಿಗೆ ನೀರಿನ ವ್ಯವಸ್ಥೆ, ಬೆಂಚು, ಕಂಪ್ಯೂಟರ್‍‍ಗಳನ್ನು ನೀಡಿತ್ತು. ಹಾಗಾಗಿ ಕೆಲವು ಶಾಲೆಗಳಿಗೆ ಹೋಗೋಣವೆಂದು ನಾನು ನಿರ್ಧರಿಸಿದೆ. ನಾವು ಜೀಪಿನಲ್ಲಿ ಕುಳಿತು ಪಂಜಾಬಿನ ಹಸಿರು ಗದ್ದೆಗಳೆಡೆಯಿಂದ ಹಾದು ಹೋಗುವ ಹೆದ್ದಾರಿ ಬಿಟ್ಟು ಹಳ್ಳಿಗಳ ಸಪೂರದ ರಸ್ತೆಗೆ ಬಂದೆವು. ಪಂಜಾಬ್ ಒಂದು ಶ್ರೀಮಂತ ರಾಜ್ಯ ಎಂಬ ನನ್ನ ಭಾವನೆಯನ್ನು ಅಲ್ಲಿನ ಹಳ್ಳಿಗಳು ಬಿಂಬಿಸುತ್ತಿರಲಿಲ್ಲ. ಕೂಲಿಕೆಲಸ ಮಾಡುತ್ತಿರುವ ಸರ್ದಾರ್‍‍ಗಳು, ಬೆಂಚಿಲ್ಲದೇ ನೆಲದಲ್ಲಿ ಓದುವ ಮಕ್ಕಳು, ಅದರೆಡೆಯಲ್ಲೊಂದು ಆಶಾಕಿರಣವೆಂಬಂತೆ ಹಳ್ಳಿಯ ಶಾಲೆಯ ಅಧ್ಯಾಪಕಿಯೊಬ್ಬಳು ಅತ್ಯಂತ ಆನಂದದಿಂದ ಮಕ್ಕಳಿಗೆ ಪಾಠಮಾಡುವ ರೀತಿ ಕಂಡು ಸೋಜಿಗವೆನಿಸಿತು. ವಿವಿಧ ಆಟೋಟಗಳಲ್ಲಿ ಆ ಶಾಲೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಬಹುಮಾನಗಳು ಬಂದಿದ್ದವು. ನಾವು ಕಂಪ್ಯೂಟರ್‍‍ಗಳನ್ನು ಕೆಲಸಮಾಡುವ ಸ್ಥಿತಿಯಲ್ಲಿ ಕಾಣಿಸಲಾಗಲಿಲ್ಲ. ಕಾರಣ ಕರೆಂಟಿರಲಿಲ್ಲ. ನೀರಿನ ನಳ್ಳಿಗಳನ್ನು ತೆರೆದಾಗಲೂ ನೀರು ಬರಲಿಲ್ಲ. ಕರೆಂಟಿರಲಿಲ್ಲ. ಸೆಖೆಯಲ್ಲಿ ನೆಲದ ಮೇಲೆ ಕುಳಿತು ಓದುತ್ತಿದ್ದ ಮಕ್ಕಳ ಉತ್ಸಾಹ, ಉಲ್ಲಾಸಗಳನ್ನು ಅನಿವಾರ್ಯವಾಗಿ ಕ್ಯಾಮರದಲ್ಲಿ ತುಂಬಿಕೊಂಡೆವು.ಪಂಜಾಬಿನ ಹಳ್ಳಿಗಳ ಇನ್ನೊಂದು ಮುಖವನ್ನು ನೋಡಲು ಈ ಎಲ್ಲಾ ಮುಖವನ್ನು ನೋಡಬೇಕಾಯಿತು. ಕಂಪೆನಿಯ ಕೆಲಸಕ್ಕೆ ಬೇಕಾದ ಸಾಮಾಗ್ರಿಯನ್ನು ಹವಾ ನಿಯಂತ್ರಿತ ಕೊಠಡಿಗಳಲ್ಲಿ ಅತ್ಯಾಧುನಿಕ ಉಪಕರಣಗಳನ್ನಿಟ್ಟು ಕೆಲಸಮಾಡುವ 'ಕ್ರಿಯೇಟಿವ್ ಟೀಮ್' ತಮಗೆ ಬೇಕಾದಂತೆ ತಯಾರು ಮಾಡುತ್ತಿದೆ. ಈ ಮುಖಗಳು ನನ್ನನ್ನು ಬಹಳವಾಗಿ ಕಾಡುತ್ತಿರುತ್ತವೆ.










3 comments:

  1. ವಾಸ್ತವ ಮುಖವನ್ನು ತೋರಿಸಿದ್ದೀರಿ. ಅಭಿನಂದನೆಗಳು.

    ReplyDelete
  2. ಒಂದೆಡೆ ನೀರಿಲ್ಲದ, ಕರೆಂಟಿಲ್ಲದ ಸೆಕೆಯಲ್ಲಿ, ನೆಲದ ಮೇಲೆ ಕುಳಿತು ಆನಂದದಿಂದ ಪಾಠ ಕಲಿಯುವ ಮಕ್ಕಳು, ಇನ್ನೊಂದೆಡೆ ಹವಾ ನಿಯಂತ್ರಿತ ಕೊಠಡಿಯಲ್ಲಿ , ಸರ್ವ ಸೌಕರ್ಯಗಳ ಮಧ್ಯೆ ಕೆಲಸ ಮಾಡುವ ’ಕ್ರಿಯೇಟಿವ್ ಟೀಮ್ ’ ಇವೆರಡೂ ಕಟು ವಾಸ್ತವದ ನಿಚ್ಚಳವಾದ ಬಿಂಬಗಳು.
    ಧನ್ಯವಾದಗಳು

    ReplyDelete
  3. ಸರ್. ನಮಸ್ತೆ...
    ಇದು ಶಕ್ತಿಶಾಲಿ.ಹಳ್ಳಿಯ .ಅಶಕ್ತತೆ..ನಮ್ಮ ದೇಶದ ಇಂಥ 'ಸತ್ಯ'ಗಳು ಮಾತ್ರ ಇಂದಿಗೂ ಕತ್ತಲಲ್ಲೇ ಇರುವುದು ದುರದೃಷ್ಟಕರ.
    -ಚಿತ್ರಾ

    ReplyDelete