Tuesday, August 26, 2008

ಮದಿರೆಯ ಬಟ್ಟಲು ಖಾಲಿಯಾಗಿದೆ.

ಮದಿರೆಯ ಬಟ್ಟಲು ಖಾಲಿಯಾಗಿದೆ.

ಸುರಿದು ಸುರಿದು ಹೀರಿಯಾದ ಮೇಲೆ ನದಿಯಾಗಿದೆ. ಸಾಗರ ಸೇರಲೆಂದು ಹೊರಟ ನದಿ ಬತ್ತಿ ಹೋಗಿದೆ. ತುಂಬಿ ಹೋದ ಬಟ್ಟಲಿಂದ ಹರಿದು ಹೋದ ಹನಿಗಳು ಕಾಯುತ್ತಿವೆ ಕಣ್ಣ ಮೂಲೆಯಲ್ಲಿ ಕುಳಿತು. ಸಂಗಾತಿಯ ಸನಿಹಕ್ಕೆ, ಬೀಸುತ್ತಿರುವ ತಂಗಾಳಿಗೆ. ಕನಸುಗಳು ಕಣ್ಣಂಚಿನಲ್ಲಿ ಮೂಡುತ್ತವೆ. ಮುಂಜಾನೆಯಾಗುವುದೇ ಬೇಡವೆನಿಸುತ್ತದೆ. ಕನಸುಗಳು ತೇಲುತ್ತವೆ, ಮೋಡವಾಗುತ್ತವೆ. ಹನಿಯಾಗುತ್ತವೆ. ಮತ್ತೆ ತುಂಬುತ್ತವೆ ನದಿ, ಕಡಲು. ಅಪ್ಪಲಿಸುವ ತೆರೆಗಳು ಹಿಡಿಯಲಾಗದ ತೊಳಲಾಟಗಳು.

ಮದಿರೆಯ ಬಟ್ಟಲು ಖಾಲಿಯಾಗಿದೆ. ಸನಿಹ ಕುಳಿತ ಸ್ನೇಹ ಮೌನವಾಗಿದೆ. ಮೌನದ ಅಬ್ಬರಕ್ಕೆ ಎದೆಯೊಡೆದುಕೊಳ್ಳುವಷ್ಟು ಭಯ ತುಂಬಿದೆ. ಮೌನವೂ ಮಾತಾಡತೊಡಗಿದೆ. ತಂಗಾಳಿ ಬರಲೆಂದು ಕಿಟಿಕಿ ತೆರೆದು ಕೊಂಡರೆ ರಸ್ತೆಯಂಚಿನಲ್ಲಿ ಓಡುತ್ತವೆ ಬದುಕುಗಳು. ಮದಿರೆಯ ಬಟ್ಟಲು ಖಾಲಿಯಾಗಿದೆ.

ಮದಿರೆಯ ಬಟ್ಟಲು ಖಾಲಿಯಾಗಿದೆ. ಮನದೊಳಗೇನದು ಯುದ್ಧವೋ, ಪ್ರಳಯವೋ ಅಲ್ಲ ಗುಣವಾಗದ ಕಾಯಿಲೆಯೋ. ಅರ್ಥವಾಗದ ಕಲೆ ಯಾವುದು? ಕಾವ್ಯ ಯಾವುದು? ಪ್ರಶ್ನೆಗಳನ್ನೇ ಕುಡಿದು ಬಿಡಬೇಕು. ಮದಿರೆಯ ಬಟ್ಟಲು ಖಾಲಿಯಾಗಿದೆ.

ಮದಿರೆಯ ಬಟ್ಟಲು ಖಾಲಿಯಾಗಿದೆ. ರಾತ್ರಿಯೆಲ್ಲಾ ಮಲಗಿದೆ. ಬಾನು ತುಂಬಾ ಚುಕ್ಕೆಯ ಚಾದರಹೊದ್ದು. ನಿಂತೇ ಇರುವ ಕಂಬಗಳನ್ನು ಮಲಗಲು ಬಿಡಿ. ಹಿಡಿದುಕೊಳ್ಳಬೇಡಿ. ಕಾದು ಕುಳಿತಿದ್ದಾನೆ ಮುಂಜಾನೆಯ ಸೂರ್ಯ.

ಮದಿರೆಯ ಬಟ್ಟಲು ಖಾಲಿಯಾಗಿದೆ. ತೊರೆಯಾಗಿ ಹರಿಯಬಾರದೇ ಶಿವ ಜಡೆಯಿಂದ ದೇವಗಂಗೆಯಾಗಿ. ತುಂಬಿಕೊಳ್ಳಬಾರದೇ ಎದೆಯೊಳಗಿನ ಮಡುವಿನಲ್ಲಿ. ಈಜಾಡುವೆವು. ಬತ್ತಲಾಗಿ. ಬರಿದು ಬರಿದು ಮೈಯಲ್ಲಿ ಎಲ್ಲವನ್ನೂ ನೋಡುತ್ತಾ. ಭಕ್ತಿಯಲಿ ಶಿವನ ವರಿಸುವ ಅಕ್ಕನಾಗುವೆ. ಬಿಟ್ಟ ಜಡೆಯಲ್ಲಿ ಮತ್ತೆ ಹುಟ್ಟಿ ಬರಬೇಕೆನ್ನುವೆ.

ಮದಿರೆಯ ಬಟ್ಟಲು ಖಾಲಿಯಾಗಿದೆ.ಕಾದು ಕುಳಿತ ಕೆಂಪು ತುಟಿಗಳು ಕೆಂಡವಾಗಿವೆ. ಸುಡಲೆಂದು ನನ್ನನ್ನೇ ಕಾಯುತ್ತಿವೆ. ಪ್ರೇಮಾಮೃತ ಸುರಿಸಿ ತಣಿಸಲೇನು ಆ ತುಟಿಗಳನು?

ಮದಿರೆಯ ಬಟ್ಟಲು ಖಾಲಿಯಾಗಿದೆ.ಯಾಕೆ ಸಂಭ್ರಮ. ತುಂಬು ತಿಂಗಳ ತಣ್ಪಿಗೋ? ಮುಸುಕಿನೊಳಗಿನ ಮಿಲನಕೋ? ನನ್ನನ್ನೇ ಕರಗಿಸಿ ಬಿಡು. ನಿನ್ನೊಳಗೆ ನಾನಾಗುವೆ. ಮದಿರೆಯಿಲ್ಲದ ನಾನೂ ಖಾಲಿ ಖಾಲಿ. ಮದಿರೆಯ ಬಟ್ಟಲೂ ಖಾಲಿ ಖಾಲಿ.
ಒಲವಿನಿಂದ

ಬಾನಾಡಿ

7 comments:

 1. ನನ್ನ ಸಹೋದ್ಯೋಗಿಯೊಬ್ಬರು ಹೇಳಿದ್ದು ಇಲ್ಲಿ ಟೈಪಿಸುತ್ತಿದ್ದೇನಷ್ಟೇ....

  ಮತ್ತೆ ಒಂದು 30ml ವಿಸ್ಕಿ, 30ml ನೀರು, 30ml ಸೋಡಾ ಮಿಕ್ಸ್ ಮಾಡಬೇಕಂತೆ ಮತ್ತೆ ಮದಿರೆಯ ಬಟ್ಟಲು ತುಂಬುತ್ತದೆಯಂತೆ :) ? !!!

  ನಾನು ಹೇಳೋದು....

  ಯಾಕೋ ನಿಮ್ಮ ಹೃದಯ ಭಾರವಾಗಿದೆ ಅನ್ಸತ್ತೆ... ಆದ್ರೂ ಇದು ಬರೆದಾದ ಮೇಲೆ ಸ್ವಲ್ಪ ನಿರಾಳ ಅನ್ನಿಸಿರಬೇಕಲ್ಲ. ಎಲ್ಲಿ ಹೋದಳು ಆ ಗೆಳತಿ?

  ReplyDelete
 2. ಧನ್ಯವಾದಗಳು... ತುಂಬಿದಕ್ಕೆ.
  ಒಲವಿನಿಂದ
  ಬಾನಾಡಿ.

  ReplyDelete
 3. ಮದಿರೆಯ ಬಟ್ಟಲು ಖಾಲಿಯಾಗಿಯೇ ಇರಲಿ ಬಿಡೀ. ನಿಮಗೇ ಒಳಿತು.. ನಿಮ್ಮಾರೋಗ್ಯಕ್ಕೂ ಒಳಿತು. ಮನದೊಳಗಿನ ಖಾಲಿತನಕ್ಕೆ ಬ್ಲಾಗ್ ಅನ್ನು ಮಾತ್ರ ತುಂಬಿತ್ತಿರಿ. ಮನವೂ ನಿರಾಳತೆಯನ್ನು ತುಂಬಿಕೊಳ್ಳತೊಡಗುತ್ತದೆ :)

  ReplyDelete
 4. ನೀವೆಲ್ಲಾ ತುಂಬುವ ಒಂದೊಂದು ಹನಿಗಳಿಂದ ಬಟ್ಟಲು ತುಂಬಲಿ! ಅದೇ ಅಮಲು ನನಗೆ...
  ಒಲವಿನಿಂದ
  ಬಾನಾಡಿ.

  ReplyDelete
 5. ಕವಿತೆ ಇದ್ದಂಗಿದೆ.. ಓದಿಯಾದಮೇಲೂ ಏನೋ ಒಂಥರಾ ಗುಂಗು: ಮದಿರೆ ಹಾಗೆ.. :)

  ReplyDelete
 6. ಏನ್ಸಾರ್ 90 ಹಾಕಿ ಬರೆದ ಹಾಗಿದೆ. ಆದರೆ ಭಾಷೆ, ನಿರೂಪಣೆ ತುಂಬಾ ಚೆನ್ನಗಿದೆ; ಕೊನೆಯ ಸಾಲು ಓದುವಾಗ ಛೇ! ಮುಗಿದೇಬಿಟ್ಟಿತ್ತಲ್ಲಾ ಅನಿಸಿಬಿಡುವಷ್ಟು! ಮದಿರೆಯ ಬಟ್ಟಲು ಖಾಲಿ..ನಾನು ಖಾಲಿ...ಯಾಕ್ ಸರ್ ಬೊಬ್ಬಿಡ್ತೀರಿ..ಬಟ್ಟಲು ಖಾಲಿಯಾದರೆ..ಮನಸ್ಸು, ಬದುಕು ಖಾಲಿಯಾಗದಿರಲಿ. ಕಣ್ಣಂಚಿನಲ್ಲಿ ಮೂಡುವ ಅಮೂರ್ತ ಕನಸುಗಳಿಗೆ ಮೂರ್ತ ರೂಪ ಕೊಟ್ಟುಬಿಡಿ. .
  -ಚಿತ್ರಾ

  ReplyDelete
 7. ಬನ್ನಿ... ಎಲ್ಲ ಸೇರಿ ಮದಿರಯ ಬಟ್ಟಲು ತುಂಬಿಸೋಣ....
  ಒಲವಿನಿಂದ
  ಬಾನಾಡಿ

  ReplyDelete