Saturday, August 9, 2008

'ಬರು' ಅವರು ಹೊರಟಾಗ

ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಸಂಪಾದಕನಾಗುವುದು ಒಂದೊಮ್ಮೆ ದೇಶದ ಎರಡನೇ ಅತ್ಯಂತ ಉನ್ನತ ಸ್ಥಾನವಾಗಿತ್ತು. ದಿಲೀಪ್ ಪಡ್‍ಗಾಂವ್‍ಕರ್‍ ನಂತರ ಆ ಪತ್ರಿಕೆಯ ಲಕ್ಷಣ ಮತ್ತು ಅದನ್ನು ಸಂಪಾದಿಸುವವರ ಪ್ರಾಮುಖ್ಯತೆ ಇಳಿಯಿತು.
ಇಂದು ಯಾವುದೇ ಪತ್ರಿಕೆ ಅದರ ಸಂಪಾದಕರ ಹೆಸರಿನಿಂದ ನಡೆಯುತ್ತದೆ ಎನ್ನಲಾಗುವುದಿಲ್ಲ. ಬೆರಳೆಣಿಕೆಯಷ್ಟು ಪತ್ರಕರ್ತರಷ್ಟೇ ಇಂದು ಓದುಗರಲ್ಲಿ ಮತ್ತು ಸಮಾಜದಲ್ಲಿ ಗೌರವ ಮತ್ತು ಮನ್ನಣೆಯನ್ನು ಪಡೆದಿದ್ದಾರೆ.
ಮಾಧ್ಯಮದವರಿಗೆ ಅನ್ವಯವಾಗುವ ಹಲವಾರು ಪದಗಳು ನನಗೆ ತಿಳಿದಿರುವುದು ಸಂತೋಷಕೊಡುತ್ತದೆ.
ಮಾಧ್ಯಮದಲ್ಲಿ ಬರುವ ಸುದ್ದಿಗಳನ್ನು ನೋಡಿದಾಗ, ಓದಿದಾಗ ನಮ್ಮ ಮನಸ್ಸಿನಲ್ಲಿ ಆ ಮಾಧ್ಯಮದ ವ್ಯಕ್ತಿಗಳ ಬಗ್ಗೆ ತಿಕ್ಕಲುಗಳು, ಎಡೆಬಿಡಂಗಿಗಳು, ತೆವಲು ತೀರಿಸುವವರು, ತಲೆಹಿಡುಕರು, ಲಫಂಗರು ಇತ್ಯಾದಿ ಪದಗಳು ಮೂಡಿಬಂದರೆ ಅದೇನು ಆಶ್ಚರ್ಯದ ಸಂಗತಿಯಲ್ಲ. ಈ ತರದ ವರ್ಣನೆಗಳನ್ನು ಓದಿದ ಪತ್ರಕರ್ತರು ಉರಿದು ಬೀಳುತ್ತಾರೆ. ಅವರು ಉಪಯೋಗಿಸುವ ಪದಗಳು ಅವರಿಗೇ ಅರ್ಥವಾಗುವುದಿಲ್ಲ ಇನ್ನು ನಾನು ಉಪಯೋಗಿಸುವ ಪದಗಳು ಅವರಿಗೆ ಅರ್ಥವಾಗದು ಎಂಬ ಉದ್ದಟತನವನ್ನು ನಾನೂ ಹೊಂದಿದರೆ ನಾನೂ ಒಬ್ಬ ಯಶಸ್ವಿ ಪತ್ರಕರ್ತನಾಗುತ್ತೇನೆ. ಮಾಧ್ಯಮದವರ ಪ್ರಕಾರ ಅವರಿಗೆ ಗೊತ್ತಿಲ್ಲದ ವಿಚಾರ ಸಮಾಜದಲ್ಲಿಲ್ಲ. ಇನ್ನು ಸ್ವ ವಿಮರ್ಶೆ ಮಾಡಿಕೊಳ್ಳುವ ಸಾಮರ್ಥ್ಯ ಅವರಲ್ಲಿ ಎಲ್ಲಿದೆ. ಮಾಧ್ಯಮವೆನ್ನುವುದು ಸಮಾಜದ ಕನ್ನಡಿ. ನಾವು ಹಾಗಿರಲು ನೀವೇ ಕಾರಣ ಎಂದು ಮತ್ತೆ ತಮ್ಮ ಎಡೆಬಿಡಂಗಿತನವನ್ನು ತೋರಿಸಿಯಾರು.
ಮೊನ್ನೆ ಪತ್ರಕರ್ತನೊಬ್ಬನು ದೇಶದ ಹಿರಿಯ ಕೈಗಾರಿಕೋದ್ಯಮಿಯೊಬ್ಬರನ್ನು ಏಕವಚನದಿಂದ ಕರೆದು ಮಾತನಾಡಿಸುತ್ತಿದ್ದ. ಅದನ್ನು ಕಂಡ ಬಹಳಷ್ಟು ಮಂದಿ ಆತನ ಕೊಬ್ಬನ್ನು ಜರೆಯುತ್ತಾ ತನ್ನ ತಂದೆಯ ವಯಸ್ಸಿನ ಹಿರಿಯರನ್ನು ಏಕವಚನದಲ್ಲಿ ಕರೆದು ಮಾತಾನಾಡಿಸುವ ಈ ತುಚ್ಛ ಯಾರು ಎಂದಾಗ ಒಬ್ಬರು ಆತ ಪತ್ರಕರ್ತ ಎಂದು ಹೇಳಿದರು. ಮಾಧ್ಯಮದ ಮಂದಿ ತಾವು ಜಾರಿಬಿದ್ದ ಕೊಳಚೆಗುಂಡಿಯಿಂದ ತನ್ನಷ್ಟು ಶುಭ್ರ ಇನ್ಯಾರು ಇಲ್ಲ ಎಂದು ಚೀರಿ ಹೇಳುವಾಗ ದಿಗ್ಭ್ರಮೆ ಮೂಡುತ್ತದೆ.
ದೇಶದ ಅತ್ಯತ್ತಮ ಮಾಧ್ಯಮ ಹುದ್ದೆಯನ್ನು ಪಡೆಯುವ ಕನಸುಗಳನ್ನು ಹೊತ್ತವರಿಗೆ ಇಂದು ಸ್ವಲ್ಪವಾದರೂ ಗೌರವವನ್ನು ಕೊಡುವ ಹುದ್ದೆಯೆಂದರೆ ಪ್ರಧಾನಿಯ ಮಾಧ್ಯಮ ಸಲಹೆಗಾರನ ಹುದ್ದೆ. ಅರ್ಥಾತ್ ಪ್ರಿನ್ಸಿಪಾಲ್ ಇನ್‍ಪಾರ್‍ಮೇಷನ್ ಆಫೀಸರ್ ಹುದ್ದೆ.
ಈಗ ತಾನೆ ಆ ಹುದ್ದೆಯಿಂದ ಸ್ವಯಂ ನಿವೃತ್ತಿಯಾದ ಸಂಜಯ ಬರು ಅವರು ಮತ್ತಷ್ಟು ಘನತೆಯನ್ನು ತಂದು ಕೊಟ್ಟಿದ್ದಾರೆ.
ಕನ್ನಡಿಗರಾದ ಎಚ್. ವೈ. ಶಾರದಾಪ್ರಸಾದ್, ಐ. ರಾಮಮೋಹನ್ ರಾವ್, ನರೇಂದ್ರ ಎ ಯಂತಹವರಿಂದ ಅತ್ಯಂತ ಘನತೆಯನ್ನು ಪಡೆದ ಈ ಹುದ್ದೆಯ ಗೌರವವನ್ನು ಅವರು ಕಾಯ್ದು ಕೊಂಡರು.
ಫೈನಾನ್ಸಿಯಲ್ ಎಕ್ಸ್‍ಪ್ರೆಸ್‍ನ ಮುಖ್ಯ ಸಂಪಾದಕರಾಗಿದ್ದ ಸಂಜಯ್ ಬರು ದೆಹಲಿಯ ಪ್ರತಿಷ್ಟಿತ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದವರು.
ಸೂಕ್ಷ್ಮ ಬರವಣಿಗೆಗಳಿಂದ ಹೆಸರು ಮಾಡಿದ್ದ ಬರು ಅವರು ಪ್ರಧಾನ ಮಂತ್ರಿಯ ಮಾಧ್ಯಮ ಸಲಹೆಗಾರರಾಗಿ ಆಯ್ಕೆ ಯಾದುದು ಪತ್ರಕರ್ತರಿಗೆಲ್ಲಾ ಆಶ್ಚರ್ಯಮೂಡಿಸಿತ್ತು.
ಅತ್ಯಂತ ಪ್ರಭಾವಿ ಹುದ್ದೆಯಲ್ಲಿದ್ದೂ ಏನೇನೋ ಕರಾಮತ್ತು ಮಾಡಬಹುದಾಗಿದ್ದ ಸಂಜಯ ಬರು ಅವರು ತನ್ನ ಮಗಳ ಜತೆಯಿರಲೆಂದು ಸ್ವಯಂ ನಿವೃತ್ತಿ ಹೊಂದಿದ್ದಾರೆ. ಅವರಿಗೆ ಅಧಿಕಾರ ಸಿಕ್ಕಿದಷ್ಟೇ ಆಶ್ಚರ್ಯ ಅವರು ನಿವೃತ್ತಿ ಘೋಷಿಸಿದಾಗಲೂ ಆಯಿತು.
ಮಾಮೂಲಿ ತಿಕ್ಕಲುತನದ ಪತ್ರಕರ್ತನಂತೆ ಆತ ವರ್ತಿಸಲಿಲ್ಲ. ಅವರು ತಮ್ಮ ಹುದ್ದೆಯ ಗೌರವವನ್ನು ಎತ್ತಿ ಹಿಡಿದು ಹೊರಟಿದ್ದಾರೆ.
ಬರು ಅವರು ನನಗೇನು ವೈಯಕ್ತಿಕ ಅಥವಾ ವ್ಯಾವಹಾರಿಕ ಸಂಬಂಧಿಯಲ್ಲ. ನಾನು ಬರೆದುದನ್ನು ಆತ ಓದಲಾರರು. ಹುದ್ದೆಯ ಗೌರವಕ್ಕೆ ಕುಂದು ಬಾರದಂತೆ ನಡೆದ ಬರು ಅವರನ್ನು ಕಂಡಾಗ ಖುಷಿಯಗುತ್ತದೆ. ಹೆಮ್ಮೆಯಾಗುತ್ತದೆ. ಮಾಧ್ಯಮದ ವ್ಯಕ್ತಿಯೊಬ್ಬ ತನ್ನ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಹುದ್ದೆಯನ್ನು ಬಯಸುವುದಾದರೆ ಅದು ಪ್ರಧಾನ ಮಂತ್ರಿಯ ಮಾಧ್ಯಮ ಸಲಹೆಗಾರ. ಆ ಹುದ್ದೆಯ ಘನತೆ ಇನ್ನೂ ಉಳಿದಿದೆ.
ದಿನಾ ಬೆಳಗೆದ್ದು ನಾನು ಓದುವ ಟೈಂಸ್ ಆಫ್ ಇಂಡಿಯಾದ ಸಂಪಾದಕ ಯಾರು ಎಂದರೆ ಸಂವಹನದ ವಿದ್ಯಾರ್ಥಿಯಾಗಿಯೂ ನನಗೆ ಗೊತ್ತಿಲ್ಲ! ಪತ್ರಿಕೆಯನ್ನೆಲ್ಲಾ ಜಾಲಾಡಿ ನೋಡಿ ಹೇಳ್ತೇನೆ. ಒಂದೊಂದು ಮಾರುಕಟ್ಟೆಗೆ ಒಬ್ಬೊಬ್ಬ ಸಂಪಾದಕ!
ಒಲವಿನಿಂದ
ಬಾನಾಡಿ.

5 comments:

 1. ಬಾನಾಡಿಯವರೆ,
  ಲೇಖನದ ಕೊನೆಯ ಸಾಲುಗಳಲ್ಲಿ ಎಷ್ಟು ಸತ್ಯಾಂಶ ಅಡಗಿದೆ. ಚೆನ್ನಾಗಿ ಗ್ರಹಿಸಿದ್ದೀರಾ ಪ್ರಸ್ತುತ ಪತ್ರಿಕೋದ್ಯಮವನ್ನ.

  ReplyDelete
 2. ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಸಂಪಾದಕನಾಗುವುದು ಒಂದೊಮ್ಮೆ ದೇಶದ ಎರಡನೇ ಅತ್ಯಂತ ಉನ್ನತ ಸ್ಥಾನವಾಗಿತ್ತು.

  ದಯವಿಟ್ಟು ವಿಷಯ ಪ್ರಸ್ತುತಿಯ ಭರದಲ್ಲಿ ಇಂತಹ ತಪ್ಪು ವೈಭವೀಕರಣ ಮಾಡಬೇಡಿ.

  ಈಗ ನೀವು ದಿನಾ ಬೆಳಗೆದ್ದು ಓದುವ ಟೈಮ್ಸಾಫಿಂಡಿಯಾದಲ್ಲೇ ನೀವು ಹೇಳಿದಂತೆ ತಿಕ್ಕಲುಗಳು, ಎಡೆಬಿಡಂಗಿಗಳು, ತೆವಲು ತೀರಿಸುವವರು, ತಲೆಹಿಡುಕರು, ಲಫಂಗರು ಎಲ್ಲರೂ ಇರುವುದು ವಿಪರ್ಯಾಸ ! :)

  ಉಳಿದಂತೆ i totally agree with ur nicely presented views.

  ReplyDelete
 3. ತು೦ಬಾ ದಿನಗಳಾಗಿತ್ತು ನಿಮ್ಮ ಬ್ಲಾಗ್ ಓದದೆ. ಇವತ್ತು ಎಲ್ಲಾ ಬರಹಗಳನ್ನು ಗಬಗಬ ಓದಿಬಿಟ್ಟೆ. ಎಷ್ಟು ಬರಹಗಳನ್ನು ಮಿಸ್ ಮಾಡಿಕೊ೦ಡು ಬಿಟ್ಟಿದ್ದೇನೆ ಅ೦ತನಿಸಿತು. ಇನ್ನು ಮೇಲಾದರೂ ಬ್ಲಾಗನ್ನ ಅಪ್-ಟು-ಡೇಟ್ ಓದಬೇಕು ಅ೦ತ ನಿರ್ಧರಿಸಿದೆ. ತು೦ಬಾ ಖುಷಿಯಾಯಿತು ಎಲ್ಲಾ ಬರಹಗಳನ್ನು ಓದಿ.

  ReplyDelete
 4. ಬಾನಾಡಿಯವರೇ,

  ಪತ್ರಿಕೋದ್ಯಮದ ಆಳ, ಕವಲು ಹಾಗೂ ಭೀಕರತೆಯಲ್ಲಿ ಟೈಮ್‌ ಆಫ್‌ ಇಂಡಿಯಾದ ಕೊಡುಗೆಯೇನೂ ಕಡಿಮೆಯಿಲ್ಲ. ಅದು ಹಲವಾರು ತಲೆಮಾರುಗಳನ್ನು ಓದಲು ಹಚ್ಚಿದೆ. ಚಿಂತನೆಗೆ ತೊಡಗಿಸಿದೆ. ಹಾಗೇ, ಹಾಳೂ ಮಾಡಿದೆ. ಟೈಮ್ಸ್‌ ಆಫ್‌ ಇಂಡಿಯಾ ನಮಗೆ ಅನಿವಾರ್ಯ ಪೀಡೆ.

  ವೈಯಕ್ತಿಕ ಟೀಕೆಯಾಗಬಾರದು ಎಂಬ ಕಾರಣಕ್ಕೆ ಮೇಲಿನ ಪ್ಯಾರಾದ ಹಿನ್ನೆಲೆ ವಿಸ್ತರಿಸಲು ಹೋಗುವುದಿಲ್ಲ. ಖುಷ್ವಂತ್‌ ಸಿಂಗ್‌ ಅವರಿಗೆ ಸಂಬಂಧಿಸಿದ ಎಲ್ಲ ರೀತಿಯ ಪ್ರಕಟಣೆ, ಪ್ರಚಾರ ಹಾಗೂ ಸುದ್ದಿಯನ್ನು ನಿಷೇಧಿಸಿರುವ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೋದ್ಯಮದ ಮುಖ್ಯ ಆಶಯವನ್ನೇ ಕಡೆಗಣಿಸಿದೆ. ಇಂತಹ ಹಲವಾರು ಉದಾಹರಣೆಗಳನ್ನು ಕೊಡಬಹುದು.

  ಉಳಿದಂತೆ, ನಿಮ್ಮ ಲೇಖನದ ವಿಷಯವನ್ನು ನಾನೂ ಸಮರ್ಥಿಸುತ್ತೇನೆ. ಪತ್ರಕರ್ತರಿಗೆ ತಿಳಿದಿದ್ದಕ್ಕಿಂತ ಹೆಚ್ಚು ತಿಳಿದಿದ್ದೇನೆ ಎಂದು ತೋರಿಸಿಕೊಳ್ಳುವ ಚಟ. ತಾವು ಎಲ್ಲರಿಗಿಂತ ಶ್ರೇಷ್ಠ ಎಂಬ ಭ್ರಮೆ ಹಾಗೂ ತಮ್ಮನ್ನು ನಿಯಂತ್ರಿಸುವವರು ಯಾರೂ ಇಲ್ಲ ಎಂಬ ಅಹಂಕಾರ. ಇದನ್ನು ನಾನು ನಿತ್ಯ ನೋಡುತ್ತಿದ್ದೇನೆ. ಮನುಷ್ಯ ಬೆಳೆದಷ್ಟೂ ವಿನೀತನಾಗುತ್ತಾನೆ. ಅವನಲ್ಲಿ ರಾಗದ್ವೇಷಗಳು ಇರಬಾರದೆಂದೇನೂ ಇಲ್ಲ. ಆದರೆ, ತನ್ನ ನಂಬಿಕೆಯನ್ನು ಪ್ರತಿಪಾದಿಸುವಾಗ ಆತ ಪ್ರಾಮಾಣಿಕನಾಗಿರಬೇಕು. ಅಭಿಪ್ರಾಯ ಭೇದ ಗೌರವಿಸಬೇಕು. ಒಪ್ಪದ್ದನ್ನು ಟೀಕಿಸಿದರೂ, ಆ ಇನ್ನೊಬ್ಬ ವ್ಯಕ್ತಿಯನ್ನು ದ್ವೇಷಿಸುವಂತಿರಬಾರದು. ಹೇಳಿದರೆ ಇವೆಲ್ಲ ಪೊಳ್ಳು ಆದರ್ಶಗಳು ಅನ್ನಿಸಬಹುದು. ಆದರೆ, ನನ್ನ ಚಿಕ್ಕ ವೃತ್ತಿ ಅನುಭವ ಇದನ್ನು ನನಗೆ ಕಲಿಸಿದೆ.

  ಮಾಧ್ಯಮದ ಬಗ್ಗೆ ಬರೆದರೆ ಅದೇ ದೊಡ್ಡ ಕತೆ. ಒಳಗಿದ್ದುಕೊಂಡು ಬರೆಯಲಾಗದ ಎಷ್ಟೋ ಅನಿವಾರ್ಯತೆಗಳ ನಡುವೆ, ಇಂತಹ ಬರವಣಿಗೆಗಳು ಆಪ್ಯಾಮಾನವಾಗುತ್ತವೆ.

  ಬರೆಯುತ್ತಿರಿ.

  ಪ್ರೀತಿಯಿಂದ

  - ಚಾಮರಾಜ ಸವಡಿ
  http://chamarajsavadi/blogspot.com

  ReplyDelete
 5. Baanadi,
  Nelavannu kachchi hididhiruva aameindha vandanegalu. i completely agree and disagree with your views on media. media thinks too much about itself since we the people give it that status. soon there will be a steady decline of the power of written word due to the rise of citizen journalism. dont you think a reader like me will trust what you have written more than what is printed in the papers...
  continue your thought provoking work
  regards
  Groundreality Gyaani

  ReplyDelete