Thursday, August 28, 2008

"ಶಕ್ತಿಶಾಲಿ" ಹಳ್ಳಿ

ಅದೊಂದು ಬೃಹತ್ ಕಂಪನಿ ತನ್ನ ಉತ್ಪಾದನೆಗಳಿಂದ ಭಾರತದ ಹಳ್ಳಿಗಳನ್ನು ಹೇಗೆ "ಶಕ್ತಿಶಾಲಿ"ಗೊಳಿಸುತ್ತಿದೆ ಎಂದು ತನ್ನ ಪಾಲುದಾರರಿಗೆ ತಿಳಿಸಲು ಒಂದು ಸಂವಹನ ಪ್ರಕ್ರಿಯೆಯನ್ನು ತಯಾರು ಮಾಡುವ ಕೆಲಸದಲ್ಲಿ ನಾನೂ ಒಳಗೊಂಡೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಉತ್ಪಾದನೆಗಳನ್ನು ಮಾರಾಟಮಾಡುವ ಆ ಕಂಪನಿಯ ಕೆಲಸದ ತಾಣವೊಂದು ಪಂಜಾಬಿನ ಹಳ್ಳಿಯೊಂದರಲ್ಲಿತ್ತು. ನಗರದಿಂದ ರೈಲು ಅಥವಾ ಡೀಲಕ್ಸ್ ಬಸ್ಸುಗಳಿರದಿದ್ದುದರಿಂದ ನಾನು ಮತ್ತು ಕ್ಯಾಮರಮ್ಯಾನ್ ಗೌತಮ್ ಸಾಮಾನ್ಯ ಬಸ್ಸೊಂದರಲ್ಲಿ ರಾತ್ರಿಯಿಡೀ ಪ್ರಯಾಣಬೆಳೆಸಿ ಹಳ್ಳಿಯನ್ನು ತಲಪಿದೆವು. ಅಲ್ಲಿ ಕಂಪೆನಿಯ ಅತಿಥಿ ಗೃಹದಲ್ಲಿ ಫ್ರೆಷ್ ಆಗಿ ಮುಂಜಾನೆ ನಮ್ಮ ಕೆಲಸದಲ್ಲಿ ತೊಡಗಿದೆವು. ಕಂಪೆನಿಯು ಹಳ್ಳಿಯ ಶಾಲೆಗಳಿಗೆ ನೀರಿನ ವ್ಯವಸ್ಥೆ, ಬೆಂಚು, ಕಂಪ್ಯೂಟರ್‍‍ಗಳನ್ನು ನೀಡಿತ್ತು. ಹಾಗಾಗಿ ಕೆಲವು ಶಾಲೆಗಳಿಗೆ ಹೋಗೋಣವೆಂದು ನಾನು ನಿರ್ಧರಿಸಿದೆ. ನಾವು ಜೀಪಿನಲ್ಲಿ ಕುಳಿತು ಪಂಜಾಬಿನ ಹಸಿರು ಗದ್ದೆಗಳೆಡೆಯಿಂದ ಹಾದು ಹೋಗುವ ಹೆದ್ದಾರಿ ಬಿಟ್ಟು ಹಳ್ಳಿಗಳ ಸಪೂರದ ರಸ್ತೆಗೆ ಬಂದೆವು. ಪಂಜಾಬ್ ಒಂದು ಶ್ರೀಮಂತ ರಾಜ್ಯ ಎಂಬ ನನ್ನ ಭಾವನೆಯನ್ನು ಅಲ್ಲಿನ ಹಳ್ಳಿಗಳು ಬಿಂಬಿಸುತ್ತಿರಲಿಲ್ಲ. ಕೂಲಿಕೆಲಸ ಮಾಡುತ್ತಿರುವ ಸರ್ದಾರ್‍‍ಗಳು, ಬೆಂಚಿಲ್ಲದೇ ನೆಲದಲ್ಲಿ ಓದುವ ಮಕ್ಕಳು, ಅದರೆಡೆಯಲ್ಲೊಂದು ಆಶಾಕಿರಣವೆಂಬಂತೆ ಹಳ್ಳಿಯ ಶಾಲೆಯ ಅಧ್ಯಾಪಕಿಯೊಬ್ಬಳು ಅತ್ಯಂತ ಆನಂದದಿಂದ ಮಕ್ಕಳಿಗೆ ಪಾಠಮಾಡುವ ರೀತಿ ಕಂಡು ಸೋಜಿಗವೆನಿಸಿತು. ವಿವಿಧ ಆಟೋಟಗಳಲ್ಲಿ ಆ ಶಾಲೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಬಹುಮಾನಗಳು ಬಂದಿದ್ದವು. ನಾವು ಕಂಪ್ಯೂಟರ್‍‍ಗಳನ್ನು ಕೆಲಸಮಾಡುವ ಸ್ಥಿತಿಯಲ್ಲಿ ಕಾಣಿಸಲಾಗಲಿಲ್ಲ. ಕಾರಣ ಕರೆಂಟಿರಲಿಲ್ಲ. ನೀರಿನ ನಳ್ಳಿಗಳನ್ನು ತೆರೆದಾಗಲೂ ನೀರು ಬರಲಿಲ್ಲ. ಕರೆಂಟಿರಲಿಲ್ಲ. ಸೆಖೆಯಲ್ಲಿ ನೆಲದ ಮೇಲೆ ಕುಳಿತು ಓದುತ್ತಿದ್ದ ಮಕ್ಕಳ ಉತ್ಸಾಹ, ಉಲ್ಲಾಸಗಳನ್ನು ಅನಿವಾರ್ಯವಾಗಿ ಕ್ಯಾಮರದಲ್ಲಿ ತುಂಬಿಕೊಂಡೆವು.ಪಂಜಾಬಿನ ಹಳ್ಳಿಗಳ ಇನ್ನೊಂದು ಮುಖವನ್ನು ನೋಡಲು ಈ ಎಲ್ಲಾ ಮುಖವನ್ನು ನೋಡಬೇಕಾಯಿತು. ಕಂಪೆನಿಯ ಕೆಲಸಕ್ಕೆ ಬೇಕಾದ ಸಾಮಾಗ್ರಿಯನ್ನು ಹವಾ ನಿಯಂತ್ರಿತ ಕೊಠಡಿಗಳಲ್ಲಿ ಅತ್ಯಾಧುನಿಕ ಉಪಕರಣಗಳನ್ನಿಟ್ಟು ಕೆಲಸಮಾಡುವ 'ಕ್ರಿಯೇಟಿವ್ ಟೀಮ್' ತಮಗೆ ಬೇಕಾದಂತೆ ತಯಾರು ಮಾಡುತ್ತಿದೆ. ಈ ಮುಖಗಳು ನನ್ನನ್ನು ಬಹಳವಾಗಿ ಕಾಡುತ್ತಿರುತ್ತವೆ.


Tuesday, August 26, 2008

ಮದಿರೆಯ ಬಟ್ಟಲು ಖಾಲಿಯಾಗಿದೆ.

ಮದಿರೆಯ ಬಟ್ಟಲು ಖಾಲಿಯಾಗಿದೆ.

ಸುರಿದು ಸುರಿದು ಹೀರಿಯಾದ ಮೇಲೆ ನದಿಯಾಗಿದೆ. ಸಾಗರ ಸೇರಲೆಂದು ಹೊರಟ ನದಿ ಬತ್ತಿ ಹೋಗಿದೆ. ತುಂಬಿ ಹೋದ ಬಟ್ಟಲಿಂದ ಹರಿದು ಹೋದ ಹನಿಗಳು ಕಾಯುತ್ತಿವೆ ಕಣ್ಣ ಮೂಲೆಯಲ್ಲಿ ಕುಳಿತು. ಸಂಗಾತಿಯ ಸನಿಹಕ್ಕೆ, ಬೀಸುತ್ತಿರುವ ತಂಗಾಳಿಗೆ. ಕನಸುಗಳು ಕಣ್ಣಂಚಿನಲ್ಲಿ ಮೂಡುತ್ತವೆ. ಮುಂಜಾನೆಯಾಗುವುದೇ ಬೇಡವೆನಿಸುತ್ತದೆ. ಕನಸುಗಳು ತೇಲುತ್ತವೆ, ಮೋಡವಾಗುತ್ತವೆ. ಹನಿಯಾಗುತ್ತವೆ. ಮತ್ತೆ ತುಂಬುತ್ತವೆ ನದಿ, ಕಡಲು. ಅಪ್ಪಲಿಸುವ ತೆರೆಗಳು ಹಿಡಿಯಲಾಗದ ತೊಳಲಾಟಗಳು.

ಮದಿರೆಯ ಬಟ್ಟಲು ಖಾಲಿಯಾಗಿದೆ. ಸನಿಹ ಕುಳಿತ ಸ್ನೇಹ ಮೌನವಾಗಿದೆ. ಮೌನದ ಅಬ್ಬರಕ್ಕೆ ಎದೆಯೊಡೆದುಕೊಳ್ಳುವಷ್ಟು ಭಯ ತುಂಬಿದೆ. ಮೌನವೂ ಮಾತಾಡತೊಡಗಿದೆ. ತಂಗಾಳಿ ಬರಲೆಂದು ಕಿಟಿಕಿ ತೆರೆದು ಕೊಂಡರೆ ರಸ್ತೆಯಂಚಿನಲ್ಲಿ ಓಡುತ್ತವೆ ಬದುಕುಗಳು. ಮದಿರೆಯ ಬಟ್ಟಲು ಖಾಲಿಯಾಗಿದೆ.

ಮದಿರೆಯ ಬಟ್ಟಲು ಖಾಲಿಯಾಗಿದೆ. ಮನದೊಳಗೇನದು ಯುದ್ಧವೋ, ಪ್ರಳಯವೋ ಅಲ್ಲ ಗುಣವಾಗದ ಕಾಯಿಲೆಯೋ. ಅರ್ಥವಾಗದ ಕಲೆ ಯಾವುದು? ಕಾವ್ಯ ಯಾವುದು? ಪ್ರಶ್ನೆಗಳನ್ನೇ ಕುಡಿದು ಬಿಡಬೇಕು. ಮದಿರೆಯ ಬಟ್ಟಲು ಖಾಲಿಯಾಗಿದೆ.

ಮದಿರೆಯ ಬಟ್ಟಲು ಖಾಲಿಯಾಗಿದೆ. ರಾತ್ರಿಯೆಲ್ಲಾ ಮಲಗಿದೆ. ಬಾನು ತುಂಬಾ ಚುಕ್ಕೆಯ ಚಾದರಹೊದ್ದು. ನಿಂತೇ ಇರುವ ಕಂಬಗಳನ್ನು ಮಲಗಲು ಬಿಡಿ. ಹಿಡಿದುಕೊಳ್ಳಬೇಡಿ. ಕಾದು ಕುಳಿತಿದ್ದಾನೆ ಮುಂಜಾನೆಯ ಸೂರ್ಯ.

ಮದಿರೆಯ ಬಟ್ಟಲು ಖಾಲಿಯಾಗಿದೆ. ತೊರೆಯಾಗಿ ಹರಿಯಬಾರದೇ ಶಿವ ಜಡೆಯಿಂದ ದೇವಗಂಗೆಯಾಗಿ. ತುಂಬಿಕೊಳ್ಳಬಾರದೇ ಎದೆಯೊಳಗಿನ ಮಡುವಿನಲ್ಲಿ. ಈಜಾಡುವೆವು. ಬತ್ತಲಾಗಿ. ಬರಿದು ಬರಿದು ಮೈಯಲ್ಲಿ ಎಲ್ಲವನ್ನೂ ನೋಡುತ್ತಾ. ಭಕ್ತಿಯಲಿ ಶಿವನ ವರಿಸುವ ಅಕ್ಕನಾಗುವೆ. ಬಿಟ್ಟ ಜಡೆಯಲ್ಲಿ ಮತ್ತೆ ಹುಟ್ಟಿ ಬರಬೇಕೆನ್ನುವೆ.

ಮದಿರೆಯ ಬಟ್ಟಲು ಖಾಲಿಯಾಗಿದೆ.ಕಾದು ಕುಳಿತ ಕೆಂಪು ತುಟಿಗಳು ಕೆಂಡವಾಗಿವೆ. ಸುಡಲೆಂದು ನನ್ನನ್ನೇ ಕಾಯುತ್ತಿವೆ. ಪ್ರೇಮಾಮೃತ ಸುರಿಸಿ ತಣಿಸಲೇನು ಆ ತುಟಿಗಳನು?

ಮದಿರೆಯ ಬಟ್ಟಲು ಖಾಲಿಯಾಗಿದೆ.ಯಾಕೆ ಸಂಭ್ರಮ. ತುಂಬು ತಿಂಗಳ ತಣ್ಪಿಗೋ? ಮುಸುಕಿನೊಳಗಿನ ಮಿಲನಕೋ? ನನ್ನನ್ನೇ ಕರಗಿಸಿ ಬಿಡು. ನಿನ್ನೊಳಗೆ ನಾನಾಗುವೆ. ಮದಿರೆಯಿಲ್ಲದ ನಾನೂ ಖಾಲಿ ಖಾಲಿ. ಮದಿರೆಯ ಬಟ್ಟಲೂ ಖಾಲಿ ಖಾಲಿ.
ಒಲವಿನಿಂದ

ಬಾನಾಡಿ

Friday, August 15, 2008

ಭಾರತದ ಸ್ವಾತಂತ್ರ್ಯ


Saturday, August 9, 2008

'ಬರು' ಅವರು ಹೊರಟಾಗ

ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಸಂಪಾದಕನಾಗುವುದು ಒಂದೊಮ್ಮೆ ದೇಶದ ಎರಡನೇ ಅತ್ಯಂತ ಉನ್ನತ ಸ್ಥಾನವಾಗಿತ್ತು. ದಿಲೀಪ್ ಪಡ್‍ಗಾಂವ್‍ಕರ್‍ ನಂತರ ಆ ಪತ್ರಿಕೆಯ ಲಕ್ಷಣ ಮತ್ತು ಅದನ್ನು ಸಂಪಾದಿಸುವವರ ಪ್ರಾಮುಖ್ಯತೆ ಇಳಿಯಿತು.
ಇಂದು ಯಾವುದೇ ಪತ್ರಿಕೆ ಅದರ ಸಂಪಾದಕರ ಹೆಸರಿನಿಂದ ನಡೆಯುತ್ತದೆ ಎನ್ನಲಾಗುವುದಿಲ್ಲ. ಬೆರಳೆಣಿಕೆಯಷ್ಟು ಪತ್ರಕರ್ತರಷ್ಟೇ ಇಂದು ಓದುಗರಲ್ಲಿ ಮತ್ತು ಸಮಾಜದಲ್ಲಿ ಗೌರವ ಮತ್ತು ಮನ್ನಣೆಯನ್ನು ಪಡೆದಿದ್ದಾರೆ.
ಮಾಧ್ಯಮದವರಿಗೆ ಅನ್ವಯವಾಗುವ ಹಲವಾರು ಪದಗಳು ನನಗೆ ತಿಳಿದಿರುವುದು ಸಂತೋಷಕೊಡುತ್ತದೆ.
ಮಾಧ್ಯಮದಲ್ಲಿ ಬರುವ ಸುದ್ದಿಗಳನ್ನು ನೋಡಿದಾಗ, ಓದಿದಾಗ ನಮ್ಮ ಮನಸ್ಸಿನಲ್ಲಿ ಆ ಮಾಧ್ಯಮದ ವ್ಯಕ್ತಿಗಳ ಬಗ್ಗೆ ತಿಕ್ಕಲುಗಳು, ಎಡೆಬಿಡಂಗಿಗಳು, ತೆವಲು ತೀರಿಸುವವರು, ತಲೆಹಿಡುಕರು, ಲಫಂಗರು ಇತ್ಯಾದಿ ಪದಗಳು ಮೂಡಿಬಂದರೆ ಅದೇನು ಆಶ್ಚರ್ಯದ ಸಂಗತಿಯಲ್ಲ. ಈ ತರದ ವರ್ಣನೆಗಳನ್ನು ಓದಿದ ಪತ್ರಕರ್ತರು ಉರಿದು ಬೀಳುತ್ತಾರೆ. ಅವರು ಉಪಯೋಗಿಸುವ ಪದಗಳು ಅವರಿಗೇ ಅರ್ಥವಾಗುವುದಿಲ್ಲ ಇನ್ನು ನಾನು ಉಪಯೋಗಿಸುವ ಪದಗಳು ಅವರಿಗೆ ಅರ್ಥವಾಗದು ಎಂಬ ಉದ್ದಟತನವನ್ನು ನಾನೂ ಹೊಂದಿದರೆ ನಾನೂ ಒಬ್ಬ ಯಶಸ್ವಿ ಪತ್ರಕರ್ತನಾಗುತ್ತೇನೆ. ಮಾಧ್ಯಮದವರ ಪ್ರಕಾರ ಅವರಿಗೆ ಗೊತ್ತಿಲ್ಲದ ವಿಚಾರ ಸಮಾಜದಲ್ಲಿಲ್ಲ. ಇನ್ನು ಸ್ವ ವಿಮರ್ಶೆ ಮಾಡಿಕೊಳ್ಳುವ ಸಾಮರ್ಥ್ಯ ಅವರಲ್ಲಿ ಎಲ್ಲಿದೆ. ಮಾಧ್ಯಮವೆನ್ನುವುದು ಸಮಾಜದ ಕನ್ನಡಿ. ನಾವು ಹಾಗಿರಲು ನೀವೇ ಕಾರಣ ಎಂದು ಮತ್ತೆ ತಮ್ಮ ಎಡೆಬಿಡಂಗಿತನವನ್ನು ತೋರಿಸಿಯಾರು.
ಮೊನ್ನೆ ಪತ್ರಕರ್ತನೊಬ್ಬನು ದೇಶದ ಹಿರಿಯ ಕೈಗಾರಿಕೋದ್ಯಮಿಯೊಬ್ಬರನ್ನು ಏಕವಚನದಿಂದ ಕರೆದು ಮಾತನಾಡಿಸುತ್ತಿದ್ದ. ಅದನ್ನು ಕಂಡ ಬಹಳಷ್ಟು ಮಂದಿ ಆತನ ಕೊಬ್ಬನ್ನು ಜರೆಯುತ್ತಾ ತನ್ನ ತಂದೆಯ ವಯಸ್ಸಿನ ಹಿರಿಯರನ್ನು ಏಕವಚನದಲ್ಲಿ ಕರೆದು ಮಾತಾನಾಡಿಸುವ ಈ ತುಚ್ಛ ಯಾರು ಎಂದಾಗ ಒಬ್ಬರು ಆತ ಪತ್ರಕರ್ತ ಎಂದು ಹೇಳಿದರು. ಮಾಧ್ಯಮದ ಮಂದಿ ತಾವು ಜಾರಿಬಿದ್ದ ಕೊಳಚೆಗುಂಡಿಯಿಂದ ತನ್ನಷ್ಟು ಶುಭ್ರ ಇನ್ಯಾರು ಇಲ್ಲ ಎಂದು ಚೀರಿ ಹೇಳುವಾಗ ದಿಗ್ಭ್ರಮೆ ಮೂಡುತ್ತದೆ.
ದೇಶದ ಅತ್ಯತ್ತಮ ಮಾಧ್ಯಮ ಹುದ್ದೆಯನ್ನು ಪಡೆಯುವ ಕನಸುಗಳನ್ನು ಹೊತ್ತವರಿಗೆ ಇಂದು ಸ್ವಲ್ಪವಾದರೂ ಗೌರವವನ್ನು ಕೊಡುವ ಹುದ್ದೆಯೆಂದರೆ ಪ್ರಧಾನಿಯ ಮಾಧ್ಯಮ ಸಲಹೆಗಾರನ ಹುದ್ದೆ. ಅರ್ಥಾತ್ ಪ್ರಿನ್ಸಿಪಾಲ್ ಇನ್‍ಪಾರ್‍ಮೇಷನ್ ಆಫೀಸರ್ ಹುದ್ದೆ.
ಈಗ ತಾನೆ ಆ ಹುದ್ದೆಯಿಂದ ಸ್ವಯಂ ನಿವೃತ್ತಿಯಾದ ಸಂಜಯ ಬರು ಅವರು ಮತ್ತಷ್ಟು ಘನತೆಯನ್ನು ತಂದು ಕೊಟ್ಟಿದ್ದಾರೆ.
ಕನ್ನಡಿಗರಾದ ಎಚ್. ವೈ. ಶಾರದಾಪ್ರಸಾದ್, ಐ. ರಾಮಮೋಹನ್ ರಾವ್, ನರೇಂದ್ರ ಎ ಯಂತಹವರಿಂದ ಅತ್ಯಂತ ಘನತೆಯನ್ನು ಪಡೆದ ಈ ಹುದ್ದೆಯ ಗೌರವವನ್ನು ಅವರು ಕಾಯ್ದು ಕೊಂಡರು.
ಫೈನಾನ್ಸಿಯಲ್ ಎಕ್ಸ್‍ಪ್ರೆಸ್‍ನ ಮುಖ್ಯ ಸಂಪಾದಕರಾಗಿದ್ದ ಸಂಜಯ್ ಬರು ದೆಹಲಿಯ ಪ್ರತಿಷ್ಟಿತ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದವರು.
ಸೂಕ್ಷ್ಮ ಬರವಣಿಗೆಗಳಿಂದ ಹೆಸರು ಮಾಡಿದ್ದ ಬರು ಅವರು ಪ್ರಧಾನ ಮಂತ್ರಿಯ ಮಾಧ್ಯಮ ಸಲಹೆಗಾರರಾಗಿ ಆಯ್ಕೆ ಯಾದುದು ಪತ್ರಕರ್ತರಿಗೆಲ್ಲಾ ಆಶ್ಚರ್ಯಮೂಡಿಸಿತ್ತು.
ಅತ್ಯಂತ ಪ್ರಭಾವಿ ಹುದ್ದೆಯಲ್ಲಿದ್ದೂ ಏನೇನೋ ಕರಾಮತ್ತು ಮಾಡಬಹುದಾಗಿದ್ದ ಸಂಜಯ ಬರು ಅವರು ತನ್ನ ಮಗಳ ಜತೆಯಿರಲೆಂದು ಸ್ವಯಂ ನಿವೃತ್ತಿ ಹೊಂದಿದ್ದಾರೆ. ಅವರಿಗೆ ಅಧಿಕಾರ ಸಿಕ್ಕಿದಷ್ಟೇ ಆಶ್ಚರ್ಯ ಅವರು ನಿವೃತ್ತಿ ಘೋಷಿಸಿದಾಗಲೂ ಆಯಿತು.
ಮಾಮೂಲಿ ತಿಕ್ಕಲುತನದ ಪತ್ರಕರ್ತನಂತೆ ಆತ ವರ್ತಿಸಲಿಲ್ಲ. ಅವರು ತಮ್ಮ ಹುದ್ದೆಯ ಗೌರವವನ್ನು ಎತ್ತಿ ಹಿಡಿದು ಹೊರಟಿದ್ದಾರೆ.
ಬರು ಅವರು ನನಗೇನು ವೈಯಕ್ತಿಕ ಅಥವಾ ವ್ಯಾವಹಾರಿಕ ಸಂಬಂಧಿಯಲ್ಲ. ನಾನು ಬರೆದುದನ್ನು ಆತ ಓದಲಾರರು. ಹುದ್ದೆಯ ಗೌರವಕ್ಕೆ ಕುಂದು ಬಾರದಂತೆ ನಡೆದ ಬರು ಅವರನ್ನು ಕಂಡಾಗ ಖುಷಿಯಗುತ್ತದೆ. ಹೆಮ್ಮೆಯಾಗುತ್ತದೆ. ಮಾಧ್ಯಮದ ವ್ಯಕ್ತಿಯೊಬ್ಬ ತನ್ನ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಹುದ್ದೆಯನ್ನು ಬಯಸುವುದಾದರೆ ಅದು ಪ್ರಧಾನ ಮಂತ್ರಿಯ ಮಾಧ್ಯಮ ಸಲಹೆಗಾರ. ಆ ಹುದ್ದೆಯ ಘನತೆ ಇನ್ನೂ ಉಳಿದಿದೆ.
ದಿನಾ ಬೆಳಗೆದ್ದು ನಾನು ಓದುವ ಟೈಂಸ್ ಆಫ್ ಇಂಡಿಯಾದ ಸಂಪಾದಕ ಯಾರು ಎಂದರೆ ಸಂವಹನದ ವಿದ್ಯಾರ್ಥಿಯಾಗಿಯೂ ನನಗೆ ಗೊತ್ತಿಲ್ಲ! ಪತ್ರಿಕೆಯನ್ನೆಲ್ಲಾ ಜಾಲಾಡಿ ನೋಡಿ ಹೇಳ್ತೇನೆ. ಒಂದೊಂದು ಮಾರುಕಟ್ಟೆಗೆ ಒಬ್ಬೊಬ್ಬ ಸಂಪಾದಕ!
ಒಲವಿನಿಂದ
ಬಾನಾಡಿ.