Saturday, July 19, 2008

ಬಾರದ ಮಳೆಗೆ ಒಂದು ಓಲೆ...
ನೀನು ಕಟ್ಟಿಟ್ಟ ಮೋಡಗಳು ಹಳಸಾಗಿವೆ ನೋಡು. ಚೆಲ್ಲಿ ಬಿಡು ಕಡಲ ಒಡಲಿಂದ ಬಾನ ಮೇಲೆ ತಲುಪಿ ದಣಿದಾಗ ಹೊರ ಹೊರಟ ಬೆವರ ಹನಿಗಳ. ನಮಗೂ ಸ್ವಲ್ಪ ಕೊಡು. ಗಂಟಲೊಣಗಿದೆ. ಉಗುಳು ನುಂಗಲು ಕಷ್ಟ. ಮತ್ತೆ ಅನ್ನ ಉಣ್ಣುವುದೆಂತು. ಗದ್ದೆಯಲ್ಲಿ ಪೈರಾದರೆ ತಾನೆ. ತೆನೆಯಾಗುವುದು. ಭತ್ತವಾಗುವುದು. ಅಕ್ಕಿಯಾಗುವುದು. ಅಕ್ಕಿ ಬೆಂದು ಅನ್ನವಾಗುವುದು.
ಎಲ್ಲಿ ಹೊರಟೆ ಕಣ್ಣು ಮುಚ್ಚಾಲೆಯಾಡಲು. ಯಾರು ನಿನ್ನ ಗೆಳತಿ. ಸಡಿಲಿಸು ನಿನ್ನ ಅಪ್ಪುಗೆಯ. ಹಬ್ಬಿಸು ಕರಿಮೋಡಗಳ ಬಾನು ತುಂಬಾ. ಕವಿಯಲಿ ಕತ್ತಲೆ. ಅಪ್ಪಿಕೊಳ್ಳಲಿ ಮೋಡಗಳು. ಮಿಂಚಾಗಳು. ಸಿಡಿಲಾಗಲು. ಗುಡುಗಾಗಲು. ಸುರಿಯಲಿ ಧರೆಯಲಿ ಆ ಶುದ್ಧ ಜಲ. ಹೀರಿಕೊಳ್ಳಲಿ ಗಿಡ ಮರ. ಗದ್ದೆ ತೋಟ. ಕೆರೆ ಕಾಲುವೆ ತುಂಬಿ ಹರಿಯಲಿ. ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇವೆ. ಕೈಚಾಚಿ. ಕಣ್ತೆರೆದು. ಬಾಯಗಲಿಸಿ. ಸುರಿದು ಬಿಡು. ವರ್ಷಧಾರೆಯ.
ಕಾಗದದ ದೋಣಿಗಳು ಕಾಯುತ್ತವೆ ಸಣ್ಣ ಕಂದಗಳ ಕೈಗಳಲಿ. ಹರಿವ ತೋಡಿನ ಸೆಳವಿಗೆ. ಒಂದೊಂದು ಕನಸುಗಳನ್ನು ದಡದಾಚೆ ದಾಟಿಸಲು. ಸುರಿದು ನೋಡು ಮಕ್ಕಳ ಕಿರುನಗೆಯ ಮೇಲೆ ಹತ್ತು ಇನ್ನೊಂದು ಹನಿಗಳ. ಅರಳುವುದು ನೋಡು ಅವರ ಕಣ್ಣುಗಳು. ಯಾಕೆ ಮರೆಯಾಗಿ ನಿಂತೆ ನಿನಗೆ ಪುಟ್ಟ ಪುಟಾಣಿಗಳೆಂದರೆ ಪ್ರೀತಿಯಿಲ್ಲವೇ?
ಒಂದೇ ಕೊಡೆ ಹಿಡಿದುಕೊಂಡು ಹೋದ ಪ್ರೇಮಿಗಳು ಅಂಟಿಕೊಂಡು ನಿನ್ನಲ್ಲಿ ಜಳಕವಾಡುವುದು ಹೇಗೆ? ಸುರಿಯುತ್ತಾ ಸುರಿಯುತ್ತಾ ಇರಲಾರೆಯಾ? ಹೊದ್ದುಕೊಂಡು ಮಲಗಬೇಕೆಂದವರಿಗೆ ನೀನಿಲ್ಲವಲ್ಲ. ನೀನು ಸುರಿಯುವ ಶಬ್ದವೇ ಜೋಗುಳ ನಮಗೆಲ್ಲಾ. ಯಾಕೆ ಓಡಿಸುವೆ ನಮ್ಮ ನಿದ್ದೆಯನ್ನು.
ಮುಂಗಾರು ಮಳೆಯ ನಂತರ ಗಾಳಿಪಟ ಹಾರಿಸಿದ ಭಟ್ಟರನ್ನೂ ಮರೆತೆಯಾ? ನಮ್ಮ ಯೋಗ. ಬಾ ಬೇಗ. ಸುರಿದು ಬಾ. ಪ್ರೇಮಿಗಳು ನಿನ್ನ ಕಾವ್ಯಕ್ಕೆ ಕಾಯುತ್ತಿದ್ದಾರೆ. ಸುರಿದು ಸುರಿದು ಬಿಡದೆ ಬಾ. ಕಾಣೆಯಾಗಿದೆ ಕೆಮ್ಮು. ಒಣಗಿ ಕುಳಿತಿದೆ ಒಳಗೆ. ನೀನು ಬಂದಾಗ, ಹೋಗದೇ ನಿಂತಾಗ, ಸುಡಲೆಂದು ಕಾಯುತಿವೆ- ಹಪ್ಪಳ, ಸಂಡಿಗೆ, ಗೇರು ಹಲಸಿನ ಬೀಜ. ಅದೆಲ್ಲೋ ಮೂಲೆಯಲ್ಲಿ.
ಸುರಿದು ಸುರಿದು ಇಲ್ಲೆ ಇರು. ಮರೆತು ಕೂಡ ಹೋಗಬೇಡ. ಮಕ್ಕಳು ಕಾಯುತ್ತವೆ ಶಾಲೆಗೆ ರಜೆಹಾಕಿ ನಿನ್ನೊಡನೆ ಕುಳಿತು ಅಜ್ಜಿಯ ಕತೆ ಕೇಳಲು. ಇನ್ನೊಂದು ಮಳೆಗಾಲ ಉಳಿದರೆ ಸಾಕಪ್ಪ ಎನ್ನುವ ಅಜ್ಜಿಯ ಆಶೆಗೆ ನೀನು ಅವಕಾಶವನ್ನೇ ಕೊಡದೆ ಎಲ್ಲಿ ಅಡಗಿದೆ. ಬಂದು ಬಿಡು. ಮುಗಿಯುವುದರೊಳಗೆ ಆಷಾಢ, ಶ್ರಾವಣ. ಬೆಂದು ಹೋಗಿವೆ ಅವು ನಿನ್ನ ಕಾದು ಕಾದು.
ನಿನ್ನ ಕಡಲ ಒಡಲಲ್ಲಿಯೇ ಅದೆಷ್ಟು ಚಿಪ್ಪುಗಳು ತೆರೆದು ನಿಂತಿವೆ ಒಂದೊಂದು ಹನಿಗಾಗಿ. ಹನಿಗಳು ಮುತ್ತಾಗಲು.
ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..ತಿಳಿಯದಾಗಿದೆ
ಮುಂಗಾರು ಮಳೆಯೇ..ಅನಿಸುತಿದೆ ಯಾಕೊ ಇಂದು..ಕೊಲ್ಲು ಹುಡುಗಿ ಒಮ್ಮೆ ನನ್ನ..ಹಾಗೆ ಸುಮ್ಮನೆಸುರಿಯುವ ಸೋನೆಯು ಸೂಸಿದೆ..ಹಾಡುಗಳು ಮೌನವಾಗಿವೆ.

5 comments:

 1. ಮಳೆ ನಿಂತ ಮೇಲೂ ಸೋ. . . ಎನ್ನುತ್ತಿತ್ತು. ನಿಜ. ಮುದಕೊಟ್ಟಿತು ಕೊಟ್ಟಿತು ಲೇಖನ.

  ReplyDelete
 2. :) thumba chennagide nimma lekhana....

  ReplyDelete
 3. ಶ್ರೀ ದೇವಿ ಕಳಸದ ಮತ್ತು vish ಅವರಿಗೆ ವಂದನೆಗಳು. ನಿಮ್ಮ ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳಿಗೆ.
  ಮತ್ತೂ ಬರೆಯಲು ಉತ್ಸಾಹ ಮೂಡುವಂತಿದೆ.
  ಒಲವಿನಿಂದ
  ಬಾನಾಡಿ

  ReplyDelete
 4. ನಿಮ್ಮ ಲೇಖನವನ್ನೋದಿದ ಮೇಲೇಯಾದರೂ ಮಳೆಬರಲೇ ಬೇಕೆಂದೆನಿಸುತ್ತಿದೆ. ಹಲಸಿನ ಹಪ್ಪಳ ಕಾಯುತ್ತಲಿದೆ :)

  ReplyDelete
 5. ಥ್ಯಾಂಕ್ಸಮ್ಮ!

  ReplyDelete