Thursday, July 17, 2008

ಮೊನ್ನೆ ರಿಟೈರ್ ಆದ ರಮೇಶಣ್ಣ

ರಮೇಶಣ್ಣ ನಾವು ಬೆಳೆಯುತ್ತಿದ್ದಾಗ ನಮಗೆಲ್ಲಾ ಆದರ್ಶ. ನನಗೆ ನೆನಪುಗಳು ಮೆದುಳಿನಲ್ಲಿ ಅರಂಭಿಸಿದ ದಿನಗಳಿರಬಹುದು.ರಮೇಶಣ್ಣ ಕಾಲೇಜಿಗೆ ಹೋಗುತ್ತಿದ್ದರು.ನಾನು ನೋಡಿದ ಮೊದಲ ಕಾಲೇಜು ಹುಡುಗ ಅವರೇ.ಶುಕ್ರವಾರದ ಉದಯವಾಣಿಯ ಚಲನಚಿತ್ರ ಜಾಹೀರಾತುಗಳಿಂದ ಇಳಿದು ಬಂದ ಅಮಿತಾಭ್ ಬಚ್ಚನ್ ಅವರಾಗಿದ್ದರು.ಅವರ ಕ್ರಾಪ್, ಶರ್ಟಿನ ಕಾಲರ್, ಪ್ಯಾಂಟಿನ ಬಾಟಮ್.ನಮ್ಮಿಂದ ದೊಡ್ಡವರು ಆದರೆ ಅವರಿಂದ ಚಿಕ್ಕವರು ಅದನ್ನು ಕಂಡು ಅನುಕರಿಸುತ್ತಿದ್ದರು. ಅವರೊಮ್ಮೆ ನಮ್ಮ ಭಟ್ಟರ ಅಂಗಡಿಯಿಂದ ಇಡೀ ಊರಿಗೆ ಲಾಡು ಹಂಚಿದ್ದರು.ಅದು ಅವರು ಬಿ.ಕಾಮ್. ಪಾಸಾಗಿದ್ದಕ್ಕೋ ಅಥವಾ ಮಣಿಪಾಲದ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದಕ್ಕೋ...ನನ್ನ ನೆನಪು ಇನ್ನೂ ದಟ್ಟವಾಗಿಲ್ಲ. ಅಷ್ಟು ಸಣ್ಣವನಿದ್ದೆ ನಾನು.ಸ್ವಲ್ಪ ವರ್ಷದ ನಂತರ ಅವರು ಮಣಿಪಾಲದ ಬ್ಯಾಂಕ್ ಸೇರಿದರು.ಕೆಲಸಕ್ಕೆ ಸೇರಿದ್ದು ಸೀದಾ ಬೆಂಗಳೂರಿನಲ್ಲಿ.ನಮ್ಮೂರಿನಿಂದ ಯಾರಾದರೂ ಹೊರ ಊರಿಗೆ ಕೆಲಸಕ್ಕೆ ಹೋಗುವುದಾದರೆ ಅದು ಬೊಂಬಾಯಿಗೆ.ಆದರೆ ಇವರು ಹೋದದ್ದು ಬೆಂಗಳೂರಿಗೆ.ಆಗ ಮಂಗಳೂರಿನಿಂದ ಬೆಂಗಳೂರಿಗೆ ರೈಲು ಇತ್ತು. ಮೀಟರ್ ಗೇಜ್. ಹಳೆಯದು.ಮಧ್ಯಾಹ್ನ ಎರಡಕ್ಕೆ ನಮ್ಮ ಊರಿನಿಂದ ಐದು ಕಿಲೋ ಮೀಟರ್ ದೂರದಿಂದ ಹೋಗುವ ಬಸ್ಸಿನಲ್ಲಿ ಅವರು ಮಂಗಳೂರಿಗೋ, ಪುತ್ತೂರಿಗೋ ಹೋಗುತ್ತಿದ್ದರು.ಬೆಂಗಳೂರು ರೈಲು ಹಿಡಿಯಲು.ಬೆಂಗಳೂರಿನಲ್ಲಿ ಕೆಲವು ವರ್ಷ ಇದ್ದವರು ಮತ್ತೆ ಬೇರೆ ಬೇರೆ ಊರುಗಳಿಗೆ ವರ್ಗವಾದರು.ನಮ್ಮ ಊರಿನ ಬ್ಯಾಂಕ್‍ನ ಮ್ಯಾನೇಜರ್ ಗಳು ಮೂರು ವರ್ಷಕ್ಕೊಮ್ಮೆ ಬದಲಾಗುತ್ತಿದ್ದರು. ನಾವು ಆಗ, ರಮೇಶಣ್ಣ ಇಲ್ಲಿಗೆ ಯಾವಾಗ ಬರಬಹುದು ಎಂದು ಯೋಚಿಸುತ್ತಿದ್ದೇವು.ರಮೇಶಣ್ಣ ಬರಲೇ ಇಲ್ಲ.ಅವರು ಬೆಂಗಳೂರು, ದಾವಣಗೆರೆ, ಮಣಿಪಾಲ, ಹೈದರಾಬಾದ್, ಮುಂಬಯಿ ಅಂತ ಬೇರೆ ಊರು ಸುತ್ತಿದರು.ಬ್ಯಾಂಕ್‍ನಲ್ಲಿ ದೊಡ್ಡ ಮ್ಯಾನೇಜರ್ ಆದರು. ಮೊನ್ನೆ ರಿಟೈರ್ ಆಗುವಾಗ ಜಿ.ಎಂ. ಆಗಿದ್ದರು.ಬ್ಯಾಂಕ್‍ನಲ್ಲಿ ಡಿ.ಜಿ.ಎಂ., ಎ.ಜಿ.ಎಂ., ಸಿ.ಜಿ.ಎಂ. ಮತ್ತೆ ಜಿ.ಎಂ.... ಇ.ಡಿ. ಎಂ.ಡಿ., ಸಿ.ಎಂ.ಡಿ. ಇವೆಲ್ಲ ಅಂತಸ್ತುಗಳ ಲೆಕ್ಕ ನನಗೆ ಈಗಲೂ ಗೊತ್ತಿಲ್ಲ.ಹಾಗಾಗಿ ನಾನು ಬ್ಯಾಂಕ್‍ನಲ್ಲಿಲ್ಲ!
ರಮೇಶಣ್ಣನ ಮದುವೆಗೆ ಹೊದ ನೆನಪು ನನಗಿದೆ. ಮದುವೆ ಮಂಗಳೂರಲ್ಲಿ ನಡೆದಿತ್ತು.ಸಿ.ವಿ.ನಾಯಕ್ ಹಾಲಿರಬೇಕು. ಈಗ ಅದರ ಹೆಸರು ಬದಲಾಗಿದೆಯಾ?ಊರಿನಿಂದ ಸ್ಪೆಷಲ್ ಬಸ್ ಇತ್ತು.ಚಡ್ಡಿ ಹಾಕಿಕೊಳ್ಳುತ್ತಿದ್ದ ಸಣಕಲರಾದ ನಾವೆಲ್ಲ ಸೀಟುಗಳೆಡೆಯಲ್ಲಿ ಕಿಟಿಕಿ ಹತ್ತಿರ ನಿಂತು ರೊಯ್ಯ್ ಅಂತ ಹೋದವರು.ರಮೇಶಣ್ಣನ ಮದುವೆಯಾಗಿ ವರ್ಷವಾಗುವುದರೊಳಗೆ ಅವರ ಹೆಂಡತಿಯ ಸೀಮಂತದ ಆಮಂತ್ರಣ.ನಮ್ಮ ಮನೆಯ, ಊರಿನ ಹೆಂಗಸರದು ಅದೇನೋ ಕುಹಕ ಮಾತುಗಳು.ಮದುವೆಯಾಗಿ ಒಂಭತ್ತು ತಿಂಗಳಾಗುವುದರೊಳಗೆ ಅವಳು ಹೆರುತ್ತಾಳೆ ಎಂದು.ಈ ಮಾತುಗಳು ನನಗೆ ಸರಿಯಾಗಿ ಅರ್ಥವಾಗಲು ಬಹಳ ದಿನಗಳು ಬೇಕಾಯಿತು. ನಮಗೆ ಖುಷಿ.ಅವರ ಮದುವೆ ಎನಿವರ್ಸರಿ ದಿನವೇ ಅವರಿಗೆ ಮಗುವಾಗುವುದು ಬೇಡ ಎಂಬುದು ನಮ್ಮ ಒಳ ಬಯಕೆ.ಅವರ ಎನಿವರ್ಸರಿ ಮತ್ತು ಮಗುವಿನ ಬರ್ತ್‍ಡೇ ಒಂದೇ ದಿನ ಬಂದರೆ ನಮಗೇ ನಷ್ಟ ಅಲ್ವಾ?ಸ್ವೀಟ್ ತಿನ್ನಲು, ಕೇಕ್ ತಿನ್ನಲು ದಿನ ಬೇರೆ ಬೇರೆಯಾದರೆ ಒಳ್ಳೆಯದು ಎಂಬುದು ನಮ್ಮ ಲೆಕ್ಕ.
ಮೊನ್ನೆ ರಿಟೈರ್ ಆದ ರಮೇಶಣ್ಣನಿಗೆ ಒಬ್ಬನೇ ಮಗ ದಿಲೀಪ್.ಈಗವನು ಪೈಲೆಟ್.ರಮೇಶಣ್ಣನ ಹೆಂಡತಿ ಪದ್ಮಾವತಿ ಕೂಡಾ ನಮಗೆ ಚಿಕ್ಕಂದಿನಲ್ಲೇ ಗೊತ್ತು. ಹೈಸ್ಕೂಲಿಗೆ ಹೋಗುತ್ತಿದ್ದ ಅವರಿಗೆ ತುಂಬಾ "ಸೇಲೆ".ಹೀಗೆ ಅವರ ಬಗ್ಗೆ ಜನಾಭಿಪ್ರಾಯ ಮೂಡಿಸಿದವರು ನಮ್ಮದೇ ನೆರೆಕರೆಯ ಹೆಂಗಸರು.ನಮಗೆ ಇಂಥ ದೊಡ್ಡ ಮಾತುಗಳು ಅರ್ಥವಾಗಲು ನಾವು ದೊಡ್ಡವರಾಗಬೇಕಾಯಿತು.
ಮೊನ್ನೆ ರಿಟೈರ್ ಆದ ರಮೇಶಣ್ಣ ಸೆಟ್ಲ ಆದದ್ದು ನಮ್ಮ ಊರಿನಲ್ಲಿ ಅಲ್ಲ.ಇಲ್ಲಿ ಅವರಿಗೆ ಒಂದು ದೊಡ್ಡ ಟಾರೀಸ್ ಮನೆಯಿದೆ. ಅದನ್ನು ಅವರು ಇಲ್ಲಿನ ಬ್ಯಾಂಕ್ ಮ್ಯಾನೇಜರ್‍ಗೆ ಬಾಡಿಗೆಗೆ ಕೊಟ್ಟಿದ್ದಾರೆ.ಅದಕ್ಕೆ ಬ್ಯಾಂಕ್‍ನ ಮನೆಯೆಂದೇ ಹೆಸರು.
ರಮೇಶಣ್ಣ ಬೆಂಗಳೂರಲ್ಲಿ ಮನೆ ಮಾಡಿದ್ದಾರೆ.ಪೈಲೆಟ್ ದಿಲೀಪನಿಗೆ ಇನ್ನೂ ಮದುವೆಯಾಗಿಲ್ಲ.
ಮೊನ್ನೆ ರಿಟೈರ್ ಆದ ರಮೇಶಣ್ಣ ದೊಡ್ಡ ಪಜೀತಿ ಮಾಡಿದ್ದಾರೆ ಎಂದು ಮತ್ತೆ ಹೆಂಗಸರ ಗುಂಪಿನಿಂದ ಗುಸುಗುಸು ಸುದ್ದಿ.ಈ ಸಲ ಮಾತ್ರ ಅದು ಬಹಳ ಗಂಭೀರವಾದ ಸುದ್ದಿ.ಈಗ ನಾನು ದೊಡ್ಡವನಾಗಿರುವುದರಿಂದ ಬನ್ನಿ ಅಣ್ಣ, ಬನ್ನಿ ಭಾವ ಎಂದು ಕರೆದ ಹೆಂಗಸರು ನಾನು ಏನು ಗುಸು ಗುಸು ಅಂದಾಗ ಕತೆ ಹೊರಗೆ ಬಿತ್ತು.ಕ್ಯಾಮರ ಇದ್ದು ಟಿವಿ ವರದಿಗಾರನಿರುತ್ತಿದ್ದರೆ ನಮ್ಮ ಪಾಲಿಗೆ ಇದೊಂದು ಬ್ರೇಕಿಂಗ್ ನ್ಯೂಸೇ ಆಗುತ್ತಿತ್ತು.
ಮೊನ್ನೆ ರಿಟೈರ್ ಆದ ರಮೇಶಣ್ಣನಿಗೆ "ಮಗಳೊಬ್ಬಳಿದ್ದಳೇ!!!" ಅದೇ ಆ ಸುದ್ದಿ.ಟಿವಿ ಚಾನೆಲ್ ಗಳಂತೆ ಅತಾಪತಾ ಗೊತ್ತಿಲ್ಲದ ಹೆಂಗಸರು ಲೈವ್ ಕಾಮೆಂಟ್ ತಾವಾಗಿ ಕೊಡುತ್ತಿದ್ದರಲ್ಲದೇ ಅವರೊಳಗೇ ಸುದ್ದಿಯ ವ್ಯಾಖ್ಯಾನವನ್ನೂ ಮಾಡುತ್ತಿದ್ದರು.ರಮೇಶಣ್ಣ ಒಳ್ಳೆಯ ಹುಡುಗನಾಗಿದ್ದು, ಒಳ್ಳೆಯ ವ್ಯಕ್ತಿಯಾಗಿ ಹೀಗೆ ಮಾದಬಹುದೆಂದು ನಮ್ಮ ಊರಿನ ಜನ ನಿರೀಕ್ಷಿಸಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ವಿಚಾರ ತನ್ನ ಊರಿಗೆ ಗೊತ್ತಾಗದಂತೆ ಕಾಪಾಡಿಕೊಂಡು ಬಂದ ಬಗ್ಗೆ ಎಲ್ಲರಿಗೂ ಆಶ್ಚರ್ಯ!
ಮೊನ್ನೆ ರಿಟೈರ್ ಆದ ರಮೇಶಣ್ಣ ಬ್ಯಾಂಕ್ ನ ಕೆಲಸ ಆರಂಭಿಸಿದ್ದು ಬೆಂಗಳೂರಿನಲ್ಲಿ ಅಲ್ವ!ಅಲ್ಲಿ ಅವರಿಗೆ ಹುಡುಗಿಯೊಬ್ಬಳು "ತಾಗಿದಳು"ಮಗುವಾಯಿತು. ಕೆಲವು ವರ್ಷಗಳ ನಂತರ ಊರಲ್ಲಿ ರಮೇಶಣ್ಣ ಮದುವೆಯಾದ ಸುದ್ದಿ ತಿಳಿದ ಹುಡುಗಿ ಮಗುವನ್ನು ಬಿಟ್ಟು ಸತ್ತಳಂತೆ.ರಮೇಶಣ್ಣ ನಂತರ ಮಗುವನ್ನು ಅವಳ ಅಜ್ಜಿ ಮನೆಯಲ್ಲಿ ಸಾಕುವ ವ್ಯವಸ್ಥೆ ಮಾಡಿದರು.
ಅವರು ಬೇರೆ ಊರಲ್ಲಿದ್ದರೂ ಬ್ಯಾಂಕಿನ ಕೆಲಸ, ಟ್ರೈನಿಂಗ್ ಎಂದು ಬೆಂಗಳೂರಿನಲ್ಲಿ ತುಂಬಾ ದಿನ ಇರುತ್ತಿದ್ದುದು ಏಕೆ ಎಂದು ಈಗ ಎಲ್ಲಾರೂ ಊಹಿಸುತ್ತಿದ್ದಾರೆ.ಪದ್ಮಾವತಿ ಮಾತ್ರ ನಿರ್ಲಿಪ್ತ ರಾಗಿದಾರೆ. ಕತೆ ತಿಳಿದ ಅವರು ವಿಚಲಿತರಾಗಲಿಲ್ಲ.
ಮೊನ್ನೆ ರಿಟೈರ್ ಆದ ರಮೇಶಣ್ಣ ಈಗ ನಿರಾಳವಾಗಿಲ್ಲ.ಮಗನಿಗೂ ಮದುವೆ ಮಾಡಿಸಬೇಕು.ಮಗಳಿಗೂ ಮದುವೆ ಮಾಡಿಸಬೇಕು.ಹೀಗೆ ಅವರು ಎರಡೆರಡು ಮದುವೆಯ ತಯಾರಿಯಲ್ಲಿದ್ದಾರೆ.
ಅವರ ಜ್ಯೂನಿಯರ್ ಸಹೋದ್ಯೋಗಿಯೊಬ್ಬರಿಗೆ ಫೋನ್ ಮಾಡಿದಾಗ ಈ ವಿಚಾರ ಮಾತಾಡಿದರೆ 'ನಿಮಗೆ ಗೊತ್ತಿಲ್ಲವಾ ಮಾರಾಯ್ರೆ!' ಅಂತ 'ನನಗೆ ಗೊತ್ತಿಲ್ಲದ ವಿಚಾರವೇ' ದೊಡ್ಡ ಬ್ರೇಕಿಂಗ್ ಸುದ್ದಿ ಎನ್ನುವಂತೆ ಆಡಿದರು.ಬ್ಯಾಂಕ್‍ನಲ್ಲಾಗಿದ್ದರೆ ಇಂಥ ಸುದ್ದಿಯೆಲ್ಲಾ "ಸೇಫ್" ನಲ್ಲಿರುವುದು ಮಾಮೂಲು ಎಂದರು.
ಎಳವೆಯಲ್ಲಿ ನನಗೆ ಆದರ್ಶವಾಗಿದ್ದ ರಮೇಶಣ್ಣ ಇದುವರೆಗೆ ನಾನು ಬಾಯಿ ಬಿಡದಿದ್ದುದಕ್ಕೆ ಧನ್ಯವಾದ ಹೇಳಲೆಂದು " ಬಾ ಮಾರಾಯ ಬೆಂಗಳೂರಿಗೆ ಬಂದಾಗ ದೊಡ್ಡ ಬಿಯರ್ ಪಾರ್ಟಿ ಕೊಡ್ತಿನಿ ನಿನಗೆ" ಎಮ್ದರು. ನಾನು ತೋರಿಸಿದ ಹುಡುಗ ಅವರ ಮಗಳಿಗೆ ಒಪ್ಪಿಗೆಯಾಗಿದ್ದಾನೆ ಎಂದು ಮಾತ್ರ ರಮೇಶಣ್ಣನಿಗೆ ಗೊತ್ತಿಲ್ಲ.
ರಮೇಶಣ್ಣ ನೀವು ಈ ಬ್ಲಾಗ್ ಓದಿದರೆ ನಾನೇ ನಿಮಗೆ ಒಂದು ಒಳ್ಳೆಯ ಪಾರ್ಟಿಗೆ ಆಮಂತ್ರಿಸುವೆ. ಅಲ್ಲಿ ನಿಮ್ಮ ಮಗಳ ಹುಡುಗನನ್ನೂ ಬರ ಹೇಳುವೆ. ಅಷ್ಟರ ವರೆಗೆ ಕಾಯುವಿರಾ?
ಒಲವಿನಿಂದ
ಬಾನಾಡಿ.

2 comments:

 1. ಅರ್ಥವಾದವು ಕೆಲವು.. ಅನರ್ಥವಾಗಿಯೂ ಅರ್ಥವಾದವು ಇನ್ನು ಕೆಲವು.. ಗೂಡಾರ್ಥಗಳನ್ನೇ ಹೊಂದಿರುವ ಹಲವು ವಿಷಯಗಳನ್ನೊಳಗೊಂಡ ನಿಮ್ಮ ಬರಹ ಹಲವು ಕಥೆಗಳನ್ನು, ಕಲ್ಪನೆಗಳನ್ನು ಹುಟ್ಟು ಹಾಕುವಂತೆಯೂ ಇದೆ! ಜೊತೆಗೆ ಹಲವಾರು ಪ್ರಶ್ನೆಗಳನ್ನೂ ಎಬ್ಬಿಸುತ್ತದೆ. ಉತ್ತರ ಯಾರೊಳಡಗಿದೆ?

  ಆದರಾಭಿಮಾನಗಳೊಂದಿಗೆ,
  ತೇಜಸ್ವಿನಿ

  ReplyDelete
 2. ತೇಜಸ್ವಿನಿಯವರೇ,
  ನಿಮ್ಮ ಪ್ರತಿಕ್ರಿಯೆಗೆ ವಂದನೆ. ನಿಮಗೆ ಕಾಡಿದ ಪ್ರಶ್ನೆಗಳನ್ನು ಉತ್ತರಿಸಲು ಮುಂದೆಂದಾದರೂ ಪ್ರಯತ್ನಿಸುವೆ.
  ಒಲವಿನಿಂದ
  ಬಾನಾಡಿ

  ReplyDelete