Wednesday, July 16, 2008

ಹೂವು ಮತ್ತು ಹೆಣ್ಣು


ಸುಂದರವಾಗಿ ಆಗ ತಾನೆ ಅರಳಿದ ಹೂವೆಂದರೆ ಯಾರಿಗೆ ಪ್ರಿಯವಾಗಿರುವುದಿಲ್ಲ! ಬಳ್ಳಿ ತುಂಬ ಅರಳಿದ ಮಲ್ಲಿಗೆ, ಜಾಜಿ, ಗಿಡ ತುಂಬಾ ಕೆಂಪು, ನಸುಗೆಂಪು, ಹಳದಿ, ಬಿಳಿ ಬಣ್ಣದಿಂದ ಕಂಗೊಳಿಸುವ ಗುಲಾಬಿ, ಮರತುಂಬಾ ಅರಳಿದ ಸಂಪಿಗೆ ಕಂಡಾಗ ಮನಸ್ಸು ಮುದಗೊಳ್ಳುತ್ತದೆ. ಹೂವು ಗಿಡದಲ್ಲಿದ್ದರೇನೆ ಚಂದ. ಇದು ನನ್ನ ಅನಿಸಿಕೆ. ಭಕ್ತರಿಗೆ ಅದು ದೇವರ ಪಾದ ಸೇರಿದರೇನೆ ತಮಗೂ ಮುಕ್ತಿ ಎಂಬ ಭಾವನೆ. ಪ್ರೀತಿಸುವವರಿಗೆ ತನ್ನ ಪ್ರಿಯತಮೆಗೆ ಒಂದು ಅತಿ ಸುಂದರ ಹೂವು ಕೊಡಬೇಕೆಂಬ ಹಂಬಲ. ನಮ್ಮೂರು ಕಡೆ ಹೂವನ್ನು ಕಂಡ ಹೆಂಗಸು ಅದನ್ನು ತನ್ನ ಮುಡಿಯಲ್ಲಿಡಲು ತವಕಿಸುವಳು. ಮನೆಯಂಗಳದಲ್ಲಿ ಅರಳಿದ ಸುಂದರ ಗುಲಾಬಿಯನ್ನು ಕಿತ್ತು ಮುಡಿಯಲು ಅದೆಷ್ಟು ಹೆಣ್ಣು ಮನಸುಗಳು ಹಾತೊರೆಯುತ್ತವೆ.ಪೇಟೆಗಳಲ್ಲೂ ವೃತ್ತಗಳಲ್ಲಿ ಸುಂದರವಾಗಿ ನಿರ್ಮಿಸಿದ ಲಾನ್‍ಗಳಲ್ಲಿ ಅರಳಿನಿಂತ ಹೂವುಗಳನ್ನು ಕಂಡಾಗ ಕಣ್ಣು ತುಂಬಿ ಬರುತ್ತದೆ.
***
ಮೊನ್ನೆ ಮದುವೆಯೊಂದಕ್ಕೆ ನಾವೆಲ್ಲಾ ಸೇರಿದ್ದೆವು. ಬಾಲ್ಯದ ಗೆಳೆಯರು. ಸ್ನೇಹಿತರು. ಮದುವೆ ಹಿರಿಯಕ್ಕನ ಮಗಳದ್ದು. ಹೇಮಾ ಹುಟ್ಟಿದಾಗಿನಿಂದ ಎಲ್ಲರ ಅಚ್ಚು ಮೆಚ್ಚಿನವಳು. ಇಂದು ಮದುವೆಗೆ ಆಗುವಷ್ಟು ಬೆಳೆದಿದ್ದಾಳೆ ಎಂದಾಗ ನಾವೂ ಮುದುಕರಾಗುತ್ತಿದ್ದೇವೋ ಎಂದನಿಸಿತು.ರಘು, ಮೋಹನ, ನೀಲಾ, ಲಲಿತ, ನಾರಾಯ್ಣ, ಈಚ, ಅಚ್ಚು, ಪುತ್ತು ... ಹೀಗೆ ನಾವೆಲ್ಲ ಯಾವ್ಯಾವುದೋ ಊರಿಂದ ಬಂದಿದ್ದೆವು.
ಮದುವೆಯ ನೆಪದಲ್ಲಿ ನಮ್ಮೆಲ್ಲರ ಪುನರ್ಮಿಲನ.
ಮದುವೆಯ ಗಡಿಬಿಡಿಯಲ್ಲಿಯೇ ಬಾಯಿಯಿಂದ ಆಡಲಾಗದ ಅದೆಷ್ಟೋ ಮಾತುಗಳನ್ನು ಕಣ್ಣಿನಿಂದ ಆಡಿ ಹೋದೆವು. ಮದುವೆಗೆ ಬಂದವರೆಲ್ಲಾ ಮದುವೆ ಮುಗಿಯುತ್ತಲೇ ಅಲ್ಲಿ ಇಲ್ಲಿ ಹೊರಟರು.
ಮರುದಿನ ಆಫೀಸಿದೆ. ಮಕ್ಕಳಿಗೆ ಸ್ಕೂಲಿದೆ. ಇಲ್ಲಿವರೆಗೆ ಬಂದು ನಮ್ಮ ಹತ್ತಿರದ ಸಂಬಂಧಿಕರನ್ನು ಭೇಟಿಯಾಗಲೇ ಬೇಕು. ಕಾರಣಗಳು ಸಾಲಾಗಿ ನಿಂತವು. ನಮ್ಮನ್ನೆಲ್ಲಾ ಕರೆದುಕೊಂಡು ಬಂದು ನಿಂತ ಕಾರುಗಳಂತೆ. ನಾವೆಲ್ಲಾ ಸೇರಿದಷ್ಟೇ ವೇಗವಾಗಿ ಚದುರಿದೆವು.
ಆಕಾಶದಲ್ಲಿ ಕಾರ್ತೆಲ್ ತಿಂಗಳಲ್ಲಿ ಇರಬೇಕಾಗಿದ್ದ ಕಡುಕಪ್ಪು ಮೋಡಗಳ ಬದಲು ನೀಲಾಕಾಶದಲ್ಲಿ ಬಿಳಿಮೋಡಗಳು ಚೆಲ್ಲಿ ಹೋಗಿ ಗಳಿಗೆಗೊಂದು ಆಕಾರ ನೀಡುತ್ತಿದ್ದವು.
ಕೊನೆಗೆ ನೀಲಾ ಮತ್ತು ನಾನು ಉಳಿದೆವು. ಮದುವೆಯಾದ ಹೇಮಾ ಗಂಡನ ಮನೆಗೆ ಹೋಗುವಲ್ಲಿವರೆಗಾದರೂ ನಿಲ್ಲೋಣವೆಂದೇ ನಿಂತಿದ್ದೆ. ಎಲ್ಲರೂ ಹೋದ ನಂತರ ನಾನೂ ನೀಲಾ ಮಾತಾಡುತ್ತಾ ಹೆಜ್ಜೆಯಿಡುತ್ತಾ ನೇರವಾಗಿ ಕಡಲ ಕಿನಾರೆಯನ್ನು ತಲುಪಿದೆವು.
ಅದೆಷ್ಟೋ ದಿನಗಳಿಂದ ಹಂಚಿಕೊಳ್ಳಬೇಕಿದ್ದ ನೆನಪುಗಳನ್ನು, ಮಾತುಗಳನ್ನು, ನಗೆಯನ್ನು, ನೋವನ್ನು, ಕಿಚ್ಚನ್ನು, ಸೇಡನ್ನು, ಸಿಟ್ಟನ್ನು, ಹತಾಶೆಗಳನ್ನು ಹಂಚುತ್ತಾ ನಡೆವಾಗ ಇನ್ನೂ ಆಡಲಾಗದ ಅದೆಷ್ಟೋ ಭಾವನೆಗಳು ಪಾದದ ಅಚ್ಚಾಗಿ ನಮ್ಮನ್ನು ಹಿಂಬಾಲಿಸುತ್ತಿದ್ದವು. ನೆನಪಿನ ಕರವಸ್ತ್ರದಲ್ಲಿ ಹಳೆಯ ಗೆಳೆಯರೊಂದಿಗೆ ಹಂಚಲೆಂದೇ ಕಟ್ಟಿಟ್ಟ ಅದೆಷ್ಟೊ ವಿಚಾರಗಳು ಹಾಗೇ ಉಳಿದವು.
ಕಿನಾರೆಯ ಬಂಡೆಯಲ್ಲಿ ಕುಳಿತ ನನಗೆ ನೆನಪುಗಳು ಮತ್ತೆ ಬಾಲ್ಯದತ್ತ ಹೋಯಿತು. ರಘು, ಮೋಹನ, ನೀಲಾ ... ಎಲ್ಲರು ಅದೆಷ್ಟು ಸಲ ಇಲ್ಲಿ ಬಂದಿದ್ದೇವೆ. ಎತ್ತರವಿದ್ದ ಈಚಲ ಮರಗಳು ಇನ್ನೂ ಎತ್ತರಕ್ಕೆ ಬೆಳೆದಿವೆ. ಚಿಕ್ಕವರಿದ್ದಾಗ ವೇಷಕಟ್ಟದೆ ಮರದ ನೆರಳಲ್ಲಿ ನಾವು ಕುಣಿದ ಯಕ್ಷಗಾನ, ಪರೀಕ್ಷೆಗೆ ಓದಲೆಂದು ಕುಳಿತಿದ್ದ ಜಾಗ, ರಜೆಯಲ್ಲಿ ಆಡುತಿದ್ದ ಕ್ರಿಕೆಟ್, ವಾಲಿಬಾಲ್ ಆಟಗಳು, ಇನ್ನೂ ಹೆಸರು ಗೊತ್ತಿಲ್ಲದ ಅದೆಷ್ಟೋ ತುಂಟ ಆಟಗಳು...ನಾವೆಲ್ಲ ನಮ್ಮ ಕೈಗಳನ್ನು ಒದ್ದೆ ಮಾಡಿ ಕೈಯಲ್ಲಿ ಮರಳನ್ನು ಅದ್ದಿ ಇನ್ನೊಬ್ಬರ ಕೈಯನ್ನು ಗಟ್ಟಿಯಾಗಿ ಹಿಡಿಯುತ್ತಿದ್ದೆವು. ಹೀಗೆ ಒಬ್ಬರನ್ನೊಬ್ಬರು ನೋಯಿಸುತ್ತಿದ್ದೆವು. ದೊರಗಾದ ಹೊಯಿಗೆಯಿಂದ ಹಿಡಿಸಿಕೊಂಡ ಎಳೆಯ ಕೈಗಳು ಕೆಂಪಾಗುತ್ತಿದ್ದವು. ಕೆಲವೊಮ್ಮೆ ಯಾರಾದರೂ ಗಟ್ಟಿಯಾಗಿ ಹಿಡಿದರೆ ಆ ಕೆಂಪು ಮರುದಿನ ಕಪ್ಪಿಟ್ಟಿರುತ್ತಿತ್ತು.
ಮೊನ್ನೆ ಕೂಡ ನಾನು ಕಡಲಿನ ನೀರಿನಲ್ಲಿ ಕೈಯನ್ನು ಅದ್ದಿ ಮರಳನ್ನು ಅಂಗೈಯಲ್ಲಿ ಹಿಡಿದುಕೊಂಡೆ. ಹಳೆಯ ನೆನಪಿನ ಬಾವಿಗೆ ಬಿದ್ದ ನೀಲಾ "ನಿನ್ನ ತುಂಟತನ ಈಗ ಬೇಡ ಮಾರಾಯ" ಎಂದಳು. ಮಾತಾಡುತ್ತಾ ನಾನವಳ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಇನ್ನೂ ಅಮುಕಿದೆ.
ಪ್ರಬುದ್ಧನಾಗಿರುವ ನಾನು ಹೇಗೊ ಬಾಲ್ಯಕ್ಕೆ ಜಾರಿದ್ದೆ. ಅವಳಿಗೆ ನೋವಾಯಿತು. ನಾನು ಹಿಡಿದಲ್ಲಿ ಅವಳ ಕೈ ಕೆಂಪಾಯಿತು. ಅವಳು ನನ್ನನ್ನೇ ದಿಟ್ಟಿಸಿ ನೋಡಿದಳು. ತಪ್ಪು ಮಾಡಿದೆನೆ ಎಂದು ಕೊಂಡ ನಾನು ನೋವಾಯಿತೇ ಎಂದೆ. ಹೌದು ಎಂದಳು. ಅವಳು ಮರಳಿಲ್ಲದ ಅವಳ ಕೈಗಳಿಂದ ನನ್ನನ್ನು ಗಟ್ಟಿಯಾಗಿ ಹಿಡಿದಳು.
ಅವಳ ಕೈಗಳು ಸುಕೋಮಲವಾಗಿದ್ದವು. ಅವಳ ಹಿಡಿತ ನನ್ನ ಎದೆಯನ್ನು ನೋಯಿಸಿತು. ಕ್ಷಮಿಸು, ನಿನ್ನನ್ನು ನೋಯಿಸಿದಕ್ಕೆ ಎಂದೆನು. ಹೆಣ್ಣು ಒಂದು ಹೂವಿನ ಹಾಗೆ. ಕೋಮಲವಾದ ಹೂವನ್ನು ಹಿಚುಕಬೇಡ ಎಂದಳು. ಹೂವೆಂದರೆ ಅದೆಷ್ಟು ಪ್ರೀತಿಸುತ್ತಿದ್ದೆ ನೀನು. ಆದರೆ ಅದನ್ನು ಗಿಡದಿಂದ ಕೀಳದಂತೆ ನಮ್ಮೊಡನೆಯೆಲ್ಲಾ ಜಗಳವಾಡಿದ್ದೆ ನೀನು ಎಂದಳು.
***
ಹೆಣ್ಣೊಂದು ಹೂವು ಹಿಚುಕಬೇಡ ಅದನ್ನು. ಹೂವೊಂದು ಹೆಣ್ಣು ಹಿಚುಕಬೇಡ ಅದನ್ನು. ಸಮುದ್ರದ ಅಲೆಯಂತೆ ಮತ್ತೆ ಮತ್ತೆ ಮನಸ್ಸಿನ ಪುಟಗಳನ್ನು ಅಪ್ಪಲಿಸುತ್ತಿವೆ.
ಹೂವನ್ನು ಕಿತ್ತು ದೇವರಿಗೆ ಅರ್ಪಿಸುವ ಭಕ್ತರು.
ಹೂವುಗಳ ಮಾಲೆಯನ್ನು ಮಾಡಿ ರಾಜಕಾರಣಿಗಳಿಗೆ ಹಾಕುವ ಚೇಲಗಳು.
ಹೂವು ಅರಳುವ ಮೊದಲೇ ಮೊಗ್ಗಾಗಿರುವಾಗಲೇ ಕಿತ್ತು ಮಾರುಕಟ್ಟೆಯಲ್ಲಿ ಮಾರುವವರು.
ಗೊತ್ತಿಲ್ಲವೆ ಅವರಿಗೆ ಹೂವೊಂದು ಹೆಣ್ಣು. ಹೆಣ್ಣೊಂದು ಹೂವೆಂದು.
ಒಲವಿನಿಂದ
ಬಾನಾಡಿ

4 comments:

  1. ಹೂವು ಕೀಳಬಾರದೆನ್ನುವ ನಿಮ್ಮ ಅಭಿಪ್ರಾಯಕ್ಕೆ ನಾನು ಸಮ್ಮತಿಸುತ್ತೇನೆ.

    ReplyDelete
  2. ಹೂ ಮನಸ್ಸಿನವರಾರೂ ಹೂವು-ಹೆಣ್ಣಿನ ನಡುವೆ ವ್ಯತ್ಯಾಸ ಕಾಣರು.

    ReplyDelete