Wednesday, July 30, 2008

ಬಿಟ್ಟು ಹೋದ ಗಾಡಿ

ಕವನಗಳು ಬಹಳ ಖಾಸಗಿಯಾಗಿ ಓದಲೆಂದಿರುವವು ಎಂದು ನನ್ನ ನಂಬುಗೆ. ಸಂಕಲನವೊಂದು ಬಂದ ನಂತರ ಬರೆದ ಕೆಲವು ಕವನಗಳು ಲ್ಯಾಪಿನಲ್ಲಿವೆ. ಅವುಗಳಲ್ಲಿ ಒಂದು 'ಬಿಟ್ಟು ಹೋದ ಗಾಡಿ'. ಬರೆದು ಬಹಳ ಸಮಯವಾಯಿತು. ಮೊನ್ನೆಯ ಸರಣಿ ಬಾಂಬುಗಳ ನಂತರ ಇದನ್ನು ಕನಿಷ್ಟ ನನ್ನ ಬ್ಲಾಗ್ ಓದುವ ಗೆಳೆಯರೊಡನೆ ಹಂಚೋಣವೆನಿಸಿತು. ಇಷ್ಟವಾಗದಿದ್ದರೆ ಹಾಗೆ ಬಿಟ್ಟು ಬಿಡಿ.

Click photo to view

Thursday, July 24, 2008

ಬತ್ತಿದ ಶಂಕರಿ ನದಿ

ಕಥೆಗಾರ ಎಂ. ವ್ಯಾಸ ಇನ್ನಿಲ್ಲ!!
ಎಂ. ವ್ಯಾಸ ಅವರ ಕತೆಗಳು ಕನ್ನಡ ಮಾತ್ರವಲ್ಲ ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯದಲ್ಲಿ ವಿಭಿನ್ನವಾಗಿವೆ. ಸುಮಾರು ಇಪ್ಪತ್ತು ವರ್ಷಗಳಿಂದಲೂ ಅವರ ಕಥೆ ಕವನ ಪುಸ್ತಕಗಳೆಂದರೆ ಒಂದೇ ಓದಿಗೆ ಮುಗಿಸಿ ಬಿಡುತ್ತಿದ್ದ ನಾನು ಕೆಲವು ತಿಂಗಳುಗಳ ಹಿಂದಷ್ಟೇ ಅವರ ಕೆಲವು ಕಥಾ ಸಂಕಲನಗಳನ್ನು ಓದಿ ಮುಗಿಸಿದೆ. ಮತ್ತೆ ಅವರ ಕೆಲವು ಪುಸ್ತಕಗಳನ್ನು ಓದ ಬೇಕೆಂದು ಕೊಂಡಿದ್ದೆ. ಶಂಕರಿ ನದಿ, ದುರ್ಗಾಪುರದ ಪರಿಸರವನ್ನು ನಿರ್ಮಿಸಿದವರು ಅವರು. ಪ್ರತಿ ಕಥೆಗಳಲ್ಲೂ ಸಾವು, ಕಾಮ, ಬದುಕಿನ ಕುರಿತಾದ ಅಲೌಕಿಕ ಅನುಭವಗಳನ್ನು ಹೊತ್ತು ಕೊಂಡು ಬರೆಯುತ್ತಿದ್ದ ವ್ಯಾಸರನ್ನು ಓದುವುದೆಂದರೆ ಮೈ ಜುಂ ಅನಿಸಿಕೊಳ್ಳುವುದೆಂದೇ ಅರ್ಥೆ. ಈ ವಾರಾಂತ್ಯದಲ್ಲಿ ನಿಮ್ಮ ಕಥೆಗಳನ್ನು ಮತ್ತೆ ಓದಿ ನಿಮಗೆ ಅರ್ಪಿಸುವುವೆ ನನ್ನ ಶ್ರದ್ಧಾಂಜಲಿ.
ಕಾಸರಗೋಡಿನಲ್ಲಿ ಜೀವನ ನಡೆಸಿದ ಎಂ. ವ್ಯಾಸ ಅವರು ಚಿಕೂನ್ ಗುನ್ಯ ಕ್ಕೆ ಬಲಿಯಾಗಿದ್ದಾರೆ ಎಂದರೆ ಅವರ ಕಥೆಗಳಂತೆ ಇನ್ಯಾವುದೋ ತಿರುವು ಪಡೆದುಕೊಳ್ಳುವುದೋ ಎಂಬ ಕುತೂಹಲದಲ್ಲಿದ್ದೇನೆ.
ಕನ್ನಡದ ಮೇಲ್ತರಗತಿಯ ವಿಮರ್ಶಕರ ಕಣ್ಣಿಗೆ ಬೀಳದ ವ್ಯಾಸ, ಅಕಾಡೆಮಿಕ್ ಆಗಿ ಅಥವಾ ಪ್ರಶಸ್ತಿಗಳಿಗಾಗಿ ಲಾಬಿ ನಡೆಸದ ಎಂ. ವ್ಯಾಸ, ತಪಸ್ಸಿನಂತೆ ನಮಗೆ ಕವನ, ಕಥೆಗಳನ್ನು ನೀಡಿದ ವ್ಯಾಸ ನಿಜವಾಗಿಯೂ ಖಾಲಿ ಜಾಗ ಬಿಟ್ಟು ಎಲ್ಲಿ ಹೋಗಿದ್ದೀರಿ. ಶಂಕರಿ ನದಿ ಬತ್ತಿ ಹೋಗಿದೆ.

Saturday, July 19, 2008

ಬಾರದ ಮಳೆಗೆ ಒಂದು ಓಲೆ...
ನೀನು ಕಟ್ಟಿಟ್ಟ ಮೋಡಗಳು ಹಳಸಾಗಿವೆ ನೋಡು. ಚೆಲ್ಲಿ ಬಿಡು ಕಡಲ ಒಡಲಿಂದ ಬಾನ ಮೇಲೆ ತಲುಪಿ ದಣಿದಾಗ ಹೊರ ಹೊರಟ ಬೆವರ ಹನಿಗಳ. ನಮಗೂ ಸ್ವಲ್ಪ ಕೊಡು. ಗಂಟಲೊಣಗಿದೆ. ಉಗುಳು ನುಂಗಲು ಕಷ್ಟ. ಮತ್ತೆ ಅನ್ನ ಉಣ್ಣುವುದೆಂತು. ಗದ್ದೆಯಲ್ಲಿ ಪೈರಾದರೆ ತಾನೆ. ತೆನೆಯಾಗುವುದು. ಭತ್ತವಾಗುವುದು. ಅಕ್ಕಿಯಾಗುವುದು. ಅಕ್ಕಿ ಬೆಂದು ಅನ್ನವಾಗುವುದು.
ಎಲ್ಲಿ ಹೊರಟೆ ಕಣ್ಣು ಮುಚ್ಚಾಲೆಯಾಡಲು. ಯಾರು ನಿನ್ನ ಗೆಳತಿ. ಸಡಿಲಿಸು ನಿನ್ನ ಅಪ್ಪುಗೆಯ. ಹಬ್ಬಿಸು ಕರಿಮೋಡಗಳ ಬಾನು ತುಂಬಾ. ಕವಿಯಲಿ ಕತ್ತಲೆ. ಅಪ್ಪಿಕೊಳ್ಳಲಿ ಮೋಡಗಳು. ಮಿಂಚಾಗಳು. ಸಿಡಿಲಾಗಲು. ಗುಡುಗಾಗಲು. ಸುರಿಯಲಿ ಧರೆಯಲಿ ಆ ಶುದ್ಧ ಜಲ. ಹೀರಿಕೊಳ್ಳಲಿ ಗಿಡ ಮರ. ಗದ್ದೆ ತೋಟ. ಕೆರೆ ಕಾಲುವೆ ತುಂಬಿ ಹರಿಯಲಿ. ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇವೆ. ಕೈಚಾಚಿ. ಕಣ್ತೆರೆದು. ಬಾಯಗಲಿಸಿ. ಸುರಿದು ಬಿಡು. ವರ್ಷಧಾರೆಯ.
ಕಾಗದದ ದೋಣಿಗಳು ಕಾಯುತ್ತವೆ ಸಣ್ಣ ಕಂದಗಳ ಕೈಗಳಲಿ. ಹರಿವ ತೋಡಿನ ಸೆಳವಿಗೆ. ಒಂದೊಂದು ಕನಸುಗಳನ್ನು ದಡದಾಚೆ ದಾಟಿಸಲು. ಸುರಿದು ನೋಡು ಮಕ್ಕಳ ಕಿರುನಗೆಯ ಮೇಲೆ ಹತ್ತು ಇನ್ನೊಂದು ಹನಿಗಳ. ಅರಳುವುದು ನೋಡು ಅವರ ಕಣ್ಣುಗಳು. ಯಾಕೆ ಮರೆಯಾಗಿ ನಿಂತೆ ನಿನಗೆ ಪುಟ್ಟ ಪುಟಾಣಿಗಳೆಂದರೆ ಪ್ರೀತಿಯಿಲ್ಲವೇ?
ಒಂದೇ ಕೊಡೆ ಹಿಡಿದುಕೊಂಡು ಹೋದ ಪ್ರೇಮಿಗಳು ಅಂಟಿಕೊಂಡು ನಿನ್ನಲ್ಲಿ ಜಳಕವಾಡುವುದು ಹೇಗೆ? ಸುರಿಯುತ್ತಾ ಸುರಿಯುತ್ತಾ ಇರಲಾರೆಯಾ? ಹೊದ್ದುಕೊಂಡು ಮಲಗಬೇಕೆಂದವರಿಗೆ ನೀನಿಲ್ಲವಲ್ಲ. ನೀನು ಸುರಿಯುವ ಶಬ್ದವೇ ಜೋಗುಳ ನಮಗೆಲ್ಲಾ. ಯಾಕೆ ಓಡಿಸುವೆ ನಮ್ಮ ನಿದ್ದೆಯನ್ನು.
ಮುಂಗಾರು ಮಳೆಯ ನಂತರ ಗಾಳಿಪಟ ಹಾರಿಸಿದ ಭಟ್ಟರನ್ನೂ ಮರೆತೆಯಾ? ನಮ್ಮ ಯೋಗ. ಬಾ ಬೇಗ. ಸುರಿದು ಬಾ. ಪ್ರೇಮಿಗಳು ನಿನ್ನ ಕಾವ್ಯಕ್ಕೆ ಕಾಯುತ್ತಿದ್ದಾರೆ. ಸುರಿದು ಸುರಿದು ಬಿಡದೆ ಬಾ. ಕಾಣೆಯಾಗಿದೆ ಕೆಮ್ಮು. ಒಣಗಿ ಕುಳಿತಿದೆ ಒಳಗೆ. ನೀನು ಬಂದಾಗ, ಹೋಗದೇ ನಿಂತಾಗ, ಸುಡಲೆಂದು ಕಾಯುತಿವೆ- ಹಪ್ಪಳ, ಸಂಡಿಗೆ, ಗೇರು ಹಲಸಿನ ಬೀಜ. ಅದೆಲ್ಲೋ ಮೂಲೆಯಲ್ಲಿ.
ಸುರಿದು ಸುರಿದು ಇಲ್ಲೆ ಇರು. ಮರೆತು ಕೂಡ ಹೋಗಬೇಡ. ಮಕ್ಕಳು ಕಾಯುತ್ತವೆ ಶಾಲೆಗೆ ರಜೆಹಾಕಿ ನಿನ್ನೊಡನೆ ಕುಳಿತು ಅಜ್ಜಿಯ ಕತೆ ಕೇಳಲು. ಇನ್ನೊಂದು ಮಳೆಗಾಲ ಉಳಿದರೆ ಸಾಕಪ್ಪ ಎನ್ನುವ ಅಜ್ಜಿಯ ಆಶೆಗೆ ನೀನು ಅವಕಾಶವನ್ನೇ ಕೊಡದೆ ಎಲ್ಲಿ ಅಡಗಿದೆ. ಬಂದು ಬಿಡು. ಮುಗಿಯುವುದರೊಳಗೆ ಆಷಾಢ, ಶ್ರಾವಣ. ಬೆಂದು ಹೋಗಿವೆ ಅವು ನಿನ್ನ ಕಾದು ಕಾದು.
ನಿನ್ನ ಕಡಲ ಒಡಲಲ್ಲಿಯೇ ಅದೆಷ್ಟು ಚಿಪ್ಪುಗಳು ತೆರೆದು ನಿಂತಿವೆ ಒಂದೊಂದು ಹನಿಗಾಗಿ. ಹನಿಗಳು ಮುತ್ತಾಗಲು.
ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..ತಿಳಿಯದಾಗಿದೆ
ಮುಂಗಾರು ಮಳೆಯೇ..ಅನಿಸುತಿದೆ ಯಾಕೊ ಇಂದು..ಕೊಲ್ಲು ಹುಡುಗಿ ಒಮ್ಮೆ ನನ್ನ..ಹಾಗೆ ಸುಮ್ಮನೆಸುರಿಯುವ ಸೋನೆಯು ಸೂಸಿದೆ..ಹಾಡುಗಳು ಮೌನವಾಗಿವೆ.

Friday, July 18, 2008

ನೆಲ್ಸನ್ ಮಂಡೇಲಾ.


ನೆಲ್ಸನ್ ಮಂಡೇಲಾ. ಒಂದು ತಲೆಮಾರಿನ ಜನರು ಆತನನ್ನೇ ಇಂದಿಗೂ ವಿಶ್ವನಾಯಕನನ್ನಾಗಿ ಕಾಣುತ್ತಿದ್ದಾರೆ. ನನಗೂ ಆತ ಬಹಳ ಪ್ರಿಯ. ಇಂದು ಆತನ ತೊಂಭತ್ತನೇ ಜನ್ಮ ದಿನ. ಟೈಮ್ ಪತ್ರಿಕೆಯಲ್ಲಿ ನಾಯಕತ್ವದ ಬಗ್ಗೆ ಆತ ನೀಡಿದ ಎಂಟು ಪಾಠಗಳು ಅರಿತುಕೊಳ್ಳಬೇಕಾದವು. ಆತನ ಬದುಕು ಸ್ಫೂರ್ತಿದಾಯಕ. ಭಲೇ... ಕತ್ತಲೆ ನಾಡಿನ ಕರಿಯ ನಾಯಕ. ನಿನಗಿದೋ ಹುಟ್ಟುಬ್ಬ ಶುಭಾಳು.

ನಿನ್ನ ಬದುಕು ಅಮರ.

Thursday, July 17, 2008

ಮೊನ್ನೆ ರಿಟೈರ್ ಆದ ರಮೇಶಣ್ಣ

ರಮೇಶಣ್ಣ ನಾವು ಬೆಳೆಯುತ್ತಿದ್ದಾಗ ನಮಗೆಲ್ಲಾ ಆದರ್ಶ. ನನಗೆ ನೆನಪುಗಳು ಮೆದುಳಿನಲ್ಲಿ ಅರಂಭಿಸಿದ ದಿನಗಳಿರಬಹುದು.ರಮೇಶಣ್ಣ ಕಾಲೇಜಿಗೆ ಹೋಗುತ್ತಿದ್ದರು.ನಾನು ನೋಡಿದ ಮೊದಲ ಕಾಲೇಜು ಹುಡುಗ ಅವರೇ.ಶುಕ್ರವಾರದ ಉದಯವಾಣಿಯ ಚಲನಚಿತ್ರ ಜಾಹೀರಾತುಗಳಿಂದ ಇಳಿದು ಬಂದ ಅಮಿತಾಭ್ ಬಚ್ಚನ್ ಅವರಾಗಿದ್ದರು.ಅವರ ಕ್ರಾಪ್, ಶರ್ಟಿನ ಕಾಲರ್, ಪ್ಯಾಂಟಿನ ಬಾಟಮ್.ನಮ್ಮಿಂದ ದೊಡ್ಡವರು ಆದರೆ ಅವರಿಂದ ಚಿಕ್ಕವರು ಅದನ್ನು ಕಂಡು ಅನುಕರಿಸುತ್ತಿದ್ದರು. ಅವರೊಮ್ಮೆ ನಮ್ಮ ಭಟ್ಟರ ಅಂಗಡಿಯಿಂದ ಇಡೀ ಊರಿಗೆ ಲಾಡು ಹಂಚಿದ್ದರು.ಅದು ಅವರು ಬಿ.ಕಾಮ್. ಪಾಸಾಗಿದ್ದಕ್ಕೋ ಅಥವಾ ಮಣಿಪಾಲದ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದಕ್ಕೋ...ನನ್ನ ನೆನಪು ಇನ್ನೂ ದಟ್ಟವಾಗಿಲ್ಲ. ಅಷ್ಟು ಸಣ್ಣವನಿದ್ದೆ ನಾನು.ಸ್ವಲ್ಪ ವರ್ಷದ ನಂತರ ಅವರು ಮಣಿಪಾಲದ ಬ್ಯಾಂಕ್ ಸೇರಿದರು.ಕೆಲಸಕ್ಕೆ ಸೇರಿದ್ದು ಸೀದಾ ಬೆಂಗಳೂರಿನಲ್ಲಿ.ನಮ್ಮೂರಿನಿಂದ ಯಾರಾದರೂ ಹೊರ ಊರಿಗೆ ಕೆಲಸಕ್ಕೆ ಹೋಗುವುದಾದರೆ ಅದು ಬೊಂಬಾಯಿಗೆ.ಆದರೆ ಇವರು ಹೋದದ್ದು ಬೆಂಗಳೂರಿಗೆ.ಆಗ ಮಂಗಳೂರಿನಿಂದ ಬೆಂಗಳೂರಿಗೆ ರೈಲು ಇತ್ತು. ಮೀಟರ್ ಗೇಜ್. ಹಳೆಯದು.ಮಧ್ಯಾಹ್ನ ಎರಡಕ್ಕೆ ನಮ್ಮ ಊರಿನಿಂದ ಐದು ಕಿಲೋ ಮೀಟರ್ ದೂರದಿಂದ ಹೋಗುವ ಬಸ್ಸಿನಲ್ಲಿ ಅವರು ಮಂಗಳೂರಿಗೋ, ಪುತ್ತೂರಿಗೋ ಹೋಗುತ್ತಿದ್ದರು.ಬೆಂಗಳೂರು ರೈಲು ಹಿಡಿಯಲು.ಬೆಂಗಳೂರಿನಲ್ಲಿ ಕೆಲವು ವರ್ಷ ಇದ್ದವರು ಮತ್ತೆ ಬೇರೆ ಬೇರೆ ಊರುಗಳಿಗೆ ವರ್ಗವಾದರು.ನಮ್ಮ ಊರಿನ ಬ್ಯಾಂಕ್‍ನ ಮ್ಯಾನೇಜರ್ ಗಳು ಮೂರು ವರ್ಷಕ್ಕೊಮ್ಮೆ ಬದಲಾಗುತ್ತಿದ್ದರು. ನಾವು ಆಗ, ರಮೇಶಣ್ಣ ಇಲ್ಲಿಗೆ ಯಾವಾಗ ಬರಬಹುದು ಎಂದು ಯೋಚಿಸುತ್ತಿದ್ದೇವು.ರಮೇಶಣ್ಣ ಬರಲೇ ಇಲ್ಲ.ಅವರು ಬೆಂಗಳೂರು, ದಾವಣಗೆರೆ, ಮಣಿಪಾಲ, ಹೈದರಾಬಾದ್, ಮುಂಬಯಿ ಅಂತ ಬೇರೆ ಊರು ಸುತ್ತಿದರು.ಬ್ಯಾಂಕ್‍ನಲ್ಲಿ ದೊಡ್ಡ ಮ್ಯಾನೇಜರ್ ಆದರು. ಮೊನ್ನೆ ರಿಟೈರ್ ಆಗುವಾಗ ಜಿ.ಎಂ. ಆಗಿದ್ದರು.ಬ್ಯಾಂಕ್‍ನಲ್ಲಿ ಡಿ.ಜಿ.ಎಂ., ಎ.ಜಿ.ಎಂ., ಸಿ.ಜಿ.ಎಂ. ಮತ್ತೆ ಜಿ.ಎಂ.... ಇ.ಡಿ. ಎಂ.ಡಿ., ಸಿ.ಎಂ.ಡಿ. ಇವೆಲ್ಲ ಅಂತಸ್ತುಗಳ ಲೆಕ್ಕ ನನಗೆ ಈಗಲೂ ಗೊತ್ತಿಲ್ಲ.ಹಾಗಾಗಿ ನಾನು ಬ್ಯಾಂಕ್‍ನಲ್ಲಿಲ್ಲ!
ರಮೇಶಣ್ಣನ ಮದುವೆಗೆ ಹೊದ ನೆನಪು ನನಗಿದೆ. ಮದುವೆ ಮಂಗಳೂರಲ್ಲಿ ನಡೆದಿತ್ತು.ಸಿ.ವಿ.ನಾಯಕ್ ಹಾಲಿರಬೇಕು. ಈಗ ಅದರ ಹೆಸರು ಬದಲಾಗಿದೆಯಾ?ಊರಿನಿಂದ ಸ್ಪೆಷಲ್ ಬಸ್ ಇತ್ತು.ಚಡ್ಡಿ ಹಾಕಿಕೊಳ್ಳುತ್ತಿದ್ದ ಸಣಕಲರಾದ ನಾವೆಲ್ಲ ಸೀಟುಗಳೆಡೆಯಲ್ಲಿ ಕಿಟಿಕಿ ಹತ್ತಿರ ನಿಂತು ರೊಯ್ಯ್ ಅಂತ ಹೋದವರು.ರಮೇಶಣ್ಣನ ಮದುವೆಯಾಗಿ ವರ್ಷವಾಗುವುದರೊಳಗೆ ಅವರ ಹೆಂಡತಿಯ ಸೀಮಂತದ ಆಮಂತ್ರಣ.ನಮ್ಮ ಮನೆಯ, ಊರಿನ ಹೆಂಗಸರದು ಅದೇನೋ ಕುಹಕ ಮಾತುಗಳು.ಮದುವೆಯಾಗಿ ಒಂಭತ್ತು ತಿಂಗಳಾಗುವುದರೊಳಗೆ ಅವಳು ಹೆರುತ್ತಾಳೆ ಎಂದು.ಈ ಮಾತುಗಳು ನನಗೆ ಸರಿಯಾಗಿ ಅರ್ಥವಾಗಲು ಬಹಳ ದಿನಗಳು ಬೇಕಾಯಿತು. ನಮಗೆ ಖುಷಿ.ಅವರ ಮದುವೆ ಎನಿವರ್ಸರಿ ದಿನವೇ ಅವರಿಗೆ ಮಗುವಾಗುವುದು ಬೇಡ ಎಂಬುದು ನಮ್ಮ ಒಳ ಬಯಕೆ.ಅವರ ಎನಿವರ್ಸರಿ ಮತ್ತು ಮಗುವಿನ ಬರ್ತ್‍ಡೇ ಒಂದೇ ದಿನ ಬಂದರೆ ನಮಗೇ ನಷ್ಟ ಅಲ್ವಾ?ಸ್ವೀಟ್ ತಿನ್ನಲು, ಕೇಕ್ ತಿನ್ನಲು ದಿನ ಬೇರೆ ಬೇರೆಯಾದರೆ ಒಳ್ಳೆಯದು ಎಂಬುದು ನಮ್ಮ ಲೆಕ್ಕ.
ಮೊನ್ನೆ ರಿಟೈರ್ ಆದ ರಮೇಶಣ್ಣನಿಗೆ ಒಬ್ಬನೇ ಮಗ ದಿಲೀಪ್.ಈಗವನು ಪೈಲೆಟ್.ರಮೇಶಣ್ಣನ ಹೆಂಡತಿ ಪದ್ಮಾವತಿ ಕೂಡಾ ನಮಗೆ ಚಿಕ್ಕಂದಿನಲ್ಲೇ ಗೊತ್ತು. ಹೈಸ್ಕೂಲಿಗೆ ಹೋಗುತ್ತಿದ್ದ ಅವರಿಗೆ ತುಂಬಾ "ಸೇಲೆ".ಹೀಗೆ ಅವರ ಬಗ್ಗೆ ಜನಾಭಿಪ್ರಾಯ ಮೂಡಿಸಿದವರು ನಮ್ಮದೇ ನೆರೆಕರೆಯ ಹೆಂಗಸರು.ನಮಗೆ ಇಂಥ ದೊಡ್ಡ ಮಾತುಗಳು ಅರ್ಥವಾಗಲು ನಾವು ದೊಡ್ಡವರಾಗಬೇಕಾಯಿತು.
ಮೊನ್ನೆ ರಿಟೈರ್ ಆದ ರಮೇಶಣ್ಣ ಸೆಟ್ಲ ಆದದ್ದು ನಮ್ಮ ಊರಿನಲ್ಲಿ ಅಲ್ಲ.ಇಲ್ಲಿ ಅವರಿಗೆ ಒಂದು ದೊಡ್ಡ ಟಾರೀಸ್ ಮನೆಯಿದೆ. ಅದನ್ನು ಅವರು ಇಲ್ಲಿನ ಬ್ಯಾಂಕ್ ಮ್ಯಾನೇಜರ್‍ಗೆ ಬಾಡಿಗೆಗೆ ಕೊಟ್ಟಿದ್ದಾರೆ.ಅದಕ್ಕೆ ಬ್ಯಾಂಕ್‍ನ ಮನೆಯೆಂದೇ ಹೆಸರು.
ರಮೇಶಣ್ಣ ಬೆಂಗಳೂರಲ್ಲಿ ಮನೆ ಮಾಡಿದ್ದಾರೆ.ಪೈಲೆಟ್ ದಿಲೀಪನಿಗೆ ಇನ್ನೂ ಮದುವೆಯಾಗಿಲ್ಲ.
ಮೊನ್ನೆ ರಿಟೈರ್ ಆದ ರಮೇಶಣ್ಣ ದೊಡ್ಡ ಪಜೀತಿ ಮಾಡಿದ್ದಾರೆ ಎಂದು ಮತ್ತೆ ಹೆಂಗಸರ ಗುಂಪಿನಿಂದ ಗುಸುಗುಸು ಸುದ್ದಿ.ಈ ಸಲ ಮಾತ್ರ ಅದು ಬಹಳ ಗಂಭೀರವಾದ ಸುದ್ದಿ.ಈಗ ನಾನು ದೊಡ್ಡವನಾಗಿರುವುದರಿಂದ ಬನ್ನಿ ಅಣ್ಣ, ಬನ್ನಿ ಭಾವ ಎಂದು ಕರೆದ ಹೆಂಗಸರು ನಾನು ಏನು ಗುಸು ಗುಸು ಅಂದಾಗ ಕತೆ ಹೊರಗೆ ಬಿತ್ತು.ಕ್ಯಾಮರ ಇದ್ದು ಟಿವಿ ವರದಿಗಾರನಿರುತ್ತಿದ್ದರೆ ನಮ್ಮ ಪಾಲಿಗೆ ಇದೊಂದು ಬ್ರೇಕಿಂಗ್ ನ್ಯೂಸೇ ಆಗುತ್ತಿತ್ತು.
ಮೊನ್ನೆ ರಿಟೈರ್ ಆದ ರಮೇಶಣ್ಣನಿಗೆ "ಮಗಳೊಬ್ಬಳಿದ್ದಳೇ!!!" ಅದೇ ಆ ಸುದ್ದಿ.ಟಿವಿ ಚಾನೆಲ್ ಗಳಂತೆ ಅತಾಪತಾ ಗೊತ್ತಿಲ್ಲದ ಹೆಂಗಸರು ಲೈವ್ ಕಾಮೆಂಟ್ ತಾವಾಗಿ ಕೊಡುತ್ತಿದ್ದರಲ್ಲದೇ ಅವರೊಳಗೇ ಸುದ್ದಿಯ ವ್ಯಾಖ್ಯಾನವನ್ನೂ ಮಾಡುತ್ತಿದ್ದರು.ರಮೇಶಣ್ಣ ಒಳ್ಳೆಯ ಹುಡುಗನಾಗಿದ್ದು, ಒಳ್ಳೆಯ ವ್ಯಕ್ತಿಯಾಗಿ ಹೀಗೆ ಮಾದಬಹುದೆಂದು ನಮ್ಮ ಊರಿನ ಜನ ನಿರೀಕ್ಷಿಸಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ವಿಚಾರ ತನ್ನ ಊರಿಗೆ ಗೊತ್ತಾಗದಂತೆ ಕಾಪಾಡಿಕೊಂಡು ಬಂದ ಬಗ್ಗೆ ಎಲ್ಲರಿಗೂ ಆಶ್ಚರ್ಯ!
ಮೊನ್ನೆ ರಿಟೈರ್ ಆದ ರಮೇಶಣ್ಣ ಬ್ಯಾಂಕ್ ನ ಕೆಲಸ ಆರಂಭಿಸಿದ್ದು ಬೆಂಗಳೂರಿನಲ್ಲಿ ಅಲ್ವ!ಅಲ್ಲಿ ಅವರಿಗೆ ಹುಡುಗಿಯೊಬ್ಬಳು "ತಾಗಿದಳು"ಮಗುವಾಯಿತು. ಕೆಲವು ವರ್ಷಗಳ ನಂತರ ಊರಲ್ಲಿ ರಮೇಶಣ್ಣ ಮದುವೆಯಾದ ಸುದ್ದಿ ತಿಳಿದ ಹುಡುಗಿ ಮಗುವನ್ನು ಬಿಟ್ಟು ಸತ್ತಳಂತೆ.ರಮೇಶಣ್ಣ ನಂತರ ಮಗುವನ್ನು ಅವಳ ಅಜ್ಜಿ ಮನೆಯಲ್ಲಿ ಸಾಕುವ ವ್ಯವಸ್ಥೆ ಮಾಡಿದರು.
ಅವರು ಬೇರೆ ಊರಲ್ಲಿದ್ದರೂ ಬ್ಯಾಂಕಿನ ಕೆಲಸ, ಟ್ರೈನಿಂಗ್ ಎಂದು ಬೆಂಗಳೂರಿನಲ್ಲಿ ತುಂಬಾ ದಿನ ಇರುತ್ತಿದ್ದುದು ಏಕೆ ಎಂದು ಈಗ ಎಲ್ಲಾರೂ ಊಹಿಸುತ್ತಿದ್ದಾರೆ.ಪದ್ಮಾವತಿ ಮಾತ್ರ ನಿರ್ಲಿಪ್ತ ರಾಗಿದಾರೆ. ಕತೆ ತಿಳಿದ ಅವರು ವಿಚಲಿತರಾಗಲಿಲ್ಲ.
ಮೊನ್ನೆ ರಿಟೈರ್ ಆದ ರಮೇಶಣ್ಣ ಈಗ ನಿರಾಳವಾಗಿಲ್ಲ.ಮಗನಿಗೂ ಮದುವೆ ಮಾಡಿಸಬೇಕು.ಮಗಳಿಗೂ ಮದುವೆ ಮಾಡಿಸಬೇಕು.ಹೀಗೆ ಅವರು ಎರಡೆರಡು ಮದುವೆಯ ತಯಾರಿಯಲ್ಲಿದ್ದಾರೆ.
ಅವರ ಜ್ಯೂನಿಯರ್ ಸಹೋದ್ಯೋಗಿಯೊಬ್ಬರಿಗೆ ಫೋನ್ ಮಾಡಿದಾಗ ಈ ವಿಚಾರ ಮಾತಾಡಿದರೆ 'ನಿಮಗೆ ಗೊತ್ತಿಲ್ಲವಾ ಮಾರಾಯ್ರೆ!' ಅಂತ 'ನನಗೆ ಗೊತ್ತಿಲ್ಲದ ವಿಚಾರವೇ' ದೊಡ್ಡ ಬ್ರೇಕಿಂಗ್ ಸುದ್ದಿ ಎನ್ನುವಂತೆ ಆಡಿದರು.ಬ್ಯಾಂಕ್‍ನಲ್ಲಾಗಿದ್ದರೆ ಇಂಥ ಸುದ್ದಿಯೆಲ್ಲಾ "ಸೇಫ್" ನಲ್ಲಿರುವುದು ಮಾಮೂಲು ಎಂದರು.
ಎಳವೆಯಲ್ಲಿ ನನಗೆ ಆದರ್ಶವಾಗಿದ್ದ ರಮೇಶಣ್ಣ ಇದುವರೆಗೆ ನಾನು ಬಾಯಿ ಬಿಡದಿದ್ದುದಕ್ಕೆ ಧನ್ಯವಾದ ಹೇಳಲೆಂದು " ಬಾ ಮಾರಾಯ ಬೆಂಗಳೂರಿಗೆ ಬಂದಾಗ ದೊಡ್ಡ ಬಿಯರ್ ಪಾರ್ಟಿ ಕೊಡ್ತಿನಿ ನಿನಗೆ" ಎಮ್ದರು. ನಾನು ತೋರಿಸಿದ ಹುಡುಗ ಅವರ ಮಗಳಿಗೆ ಒಪ್ಪಿಗೆಯಾಗಿದ್ದಾನೆ ಎಂದು ಮಾತ್ರ ರಮೇಶಣ್ಣನಿಗೆ ಗೊತ್ತಿಲ್ಲ.
ರಮೇಶಣ್ಣ ನೀವು ಈ ಬ್ಲಾಗ್ ಓದಿದರೆ ನಾನೇ ನಿಮಗೆ ಒಂದು ಒಳ್ಳೆಯ ಪಾರ್ಟಿಗೆ ಆಮಂತ್ರಿಸುವೆ. ಅಲ್ಲಿ ನಿಮ್ಮ ಮಗಳ ಹುಡುಗನನ್ನೂ ಬರ ಹೇಳುವೆ. ಅಷ್ಟರ ವರೆಗೆ ಕಾಯುವಿರಾ?
ಒಲವಿನಿಂದ
ಬಾನಾಡಿ.

Wednesday, July 16, 2008

ಹೂವು ಮತ್ತು ಹೆಣ್ಣು


ಸುಂದರವಾಗಿ ಆಗ ತಾನೆ ಅರಳಿದ ಹೂವೆಂದರೆ ಯಾರಿಗೆ ಪ್ರಿಯವಾಗಿರುವುದಿಲ್ಲ! ಬಳ್ಳಿ ತುಂಬ ಅರಳಿದ ಮಲ್ಲಿಗೆ, ಜಾಜಿ, ಗಿಡ ತುಂಬಾ ಕೆಂಪು, ನಸುಗೆಂಪು, ಹಳದಿ, ಬಿಳಿ ಬಣ್ಣದಿಂದ ಕಂಗೊಳಿಸುವ ಗುಲಾಬಿ, ಮರತುಂಬಾ ಅರಳಿದ ಸಂಪಿಗೆ ಕಂಡಾಗ ಮನಸ್ಸು ಮುದಗೊಳ್ಳುತ್ತದೆ. ಹೂವು ಗಿಡದಲ್ಲಿದ್ದರೇನೆ ಚಂದ. ಇದು ನನ್ನ ಅನಿಸಿಕೆ. ಭಕ್ತರಿಗೆ ಅದು ದೇವರ ಪಾದ ಸೇರಿದರೇನೆ ತಮಗೂ ಮುಕ್ತಿ ಎಂಬ ಭಾವನೆ. ಪ್ರೀತಿಸುವವರಿಗೆ ತನ್ನ ಪ್ರಿಯತಮೆಗೆ ಒಂದು ಅತಿ ಸುಂದರ ಹೂವು ಕೊಡಬೇಕೆಂಬ ಹಂಬಲ. ನಮ್ಮೂರು ಕಡೆ ಹೂವನ್ನು ಕಂಡ ಹೆಂಗಸು ಅದನ್ನು ತನ್ನ ಮುಡಿಯಲ್ಲಿಡಲು ತವಕಿಸುವಳು. ಮನೆಯಂಗಳದಲ್ಲಿ ಅರಳಿದ ಸುಂದರ ಗುಲಾಬಿಯನ್ನು ಕಿತ್ತು ಮುಡಿಯಲು ಅದೆಷ್ಟು ಹೆಣ್ಣು ಮನಸುಗಳು ಹಾತೊರೆಯುತ್ತವೆ.ಪೇಟೆಗಳಲ್ಲೂ ವೃತ್ತಗಳಲ್ಲಿ ಸುಂದರವಾಗಿ ನಿರ್ಮಿಸಿದ ಲಾನ್‍ಗಳಲ್ಲಿ ಅರಳಿನಿಂತ ಹೂವುಗಳನ್ನು ಕಂಡಾಗ ಕಣ್ಣು ತುಂಬಿ ಬರುತ್ತದೆ.
***
ಮೊನ್ನೆ ಮದುವೆಯೊಂದಕ್ಕೆ ನಾವೆಲ್ಲಾ ಸೇರಿದ್ದೆವು. ಬಾಲ್ಯದ ಗೆಳೆಯರು. ಸ್ನೇಹಿತರು. ಮದುವೆ ಹಿರಿಯಕ್ಕನ ಮಗಳದ್ದು. ಹೇಮಾ ಹುಟ್ಟಿದಾಗಿನಿಂದ ಎಲ್ಲರ ಅಚ್ಚು ಮೆಚ್ಚಿನವಳು. ಇಂದು ಮದುವೆಗೆ ಆಗುವಷ್ಟು ಬೆಳೆದಿದ್ದಾಳೆ ಎಂದಾಗ ನಾವೂ ಮುದುಕರಾಗುತ್ತಿದ್ದೇವೋ ಎಂದನಿಸಿತು.ರಘು, ಮೋಹನ, ನೀಲಾ, ಲಲಿತ, ನಾರಾಯ್ಣ, ಈಚ, ಅಚ್ಚು, ಪುತ್ತು ... ಹೀಗೆ ನಾವೆಲ್ಲ ಯಾವ್ಯಾವುದೋ ಊರಿಂದ ಬಂದಿದ್ದೆವು.
ಮದುವೆಯ ನೆಪದಲ್ಲಿ ನಮ್ಮೆಲ್ಲರ ಪುನರ್ಮಿಲನ.
ಮದುವೆಯ ಗಡಿಬಿಡಿಯಲ್ಲಿಯೇ ಬಾಯಿಯಿಂದ ಆಡಲಾಗದ ಅದೆಷ್ಟೋ ಮಾತುಗಳನ್ನು ಕಣ್ಣಿನಿಂದ ಆಡಿ ಹೋದೆವು. ಮದುವೆಗೆ ಬಂದವರೆಲ್ಲಾ ಮದುವೆ ಮುಗಿಯುತ್ತಲೇ ಅಲ್ಲಿ ಇಲ್ಲಿ ಹೊರಟರು.
ಮರುದಿನ ಆಫೀಸಿದೆ. ಮಕ್ಕಳಿಗೆ ಸ್ಕೂಲಿದೆ. ಇಲ್ಲಿವರೆಗೆ ಬಂದು ನಮ್ಮ ಹತ್ತಿರದ ಸಂಬಂಧಿಕರನ್ನು ಭೇಟಿಯಾಗಲೇ ಬೇಕು. ಕಾರಣಗಳು ಸಾಲಾಗಿ ನಿಂತವು. ನಮ್ಮನ್ನೆಲ್ಲಾ ಕರೆದುಕೊಂಡು ಬಂದು ನಿಂತ ಕಾರುಗಳಂತೆ. ನಾವೆಲ್ಲಾ ಸೇರಿದಷ್ಟೇ ವೇಗವಾಗಿ ಚದುರಿದೆವು.
ಆಕಾಶದಲ್ಲಿ ಕಾರ್ತೆಲ್ ತಿಂಗಳಲ್ಲಿ ಇರಬೇಕಾಗಿದ್ದ ಕಡುಕಪ್ಪು ಮೋಡಗಳ ಬದಲು ನೀಲಾಕಾಶದಲ್ಲಿ ಬಿಳಿಮೋಡಗಳು ಚೆಲ್ಲಿ ಹೋಗಿ ಗಳಿಗೆಗೊಂದು ಆಕಾರ ನೀಡುತ್ತಿದ್ದವು.
ಕೊನೆಗೆ ನೀಲಾ ಮತ್ತು ನಾನು ಉಳಿದೆವು. ಮದುವೆಯಾದ ಹೇಮಾ ಗಂಡನ ಮನೆಗೆ ಹೋಗುವಲ್ಲಿವರೆಗಾದರೂ ನಿಲ್ಲೋಣವೆಂದೇ ನಿಂತಿದ್ದೆ. ಎಲ್ಲರೂ ಹೋದ ನಂತರ ನಾನೂ ನೀಲಾ ಮಾತಾಡುತ್ತಾ ಹೆಜ್ಜೆಯಿಡುತ್ತಾ ನೇರವಾಗಿ ಕಡಲ ಕಿನಾರೆಯನ್ನು ತಲುಪಿದೆವು.
ಅದೆಷ್ಟೋ ದಿನಗಳಿಂದ ಹಂಚಿಕೊಳ್ಳಬೇಕಿದ್ದ ನೆನಪುಗಳನ್ನು, ಮಾತುಗಳನ್ನು, ನಗೆಯನ್ನು, ನೋವನ್ನು, ಕಿಚ್ಚನ್ನು, ಸೇಡನ್ನು, ಸಿಟ್ಟನ್ನು, ಹತಾಶೆಗಳನ್ನು ಹಂಚುತ್ತಾ ನಡೆವಾಗ ಇನ್ನೂ ಆಡಲಾಗದ ಅದೆಷ್ಟೋ ಭಾವನೆಗಳು ಪಾದದ ಅಚ್ಚಾಗಿ ನಮ್ಮನ್ನು ಹಿಂಬಾಲಿಸುತ್ತಿದ್ದವು. ನೆನಪಿನ ಕರವಸ್ತ್ರದಲ್ಲಿ ಹಳೆಯ ಗೆಳೆಯರೊಂದಿಗೆ ಹಂಚಲೆಂದೇ ಕಟ್ಟಿಟ್ಟ ಅದೆಷ್ಟೊ ವಿಚಾರಗಳು ಹಾಗೇ ಉಳಿದವು.
ಕಿನಾರೆಯ ಬಂಡೆಯಲ್ಲಿ ಕುಳಿತ ನನಗೆ ನೆನಪುಗಳು ಮತ್ತೆ ಬಾಲ್ಯದತ್ತ ಹೋಯಿತು. ರಘು, ಮೋಹನ, ನೀಲಾ ... ಎಲ್ಲರು ಅದೆಷ್ಟು ಸಲ ಇಲ್ಲಿ ಬಂದಿದ್ದೇವೆ. ಎತ್ತರವಿದ್ದ ಈಚಲ ಮರಗಳು ಇನ್ನೂ ಎತ್ತರಕ್ಕೆ ಬೆಳೆದಿವೆ. ಚಿಕ್ಕವರಿದ್ದಾಗ ವೇಷಕಟ್ಟದೆ ಮರದ ನೆರಳಲ್ಲಿ ನಾವು ಕುಣಿದ ಯಕ್ಷಗಾನ, ಪರೀಕ್ಷೆಗೆ ಓದಲೆಂದು ಕುಳಿತಿದ್ದ ಜಾಗ, ರಜೆಯಲ್ಲಿ ಆಡುತಿದ್ದ ಕ್ರಿಕೆಟ್, ವಾಲಿಬಾಲ್ ಆಟಗಳು, ಇನ್ನೂ ಹೆಸರು ಗೊತ್ತಿಲ್ಲದ ಅದೆಷ್ಟೋ ತುಂಟ ಆಟಗಳು...ನಾವೆಲ್ಲ ನಮ್ಮ ಕೈಗಳನ್ನು ಒದ್ದೆ ಮಾಡಿ ಕೈಯಲ್ಲಿ ಮರಳನ್ನು ಅದ್ದಿ ಇನ್ನೊಬ್ಬರ ಕೈಯನ್ನು ಗಟ್ಟಿಯಾಗಿ ಹಿಡಿಯುತ್ತಿದ್ದೆವು. ಹೀಗೆ ಒಬ್ಬರನ್ನೊಬ್ಬರು ನೋಯಿಸುತ್ತಿದ್ದೆವು. ದೊರಗಾದ ಹೊಯಿಗೆಯಿಂದ ಹಿಡಿಸಿಕೊಂಡ ಎಳೆಯ ಕೈಗಳು ಕೆಂಪಾಗುತ್ತಿದ್ದವು. ಕೆಲವೊಮ್ಮೆ ಯಾರಾದರೂ ಗಟ್ಟಿಯಾಗಿ ಹಿಡಿದರೆ ಆ ಕೆಂಪು ಮರುದಿನ ಕಪ್ಪಿಟ್ಟಿರುತ್ತಿತ್ತು.
ಮೊನ್ನೆ ಕೂಡ ನಾನು ಕಡಲಿನ ನೀರಿನಲ್ಲಿ ಕೈಯನ್ನು ಅದ್ದಿ ಮರಳನ್ನು ಅಂಗೈಯಲ್ಲಿ ಹಿಡಿದುಕೊಂಡೆ. ಹಳೆಯ ನೆನಪಿನ ಬಾವಿಗೆ ಬಿದ್ದ ನೀಲಾ "ನಿನ್ನ ತುಂಟತನ ಈಗ ಬೇಡ ಮಾರಾಯ" ಎಂದಳು. ಮಾತಾಡುತ್ತಾ ನಾನವಳ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಇನ್ನೂ ಅಮುಕಿದೆ.
ಪ್ರಬುದ್ಧನಾಗಿರುವ ನಾನು ಹೇಗೊ ಬಾಲ್ಯಕ್ಕೆ ಜಾರಿದ್ದೆ. ಅವಳಿಗೆ ನೋವಾಯಿತು. ನಾನು ಹಿಡಿದಲ್ಲಿ ಅವಳ ಕೈ ಕೆಂಪಾಯಿತು. ಅವಳು ನನ್ನನ್ನೇ ದಿಟ್ಟಿಸಿ ನೋಡಿದಳು. ತಪ್ಪು ಮಾಡಿದೆನೆ ಎಂದು ಕೊಂಡ ನಾನು ನೋವಾಯಿತೇ ಎಂದೆ. ಹೌದು ಎಂದಳು. ಅವಳು ಮರಳಿಲ್ಲದ ಅವಳ ಕೈಗಳಿಂದ ನನ್ನನ್ನು ಗಟ್ಟಿಯಾಗಿ ಹಿಡಿದಳು.
ಅವಳ ಕೈಗಳು ಸುಕೋಮಲವಾಗಿದ್ದವು. ಅವಳ ಹಿಡಿತ ನನ್ನ ಎದೆಯನ್ನು ನೋಯಿಸಿತು. ಕ್ಷಮಿಸು, ನಿನ್ನನ್ನು ನೋಯಿಸಿದಕ್ಕೆ ಎಂದೆನು. ಹೆಣ್ಣು ಒಂದು ಹೂವಿನ ಹಾಗೆ. ಕೋಮಲವಾದ ಹೂವನ್ನು ಹಿಚುಕಬೇಡ ಎಂದಳು. ಹೂವೆಂದರೆ ಅದೆಷ್ಟು ಪ್ರೀತಿಸುತ್ತಿದ್ದೆ ನೀನು. ಆದರೆ ಅದನ್ನು ಗಿಡದಿಂದ ಕೀಳದಂತೆ ನಮ್ಮೊಡನೆಯೆಲ್ಲಾ ಜಗಳವಾಡಿದ್ದೆ ನೀನು ಎಂದಳು.
***
ಹೆಣ್ಣೊಂದು ಹೂವು ಹಿಚುಕಬೇಡ ಅದನ್ನು. ಹೂವೊಂದು ಹೆಣ್ಣು ಹಿಚುಕಬೇಡ ಅದನ್ನು. ಸಮುದ್ರದ ಅಲೆಯಂತೆ ಮತ್ತೆ ಮತ್ತೆ ಮನಸ್ಸಿನ ಪುಟಗಳನ್ನು ಅಪ್ಪಲಿಸುತ್ತಿವೆ.
ಹೂವನ್ನು ಕಿತ್ತು ದೇವರಿಗೆ ಅರ್ಪಿಸುವ ಭಕ್ತರು.
ಹೂವುಗಳ ಮಾಲೆಯನ್ನು ಮಾಡಿ ರಾಜಕಾರಣಿಗಳಿಗೆ ಹಾಕುವ ಚೇಲಗಳು.
ಹೂವು ಅರಳುವ ಮೊದಲೇ ಮೊಗ್ಗಾಗಿರುವಾಗಲೇ ಕಿತ್ತು ಮಾರುಕಟ್ಟೆಯಲ್ಲಿ ಮಾರುವವರು.
ಗೊತ್ತಿಲ್ಲವೆ ಅವರಿಗೆ ಹೂವೊಂದು ಹೆಣ್ಣು. ಹೆಣ್ಣೊಂದು ಹೂವೆಂದು.
ಒಲವಿನಿಂದ
ಬಾನಾಡಿ