Tuesday, June 3, 2008

ಆ ಕ್ಷಣಗಳು

ಹಿಡಿದುಕೊಳ್ಳಬಹುದಾದ ಅದೆಷ್ಟೋ ಕ್ಷಣಗಳನ್ನು ಕಳೆದು ಕೊಂಡೆನೂ ಏನೋ. ಆದರೆ ಅವೆಲ್ಲವೂ ನನ್ನೊಳಗಿನ ಸಾಗರದ ತೆರೆಗಳನ್ನು ಎಣಿಸಿಕೊಂಡ ಕ್ಷಣಗಳು. ಅಥವಾ ಮೋಡದ ಮರೆಯಲ್ಲಿ ಮರೆಯಾದ ಹುಣ್ಣಿಮೆಯ ಚಂದ್ರನ ಕ್ಷಣಗಳು. ಹಿಡಿದುಕೊಂಡಿದ್ದರೆ ಆ ಎಲ್ಲಾ ಕ್ಷಣಗಳು ನನ್ನ ಸುತ್ತಾ ಬೇತಾಳನಂತೆ ಸುತ್ತುತ್ತಿದ್ದಾವು. ಅವುಗಳನ್ನು ಅವುಗಳ ಪಾಡಿಗೆ ಬಿಟ್ಟು ಈಗಿರುವ ಒಂದೊಂದು ಕ್ಷಣವನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ಸಂಜೆ ಸೂರ್ಯ ಆ ಪಡುವಣದ ಬೆಟ್ಟದಾಚೆಯ ಕಡಲಿಗಿಳಿದಾಗ ಚೆಲ್ಲಿದ ಆ ಕೆಂಪಿನಲ್ಲಿ ಕಳೆದ ಕ್ಷಣಗಳು. ಸೂರ್ಯ ಮುಳುಗಿದ ಕಡಲ ಕಿನಾರೆಯಲ್ಲಿ ಸಂಜೆ ಹೊತ್ತಿಗೆ ಸುತ್ತಾಡಿದ ಪ್ರೇಮಿಗಳ ಪಾದದ ಅಚ್ಚುಗಳನ್ನು ಮರೆಮಾಸುವ ಆ ಕಡಲಿನ ತೆರೆಗಳನ್ನು ನೊಡುತ್ತಾ ಕಳೆದ ಆ ಕ್ಷಣಗಳು. ಕಡಲು ಮಡಿಲೊಳಗೆ ಬಚ್ಚಿಟ್ಟ ಆ ಮುತ್ತುಗಳು ನಿನ್ನ ತುಟಿಯಿಂದ ಹೊರಬಂದ ಕ್ಷಣಗಳು. ಹಿಡಿದುಕೊಳ್ಳಬೇಕೆಂದು ಕೊಂಡರೂ ಕೈಗೆ ಸಿಗದೆ ಜಾರಿ ಹೋದ ನಿನ್ನ ಮುಂಗುರುಳು ಹಾರುತ್ತಿದ್ದ ಆ ಕ್ಷಣಗಳು. ಕಡಲು ಎಷ್ಟೆಂದರೂ ಕಡಲೇ... ಅದಕ್ಕೇನು ಗೊತ್ತು ನಿನ್ನೊಡಲೊಳಗಿನ ಆ ಮಧುರ ಸಂಬಂಧಕ್ಕೆ ಹೆಸರು ಕೊಡಬೇಕೆಂದು ಕೊಂಡ ಕ್ಷಣಗಳು.ಅಷ್ಟೊಂದು ಕೆಂಪಾಗಳು ಆ ಸಂಜೆ ಸೂರ್ಯನಿಗೆ ಏನಾಗಿತ್ತು ಎಂದು ಕೊಂಡ ಕ್ಷಣಗಳು. ಆ ಕೆಂಪಿನಲ್ಲಿ ಹೊಳೆವ ಕೆನ್ನೆಗಳಿಗೆ ತುಟಿಗಳನ್ನು ಒತ್ತಿ ಬಿಡಬೇಕೆಂದು ಕೊಂಡ ಕ್ಷಣಗಳು. ನೆರಳಿನಾಸರೆಯಲ್ಲಿ ಮಲಗಿ ಕಣ್ಣುಗಳನ್ನು ತೆರೆದು ತುಟಿಯನ್ನು ಮುಚ್ಚಿ ಮಾತಾಡಿದ ಆ ಕ್ಷಣಗಳು. ಸಂಜೆ ಮಲ್ಲಿಗೆ ಅರಳುವಾಗ ತಂಗಾಳಿಗೆ ಸೂಸುವ ಆ ಪರಿಮಳದ ಜತೆಗೆ ಕಳೆದ ಕ್ಷಣಗಳು.
ಮಳೆ ಬಂದು ನಿಂತಾಗ ಓಡೋಡಿ ಬಂದು ಆ ನೀರ ಹರಿವಿನಲ್ಲಿ ಕಾಗದದ ದೋಣಿಗಳನ್ನು ಬಿಟ್ಟು ಅವು ಸಮುದ್ರ ಸೇರುತ್ತವೆ ಎಂದು ಕೊಂಡ ಕ್ಷಣಗಳು. ಮಳೆ ಬಿಡದೇ ಇದ್ದಾಗ ಇಬ್ಬರೂ ಒಂದೇ ಕೊಡೆಯನ್ನು ಹಿಡಿದರೂ ಒದ್ದೆಯಾಗಿಕೊಂಡು ಬಂದ ಆ ಕ್ಷಣಗಳು. ಬಿಡದೆ ಸುರಿಯುತ್ತಿರುವ ಮಳೆಯ ಆ ಭೀಕರತೆಯಲ್ಲಿ ಸಂಜೆಯಾಗುತ್ತಲೇ ಮುಸುಕು ಹಾಕಿ ಮಲಗಿ ಬಾರದ ಕನಸುಗಳನ್ನು ಬರಿಸಿ ಮಲಗಿದ ಕ್ಷಣಗಳು. ಹುಸಿ ಮನಿಸಿನಿಂದ ದೂರದೂರದಿಂದಲೇ ಜತೆಯಾಗಿ ಹೋಗುತ್ತಿದ್ದಾಗ ಅಕಸ್ಮಾತ್ತಾಗಿ ಮಿಂಚು ಚೆಲ್ಲಿ ಸಿಡಿಲು ಗುಡುಗಿದಾಗ ಹತ್ತಿರ ಬಂದು ಕೈ ಕೈ ಹಿಡಿದು ನಡೆದ ಆ ಕ್ಷಣಗಳು.
ಕವನ ಬರೆಯಬಾರದೆಂದು ಕೊಂಡು ಬರೆದ ಕಥೆಗಳೂ ಕವನಗಳಾದ ಕ್ಷಣಗಳು.
ಕಳೆದುಕೊಂಡ ಕ್ಷಣಗಳನ್ನು ಮತ್ತೆ ಲೆಕ್ಕ ಹಾಕುತ್ತಾ ಕುಳಿತುಕೊಂಡ ಕ್ಷಣಗಳು.
ಕ್ಷಣ ಕ್ಷಣಗಳು ಸೇರಿ ಆದ ಈ ಕ್ಷಣಗಳು.
ಒಲವಿನಿಂದ

ಬಾನಾಡಿ

10 comments:

 1. Registration- Seminar on the occasion of kannadasaahithya.com 8th year Celebration

  ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

  ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
  ವಿಷಯ:
  ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

  ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

  http://saadhaara.com/events/index/english

  http://saadhaara.com/events/index/kannada
  ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

  ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

  ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

  -ಕನ್ನಡಸಾಹಿತ್ಯ.ಕಾಂ ಬಳಗ

  ReplyDelete
 2. ಬಾನಾಡಿಯವರೆ,
  ಜಯಂತ ಕಾಯ್ಕಿಣಿಯವರ ‘ಶಬ್ದತೀರ’ದ ‘ಧೂಳಿ’ನ ಶೈಲಿಯನ್ನು ‘ಆ ಕ್ಷಣಗಳು’ ನೆನಪಿಸಿದವು. ಇಷ್ಟವಾಯ್ತು ನಿಮ್ಮ ಬರೆವಣಿಗೆ

  ReplyDelete
 3. ತೀರದ, ತೀರಿದ ಆಕಾಂಕ್ಷೆಗಳನ್ನೆಲ್ಲಾ ಕ್ಷಣವನ್ನಾಗಿಸಿದ ಭಾವಪೂರ್ಣ ಬರಹ..

  ReplyDelete
 4. ರವೀ
  ಆಮಂತ್ರಣಕ್ಕೆ ಧನ್ಯವಾದಗಳು.

  thamboori, ತೇಜಸ್ವಿನಿ,
  ನಿಮ್ಮ ಪ್ರತಿಕ್ರಿಯೆಗೆ ಧನ್ಯ.
  ಒಲವಿನಿಂದ
  ಬಾನಾಡಿ

  ReplyDelete
 5. ಕ್ಷಣಗಳ ಕಣ-ಕಣಗಳು ಚೆನ್ನಾಗಿವೆ.

  ReplyDelete
 6. ಸ್ವಾರಸ್ಯಕರವಾದ ಲೇಖನ.

  ReplyDelete
 7. ಅಹಾ ! ಬರು ಬರುತ್ತಾ ನಿಮ್ಮ ಲೇಖನಗಳು ತುಂಬಾ ನಾಜೂಕುತನ ಮೂಡಿಸಿಕೊಳ್ಳುತ್ತಿದೆ,ನಿಖರವಾಗುತ್ತಾ ಸಾಗುತ್ತಿದೆ ,,ಹೀಗೆ ಬರೆಯುತ್ತಿರಿ ..ಧನ್ಯವಾದ..;)

  ReplyDelete
 8. ಶಾನಿ, ಸುನಾಥ್, ಅರುಣ್, ಸುದೇಶ್...,
  ನಿಮಗೆಲ್ಲರಿಗೂ ವಂದನೆಗಳು ಮತ್ತು ನಿಮ್ಮ ಕಾಮೆಂಟ್ಸ್ ಗೆ ಧನ್ಯವಾದಗಳು.

  ಒಲವಿನಿಂದ
  ಬಾನಾಡಿ

  ReplyDelete
 9. ನಮಸ್ಕಾರ,
  ಬಾನಾಡಿಯವರೇ,
  ಎಲ್ಲಾ ಕ್ಷಣಗಳನ್ನೂ ಜೊತೆಗೂಡಿಸಿ ಚೆನ್ನಾಗಿ ಬರೆದಿದ್ದೀರಿ. ಲವಲವಿಕೆಯ ಬರಹ.

  ಧನ್ಯವಾದಗಳು.

  ಜೋಮನ್.

  ReplyDelete