Saturday, June 28, 2008

ಸಮುದ್ರ ದಲ್ಲಿರಬೇಕಾದ ಮೀನು ಭೂಮಿಗೆ ಬಂದಾಗ...


ಮೊನ್ನೆ ಪೋಸ್ಟಿಸಿದ ಬುಟ್ಟಿಯಿಂದ ತಟ್ಟೆಗೆ ಬಿದ್ದ ಮೀನಿನ ಕುರಿತು ಓದಿದ ಬ್ಲಾಗಿಗರು ಮತ್ತು ಸ್ನೇಹಿತರು ಬೆಂಗಳೂರಿನಲ್ಲಿ ಮತ್ತು ಇನ್ನಿತರ ಊರಲ್ಲಿದ್ದು ಮಂಗಳೂರಿನ ಮೀನಿಗೆ ಹಾತೊರೆಯುತ್ತಿರುವುದು ಸಹಜ. ಹಾಗಾಗದಿರುವುದು ಅಸಹಜ. ಬೆಂಗಳೂರಿನವರಿಗೆ ಗಾಂಧಿನಗರದಲ್ಲಿರುವ ಫಿಶ್‍ಲ್ಯಾಂಡ್ ಒಂದು ಒಳ್ಳೆಯ ಜಾಯಿಂಟ್. ಅಲ್ಲಿಗೆ ಹೋಗದೆ ನನ್ನ ಬೆಂಗಳೂರು ಪಯಣ ಮುಗಿಯುವುದಿಲ್ಲ. ಫಿಶ್‍ಲ್ಯಾಂಡ್‍ನವರದೇ ಸ್ಟೇಟಸ್ ಬಾರ್ ನಲ್ಲಿ ಬಿಯರ್ ಹೀರುತ್ತಾ ಕಾಣೆ ತಿನ್ನುತ್ತಾ ಒಂದೆರಡು ಗಂಟೆ ಕಳೆಯುವುದು ನನ್ನ ಬದುಕಿನ ಅತ್ಯಮೂಲ್ಯ ಕ್ಷಣಗಳಲ್ಲಿ ಕೆಲವು. ಅದೆಷ್ಟು ವರ್ಷಗಳಿಂದ ಅಲ್ಲಿ ಅದೆಷ್ಟು ಬಾಟಲಿಗಳು ಖಾಲಿಯಾಗಿವೆಯೋ!! ಶಶಿಯ ಜತೆ, ರಾಜನ ಜತೆ, ಗಣೇಶನ ಜತೆ (ಕುಪ್ಪಿ ಅಲ್ಲ, ಹೆಗ್ಡೆ! - for friends), ಮೊದಲು ಪರಿಚಯಿಸಿದ್ದು ಬಹುಷಃ ಕೇಶವನಿರಬೇಕು. ಕಾಣೆ ಗಸಿ, ಏಡಿ ಗಸಿ ನನಗೆ ಬೆಂಗಳೂರಿನಲ್ಲಿರುವಾಗ ಇಲ್ಲಿ ಸಿಗುವಷ್ಟು ಚೆನ್ನಾಗಿ ಇನ್ನೆಲ್ಲಿಯೂ ಸಿಗುವುದು ಗೊತ್ತಿಲ್ಲ. ಬೆಂಗಳೂರಿನಲ್ಲಿರುವ ಅತ್ಯಂತ ರುಚಿಕರ ಮಾಂಸಹಾರಿ ರೆಸ್ಟುರಾ ಗಳ ಬಗ್ಗೆ ಒಂದು ಬರಹ ಬರೆಯಬಹುದೆಂಬ ಖಯಾಲಿ ಬರುತ್ತಿದೆ.
ಸಮುದ್ರದಲ್ಲಿರಬೇಕಾದ ಮೀನು (fish) ಭೂಮಿಗೆ (Land) ಬಂದಾಗ...Fishland...

ಒಲವಿನಿಂದ

ಬಾನಾಡಿ.

Friday, June 27, 2008

ಬುಟ್ಟಿಯಿಂದ ತಟ್ಟೆಗೆ

ಮಳೆಗಾಲ ಆರಂಭವಾಯ್ತು ಅಂದ್ರೆ ಕಡಲಿಗೆ ಹೋಗುವವರಿಗೆ ರಜೆ. ಇದು ಈ ವರ್ಷದ ಕೊನೆ ಕಂತು. 'ಕಾಣೆ' ಮೀನಿಗೆ ಕಿಲೋ ಒಂದಕ್ಕೆ ರೂ. ೩೬೦/- . ಸಣ್ಣ ಮೀನು -ಕೊಳ್ಳ ತರು - ಸಾರಿಗೆ ಆಗಬಹುದು ಎನ್ನುತ್ತಾನೆ ಸಾಯ್ಬ.


ಕಾಣೆ ಮೀನು - ಅಪರೂಪದ ರುಚಿ. ಹಾಗಾಗಿ ಮಂಗಳೂರಲ್ಲಿ ಅಪರೂಪ! ಎಲ್ಲ ಬೆಂಗಳೂರಿಗೆ ಬರುತ್ತದೆ.


ಮಳೆ ಶುರುವಾಯ್ತೆಂದರೆ ಮುಗಿದ ಮೀನಿನ ಬುಟ್ಟಿಯೂ ನೆನೆಯುತ್ತದೆ - ಮಳೆಯಲ್ಲಿ - ಆ ಹಳೆ ದಿನಗಳನ್ನು. ಜತೆಗಿದ್ದ ಹತ್ತು ಹದಿನೈದು ಬುಟ್ಟಿಗಳನ್ನು. ಈಗ ಒಂಟಿ ಯಾಗಿ ನೆನೆಯುತ್ತಿದೆ.


ದಿನದ ವ್ಯಾಪಾರ ಕುದುರಿಸಿ ಕೈಗೆ ಸಿಕ್ಕ ಹಣ ಜೇಬಿಗೆ ಸೇರಿದಾಗ ಮನಸ್ಸಿನ ಸಂತೋಷ ತುಟಿಯಲ್ಲಿ ಅರಳಿದೆ ಮುಗುಳು ನಗೆಯ ಮಲ್ಲಿಗೆಯಾಗಿ.


ಕೊನೆಗೂ ಬುಟ್ಟಿಯಿಂದ ತಟ್ಟೆಗೆ ಬರುವ ಆತುರ...

Tuesday, June 3, 2008

ಆ ಕ್ಷಣಗಳು

ಹಿಡಿದುಕೊಳ್ಳಬಹುದಾದ ಅದೆಷ್ಟೋ ಕ್ಷಣಗಳನ್ನು ಕಳೆದು ಕೊಂಡೆನೂ ಏನೋ. ಆದರೆ ಅವೆಲ್ಲವೂ ನನ್ನೊಳಗಿನ ಸಾಗರದ ತೆರೆಗಳನ್ನು ಎಣಿಸಿಕೊಂಡ ಕ್ಷಣಗಳು. ಅಥವಾ ಮೋಡದ ಮರೆಯಲ್ಲಿ ಮರೆಯಾದ ಹುಣ್ಣಿಮೆಯ ಚಂದ್ರನ ಕ್ಷಣಗಳು. ಹಿಡಿದುಕೊಂಡಿದ್ದರೆ ಆ ಎಲ್ಲಾ ಕ್ಷಣಗಳು ನನ್ನ ಸುತ್ತಾ ಬೇತಾಳನಂತೆ ಸುತ್ತುತ್ತಿದ್ದಾವು. ಅವುಗಳನ್ನು ಅವುಗಳ ಪಾಡಿಗೆ ಬಿಟ್ಟು ಈಗಿರುವ ಒಂದೊಂದು ಕ್ಷಣವನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ಸಂಜೆ ಸೂರ್ಯ ಆ ಪಡುವಣದ ಬೆಟ್ಟದಾಚೆಯ ಕಡಲಿಗಿಳಿದಾಗ ಚೆಲ್ಲಿದ ಆ ಕೆಂಪಿನಲ್ಲಿ ಕಳೆದ ಕ್ಷಣಗಳು. ಸೂರ್ಯ ಮುಳುಗಿದ ಕಡಲ ಕಿನಾರೆಯಲ್ಲಿ ಸಂಜೆ ಹೊತ್ತಿಗೆ ಸುತ್ತಾಡಿದ ಪ್ರೇಮಿಗಳ ಪಾದದ ಅಚ್ಚುಗಳನ್ನು ಮರೆಮಾಸುವ ಆ ಕಡಲಿನ ತೆರೆಗಳನ್ನು ನೊಡುತ್ತಾ ಕಳೆದ ಆ ಕ್ಷಣಗಳು. ಕಡಲು ಮಡಿಲೊಳಗೆ ಬಚ್ಚಿಟ್ಟ ಆ ಮುತ್ತುಗಳು ನಿನ್ನ ತುಟಿಯಿಂದ ಹೊರಬಂದ ಕ್ಷಣಗಳು. ಹಿಡಿದುಕೊಳ್ಳಬೇಕೆಂದು ಕೊಂಡರೂ ಕೈಗೆ ಸಿಗದೆ ಜಾರಿ ಹೋದ ನಿನ್ನ ಮುಂಗುರುಳು ಹಾರುತ್ತಿದ್ದ ಆ ಕ್ಷಣಗಳು. ಕಡಲು ಎಷ್ಟೆಂದರೂ ಕಡಲೇ... ಅದಕ್ಕೇನು ಗೊತ್ತು ನಿನ್ನೊಡಲೊಳಗಿನ ಆ ಮಧುರ ಸಂಬಂಧಕ್ಕೆ ಹೆಸರು ಕೊಡಬೇಕೆಂದು ಕೊಂಡ ಕ್ಷಣಗಳು.ಅಷ್ಟೊಂದು ಕೆಂಪಾಗಳು ಆ ಸಂಜೆ ಸೂರ್ಯನಿಗೆ ಏನಾಗಿತ್ತು ಎಂದು ಕೊಂಡ ಕ್ಷಣಗಳು. ಆ ಕೆಂಪಿನಲ್ಲಿ ಹೊಳೆವ ಕೆನ್ನೆಗಳಿಗೆ ತುಟಿಗಳನ್ನು ಒತ್ತಿ ಬಿಡಬೇಕೆಂದು ಕೊಂಡ ಕ್ಷಣಗಳು. ನೆರಳಿನಾಸರೆಯಲ್ಲಿ ಮಲಗಿ ಕಣ್ಣುಗಳನ್ನು ತೆರೆದು ತುಟಿಯನ್ನು ಮುಚ್ಚಿ ಮಾತಾಡಿದ ಆ ಕ್ಷಣಗಳು. ಸಂಜೆ ಮಲ್ಲಿಗೆ ಅರಳುವಾಗ ತಂಗಾಳಿಗೆ ಸೂಸುವ ಆ ಪರಿಮಳದ ಜತೆಗೆ ಕಳೆದ ಕ್ಷಣಗಳು.
ಮಳೆ ಬಂದು ನಿಂತಾಗ ಓಡೋಡಿ ಬಂದು ಆ ನೀರ ಹರಿವಿನಲ್ಲಿ ಕಾಗದದ ದೋಣಿಗಳನ್ನು ಬಿಟ್ಟು ಅವು ಸಮುದ್ರ ಸೇರುತ್ತವೆ ಎಂದು ಕೊಂಡ ಕ್ಷಣಗಳು. ಮಳೆ ಬಿಡದೇ ಇದ್ದಾಗ ಇಬ್ಬರೂ ಒಂದೇ ಕೊಡೆಯನ್ನು ಹಿಡಿದರೂ ಒದ್ದೆಯಾಗಿಕೊಂಡು ಬಂದ ಆ ಕ್ಷಣಗಳು. ಬಿಡದೆ ಸುರಿಯುತ್ತಿರುವ ಮಳೆಯ ಆ ಭೀಕರತೆಯಲ್ಲಿ ಸಂಜೆಯಾಗುತ್ತಲೇ ಮುಸುಕು ಹಾಕಿ ಮಲಗಿ ಬಾರದ ಕನಸುಗಳನ್ನು ಬರಿಸಿ ಮಲಗಿದ ಕ್ಷಣಗಳು. ಹುಸಿ ಮನಿಸಿನಿಂದ ದೂರದೂರದಿಂದಲೇ ಜತೆಯಾಗಿ ಹೋಗುತ್ತಿದ್ದಾಗ ಅಕಸ್ಮಾತ್ತಾಗಿ ಮಿಂಚು ಚೆಲ್ಲಿ ಸಿಡಿಲು ಗುಡುಗಿದಾಗ ಹತ್ತಿರ ಬಂದು ಕೈ ಕೈ ಹಿಡಿದು ನಡೆದ ಆ ಕ್ಷಣಗಳು.
ಕವನ ಬರೆಯಬಾರದೆಂದು ಕೊಂಡು ಬರೆದ ಕಥೆಗಳೂ ಕವನಗಳಾದ ಕ್ಷಣಗಳು.
ಕಳೆದುಕೊಂಡ ಕ್ಷಣಗಳನ್ನು ಮತ್ತೆ ಲೆಕ್ಕ ಹಾಕುತ್ತಾ ಕುಳಿತುಕೊಂಡ ಕ್ಷಣಗಳು.
ಕ್ಷಣ ಕ್ಷಣಗಳು ಸೇರಿ ಆದ ಈ ಕ್ಷಣಗಳು.
ಒಲವಿನಿಂದ

ಬಾನಾಡಿ