Tuesday, May 13, 2008

ಕೆರೆ ತುಂಬಿದ ಪರಿಮಳ

ಪರಿಮಳ ಹುಟ್ಟಿದಾಗ ನಾವಿನ್ನೂ ಹೈಸ್ಕೂಲಿನಲ್ಲಿದ್ದೆವು.

ನಾಲ್ಕು ದಿನಗಳಿಂದ ಮಳೆ ಬಿಡದೆ ಸುರಿಯುತ್ತಿತ್ತು. ತಾನು ಮಾತ್ರ ಒದ್ದೆಯಾದರೂ ಪರವಾಗಿಲ್ಲ ಆದರೆ ಬೇರೆಯವರ ಅಮೂಲ್ಯವಾದ ಪತ್ರಗಳಿರುವ ಟಪ್ಪಾಲು ಚೀಲ ಮಾತ್ರ ಒದ್ದೆಯಾಗಬಾರದೆಂದು ಅದನ್ನು ಎದೆಗವಚಿಕೊಂಡು ಆ ಜಡಿಮಳೆಗೆ, ತೋಡು ಎಲ್ಲಿದೆ ಎಂದು ಕೂಡ ಗೊತ್ತಾಗದಂತೆ ತುಂಬಿತುಳುಕುತ್ತಿದ್ದ ಗದ್ದೆ ತೋಟಗಳ ಮಧ್ಯೆ ಓಡಾಡಿ ನಮ್ಮ ಪೋಸ್ಟ್ ಮ್ಯಾನ್ ಗೋವಿಂದಣ್ಣ ತಂದು ಕೊಟ್ಟ ಮುಂಬಯಿಯಿಂದ ರಮಾನಾಥ ಬರೆದ ಪತ್ರದಲ್ಲಿ ಪರಿಮಳ ಹುಟ್ಟಿದ ವಿಷಯವಿತ್ತು.

ಹುಟ್ಟಿದ ಮಗು ಮುಂದಿನ ಬೇಸಿಗೆಯಲ್ಲಿ ನಮ್ಮೂರಿಗೆ ಬಂದಾಗ ಹತ್ತು ತಿಂಗಳಾಗಿತ್ತು. ನಾವೆಲ್ಲ ಪರಿಮಳಳನ್ನು ಎತ್ತಿಕೊಂಡು ಕೆರೆಗೆ ಈಜಾಡಲೂ ಹೋಗಿದ್ದೆವು. ಕೆರೆಯಲ್ಲಿರುವ ಸಣ್ಣ ಸಣ್ಣ ಮೀನುಗಳನ್ನು ಅವಳಿಗೆ ತೋರಿಸಿ ಅವಳ ಜತೆಗೆ ನಾವೂ ಖುಷಿಗೊಂಡಿದ್ದೆವು. ನಮ್ಮ ಆನಂದ ಕೆರೆಯ ಬದಿಯಲ್ಲಿರುವ ಕಸಿಮಾವಿನ ಮರಕ್ಕೆ ಹತ್ತಿ ಅಳಿಲು ತಿಂದ ಮಾವಿನ ಹಣ್ಣುಗಳನ್ನು ಕೊಯಿದು ಅವಳಿಗೆ ತಿನ್ನಿಸುವಾಗ ಅವಳು ನಾಲಿಗೆಗೆ ಹುಳಿಯಾದಾಗ ಮುಖವನ್ನು ಮಾಡುತ್ತಿದ್ದ ಚಿತ್ರ ಇಂದಿಗೂ ನಮಗೆ ಕಣ್ಣಿಗೆ ಕಟ್ಟಿದಂತಿದೆ. ಈಜು ಸ್ನಾನ ಮುಗಿಸಿ ಕೆರೆಯಿಂದ ಹೊರಬಂದು ಅವಳನ್ನು ಮೀಯಿಸಿ ಮನೆಗೆ ಕರೆದುಕೊಂಡು ಬಂದರೆ ಅವಳಮ್ಮ ನಿರ್ಮಲಕ್ಕ "ನೀವು ಅವಳನ್ನು ಊರಿಡೀ ಸುತ್ತಿಸಿ ಅಭ್ಯಾಸ ಮಾಡಿ. ಮತ್ತೆ ಮುಂಬಯಿಗೆ ಹೋದ ಮೇಲೆ ಅವಳು ನನ್ನನ್ನು ಮನೆಯಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ" ಎಂದು ನಮ್ಮನ್ನು ಜೋರು ಮಾಡುತ್ತಾರೆ. ಆದರೂ ಇಲ್ಲಿ ನಳಿನಕ್ಕನ ಜತೆ ಪಂಚಾತಿಕೆ ಮಾಡಲು ಅವಳಿಗೆ ಮಗುವನ್ನು ನಾವು ದೂರವೆಲ್ಲಾದರೂ ಕೊಂಡೊಯ್ಯಬೇಕು ಎಂಬ ಹಂಬಲವೂ ಇತ್ತು. ನಿಮ್ಮ ಪರಿಮಳ ವಾಸನೆ ಬರ್ತಾಳೆ ನೀವೆ ಅವಳನ್ನು ಹಿಡಿದುಕೊಳ್ಳಿ ಎಂದು ನಾವು ಮತ್ತೆ ಗೇರು ಹಣ್ಣು ಕೊಯ್ಯಲು ಗುಡ್ಡಕ್ಕೆ ಹೋಗುತ್ತಿದ್ದೆವು.

ಕಳೆದ ವರ್ಷ ನಾನು ಊರಿಗೆ ಹೋದಾಗ ಪರಿಮಳ ಕೂಡ ಬಂದಿದ್ದಳು. ರಮಾನಾಥಣ್ಣ ಮುಂಬಯಿಯಿಂದ ಈಗ ಬರೋಡಕ್ಕೆ ಹೋಗಿ ಸೆಟ್ಲ್ ಆಗಿದ್ದಾರೆ. ಬ್ಯಾಂಕ್ ನೌಕರಿ ಬಿಟ್ಟು ಬರೋಡದಲ್ಲಿ ಬಿಸಿನೆಸ್ ಮಾಡುತ್ತಾರೆ. ಪರಿಮಳ ಡಿಗ್ರಿ ಮುಗಿಸಿ ಬೆಂಗಳೂರಿನಲ್ಲಿ ಬಿಪಿಒ ದಲ್ಲಿ ಕೆಲಸದಲ್ಲಿದ್ದಾಳೆ ಎಂದು ತಿಳಿಯಿತು. ನಮ್ಮನ್ನು ನೋಡಿದ ಅವಳಿಗೆ ಬಹಳ ಖುಷಿಯಾಗಿದೆ ಎಂದು ನಮಗೆ ಗೊತ್ತಾಯಿತು. ನಮ್ಮ ಕೆರೆಯ ಬದಿಯಲ್ಲಿ ನಾವು ನಡೆದು ಕೊಂಡು ಹೋದೆವು. ನಗರ ಜೀವನದ ಬದುಕಿನ ಕುರಿತು ಹಳ್ಳಿ ಬದುಕಿನ ನಿರಾಲತೆ ಇತ್ಯಾದಿ ಮಾತುಕತೆಗಳು ನಡೆದುವು.

ಆನಂದ ಈಗ ನಮ್ಮೂರಿನ ದೊಡ್ಡ ಟೈಲರ್. ಅವನಲ್ಲಿ ಲಂಗ ರವಿಕೆ ಗಿಂತ ಚೂಡಿದಾರ್ ಹೊಲಿಸಲು ಹೆಂಗಸರ ಗುಂಪೇ ಕಾದಿರುತ್ತದೆ. ರಾತ್ರಿ ಹತ್ತು ಗಂಟೆಯಾದರೂ ಅವನ ಮೆಷಿನ್ ನಿಲ್ಲುವುದಿಲ್ಲ. ಆದರೂ ನಾವು ಬಂದ ಖುಷಿಯಲ್ಲಿ ಅವನೂ ಖುದ್ದಾಗಿ ತಳಂಗರೆಗೆ ಹೋಗಿ ಹಸಿ ಹಸೀ ಮೀನು ತಂದು ಕೊಟ್ಟಿದ್ದ. ಮಧ್ಯಾಹ್ನ ಊಟಕ್ಕೆ ಗಮ್ಮತ್ತು ಮೀನು ಉಂಟು ಎಂದು ನಾನು ನಮ್ಮ ದಿನೇಶನಲ್ಲಿ ನಾಗು ಪೂಜಾರಿಯ ಗಡಂಗಿಗೆ ಹೋಗಿ ನಾಲ್ಕು ಬಾಟಲು ಶೇಂದಿ ತಾ ಎಂದು ಹೇಳಿದೆ. ಪರಿಮಳ ಕೂಡ ನಮ್ಮ ಜತೆ ಒಂದು ಗ್ಲಾಸ್ ಶೇಂದಿ ಕುಡಿದಾಗ ಆನಂದ ಹೇಳಿದ " ಇದು ಮಂಗನಿಗೆ ಕಳ್ಳು ಕುಡಿಸಿದ ಹಾಗಾಗಬಾರದು" ಎಂದು. ನೆನಪುಗಳನ್ನು ಹೊತ್ತುಕೊಂಡಿದ್ದ ನಾವೆಲ್ಲ ನಕ್ಕಿದ್ದೇ ನಕ್ಕಿದ್ದು. ಅದೆಷ್ಟು ವರ್ಷಗಳ ನಂತರ ಇಂತಹ ಒಂದು ಮಧ್ಯಾಹ್ನದ ಔತಣ ಮಾಡಿದೆವು ಎಂಬ ತೃಪ್ತಿ ನಮ್ಮೆಲ್ಲರಲ್ಲೂ ಇತ್ತು. ಪರಿಮಳಳಿಂದ ಕೆಲವೊಮ್ಮೆ ಇಮೇಲ್ ನಲ್ಲಿ ಜೋಕ್, ಇತ್ಯಾದಿ ಬರುತ್ತಿತ್ತು. ಹತ್ತಿಪ್ಪತ್ತು ಮೇಲ್ ಐಡಿ ಜತೆ ನನ್ನದೂ ಒಂದಿತ್ತು. ಓದಿದಾಗಲೊಮ್ಮೆ ಅವಳ ನೆನಪಿನೊಂದಿಗೆ ಅದೆಷ್ಟೋ ಹಳೆಯ ನೆನಪುಗಳು ಹುಟ್ಟುತ್ತಿದ್ದವು.

ಆ ದಿನ ನಾನು ಆಫೀಸಿಗೆ ಹೊರಡುವ ಆತುರದಲ್ಲಿರುವಾಗಲೇ ಆನಂದನ ಫೋನ್ ನನ್ನ ಮೊಬೈಲಿಗೆ ಬಂತು. ಏನು ವಿಶೇಷ ಈ ಹೊತ್ತಿನಲ್ಲಿ. ಎಲ್ಲವೂ ಸರಿಯಿದೆ ತಾನೆ ಎಂದು ನಾನೇ ಕೇಳಿದೆ. ಎಲ್ಲ ಸರಿ ಇದೆ. ನೀವು ಹೇಗಿದ್ದೀರಿ ಎಂದು ಕೇಳಲು ಫೋನ್ ಮಾಡಿದೆ ಎಂದೆ. ಆಫೀಸಿಗೆ ಹೊರಡುತ್ತಿದ್ದೇನೆ ಸಂಜೆ ಬೇಕಾದರೆ ಮಾತಾಡೋಣ ಎಂದೆ. ಸರಿಯೆಂದು ಫೋನಿಟ್ಟ ಆನಂದ. ಆಫೀಸಿನಲ್ಲಿ ಮೀಟಿಂಗ್‍ನಲ್ಲಿರುವಾಗೊಮ್ಮೆ ಆನಂದನ ಫೋನ್ ಬಂತು. ಏನಾಯಿತು ಎಂದೆ. ಇಲ್ಲ ಸುಮ್ಮನೆ ಊಟ ಆಯ್ತಾ ಅಂತ ಕೇಳಿ ಮತ್ತೆ ಮಾತಾಡೋಣ ಎಂದು ಫೋನಿಟ್ಟ. ಸಂಜೆ ಮನೆಗೆ ಬಂದು ನೋಡಿದರೆ ಅವನ ಎರಡು ಮಿಸ್ ಕಾಲ್ ಗಳು ಲಾಗ್ ಆಗಿದ್ದವು. ಸ್ವಲ್ಪ ನಂತರ ನಾನೇ ಅವನಿಗೆ ಫೋನ್ ಮಾಡೋಣ ಎಂದು ಕೊಂಡು ನಾನು ಟಿವಿ ನೋಡಲು ಕುಳಿತೆ. ಆನಂದ ಯಾಕೆ ಫೋನ್ ಮಾಡಿರಬೇಕು ಎಂದು ನನ್ನ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಅವನಿಗೆ ಹಣವೇನಾದರೂ ಬೇಕಿತ್ತೇ. ನನ್ನಲ್ಲಿ ಹೇಳಲು ಮುಜಗರವೇ ಅಥವಾ ಊರಿನ ಇನ್ಯಾವುದೇ ವಿಷಯವೇ ಇತ್ಯಾದಿ ನನ್ನ ತಲೆಯಲ್ಲಿ ಸುತ್ತಾಡಿತು.

ಅಷ್ಟರಲ್ಲಿ ಅವನ ಫೋನ್ ಮತ್ತೆ ಬಂತು. ಏನಾದರೂ ಸರಿ ಈಗ ಸ್ಪಷ್ಟವಾಗಿ ಕೇಳಲೇಬೇಕು ಎಂದು ನಾನೂ ನಿರ್ಧರಿಸಿ ಫೋನೆತ್ತಿದೆ. ಮನೆಯಲ್ಲಿ ಎಲ್ಲಾ ಆರಾಮ ತಾನೆ? ಏನಾಯಿತು ವಿಶೇಷವೇನು ಎಂದೆ. "ಹೇಳುವುದಕ್ಕೆ ಬಾಯಿ ಬರುವುದಿಲ್ಲ" ಎಂದ. 'ಛೇ ಎನಾಯಿತು' ಎಂದೆ. 'ಅವು ಬಾಲೆ ಪೋಂಡ್' (ಆ ಮಗು ಹೋಯಿತು) ಎಂದು ಅಳಲು ಶುರುಮಾಡಿದ. ಯಾರು, ಯಾರ ಮಗು, ನಿನ್ನ ಮಗುವೇ ಎಂದೆ. ಅಲ್ಲ ನನ್ನ ಮಗುವಲ್ಲ. ರಮಾನಾಥಣ್ಣನ ಮಗಳು ಎಂದ. ನನ್ನ ಎದೆಗೆ ಚೂರಿ ಇರಿದಂತೆ ಅನಿಸಿತು. ಏನಾಯಿತು ಹೇಳು ಮಾರಾಯ ಎಂದೆ. ಗದ್ಗದಿತನಾದ ಆತನ ಬಾಯಿಯಿಂದ ಮಾತುಗಳೇ ಹೊರಡಲಾರದು. ನಾನೂ ಆವಾಕ್ಕಾದೆ. ಛೆ. ಎಂತ ಮಾತಾಡ್ತಿ. ಇವತ್ತು ಎಪ್ರಿಲ್ ಒಂದಲ್ಲವಲ್ಲ. ಎಂದು ನಾನೂ ಅವನು ಹೇಳಿದ ವಿಷಯವನ್ನು ನಂಬದಾದೆ. ಅವತ್ತು ಎಪ್ರಿಲ್ ಒಂದು ಮುಗಿದು ಹದಿನೇಳು ದಿನವಾಗಿತ್ತು. ಅವನನ್ನು ಸಮಾಧಾನಿಸಿ ವಿಷಯವೆಲ್ಲಾ ತಿಳಿದುಕೊಂಡೆ.

ಪರಿಮಳ ಇನ್ನಿಲ್ಲ. ಆಕೆಗೆ ಬೆಂಗಳೂರಿನಲ್ಲಿ ಹುಡುಗನೊಬ್ಬನ ಪರಿಚಯವಾಗಿ ಸ್ನೇಹವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ಅವನು ಉತ್ತರಭಾರತದವನು. ಆದರೂ ಅವರಿಬ್ಬರೂ ಮದುವೆಯಾಗುವವರೇ ಎಂದು ನಿರ್ಧಾರಕ್ಕೂ ಬಂದಿದ್ದರು. ಈ ಕುರಿತು ರಮಾನಾಥಣ್ಣನಿಗೂ ಗೊತ್ತಿತ್ತು. ಅವರೂ ಇವರ ಮದುವೆಗೆ ಅಡ್ಡಿಯೇನೂ ಮಾಡಿಲ್ಲ. ಹುಡುಗಿಗೆ ಅಷ್ಟೇನೂ ಪ್ರಾಯಕೂಡ ಆಗಿರದಿದ್ದುದರಿಂದ ಮದುವೆ ಇನ್ನೊಂದು ವರ್ಷದ ನಂತರವಾದರೂ ತೊಂದರೆಯಿಲ್ಲ ಎಂದು ಅವರು ಯೋಚಿಸಿದ್ದರು. ಪ್ರೀತಿ ಪಕ್ವವಾಗಲಿ ಎಂಬ ಹಂಬಲವೂ ಅವರದ್ದಿರಬಹುದು. ಬೆಂಗಳೂರಿನಲ್ಲಿ ಪರಿಮಳ ಮತ್ತು ಅವಳ ಬಾಯ್ ಫ್ರೆಂಡ್ ಬೈಕ್ ನಲ್ಲಿ ಹೋಗುತ್ತಿದ್ದಾಗ ಇದಕ್ಕಿದ್ದಂತೆ ಬಂದ ಟ್ರಕ್ ಒಂದರಡಿಗೆ ಬಿದ್ದು ಇಬ್ಬರೂ ತೀವ್ರವಾಗಿ ಗಾಯಗೊಂಡರು. ಅವಳು ಆಸ್ಪತ್ರೆಗೆ ತೆರಳುತ್ತಿರುವಾಗಲೇ ಸಾವನಪ್ಪಿದರೆ ಆತ ಆಸ್ಪತ್ರೆಯಲ್ಲಿ ಒಂದು ದಿನ ಸಾವು ಬದುಕಿನ ನಡುವೆ ಹೋರಾಡಿ ಅವಳ ಜತೆಯಾದ.

ಮೂರು ದಿನಗಳಿಂದ ನನ್ನ ಹಿರಿಯ ಸಹೋದ್ಯೋಗಿ ಸಿದ್ದಾರ್ಥ ಬೋಸ್ ಅವರು ಆಫೀಸಿನಲ್ಲಿ ಇರಲಿಲ್ಲ. ಸಹೋದ್ಯೋಗಿ ಶೈಲೇಶ್ ನಲ್ಲಿ ಕೇಳಿದರೆ ಬೋಸ್ ಅವರು ತುಂಬಾ ಪಜೀತಿಯಲ್ಲಿದ್ದಾರೆ. ಅವರ ಅಕ್ಕನ ಮಗನ ಆಕ್ಸಿಡೆಂಟ್ ಆಗಿದೆ. ಅವರು ಬೆಂಗಳೂರಿಗೆ ಹೋಗಿದ್ದಾರ್‍ಎ ಇವತ್ತು ಬರಬಹುದು ಎಂದ. ಸಿದ್ದಾರ್ಥ ಬಂದ ಮೇಲೆ ಅವರನ್ನು ಮಾತಾಡಿಸಿದಾಗ ಪರಿಮಳಳ ಬಾಯ್ ಫ್ರೆಂಡ್ ಅವನೇ ಆಗಿದ್ದ ಎಂಬುದು ತಿಳಿಯಿತು.

ಊರಿಗೆ ಹೊರಟ ಈ ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ತುಂಬಿದೆ.

ಮಾವಿನ ಮರದಲ್ಲಿ ಕಾಯಿಗಳು ಹಣ್ಣಾಗಳು ಕಾದಿವೆ.

ಆನಂದ ಮೆಷಿನ್ ತುಳಿಯುತ್ತಲೇ ಒಮ್ಮೊಮ್ಮೆ ಶೂನ್ಯದೃಷ್ಟಿಯಲ್ಲಿ ಮರೆತು ಸ್ತಂಭೀಭೂತನಾಗುತ್ತಾನೆ.

ಕೆರೆಯಷ್ಟು ನೀರು ನನ್ನೆದೆಯಲ್ಲಿ ತುಂಬಿದೆ.

ಹೇಗೆ ಮರೆಯಲಿ ನಿನ್ನ ಪರಿಮಳ.

ಒಲವಿನಿಂದ

ಬಾನಾಡಿ

10 comments:

 1. ಬಾನಾಡಿ ಅವರೇ,

  ’ಕೆರೆ ತುಂಬಿದ ಪರಿಮಳ’ ಓದಿದೆ ಒಂದು ಕ್ಷಣ ಮೌನವಾಗಿ ಕೂತೆ.

  ಆಗ ನಾನು ಊಟ ಮಾಡುತ್ತಿದ್ದೆ. ಜೊತೆಗೇ ಕೂತಿದ್ದ ಸಹೋದ್ಯೋಗಿಗಳು ಊಟ ಮುಗಿಸಿ ಎದ್ದು ಹೋದರೂ ನಾನು ಹಾಗೇ ಕೂತಿದ್ದೆ.

  ಮನಸ್ಸು ಕಲಕಿದ, ಕಲಕುತ್ತಿರುವ ಬರವಣಿಗೆ. ಇದು ಬರವಣಿಗೆಯಾ, ನಡೆದು ಹೋದ ಘಟನೆಯಾ, ಏನೇ ಆಗಿದ್ದರೂ ಅದು ಮನಸ್ಸು ತಾಕಿದ ರೀತಿ ಅಪರೂಪದ್ದು.

  ನಾನು ಬ್ಲಾಗ್‌ಗಳನ್ನು ನೋಡುತ್ತಿರುವುದೇ ಇತ್ತೀಚೆಗೆ. ಊಟ ಮಾಡುವಾಗ ಒಂದೆರಡು ಬರಹಗಳನ್ನು ’ಕನ್ನಡಲೋಕ’ದಲ್ಲಿ ಓದುತ್ತಿರುತ್ತೇನೆ. ಇವತ್ತು ಸಿಕ್ಕಿದ್ದು ನೀವು. ನಿಮ್ಮ ಪರಿಮಳ. ಕೆರೆಯಲ್ಲಿ ಕರಗಿದರೂ ಮರೆಯಾಗದ ನೆನಪು.

  ನಿಮ್ಮ ಪರಿಚಯಕ್ಕಾಗಿ ಹುಡುಕಿದೆ. ಸಿಕ್ಕಲಿಲ್ಲ. ಇರಲಿ ಬಿಡಿ, ಅನಾಮಧೇಯರಾಗಿರುವುದು ಬಹಳ ಚೆನ್ನ. ಅಷ್ಟಕ್ಕೂ ಸೂಕ್ಷ್ಮ ಬರವಣಿಗೆಯನ್ನು ಬರೆಯುವವರು ಕಡಿಮೆ. ಅವನ್ನು ಓದಿ ಇಷ್ಟಪಡುವವರು ಇನ್ನೂ ಕಡಿಮೆ. ಹೀಗಿರುವುದೇ ಚೆನ್ನ.

  ನಿಮ್ಮ ಇತರ ಬರಹಗಳನ್ನು ಓದುತ್ತೇನೆ.

  ಏಕೋ, ಈ ಬರಹ ಮನಸ್ಸು ಬಿಟ್ಟು ಕದಲುತ್ತಿಲ್ಲ. ಹಳೆಯ ಹಲವಾರು ನೆನಪುಗಳು ಬರತೊಡಗಿವೆ. ತಕ್ಷಣಕ್ಕೆ ಬರೆದರೆ ಅನುಕರಣೆಯಾದೀತು ಎಂದು ಸುಮ್ಮನಿದ್ದೇನೆ.

  ಚೆನ್ನಾಗಿ ಬರೆಯುತ್ತಿದ್ದೀರಿ. ಬರೆಯುತ್ತಲೇ ಇರಿ. ಕೆರೆ, ಅದರ ಪರಿಮಳ, ಬದುಕು ಎಲ್ಲರಿಗೂ ದಕ್ಕಲಿ. ಮಾಸದ ಮುಗ್ಧ ನೆನಪು ಹಬ್ಬಲಿ.

  - ಚಾಮರಾಜ ಸವಡಿ
  http://chamarajsavadi.blogspot.com

  ReplyDelete
 2. ನಿಮ್ಮ ಕಾಮೆಂಟ್ ಗೆ ಧನ್ಯ ನಾನು.
  ಒಲವಿನಿಂದ
  ಬಾನಾಡಿ

  ReplyDelete
 3. ಬ್ಲಾಗ್ ಮೂಲಕ ನಮಗಿಂದು ಪರಿಚಯವಾದಿರಿ. ಊಟ ಮಾಡಿ ಕೈತೊಳೆದು ವಾಪಾಸಾದಾಗ ಚಾಮರಾಜ್ ಸವಡಿ ಅವರು ಹೇಳಿದ್ರು,‘ಬಾನಾಡಿ’ ನೋಡಿ ಅಂತ.
  ಕೆರೆ ತುಂಬಿದ ಪರಿಮಳ. ಟೈಟಲ್ಲೇ ಒಂದು ಕ್ಷಣ ಹಿಡಿದಿಟ್ಟಿತು. ಹಾಗೇ ಓದ್ತಾ ಹೋದಾಗ ಬಾಲ್ಯದ ತಂಟೆ-ಹರಟೆ ಏನೋ ಅನ್ನಿಸ್ತು. ಆದ್ರೆ ಓದು ಅರ್ಧಕ್ಕೆ ಬಂದಾಗ ನಿಧಾನವಾಗಿ‘ಪರಿಮಳ’ಅರ್ಥವಾಗತೊಡಗಿದಳು. ಮನಸ್ಸು ಭಾವರಾಗಿಸಿದಳು.
  ಅವಳು ಕಳೆದು ಹೋಗುವ ಸಾಲುಗಳನ್ನು ಹೇಗೆ ಓದುವುದು ಎಂದು ಒದ್ದೆಯಾಯ್ತು ಮನಸ್ಸು. ಆದರೆ ಸರಳ ಶೈಲಿಯ ಬರೆವಣಿಗೆ ಓದುವ ಕುತೂಹಲ ಹೆಚ್ಚಿಸಿತು.
  ಸೂಕ್ಷ್ಮತೆ-ಸಂವೇದನೆ ಕಳೆದುಕೊಳ್ಳುವ ಬರೆವಣಿಗೆಗಳ ನಡುವೆ ‘ಕೆರೆ ತುಂಬಿದ ಪರಿಮಳ’ವಿಷಾದದಲ್ಲೂ ನಗೆ ಚೆಲ್ಲುತ್ತಾಳೆ.

  ReplyDelete
 4. ಇನ್ನಿಲ್ಲದ ಪರಿಮಳಳಿಗಾಗಿ ಮನಸ್ಸು ಹಸಿ ಹಸೀ, ಕಣ್ಣು ಒದ್ದೆಯಾಯಿತು. ಛೇ ! ಇಷ್ಟೇನಾ ಬದುಕು ಅನಿಸಿತು..

  ReplyDelete
 5. ಒಳ್ಳೆಯ ನಿರೂಪಣೆ..
  ಬದುಕು ವೈಚಿತ್ರ್ಯ!ಕಂಗಳು ಹನಿಗೂಡಿತು..
  ಚಿತ್ರಾ

  ReplyDelete
 6. ರೇಣುಕಾ, ಚಿತ್ರಾ
  ಸ್ನೇಹದಿಂದ ಇಲ್ಲಿ ಬಂದು ಮಾತಾಡಿಸಿದ ನೀವು
  ನನ್ನ ಅಕ್ಕರೆಯವರು!
  ಬಾನಾಡಿ

  ReplyDelete
 7. ನಿಜಕ್ಕೆ ಕಥೆಯರೂಪವನಿತ್ತು ಮನಮುಟ್ಟುವಂತೆ ಬರೆದಿರುವಿರಿ.. ಇಲ್ಲಾ ಕಲ್ಪನೆಯನ್ನು ನೈಜವಾಗಿಸುವಲ್ಲಿ ಯಶಸ್ವಿಯಾಗಿರುವಿರಿ..ಏನೇ ಆದರೂ ನಿಯತಿಯಾಟದಲ್ಲಿ ಎಲ್ಲಾ ಶೂನ್ಯ ತಾನೆ?

  ReplyDelete
 8. ಅತ್ಯಂತ ಮನೋಜ್ಞ ನಿರೂಪಣೆ.ಖುಷಿಯಾಯಿತು.

  ReplyDelete
 9. ಮನೋಜ್ಞವಾದ ಲೇಖನ. ಬರೆವಣಿಗೆ ನಿಮಗೆ ಸಾಧಿಸಿದೆ.

  ReplyDelete
 10. ತೇಜಸ್ವಿನಿ,
  ಪುಚ್ಚಪ್ಪಾಡಿ,
  ಸುನಾತ್,

  ನಿಮ್ಮ ಕಾಮೆಂಟ್ ಗಳಿಗೆ ವಂದನೆಗಳು.

  ಒಲವಿನಿಂದ
  ಬಾನಾಡಿ

  ReplyDelete