Friday, April 25, 2008

ಜ್ಯೋತಿ


ಬಡತನ ಅವರ ಮನೆಯ ಖಾಯಂ ಅತಿಥಿಯಾಗಿತ್ತು. ತನ್ನ ಬದುಕಿನಲ್ಲಿ ಹೊಸದೊಂದು ಸೂರ್ಯ ಉದಯಿಸುತ್ತಾನೋ ಎಂದು ಕಾತರಗೊಂಡು ಕಾಯುವಂತೆ ಪ್ರತಿ ಮುಂಜಾವವೂ ರುಕ್ಮಯ್ಯಣ್ಣ ಮೂಡಣದಲ್ಲಿ ರಂಗು ಕೆಂಪೇರುವುದಕ್ಕಿಂತ ಮುಂಚೆನೇ ಎದ್ದು ಮನೆಯ ಮುಂದಿನ ಆಳ ಕಾಣದ ಬಾವಿಯೊಳಗೆ ಮುಗಿಯದಷ್ಟು ಉದ್ದವಿರುವ ಹಗ್ಗಕ್ಕೆ ಕಟ್ಟಿದ ಪ್ಲಾಸ್ಟಿಕ್ ಕೊಡವನ್ನು ಇಳಿಸಿ ಕೊಡ ತುಂಬಲು ನಾಲ್ಕಾರು ಬಾರಿ ಮೇಲೆತ್ತಿ ಮತ್ತೆ ದಿಡೀರೆಂದು ಬಿಟ್ಟು ನೀರು ತುಂಬಿತೆಂದುಕೊಂಡು ಕೊಡವನ್ನು ಕಟ್ಟಿದ ಹಗ್ಗವನ್ನು ಎಳೆದು ಸುರುಳಿ ಸುರುಳಿಯಾಗಿ ಬಾವಿಯ ಕಟ್ಟೆಯ ಬದಿಯಲ್ಲಿ ಹಾಕಿ ಅರ್ಧ ತುಂಬಿದ ಕೊಡದಿಂದ ನೀರನ್ನು ತಂದು ಮನೆಯೊಳಗೆ ಇರುವ ಮಣ್ಣಿನ ಮಡಕೆಯಲ್ಲಿ ತುಂಬುತ್ತಾನೆ. ಇನ್ನೂ ಬೇಸಿಗೆ ಆರಂಭವಾಗುತ್ತದೆಯಷ್ಟೇ. ಆದರೆ ಬಾವಿಯ ನೀರು ಕೆಳಗೆ ಇಳಿದು ಹೋದುದು ತನ್ನ ಬಾವಿ ಈ ಗುಡ್ಡದ ನೆತ್ತಿಯ ಮೇಲೆ ಇದ್ದುದರಿಂದಲೋ ಅಥವಾ ಹೋದಲ್ಲಿ ಬಂದಲ್ಲಿ ತನ್ನನ್ನು ಅಣಕಿಸುವ ಬಡತನದ ಆಟವೋ ಅರ್ಥವಾಗದೇ ರುಕ್ಮಯಣ್ಣ ಆರುವರ್ಷದಿಂದ ಕಟ್ಟುತ್ತಿದ್ದ ಅದೇ ಬೈರಾಸನ್ನು ತನ್ನ ತಲೆಗೆ ಸುತ್ತಿಕೊಂಡು ಎರಡು ಕೊಡಗಳನ್ನು ಹಿಡಿದುಕೊಂಡು ಗುಡ್ಡದ ಆಚೆ ಬದಿಗಿರುವ ನದಿಯ ಹತ್ತಿರ ಹೊರಡುತ್ತಾನೆ. ಮಳೆಗಾಲ ಮುಗಿದ ನಂತರದ ದಿನಗಳಲ್ಲಿ ಯಾವುದೇ ದಿನ ಬೇಕಾದರೂ ನೋಡಿ ರುಕ್ಮಯಣ್ಣನ ದಿನಚರಿಯ ಮೊದಲ ಸಾಲುಗಳು ಹೀಗೇ ಇರುತ್ತವೆ. ರುಕ್ಮಯಣ್ಣನ ಅಪ್ಪ ಬಾಬಣ್ಣನ ಕಾಲದಿಂದಲೂ ಅವರ ಅವಸ್ಥೆ ಅದೇ ರೀತಿ ಬೆಟ್ಟದ ಮೇಲಿನ ಹುಣಸೆ ಮರದಂತೆ ಸುಮ್ಮನೆ ನಿಂತಿದೆ. ರುಕ್ಮಯಣ್ಣನ ತಮ್ಮ ಹತ್ತಿರದ ಶಾಲೆಯಲ್ಲಿ ಏಳನೆ ಕ್ಲಾಸಿನ ವರೆಗೆ ಹೋಗಿ ಎಂಟನೆ ಕ್ಲಾಸಿಗೆ ಹದಿನೈದು ಕಿಲೋ ಮೀಟರ್ ದೂರದ ಹೈಸ್ಕೂಲಿಗೆ ದಿನಾಲೂ ನಡೆದು ಹೋಗುವುದಕ್ಕಿಂತ ಬಸ್ಸಲ್ಲಿ ಸೀದಾ ಬೊಂಬಾಯಿಗೆ ಹೋಗುವುದು ಲೇಸೆಂದು ಎಣಿಸಿ ಮನೆಯಲ್ಲಿದ್ದ ಹಳೆಯ ತಾಮ್ರದ ಹಂಡೆಯೊಂದನ್ನು ರಾತ್ರೋರಾತ್ರಿ ಚೆಂಬ್ಬುಟ್ಟಿ ಸೋಜಾನಿಗೆ ಮಾರಿ ಟಿಕೇಟು ತೆಗೆದುಕೊಂಡಿದ್ದ. ಊರೆಲ್ಲಾ ಹುಡುಕಿದರೂ ಸಿಗದ ಅವನು ಬೊಂಬಾಯಿಗೆ ಹೋದ ವಿಚಾರವನ್ನು ನಾಲ್ಕುದಿನಗಳ ನಂತರ ಸೋಜಾನೇ ಹೇಳಿದ್ದು. ಹದಿಮೂರು ವರ್ಷದ ಹುಡುಗ ಯಾರ ಜತೆಯಲ್ಲಿ ಹೋದನೋ ಯಾರಿಗೂ ಗೊತ್ತಿರಲಿಲ್ಲ. ಹಾಗೆ ಹೋದವ ಕಳೆದ ಇಪ್ಪತೈದು ವರ್ಷಗಳಿಂದ ಊರಿನ ಕಡೆ ಕಾಲಿಡಲಿಲ್ಲ.ರುಕ್ಮಯ್ಯನು ತನ್ನಂತೆ ಬಡತನದಲ್ಲಿ ಮಿಂದು ಅಭ್ಯಾಸವಿರುವ ಮನೆಯ ಹುಡುಗಿಯನ್ನೆ ಮದುವೆಯಾದ. ಮೂರು ವರ್ಷದವರೆಗೆ ಮಕ್ಕಳಾಗದಿದ್ದಾಗ ಊರವರು ಒಬ್ಬೊಬ್ಬರು ಒಂದೊಂದು ಮಾತು ಆಡಲು ಆರಂಭಿಸಿದರು. ನಾಲ್ಕನೆ ವರ್ಷಕ್ಕೆ ಗರ್ಭಿಣಿಯಾದ ರುಕ್ಮಯ್ಯನ ಹೆಂಡತಿ ಹೆಣ್ಣು ಮಗುವಿಗೆ ಜನ್ಮವಿತ್ತಳು. ಊರಿನಲ್ಲಿ ಜಾತ್ರೆ; ಧರ್ಮಸ್ಥಳ ಮೇಳದ ಯಕ್ಷಗಾನವಿತ್ತು. ಮಗುವಿಗಿಟ್ಟ ಹೆಸರು ಜ್ಯೋತಿ. ಈ ಜ್ಯೋತಿ ತನ್ನ ಬಡತನದ ಅಂಧಕಾರವನ್ನು ತೊಡೆದು ಬೆಳಕನ್ನು ತರಲಿ ಎಂಬ ಕಲ್ಪನೆಯನ್ನು ಮಾಡುವಷ್ಟು ರುಕ್ಮಯ್ಯನ ಮಂಡೆಯಲ್ಲಿ ಬೊಂಡಿರಲಿಲ್ಲ. ಆದರೆ ಜ್ಯೋತಿ ಬೆಳಗಿದಳು. ಸ್ಥಳೀಯ ಶಾಲೆಯಲ್ಲಿ ಓದಲು ಆರಂಭಿಸಿದ ಹುಡುಗಿ ಸಂಜೆ ನದಿಗೆ ಹೋಗಿ ನೀರು ತಂದು ಸುಸ್ತಾದರೂ ಆಯಾಯ ದಿನದ ಓದನ್ನು ಮುಗಿಸಿಯೇ ಮಲಗುತ್ತಿದ್ದಳು. ಪಾಠಪುಸ್ತಕದೊಂದಿಗೆ ಶಾಲೆಯಲ್ಲಿ ಅವಳ ಸಹಪಾಠಿಗಳು ತರುವ ಬಾಲಮಂಗಳದಿಂದ ಹಿಡಿದು ಅಪರೂಪಕ್ಕೆ ರುಕ್ಮಯಣ್ಣ ತರುವ ಒಣಮೀನನ್ನು ಕಟ್ಟಿದ ಹಳೆಯ ಉದಯವಾಣಿಯ ತುಂಡಾದರೂ ಸರಿ ಎಷ್ಟು ಸಾರಿ ಬೇಕಾದರೂ ಓದುತ್ತಾಳೆ. ಮಗಳು ಓದುವುದರಲ್ಲಿ ಪ್ರತಿಭಾವಂತೆ, ಅವಳನ್ನು ಹೈಸ್ಕೂಲಿಗೆ ಸೇರಿಸಿ ಎಂದು ಸ್ಥಳೀಯ ಮಾಸ್ಟರು ಹೇಳಿದ ಮಾತನ್ನು ರುಕ್ಮಯಣ್ಣ ಮನಸ್ಸಿಗೆ ತೆಗೆದುಕೊಂಡಿರಲಿಲ್ಲ. ಅವನ ಹೆಂಡತಿ ಮಾತ್ರ ಜ್ಯೋತಿ ಹೈಸ್ಕೂಲಿಗೆ ಹೋಗಲೇಬೇಕೆಂದು ಹಠ ಕಟ್ಟಿದಳು. ಬೇಸಿಗೆಯಲ್ಲಿ ಅವರಿವರ ಗುಡ್ಡದ ಗೇರುಬೀಜಗಳನ್ನು ಕದ್ದು ಮಾರಿಯಾದರೂ ಜ್ಯೋತಿಯನ್ನು ಹೈಸ್ಕೂಲಿಗೆ ಸೇರಿಸಬೇಕು ಎಂದುಹೇಳಿದಳು. ರುಕ್ಮಣ್ಣನ ಹೆಂಡತಿ ಹೆತ್ತಿದು ಒಂದೇ ಮಗುವನ್ನು. ಜ್ಯೋತಿಗೆ ಇನ್ಯಾರೂ ಇರಲಿಲ್ಲ. ಹೈಸ್ಕೂಲಿಗೆ ಏರಿದ ಜ್ಯೋತಿ ಹತ್ತನೇ ಕ್ಲಾಸಿನಲ್ಲಿ ಹೈಸ್ಕೂಲಿಗೇ ಮೊದಲಿಗಳು ಎಂದು ಗೊತ್ತಾದರೂ ಅವಳಿಗೆ ಆರನೆ ರ್‍ಯಾಂಕ್‍ನಲ್ಲಿ ಪಾಸಾಗಿದ್ದಾಳೆ ಎಂದು ಗೊತ್ತಾಗಿದ್ದು ಒಂದು ವಾರದ ನಂತರವೇ. ರುಕ್ಮಯಣ್ಣನಿಗೆ ಬೇಸರವಾಯಿತು. ಇಷ್ಟು ಚೆನ್ನಾಗಿ ಓದಿ ರ್‍ಯಾಂಕ್ ಪಡೆದು ಪ್ರಯೋಜನವೇನು. ಇದು ಅವಳ ಕೊನೆ ವರ್ಷದ ಓದು ಅಲ್ವ? ಎಂದು. ಕಾಲೇಜಿಗೆ ಕಳುಹಿಸುವ ಯೋಜನೆ ಅವನಲ್ಲಿ ಇರಲಿಲ್ಲ. ಜ್ಯೋತಿಯ ಅದೃಷ್ಟವೋ ಎಂಬಂತೆ ಅದೇ ವರ್ಷದಿಂದ ಆ ಹೈಸ್ಕೂಲ್ ಪಿ.ಯು. ಕಾಲೇಜ್ ಆಗಿ ಪ್ರಾರಂಭವಾಯಿತು. ಪಿ.ಯು.ಸಿ. ಕ್ಲಾಸ್ ಗಳು ಆರಂಭವಾದುವು. ಜ್ಯೋತಿ ಕಾಮರ್ಸ್ ಸೇರಿದಳು. ಸಯನ್ಸ್ ಇರಲಿಲ್ಲ. ಆರ್ಟ್ಸ್‍ನಲ್ಲಿ ಎಲ್ಲಾ ಸೀಟ್‍ಗಳು ಫುಲ್ ಆಗಿದ್ದವು. ನಂತರದ ಕತೆ ನನಗೆ ಗೊತ್ತಿರಲಿಲ್ಲ.
ಮುಂಬಯಿಯಲ್ಲಿ ಮೊನ್ನೆ ಸಮ್ಜೆ ರಮೇಶ ಸಿಕ್ಕಾಗ ನಮ್ಮ ಊರಿನ ಮಿತ್ರರೊಬ್ಬರಿದ್ದಾರೆ. ಅವರಲ್ಲಿ ಒಂದು ಸಣ್ಣ ಕೆಲಸವಿದೆ. ಹೋಗಿ ಬರುವ ಎಂದು ತನ್ನ ಗಾಡಿಯಲ್ಲಿ ನನ್ನನ್ನೂ ಕೂರಿಸಿ ಕರೆದುಕೊಂಡು ಹೋದ. ಬಹುಮಹಡಿ ಅಪಾರ್ಟ್‍ಮೆಂಟ್‍ನೊಳಗೆ ಸೇರಿ ಲಿಫ್ಟ್‍ನಲ್ಲಿ ೩೬ನೇ ಫ್ಲೋರ್‍‍ಗೆ ತಲಪಿದೆವು. ಫ್ಲಾಟ್‍ನ ಬೆಲ್ ಬಾರಿಸಿದಾಗ ಬಾಗಿಲು ತೆರೆದವರನ್ನು ಕಂಡು ನಾನು ಆಶ್ಚರ್ಯ ಚಕಿತನಾದೆ. ಅದು ರುಕ್ಮಯಣ್ಣನಾಗಿದ್ದ. ಆತನ ತಮ್ಮ ಕೊನೆಗೂ ಸಿಕ್ಕಿರಬೇಕು ಎಂದು ನಾನೆಣಿಸಿದೆ. ರುಕ್ಮಯಣ್ಣ ಕತೆ ಮುಂದುವರಿಸಿದರು.
ಜ್ಯೋತಿ ಪಿ.ಯು.ಸಿ. ಮುಗಿಸಿದಾಗ ಅವಳಿಗೆ ಸ್ಕಾಲರ್‍‍ಶಿಪ್ ದೊರೆಯಿತು ಅಲ್ಲದೇ ಬ್ಯಾಂಕ್‍ನಿಂದ ಸ್ವಲ್ಪ ಸಹಾಯವೆಂದು ಸಾಲ ಕೂಡ ಲಭಿಸಿತು. ಮಂಗಳೂರಿನಲ್ಲಿ ಬಿ.ಬಿ.ಎಂ. ಮುಗಿಸಿ ಅವಳು ಮತ್ತೆ ಒಂದು ಸಾರ್ವಜನಿಕ ವಲಯದ ಬ್ಯಾಂಕ್‍ಗೂ ಸೇರಿದಳು. ನಂತರ ಅವಳಿಗೆ ಬೆಂಗಳೂರಿಗೆ ವರ್ಗವಾಯಿತು. ಅಲ್ಲಿ ಅವಳು ಎಂ.ಬಿ.ಎ. ಕೂಡ ಮಾಡಿದಳಂತೆ. ಕೆಲವೇ ತಿಂಗಳಲ್ಲಿ ಬ್ಯಾಂಕ್ ಕೆಲಸ ಬಿಟ್ಟು ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ದೊಡ್ಡ ಹುದ್ದೆ ದೊರೆತು ಮುಂಬಯಿಗೆ ಬಂದಳು. ಇದು ಅವಳದೇ ಫ್ಲ್ಯಾಟ್. ನಾನೆಣಿಸಿದಂತೆ ರುಕ್ಮಯ್ಯನ ತಮ್ಮನದಲ್ಲ. ಆತ ಮುಂಬಯಿಯಿಂದ ಮಲೇಶ್ಯಕ್ಕೆ ಹೋಗಿ ಸೆಟ್ಲ್ ಆಗಿದ್ದಾನಂತೆ. ಜ್ಯೊತಿಯೊಂದಿಗೆ ರುಕ್ಮಯ್ಯ ಮತ್ತವನ ಹೇಂಡತಿಯಿದ್ದಾರೆ. ಜ್ಯೋತಿ ನಮ್ಮನ್ನು ಕಾಣಲು ಬಂದಾಗ ಸೋಫಾದಲ್ಲಿ ಕುಳಿತಿದ್ದ ನಾನು ಎದ್ದು ನಿಂತು ಕೈ ಮುಗಿದೆ. ಅವಳ ಪ್ರತಿಭೆಗೆ ಅವಳ ದಿಟ್ಟತನಕ್ಕೆ. ಒಪ್ಪವಾಗಿದ್ದ ಮನೆಯಲ್ಲಿ ಕನ್ನಡದ ಪುಸ್ತಕಗಳನ್ನು ಕಂಡು ಮನಸ್ಸು ಮುದಗೊಂಡಿತು. ಚಹಾ ಕುಡಿಯುತ್ತಾ ಇದ್ದಾಗ ಅಂದಳು: ನೋಡಿ ಈ ಪುಸ್ತಕಗಳಲ್ಲಿ ನಿಮ್ಮದೂ ಎರಡು ಪುಸ್ತಕಗಳುಂಟು. ನಾನು ಶಾಲೆಗೆ ಹೋಗುತ್ತಿದ್ದಾಗ ನಿಮ್ಮಿಂದ ತೆಗೆದುಕೊಂಡ ಕಾರಂತರ ಚೋಮನದುಡಿ ಮತ್ತು ವಿಶುಕುಮಾರರ ಕರಾವಳಿ ಕಾದಂಬರಿ. ತುಂಬಾ ಸಲ ಓದಿದೆ. ನಿಮಗೆ ಬೇಕಿದ್ದರೆ ಕೊಡಲಾ? ಎಂದಳು. ನನ್ನ ನೆನಪಲ್ಲಿ ಅದು ಇಲ್ಲೇ ಇರಲಿ ಎಂದೆ. ರಮೇಶ ವಳಿಗೊಬ್ಬ ಹುಡುಗನನ್ನು ಹುಡುಕುತ್ತಿದ್ದೇನೆ ಆ ಕುರಿತು ಆತ ಬಂದುದು ಎಂದು ಹೇಳಿದ. ಒಳ್ಳೆಯ ಹುಡುಗನೇ ಸಿಗಲಿ ಎಂದು ಹಾರೈಸುತ್ತಾ ಹೊರಬಂದೆವು.


ಜ್ಯೋತಿ ನಿಜವಾಗಿಯೂ ಬೆಳಕಾಗಿದ್ದಳು.

3 comments:

 1. ಜ್ಯೋತಿ ಓದಿ ಮನಸ್ಸಿನಲ್ಲಿ ಬೆಳಕಾದ ಅನುಭವವಾಯಿತು!

  ReplyDelete
 2. ನಮಸ್ಕಾರ,

  ಕಥೆ ತುಂಬಾ ಇಷ್ಟವಾಯಿತು. ಮನಸ್ಸಿದ್ದರೆ ಮಾರ್ಗವೆಂಬ ನಾಣ್ಣುಡಿಯನ್ನು ಸತ್ಯವಾಗಿಸಿದಳು ಜ್ಯೋತಿ. ಹುಟ್ಟಿದ ಮೆನೆಗೆ ಬೆಳಕಾದ ಹಾಗೆ ಹೋಗುವ ಮನೆಗೂ ಜ್ಯೋತಿಯಾಗಲಿ ಎಂದು ಹಾರೈಸುವೆ. ಅಂದ ಹಾಗೆ ಇದು ನಿಜ ಕಥೆಯೇ?

  ReplyDelete
 3. ನಿಜ-ಕಥೆ : ಎರಡೂ
  ಬಾನಾಡಿ

  ReplyDelete