Thursday, April 17, 2008

ಮುಗಿಯದ ದಾರಿ

ಬಹಳ ದಿನಗಳ ನಂತರ ಬಂದ ಈಮೇಲ್‍ನಲ್ಲಿ ಪಿ. ರೈ ನಾಲ್ಕೇ ವಾಕ್ಯಗಳನ್ನು ಬರೆದಿದ್ದಳು. ಅವಳ ಈ ಮೇಲ್ ಬಾರದೇ ಸುಮಾರು ನಾಲ್ಕು ತಿಂಗಳಾಯಿತೆಂದು ಅವಳು ಜ್ಞಾಪಿಸಿದುದರಿಂದಲೇ ನನಗೆ ಗೊತ್ತಾಗಿದುದು. ಅವಳು ಕುಟುಂಬ ಸಮೇತ ಥಾಯ್‍ಲೇಂಡ್‍ಗೆ ಹೋಗುವ ವಿಚಾರ ತಿಳಿಸಿದ್ದಳು. ಅದರ ನಂತರ ಅವಳಿಂದ ಉತ್ತರವಿರಲಿಲ್ಲ. ನಾನು ಕಳುಹಿಸುತ್ತಿದ್ದ ಕೆಲವು ಜೋಕುಗಳಿಗೂ ಅವಳು ಉತ್ತರಿಸಿಲ್ಲ. ಒಂದರ್ಥದಲ್ಲಿ ನಾಪತ್ತೆಯೇ ಆಗಿದ್ದಳು. ನಮ್ಮ ಪ್ರಾಜೆಕ್ಟ್‍ಗೆ ಬೇಕಾದ ಕೆಲಸ ನಾನೊಬ್ಬಳೇ ಮಾಡಿದೆ. ಆದರೆ ನಿನ್ನ ನೆನಪು ಕಾಡುತ್ತಿತ್ತು, ಎಂದು ಬರೆದಿದ್ದಳು. ನೀನು ಹೇಳುತ್ತಿರುವ ವಿಚಾರದ ಬಗ್ಗೆ ನಾನು ಬಹಳಷ್ಟು ಊಹಿಸಬಲ್ಲೆ. ಹಲವಾರು ವಿಚಾರಗಳು ನನ್ನ ತಲೆ ತಿನ್ನತೊಡಗಿವೆ. ಕೂಡಲೇ ವಿವರವಾಗಿ ಬರೆ ಎಂದು ನಾನು ಅವಳಿಗೆ ಮರುಮೈಲ್ ಮಾಡಿ ಅವಳ ಉತ್ತರಕ್ಕಾಗಿ ಕಾದು ಕಾದು ನಿರಾಶನಾಗಿದ್ದೆ.ಮತ್ತೆ ಹತ್ತು ದಿನಗಳ ನಂತರ ಅವಳ ಉತ್ತರ ಬಂತು. ಆದರೆ ಆ ಹತ್ತು ದಿನಗಳು ನನ್ನನ್ನು ನಮ್ಮ ಅಧ್ಯಯನದ ದಿನಗಳಿಗೆ ಒಯ್ದಿತ್ತು. ಕಾರಣ ಪಿ. ರೈ ನನ್ನ ಸಹಪಾಠಿಯಾಗಿದ್ದಳು. ಅವಳ ಎಲ್ಲಾ ಮಾತುಗಳಿಗೂ ನಾನು ಕಿವಿಯಾಗಿದ್ದೆ. ಓದುವ ಸಮಯದಲ್ಲಿ ಅವಳ ಹಿಂದೆ ಬಿದ್ದ ಹುಡುಗರ ವಿಚಾರವಾಗಿರಲಿ, ತನ್ನ ಬಾಯ್ ಫ್ರೆಂಡ್ ರೊನಾಲ್ಡ್ ವಿಚಾರವಾಗಲಿ, ನಾವೆಲ್ಲ ಸೇರಿ ನೋಡಿದ ನೀನಾಸಂ ತಿರುಗಾಟದ ನಾಟಕವಾಗಲೀ ಅಥವಾ ಅವಳ ಮನೆಯಲ್ಲಿ ಅವಳಪ್ಪ ಮತ್ತು ಚಿಕ್ಕಪ್ಪನವರೊಡನೆ ನಡೆಯುವ ಜಗಳವಾಗಲೀ - ಅದು ನನ್ನಲ್ಲಿ ಹೇಳದಿದ್ದರೆ ಅವಳಿಗೆ ನಿದ್ದೆ ಬರುತ್ತಿರಲ್ಲಿಲ್ಲವೇನೋ. ಅವತ್ತು ನಾವು ನಾಟಕದಲ್ಲಿ ಪಾರ್ಟ್ ಮಾಡಿ ಇಬ್ಬರದೂ ಒಂದೇ ಸೀನ್ ನಲ್ಲಿರುವಾಗ ಅವಳು ತನ್ನ ಡಯಲಾಗ್ ಜತೆಗೆ "ನೋಡು ರೊನಾಲ್ಡ್ ಕೂಡ ನಾಟಕ ನೋಡಲು ಬಂದಿದ್ದಾನೆ. ನನ್ನನ್ನು ನೋಡಿ ಏನೆಲ್ಲಾ ಹೇಳಿ ಬಯ್ತಾನೆ" ಅಂತ ಸಣ್ಣದಾಗಿ ನನ್ನಲ್ಲಿ ಹೇಳಿದ್ದಳು. ನಾಟಕ ಮುಗಿಸಿ ಡ್ರೆಸ್ ಬದಲಿಸಿ ಅವರಿಬ್ಬರೂ ಬೈಕ್‍ನಲ್ಲಿ ಹಾರಿ ಹೋಗುವಾಗ ಜಗಳ ಆಡಿದ್ದರು ಎಂದನಿಸಿತು. ಒಂದು ದಿನ ನಾನು ಕ್ಲಾಸಿಗೆ ಹಾಜರಾಗದೇ ಇದ್ದುದು ನನಗೆ ಬಹಳ ದೊಡ್ಡ ಪರಿಣಾಮ ಹಾಗೂ ಪರಿತಾಪವನ್ನು ಮಾಡಿತು. ಕಾರಣ ಆ ದಿನ ನಮ್ಮ ಕ್ಲಾಸಿನಲ್ಲಿ ನಮಗೆಲ್ಲಾ ಮಾಡಲು ಪ್ರಾಜೆಕ್ಟ್ ಕೊಡುವ ದಿನವಾಗಿತ್ತು. ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯ ಆರಿಸಿ ಇಬ್ಬರು ಅಥವಾ ಮೂವರ ಗ್ರೂಪ್ ಒಂದನ್ನು ಮಾಡಿ ಆ ಪ್ರಾಜೆಕ್ಟ್ ಅನ್ನು ಮುಗಿಸಬೇಕಿತ್ತು. ಅದಕ್ಕೆ ಆ ಗುಂಪಿನವರೆಲ್ಲರ ಕೆಲಸವನ್ನು ಮತ್ತು ವರದಿಯನ್ನು ನೋಡಿ ನಮಗೆ ಅಂಕ ಸಿಗುತ್ತಿತ್ತು. ಒಂದು ಗುಂಪಿನ ಮೂವರಿಗೂ ಒಂದೇ ಪ್ರಾಜೆಕ್ಟ್ ಗೆ ಒಂದೇ ರೀತಿ ಅಂಕ ಬರಬೇಕಿರಲ್ಲಿಲ್ಲ. ಐದು ಹತ್ತು ಮಾರ್ಕು ಆಚೀಚೆ ಬರಬಹುದಿತ್ತು. ಅದೊಂದು ಟೀಮ್ ವರ್ಕ್ ಮಾಡುವ ಪ್ರಾಜೆಕ್ಟ್ ಆಗಿತ್ತು ಅಲ್ಲದೇ ಏಕಾಂಗಿಯಾಗಿ ಮಾಡಲಾಗದಂತಹ ಸಬ್ಜೆಕ್ಟ್ ಗಳಿರುತ್ತಿದ್ದವು. ನಾನು ಕ್ಲಾಸಿಗೆ ಹೋಗದಿದ್ದುದರಿಂದ ನನ್ನ ಪ್ರಾಜೆಕ್ಟ್ ನ ವಿಷಯವನ್ನಾಗಲೀ, ನನ್ನ ಟೀಮ್ ಮೇಟ್ ಗಳನ್ನು ಆಯ್ದುಕೊಳ್ಳುವ ವಿಚಾರವಾಗಲೀ ನನಗೆ ಯಾವುದೇ ಜಿಜ್ಞಾಸೆ ಮಾಡುವುದಕ್ಕಾಗಲ್ಲಿಲ್ಲ. ಇನ್ಯಾರೋ ಸಿಲೆಕ್ಟ್ ಮಾಡಿದ ಇನ್ಯಾರದೋ ಗುಂಪಿನಲ್ಲಿ ಸೇರಿ ಪ್ರಾಜೆಕ್ಟ್ ಮುಗಿಸಬೇಕಾಗಿತ್ತು. ವರ್ಷದಿಂದ ನನ್ನ ಮನಸಲ್ಲೇ ಇದ್ದ ಪ್ರಾಜೆಕ್ಟ್ ವಿಷಯಗಳನ್ನು ನಾನು ಬಿಟ್ಟು ಬಿಡಬೇಕಾಯಿತು.ಮರುದಿನ ಕ್ಲಾಸಿನಲ್ಲಿ ನಮ್ಮ ಪ್ರಾಜೆಕ್ಟ್ ಗಳ ಬಗ್ಗೆ ಚರ್ಚೆ ಶುರುವಾಗಿತ್ತು. ಒಬ್ಬೊಬ್ಬರಿನ್ನೊಬ್ಬರ ಪ್ರಾಜೆಕ್ಟ್ ಸಬ್ಜೆಕ್ಟ್ ಬಗ್ಗೆ ಮಾತಾಡುತ್ತಿದ್ದರು. ನನ್ನ ಸಹಪಾಠಿ ಗೆಳೆಯ ಶ್ರೀಧರ್ ನನಗೆ ಹೇಳಿದ ಪಿ. ರೈ ಮತ್ತು ನಾನು ಸೇರಿ ಒಂದು ಟೀಮ್ ಹಾಗು ನಮ್ಮ ಪ್ರಾಜೆಕ್ಟ್ ಏನು ಅಂತ. ಜತೆಗೆ ಅವ ಹೇಳಿದ ನಿಮ್ಮಿಬ್ಬರಿಗೆ ಅದು ಆಗುವ ಕೆಲಸವಲ್ಲ ನಾನು ನಿಮ್ಮ ಟೀಮಲ್ಲಿ ಇರಬೇಕಿತ್ತು ಅಂತ. ಪಿ. ರೈ ಸಿಕ್ಕಿದಳು. ಏನು ಪ್ರಾಜೆಕ್ಟ್ ಅಂತ ವಿವರಿಸಿದಳು. ಅವಳು ಆರಿಸಿದ ಸಬ್ಜೆಕ್ಟ್ ಕೇಳಿ ನನಗೂ ಕೊನೆ ಮೊದಲು ಗೊತ್ತಾಗಲಿಲ್ಲ. ಹೇಗೆ ಮಾಡುವುದು ಎಂಬುದಕ್ಕಿಂತ ವಿಷಯ ಏನು ಎನ್ನುವುದೇ ಗೊತ್ತಾಗಲಿಲ್ಲ. ಹ್ಯೂಮನ್ ಟ್ರಾಫಿಕಿಂಗ್ -ದ ರೋಡ್ ಮೋಸ್ಟ್ ಟ್ರಾವೆಲ್‍ಡ್ ಎನ್ನುವ ಡಾಕುಮೆಂಟರಿ ಫಿಲ್ಮ್. ನಾನು ಕೇಳಿದೆ ಹ್ಯೂಮನ್ ಟ್ರಾಫಿಕಿಂಗ್ ಅಂದರೇನು ಎಂದು. ಟ್ರಾಫಿಕ್ ಪೋಲೀಸರ ಕುರಿತಾದುದೇ ಇದು ಎಂದು ನಾನೆಣಿಸಿದಂತೆ ಆಗಿರಲಿಲ್ಲ. ಎಲ್ಲಾ ವಿವರಣೆ ಕೇಳಿದ ಬಳಿಕ ನನಗೆ ಸ್ವಲ್ಪ ಅರ್ಥವಾಯಿತು. ವೇಶ್ಯಾವಾಟಿಕೆಗೆ ಹೆಣ್ಣುಗಳನ್ನು ಸರಬರಾಜು ಮಾಡುವ ಕುರಿತಾದ ವಿವರವೆಂದು. ನಾನು ಇಂತಹ ಸಣ್ಣ ಸುದ್ದಿಗಳನ್ನು ನಮ್ಮ ಸ್ಥಳೀಯ ಪತ್ರಿಕೆಗಳಲ್ಲಿ ಓದಿದ್ದೆ. ಆದರೆ ಗಂಭೀರ ಅಧ್ಯಯನ ಮಾಡಿ ಇದರ ಬಗ್ಗೆ ಒಂದು ಪ್ರಾಜೆಕ್ಟ್ ಮಾಡಬಹುದು ಅಂಥ ಯೋಚಿಸಿಲ್ಲ. ಈ ಬಗ್ಗೆ ಅಧ್ಯಯನ ಸಾಮಾಗ್ರಿಗಳೂ ವಿಶ್ವವಿದ್ಯಾಲಯದ ಲೈಬ್ರೇರಿಯಲ್ಲಿ ಸಿಗಲಾರದು. ಪಿ. ರೈ ತೆಗೆದುಕೊಂಡ ಸಬ್ಜೆಕ್ಟ್ ಅವಳೇ ಎಲ್ಲಾ ತಯಾರಿ ನಡೆಸಬಹುದು ನನ್ನದೇನಿದ್ದರು ಅವಳಿಗೆ ಸ್ವಲ್ಪ ಸಹಾಯಮಾಡುವುದು ಎಂದು ನಾನು ಸ್ವಲ್ಪ ನಿರುತ್ಸಾಹಿತನಾಗಿದ್ದೆ.ದಿನಗಳೆದಂತೆ ನಮ್ಮ ಸಬ್ಜೆಕ್ಟ್ ಬಗ್ಗೆ ನನಗೆ ಬಹಳಷ್ಟು ವಿಷಯಗಳು ಅರ್ಥವಾಗಿ ಸಮಸ್ಯೆ ಎಷ್ಟು ಜಟಿಲವಾದುದು ಎಂದು ಗೊತ್ತಾಯಿತು. ನನ್ನ ಉತ್ಸಾಹವೂ ಜಾಸ್ತಿಯಾಯಿತು. ಎಲ್ಲಾ ಬೇಸಿಕ್ ಕೆಲಸಗಳನ್ನು ಮಾಡಿದೆವು. ಇದು ಡಾಕುಮೆಂಟರಿ ಆಗಿದ್ದುದರಿಂದ ಶೂಟಿಂಗ್ ಮಾಡ್ಬೇಕು. ಅದೂ ನಿಜವಾಗಿರುವ ವ್ಯಕ್ತಿಗಳನ್ನು. ನಾನು ಅಲ್ಲಿ ಇಲ್ಲಿ ವಿಚಾರಮಾಡಿ ಕೆಲವು ಕಾರ್ಯನಿರತ ಪತ್ರಕರ್ತ ಮಿತ್ರರನ್ನು ವಿಚಾರಿಸಿ, ಪೊಲೀಸ್ ಫ್ರೆಂಡ್ ಗಳನ್ನು ಕೇಳಿ ನಮ್ಮ ನಗರದಲ್ಲಿರುವ ಕೆಲವು ಕೆಂಪು ದೀಪಗಳ ಜಾಗಗಳನ್ನು ಹುಡುಕಿದೆ. ಪಿ. ರೈ ನನ್ನ ಜತೆಗೇ ಇರುತ್ತಿದ್ದಳು. ಅಧ್ಯಯನ ಮಾಡುವ ಹುಡುಗರಾಗಿದ್ದುದರಿಂದ ನಾವು ಏನು ಬೇಕಾದರು ಮಾಡಬಹುದಿತ್ತು ಎಂಬ ಹುಂಬತನ ನಮ್ಮಲ್ಲಿತ್ತು. ವೇಶ್ಯಾವಾಟಿಕೆ ಎಂಬುದು ಒಂದು ದೊಡ್ಡ ಜಾಲ. ಅದರಲ್ಲಿ ಅಂಡರ್ ವರ್ಲ್ಡ್ ಜತೆಗೆ ಸುಸಂಸ್ಕೃತರೂ ಸೇರಿರುತ್ತಾರೆ ಎಂಬುದು ನಮಗೆ ಮುಖ್ಯವಾಗಿ ನನಗೆ ಅರ್ಥವಾಗಲು ಶುರುವಾಯಿತು. ರಿಕ್ಷಾ ಡ್ರೈವರ್ ಗಳು, ಹೋಟೆಲ್ ಪರಿಚಾರಕರು, ಪಾನ್ ಬೀಡಿ ಅಂಗಡಿಯವರ ಜತೆಗೆ ಪತ್ರಕರ್ತರು, ವ್ಯಾಪಾರಿಗಳು, ಪ್ರವಾಸಿಗರು ಇತ್ಯಾದಿ ನಾನು ಅಂದುಕೊಳ್ಳದ ಜನರೆಲ್ಲಾ ಸೇರಿದ್ದಾರೆ. ಬಾಚಿದಷ್ಟೂ ವಿಷಯಗಳು ನಮಗೆ ದೊರೆತವು. ನಮ್ಮ ಮಿತ್ರನೊಬ್ಬನ ಮಿತ್ರನನ್ನು ಹಿಡಿದು ವಿಡಿಯೋ ಕ್ಯಾಮರ ಬಾಡಿಗೆಗೆ ತರಿಸಿದೆವು. ಅದರ ಜತೆಗೆ ಕ್ಯಾಮರಮ್ಯಾನ್. ವ್ಯವಹಾರ ನಡೆಯುವ ಗಲ್ಲಿಗಲ್ಲಿಗಳ ವಿಡಿಯೋ ಶೂಟಿಂಗ್ ಮಾಡಿದೆವು. ಪಿ. ರೈ ಕೂಡ ಬಹಳಷ್ಟು ಇನ್ ವಾಲ್ವ್ ಆಗಿ ಕೆಲಸ ಮಾಡಲು ತೊಡಗಿದ್ದಳು. ನನ್ನಿಂದಾಗದ ಕೆಲಸಗಳನ್ನೂ ಅವಳು ಮಾಡಿದಳು. ಗಲ್ಲಿಯ ಹೋಟೆಲೊಂದರ ಹುಡುಗನಿಗೆ ಹಣಕೊಡಲು ಶುರುಮಾಡಿದಳು. ಹೇಗಾದರೂ ಮಾಡಿ ಒಬ್ಬ ಹುಡುಗಿಯ ಜತೆ ನಮ್ಮ ಮಾತುಕತೆ ನಡೆಸಬೇಕು ಎಂದು. ಈ ಲೋಕದ ಬಗ್ಗೆ ನಮಗೆ ಬಹಳಷ್ಟು ರಿಯಲ್ಟಿ ಗೊತ್ತಿಲ್ಲದ ಕಾರಣ ನಮ್ಮ ಕೆಲವೊಂದು ಊಹೆಗಳು ತಪ್ಪಾಗುತ್ತಿದ್ದವು. ಕೆಲವೊಮ್ಮೆ ಆಶ್ಚರ್ಯಗಳು ಸಿಗುತ್ತಿದ್ದವು. ಮುದಿ ಹೆಂಗಸರಿಂದ ಹಿಡಿದು ಸಣ್ಣ ಹುಡುಗಿಯರ ವರೆಗೆ ಈ ವ್ಯವಹಾರದಲ್ಲಿರುತ್ತಾರೆ ಎಂದು ನನಗೆ ತಿಳಿದು ಮನಸ್ಸು ಗೋಜಾಲಾಗಿತ್ತು. ಬಹಳಷ್ಟು ಜನರ ಜತೆ ಮಾತಾಡಿದ ನಂತರ ಒಬ್ಬಳು ಹುಡುಗಿಯ ವಿವರ ನಮ್ಮ ಪ್ರಾಜೆಕ್ಟ್ ಗೆ ಅನುಕೂಲಕರವಾಗಿತ್ತು. ಅವಳನ್ನು ಸಂದರ್ಶಿಸಿ ವಿಡಿಯೋ ಶೂಟಿಂಗ್ ಮಾಡುವ ಕುರಿತು ಮಾತಾಯಿತು. ಆ ಹುಡುಗಿಯ ಮಾಲಕಿ ಹಣ ಕೇಳಿದಳು. ನಾವು ಬಹಳ ಬಾರ್ಗೈನ್ ಮಾಡಿದೆವು. ಆ ಮಾಲಕಿ ಪಿ. ರೈ ಗಿಂತ ನನ್ನ ಮೇಲೆ ಹೆಚ್ಚು ಭರವಸೆ ತೋರಿಸಿದಳು. ನನಗೆ ಇದರಲ್ಲೇನೋ ಅಡಗಿರಬಹುದು ಎಂದು ಅನಿಸಿತು. ಮಾಲಕಿ ಪಿ. ರೈಗೆ ಅಂದಳು 'ಆ ಹುಡುಗ ಬರಲಿ ನೀನು ಬರುವುದು ಬೇಡ' ಎಂದು. ನಾನು ಒಬ್ಬನೆ ಹೋಗಲಾರೆ ಎಂದು ನನ್ನ ಹಟ. ಕೊನೆಗೆ ನಮ್ಮ ಕ್ಯಾಮರಮ್ಯಾನ್ ನಮ್ಮನ್ನೂ ಬೈಯುತ್ತಾ (ಈ ಪ್ರಾಜೆಕ್ಟ್ ತೆಗೆದು ಕೊಂಡಿದ್ದಕ್ಕೆ) ಒಂದು ಇಂಟರ್ ವ್ಯೂ ಶೂಟಿಂಗ್ ಮಾಡಿದ. ಹುಡುಗಿಯ ಮುಖ ಕ್ಯಾಮರದಲ್ಲಿ ಸೆರೆಹಿಡಿಯಲಿಲ್ಲ. ಅವಳು ನೇಪಾಲಿ ಹುಡುಗಿಯಾಗಿದ್ದಳು. ವಯಸ್ಸು ಇಪ್ಪತ್ತು ಆಗಿರಲಾರದು. ಮುಖದಲ್ಲಿ ಮುಗ್ದತೆ ಎದ್ದು ಕಾಣುತ್ತಿತ್ತು. ಕ್ಯಾಮರ ಚಾಲು ಮಾಡುವುದಕ್ಕಿಂತ ಮೊದಲು ಸುಮಾರು ಅರ್ಧ ಗಂಟೆ ನಾನು ಮತ್ತು ಪಿ. ರೈ ಅವಳಲ್ಲಿ ಮಾತಾಡಿಸಿ ಅವಳನ್ನು ಒಂದು ಮಾನಸಿಕ ಸಮತೋಲನಕ್ಕೆ ತಂದಿದ್ದೆವು. ಒಂದು ಹತ್ತು ಹದಿನೈದು ನಿಮಿಷ ಅವಳು ಕ್ಯಾಮರಕ್ಕಾಗಿ ಮಾತಾಡಿದಳು. ಅವಳ ಮಾಲಕಿ ಹತ್ತಿರವಿರಬಾರದೆಂದು ನಾವು ಪ್ಲಾನ್ ಮಾಡಿದ್ದರೂ ಆಕೆ ಬಂದಳು. ನಮ್ಮ ಕ್ಯಾಮರಮ್ಯಾನ್ ಸುಳಿವು ಸಿಕ್ಕೊಡನೆ ಕ್ಯಾಮರ ಬ್ಯಾಟರಿ ಸರಿಯಿಲ್ಲ ನಾಳೆ ಬರುವ ಎಂದು ನೊಣೆ ಹೇಳಿದ. ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ. ನನ್ನ ಆಲೋಚನೆಗಳು, ಈ ವೃತ್ತಿಯ ಕುರಿತಾದ ವಿವರಗಳು, ಆ ಹುಡುಗಿಯ ಮುಗ್ದ ಮುಖದ ಹಿಂದಿರುವ ಭೀಕರ ನರಕ ಸದೃಶ ವ್ಯವಹಾರದ ಕುರಿತು ಚಿಂತಿತನಾಗಿದ್ದೆ. ಪ್ರಾಜೆಕ್ಟ್ ಅನ್ನು ಮಾಡಲೇ ಬೇಕೆಂಬ ಛಲ ಹಾಗೂ ನಾವು ಹಿಡಿದ ವಿಷಯದ ಆತಂಕಗಳು ನಮ್ಮನ್ನು ಹುರಿದುಂಬಿಸುತ್ತಿದ್ದವು. ಮರುದಿನ ನಾವು ಹೋದೆವು. ನಮಗೆ ಹುಡುಗಿ ಸಿಗಲಿಲ್ಲ. ಹೋಟೆಲ್ ಹುಡುಗನು ಸಿಗಲಿಲ್ಲ. ನಿರಾಶರಾದೆವು. ಅದರ ಮರುದಿನ ಹೋದೆವು. ಹುಡುಗಿ ಇದ್ದಳು. ಅವಳ ಮಾಲಕಿ ನಾವು ಮಾಡುವ ಕೆಲಸ ಸರಿಯಲ್ಲ ಎಂದಳು. ನಮ್ಮ ಪ್ರೊಫ಼ೆಸರ್ ಹೆಸರು, ನಮ್ಮ ಮನೆಯವರ ಹೆಸರು ವಿಳಾಸ ಕೇಳಿದಳು. ನಾವು ಕೊಟ್ಟೆವು. ನಾಳೆ ಬನ್ನಿ ಎಂದು ಹೇಳಿ ಆ ದಿನವನ್ನೂ ಕಳೆದಳು. ನಮಗೆ ಆತಂಕ ಹೆಚ್ಚಾಯಿತು. ಪ್ರಾಜೆಕ್ಟ್ ಕೊಡಲು ಇನ್ನು ಒಂದೆ ವಾರವಿರುವುದು. ಇದು ಕೊನೆಯ ಶೂಟಿಂಗ್. ಇನ್ನು ಎಡಿಟಿಂಗ್ ಮಾಡಲಿಕ್ಕಿದೆ. ಕ್ಯಾಮರ ಬಾಡಿಗೆ ಅನಾವಶ್ಯಕ ಪೋಲಾಗುತ್ತಿದೆ. ಇತ್ಯಾದಿ ನಮ್ಮ ತಲೆಯಲ್ಲಿ ಸುತ್ತುತ್ತಿದ್ದವು. ನಾವು ಅವಳು ಹೇಳಿದ ಸಮಯಕ್ಕೆ ಹೋದೆವು. ನಾವು ಕ್ಯಾಮರ ಚಾಲು ಮಾಡುವುದಕ್ಕಿಂತ ಮೊದಲೇ ಕೆಲವು ಗಂಡಸರು ಬಂದು ನಮ್ಮನ್ನು ಬೈದರು. ನಾವು ವಿವರಿಸಲು ಹೊರಟೆವು. ನಮ್ಮ ಕ್ಯಾಮರಮ್ಯಾನ್ ಕೂಡ ಹೇಳಿದ. ಸಿಟ್ಟಾದ ಆ ಗೂಂಡಗಳು ಕ್ಯಾಮರವನ್ನು ಕಿತ್ತುಕೊಂಡರು. ನಾವು ಕೊಡಿರೆಂದು ಬೇಡಿದೆವು. ಒಬ್ಬ ಕುಡುಕ ಜೋರಾಗಿ ಕ್ಯಾಮರವನ್ನು ಗೋಡೆಗೆ ಅಪ್ಪಲಿಸಿದ. ಅದರೊಳಗಿನ ಕ್ಯಾಸೆಟ್ ಕೆಳಗೆ ಬಿತ್ತು. ಅದನ್ನು ಕಾಲಿನಿಂದ ಒದ್ದು ಪುಡಿ ಮಾಡಿದ. ನಾವು ಪಟ್ಟ ಶ್ರಮವೆಲ್ಲಾ ಹುಡಿಹುಡಿಯಾಗಿತ್ತು. ಅದರ ಟೇಪ್ ಹಾಳಗಿತ್ತು. ನಮ್ಮ ಕೈಗೆ ಸಿಕ್ಕಿದನ್ನು ಹಿಡಿದುಕೊಂಡು ನಾವು ಓಡಿ ಬಂದೆವು. ಪ್ರಾಜೆಕ್ಟ್ ಹಾಳಾದ ಬಗ್ಗೆ ಪ್ರೊಫೆಸರ್ ಗೆ ಹೇಳಿದೆವು. ಏನು ಮಾಡುವುದೆಂದು ನಮಗೂ ಗೊತ್ತಾಗಲಿಲ್ಲ. ಸಮಯಕ್ಕಿಂತ ಮುಂಚೆ ಕೊಡಲೇ ಬೇಕು. ನಮ್ಮಿಂದಾಗದು ಎಂದೆವು. ಎಲ್ಲಾ ವಿವರಿಸಿದ ಬಳಿಕ ನಾವು ಒಂದು ಲಿಖಿತ ಪ್ರಾಜೆಕ್ಟ್ ಸಬ್‍ಮಿಟ್ ಮಾಡುವುದು ಎಂದು ನಿರ್ಧರಿಸಿ ಪ್ರೊಫೆಸರ್ ರನ್ನು ಒಪ್ಪಿಸಿದೆವು. ಮುರಿದ ಕ್ಯಾಮರ, ಮುಗಿಯದ ಪ್ರಾಜೆಕ್ಟ್ ನಮ್ಮ ಪಾಲಿಗಾಯಿತು. ನನಗೆ ಮತ್ತು ಪಿ. ರೈ ಗೆ ಪ್ರಾಜೆಕ್ಟ್ ನಲ್ಲಿ ಎಲ್ಲರಿಗು ದೊರೆತ ಅಂಕದ ಅರ್ಧದಷ್ಟು ಸಿಕ್ಕಿತು. ಆದರೆ ಆ ಪ್ರಾಜೆಕ್ಟ್ ಕಲಿಸಿದ ಪಾಠ ನಮ್ಮ ಬದುಕಿನ ಅತ್ಯಂತ ಅಮೂಲ್ಯವಾದುದು. ನಾನಿಲ್ಲಿ ಬರೆದುದಕ್ಕಿಂತ ಹೆಚ್ಚು ಅನುಭವಗಳನ್ನು ಅನುಭವಿಸಿದರೂ ಅವನ್ನು ನಾನು ಬರೆಯಲಾರೆ. ಹತ್ತು ದಿನಗಳ ನಂತರ ಬಂದ ಮೈಲ್‍ನಲ್ಲಿ ಪಿ. ರೈ ಬರೆದಿದ್ದಳು ಆಕೆ ಥಾಯ್‍ಲ್ಯಾಂಡ್‍ಗೆ ಹೋಗಿ ಇದೇ ಪ್ರಾಜೆಕ್ಟ್‍ಗೆ ಬೇಕಾದ ಒಬ್ಬಳಲ್ಲ ನಾಲ್ಕು ಹುಡುಗಿಯರನ್ನು ಇಂಟರ್ ವ್ಯೂ ಮಾಡಿ ತಂದಿದ್ದಾಳೆ. ಅದನ್ನು ಡಾಕುಮೆಂಟರಿ ಸಿನಿಮಾ ಮಾಡಲು ಎಡಿಟಿಂಗ್‍ಗಾಗಿ ನನ್ನನ್ನೂ ಕರೆದಿದ್ದಾಳೆ. ಬಹಳ ವರ್ಷಗಳ ನಂತರ ಮತ್ತೆ ಎಡಿಟಿಂಗ್ ಟೇಬಲ್‍ನಲ್ಲಿ ಕುಳಿತುಕೊಳ್ಳಲು ಕಾತುರನಾಗಿದ್ದೇನೆ. ಆದರೆ ಆ ಮುಗ್ದ ನೇಪಾಲಿ ಹುಡುಗಿಯ ಮುಗ್ದ ಮುಖದ ನೆನಪು ಇನ್ನೂ ಇದೆ.


ಒಲವಿನಿಂದ


ಬಾನಾಡಿ


No comments:

Post a Comment