Wednesday, March 26, 2008

ಕನ್ನಡದ ನಕ್ಷತ್ರಗಳು

ಬ್ಲಾಗುಗಳನ್ನು ಪಟ್ಟಿ ಮಾಡಿದಷ್ಟು ಹೊಸ ಬ್ಲಾಗುಗಳು ಸಿಗುತ್ತಿವೆ. ಈಗಾಗಲೇ ಸುಶ್ರುತ ದೊಡ್ಡೇರಿಯವರು ಮುನ್ನೂರೈವತ್ತು ಬ್ಲಾಗುಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ನಾನು ಇನ್ನೂರೈವತ್ತು ಹಿಡಿದು ಸ್ವಲ್ಪ ವಿರಮಿಸುತ್ತಾ ಹಿಡಿಯುತ್ತಿದ್ದೇನೆ. ಇನ್ನೊಂದು ವರ್ಷದೊಳಗೆ ಸಂಖ್ಯೆ ಐನೂರು ದಾಟಿ ಸಾವಿರದಷ್ಟಿರಬಹುದು ಎಂಬ ಆಲೋಚನೆ ಬರ್ತದೆ. ಸ್ವಲ್ಪ ದಿನದ ನಂತರ ಪಟ್ಟಿಯನ್ನು ಕಳಚಿಕೊಳ್ಳಲೂ ಬಹುದು.
ಬ್ಲಾಗುಗಳ ಸಮ್ಮೇಳನ ನಡೆದ ನಂತರ ಬಹಳ ಚರ್ಚೆಗಳನ್ನು ಬ್ಲಾಗುಗಳಲ್ಲಿ ಓದಿದ್ದೇನೆ. ನನ್ನ ಅಭಿಪ್ರಾಯದಂತೆ ಬ್ಲಾಗು ಬರೆಯುವವರ ಸಮ್ಮೇಳನ ಅದು ಔಪಚಾರಿಕ ಅಥವಾ ಅನೌಪಚಾರಿಕ ಸ್ನೇಹ ಮಿಲನ ಅಥವಾ ಯಾವುದೇ ರೀತಿಯಲ್ಲಿ ನಡೆಯಬೇಕಾಗಿಲ್ಲ. ನಮಗೆ ಇರುವ ವೇದಿಕೆ ಈ ಅಂತರ್ಜಾಲ. ಅದರಲ್ಲಿ ನಮ್ಮ ನಮ್ಮದೇ ಚಾಪೆ, ಕುರ್ಚಿ, ಆರಾಮಾಸನ ಇತ್ಯಾದಿ ಹಾಕಿ ನಮಗೆ ಬೇಕಾದಂತೆ ಬರೆಯುತ್ತೇವೆ. ಬೇಕಾದವರು ಓದುತ್ತಾರೆ. ಮರೆತು ಬಿಡುತ್ತಾರೆ. ಕೆಲವೊಮ್ಮೆ ಮಹತ್ವದ ಸಂಗತಿಗಳು ನಮಗೆ ಬ್ಲಾಗು ಬರೆಯುವವರಿಂದ ಸಿಗಬಹುದು. ಬ್ಲಾಗ್ ಬರೆಯುವವರು ತಮ್ಮ ಮನಸನ್ನು ಅಂತರ್ಜಾಲದಲ್ಲಿ ತೆರೆದುಕೊಂಡಿರುವುದರಿಂದ ಕೆಲವೊಮ್ಮೆ ನಮಗೆ ಅವರ ಕುರಿತು ವಿಶೇಷ ಭಾವನೆಗಳು ಬರುತ್ತಿರಬಹುದು. ಅದು ನಿಜ ಬದುಕಿನಲ್ಲಿ ಸತ್ಯವಾಗಲಾರದು. ಅಥವಾ ಸತ್ಯವಾಗಲೂ ಬಹುದು. ಅಂದರೆ ಬ್ಲಾಗ್ ನಮ್ಮ ವ್ಯಕ್ತಿತ್ವದ ಒಂದಂಶ ಮಾತ್ರ. ಈಗ ನಾನೇ ಈ ಎಲ್ಲಾ ಬ್ಲಾಗ್ ಗಳನ್ನು ಪಟ್ಟಿ ಮಾಡುವ ಪ್ರಯತ್ನಮಾಡಿದ್ದು ಕೆಲವರಿಗೆ ಸರಿಯಾದ ಕೆಲಸವೆನಿಸಿದರೆ ಕೆಲವರಿಗೆ ಸರಿಯಲ್ಲ ಎಂದೆನಿಸಬಹುದು. ನನಗೆ ಹೇಗನಿಸುವುದೋ ಹಾಗೆ ನಾನು ಮಾಡುವೆ. ಐನೂರು ಬ್ಲಾಗ್ ಆಗುವ ವರೆಗೆ ಲಿಂಕ್ ಕಲ್ಪಿಸುತ್ತಾ ಹೋಗುವೆ. ಅಥವಾ ಒಂದೇ ಗಳಿಗೆಯಲ್ಲಿ ಲಿಂಕ್ ಗಳನ್ನೇ ತುಂಡರಿಸಿ ತೆಗೆಯುವೆ. ಇದು ನನ್ನ ವೈಯಕ್ತಿಕ ನಿಲುವಿನ ಮೇಲೆ ನಿಂತಿರುತ್ತದೆ.
ಕನ್ನಡದ ಬಹುತೇಕ ಬ್ಲಾಗ್ ಗಳು ಕವನಗಳನ್ನು ಪ್ರಕಟಿಸುವ ತಾಣಗಳಾಗಿವೆ ಎಂಬ ಅಭಿಪ್ರಾಯವಿದೆ. ಇರಲಿ. ಪತ್ರಿಕೆಗಳು ಅಥವಾ ಇನ್ಯಾವುದೇ ವೇದಿಕೆ ಸಿಗದಿದ್ದಾಗ ಬರೆಯುವವರು ಬರೆದು ಬಿಟ್ಟಿದ್ದಾರೆ.
ಬ್ಲಾಗ್ ಗಳು ಹೇಗಿರಬೇಕು ಹೇಗಿರಬೇಡ ಎಂದು ಹೇಳುವ ಅಧಿಕಾರ ಯಾರಲ್ಲೂ ಇಲ್ಲ. ಇದೇ ಅದರ ಮೂಲಗುಣ.
ಅಯ್ಯೋ ಮಾರಯ್ರೆ, ನಾನು ಇಲ್ಲಿ ಏನು ಬರೆದಿದ್ದೇನೆ ಎಂದು ನಿಮಗಾಗಿ ಬರೆಯುತ್ತಿಲ್ಲ. ನಿಮಗೆ ಇಷ್ಟವಾದರೆ ಓದಿ. ಇನ್ನೂ ಇಷ್ಟವಾದರೆ ಕಮೆಂಟ್ ಮಾಡಿ. ಆದರೆ ನಾನು ಅಂತರ್ಜಾಲದಲ್ಲಿರುವುದರಿಂದ ಹಾಗೂ ನನಗೂ ಒಂದು ನಿಜ ಬದುಕಿನ ವ್ಯಕ್ತಿತ್ವ ವಿರುವುದರಿಂದ ನಾನು ನನ್ನದೇ ಆದ ಜವಾಬ್ದಾರಿಯಿಂದ ಬ್ಲಾಗಿಸುತ್ತೇನೆ ಅಥವಾ ಇಲ್ಲಿನ ಜಾರ್ಗನ್ ನಂತೆ 'ಕುಟ್ಟುತ್ತೇನೆ'.
ಕನ್ನಡದ ಬ್ಲಾಗುಗಳು ಕನ್ನಡವನ್ನು ಉಳಿಸಲು ಬಹಳ ಕೊಡುಗೆ ನೀಡುತ್ತಿವೆ ಎಂಬ ಮಾತನ್ನು ನಾನು ನಂಬಿದ್ದೇನೆ. ಕನ್ನಡದಲ್ಲಿ ಇರುವಂತೆ ಇನ್ನಿತರ ಭಾಷೆಗಳಲ್ಲೂ ಬ್ಲಾಗ್ ಗಳು ತುಂಬಿವೆ. ಗುಣಮಟ್ಟ, ವಿಷಯ ವೈವಿಧ್ಯ, ಹಾಗೂ ಉಪಯುಕ್ತತೆಯಲ್ಲಿ ಬಹಳಷ್ಟು ಉತ್ತಮಬ್ಲಾಗುಗಳಿವೆ. ಸದ್ಯ ನನ್ನನ್ನು ಬ್ಲಾಗುಗಳ ಹೆಬ್ಬಾಗಿಲು ಎಂದು ನಾನೇ ಕರೆಯುತ್ತಿರುವ ನನ್ನ ಬ್ಲಾಗಿಗೆ ನಿಮಗೆಲ್ಲ ಮತ್ತೊಮ್ಮೆ ಸ್ವಾಗತ.
ನಿಮ್ಮ ಬ್ಲಾಗು ನನ್ನ ಪಟ್ಟಿಯಲ್ಲಿ ಇಲ್ಲದಿದ್ದರೆ ಮತ್ತು ನೀವು ಅದಿಲ್ಲಿ ಇರಬೇಕು ಎಂದು ಅನಿಸಿದರೆ ನನ್ನ ಬ್ಲಾಗಿನ ಕಮೆಂಟ್ ವಿಭಾಗದಲ್ಲಿ ನಿಮ್ಮ ವಿಳಾಸ ತಿಳಿಸಿ. ನಿಮಗೆ ವಂದನೆಗಳು.
ಬ್ಲಾಗಿಸುವುದು ನಿಮ್ಮ ಧರ್ಮ. ಅವುಗಳನ್ನು ಹಿಡಿದು ಲಿಂಕಿಸುವುದು ಸಧ್ಯ ನನ್ನ ಹವ್ಯಾಸ.
ಒಲವಿನಿಂದ
ಬಾನಾಡಿ

3 comments:

 1. ಕನ್ನಡದಲ್ಲಿ ಪಟ್ಟಿ ಮಾಡಲಾಗದಷ್ಟು ಬ್ಲಾಗುಗಳಾಗಲಿ ಮತ್ತು ಅವು ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆಯಾಗಿ ಬರೀ ಅಂತರ್ಜಾಲಕ್ಕೆ ಸೀಮಿತವಾಗಿರದೇ ಎಲ್ಲರಿಗೂ ಸಿಗುವಂತಾಗಲಿ ಎಂಬುದು ನನ್ನ ಹಾರೈಕೆ. ನಿಮ್ಮ ಬ್ಲಾಗ್ ಪಟ್ಟಿ ಕೆಲಸಕ್ಕೆ ಶ್ಲಾಘನೆ ಮತ್ತು ಧನ್ಯವಾದ.

  ReplyDelete
 2. ಸರ್,
  ನಮಸ್ತೆ..
  ನಿಮ್ಮ ಮಾತಿಗೆ ನನ್ನ ಸಹಮತವಿದೆ.
  ಹೌದು ಮಾರಾಯ್ರೆ ಕನ್ನಡ ಉಳಿಸಲು ಬ್ಲಾಗ್ ತನ್ಮದೇ ಕೊಡುಗೆ ನೀಡಿದೆ.
  ಚಿತ್ರಾ

  ReplyDelete
 3. ತಮ್ಮ ಬ್ಲಾಗನ್ನು ಎಲ್ಲರೂ ಓದಬೇಕು ಎ೦ದು ಎಲ್ಲರೂ ಬಯಸುವ ಸ೦ದರ್ಭದಲ್ಲಿ, ಬೇರೆಯವರ ಬ್ಲಾಗನ್ನು ಲಿ೦ಕಿಸಿ ಅದನ್ನು ಓದುವ ನಿಮ್ಮ ಕೆಲಸ ಅತ್ಯ೦ತ ಪ್ರಶ೦ಸನೀಯ.
  ನನ್ನ ಬ್ಲಾಗನ್ನು ಲಿ೦ಕಿಸಿದ್ದಕ್ಕೆ ತು೦ಬಾ ಧನ್ಯವಾದಗಳು.

  ReplyDelete