Friday, March 21, 2008

ಶುಭ ಶುಕ್ರವಾರದಂದು ಸಾಲುವಿಗೊಂದು ಸಾಲು

ಐರಿನ್ ನಮ್ಮ ನೆರೆಮನೆಯವಳು. ನನ್ನ ಅಕ್ಕನ ಹತ್ತಿರದ ಸ್ನೇಹಿತೆ. ಅವಳು ಅವರ ಮನೆಯಲ್ಲಿ ಒಬ್ಬಳೆ ಮಗಳು. ಉಳಿದವರು ಎಲ್ಲಾ ಗಂಡು ಮಕ್ಕಳು. ದೊಡ್ಡವನು ಜಫ್ರಿ, ನಂತರ ರಿಕ್ಸಾ, ಜೋನ್, ಸಾಲು, ಕೊನೆಯವನು ಫ್ರೆಡ್. ಇದೆಲ್ಲ ಅವರ ಕರೆಯುವ ಹೆಸರುಗಳು. ಅವರ ಪೂರ್ತಿ ಹೆಸರು ಅವರ ಇಗರ್ಜಿಯಲ್ಲಿ ಇರಬಹುದು. ಅವರೆಲ್ಲಾ ಬೇರೆಯೇ ಕಡೆ ಶಾಲೆಗೆ ಹೋಗಿದ್ದರಿಂದ ಶಾಲೆಯಲ್ಲಿಯು ಅವರ ಪೂರ್ತಿ ಹೆಸರೇನೆಂದು ನನಗೆ ಗೊತ್ತಿಲ್ಲ. ಜಫ್ರಿ ಮತ್ತು ರಿಕ್ಸಾ ಅದಾಗಲೇ ಊರು ಬಿಟ್ಟು ದುಬಾಯಿಗೆ ಕೂಡ ಹೋಗಿ ಆಗಿದೆ. ಅವರು ವರ್ಷಕೊಮ್ಮೆಯೋ ಬರುವಾಗ ತರುವ ದೊಡ್ಡ ದೊಡ್ಡ ಚೀಲಗಳು ಮಾತ್ರ ನಮಗೆ ಅಚ್ಚರಿ ಹಾಗೂ ಕುತೂಹಲವನ್ನು ತರುತ್ತದೆ. ಚೀಲದೊಳಗಿಂದ ತೆಗೆದು ತಂದ ಪರಿಮಳದ ಸಾಬೂನು ಅಥವಾ ಗ್ಲುಕೋಸ್ ಬಿಸ್ಕಿಟ್‍ಗಳಷ್ಟೇ ನಮಗೆ ಸಿಗುತ್ತಿತ್ತು. ಜೋನ್ ಸ್ವಲ್ಪ ಚುರುಕಿನ ಹುಡುಗ. ತನ್ನ ತಂದೆ ತಾಯಿಯರ ಬಗ್ಗೆ ಆತನಿಗೆ ಭಾರಿ ಪ್ರೀತಿ ಮತ್ತು ಹೆಮ್ಮೆ. ಹಾಗಾಗಿ ಆತ ಅವಕಾಶ ಸಿಕ್ಕರೂ ಪರದೇಶಕ್ಕೆ ಅಥವಾ ಮುಂಬಯಿ ಯಾ ಬೆಂಗಳೂರಿಗೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದ. ಸಮಯ ಕಳೆಯಲು ಸಂಜೆ ಹೊತ್ತು ಕಟ್ಟೆಯಲ್ಲಿ ಹಾಲ್ಟ್ ಆಗುವ ಬಸ್ಸನ್ನು ತೊಳೆಯುವುದೋ, ಡಾಕ್ಟರ್ ಅವರ ಮನೆಗೆ ರೇಶನ್ ನಿಂದ ಬೆಳ್ತಿಗೆ ಅಕ್ಕಿ, ಸಕ್ಕರೆ ಮತ್ತೆ ಸೀಮೆ ಎಣ್ಣೆ ತರುವುದೋ ಮಾಡುತ್ತಿದ್ದ. ಅವರ ಖರ್ಚಿಗೆ ಪರದೇಶದಲ್ಲಿದ್ದ ಮಕ್ಕಳು ಕೊಟ್ಟ ಹಣ ಸಾಕಾಗುತ್ತಿತ್ತು. ಆದರೆ ಅವರ ತಾಯಿ ಬಾಯಮ್ಮ ಹತ್ತಿರದ ಯಾರದೆ ಅಡಿಕೆ ತೋಟದಲ್ಲಿ ಮದ್ದು ಬಿಡುವಾಗ ಪಂಪಿಗೆ ಗಾಳಿ ಹಾಕುವುದಕ್ಕೋ, ಅಡಿಕೆ ಕೊಯ್ಯುವಾಗ ಅದನ್ನು ಹೆಕ್ಕಿ ಬುಟ್ಟಿಯಲ್ಲಿ ತುಂಬಿ ಅಂಗಳದ ವರೆಗೆ ತಲುಪಿಸುವುದಕ್ಕೋ, ಯಾರದೇ ಹಟ್ಟಿಯಲ್ಲಿ ದನವು ಕರು ಹಾಕಿದರೆ ಅದರ ಬಾಣಂತನಕ್ಕೋ ಅಂಥ ಹೇಳಿಕೊಂಡು ಕೆಲಸ ಮಾಡುತ್ತಿದ್ದಳು. ಇದೆಲ್ಲಾ ಅವಳ ಅನೌಪಚಾರಿಕ ಕೆಲಸ. ಸಂಬಳ ಕೊಡ ಬೇಕೆಂದೇನು ಇಲ್ಲ. ಆದರೆ ಕೆಲಸ ಮಾಡಿಸಿದವರು ಅವಳಿಗೆ ಮನೆಖರ್ಚಿಗೆ ಬೇಕಾದ ತೆಂಗಿನಕಾಯಿ, ತರಕಾರಿ, ಜತೆಗೆ ಹತ್ತರದೋ, ಇಪ್ಪತ್ತರದೋ ನೋಟೊಂದನ್ನು ನೀಡಿ ಅವಳ ಮನಸ್ಸನ್ನು ತುಂಬುತ್ತಿದ್ದರು. ಅವಳು ಸಾಕುತ್ತಿದ್ದ ಕೋಳಿಗಳೂ ಸಡನ್ನಾಗಿ ಯಾರದೋ ಮನೆಗೆ ನೆಂಟರು ಬಂದರೆ ನೆರವಿಗೆ ಬರುತ್ತಿದ್ದವು.


ಸಾಲು ಕೂಡಾ ಕೆಲವು ವರ್ಷ ಶಾಲೆಗೆ ಹೋಗಿ ಓದುವುದನ್ನು ಬಿಟ್ಟು ಬಿಟ್ಟ. ಅಣ್ಣ ಜೋನ್‍ನೊಟ್ಟಿಗೋ ಅಥವಾ ಮಮ್ಮದೆಯ ಮಗ ಹಸೈನಾರ್ ಜತೆಗೋ ಇರುತ್ತಿದ್ದ. ಜೋನ್ ಸಂಜೆ ನಿಂತ ಬಸ್ಸನ್ನು ತೊಳೆಯುತ್ತಿದ್ದನಲ್ಲ ಅದೇ ಬಸ್ಸಿನ ಕ್ಲೀನರ್ ಆಗಿ ಸಾಲು ಕೆಲಸಕ್ಕೆ ಸೇರಿದ. ಆ ಬಸ್ಸಿನ ಡ್ರೈವರ್ ದೇವಪ್ಪ ನಾಯಕ್‍ರ ಮಗ ಅಚ್ಚು. ಅಚ್ಚು ಬಸ್ಸು ಬಿಡುವುದೆಂದರೆ ವಿಮಾನ ಹಾರಿಸುವಂತೆ. ನಮ್ಮ ಊರಿನ ಗುಡ್ಡ ಕಣಿವೆಗಳ ಏಳಿರಿಜಾರುಗಳ ಅನಿರೀಕ್ಷಿತ ತಿರುವುಗಳಲ್ಲೆಲ್ಲಾ ಅವನು ಲೀಲಾಜಾಲವಾಗಿ ಬಸ್ಸು ಬಿಡುತ್ತಾನೆ. ನಮ್ಮ ಊರಿನಿಂದ ಮಂಗಳೂರಿಗೆ ನೇರ ಬಸ್ ಸೌಕರ್ಯ ಆರಂಭಗೊಂಡಾಗ ಅವನೇ ಬಸ್ಸಿನ ಡ್ರೈವರ್ ಆಗಲು ಲಾಯಕ್ಕಾದ ವ್ಯಕ್ತಿಯಾಗಿದ್ದ. ಒಂದೇ ಸ್ಪೀಡಲ್ಲಿ ಓಡಿಸುವ ಕೇಶವನಾಗಲೀ, ಸಣ್ಣ ಸಣ್ಣ ಹೊಂಡಗಳಿಗೂ ಬ್ರೇಕ್ ಹಾಕುವ ಪೀರ್ ಸಾಯಿಬರಾಗಲೀ ಮಂಗಳೂರಿಗೆ ಹೋಗುವ ಬಸ್ಸಿನ ಡ್ರೈವರಾಗಲು ಲಾಯಕ್ಕಲ್ಲ ಎಂದು ನಮ್ಮ ಸೋಮಾರಿಕಟ್ಟೆಯ ಸಭೆ ನಿರ್ಣಯಿಸಿತ್ತು. ಆ ನಿರ್ಣಯ ಪೇಟೆಯಲ್ಲಿದ್ದ ಕೃಷ್ಣ ಶೆಟ್ಟಿಗೂ ಗೊತ್ತಾಗಿ ಅಚ್ಚುನನ್ನೆ ಮಂಗಳೂರು ಬಸ್ಸಿನ ಡ್ರೈವರ್ ನನ್ನಾಗಿ ನೇಮಕಗೊಳಿಸಲಾಯಿತು.

ಇತ್ತ ಸಾಲು ಆ ಬಸ್ಸಿನ ಕ್ಲಿನರ್ ಆಗಬಹುದು ಎಂಬ ಆಶೆಯನ್ನು ಹೊತ್ತುಕೊಂಡು ಅಚ್ಚುನ ಗೆಳೆತನ ಮಾಡಲಾರಂಭಿಸಿದ. ಅಚ್ಚು ಬೆಳಿಗ್ಗೆ ಮಂಗಳೂರಿಗೆ ಹೊರಡುವಾಗ ಬಸ್ಸಿನಲ್ಲಿ ಅಗರಬತ್ತಿ ಹಚ್ಚಿ ನಮಸ್ಕರಿಸುವಾಗ ಸಾಲು ಬಂದು ಅಚ್ಚುವಿಗೆ ನಮಸ್ಕರಿಸುವುದು ರೂಢಿಯಾಯಿತು. ಊರಿನ ಯಾರೆಲ್ಲ ಮಂಗಳೂರಿಗೆ ಹೊರಟ್ಟಿದಾರೆ ಎಂದು ಹಿಂದಿನ ಸಂಜೆಯೇ ಲೆಕ್ಕ ಹಿಡಿದು ಕೊಳ್ಳುತ್ತಿದ್ದ ಸಾಲು. ಯಾರಾದರು ಬಸ್ಸು ಹೊರಡುವ ಸಮಯಕ್ಕೆ ತಲುಪದಿದ್ದರೆ ಅಚ್ಚುವಿನೊಡನೆ ಸಾಲು ಹೇಳುತ್ತಿದ್ದ "ಗುಡ್ಡೆ ಮನೆಯ ರಾಮಚಂದ್ರ ಭಟ್ಟರು ನಿನ್ನೆ ಹೇಳುತ್ತಿದ್ದರು ಇವತ್ತು ಮಂಗಳೂರಿಗೆ ಹೋಗಲಿಕ್ಕುಂಟು ಅಂತ. ತುಕ್ರ ತನ್ನ ಟಿ.ಬಿ.ಗೆ ಮದ್ದು ತರಲು ಚೀಟಿ ಕೂಡಾ ಭಟ್ಟರಲ್ಲಿ ಕೊಟ್ಟಿದ್ದ. ಅವರಿಗೆ ಐದು ನಿಮಿಷ ಕಾಯೋಣ" ಎಂದು. ಅಷ್ಟರಲ್ಲಿ ಭಟ್ಟರು ಏದುಸಿರು ಬಿಡುತ್ತಾ ಅಡಿಕೆಯ ಸಣ್ಣ ಚೀಲವನ್ನೆ ಹೊತ್ತುಕೊಂಡು ಬಸ್ಸಿಗೆ ಓಡಿಕೊಂಡು ಬರುತ್ತಿದ್ದರು.

ಸಾಲುವಿನ ಪ್ರಯತ್ನ ಯಶಸ್ವಿಯಾಗಲು ಅವನ ಶ್ರಮದ ಪ್ರತಿಫಲವೋ ಅಥವಾ ಏಸುವಿನ ಕೃಪೆಯೋ ಗೊತ್ತಿಲ್ಲ. ಅದುವರೆಗೆ ಮಂಗಳೂರು ಬಸ್ಸಿಗೆ ಕ್ಲೀನರ್ ಆಗಿದ್ದ ಅಬ್ಬಾಸ್ ನಿಗೆ ದುಬಾಯಿಯಿಂದ ವೀಸ ಬಂದು ಅವನು ಇನ್ನು ಒಂದು ವಾರದೊಳಗೆ ದುಬಾಯಿಗೆ ಹೋಗುವುದೂ ಎಂದಾಯಿತು. ನಿರಾತಂಕವಾಗಿ ಕ್ಲೀನರ್ ಕೆಲಸ ಸಾಲುವಿಗೆ ಸಿಕ್ಕಿತು. ಎರಡು ದಿನ ಮಂಗಳೂರಿಗೆ ಹೋಗಿ ಬಂದ ಸಾಲು ಮಂಗಳೂರಿನ ಭಾಷೆಯನ್ನು ನಿರರ್ಗಳವಾಗಿ ಮಾತಾಡಲು ಆರಂಭಿಸಿದ. "ಜಪ್ಪುಲೆ, ಮಿತೇರ್ಲೆ, ದುಂಬು ಪೋಯಿ, ಹೋಲ್ಡಾನ್, ರೈಟ್ ಪೋಯಿ" ಇವೆಲ್ಲವನ್ನು ಒಂದು ವಾರದೊಳಗೆ ಕಲಿತ ಸಾಲು ತುಂಬಾ ನಿಯತ್ತಿನ ಹುಡುಗ ಎಂದು ಊರಿನವರೆಲ್ಲರ ಮೆಚ್ಚುಗೆ ಮಾತ್ರವಲ್ಲ ಬಸ್ಸಿನ ಪಯಣಿಗರ ಶಾಭಾಶ್ ಅನ್ನೂ ಪಡೆದ. ಹೊರ ಊರಿಂದ ಯಾರಾದರು ಬಸ್ಸಲ್ಲಿ ಬಂದು ನಮ್ಮ ಊರಿನಲ್ಲಿ ಇಳಿದು ಅವರಿಗೆ ಇಲ್ಲಿನವರ ಮನೆ ಗೊತ್ತಿಲ್ಲವಾದರೆ ಸ್ವತಹಾ ಸಾಲು ಯಾರನ್ನಾದರೂ ಪರಿಚಯಸ್ಥರನ್ನು ಹೇಳಿ ಅವರನ್ನು ಕಳುಹಿಸುತ್ತಿದ್ದ.

ಸಾಲು ಭಾನುವಾರ ಮಾತ್ರ ಬೆಳಗ್ಗಿನ ಟ್ರಿಪ್ ಮಿಸ್ ಮಾಡುತ್ತಿದ್ದ. ಕಾರಣ ಚರ್ಚಿಗೆ ಹೋಗಬೇಕಿತ್ತು. ಉಳಿದಂತೆ ಅವನಿಗೆ ರಜಾ ಇರುತ್ತಿರಲ್ಲಿಲ್ಲ. ಕೆಲವೊಮ್ಮೆ ಮಾತ್ರ ಅವನು ಒಂದು ಟ್ರಿಪ್ ಮಂಗಳೂರಿನಲ್ಲಿ ಮಿಸ್ ಮಾಡುತ್ತಿದ್ದ. ಅಲ್ಲಿ ಪೇಟೆ ಸುತ್ತಲು ಹೋಗುತ್ತಿದ್ದ. ಸಂಜೆಯಾದರೆ ಒಂದು ಸಿನಿಮಾ ನೋಡಿ ಬರುತ್ತಿದಾನೋ ಏನೋ.

ಬಸ್ ಕ್ಲೀನರ್ ಆಗಿದ್ದ ಸಾಲು ಒಂದು ದಿನ ಕಂಡಕ್ಟರೋ ಅಥವಾ ಡ್ರೈವರೋ ಆಗಬಹುದು ಎಂದು ಆತನ ಹಿತೈಷಿಗಳೆಲ್ಲಾ ಎಣಿಕೆ ಹಾಕುತ್ತಿದ್ದರು.

ಇದ್ದಕಿದ್ದಂತೆ ಸಾಲು ನಾಪತ್ತೆ ಯಾದ ಸುದ್ದಿ ಊರಿಡೀ ಹಬ್ಬಿತು. ಸಾಲುವಿನ ಮೃತ ದೇಹ ನಮ್ಮದೇ ಪಕ್ಕದೂರಿನ ಗೋಪಾಲಭಟ್ಟರ ಬಾವಿಯಲ್ಲಿ ತೇಲುತ್ತಿದೆ ಎಂದು ನಾಲ್ಕೈದು ದಿನಗಳ ನಂತರ ತಿಳಿಯಿತು. ಸಾಲು ಯಾಕೆ ನಾಪತ್ತೆ ಯಾದ ಹೇಗೆ ಸತ್ತ ಎಂಬ ವಿಚಾರದ ಬಗ್ಗೆ ಮುಕ್ತವಾಗಿ ಮಾತುಕತೆಗಳೇ ಇರಲ್ಲಿಲ್ಲ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಮಾಡಿದನೆಂದು ಎಲ್ಲರೂ ಅಂದುಕೊಳ್ಳುವವರೇ. ಅವನ ತಾಯಿ, ಅಕ್ಕ ಐರಿನ್, ಇತರ ಸೋದರರೂ ಸಾಲುನ ಸಾವನ್ನು ಸಾವಾಕಾಶವಾಗಿ ಆತ್ಮಹತ್ಯೆಯೆಂದೇ ಒಪ್ಪಿಕೊಂಡರು. ನಾನು ನಮ್ಮೂರಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಕುಳಿತು ಅವನದೇ ಯೋಚನೆಯಲ್ಲಿ ಮುಳುಗುತ್ತಿದ್ದೆ. ಪ್ರತಿಯೊಂದು ಪ್ರಯಾಣವೂ ನನಗೆ ಸಾಲುನ ನೆನಪನ್ನು ತರುತ್ತಿತ್ತು. ನಾನು ಸಾಮಾನ್ಯವಾಗಿ ಹಿಂದಿನ ಬಾಗಿಲಿನ ಮುಂದಿನ ಸೀಟಿನಲ್ಲಿ ಕುಳಿತು ಕೊಳ್ಳುತ್ತಿದ್ದೆ. ಹಿಂದೆ ಸಾಲು "ರೈಟ್ ಪೋಯಿ" ಹೇಳುವಂತೆ ಅನಿಸುತ್ತಿತ್ತು. ಈಗ ಬಸ್ಸಿನ ಕ್ಲೀನರ್ ಬೇರೆಯವನು. ಆದರೆ ನನಗೆ ಬಸ್ಸು ಹತ್ತುವಾಗ ಇಳಿಯುವಾಗ ಸಾಲುನ ನೆನಪು ಮಾತ್ರ ಮರೆಯಲಾಗುತ್ತಿಲ್ಲ.

ಸಾಲು ಮರೆಯಾಗಿ ಒಂದೆರಡು ವರ್ಷವಾಗಿತ್ತು. ನನ್ನ ಅಕ್ಕನೊಂದಿಗೆ ಒಂದು ದಿನ ಮಾತಾಡುತ್ತಾ ಕುಳಿತ್ತಿದ್ದೆ. ಮಾತಿನ ಮಧ್ಯೆ ಸಾಲುನ ನೆನಪುಗಳು, ಮಾತುಗಳು ಬಂದವು. ಅಕ್ಕನಲ್ಲಿ ನಾನಂದೆ "ಸಾಲುನ ಸಾವು ಗೂಢವಾಗಿಯೇ ಉಳಿಯಿತಲ್ಲ" ಎಂದು. ಅದಕ್ಕವಳು "ಅಲ್ಲ. ಗೂಢವಾಗಿಲ್ಲ. ಎಲ್ಲರಿಗೂ ಗೊತ್ತು. ಆತ ಯಾಕೆ ಸತ್ತ. ಯಾರು ಕೊಂದರು. ಹೇಗೆ ಕೊಂದರು. ಎಲ್ಲಿ ಕೊಂದರು. ಎಲ್ಲ ವಿವರ ನಮ್ಮ ಊರಿನ ಎಲ್ಲರಿಗೂ ಗೊತ್ತು. ಆದರೆ ಯಾರೂ ಗೊತ್ತಿದೆ ಎಂದು ಹೇಳುವುದಿಲ್ಲ."

ಸಾಲುವನ್ನು ಚಿಕ್ಕಂದಿನಿಂದಲೂ ಬಹಳಷ್ಟು ಹಚ್ಚಿಕೊಂಡಿದ್ದ ನನಗೆ ಅಕ್ಕ ಸಾಲುವಿನ ಸಾವಿನ ಕತೆ ಹೇಳಲು ಆರಂಭಿಸಿದಳು.

ಸಾಲು ಮಂಗಳೂರಿಗೆ ಬಸ್ಸಿನಲ್ಲಿ ಕ್ಲೀನರ್ ಆಗಿ ಹೋಗಲು ಆರಂಭವಾದಂತೆ ಕೋಡಿಮನೆಯ ಸುಬ್ಬಣ್ಣ ಭಟ್ಟರ ಮಗಳು ಶ್ರೀದೇವಿಯೂ ಕಾಲೇಜಿಗೆ ಹೋಗಲು ಆರಂಭಿಸಿದಳು. ಮಂಗಳೂರಿಗೆ ಸಾಲುನ ಬಸ್ಸಲ್ಲೇ ಹೋಗುವುದು ಬರುವುದು. ಅವಳು ಸಾಲುವನ್ನು ಮಾತಾಡಿಸಿ ಕೊಳ್ಳುತ್ತಿದ್ದಳು. ಸಾಲು ತನ್ನ ಕೆಲಸ ವನ್ನು ಮಾತ್ರ ಗಮನವಿಟ್ಟು ಕೊಳ್ಳುತ್ತಿದ್ದ. ಶ್ರೀದೇವಿ ಮಂಗಳೂರಿಗೆ ಕಾಲೇಜಿಗೆ ಹೋಗುವವಳು ಮಂಗಳೂರಿನ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂದು ಸಾಲು ಐರಿನ್ ಗೆ ಹೇಳಿದ್ದ. ಐರಿನ್ ಸಾಲುವಿನೊಡನೆ "ಈ ಮಾತನ್ನು ನನ್ನಲ್ಲಿ ಹೇಳಿದಂತೆ ಇನ್ಯಾರಲ್ಲೂ ಹೇಳಬೇಡ. ನಿನ್ನನ್ನು ಸಿಗಿದು ಹಾಕ್ಯಾರು" ಎಂದೆಚ್ಚರಿಸಿದಳು. ಸಾಲುವಿಗೆ ಮಂಗಳೂರಿನ ಹುಡುಗನೊಡನೆ ತನ್ನ ಪ್ರೀತಿ ಪ್ರಣಯ ಗೊತ್ತಿದೆ ಎಂದು ಶ್ರೀದೇವಿಗೂ ಗೊತ್ತಾಯಿತು. ಹಾಗಾಗಿ ಅವನೊಡನೆ ಬಹಳ ಸ್ನೇಹದಿಂದ ವರ್ತಿಸುತ್ತಿದ್ದಳು. ಕೆಲವೊಮ್ಮೆ ತಿಂಡಿ ಪೊಟ್ಟಣವನ್ನೂ ಮನೆಯಿಂದ ತಂದು ಸಾಲುಗೆ ಕೊಡುತ್ತಿದ್ದಳು. ಇವೆಲ್ಲವನ್ನು ಕಂಡ ನಮ್ಮ ಊರವರು ಸಾಲು ಮತ್ತು ಶ್ರೀದೇವಿ ನಡುವೆ ಅದೇನೋ ಇದೆ ಎಂಬ ಗುಮಾನಿಯಲ್ಲಿ ಮಾತಾಡಲು ತೊಡಗಿದ್ದರು. ಸಾಲುವಿಗೂ ಹೆಮ್ಮೆ ಆಗುತ್ತಿತ್ತು. ಊರಿನ ಒಳ್ಳೆಯ ಮನೆತನದ ಭಟ್ಟರ ಸುಂದರಿ ಹುಡುಗಿಯೊಬ್ಬಳು ತನ್ನೊಡನೆ ಸ್ನೇಹದಿಂದಿರುವುದು ಅವನಿಗೂ ಖುಷಿಕೊಟ್ಟಿತ್ತು. ಶ್ರೀದೇವಿ ಮಂಗಳೂರಿಗೆ ತಲುಪಿದೊಡನೆ ಅಲ್ಲಿ ಬೈಕ್‍ನಲ್ಲಿ ಕಾಯುತ್ತಿರುವ ಹುಡುಗನನ್ನು ಕಂಡು ಸಾಲು ಕೂಡ ಕರುಬುತ್ತಿದ್ದ ಎಂದು ಐರಿನ್ ಹೇಳುತ್ತಿದ್ದಳು. ಅವರಿಬ್ಬರೂ ಎಲ್ಲೆಲ್ಲಾ ಸುತ್ತಿ ಸಂಜೆ ಮತ್ತೆ ಅವಳು ಅದೇ ಬಸ್ಸಲ್ಲಿ ಬರುತ್ತಿದ್ದಳು. ಶ್ರೀದೇವಿಯ ಪ್ರಣಯ ಅವಳು ಗರ್ಭಿಣಿಯಾಗುವವರೆಗೆ ಬಂತು. ಆದರೆ ಇದು ಅವಳ ಮನೆಯಲ್ಲಿ ಅವಳಮ್ಮ ಶಾರದಮ್ಮನಿಗೆ ಮಾತ್ರ ಗೊತ್ತಾಯಿತು. ಬಸ್ಸಿನಲ್ಲಿ ಹೋಗುತ್ತಿದ್ದ ಶ್ರೀದೇವಿ ಮಂಗಳೂರು ತಲುಪುತ್ತಿದ್ದಂತೆ ಒಂದೆರಡು ಬಾರಿ ವಾಂತಿ ಮಾಡಿದ್ದನ್ನು ಸಾಲು ಬಂದು ಐರಿನ್ ಗೆ ಹೇಳಿದ್ದ. ಐರಿನ್ ಎಲ್ಲಾ ತಿಳಿದಿದ್ದಳು. ಅವಳಿಗೆ ಶ್ರೀದೇವಿ ಬಗ್ಗೆ ಕನಿಕರವು ಹುಟ್ಟಿತು. ಶ್ರೀದೇವಿ ವಾಂತಿ ಮಾಡಿದನ್ನು ಊರಿನವರೂ ಬಸ್ಸಲ್ಲಿ ಹೋಗುವಾಗ ಕಂಡಿದ್ದಾರೆ. ಕೆಲವು ಬಚ್ಚಾಲಿಗಳು ಸಾಲುನಿಗೆ "ನೀನು ಬೇಗ ಅಪ್ಪ ಆಗುತ್ತೀಯ" ಎಂದು ಕೂಡ ಹೇಳಿದ್ದರು. ಈ ಎಲ್ಲಾ ಮಾತು ಸುಬ್ಬಣ್ಣ ಭಟ್ಟರ ಕಿವಿಗೂ ಬಿತ್ತು. ಸುಬ್ಬಣ್ಣ ಭಟ್ಟರು, ಶೇಷಪ್ಪಯ್ಯನವರು, ಮಾಸ್ಟರು ಎಲ್ಲ ಸೇರಿ ಸಮಾಲೋಚಿಸಿದರು. ಶ್ರೀದೇವಿಯೊಡನೆ ಇದಕ್ಕೆಲ್ಲಾ ಯಾರು ಕಾರಣ ಎಂದು ಕೇಳಲಿಲ್ಲ. ಸಾಲುವೇ ಕಾರಣವೆಂದು ಊರೆಲ್ಲ ತಿಳಿದ ಮೇಲೆ ಕೇಳುವುದೆಂತದ್ದು. ಅವನ ಹೆಸರು ಹೇಳದೆ ಶ್ರೀದೇವಿಯೊಡನೆ ಹೇಳಿದರು "ನೋಡು ಇನ್ನು ನೀನು ಅವನೊಡನೆ ಹೋಗಬಾರದು. ಆಗಿದ್ದು ಆಯಿತು. ಮಂಗಳೂರಿನಲ್ಲಿಯೇ ಹೋಗಿ ಮದ್ದು ಕೊಡಿಸಿ ಇಳಿಸಿ ಬಿಡುವ. ಅವನೊಟ್ಟಿಗೆ ಇನ್ನು ಹೋದರೆ ಅವನೊಂದಿಗೆ ನಿನ್ನನ್ನೂ ಇಲ್ಲವಾಗಿಸುವೆ." ಶ್ರೀದೇವಿ "ಇಲ್ಲ ನಾನು ಅವನನ್ನೇ ಮದುವೆಯಾಗುವೆ. ಅವನೇ ನನ್ನ ಗಂಡ ಅವನು ಸತ್ತರೆ ನಾನೂ ಸಾಯುವೆ" ಎಂದು ತರ್ಕ ಹಿಡಿದಳು. "ನಾಳೆ ಪರೀಕ್ಷೆ ಯಿದೆ ನೀನು ಮಂಗಳೂರಿಗೆ ಹೋಗಿ ಅಲ್ಲಿರುವ ನಿನ್ನ ಅತ್ತೆ ಮನೆಯಲ್ಲಿರು. ನಾನು ಮತ್ತು ಅಮ್ಮ ನಾಡಿದ್ದು ಬರುತ್ತೇವೆ. ಡಾಕ್ಟರ್ ರನ್ನು ನೋಡೋಣ" ಎಂದು ಕೊನೆ ಮಾತು ಹೇಳಿದರು. ಶ್ರೀದೇವಿ ಮಂಗಳೂರಿಗೆ ಹೋದಳು. ಸುಬ್ಬಣ್ಣ ಭಟ್ಟರು ಸಂಜೆ ಬಸ್ಸಿನಿಂದ ಇಳಿದ ನಂತರ ಸಾಲುನನ್ನು "ಬಾ ನಮ್ಮ ಜೀಪಿನಲ್ಲಿ ಕೂತುಕೋ" ಎಂದು ಕರೆದುಕೊಂಡು ಹೋದುದನ್ನು ಯಾರೂ ನೋಡಿರಲ್ಲಿಲ್ಲ. ಒಬ್ಬರನ್ನು ಬಿಟ್ಟರೆ.

ಮೊನ್ನೆ ನಾನು ಪುಣೆಗೆ ಹೋದಾಗ ನನ್ನ ಗೆಳೆಯ ನಾಗೇಶ್ ಶೆಣೈಯನ್ನು ಮಾತಾಡಿಸಿಕೊಂಡು ಬರಲೆಂದು ಅವರ ಅಪಾರ್ಟ್ ಮೆಂಟ್‍ಗೆ ಹೋಗಿದ್ದೆ. ಪಕ್ಕದ ಮನೆಯಲ್ಲಿ ಮಂಗಳೂರಿನವರೇ ಆದ ನರೇಶ್ ಪೈ ಇದ್ದಾನೆ ಎಂದ. ಅವರದು ಇಂಟರ್ ಕಾಸ್ಟ್ ಮದುವೆ ಎಂದ. ಬೆಳಿಗ್ಗೆ ಹೊರಡುವಾಗ ಪೈ ದಂಪತಿಗಳು ಸಿಕ್ಕರು. ಶ್ರೀದೇವಿ ನಮಸ್ಕಾರ. ಬಾನಾಡಿಯವರಲ್ವ? ಎಲ್ಲಿದ್ದೀರಿ ಈಗ? ಮಂಗಳೂರ? ಬೆಂಗಳೂರ? ಬೊಂಬಾಯಿಯಾ? ಅಲ್ಲ ದಿಲ್ಲಿಯಾ? ಅಂದಳು.

ಈಗ ಪುಣೆಯಲ್ಲೇ ಇದ್ದೀನಲ್ವ! ನಿಮ್ಮೆದುರೇ! ಅಂದೆ. "ಇಲ್ಲ ಮಂಗಳೂರು ಬಸ್ಸಿನ ಕ್ಲೀನರ್ ಆಗಿದ್ದೇನೆ. ಸಾಲು ಸತ್ತ ನಂತರ ಯಾರೂ ಸಿಕ್ಕಿಲ್ಲ." ಅಂತ ಹೇಳಿತು ಮನ.

ಸಾಲುವಿಗೆ: ನಿನ್ನ ನೆನಪು ಮಂಗಳೂರು ಬಸ್ಸಿನಲ್ಲಿ ಮಾತ್ರವಿತ್ತು. ಈಗ ಅದು ಮಹಾನಗರಗಳ ಅಪಾರ್ಟ್ ಮೆಂಟ್ ಗಳೊಳಗಿನ ಮನೆಗಳಲ್ಲೂ ಬರುತ್ತಿದೆ. ಮುಗ್ದತೆಗೆ ನೀನು ಮತ್ತೊಂದು ಹೆಸರು.ಸತ್ತು ಮತ್ತೆ ಹುಟ್ಟಿದ ಜೀಸಸ್ ನ ನೆನೆಪಿನೊಂದಿಗೆ ಈ ಶುಭಶುಕ್ರವಾರ ಮತ್ತು ಈಸ್ಟರ್ ಗೆ ನಿನ್ನ ನೆನಪು ಮತ್ತೆ ಮತ್ತೆ ಕಾಡುತ್ತಿದೆ ಸಾಲು. ನಿನ್ನ ಬಸ್ಸಿನಲ್ಲಿ ಹಿಂದಿನ ಬಾಗಿಲಿನ ಮುಂದಿನ ಸೀಟು ನನಗಿರಲಿ. ನೀನು ರೈಟ್ ಪೋಯಿ ಎನ್ನುವುದಕ್ಕಿಂತ ಮೊದಲು ಬರುವೆ ಆ ನನ್ನ ಸೀಟಿಗಾಗಿ. ನಿನ್ನ ಬಸ್ಸಿನಲ್ಲಿ.
ಒಲವಿನಿಂದ
ಬಾನಾಡಿ

7 comments:

 1. ಸಾಲುವಿಗೆ ನನ್ನದೂ ಎರಡು ಕಣ್ಣ ಹನಿ.... ಈ ಬಾರಿ ಜೊತೆಗೆ ಬಂದಿರುವ ಸರ್ವಧರ್ಮಗಳ ಶುಭ ಶಕ್ರವಾರದ ನೆನಪಿಗೆ ಒಂದು ಹೃದಯಸ್ಪರ್ಶಿ ಲೇಖನ.

  ಧನ್ಯವಾದಗಳು.
  ಜೋಮನ್.

  ReplyDelete
 2. ಮಾನವನ ತಪ್ಪು ತಿಳುವಳಿಕೆಗಳು ಕೆಲವು ಸಂದರ್ಭದಲ್ಲಿ ಆಪತ್ತು ತರುತ್ತವೆ ಎನ್ನುವುದಕ್ಕೆ ಲೇಖನದಲ್ಲಿ ತುಂಬಾ ಚೆನ್ನಾಗಿ ವರ್ಣಿಸಿದ್ದಿರಿ. ಸಾಲುವಿಗೆ ಇಂಥಹ ಸಾವು ಬರಬಾರದಿತ್ತು.
  ಲೇಖನ ತುಂಬಾ ಚೆನ್ನಾಗಿ ಬರೆದಿದ್ದೀರಿ. ಬಾನಾಡಿ.
  ಬ್ರಹ್ಮಾನಂದ ನಾ. ಹಡಗಲಿ

  ReplyDelete
 3. ಉತ್ತಮ ಹಾಗೂ ಪ್ರತಿಫಲಯುಕ್ತ ಪ್ರಯತ್ನ.... ಕನ್ನಡ ಬ್ಲಾಗುಗಳ ಮಿಲನ... ಸಮ್ಮಿಲನ...

  ಆರ್.ರಾಘವೇಂದ್ರ, ಚಳ್ಳಕೆರೆ.
  www.chitharadurga.com
  ಚಿತ್ರದುರ್ಗ ಜಿಲ್ಲೆಯ ಕನ್ನಡ ಅಂತರ್ಜಾಲ ತಾಣ....

  ReplyDelete
 4. ಸಾಲುವಿಗೆ ನನ್ನದೂ ಒಂದು ನಮನ...
  ನಾನೂ ನಿಮ್ಮ ಬ್ಲಾಗಿಗೆ ಲಿಂಕು ಕಲ್ಪಿಸುತ್ತೇನೆ ..ಧನ್ಯವಾದಗಳು;-)

  ReplyDelete
 5. ಓದಿ ಮುಗಿಸಿದ ಮೇಲೂ ಸಾಲು ಕಾಡುತ್ತಿದ್ದಾನೆ. ಇದು ನಿಜ ಕಥೆಯಾ?

  ReplyDelete
 6. ಸಾಲುವಿನ ಕಥೆ ನೆನೆದು ಮನಸ್ಸು ಹಳಹಳಿಸಿತು.

  ReplyDelete
 7. Thumba Chenmnagide baraha.EXCELLENT.Thanks for the nice Article--Nellambhudhudhi

  ReplyDelete