Thursday, March 6, 2008

ಪೆಟ್ಟು ತಿಂದ ಹಂದಿ

ಗುಡ್ಡಗಳ ನಡುವೆಯಿರುವ ಕಣಿವೆ ಪ್ರದೇಶದ ನಮ್ಮ ಅಡಿಕೆ ತೋಟ ಫಲವತ್ತಾಗಿಯೇ ಇದೆ. ಅಡಿಕೆಯ ಜತೆಗೆ ತೆಂಗು, ಬಾಳೆ, ಕರಿಮೆಣಸು, ಕೊಕ್ಕೋ ದಂತಹ ವಾಣಿಜ್ಯ ಬೆಳೆಗಳು, ಮಾವು, ಹಲಸು, ವಿವಿಧ ಹುಳಿಗಳ ಮರಗಳು (ಹುಣಸೆ, ಬೀಂಪುಳಿ, ಪುನರ್‍ಪುಳಿ, ಚೆಂಡ್ ಪುಳಿ), ನುಗ್ಗೆ, ಪೇರಳೆ, ಪಪ್ಪಾಯಿ, ಚಿಕ್ಕು, ಸಂಪಿಗೆ ಮರ, ಇತ್ಯಾದಿ ಗಿಡ ಮರಗಳಿಂದ ನಮಗೆಲ್ಲ ಬಹಳ ಚೆನ್ನಾಗಿರುವ ತೋಟವೇ ಇದೆ. ಗುಡ್ಡದಲ್ಲಿ ಬೇಕಾದಷ್ಟು ಮರಗಿಡಗಳಿದ್ದು ತೋಟಕ್ಕೆ ಬೇಕಾದ ಸೊಪ್ಪು ಕೂಡಾ ಸಿಗುತ್ತದೆ.
ಅವತ್ತು ನಮ್ಮ ತೋಟಕ್ಕೆ ಬೆಳಿಗ್ಗೆ ಎದ್ದು ಹೋದಾಗ ನಮಗೆಲ್ಲ ಆಶ್ಚರ್ಯ ಕಾದಿತ್ತು. ತೋಟದ ಬಾಳೆ, ಮುಂಡಿ, ಮೊದಲಾದ ಗಿಡಗಳ ಬುಡಗಳನ್ನು ಕೊರೆದು ಚೆಲ್ಲಿದಂತಿತ್ತು. ಮನೆಗೆ ಬಂದು ನಾನು ವರದಿ ಒಪ್ಪಿಸಿದೆ. ಹಂದಿ ಬಂದಿರಬೇಕು ಎಂದುಕೊಂಡು ಎಲ್ಲರೂ ತೋಟಕ್ಕೆ ಹೋದರು. ಮೊನ್ನೆ ಕೇಶವ ಭಟ್ಟರ ತೋಟಕ್ಕೆ ಹಂದಿ ಬಂದಿತಂತೆ. ಆ ಸುದ್ದಿ ಊರೆಲ್ಲಾ ಹಬ್ಬಿದ್ದರೂ ನನಗೆ ತಿಳಿದಿರಲ್ಲಿಲ್ಲ. ಹಾಗಾಗಿ ನಾನು ಹಂದಿ ಬಂದು ನಮ್ಮ ತೋಟವನ್ನೆಲ್ಲಾ ಕೆಡಿಸಿಬಿಟ್ಟುದ್ದನ್ನು ಊಹಿಸಲಾಗಲ್ಲಿಲ್ಲ.
ನಮ್ಮ ತೋಟಕ್ಕೂ ಕಾಡಿನ ಹಂದಿ ಬಂದು ಎಲ್ಲವನ್ನು ಕೆಡಿಸಿಬಿಟ್ಟಿದ್ದು ಸಂಜೆಯಾಗುತ್ತಲೇ ಊರಿಡಿ ಸುದ್ದಿ ಹಬ್ಬಬಹುದೆಂದು ನಾನು ತಿಳಿದೆ. ಊರಿನವರಿಗೆ ಇಂತಹ ಸುದ್ದಿಗಳೇ ರೋಚಕ ಹಾಗೂ ರಮಣೀಯವಾಗಿರುತ್ತದೆ. "ತೋಟಕ್ಕೆ ಕಾಡ ಹಂದಿ ಬಂದು ಎಲ್ಲ ಕೆಡಿಸಿಬಿಟ್ಟಿತಂತೆ ಹೌದಾ?" ಎಂದು ಕನಿಕರ ವ್ಯಕ್ತಪಡಿಸುವವರೂ ಇದ್ದರು.
ಮಾರನೆ ರಾತ್ರಿ ಮತ್ತೆ ಹಂದಿಗಳು ಬಂದು ತೋಟವನ್ನು ಹಾಳುಗೆಡವಲು ಆರಂಭಿಸಿದ್ದವು. ಮನೆಯ ನಾಯಿಗಳು ಜೋರಾಗಿ ಬೊಗಳಿ ಮಲಗಿದ್ದವು. ತೋಟದಲ್ಲಿ ನಡೆಯುವ ಕಾಡು ಹಂದಿಗಳ ಕೆಲಸಕ್ಕೆ ಅಡ್ಡಿಯಾಗದಂತೆ ಸುಮ್ಮನೆ ಮಲಗಿವೆ. ನನಗು ಆಶ್ಚರ್ಯ. ಮರುದಿನ ಬೆಳಿಗ್ಗೆ ತೋಟ ಕುರುಕ್ಷೇತ್ರದ ರಣರಂಗವಾಗಿತ್ತು.
ಈ ಕಾಡುಹಂದಿಗಳ ಎದುರು ಹೋರಾಡಲು ನಮ್ಮಲ್ಲೂ ಒಂದು ತಂಡ ಸಿದ್ದವಾಗತೊಡಗಿತು. ಅವುಗಳು ಬರುವ ದಾರಿಯಲ್ಲಿ ಸರಿಗೆಯ ಉರುಳು ಇಡುವುದು, ಖೆಡ್ಡಾ ನಿರ್ಮಿಸುವುದು, ಕೋವಿಯಿಂದ ಹೊಡೆದು ಬೇಟೆಯಾಡುವುದು, ಇತ್ಯಾದಿ ರಣನೀತಿಗಳೂ ತಯಾರಾದವು. ಗುಡ್ಡೆ ಮನೆಯ ನಾರಾಯಣ ನಾಯ್ಕ, ಅವನ ಅಣ್ಣ ತನಿಯಪ್ಪ, ಮಾಂಕು, ಕಿಟ್ಟು ಬೆಳ್ಚಾಡ, ತೇರಪ್ಪು ಎಲ್ಲಾ ಸೇರಿ ನಮ್ಮ ಗುಡ್ಡದ ಬೆನ್ನ ಮೇಲಿನ ವಿಷ್ಣುಭಟ್ಟರ ಮನೆಯಿಂದ ಕೋವಿ ತರಿಸಿದರು. ಅವರ ಕೆಲಸದವ ಫಕೀರಾ ಕೂಡಾ ಜತೆಗೆ ಬಂದಿದ್ದ. ಹಂದಿಯನ್ನು ಕೊಲ್ಲಲು ಗನ್ ತಂದ ನಾರಾಯಣ ನಾಯ್ಕ ತನ್ನ ಜಾಗೆಯ ತಕರಾರಿನಲ್ಲಿರುವ ಇನ್ನೊಬ್ಬ ಅಣ್ಣನನ್ನು ಕೊಂದು ಬಿಡುವನೋ ಎಂಬ ಹೆದರಿಕೆ ಇತ್ತೇನೋ? ಒಂದು ವೇಳೆ ಹಾಗಾದರೆ ಕೋವಿ ಕೊಟ್ಟ ವಿಷ್ಣುಭಟ್ಟರೂ ಕೋರ್ಟಿಗೆ ಅಳೆಯಬೇಕಾಗಬಹುದಲ್ಲವಾ?
ಹಂದಿ ಗುಡ್ಡದಲ್ಲೆಲ್ಲೋ ಇರುವುದು ಖಾತ್ರಿ ಎಂದು ಎಲ್ಲರ ಅಭಿಪ್ರಾಯವಾಗಿತ್ತು. ಹಗಲು ಮಲಗಿರುವ ಆಯಕಟ್ಟಿನ ಕೆಲವಾರು ಜಾಗಗಳ ಬಗ್ಗೆ, ಗುಡ್ಡದ ಬಗ್ಗೆ ಜ್ಞಾನವಿರುವ ಮಾಂಕು ವಿವರಿಸ ತೊಡಗಿದ. ನಾರಾಯಣ ನಾಯ್ಕ ಎರಡು ತಂಡ ಮಾಡಿದ. ಒಂದು ತಂಡ ಹೀಗೆ ದಕ್ಷಿಣದಿಂದ ಉತ್ತರಕ್ಕೆ ಹೋಗುವುದು. ಇನ್ನೊಂದು ಉತ್ತರದಿಂದ ದಕ್ಷಿಣಕ್ಕೆ ಬರುವುದು. ಕತ್ತಿ, ದೊಣ್ಣೆ, ಕೋಲು ಹಿಡಿದ ಎಲ್ಲರೊಂದಿಗೆ ಕೋವಿ ಹಿಡಿದ ನಾರಾಯಣ ನಾಯ್ಕ ಮತ್ತು ಕೋವಿಯ ಉಸ್ತುವಾರಿ ಫಕೀರಾ ಜತೆಜತೆಯಾಗಿ ಹೋಗುತ್ತಿದ್ದರು. (ಶೂಟಿಂಗ್‍ಗೆ ಹೊರಟ ಕ್ಯಾಮಾರಮ್ಯಾನ್ ಮತ್ತು ಕ್ಯಾಮರದ ಮಾಲೀಕನ ಅಸಿಸ್ಟೆಂಟ್ ತರ). ನಾವೆಲ್ಲ ಉತ್ತರ ದಿಕ್ಕಿನಿಂದ ಹೊರಟರೆ ಅವರು ದಕ್ಷಿಣ ದಿಕ್ಕಿನಿಂದ ಹೊರಡುವುದು ಎಂದು ತೀರ್ಮಾನವಾಯಿತು. ನಾರಾಯಣ ನಾಯ್ಕ ಹಂದಿ ಇರುವ ಜಾಗದ ಬಗ್ಗೆ ಖಾತ್ರಿಯಿದ್ದಂತೆ ಹೊರಟ್ಟಿದ್ದ. ಎರಡೂ ಕಡೆಯಿಂದ ಹೊರಟ ನಾವು ಹತ್ತಿರವಾಗತೊಡಗಿದೆವು. ಒಬ್ಬರಿಂದೊಬ್ಬರಿಗೆ ಮಾತಾಡಿದರೆ ಕೇಳುವಷ್ಟು ಹತ್ತಿರವಾದೆವು. ಒಬ್ಬರು ಬೊಬ್ಬೆ ಹೊಡೆಯಿರಿ ಹಂದಿ ಎಚ್ಚರಗೊಂಡು ಹೊರಗೆ ಬರಬಹುದು ಆಗ ಗುಂಡಿಕ್ಕಿ ಹೊಡೆಯಲು ಸುಲಭ ಎಂದು ಸಲಹೆ ನೀಡಿದರೆ, ಸುಮ್ಮನೆ ಹೋಗಿ ಹಂದಿ ಎಚ್ಚರಗೊಂಡು ನಿಮ್ಮನ್ನು ಹಾಯಬಹುದು, ಮೇಲೆರಗಬಹುದು, ನೀವೇನು ಮಾಡಬಲ್ಲಿರಿ ಎಂಬ ಸಲಹೆ ನೀಡಿದರು. ನಾವೆಲ್ಲ ಬೇಟೆಯಾಡುವ ಉತ್ಸಾಹದಿಂದ ಮನೆಯಿಂದ ಹೊರಟ ನಾಯಿಗಳೂ ಸೇರಿದಂತೆ ಬೊಬ್ಬೆಹೊಡೆಯುವವರೊಂದಿಗೆ ರಣನೀತಿಯನ್ನೂ ಒಬ್ಬರಿಂದೊಬ್ಬರಿಗೆ ಹೇಳುತ್ತಿದ್ದೆವು. ನಾರಾಯಣ ನಾಯ್ಕನ ಬೊಬ್ಬೆ ಮುಗಿಲು ಮುಟ್ಟಿತು. ಹಂದಿಯನ್ನು ನೋಡಿದೆ ಎಂದ. ಅಲ್ಲಿ ಬೊಬ್ಬೆ ಹೊಡೆದ. ಹಂದಿ ಎದ್ದು ಓಡಿದ್ದು ನಮಗೂ ಕಂಡಿತು. ಎರಡು ಹಂದಿಗಳಿದ್ದವು. ಗುಂಡು ಹೊಡೆಯುತ್ತೇನೆ ಎದುರಿನಿಂದ ಏಳಿ ಎಂದು ಆತನ ಎದುರಿದ್ದ ನಮ್ಮನ್ನು ಎಚ್ಚರಿಸಿದ. ಹಂದಿಗೆ ಇಟ್ಟ ಗುರಿ ನಮ್ಮಲ್ಲೊಬ್ಬರ ಮೇಲೆ ಬಿದ್ದರೆ ನಾವು ಪಡ್ಚ ಆಗುವುದರಲ್ಲಿ ಸಂದೇಹವಿರಲ್ಲಿಲ್ಲ. ಒಬ್ಬರು ಮರವೇರಿದರೆ ಇನ್ನೊಬ್ಬರು ನಾರಾಯಣ ನಾಯ್ಕನ ಹಿಂದೆ ಹೋಗಲು ಓಡಿದರು. ಹಂದಿ ಕೂಡಾ ನಿದ್ದೆಯಿಂದೆದ್ದು ಓಡುತ್ತಿತ್ತು. ಅದಕ್ಕೆ ತನ್ನನ್ನು ಕೊಲ್ಲಲು ಇವರೆಲ್ಲ ಬಂದಿದ್ದಾರೆ ಎಂದು ತಿಳಿದಿರಲಾರದೆಂದು ನಾನು ಅಂದುಕೊಂಡೆ. ಗುಂಡು ಹಾರಿತು. ಈಗ ಸೂರ್ಯ ಕಂತುವ ಹಂತದಲ್ಲಿದ್ದ. ಹಂದಿಗೆ ತಾಗಿರಬೇಕು. ಗುಂಡು ಹೊಡೆದ ಸದ್ದು ಮತ್ತು ಹಂದಿ ಅರಚಿದ ಸದ್ದು ಒಮ್ಮೆಲೇ ಉಂಟಾಗಿ ನಮಗೆ ಸರಿ ಕೇಳಲ್ಲಿಲ್ಲ. ಪೆಟ್ಟು ತಿಂದ ಹಂದಿ ನಮ್ಮ ಮೇಲೆರಗಬಹುದೆಂಬ ಭಯವನ್ನು ಎಲ್ಲರೂ ತುಂಬಿಸಿದರು. ಗುಂಡು ತಾಗಿದೆ ಆದರೆ ಹಂದಿ ಸಾಯಲಿಲ್ಲ ಎಂಬ ಕೊನೆ ತೀರ್ಮಾನ ತೆಗೆದುಕೊಂಡು ಕತ್ತಲಾಗುವುದಕ್ಕಿಂತ ಮೊದಲೇ ಎಲ್ಲರೂ ವಾಪಾಸದೆವು. ಮನೆಯ ಅಂಗಳದಲ್ಲಿ ಬೇಟೆಗೆ ಹೋಗಿ ಬಂದವರಿಗೆಲ್ಲ ಚಾ ಮತ್ತು ಅವಲಕ್ಕಿ, ಬಾಳೆಹಣ್ಣಿನ ಸಮಾರಾಧನೆ ನಡೆಯಿತು. ಜತೆಗೆ ಹಿಂದಿನ ಬೇಟೆಗಳ ಅನುಭವವನ್ನು ಕೂಡಾ ಹಂಚಿಕೊಂಡರು. ನಾಳೆ ಬೆಳಿಗ್ಗೆ ಒಮ್ಮೆ ಗುಡ್ಡಕ್ಕೆ ಹೋಗಿ ನೋಡಿಬರುವುದು ಎಂದೂ, ಒಬ್ಬರೇ ಹೋಗುವುದು ಸರಿಯಲ್ಲ, ಜತೆಯಾಗಿ ಹೋಗುವುದು ಎಂದು ನಿರ್ಧರಿಸಿ ಬೇಟೆಯ ತಂಡ ಚದುರಿತು.
ಬೆಳಿಗೆದ್ದು ನಾವೆಲ್ಲ ಪುಸ್ತಕದ ಚೀಲ ಹೊತ್ತುಕೊಂಡು ಶಾಲೆಗೆ ಹೊರಟೆವು. ಸಂಜೆ ಮನೆಗೆ ಬಂದು ಊಟಕ್ಕೆ ಕುಳಿತಾಗ ಮಾಂಸದ ಅಡುಗೆ. ಅಮ್ಮನಲ್ಲಿ ಕೇಳಿದಾಗ ನಿನ್ನೆಯ ಬೇಟೆಯ ಮಂದಿನ ಭಾಗದ ವಿವರಣೆ ತಿಳಿಯಿತು. ಪೆಟ್ಟು ತಿಂದ ಕಾಡು ಹಂದಿ ಗುಂಡು ಹೊಡೆದ ಜಾಗದಿಂದ ಸ್ವಲ್ಪ ದೂರವಷ್ಟೇ ಹೋಗಿ ಬಿದ್ದಿತ್ತಂತೆ. ಬೆಳಿಗ್ಗೆ ಹೋದ ನಾರಾಯಣ ನಾಯ್ಕ ಮತ್ತು ಮಾಂಕು ಅದನ್ನು ಕಂಡುಹಿಡಿದರು. ನಂತರ ಊರಿನ ದಂಡೆಲ್ಲಾ ಬಂದು ಅಲ್ಲೆ ಅದನ್ನು ಮಾಂಸ ಮಾಡಿ ಹಂಚಿದರು. ವಾಡಿಕೆಯಂತೆ ಅದನ್ನು 'ಮಾರಾಟ' ಮಾಡಲಿಲ್ಲ. ಕೋವಿ ಕೊಟ್ಟ ವಿಷ್ಣು ಭಟ್ಟರಿಗೆ ಇನ್ನೂರೈವತ್ತು ರೂಪಾಯಿ ಬಾಡಿಗೆ ಮತ್ತು ಕೋವಿಯಿಂದ ಗುಂಡು ಬಿಟ್ಟ ನಾರಾಯಣ ನಾಯ್ಕನಿಗೆ ಶರಾಬಿಗೆಂದು ನೂರು ರೂಪಾಯಿ ಸ್ಥಳದಲ್ಲಿಯೇ ಸಂಗ್ರಹಿಸಿ ಕೊಡಲಾಯಿತು. ಉಳಿದವರಿಗೆ ಕಾಡ ಹಂದಿಯ ಮಾಂಸದ ಪಾಲು. ಮನೆಯಲ್ಲಿರುವ ಜನರಲ್ಲಿ ಕಾಡಹಂದಿಯ ಮಾಂಸ ತಿನ್ನುವ ಜನರ ಲೆಕ್ಕದ ಮೇಲೆ ಮಾಂಸವನ್ನು ಹಂಚಲಾಯಿತು. ಮಾಂಸ ಕೊಂಡು ಹೋದ ಜನರಿಗೆ ಅದಕ್ಕೆ ಬೇಕಾದ ಮೆಣಸು, ಹುಳಿ, ಸಂಭಾರ ಪದಾರ್ಥ, ರೊಟ್ಟಿಗೆ ಅಕ್ಕಿ, ಜತೆಗೆ ಕುಡಿಯಲು ಶರಾಬು ಇಷ್ಟೆಲ್ಲ ಸೇರಿ ತುಂಬಾ ಖರ್ಚಿದೆ ಎಂದು ತಿಳಿದರೂ ಬೇಟೆಯಾಡಿ ಸಿಕ್ಕ ಮಾಂಸದ ರುಚಿ ಯಾವಾಗಲೂ ಸಿಗುವುದಿಲ್ಲ ಎಂಬ ಸಂಭ್ರಮವೂ ಇತ್ತು.
ಒಲವಿನಿಂದ
ಬಾನಾಡಿ.

2 comments:

 1. ಒಳ್ಳೆಯ ಬರಹ. ಗಾಳಿಪಟ ನೆನಪಾಯ್ತು:)

  ಅಂದಹಾಗೆ, ಒಂದು ವಿಷ್ಯ,
  ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

  ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

  ಡೇಟು: ೧೬ ಮಾರ್ಚ್ ೨೦೦೮
  ಟೈಮು: ಇಳಿಸಂಜೆ ನಾಲ್ಕು
  ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

  ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

  ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

  ಅಲ್ಲಿ ಸಿಗೋಣ,
  ಇಂತಿ,

  ಶ್ರೀನಿಧಿ.ಡಿ.ಎಸ್.

  ReplyDelete
 2. ವಂದನೆಗಳು ಶ್ರೀನಿಧಿ.
  ಬೆಂಗಳೂರಿನ ಹತ್ತಿರವೆಲ್ಲೂ ನಿಮ್ಮ ಕಾರ್ಯಕ್ರಮದ ಸಮಯ ನಾನು ಇರದೇ ಇರುವುದರಿಂದ ಖಂಡಿತವಾಗಿಯೂ ನಾನು ಬರಲಾರೆ. ನಿಮ್ಮ ಪ್ರಯತ್ನಕ್ಕೆ ಶುಭ ಹಾರೈಕೆಗಳು. ನೀವು ವಿವರವನ್ನೆಲ್ಲಾ ಬ್ಲಾಗಿಸುವಿರಿ ಎಂದು ತಿಳಿಯುವೆ.
  ಒಲವಿನಿಂದ
  ಬಾನಾಡಿ.

  ReplyDelete