Sunday, March 30, 2008

ಮರೆಯಾದ ಚಂದ್ರ

ಅವತ್ತು ನನಗೆ ಬಹಳ ಅರ್ಜೆಂಟಾಗಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗಬೇಕಾಗಿತ್ತು. ಎಪ್ರಿಲ್ ತಿಂಗಳ ಬೇಸಿಗೆಯ ಸಮಯವಾಗಿತ್ತು. ಟಿಕೇಟು ಮುಂಗಡ ಖರೀದಿಸದೇ ಇದ್ದುದರಿಂದ ಯಾವುದೇ ಬಸ್ಸಲ್ಲಿ ಸೀಟು ಸಿಗುವ ಚಾನ್ಸ್ ಇರಲ್ಲಿಲ್ಲ. ಚಿಕ್ಕದೊಂದು ಬ್ಯಾಗ್ ಹಿಡಿದುಕೊಂಡು ಅಟೋದಲ್ಲಿ ನಾನು ರಾತ್ರಿ ಒಂಬತ್ತು ಗಂಟೆಗೆ ಮೆಜೆಸ್ಟಿಕ್ ನ ಕ.ರಾ.ರ.ಸಾ.ಸಂ. ನ ಬಸ್ ನಿಲ್ದಾಣಕ್ಕೆ ಬಂದೆ. ಮಂಗಳೂರು ಕಡೆಗೆ ಹೋಗುವ ಬಸ್ಸುಗಳೆಲ್ಲಾ ತುಂಬಿದ್ದವು. ಡ್ರೈವರ್, ಕಂಡಕ್ಟರ್ ಊರಿನವರೇ ಆಗಿರುವುದರಿಂದ ತುಳುವಿನಲ್ಲಿ ಮಾತಾಡಿ ಒಂದು ಸೀಟಿಗಾಗಿ ಕೇಳಿಕೊಂಡೆ. ಎಲ್ಲರೂ ಈ ಬಸ್ಸಿನಲ್ಲಿ ಸ್ವಲ್ಪವೂ ಸ್ಥಳವಿಲ್ಲ. ವಿ.ಐ.ಪಿ. ಸೀಟು ಸಹಿತ ಎಲ್ಲಾ ಸೀಟು ತುಂಬಿದೆ. ಅಕಸ್ಮಾತ್ ಊರಿನ ಯಾರೇ ಎಂ.ಎಲ್. ಎ. ಬಂದರೂ ಸಹಿತ ನಮಗೆ ಸೀಟು ಕೊಡಲಾಗದು. ನೀವು ನೆಕ್ಸ್ಟ್ ಬಸ್ಸಿಗೆ ಪ್ರಯತ್ನಿಸಿ ಎಂದು ಹೇಳಿದರು. ಇದ್ದ ಎಲ್ಲಾ ಡಿಲಕ್ಸ್, ಸೆಮಿ ಡಿಲಕ್ಸ್, ವೋಲ್ವೋ, ಎಕ್ಸ್ ಪ್ರೆಸ್, ಕಡೆಗೆ ಧರ್ಮಸ್ಥಳ, ಪುತ್ತೂರು, ಮಡಿಕೇರಿ ಅಥವಾ ಕಾಸರಗೋಡಿಗೆ ಹೋಗುವ ಬಸ್ಸಿನಲ್ಲಿ ಒಂದು ಸೀಟು ಸಿಗಲಿ ಎಂದು ಆಶಿಸುತ್ತಾ ಓಡಾಡಿದೆ. ದಿನವಿಡೀ ದುಡಿದ ದಣಿವು, ಊರಿಗೆ ಹೊರಟ ಅವಸರ ಎಲ್ಲಾ ಸೇರಿ ನಾನು ಬಹಳಷ್ಟು ಸುಸ್ತಾಗಿದ್ದೆ. ಜತೆಗೆ ಗಂಟಲು ಒಣಗಿ ನೀರಿಗಾಗಿ ಚಡಪಡಿಸುತ್ತಿದ್ದೆ. ಒಬ್ಬ ಕಂಡಕ್ಟರನಿಗೆ ದಮ್ಮಯ್ಯ ಹಾಕಿದೆ. ಬಸ್ಸಿನ ಡಿಕ್ಕಿಯಲ್ಲಿ ಅಥವಾ ಟಾಪ್‍ನಲ್ಲಿ ಕೂರುವೆ ಎಂದೆ. ಆತ ಪತ್ರಿಕೆಗಳ ವ್ಯಾನುಗಳು ಹಾಸನದ ವರೆಗೆ ಹೋಗುತ್ತವೆ ನೋಡಿ ಎಂದ. ಅಥವಾ ಲಾರಿಗಳು ನೋಡಿ ಎಂದ. ಟ್ಯಾಕ್ಸಿ ಮಾಡಿ ಹೋಗುವಷ್ಟು ನನ್ನಲ್ಲಿ ಹಣದ ವ್ಯವಸ್ಥೆ ಕೂಡಾ ಇರಲಿಲ್ಲ.
ಕೊನೆಗೆ ಒಬ್ಬ ಕಂಡಕ್ಟರ್ ಮೊದಲೊಮ್ಮೆ ನನ್ನ ದುರವಸ್ಥೆಯನ್ನು ಕೇಳಿದಾತ ನನ್ನತ್ತ ಕೈಸನ್ನೆ ಮಾಡಿದ. ನಾನು ಬಾಯಲ್ಲಿ 'ಸ್ವಾಮಿಯೇ ಶರಣಮಯ್ಯಪ್ಪ' ಎಂದು ಹೇಳುತ್ತಾ ಅವನ ಹತ್ತಿರ ಹೋದೆ. ಅಯ್ಯಪ್ಪನ ಧ್ಯಾನ ಆ ಸಮಯ ನನಗೆ ಬಂದ ಕುರಿತು ಮತ್ತೆ ನನಗೆ ನಗೆ ಬಂತು. ಕಂಡಕ್ಟರ್ "ನೋಡಿ ಮಾರಾಯ್ರೆ, ಒಂದು ಸೀಟಿಗೆ ಒಬ್ಬರು ಬರುವುದಿಲ್ಲ. ಬಸ್ಸು ಹೊರಡುವಾಗ ನಿಮಗೆ ಹೇಳ್ತೇನೆ. ಇಲ್ಲೇ ಇರಿ" ಎಂದ. ನಾನು ಟಿಕೇಟಿಗೆ ಹಣ ಕೊಟ್ಟು ಟಿಕೇಟು ಕೊಡಿ ಎಂದೆ. ಆತ 'ನೀವು ನಿಲ್ಲಿ. ಟಿಕೇಟು ಆ ಮೇಲೆ ಮಾಡ್ತೇನೆ. ನೀವು ಇಲ್ಲೇ ಇರಿ. ಬಸ್ಸಿಗೂ ಹತ್ಬೇಡಿ' ಎಂದ. ನನಗೆ ಮತ್ತೆ ಬೇಸರವಾಯಿತು. ಈತ ಸೀಟಿದೆ ಅಂತಾನೆ. ಕೂತುಕೊಳ್ಳಬೇಡಿ ಎಂದೂ ಹೇಳ್ತಾನೆ. ಎಂಥ ಕತೆ ಎಂದು ಚಡಪಡಿಸಿದೆ. ಇನ್ಯಾವುದೇ ಬಸ್ಸಿಗೂ ಪ್ರಯತ್ನಿಸಬೇಕಾಗಿಲ್ಲ ಎಂದೂ ಹೇಳಿದ. ಬಸ್ಸು ಹೊರಡಲು ಇನ್ನು ಹತ್ತು ನಿಮಿಷವಿದೆ. ಕಾಫಿ ಕುಡಿಯುವಿರಾದರೆ ಹೋಗಿ ಬನ್ನಿ ಎಂದ. ನಾನು ಬಾಯಾರಿದ್ದುದರಿಂದ ಒಂದು ಬಾಟಲು ನೀರು ತಂದು ಕೊಂಡೆ. ಬಸ್ಸು ಹೊರಡುತ್ತದೆ ಅಂದಾಗ ಬಲೆ, ಬಲೆ ಎಂದು ನನ್ನನ್ನು ಆತ ಕರೆದ. ಓ ಆ ಸೀಟಿನಲ್ಲಿ ಕೂತುಕೊಳ್ಳಿ ಎಂದು ಹೇಳಿದ. ನನ್ನ ಸೀಟಿನ ಪಕ್ಕದಲ್ಲಿ ಒಬ್ಬ ವಿದೇಶಿ ಮಹಿಳೆಯಿದ್ದಳು. ಲೋನ್ಲಿ ಪ್ಲಾನೆಟ್ ನ ಇಂಡಿಯಾ ಗೈಡ್ ಹಿಡಿದು ಕುಳಿತ್ತಿದ್ದ ಆಕೆ ಪ್ರವಾಸಿ ಎಂದು ಗೊತ್ತಾಯಿತು. ಅವಳು ಓದುತ್ತಿದ್ದ ಪುಸ್ತಕ ಇಂಗ್ಲಿಷ್ ಭಾಷೆಯದಾಗಿರಲ್ಲಿಲ್ಲ. ಇನ್ಯಾವುದೋ ಜರ್ಮನ್, ಫ್ರೆಂಚ್, ಸ್ಪಾನಿಶ್ ಆಗಿರಬೇಕು ಎಂದು ನಾನು ಊಹಿಸಿದ್ದೆ. ನನಗೆ ಗೊತ್ತಾಗಲಿಲ್ಲ. ಬಸ್ಸು ಹೊರಡಬೇಕಾದರೆ ಸುಸ್ತಾಗಿದ್ದ ನಾನು ಕಣ್ಣು ಮುಚ್ಚಿ ಕೊಂಡು ನಿದ್ದೆ ಮಾಡೋಣ ಎಂದು ಕೊಂಡೆ. ಆಕೆ ' ಯು ಮ್ಯಾಂಗಳೂರ್' ಎಂದು ಪ್ರಶ್ನಿಸಿದಳು. ನಾನು ಕೋತಿ ತರ 'ಯಾ' ಎಂದೆ. ಆಕೆಯ ಪಕ್ಕದಲ್ಲಿ ಕುಳಿತು ಪ್ರಯಾಣಿಸುವುದು ನನಗೆ ಸಂಕೋಚವಾಯಿತು. ಅವಳೇನು ಸಣ್ಣ ವಯಸ್ಸಿನ ಹೆಣ್ಣಾಗಿರಲ್ಲಿಲ್ಲ. ಅವಳ ವಯಸ್ಸು ಸುಮಾರು ನಲ್ವತ್ತು-ನಲ್ವತ್ತೈದರ ಮಧ್ಯೆ ಇರಬಹುದು. ಇನ್ಯಾರನ್ನೋ ಆಕೆಯ ಪಕ್ಕ ಕುಳಿತುಕೊಳ್ಳಿಸಿ ನಾನು ಅವರ ಸೀಟಲ್ಲಿ ಕುಳಿತುಕೊಳ್ಳಬಹುದೆಂದು ಯೋಚಿಸಿದೆ. ಹಾಗೆ ಬೇಡ. ನಾನೇ ಕುಳಿತುಕೊಳ್ಳುತ್ತೇನೆ. ಹೊರ ದೇಶದವಳಾದ ಅವಳ ಹತ್ತಿರ ಕುಳಿತು ಅವಳಿಂದ ಏನಾದರೂ ಹೊಸ ವಿಷಯ ತಿಳಿದುಕೊಳ್ಳಬಹುದು ಎಂಬ ವಿಚಾರದಿಂದ ನಾನು ಸೀಟು ಬದಲಿಸುವ ಯೋಚನೆಗೆ ಹೋಗಲಿಲ್ಲ.
ಬಸ್ಸು ಹೊರಟು ನಗರದಿಂದ ಹೊರವಲಯಕ್ಕೆ ಬಂದಾಗ ಸ್ವಲ್ಪ ಆರಾಮವಾಯಿತು. ಆಕೆ ಕುಳಿತು ಒಂದೆರಡು ಮಾತಾಡಿದಳು. ನಾನೂ ಚುಟುಕಾಗಿ ಮಾತಾಡಿದೆ. ಅವಳಿಗೂ ನಿದ್ದೆ ಬರುವ ಹಾಗೆ ಕಾಣಿಸಲಿಲ್ಲ. ನನಗೂ ನಿದ್ದೆ ಹತ್ತಿಲ್ಲ. ಹತ್ತು ಹಲವು ಯೋಚನೆಗಳು. ನೀನು ನಿದ್ರಿಸುತ್ತಿಲ್ಲವೆ ಎಂದು ಆಕೆ ನನ್ನನ್ನು ಕೇಳಿದಳು. ಇಲ್ಲ, ಇನ್ನು ಸ್ವಲ್ಪದರಲ್ಲಿಯೇ ನಿದ್ದೆ ಬರಬಹುದು ಎಂದೆ. ಅವಳು ಮಾತುಕತೆಗೆ ಆರಂಭಿಸಿದಳು. ಅವಳು ಪ್ರಾನ್ಸ್ ನವಳೆಂದೂ ಅವಳಿಗೆ ಇಂಗ್ಲಿಷ್ ಅಷ್ಟೊಂದು ಚೆನ್ನಾಗಿ ಬರುತ್ತಿಲ್ಲವೆಂದೂ ಹೇಳಿದಳು. ಅವಳು ತನ್ನ ಗಂಡ, ಮತ್ತು ಇತರ ಸ್ನೆಹಿತರೊಡನೆ ಭಾರತದರ್ಶನಕ್ಕೆ ಬಂದಿದ್ದರು. ದೆಹಲಿಯಲ್ಲಿ ಆಗ್ರಾ, ಜೈಪುರ ಸುತ್ತಿ ಅವರು ಬೆಂಗಳೂರಿಗೆ ಬಂದು ಮಂಗಳೂರು ಮತ್ತು ಕರ್ನಾಟಕ ಕರಾವಳಿ ನೋಡಿ ಮತ್ತೆ ಕೇರಳ ಪ್ರವಾಸಕ್ಕೆಂದು ಹೊರಡುವವರಿದ್ದರು. ಎಲ್ಲರಿಗೂ ಒಂದೆ ಬಸ್ಸಲ್ಲಿ ಸೀಟು ಸಿಕ್ಕರಲಿಲ್ಲ. ಅವಳು ಮತ್ತವಳ ಗಂಡ ಈ ಬಸ್ಸಿಗೆ ಸೀಟು ಬುಕ್ ಮಾಡಿದ್ದರು. ಅಕಸ್ಮಾತ್ ಅವಳ ಗಂಡನ ಒಬ್ಬ ಸ್ನೇಹಿತ ಬೆಂಗಳೂರಿನಲ್ಲಿ ಸಿಕ್ಕಿದರಿಂದ ಆತ ಆ ದಿನ ಅಲ್ಲೆ ಇರೋಣ ಎಂದನಂತೆ. ಅವಳು ಮಾತ್ರ ಮಂಗಳೂರಿಗೆ ಹೋಗಲು ಕಾತುರಳಗಿದ್ದುದರಿಂದ ಒಬ್ಬಳೇ ಹೊರಟಿದ್ದಾಳೆ.
ನಾವು ಬಹಳಷ್ಟು ಮಾತುಕತೆಯಾಡಿದೆವು. ಕೊನೆಗೆ ಇಬ್ಬರಿಗೂ ನಿದ್ದೆ ಬಂತು. ಮಧ್ಯೆ ಮಧ್ಯೆ ನನಗೆ ಎಚ್ಚರವಾದರೂ ಆಕೆ ಸಂಪೂರ್ಣ ನಿದ್ದೆಯಲ್ಲಿದ್ದಳು. ಅಥವಾ ನನಗೆ ನಿದ್ದೆ ಬಂದಿದ್ದಾಗ ಅವಳು ಎಚ್ಚರದಲ್ಲಿದ್ದಾಳೋ ಗೊತ್ತಿಲ್ಲ. ಮಂಗಳೂರಿನಲ್ಲಿ ಇರುವಾಗ ಏನಾದರೂ ತೊಂದರೆ ಆದರೆ ನನಗೆ ತಿಳಿಸಿ ಎಂದು ನನ್ನ ಫೋನ್ ನಂಬರ್ ಮತ್ತು ಈ ಮೇಲ್ ಐಡಿ ಕೊಟ್ಟು ಅಧಿಕ ಪ್ರಸಂಗವನ್ನು ತೋರಿಸಿದೆ. ಬಸ್ಸಿಳಿದು ನಾವು ಬೇರೆ ಬೇರೆಯಾಗಿ ಹೋದೆವು.
ನನಗೆ ಅವಳ ನೆನಪು ಮತ್ತೆ ಆಗಲೇ ಇಲ್ಲ. ಈ ಘಟನೆ ನಡೆದು ಸುಮಾರು ಮೂರು ತಿಂಗಳ ನಂತರ ಅವಳದೊಂದು ಈ ಮೇಲ್ ಬಂತು. ಅವರ ಭಾರತ ಪ್ರವಾಸದ ಚಿತ್ರಗಳನ್ನು ಹಾಕಿದ್ದ ವೆಬ್ ಸೈಟಿನ ವಿವರ ಕೊಟ್ಟಿದ್ದಳು. ನಾನು ಮತ್ತೆ ಅದನ್ನು ನೋಡಲೂ ಇಲ್ಲ.
ಇತ್ತೀಚೆಗೆ ಅವಳದೊಂದು ಈಮೇಲ್ ಬಂತು. ಅವಳ ಮಗಳು ತನ್ನ ಇತರ ಗೆಳೆಯರೊಂದಿಗೆ ಭಾರತ ನೋಡಲು ಬರುತ್ತಾಳೆ. ಭಾರತದಲ್ಲಿರುವಾಗ ಏನಾದರೂ ತೊಂದರೆಯಾದರೆ ನನ್ನ ಫೋನ್ ಮತ್ತು ಈ ಮೇಲ್ ನಲ್ಲಿ ಸಂಪರ್ಕಿಸುವಂತೆ ನಿರ್ದೇಶಿಸಿದ್ದಾಳೆ ಎಂದು ಅವಳು ತಿಳಿಸಿದಳು. ಜತೆಗೆ ಅವಳ ಪ್ರವಾಸದ ವೇಳಾಪಟ್ಟಿಯನ್ನು ನನಗೆ ಕಳುಹಿಸಿದ್ದಳು. ದೆಹಲಿಯಲ್ಲಿ ಬಂದಿಳಿಯುವ ಅವಳ ಮಗಳು ಸೆಲಿನಾ ಮತ್ತು ಸ್ನೇಹಿತರು ಅಲ್ಲಿ ಸುಮಾರು ಒಂದು ವಾರವಿರುವರು. ಅಲ್ಲಿಂದ ರಾಜಸ್ಥಾನದ ಪ್ರವಾಸ. ಬಿಕಾನೆರ್, ಜೈಪುರ್, ಜೋಧ್ ಪುರ್, ಉದಯಪುರ್ ಎಲ್ಲಾ ನಾಲ್ಕು ದಿನಗಳಲ್ಲಿ ಮುಗಿಸಿ ನಾಲ್ಕು ದಿನ ಜೈಸಲ್ಮೇರ್ ನಲ್ಲಿರುವರು. ಅಲ್ಲಿಂದ ಮುಂಬಯಿ, ಗೋವಾ, ಹಂಪಿ, ನಂತರ ಕೊನೆಗೆ ಕೇರಳ. ಹೀಗೆ ಸುಮಾರು ಒಂದು ತಿಂಗಳು ಸೆಲಿನಾ ಭಾರತದಲ್ಲಿರುವಳು.
ಸೆಲಿನಾಳ ಪ್ರವಾಸದ ಸಮಯದಲ್ಲಿ ಅವಳ ವಾಸ್ತವ್ಯ ಮತ್ತಿತರ ವ್ಯವಸ್ಥೆಗಳನ್ನು ಅವರೇ ಮಾಡಿದ್ದಾರೆ. ಸೆಲಿನಾಳ ಕುರಿತು ನನಗೆ ಸುದ್ದಿ ಸಿಕ್ಕಾಗೆಲ್ಲಾ ಅದರ ಕುರಿತು ಈಮೇಲ್ ಮೂಲಕ ಅವಳ ಅಮ್ಮನಿಗೆ ಕಳುಹಿಸುತ್ತಿದ್ದೆ. ದೆಹಲಿಗೆ ಅವರು ಬಂದಿಳಿದಾಗ ಅವರಿಗೆ ಅಲ್ಲಿಯ ಟೂರ್ ಅಪರೇಟರ್ ಅವರಿಗೆ ಭಾರತದ ಒಂದು ಮೊಬೈಲ್ ಸಿಮ್ ಕೂಡಾ ಕೊಡಿಸಿದ್ದ. ನನಗೆ ಆ ನಂಬರ್ ದೊರೆತ ಮೇಲೆ ನಾನೂ ಕೆಲವೊಮ್ಮೆ ಅವರ ನೆನಪಾದಾಗ ಫೋನ್ ಮಾಡಿ ಅವರ ವಿಚಾರ ಕೇಳಿಕೊಳ್ಳುತ್ತಿದ್ದೆ. ಸೆಲಿನಾಳಿಗೆ ಅಷ್ಟೊಂದು ಇಂಗ್ಲಿಷ್ ಬರದಿರುತ್ತಿದ್ದುದರಿಂದ ಅವಳ ಸ್ನೇಹಿತರಲ್ಲೋರ್ವ ಮಾತಾಡುತ್ತಿದ್ದ. 'ಎಲ್ಲರೂ ಚೆನ್ನಾಗಿದ್ದೀರಿ ತಾನೆ? ಸೆಲಿನಾಳು ಹೇಗಿದ್ದಾಳೆ? ಅವಳ ಅಮ್ಮ ಮಾತಾಡಿದಳೇ' ಎಂದು ಕೇಳಿಕೊಳ್ಳುತ್ತಿದ್ದೆ.

ಜೈಸಲ್ಮೇರ್ ನಲ್ಲಿ ಸೆಲಿನಾಳಿಗೆ ಜ್ವರ ಬಂತಂತೆ. ಜತೆಗೆ ಅವಳ ಸ್ನೇಹಿತನೋರ್ವನಿಗೆ ಹೊಟ್ಟೆಯಲ್ಲಿ ಇನ್ಫೆಕ್ಷನ್ ಎಂದು ವಿಷಯ ತಿಳಿಯಿತು. ಅವರು ತಂಗಿದ್ದ ಹೋಟೇಲ್ ನವರು ಡಾಕ್ಟರ್ ವ್ಯವಸ್ಥೆಮಾಡಿದ್ದರು. ನಾನೂ ನನ್ನ ಓರ್ವ ಸ್ನೇಹಿತ ಜೋಧ್ ಪುರ್ ನಲ್ಲಿ ಇರುವವನಿಗೆ ಫೋನ್ ಮಾಡಿ ನಿನ್ನವರು ಯಾರಾದರೂ ಜೈಸಲ್ಮೇರ್ ನಲ್ಲಿದ್ದರೆ ಹೇಳಿ ನೋಡು ಒಮ್ಮೆ ನನ್ನ ಪರವಾಗಿ ಅವರನ್ನು ವಿಚಾರಿಸಿಕೊಂಡು ಬರಲಿ ಎಂದೆ. ಇವರ ಭಾರತ ದರ್ಶನದಲ್ಲಿ ನನಗೂ ಕುಳಿತಲ್ಲೇ ಪೂರ ಭಾರತ ದರ್ಶನವಾದಂತೆ ಅನಿಸಿತು.
ಸೆಲಿನಾ ಮತ್ತವಳ ಸ್ನೇಹಿತರು ಸ್ವಲ್ಪ ದಿನಗಳ ನಂತರ ಪ್ರಯಾಣ ಮುಂದುವರಿಸಿದ ಸುದ್ದಿಯೂ ನನಗೆ ಸಿಕ್ಕಿತು. ನಂತರ ಸುಮಾರು ಏಳೆಂಟು ದಿನ ಅವರ ಸುದ್ದಿ ನನಗೆ ಸಿಗಲೇ ಇಲ್ಲ. ಮಂಗಳೂರಿಗೆ ಯಾವಾಗ ಹೋಗುವರು? ಮುಂದಿನ ಕಾರ್ಯಕ್ರಮವೇನು ಇತ್ಯಾದಿ ತಿಳಿಯಲಿಲ್ಲ. ನಾನು ಕೂಡ ನನ್ನ ಕೆಲಸದಲ್ಲಿ ಮುಳುಗಿಹೋಗಿದ್ದುದರಿಂದ ಹೆಚ್ಚು ವಿಚಾರಿಸುವ ಗೋಜಿಗೂ ಹೋಗಲಿಲ್ಲ ಸಮಯವೂ ಇರಲಿಲ್ಲ.
ನೋ ನ್ಯೂಸ್ ಫ್ರಮ್ ಸೆಲಿನಾ ಎಂದು ಅವಳ ಅಮ್ಮನ ಈ ಮೇಲ್ ನೋಡಿ ಅವತ್ತು ನಾನು ಚಿಂತೆಗೊಳಗಾದೆ. ಅವರು ಕೊನೆಗೆ ಎಲ್ಲಿಂದ ನಿನ್ನನ್ನು ಸಂಪರ್ಕಿಸಿದ್ದರು ಎಂದು ಅವಳಲ್ಲಿ ಕೇಳಿದೆ. ಸೆಲಿನಾಳ ತಂಡವು ತನ್ನ ಪ್ರವಾಸದ ಕೊನೆಯ ತಾಣವಾದ ಕೇರಳದಲ್ಲಿದೆ ಎಂದು ಗೊತ್ತಾಯಿತು. ಆದರೆ ಎಲ್ಲಿದ್ದಾರೆ ಅವರಿಗೆ ಏನಾಗಿದೆ ಎಂದು ತಿಳಿಯಲಾಗಲಿಲ್ಲ. ಅವರ ಟೂರ್ ಅಪರೇಟರ್ ನನ್ನು ಸಂಪರ್ಕಿಸಿದರೆ ಅವನೂ ಅವರು ಕೇರಳದಲ್ಲಿ ಎಲ್ಲೋ ಇದ್ದಾರೆ. ಇನ್ನು ಒಂದು ವಾರದಲ್ಲಿ ಅವರು ಹೋಗುವ ಮರಳುವರು ಎಂದು ಹೇಳಿದನು. ಸೆಲಿನಾಳ ಅಮ್ಮನಿಗೆ ಸಂಪರ್ಕಿಸಿದರೆ ಅವಳದು ಮರು ಉತ್ತರ ಇಲ್ಲ. ಇತ್ತೀಚೆಗೆ ಅವಳ ಮೈಲ್ ನಿಂದ ಸಂದೇಶಗಳು ಬೌನ್ಸ್ ಆಗುತ್ತವೆ.
ಎಲ್ಲಾ ಸರಿಯಿದೆ ಎಂದು ತಿಳಿಯುವೆ. ಮತ್ತೆ ಅವಳ ಸಂಪರ್ಕವಾದಾಗ ಏನಾಯಿತು ಎಂದು ಕೇಳುವೆ.
ಒಲವಿನಿಂದ
ಬಾನಾಡಿ

Wednesday, March 26, 2008

ಕನ್ನಡದ ನಕ್ಷತ್ರಗಳು

ಬ್ಲಾಗುಗಳನ್ನು ಪಟ್ಟಿ ಮಾಡಿದಷ್ಟು ಹೊಸ ಬ್ಲಾಗುಗಳು ಸಿಗುತ್ತಿವೆ. ಈಗಾಗಲೇ ಸುಶ್ರುತ ದೊಡ್ಡೇರಿಯವರು ಮುನ್ನೂರೈವತ್ತು ಬ್ಲಾಗುಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ನಾನು ಇನ್ನೂರೈವತ್ತು ಹಿಡಿದು ಸ್ವಲ್ಪ ವಿರಮಿಸುತ್ತಾ ಹಿಡಿಯುತ್ತಿದ್ದೇನೆ. ಇನ್ನೊಂದು ವರ್ಷದೊಳಗೆ ಸಂಖ್ಯೆ ಐನೂರು ದಾಟಿ ಸಾವಿರದಷ್ಟಿರಬಹುದು ಎಂಬ ಆಲೋಚನೆ ಬರ್ತದೆ. ಸ್ವಲ್ಪ ದಿನದ ನಂತರ ಪಟ್ಟಿಯನ್ನು ಕಳಚಿಕೊಳ್ಳಲೂ ಬಹುದು.
ಬ್ಲಾಗುಗಳ ಸಮ್ಮೇಳನ ನಡೆದ ನಂತರ ಬಹಳ ಚರ್ಚೆಗಳನ್ನು ಬ್ಲಾಗುಗಳಲ್ಲಿ ಓದಿದ್ದೇನೆ. ನನ್ನ ಅಭಿಪ್ರಾಯದಂತೆ ಬ್ಲಾಗು ಬರೆಯುವವರ ಸಮ್ಮೇಳನ ಅದು ಔಪಚಾರಿಕ ಅಥವಾ ಅನೌಪಚಾರಿಕ ಸ್ನೇಹ ಮಿಲನ ಅಥವಾ ಯಾವುದೇ ರೀತಿಯಲ್ಲಿ ನಡೆಯಬೇಕಾಗಿಲ್ಲ. ನಮಗೆ ಇರುವ ವೇದಿಕೆ ಈ ಅಂತರ್ಜಾಲ. ಅದರಲ್ಲಿ ನಮ್ಮ ನಮ್ಮದೇ ಚಾಪೆ, ಕುರ್ಚಿ, ಆರಾಮಾಸನ ಇತ್ಯಾದಿ ಹಾಕಿ ನಮಗೆ ಬೇಕಾದಂತೆ ಬರೆಯುತ್ತೇವೆ. ಬೇಕಾದವರು ಓದುತ್ತಾರೆ. ಮರೆತು ಬಿಡುತ್ತಾರೆ. ಕೆಲವೊಮ್ಮೆ ಮಹತ್ವದ ಸಂಗತಿಗಳು ನಮಗೆ ಬ್ಲಾಗು ಬರೆಯುವವರಿಂದ ಸಿಗಬಹುದು. ಬ್ಲಾಗ್ ಬರೆಯುವವರು ತಮ್ಮ ಮನಸನ್ನು ಅಂತರ್ಜಾಲದಲ್ಲಿ ತೆರೆದುಕೊಂಡಿರುವುದರಿಂದ ಕೆಲವೊಮ್ಮೆ ನಮಗೆ ಅವರ ಕುರಿತು ವಿಶೇಷ ಭಾವನೆಗಳು ಬರುತ್ತಿರಬಹುದು. ಅದು ನಿಜ ಬದುಕಿನಲ್ಲಿ ಸತ್ಯವಾಗಲಾರದು. ಅಥವಾ ಸತ್ಯವಾಗಲೂ ಬಹುದು. ಅಂದರೆ ಬ್ಲಾಗ್ ನಮ್ಮ ವ್ಯಕ್ತಿತ್ವದ ಒಂದಂಶ ಮಾತ್ರ. ಈಗ ನಾನೇ ಈ ಎಲ್ಲಾ ಬ್ಲಾಗ್ ಗಳನ್ನು ಪಟ್ಟಿ ಮಾಡುವ ಪ್ರಯತ್ನಮಾಡಿದ್ದು ಕೆಲವರಿಗೆ ಸರಿಯಾದ ಕೆಲಸವೆನಿಸಿದರೆ ಕೆಲವರಿಗೆ ಸರಿಯಲ್ಲ ಎಂದೆನಿಸಬಹುದು. ನನಗೆ ಹೇಗನಿಸುವುದೋ ಹಾಗೆ ನಾನು ಮಾಡುವೆ. ಐನೂರು ಬ್ಲಾಗ್ ಆಗುವ ವರೆಗೆ ಲಿಂಕ್ ಕಲ್ಪಿಸುತ್ತಾ ಹೋಗುವೆ. ಅಥವಾ ಒಂದೇ ಗಳಿಗೆಯಲ್ಲಿ ಲಿಂಕ್ ಗಳನ್ನೇ ತುಂಡರಿಸಿ ತೆಗೆಯುವೆ. ಇದು ನನ್ನ ವೈಯಕ್ತಿಕ ನಿಲುವಿನ ಮೇಲೆ ನಿಂತಿರುತ್ತದೆ.
ಕನ್ನಡದ ಬಹುತೇಕ ಬ್ಲಾಗ್ ಗಳು ಕವನಗಳನ್ನು ಪ್ರಕಟಿಸುವ ತಾಣಗಳಾಗಿವೆ ಎಂಬ ಅಭಿಪ್ರಾಯವಿದೆ. ಇರಲಿ. ಪತ್ರಿಕೆಗಳು ಅಥವಾ ಇನ್ಯಾವುದೇ ವೇದಿಕೆ ಸಿಗದಿದ್ದಾಗ ಬರೆಯುವವರು ಬರೆದು ಬಿಟ್ಟಿದ್ದಾರೆ.
ಬ್ಲಾಗ್ ಗಳು ಹೇಗಿರಬೇಕು ಹೇಗಿರಬೇಡ ಎಂದು ಹೇಳುವ ಅಧಿಕಾರ ಯಾರಲ್ಲೂ ಇಲ್ಲ. ಇದೇ ಅದರ ಮೂಲಗುಣ.
ಅಯ್ಯೋ ಮಾರಯ್ರೆ, ನಾನು ಇಲ್ಲಿ ಏನು ಬರೆದಿದ್ದೇನೆ ಎಂದು ನಿಮಗಾಗಿ ಬರೆಯುತ್ತಿಲ್ಲ. ನಿಮಗೆ ಇಷ್ಟವಾದರೆ ಓದಿ. ಇನ್ನೂ ಇಷ್ಟವಾದರೆ ಕಮೆಂಟ್ ಮಾಡಿ. ಆದರೆ ನಾನು ಅಂತರ್ಜಾಲದಲ್ಲಿರುವುದರಿಂದ ಹಾಗೂ ನನಗೂ ಒಂದು ನಿಜ ಬದುಕಿನ ವ್ಯಕ್ತಿತ್ವ ವಿರುವುದರಿಂದ ನಾನು ನನ್ನದೇ ಆದ ಜವಾಬ್ದಾರಿಯಿಂದ ಬ್ಲಾಗಿಸುತ್ತೇನೆ ಅಥವಾ ಇಲ್ಲಿನ ಜಾರ್ಗನ್ ನಂತೆ 'ಕುಟ್ಟುತ್ತೇನೆ'.
ಕನ್ನಡದ ಬ್ಲಾಗುಗಳು ಕನ್ನಡವನ್ನು ಉಳಿಸಲು ಬಹಳ ಕೊಡುಗೆ ನೀಡುತ್ತಿವೆ ಎಂಬ ಮಾತನ್ನು ನಾನು ನಂಬಿದ್ದೇನೆ. ಕನ್ನಡದಲ್ಲಿ ಇರುವಂತೆ ಇನ್ನಿತರ ಭಾಷೆಗಳಲ್ಲೂ ಬ್ಲಾಗ್ ಗಳು ತುಂಬಿವೆ. ಗುಣಮಟ್ಟ, ವಿಷಯ ವೈವಿಧ್ಯ, ಹಾಗೂ ಉಪಯುಕ್ತತೆಯಲ್ಲಿ ಬಹಳಷ್ಟು ಉತ್ತಮಬ್ಲಾಗುಗಳಿವೆ. ಸದ್ಯ ನನ್ನನ್ನು ಬ್ಲಾಗುಗಳ ಹೆಬ್ಬಾಗಿಲು ಎಂದು ನಾನೇ ಕರೆಯುತ್ತಿರುವ ನನ್ನ ಬ್ಲಾಗಿಗೆ ನಿಮಗೆಲ್ಲ ಮತ್ತೊಮ್ಮೆ ಸ್ವಾಗತ.
ನಿಮ್ಮ ಬ್ಲಾಗು ನನ್ನ ಪಟ್ಟಿಯಲ್ಲಿ ಇಲ್ಲದಿದ್ದರೆ ಮತ್ತು ನೀವು ಅದಿಲ್ಲಿ ಇರಬೇಕು ಎಂದು ಅನಿಸಿದರೆ ನನ್ನ ಬ್ಲಾಗಿನ ಕಮೆಂಟ್ ವಿಭಾಗದಲ್ಲಿ ನಿಮ್ಮ ವಿಳಾಸ ತಿಳಿಸಿ. ನಿಮಗೆ ವಂದನೆಗಳು.
ಬ್ಲಾಗಿಸುವುದು ನಿಮ್ಮ ಧರ್ಮ. ಅವುಗಳನ್ನು ಹಿಡಿದು ಲಿಂಕಿಸುವುದು ಸಧ್ಯ ನನ್ನ ಹವ್ಯಾಸ.
ಒಲವಿನಿಂದ
ಬಾನಾಡಿ

Friday, March 21, 2008

ಶುಭ ಶುಕ್ರವಾರದಂದು ಸಾಲುವಿಗೊಂದು ಸಾಲು

ಐರಿನ್ ನಮ್ಮ ನೆರೆಮನೆಯವಳು. ನನ್ನ ಅಕ್ಕನ ಹತ್ತಿರದ ಸ್ನೇಹಿತೆ. ಅವಳು ಅವರ ಮನೆಯಲ್ಲಿ ಒಬ್ಬಳೆ ಮಗಳು. ಉಳಿದವರು ಎಲ್ಲಾ ಗಂಡು ಮಕ್ಕಳು. ದೊಡ್ಡವನು ಜಫ್ರಿ, ನಂತರ ರಿಕ್ಸಾ, ಜೋನ್, ಸಾಲು, ಕೊನೆಯವನು ಫ್ರೆಡ್. ಇದೆಲ್ಲ ಅವರ ಕರೆಯುವ ಹೆಸರುಗಳು. ಅವರ ಪೂರ್ತಿ ಹೆಸರು ಅವರ ಇಗರ್ಜಿಯಲ್ಲಿ ಇರಬಹುದು. ಅವರೆಲ್ಲಾ ಬೇರೆಯೇ ಕಡೆ ಶಾಲೆಗೆ ಹೋಗಿದ್ದರಿಂದ ಶಾಲೆಯಲ್ಲಿಯು ಅವರ ಪೂರ್ತಿ ಹೆಸರೇನೆಂದು ನನಗೆ ಗೊತ್ತಿಲ್ಲ. ಜಫ್ರಿ ಮತ್ತು ರಿಕ್ಸಾ ಅದಾಗಲೇ ಊರು ಬಿಟ್ಟು ದುಬಾಯಿಗೆ ಕೂಡ ಹೋಗಿ ಆಗಿದೆ. ಅವರು ವರ್ಷಕೊಮ್ಮೆಯೋ ಬರುವಾಗ ತರುವ ದೊಡ್ಡ ದೊಡ್ಡ ಚೀಲಗಳು ಮಾತ್ರ ನಮಗೆ ಅಚ್ಚರಿ ಹಾಗೂ ಕುತೂಹಲವನ್ನು ತರುತ್ತದೆ. ಚೀಲದೊಳಗಿಂದ ತೆಗೆದು ತಂದ ಪರಿಮಳದ ಸಾಬೂನು ಅಥವಾ ಗ್ಲುಕೋಸ್ ಬಿಸ್ಕಿಟ್‍ಗಳಷ್ಟೇ ನಮಗೆ ಸಿಗುತ್ತಿತ್ತು. ಜೋನ್ ಸ್ವಲ್ಪ ಚುರುಕಿನ ಹುಡುಗ. ತನ್ನ ತಂದೆ ತಾಯಿಯರ ಬಗ್ಗೆ ಆತನಿಗೆ ಭಾರಿ ಪ್ರೀತಿ ಮತ್ತು ಹೆಮ್ಮೆ. ಹಾಗಾಗಿ ಆತ ಅವಕಾಶ ಸಿಕ್ಕರೂ ಪರದೇಶಕ್ಕೆ ಅಥವಾ ಮುಂಬಯಿ ಯಾ ಬೆಂಗಳೂರಿಗೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದ. ಸಮಯ ಕಳೆಯಲು ಸಂಜೆ ಹೊತ್ತು ಕಟ್ಟೆಯಲ್ಲಿ ಹಾಲ್ಟ್ ಆಗುವ ಬಸ್ಸನ್ನು ತೊಳೆಯುವುದೋ, ಡಾಕ್ಟರ್ ಅವರ ಮನೆಗೆ ರೇಶನ್ ನಿಂದ ಬೆಳ್ತಿಗೆ ಅಕ್ಕಿ, ಸಕ್ಕರೆ ಮತ್ತೆ ಸೀಮೆ ಎಣ್ಣೆ ತರುವುದೋ ಮಾಡುತ್ತಿದ್ದ. ಅವರ ಖರ್ಚಿಗೆ ಪರದೇಶದಲ್ಲಿದ್ದ ಮಕ್ಕಳು ಕೊಟ್ಟ ಹಣ ಸಾಕಾಗುತ್ತಿತ್ತು. ಆದರೆ ಅವರ ತಾಯಿ ಬಾಯಮ್ಮ ಹತ್ತಿರದ ಯಾರದೆ ಅಡಿಕೆ ತೋಟದಲ್ಲಿ ಮದ್ದು ಬಿಡುವಾಗ ಪಂಪಿಗೆ ಗಾಳಿ ಹಾಕುವುದಕ್ಕೋ, ಅಡಿಕೆ ಕೊಯ್ಯುವಾಗ ಅದನ್ನು ಹೆಕ್ಕಿ ಬುಟ್ಟಿಯಲ್ಲಿ ತುಂಬಿ ಅಂಗಳದ ವರೆಗೆ ತಲುಪಿಸುವುದಕ್ಕೋ, ಯಾರದೇ ಹಟ್ಟಿಯಲ್ಲಿ ದನವು ಕರು ಹಾಕಿದರೆ ಅದರ ಬಾಣಂತನಕ್ಕೋ ಅಂಥ ಹೇಳಿಕೊಂಡು ಕೆಲಸ ಮಾಡುತ್ತಿದ್ದಳು. ಇದೆಲ್ಲಾ ಅವಳ ಅನೌಪಚಾರಿಕ ಕೆಲಸ. ಸಂಬಳ ಕೊಡ ಬೇಕೆಂದೇನು ಇಲ್ಲ. ಆದರೆ ಕೆಲಸ ಮಾಡಿಸಿದವರು ಅವಳಿಗೆ ಮನೆಖರ್ಚಿಗೆ ಬೇಕಾದ ತೆಂಗಿನಕಾಯಿ, ತರಕಾರಿ, ಜತೆಗೆ ಹತ್ತರದೋ, ಇಪ್ಪತ್ತರದೋ ನೋಟೊಂದನ್ನು ನೀಡಿ ಅವಳ ಮನಸ್ಸನ್ನು ತುಂಬುತ್ತಿದ್ದರು. ಅವಳು ಸಾಕುತ್ತಿದ್ದ ಕೋಳಿಗಳೂ ಸಡನ್ನಾಗಿ ಯಾರದೋ ಮನೆಗೆ ನೆಂಟರು ಬಂದರೆ ನೆರವಿಗೆ ಬರುತ್ತಿದ್ದವು.


ಸಾಲು ಕೂಡಾ ಕೆಲವು ವರ್ಷ ಶಾಲೆಗೆ ಹೋಗಿ ಓದುವುದನ್ನು ಬಿಟ್ಟು ಬಿಟ್ಟ. ಅಣ್ಣ ಜೋನ್‍ನೊಟ್ಟಿಗೋ ಅಥವಾ ಮಮ್ಮದೆಯ ಮಗ ಹಸೈನಾರ್ ಜತೆಗೋ ಇರುತ್ತಿದ್ದ. ಜೋನ್ ಸಂಜೆ ನಿಂತ ಬಸ್ಸನ್ನು ತೊಳೆಯುತ್ತಿದ್ದನಲ್ಲ ಅದೇ ಬಸ್ಸಿನ ಕ್ಲೀನರ್ ಆಗಿ ಸಾಲು ಕೆಲಸಕ್ಕೆ ಸೇರಿದ. ಆ ಬಸ್ಸಿನ ಡ್ರೈವರ್ ದೇವಪ್ಪ ನಾಯಕ್‍ರ ಮಗ ಅಚ್ಚು. ಅಚ್ಚು ಬಸ್ಸು ಬಿಡುವುದೆಂದರೆ ವಿಮಾನ ಹಾರಿಸುವಂತೆ. ನಮ್ಮ ಊರಿನ ಗುಡ್ಡ ಕಣಿವೆಗಳ ಏಳಿರಿಜಾರುಗಳ ಅನಿರೀಕ್ಷಿತ ತಿರುವುಗಳಲ್ಲೆಲ್ಲಾ ಅವನು ಲೀಲಾಜಾಲವಾಗಿ ಬಸ್ಸು ಬಿಡುತ್ತಾನೆ. ನಮ್ಮ ಊರಿನಿಂದ ಮಂಗಳೂರಿಗೆ ನೇರ ಬಸ್ ಸೌಕರ್ಯ ಆರಂಭಗೊಂಡಾಗ ಅವನೇ ಬಸ್ಸಿನ ಡ್ರೈವರ್ ಆಗಲು ಲಾಯಕ್ಕಾದ ವ್ಯಕ್ತಿಯಾಗಿದ್ದ. ಒಂದೇ ಸ್ಪೀಡಲ್ಲಿ ಓಡಿಸುವ ಕೇಶವನಾಗಲೀ, ಸಣ್ಣ ಸಣ್ಣ ಹೊಂಡಗಳಿಗೂ ಬ್ರೇಕ್ ಹಾಕುವ ಪೀರ್ ಸಾಯಿಬರಾಗಲೀ ಮಂಗಳೂರಿಗೆ ಹೋಗುವ ಬಸ್ಸಿನ ಡ್ರೈವರಾಗಲು ಲಾಯಕ್ಕಲ್ಲ ಎಂದು ನಮ್ಮ ಸೋಮಾರಿಕಟ್ಟೆಯ ಸಭೆ ನಿರ್ಣಯಿಸಿತ್ತು. ಆ ನಿರ್ಣಯ ಪೇಟೆಯಲ್ಲಿದ್ದ ಕೃಷ್ಣ ಶೆಟ್ಟಿಗೂ ಗೊತ್ತಾಗಿ ಅಚ್ಚುನನ್ನೆ ಮಂಗಳೂರು ಬಸ್ಸಿನ ಡ್ರೈವರ್ ನನ್ನಾಗಿ ನೇಮಕಗೊಳಿಸಲಾಯಿತು.

ಇತ್ತ ಸಾಲು ಆ ಬಸ್ಸಿನ ಕ್ಲಿನರ್ ಆಗಬಹುದು ಎಂಬ ಆಶೆಯನ್ನು ಹೊತ್ತುಕೊಂಡು ಅಚ್ಚುನ ಗೆಳೆತನ ಮಾಡಲಾರಂಭಿಸಿದ. ಅಚ್ಚು ಬೆಳಿಗ್ಗೆ ಮಂಗಳೂರಿಗೆ ಹೊರಡುವಾಗ ಬಸ್ಸಿನಲ್ಲಿ ಅಗರಬತ್ತಿ ಹಚ್ಚಿ ನಮಸ್ಕರಿಸುವಾಗ ಸಾಲು ಬಂದು ಅಚ್ಚುವಿಗೆ ನಮಸ್ಕರಿಸುವುದು ರೂಢಿಯಾಯಿತು. ಊರಿನ ಯಾರೆಲ್ಲ ಮಂಗಳೂರಿಗೆ ಹೊರಟ್ಟಿದಾರೆ ಎಂದು ಹಿಂದಿನ ಸಂಜೆಯೇ ಲೆಕ್ಕ ಹಿಡಿದು ಕೊಳ್ಳುತ್ತಿದ್ದ ಸಾಲು. ಯಾರಾದರು ಬಸ್ಸು ಹೊರಡುವ ಸಮಯಕ್ಕೆ ತಲುಪದಿದ್ದರೆ ಅಚ್ಚುವಿನೊಡನೆ ಸಾಲು ಹೇಳುತ್ತಿದ್ದ "ಗುಡ್ಡೆ ಮನೆಯ ರಾಮಚಂದ್ರ ಭಟ್ಟರು ನಿನ್ನೆ ಹೇಳುತ್ತಿದ್ದರು ಇವತ್ತು ಮಂಗಳೂರಿಗೆ ಹೋಗಲಿಕ್ಕುಂಟು ಅಂತ. ತುಕ್ರ ತನ್ನ ಟಿ.ಬಿ.ಗೆ ಮದ್ದು ತರಲು ಚೀಟಿ ಕೂಡಾ ಭಟ್ಟರಲ್ಲಿ ಕೊಟ್ಟಿದ್ದ. ಅವರಿಗೆ ಐದು ನಿಮಿಷ ಕಾಯೋಣ" ಎಂದು. ಅಷ್ಟರಲ್ಲಿ ಭಟ್ಟರು ಏದುಸಿರು ಬಿಡುತ್ತಾ ಅಡಿಕೆಯ ಸಣ್ಣ ಚೀಲವನ್ನೆ ಹೊತ್ತುಕೊಂಡು ಬಸ್ಸಿಗೆ ಓಡಿಕೊಂಡು ಬರುತ್ತಿದ್ದರು.

ಸಾಲುವಿನ ಪ್ರಯತ್ನ ಯಶಸ್ವಿಯಾಗಲು ಅವನ ಶ್ರಮದ ಪ್ರತಿಫಲವೋ ಅಥವಾ ಏಸುವಿನ ಕೃಪೆಯೋ ಗೊತ್ತಿಲ್ಲ. ಅದುವರೆಗೆ ಮಂಗಳೂರು ಬಸ್ಸಿಗೆ ಕ್ಲೀನರ್ ಆಗಿದ್ದ ಅಬ್ಬಾಸ್ ನಿಗೆ ದುಬಾಯಿಯಿಂದ ವೀಸ ಬಂದು ಅವನು ಇನ್ನು ಒಂದು ವಾರದೊಳಗೆ ದುಬಾಯಿಗೆ ಹೋಗುವುದೂ ಎಂದಾಯಿತು. ನಿರಾತಂಕವಾಗಿ ಕ್ಲೀನರ್ ಕೆಲಸ ಸಾಲುವಿಗೆ ಸಿಕ್ಕಿತು. ಎರಡು ದಿನ ಮಂಗಳೂರಿಗೆ ಹೋಗಿ ಬಂದ ಸಾಲು ಮಂಗಳೂರಿನ ಭಾಷೆಯನ್ನು ನಿರರ್ಗಳವಾಗಿ ಮಾತಾಡಲು ಆರಂಭಿಸಿದ. "ಜಪ್ಪುಲೆ, ಮಿತೇರ್ಲೆ, ದುಂಬು ಪೋಯಿ, ಹೋಲ್ಡಾನ್, ರೈಟ್ ಪೋಯಿ" ಇವೆಲ್ಲವನ್ನು ಒಂದು ವಾರದೊಳಗೆ ಕಲಿತ ಸಾಲು ತುಂಬಾ ನಿಯತ್ತಿನ ಹುಡುಗ ಎಂದು ಊರಿನವರೆಲ್ಲರ ಮೆಚ್ಚುಗೆ ಮಾತ್ರವಲ್ಲ ಬಸ್ಸಿನ ಪಯಣಿಗರ ಶಾಭಾಶ್ ಅನ್ನೂ ಪಡೆದ. ಹೊರ ಊರಿಂದ ಯಾರಾದರು ಬಸ್ಸಲ್ಲಿ ಬಂದು ನಮ್ಮ ಊರಿನಲ್ಲಿ ಇಳಿದು ಅವರಿಗೆ ಇಲ್ಲಿನವರ ಮನೆ ಗೊತ್ತಿಲ್ಲವಾದರೆ ಸ್ವತಹಾ ಸಾಲು ಯಾರನ್ನಾದರೂ ಪರಿಚಯಸ್ಥರನ್ನು ಹೇಳಿ ಅವರನ್ನು ಕಳುಹಿಸುತ್ತಿದ್ದ.

ಸಾಲು ಭಾನುವಾರ ಮಾತ್ರ ಬೆಳಗ್ಗಿನ ಟ್ರಿಪ್ ಮಿಸ್ ಮಾಡುತ್ತಿದ್ದ. ಕಾರಣ ಚರ್ಚಿಗೆ ಹೋಗಬೇಕಿತ್ತು. ಉಳಿದಂತೆ ಅವನಿಗೆ ರಜಾ ಇರುತ್ತಿರಲ್ಲಿಲ್ಲ. ಕೆಲವೊಮ್ಮೆ ಮಾತ್ರ ಅವನು ಒಂದು ಟ್ರಿಪ್ ಮಂಗಳೂರಿನಲ್ಲಿ ಮಿಸ್ ಮಾಡುತ್ತಿದ್ದ. ಅಲ್ಲಿ ಪೇಟೆ ಸುತ್ತಲು ಹೋಗುತ್ತಿದ್ದ. ಸಂಜೆಯಾದರೆ ಒಂದು ಸಿನಿಮಾ ನೋಡಿ ಬರುತ್ತಿದಾನೋ ಏನೋ.

ಬಸ್ ಕ್ಲೀನರ್ ಆಗಿದ್ದ ಸಾಲು ಒಂದು ದಿನ ಕಂಡಕ್ಟರೋ ಅಥವಾ ಡ್ರೈವರೋ ಆಗಬಹುದು ಎಂದು ಆತನ ಹಿತೈಷಿಗಳೆಲ್ಲಾ ಎಣಿಕೆ ಹಾಕುತ್ತಿದ್ದರು.

ಇದ್ದಕಿದ್ದಂತೆ ಸಾಲು ನಾಪತ್ತೆ ಯಾದ ಸುದ್ದಿ ಊರಿಡೀ ಹಬ್ಬಿತು. ಸಾಲುವಿನ ಮೃತ ದೇಹ ನಮ್ಮದೇ ಪಕ್ಕದೂರಿನ ಗೋಪಾಲಭಟ್ಟರ ಬಾವಿಯಲ್ಲಿ ತೇಲುತ್ತಿದೆ ಎಂದು ನಾಲ್ಕೈದು ದಿನಗಳ ನಂತರ ತಿಳಿಯಿತು. ಸಾಲು ಯಾಕೆ ನಾಪತ್ತೆ ಯಾದ ಹೇಗೆ ಸತ್ತ ಎಂಬ ವಿಚಾರದ ಬಗ್ಗೆ ಮುಕ್ತವಾಗಿ ಮಾತುಕತೆಗಳೇ ಇರಲ್ಲಿಲ್ಲ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಮಾಡಿದನೆಂದು ಎಲ್ಲರೂ ಅಂದುಕೊಳ್ಳುವವರೇ. ಅವನ ತಾಯಿ, ಅಕ್ಕ ಐರಿನ್, ಇತರ ಸೋದರರೂ ಸಾಲುನ ಸಾವನ್ನು ಸಾವಾಕಾಶವಾಗಿ ಆತ್ಮಹತ್ಯೆಯೆಂದೇ ಒಪ್ಪಿಕೊಂಡರು. ನಾನು ನಮ್ಮೂರಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಕುಳಿತು ಅವನದೇ ಯೋಚನೆಯಲ್ಲಿ ಮುಳುಗುತ್ತಿದ್ದೆ. ಪ್ರತಿಯೊಂದು ಪ್ರಯಾಣವೂ ನನಗೆ ಸಾಲುನ ನೆನಪನ್ನು ತರುತ್ತಿತ್ತು. ನಾನು ಸಾಮಾನ್ಯವಾಗಿ ಹಿಂದಿನ ಬಾಗಿಲಿನ ಮುಂದಿನ ಸೀಟಿನಲ್ಲಿ ಕುಳಿತು ಕೊಳ್ಳುತ್ತಿದ್ದೆ. ಹಿಂದೆ ಸಾಲು "ರೈಟ್ ಪೋಯಿ" ಹೇಳುವಂತೆ ಅನಿಸುತ್ತಿತ್ತು. ಈಗ ಬಸ್ಸಿನ ಕ್ಲೀನರ್ ಬೇರೆಯವನು. ಆದರೆ ನನಗೆ ಬಸ್ಸು ಹತ್ತುವಾಗ ಇಳಿಯುವಾಗ ಸಾಲುನ ನೆನಪು ಮಾತ್ರ ಮರೆಯಲಾಗುತ್ತಿಲ್ಲ.

ಸಾಲು ಮರೆಯಾಗಿ ಒಂದೆರಡು ವರ್ಷವಾಗಿತ್ತು. ನನ್ನ ಅಕ್ಕನೊಂದಿಗೆ ಒಂದು ದಿನ ಮಾತಾಡುತ್ತಾ ಕುಳಿತ್ತಿದ್ದೆ. ಮಾತಿನ ಮಧ್ಯೆ ಸಾಲುನ ನೆನಪುಗಳು, ಮಾತುಗಳು ಬಂದವು. ಅಕ್ಕನಲ್ಲಿ ನಾನಂದೆ "ಸಾಲುನ ಸಾವು ಗೂಢವಾಗಿಯೇ ಉಳಿಯಿತಲ್ಲ" ಎಂದು. ಅದಕ್ಕವಳು "ಅಲ್ಲ. ಗೂಢವಾಗಿಲ್ಲ. ಎಲ್ಲರಿಗೂ ಗೊತ್ತು. ಆತ ಯಾಕೆ ಸತ್ತ. ಯಾರು ಕೊಂದರು. ಹೇಗೆ ಕೊಂದರು. ಎಲ್ಲಿ ಕೊಂದರು. ಎಲ್ಲ ವಿವರ ನಮ್ಮ ಊರಿನ ಎಲ್ಲರಿಗೂ ಗೊತ್ತು. ಆದರೆ ಯಾರೂ ಗೊತ್ತಿದೆ ಎಂದು ಹೇಳುವುದಿಲ್ಲ."

ಸಾಲುವನ್ನು ಚಿಕ್ಕಂದಿನಿಂದಲೂ ಬಹಳಷ್ಟು ಹಚ್ಚಿಕೊಂಡಿದ್ದ ನನಗೆ ಅಕ್ಕ ಸಾಲುವಿನ ಸಾವಿನ ಕತೆ ಹೇಳಲು ಆರಂಭಿಸಿದಳು.

ಸಾಲು ಮಂಗಳೂರಿಗೆ ಬಸ್ಸಿನಲ್ಲಿ ಕ್ಲೀನರ್ ಆಗಿ ಹೋಗಲು ಆರಂಭವಾದಂತೆ ಕೋಡಿಮನೆಯ ಸುಬ್ಬಣ್ಣ ಭಟ್ಟರ ಮಗಳು ಶ್ರೀದೇವಿಯೂ ಕಾಲೇಜಿಗೆ ಹೋಗಲು ಆರಂಭಿಸಿದಳು. ಮಂಗಳೂರಿಗೆ ಸಾಲುನ ಬಸ್ಸಲ್ಲೇ ಹೋಗುವುದು ಬರುವುದು. ಅವಳು ಸಾಲುವನ್ನು ಮಾತಾಡಿಸಿ ಕೊಳ್ಳುತ್ತಿದ್ದಳು. ಸಾಲು ತನ್ನ ಕೆಲಸ ವನ್ನು ಮಾತ್ರ ಗಮನವಿಟ್ಟು ಕೊಳ್ಳುತ್ತಿದ್ದ. ಶ್ರೀದೇವಿ ಮಂಗಳೂರಿಗೆ ಕಾಲೇಜಿಗೆ ಹೋಗುವವಳು ಮಂಗಳೂರಿನ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂದು ಸಾಲು ಐರಿನ್ ಗೆ ಹೇಳಿದ್ದ. ಐರಿನ್ ಸಾಲುವಿನೊಡನೆ "ಈ ಮಾತನ್ನು ನನ್ನಲ್ಲಿ ಹೇಳಿದಂತೆ ಇನ್ಯಾರಲ್ಲೂ ಹೇಳಬೇಡ. ನಿನ್ನನ್ನು ಸಿಗಿದು ಹಾಕ್ಯಾರು" ಎಂದೆಚ್ಚರಿಸಿದಳು. ಸಾಲುವಿಗೆ ಮಂಗಳೂರಿನ ಹುಡುಗನೊಡನೆ ತನ್ನ ಪ್ರೀತಿ ಪ್ರಣಯ ಗೊತ್ತಿದೆ ಎಂದು ಶ್ರೀದೇವಿಗೂ ಗೊತ್ತಾಯಿತು. ಹಾಗಾಗಿ ಅವನೊಡನೆ ಬಹಳ ಸ್ನೇಹದಿಂದ ವರ್ತಿಸುತ್ತಿದ್ದಳು. ಕೆಲವೊಮ್ಮೆ ತಿಂಡಿ ಪೊಟ್ಟಣವನ್ನೂ ಮನೆಯಿಂದ ತಂದು ಸಾಲುಗೆ ಕೊಡುತ್ತಿದ್ದಳು. ಇವೆಲ್ಲವನ್ನು ಕಂಡ ನಮ್ಮ ಊರವರು ಸಾಲು ಮತ್ತು ಶ್ರೀದೇವಿ ನಡುವೆ ಅದೇನೋ ಇದೆ ಎಂಬ ಗುಮಾನಿಯಲ್ಲಿ ಮಾತಾಡಲು ತೊಡಗಿದ್ದರು. ಸಾಲುವಿಗೂ ಹೆಮ್ಮೆ ಆಗುತ್ತಿತ್ತು. ಊರಿನ ಒಳ್ಳೆಯ ಮನೆತನದ ಭಟ್ಟರ ಸುಂದರಿ ಹುಡುಗಿಯೊಬ್ಬಳು ತನ್ನೊಡನೆ ಸ್ನೇಹದಿಂದಿರುವುದು ಅವನಿಗೂ ಖುಷಿಕೊಟ್ಟಿತ್ತು. ಶ್ರೀದೇವಿ ಮಂಗಳೂರಿಗೆ ತಲುಪಿದೊಡನೆ ಅಲ್ಲಿ ಬೈಕ್‍ನಲ್ಲಿ ಕಾಯುತ್ತಿರುವ ಹುಡುಗನನ್ನು ಕಂಡು ಸಾಲು ಕೂಡ ಕರುಬುತ್ತಿದ್ದ ಎಂದು ಐರಿನ್ ಹೇಳುತ್ತಿದ್ದಳು. ಅವರಿಬ್ಬರೂ ಎಲ್ಲೆಲ್ಲಾ ಸುತ್ತಿ ಸಂಜೆ ಮತ್ತೆ ಅವಳು ಅದೇ ಬಸ್ಸಲ್ಲಿ ಬರುತ್ತಿದ್ದಳು. ಶ್ರೀದೇವಿಯ ಪ್ರಣಯ ಅವಳು ಗರ್ಭಿಣಿಯಾಗುವವರೆಗೆ ಬಂತು. ಆದರೆ ಇದು ಅವಳ ಮನೆಯಲ್ಲಿ ಅವಳಮ್ಮ ಶಾರದಮ್ಮನಿಗೆ ಮಾತ್ರ ಗೊತ್ತಾಯಿತು. ಬಸ್ಸಿನಲ್ಲಿ ಹೋಗುತ್ತಿದ್ದ ಶ್ರೀದೇವಿ ಮಂಗಳೂರು ತಲುಪುತ್ತಿದ್ದಂತೆ ಒಂದೆರಡು ಬಾರಿ ವಾಂತಿ ಮಾಡಿದ್ದನ್ನು ಸಾಲು ಬಂದು ಐರಿನ್ ಗೆ ಹೇಳಿದ್ದ. ಐರಿನ್ ಎಲ್ಲಾ ತಿಳಿದಿದ್ದಳು. ಅವಳಿಗೆ ಶ್ರೀದೇವಿ ಬಗ್ಗೆ ಕನಿಕರವು ಹುಟ್ಟಿತು. ಶ್ರೀದೇವಿ ವಾಂತಿ ಮಾಡಿದನ್ನು ಊರಿನವರೂ ಬಸ್ಸಲ್ಲಿ ಹೋಗುವಾಗ ಕಂಡಿದ್ದಾರೆ. ಕೆಲವು ಬಚ್ಚಾಲಿಗಳು ಸಾಲುನಿಗೆ "ನೀನು ಬೇಗ ಅಪ್ಪ ಆಗುತ್ತೀಯ" ಎಂದು ಕೂಡ ಹೇಳಿದ್ದರು. ಈ ಎಲ್ಲಾ ಮಾತು ಸುಬ್ಬಣ್ಣ ಭಟ್ಟರ ಕಿವಿಗೂ ಬಿತ್ತು. ಸುಬ್ಬಣ್ಣ ಭಟ್ಟರು, ಶೇಷಪ್ಪಯ್ಯನವರು, ಮಾಸ್ಟರು ಎಲ್ಲ ಸೇರಿ ಸಮಾಲೋಚಿಸಿದರು. ಶ್ರೀದೇವಿಯೊಡನೆ ಇದಕ್ಕೆಲ್ಲಾ ಯಾರು ಕಾರಣ ಎಂದು ಕೇಳಲಿಲ್ಲ. ಸಾಲುವೇ ಕಾರಣವೆಂದು ಊರೆಲ್ಲ ತಿಳಿದ ಮೇಲೆ ಕೇಳುವುದೆಂತದ್ದು. ಅವನ ಹೆಸರು ಹೇಳದೆ ಶ್ರೀದೇವಿಯೊಡನೆ ಹೇಳಿದರು "ನೋಡು ಇನ್ನು ನೀನು ಅವನೊಡನೆ ಹೋಗಬಾರದು. ಆಗಿದ್ದು ಆಯಿತು. ಮಂಗಳೂರಿನಲ್ಲಿಯೇ ಹೋಗಿ ಮದ್ದು ಕೊಡಿಸಿ ಇಳಿಸಿ ಬಿಡುವ. ಅವನೊಟ್ಟಿಗೆ ಇನ್ನು ಹೋದರೆ ಅವನೊಂದಿಗೆ ನಿನ್ನನ್ನೂ ಇಲ್ಲವಾಗಿಸುವೆ." ಶ್ರೀದೇವಿ "ಇಲ್ಲ ನಾನು ಅವನನ್ನೇ ಮದುವೆಯಾಗುವೆ. ಅವನೇ ನನ್ನ ಗಂಡ ಅವನು ಸತ್ತರೆ ನಾನೂ ಸಾಯುವೆ" ಎಂದು ತರ್ಕ ಹಿಡಿದಳು. "ನಾಳೆ ಪರೀಕ್ಷೆ ಯಿದೆ ನೀನು ಮಂಗಳೂರಿಗೆ ಹೋಗಿ ಅಲ್ಲಿರುವ ನಿನ್ನ ಅತ್ತೆ ಮನೆಯಲ್ಲಿರು. ನಾನು ಮತ್ತು ಅಮ್ಮ ನಾಡಿದ್ದು ಬರುತ್ತೇವೆ. ಡಾಕ್ಟರ್ ರನ್ನು ನೋಡೋಣ" ಎಂದು ಕೊನೆ ಮಾತು ಹೇಳಿದರು. ಶ್ರೀದೇವಿ ಮಂಗಳೂರಿಗೆ ಹೋದಳು. ಸುಬ್ಬಣ್ಣ ಭಟ್ಟರು ಸಂಜೆ ಬಸ್ಸಿನಿಂದ ಇಳಿದ ನಂತರ ಸಾಲುನನ್ನು "ಬಾ ನಮ್ಮ ಜೀಪಿನಲ್ಲಿ ಕೂತುಕೋ" ಎಂದು ಕರೆದುಕೊಂಡು ಹೋದುದನ್ನು ಯಾರೂ ನೋಡಿರಲ್ಲಿಲ್ಲ. ಒಬ್ಬರನ್ನು ಬಿಟ್ಟರೆ.

ಮೊನ್ನೆ ನಾನು ಪುಣೆಗೆ ಹೋದಾಗ ನನ್ನ ಗೆಳೆಯ ನಾಗೇಶ್ ಶೆಣೈಯನ್ನು ಮಾತಾಡಿಸಿಕೊಂಡು ಬರಲೆಂದು ಅವರ ಅಪಾರ್ಟ್ ಮೆಂಟ್‍ಗೆ ಹೋಗಿದ್ದೆ. ಪಕ್ಕದ ಮನೆಯಲ್ಲಿ ಮಂಗಳೂರಿನವರೇ ಆದ ನರೇಶ್ ಪೈ ಇದ್ದಾನೆ ಎಂದ. ಅವರದು ಇಂಟರ್ ಕಾಸ್ಟ್ ಮದುವೆ ಎಂದ. ಬೆಳಿಗ್ಗೆ ಹೊರಡುವಾಗ ಪೈ ದಂಪತಿಗಳು ಸಿಕ್ಕರು. ಶ್ರೀದೇವಿ ನಮಸ್ಕಾರ. ಬಾನಾಡಿಯವರಲ್ವ? ಎಲ್ಲಿದ್ದೀರಿ ಈಗ? ಮಂಗಳೂರ? ಬೆಂಗಳೂರ? ಬೊಂಬಾಯಿಯಾ? ಅಲ್ಲ ದಿಲ್ಲಿಯಾ? ಅಂದಳು.

ಈಗ ಪುಣೆಯಲ್ಲೇ ಇದ್ದೀನಲ್ವ! ನಿಮ್ಮೆದುರೇ! ಅಂದೆ. "ಇಲ್ಲ ಮಂಗಳೂರು ಬಸ್ಸಿನ ಕ್ಲೀನರ್ ಆಗಿದ್ದೇನೆ. ಸಾಲು ಸತ್ತ ನಂತರ ಯಾರೂ ಸಿಕ್ಕಿಲ್ಲ." ಅಂತ ಹೇಳಿತು ಮನ.

ಸಾಲುವಿಗೆ: ನಿನ್ನ ನೆನಪು ಮಂಗಳೂರು ಬಸ್ಸಿನಲ್ಲಿ ಮಾತ್ರವಿತ್ತು. ಈಗ ಅದು ಮಹಾನಗರಗಳ ಅಪಾರ್ಟ್ ಮೆಂಟ್ ಗಳೊಳಗಿನ ಮನೆಗಳಲ್ಲೂ ಬರುತ್ತಿದೆ. ಮುಗ್ದತೆಗೆ ನೀನು ಮತ್ತೊಂದು ಹೆಸರು.ಸತ್ತು ಮತ್ತೆ ಹುಟ್ಟಿದ ಜೀಸಸ್ ನ ನೆನೆಪಿನೊಂದಿಗೆ ಈ ಶುಭಶುಕ್ರವಾರ ಮತ್ತು ಈಸ್ಟರ್ ಗೆ ನಿನ್ನ ನೆನಪು ಮತ್ತೆ ಮತ್ತೆ ಕಾಡುತ್ತಿದೆ ಸಾಲು. ನಿನ್ನ ಬಸ್ಸಿನಲ್ಲಿ ಹಿಂದಿನ ಬಾಗಿಲಿನ ಮುಂದಿನ ಸೀಟು ನನಗಿರಲಿ. ನೀನು ರೈಟ್ ಪೋಯಿ ಎನ್ನುವುದಕ್ಕಿಂತ ಮೊದಲು ಬರುವೆ ಆ ನನ್ನ ಸೀಟಿಗಾಗಿ. ನಿನ್ನ ಬಸ್ಸಿನಲ್ಲಿ.
ಒಲವಿನಿಂದ
ಬಾನಾಡಿ

Tuesday, March 18, 2008

ಮತ್ತೊಂದು ಹಳೆಯದಾಗುವ ಹೊಸ ಜೋಕ್

ಮೊಬಾಯಿಲುಗಳಲ್ಲಿ ಬರುವ ಸಣ್ಣ ಸಂದೇಶಗಳ ತಮಾಷೆಗಳು ಕ್ಷಣವೊಮ್ಮೆ ಖುಷಿ ಕೊಡುತ್ತವೆ. ಕೆಲವೊಂದನ್ನು ನಾವು ಗೆಳೆಯರಿಗೆ ಕಳುಹಿಸುತ್ತೇವೆ. ಅದು ಸುತ್ತಿ ಸುತ್ತಿ ಕೊನೆಗೆ ಮತ್ತೆ ನಮ್ಮ ಮೊಬಾಯಿಲುಗಳಿಗೇ ಬರುತ್ತದೆ. ನನ್ನ ಸ್ನೇಹಿತರ ಇಂಥಾ ಸಂದೇಶಗಳಿಂದ ತುಂಬಿ ಹೋಗಿದ್ದ ನನ್ನ ಮೊಬಾಯಿಲಿನ ಸಂದೇಶ ಪಟ್ಟಿಗೆಯನ್ನು ಸ್ವಚ್ಛಮಾಡುತ್ತಿದ್ದೆ. ಅದೆಷ್ಟು ತಮಾಷೆಗಳನ್ನು ಮತ್ತೆ ಓದಿದೆ. ಆದರೆ ಈ ಒಂದು ತಮಾಷೆ ಮಾತ್ರ ನನಗೆ ಸಿಕ್ಕಿದ್ದು ಹಲವು ಸಲ. ಪ್ರತಿ ಸಾರಿ ಓದಿದಾಗಲೂ ಹುಚ್ಚು ಹಿಡಿದು ಕುಪ್ಪಳಿಸಿ ನಕ್ಕು ಬಿಟ್ಟವ ನಾನು. ಅದು ಮಾತ್ರ ಮಂಗಳೂರಿನ ಭಾಷೆಯಲ್ಲಿದೆ. ಅಂದರೆ ಕನ್ನಡ ಮಿಶ್ರಿತ ತುಳುವಿನಲ್ಲಿ.

ಸರ್ದಾರ್ ಗ್ ಆಟೊಡ್ ಅರ್ಜುನನ ರೋಲ್ ತಿಕ್ಂಡ್
ಅವೆನ್ ತೂಯಿನ ಜನೊಕುಲು ಪನ್ಪೆರ್
'ಗಡ್ಡ ಇತ್ತಿನ ಅರ್ಜುನ ಬಂದಾ'
'ಗಡ್ಡ ಇತ್ತಿನ ಅರ್ಜುನ ಬಂದಾ'
ಅಪಗ ಸರ್ದಾರ್ ಪನ್ಪೆ
'ಎಕಡ್ ಪೊತೆಲ್ ಇತ್ತಿನ ದ್ರೌಪದಿ ಬನ್ನಗ ಜೆತ್ತಿತ್ತಾರಾ? '

ಅರ್ಥವಾಗದವರು ಇನ್ಯಾರೋ ತುಳುವರಿಂದ ಅರ್ಥ ಕೇಳಬೇಡಿ!
ಬಹಳ ಖತರ್ನಾಕ್ ! ಎಚ್ಚರ!
ಇಷ್ಟವಾಗದವರು ಕ್ಷಮಿಸಿ!

Tuesday, March 11, 2008

ಕನ್ನಡದ ಬ್ಲಾಗ್‍ಗಳು

ಇನ್ನೂರಕ್ಕೂ ಹೆಚ್ಚು ಬ್ಲಾಗ್‍ಗಳು ಕನ್ನಡದಲ್ಲಿ.
**
ಅವೆಲ್ಲವನ್ನು ಪಟ್ಟಿ ಮಾಡಿದ್ದೇನೆ.
**
ಲಿಂಕಿನೊಂದಿಗೆ ಕೊಟ್ಟಿರುವೆ.
**
ಇನ್ನೂ ಬಾಕಿ ಇವೆ
**
ಬಾನಾಡಿ

Thursday, March 6, 2008

ಪೆಟ್ಟು ತಿಂದ ಹಂದಿ

ಗುಡ್ಡಗಳ ನಡುವೆಯಿರುವ ಕಣಿವೆ ಪ್ರದೇಶದ ನಮ್ಮ ಅಡಿಕೆ ತೋಟ ಫಲವತ್ತಾಗಿಯೇ ಇದೆ. ಅಡಿಕೆಯ ಜತೆಗೆ ತೆಂಗು, ಬಾಳೆ, ಕರಿಮೆಣಸು, ಕೊಕ್ಕೋ ದಂತಹ ವಾಣಿಜ್ಯ ಬೆಳೆಗಳು, ಮಾವು, ಹಲಸು, ವಿವಿಧ ಹುಳಿಗಳ ಮರಗಳು (ಹುಣಸೆ, ಬೀಂಪುಳಿ, ಪುನರ್‍ಪುಳಿ, ಚೆಂಡ್ ಪುಳಿ), ನುಗ್ಗೆ, ಪೇರಳೆ, ಪಪ್ಪಾಯಿ, ಚಿಕ್ಕು, ಸಂಪಿಗೆ ಮರ, ಇತ್ಯಾದಿ ಗಿಡ ಮರಗಳಿಂದ ನಮಗೆಲ್ಲ ಬಹಳ ಚೆನ್ನಾಗಿರುವ ತೋಟವೇ ಇದೆ. ಗುಡ್ಡದಲ್ಲಿ ಬೇಕಾದಷ್ಟು ಮರಗಿಡಗಳಿದ್ದು ತೋಟಕ್ಕೆ ಬೇಕಾದ ಸೊಪ್ಪು ಕೂಡಾ ಸಿಗುತ್ತದೆ.
ಅವತ್ತು ನಮ್ಮ ತೋಟಕ್ಕೆ ಬೆಳಿಗ್ಗೆ ಎದ್ದು ಹೋದಾಗ ನಮಗೆಲ್ಲ ಆಶ್ಚರ್ಯ ಕಾದಿತ್ತು. ತೋಟದ ಬಾಳೆ, ಮುಂಡಿ, ಮೊದಲಾದ ಗಿಡಗಳ ಬುಡಗಳನ್ನು ಕೊರೆದು ಚೆಲ್ಲಿದಂತಿತ್ತು. ಮನೆಗೆ ಬಂದು ನಾನು ವರದಿ ಒಪ್ಪಿಸಿದೆ. ಹಂದಿ ಬಂದಿರಬೇಕು ಎಂದುಕೊಂಡು ಎಲ್ಲರೂ ತೋಟಕ್ಕೆ ಹೋದರು. ಮೊನ್ನೆ ಕೇಶವ ಭಟ್ಟರ ತೋಟಕ್ಕೆ ಹಂದಿ ಬಂದಿತಂತೆ. ಆ ಸುದ್ದಿ ಊರೆಲ್ಲಾ ಹಬ್ಬಿದ್ದರೂ ನನಗೆ ತಿಳಿದಿರಲ್ಲಿಲ್ಲ. ಹಾಗಾಗಿ ನಾನು ಹಂದಿ ಬಂದು ನಮ್ಮ ತೋಟವನ್ನೆಲ್ಲಾ ಕೆಡಿಸಿಬಿಟ್ಟುದ್ದನ್ನು ಊಹಿಸಲಾಗಲ್ಲಿಲ್ಲ.
ನಮ್ಮ ತೋಟಕ್ಕೂ ಕಾಡಿನ ಹಂದಿ ಬಂದು ಎಲ್ಲವನ್ನು ಕೆಡಿಸಿಬಿಟ್ಟಿದ್ದು ಸಂಜೆಯಾಗುತ್ತಲೇ ಊರಿಡಿ ಸುದ್ದಿ ಹಬ್ಬಬಹುದೆಂದು ನಾನು ತಿಳಿದೆ. ಊರಿನವರಿಗೆ ಇಂತಹ ಸುದ್ದಿಗಳೇ ರೋಚಕ ಹಾಗೂ ರಮಣೀಯವಾಗಿರುತ್ತದೆ. "ತೋಟಕ್ಕೆ ಕಾಡ ಹಂದಿ ಬಂದು ಎಲ್ಲ ಕೆಡಿಸಿಬಿಟ್ಟಿತಂತೆ ಹೌದಾ?" ಎಂದು ಕನಿಕರ ವ್ಯಕ್ತಪಡಿಸುವವರೂ ಇದ್ದರು.
ಮಾರನೆ ರಾತ್ರಿ ಮತ್ತೆ ಹಂದಿಗಳು ಬಂದು ತೋಟವನ್ನು ಹಾಳುಗೆಡವಲು ಆರಂಭಿಸಿದ್ದವು. ಮನೆಯ ನಾಯಿಗಳು ಜೋರಾಗಿ ಬೊಗಳಿ ಮಲಗಿದ್ದವು. ತೋಟದಲ್ಲಿ ನಡೆಯುವ ಕಾಡು ಹಂದಿಗಳ ಕೆಲಸಕ್ಕೆ ಅಡ್ಡಿಯಾಗದಂತೆ ಸುಮ್ಮನೆ ಮಲಗಿವೆ. ನನಗು ಆಶ್ಚರ್ಯ. ಮರುದಿನ ಬೆಳಿಗ್ಗೆ ತೋಟ ಕುರುಕ್ಷೇತ್ರದ ರಣರಂಗವಾಗಿತ್ತು.
ಈ ಕಾಡುಹಂದಿಗಳ ಎದುರು ಹೋರಾಡಲು ನಮ್ಮಲ್ಲೂ ಒಂದು ತಂಡ ಸಿದ್ದವಾಗತೊಡಗಿತು. ಅವುಗಳು ಬರುವ ದಾರಿಯಲ್ಲಿ ಸರಿಗೆಯ ಉರುಳು ಇಡುವುದು, ಖೆಡ್ಡಾ ನಿರ್ಮಿಸುವುದು, ಕೋವಿಯಿಂದ ಹೊಡೆದು ಬೇಟೆಯಾಡುವುದು, ಇತ್ಯಾದಿ ರಣನೀತಿಗಳೂ ತಯಾರಾದವು. ಗುಡ್ಡೆ ಮನೆಯ ನಾರಾಯಣ ನಾಯ್ಕ, ಅವನ ಅಣ್ಣ ತನಿಯಪ್ಪ, ಮಾಂಕು, ಕಿಟ್ಟು ಬೆಳ್ಚಾಡ, ತೇರಪ್ಪು ಎಲ್ಲಾ ಸೇರಿ ನಮ್ಮ ಗುಡ್ಡದ ಬೆನ್ನ ಮೇಲಿನ ವಿಷ್ಣುಭಟ್ಟರ ಮನೆಯಿಂದ ಕೋವಿ ತರಿಸಿದರು. ಅವರ ಕೆಲಸದವ ಫಕೀರಾ ಕೂಡಾ ಜತೆಗೆ ಬಂದಿದ್ದ. ಹಂದಿಯನ್ನು ಕೊಲ್ಲಲು ಗನ್ ತಂದ ನಾರಾಯಣ ನಾಯ್ಕ ತನ್ನ ಜಾಗೆಯ ತಕರಾರಿನಲ್ಲಿರುವ ಇನ್ನೊಬ್ಬ ಅಣ್ಣನನ್ನು ಕೊಂದು ಬಿಡುವನೋ ಎಂಬ ಹೆದರಿಕೆ ಇತ್ತೇನೋ? ಒಂದು ವೇಳೆ ಹಾಗಾದರೆ ಕೋವಿ ಕೊಟ್ಟ ವಿಷ್ಣುಭಟ್ಟರೂ ಕೋರ್ಟಿಗೆ ಅಳೆಯಬೇಕಾಗಬಹುದಲ್ಲವಾ?
ಹಂದಿ ಗುಡ್ಡದಲ್ಲೆಲ್ಲೋ ಇರುವುದು ಖಾತ್ರಿ ಎಂದು ಎಲ್ಲರ ಅಭಿಪ್ರಾಯವಾಗಿತ್ತು. ಹಗಲು ಮಲಗಿರುವ ಆಯಕಟ್ಟಿನ ಕೆಲವಾರು ಜಾಗಗಳ ಬಗ್ಗೆ, ಗುಡ್ಡದ ಬಗ್ಗೆ ಜ್ಞಾನವಿರುವ ಮಾಂಕು ವಿವರಿಸ ತೊಡಗಿದ. ನಾರಾಯಣ ನಾಯ್ಕ ಎರಡು ತಂಡ ಮಾಡಿದ. ಒಂದು ತಂಡ ಹೀಗೆ ದಕ್ಷಿಣದಿಂದ ಉತ್ತರಕ್ಕೆ ಹೋಗುವುದು. ಇನ್ನೊಂದು ಉತ್ತರದಿಂದ ದಕ್ಷಿಣಕ್ಕೆ ಬರುವುದು. ಕತ್ತಿ, ದೊಣ್ಣೆ, ಕೋಲು ಹಿಡಿದ ಎಲ್ಲರೊಂದಿಗೆ ಕೋವಿ ಹಿಡಿದ ನಾರಾಯಣ ನಾಯ್ಕ ಮತ್ತು ಕೋವಿಯ ಉಸ್ತುವಾರಿ ಫಕೀರಾ ಜತೆಜತೆಯಾಗಿ ಹೋಗುತ್ತಿದ್ದರು. (ಶೂಟಿಂಗ್‍ಗೆ ಹೊರಟ ಕ್ಯಾಮಾರಮ್ಯಾನ್ ಮತ್ತು ಕ್ಯಾಮರದ ಮಾಲೀಕನ ಅಸಿಸ್ಟೆಂಟ್ ತರ). ನಾವೆಲ್ಲ ಉತ್ತರ ದಿಕ್ಕಿನಿಂದ ಹೊರಟರೆ ಅವರು ದಕ್ಷಿಣ ದಿಕ್ಕಿನಿಂದ ಹೊರಡುವುದು ಎಂದು ತೀರ್ಮಾನವಾಯಿತು. ನಾರಾಯಣ ನಾಯ್ಕ ಹಂದಿ ಇರುವ ಜಾಗದ ಬಗ್ಗೆ ಖಾತ್ರಿಯಿದ್ದಂತೆ ಹೊರಟ್ಟಿದ್ದ. ಎರಡೂ ಕಡೆಯಿಂದ ಹೊರಟ ನಾವು ಹತ್ತಿರವಾಗತೊಡಗಿದೆವು. ಒಬ್ಬರಿಂದೊಬ್ಬರಿಗೆ ಮಾತಾಡಿದರೆ ಕೇಳುವಷ್ಟು ಹತ್ತಿರವಾದೆವು. ಒಬ್ಬರು ಬೊಬ್ಬೆ ಹೊಡೆಯಿರಿ ಹಂದಿ ಎಚ್ಚರಗೊಂಡು ಹೊರಗೆ ಬರಬಹುದು ಆಗ ಗುಂಡಿಕ್ಕಿ ಹೊಡೆಯಲು ಸುಲಭ ಎಂದು ಸಲಹೆ ನೀಡಿದರೆ, ಸುಮ್ಮನೆ ಹೋಗಿ ಹಂದಿ ಎಚ್ಚರಗೊಂಡು ನಿಮ್ಮನ್ನು ಹಾಯಬಹುದು, ಮೇಲೆರಗಬಹುದು, ನೀವೇನು ಮಾಡಬಲ್ಲಿರಿ ಎಂಬ ಸಲಹೆ ನೀಡಿದರು. ನಾವೆಲ್ಲ ಬೇಟೆಯಾಡುವ ಉತ್ಸಾಹದಿಂದ ಮನೆಯಿಂದ ಹೊರಟ ನಾಯಿಗಳೂ ಸೇರಿದಂತೆ ಬೊಬ್ಬೆಹೊಡೆಯುವವರೊಂದಿಗೆ ರಣನೀತಿಯನ್ನೂ ಒಬ್ಬರಿಂದೊಬ್ಬರಿಗೆ ಹೇಳುತ್ತಿದ್ದೆವು. ನಾರಾಯಣ ನಾಯ್ಕನ ಬೊಬ್ಬೆ ಮುಗಿಲು ಮುಟ್ಟಿತು. ಹಂದಿಯನ್ನು ನೋಡಿದೆ ಎಂದ. ಅಲ್ಲಿ ಬೊಬ್ಬೆ ಹೊಡೆದ. ಹಂದಿ ಎದ್ದು ಓಡಿದ್ದು ನಮಗೂ ಕಂಡಿತು. ಎರಡು ಹಂದಿಗಳಿದ್ದವು. ಗುಂಡು ಹೊಡೆಯುತ್ತೇನೆ ಎದುರಿನಿಂದ ಏಳಿ ಎಂದು ಆತನ ಎದುರಿದ್ದ ನಮ್ಮನ್ನು ಎಚ್ಚರಿಸಿದ. ಹಂದಿಗೆ ಇಟ್ಟ ಗುರಿ ನಮ್ಮಲ್ಲೊಬ್ಬರ ಮೇಲೆ ಬಿದ್ದರೆ ನಾವು ಪಡ್ಚ ಆಗುವುದರಲ್ಲಿ ಸಂದೇಹವಿರಲ್ಲಿಲ್ಲ. ಒಬ್ಬರು ಮರವೇರಿದರೆ ಇನ್ನೊಬ್ಬರು ನಾರಾಯಣ ನಾಯ್ಕನ ಹಿಂದೆ ಹೋಗಲು ಓಡಿದರು. ಹಂದಿ ಕೂಡಾ ನಿದ್ದೆಯಿಂದೆದ್ದು ಓಡುತ್ತಿತ್ತು. ಅದಕ್ಕೆ ತನ್ನನ್ನು ಕೊಲ್ಲಲು ಇವರೆಲ್ಲ ಬಂದಿದ್ದಾರೆ ಎಂದು ತಿಳಿದಿರಲಾರದೆಂದು ನಾನು ಅಂದುಕೊಂಡೆ. ಗುಂಡು ಹಾರಿತು. ಈಗ ಸೂರ್ಯ ಕಂತುವ ಹಂತದಲ್ಲಿದ್ದ. ಹಂದಿಗೆ ತಾಗಿರಬೇಕು. ಗುಂಡು ಹೊಡೆದ ಸದ್ದು ಮತ್ತು ಹಂದಿ ಅರಚಿದ ಸದ್ದು ಒಮ್ಮೆಲೇ ಉಂಟಾಗಿ ನಮಗೆ ಸರಿ ಕೇಳಲ್ಲಿಲ್ಲ. ಪೆಟ್ಟು ತಿಂದ ಹಂದಿ ನಮ್ಮ ಮೇಲೆರಗಬಹುದೆಂಬ ಭಯವನ್ನು ಎಲ್ಲರೂ ತುಂಬಿಸಿದರು. ಗುಂಡು ತಾಗಿದೆ ಆದರೆ ಹಂದಿ ಸಾಯಲಿಲ್ಲ ಎಂಬ ಕೊನೆ ತೀರ್ಮಾನ ತೆಗೆದುಕೊಂಡು ಕತ್ತಲಾಗುವುದಕ್ಕಿಂತ ಮೊದಲೇ ಎಲ್ಲರೂ ವಾಪಾಸದೆವು. ಮನೆಯ ಅಂಗಳದಲ್ಲಿ ಬೇಟೆಗೆ ಹೋಗಿ ಬಂದವರಿಗೆಲ್ಲ ಚಾ ಮತ್ತು ಅವಲಕ್ಕಿ, ಬಾಳೆಹಣ್ಣಿನ ಸಮಾರಾಧನೆ ನಡೆಯಿತು. ಜತೆಗೆ ಹಿಂದಿನ ಬೇಟೆಗಳ ಅನುಭವವನ್ನು ಕೂಡಾ ಹಂಚಿಕೊಂಡರು. ನಾಳೆ ಬೆಳಿಗ್ಗೆ ಒಮ್ಮೆ ಗುಡ್ಡಕ್ಕೆ ಹೋಗಿ ನೋಡಿಬರುವುದು ಎಂದೂ, ಒಬ್ಬರೇ ಹೋಗುವುದು ಸರಿಯಲ್ಲ, ಜತೆಯಾಗಿ ಹೋಗುವುದು ಎಂದು ನಿರ್ಧರಿಸಿ ಬೇಟೆಯ ತಂಡ ಚದುರಿತು.
ಬೆಳಿಗೆದ್ದು ನಾವೆಲ್ಲ ಪುಸ್ತಕದ ಚೀಲ ಹೊತ್ತುಕೊಂಡು ಶಾಲೆಗೆ ಹೊರಟೆವು. ಸಂಜೆ ಮನೆಗೆ ಬಂದು ಊಟಕ್ಕೆ ಕುಳಿತಾಗ ಮಾಂಸದ ಅಡುಗೆ. ಅಮ್ಮನಲ್ಲಿ ಕೇಳಿದಾಗ ನಿನ್ನೆಯ ಬೇಟೆಯ ಮಂದಿನ ಭಾಗದ ವಿವರಣೆ ತಿಳಿಯಿತು. ಪೆಟ್ಟು ತಿಂದ ಕಾಡು ಹಂದಿ ಗುಂಡು ಹೊಡೆದ ಜಾಗದಿಂದ ಸ್ವಲ್ಪ ದೂರವಷ್ಟೇ ಹೋಗಿ ಬಿದ್ದಿತ್ತಂತೆ. ಬೆಳಿಗ್ಗೆ ಹೋದ ನಾರಾಯಣ ನಾಯ್ಕ ಮತ್ತು ಮಾಂಕು ಅದನ್ನು ಕಂಡುಹಿಡಿದರು. ನಂತರ ಊರಿನ ದಂಡೆಲ್ಲಾ ಬಂದು ಅಲ್ಲೆ ಅದನ್ನು ಮಾಂಸ ಮಾಡಿ ಹಂಚಿದರು. ವಾಡಿಕೆಯಂತೆ ಅದನ್ನು 'ಮಾರಾಟ' ಮಾಡಲಿಲ್ಲ. ಕೋವಿ ಕೊಟ್ಟ ವಿಷ್ಣು ಭಟ್ಟರಿಗೆ ಇನ್ನೂರೈವತ್ತು ರೂಪಾಯಿ ಬಾಡಿಗೆ ಮತ್ತು ಕೋವಿಯಿಂದ ಗುಂಡು ಬಿಟ್ಟ ನಾರಾಯಣ ನಾಯ್ಕನಿಗೆ ಶರಾಬಿಗೆಂದು ನೂರು ರೂಪಾಯಿ ಸ್ಥಳದಲ್ಲಿಯೇ ಸಂಗ್ರಹಿಸಿ ಕೊಡಲಾಯಿತು. ಉಳಿದವರಿಗೆ ಕಾಡ ಹಂದಿಯ ಮಾಂಸದ ಪಾಲು. ಮನೆಯಲ್ಲಿರುವ ಜನರಲ್ಲಿ ಕಾಡಹಂದಿಯ ಮಾಂಸ ತಿನ್ನುವ ಜನರ ಲೆಕ್ಕದ ಮೇಲೆ ಮಾಂಸವನ್ನು ಹಂಚಲಾಯಿತು. ಮಾಂಸ ಕೊಂಡು ಹೋದ ಜನರಿಗೆ ಅದಕ್ಕೆ ಬೇಕಾದ ಮೆಣಸು, ಹುಳಿ, ಸಂಭಾರ ಪದಾರ್ಥ, ರೊಟ್ಟಿಗೆ ಅಕ್ಕಿ, ಜತೆಗೆ ಕುಡಿಯಲು ಶರಾಬು ಇಷ್ಟೆಲ್ಲ ಸೇರಿ ತುಂಬಾ ಖರ್ಚಿದೆ ಎಂದು ತಿಳಿದರೂ ಬೇಟೆಯಾಡಿ ಸಿಕ್ಕ ಮಾಂಸದ ರುಚಿ ಯಾವಾಗಲೂ ಸಿಗುವುದಿಲ್ಲ ಎಂಬ ಸಂಭ್ರಮವೂ ಇತ್ತು.
ಒಲವಿನಿಂದ
ಬಾನಾಡಿ.