Monday, February 11, 2008

ದಾಸನ ಮಾಡಿಕೊ ನನ್ನನಮ್ಮ ಮನೆಗೆ ಮೊನ್ನೆ ತಂದ ನಾಯಿಮರಿ ಅಂಗಳದಲ್ಲೆಲ್ಲಾ ಸುತ್ತಾಡಿತು. ತನ್ನ ಹೊಸಸ್ಥಳವನ್ನು ಅರಿತುಕೊಂಡು ಅದರದ್ದೇ ಆದ ರೀತಿಯಲ್ಲಿ ಅದಿರಲಿ ಎಂದು ನಾವು ಅದನ್ನು ಕಟ್ಟಿಹಾಕಲ್ಲಿಲ್ಲ. ನಾಯಿಮರಿ ಸಾಮಾನ್ಯ ಊರಿನ ತಳಿ. ಊರಿನ ನಾಯಿಗಳಿಗೆ ತಕ್ಕಷ್ಟು ತರಬೇತಿ ನೀಡಿದರೆ ಅವುಗಳನ್ನು ಸಾಕಿದ್ದಕ್ಕೆ, ನಮಗೆ ಬೇಕಾದಷ್ಟು ಸಹಾಯ ಮಾಡುತ್ತವೆ. ಇದು ನಾವು ತಿಳಿದುಕೊಂಡ ಸತ್ಯ ಮತ್ತು ಅನುಭವ.
ಹಿಂದೆ ನಮ್ಮಲ್ಲೊಂದು ನಾಯಿ ಇತ್ತು. ಅದರ ಹೆಸರು ದಾಸ ಎಂದು. ಅದು ಬಹಳ ಜೋರಾಗಿತ್ತು ಮತ್ತು ಕೇವಲ ಮನೆಯವರ ಮಾತನ್ನು ಕೇಳುತ್ತಿತ್ತು. ನಮ್ಮ ತಂದೆಯವರು ಅದಕ್ಕೆ ಮೆಚ್ಚಿನವರಾಗಿದ್ದರು. ಅವರಿಗೂ ಅದರ ಬಗ್ಗೆ ಬಹಳ ಹೆಮ್ಮೆಯಿತ್ತು. ಹೊಸಬರು ಯಾರಾದರೂ ಮನೆಗೆ ಬಂದರೆ ಬೊಗಳಿ ಅವರನ್ನು ಹೆದರಿಸುತ್ತಿತ್ತು. ದಿನಾ ಬರುವವರಿಗೂ ನಮ್ಮ ಮನೆಯ ದಾಸನ ಹೆದರಿಕೆ. ಕೆಲವೊಮ್ಮೆ ಮನೆಯ ಮೇಲಿನ ಗುಡ್ಡದಿಂದಲೇ ಜನ ಸಿಳ್ಳು ಹೊಡೆಯತ್ತಿದ್ದರು. ಕೆಲವರು ಗೇರು ಮರ ಹತ್ತಿ ಅಲ್ಲಿಂದ ನಮ್ಮನ್ನು ಯಾರನ್ನಾದರೂ ಕರೆಯುತ್ತಿದ್ದರು. ಅಲ್ಲಿದ್ದವರ ಬೊಬ್ಬೆ ಮೊದಲು ನಮ್ಮ ದಾಸನಿಗೇ ಕೇಳಿ, ಆತ ಬೊಗಳುತ್ತಿದ್ದ. ನಂತರ ನಮ್ಮ ತಾಯಿಯವರು ಯಾರೋ ಬಂದಿರಬೇಕು. ಅಂಗಳದ ಆಚೆ ಮೂಲೆಗೆ ಹೋಗಿ ನೋಡಿ ಎಂದು ನಮ್ಮನ್ನು ಅಟ್ಟುತ್ತಿದ್ದರು. ನಾವು ಕೊರಳು ಉದ್ದ ಮಾಡಿ ನೋಡುತ್ತಲೇ ದಾಸನನ್ನು ಸುಮ್ಮನಿರಲು ಹೇಳುತ್ತಿದ್ದೇವು. ದಾಸನನ್ನು ನಾವು ಕಟ್ಟಿಹಾಕಿದ ಸಂದರ್ಭ ನನಗೆ ನೆನಪೇ ಆಗುವುದಿಲ್ಲ. ನಮ್ಮ ಮನೆಯ ಗೇಟಿನ ವರೆಗೆ ಮಾತ್ರ ಹೋಗಿ ಆತ ಎಲ್ಲರನ್ನು ಜೋರು ಮಾಡುತ್ತಿದ್ದ. ಒಂದು ವೇಳೆ ಯಾರಾದರೂ ಬರುವ ಸಂದರ್ಭದಲ್ಲಿ ದಾಸ ನಮ್ಮ ಗೇಟಿನಿಂದ ಹೊರಗಿದ್ದರೆ ಏನೂ ಮಾಡುತ್ತಿರಲಿಲ್ಲ. ಆದರೆ ಜನರಿಗೆ ಹೆದರಿಕೆ. ನಮ್ಮ ಮನೆಗೆ ಬರುವವರಾಗಿದ್ದರೆ ದಾಸ ನಮ್ಮ ಗೇಟಿನ ಒಳಗೆ ಬಂದು ಬೊಗಳುತ್ತಿದ್ದ.
ನಮ್ಮ ತಂದೆಯವರು ಸೊಸೈಟಿಗೆ ಹೂಗುವಾಗ ಅಥವಾ ನಾವೆಲ್ಲಾದರು ಹೊರಗಡೆ ಹೋಗುವಾಗ ಅದು ನಮ್ಮ ಜತೆ ಬಹಳಷ್ಟು ದೂರ ಬರುತ್ತಿತ್ತು. ಮುಖ್ಯರಸ್ತೆಯ ಬದಿಯಲ್ಲಿ ಬಸ್ಸು ಹಿಡಿಯಲೆಂದು ಕಾಯುತ್ತಿರಬೇಕಾದರೆ ಅದು ಕಾಯುತ್ತಿತ್ತು. ನಾವು ಬಸ್ಸು ಹತ್ತಿ ಹೊರಟರೆ ಅದು ತನ್ನ ಪಾಡಿಗೆ ನಮ್ಮ ಮನೆಗೆ ವಾಪಾಸಾಗುತ್ತಿತ್ತು. ದಾರಿಯಲ್ಲಿ ಹೋಗುತ್ತಿರುವಾಗ ಅದನ್ನು ಯಾರೂ ಕಲ್ಲೆಸೆದು ಹೆದರಿಸುತ್ತಿರಲ್ಲಿಲ್ಲ. ಕಾರಣ ಅವರೇನಾದರೂ ನಮ್ಮ ಮನೆಗೆ ಬಂದರೆ ಅವರನ್ನು ಸಿಗಿದು ಹಾಕಬಹುದು ಎಂಬ ಭಯವಿತ್ತು ಜನರಲ್ಲಿ. ನನ್ನ ಅಣ್ಣ ಮುಂಬಯಿಯಲ್ಲಿದ್ದಾಗ ವರುಷಕ್ಕೊಮ್ಮೆ ಬಂದಾಗ ದಾಸನಿಗೆ ಸ್ವಲ್ಪ ಹೆದರಿಕೆ. ಅವನು ಮನೆಯ ದೂರ ಇರುತ್ತಿದ್ದ. ಕೆಲವೊಮ್ಮೆ ಅವನ ಜತೆಗೆ ಆಟ ಕೂಡ ಆಡುತ್ತಾನೆ. ಆದರೆ ಹೆದರಿಕೆ.
ಅಣ್ಣ ಬಂದಾಗ ಮಾಡುವ ಕುರಿ, ಕೋಳಿ, ಮೀನಿನ ಅಡುಗೆ ಮತ್ತು ಅವನಿಗೆ ಸಿಗುವ ಮಾಂಸದ ಊಟ ದಾಸನನ್ನು ಹತ್ತಿರ ತರಿಸುತ್ತದೆ.

ನಮ್ಮೆಲ್ಲರ ದಾಸ ಬಹಳ ಮುದಿಯನಾಗುವವರೆಗೆ ಜೀವಿಸಿದ್ದ. ನಮ್ಮ ತಂದೆಯ ದಾಸ ನಾಗಿದ್ದ ಆತ ನಮ್ಮ ತಂದೆಯವರು ತೀರಿದ ನಂತರ ಸತ್ತ. ನಮ್ಮ ತಂದೆಯವರ ಉತ್ತರಕ್ರಿಯೆಯ ಮೊದಲ ದಿನದಿಂದ ದಾಸ ಯಾರಿಗೂ ಕಾಣಸಿಗಲಿಲ್ಲ. ನಾವೆಲ್ಲಾ ಹುಡುಕಿದೆವು. ಅವನು ನಮ್ಮ ಅಡಿಕೆ ತೋಟದ ಒಂದು ಮೂಲೆಯಲ್ಲಿ ಸುಮ್ಮನೆ ಮಲಗಿದ್ದ. ನಮ್ಮ ತಂದೆಯವರು ತೀರಿಹೋದ ಮೇಲೆ ಅವರ ಶವ ಸಂಸ್ಕಾರ, ನಂತರ ಗೋಳೋ ಎಂದು ಮನೆಯವರೆಲ್ಲ ಅತ್ತುದ್ದನು ಕಂಡ ದಾಸ ಕೂಡಾ ಅತ್ತಿದ್ದ. ಅವನಿಗೆ ನಮ್ಮ ತಂದೆಯವರು ಇನ್ನಿಲ್ಲ ವೆಂಬ ವಿಷಯ ಗೊತ್ತಾಗಿತ್ತು. ಅವನು ಊಟ ಮಾಡಿದ್ದನೆ ಇಲ್ಲವೇ ಎಂದು ವಿಚಾರಿಸಲು ಯಾರೂ ಇರಲ್ಲಿಲ್ಲ. ತೋಟದ ಮೂಲೆಯಲ್ಲಿ ಸುಮ್ಮನೆ ಬಿದ್ದದ್ದ ಅವನು ಏಳುವಂತಿರಲಿಲ್ಲ. ನಾವು ಅವನಿಗೆ ಊಟ ತೆಗೆದುಕೊಂಡು ಇಟ್ಟೆವು. ಮುಸಿ ನೋಡಿ ಸುಮ್ಮನಾದ.

ಉತ್ತರಕ್ರಿಯೆಯಾದ ನಂತರ ರಾತ್ರಿ ನಾನು ಮತ್ತು ಅಣ್ಣ ದಾಸನನ್ನು ನೋಡಲು ಹೋದೆವು. ಆದರೆ ದಾಸ ಸತ್ತು ಹೋಗಿದ್ದ. ನಾನು ಮತ್ತು ಅಣ್ಣ ಸೇರಿ ನಮ್ಮ ದಾಸನ ಅಂತ್ಯಕ್ರಿಯೆಯನ್ನೂ ಮಾಡಿದೆವು. ತಂದೆಯವರನ್ನು ಕಳಕೊಂಡ ನೋವಿನೊಂದಿಗೆ ನಮಗೆ ದಾಸನನ್ನೂ ಕಳಕೊಂಡ ವ್ಯಥೆಯಾಯಿತು.

ನಂತರ ನಮಗೆ ದಾಸನಂತಹ ನಾಯಿ ಸಿಗಲೇ ಇಲ್ಲ. ಅವನಿಂದ ದಪ್ಪ, ಬಲಿಷ್ಟವಿದ್ದ ನಾಯಿ ಸಿಕ್ಕಿದರೂ, ಅವನಷ್ಟು ನಂಬಿಗಸ್ತ ಮತ್ತು ನಿಯತ್ತಿನ ನಾಯಿಯನ್ನು ನಮ್ಮಮನೆಯಲ್ಲಿ ಕಂಡಿಲ್ಲ. ಇನ್ನೆಲ್ಲೂ ಕೂಡ ಕಂಡಿಲ್ಲ.

ಈಗ ತಂದ ನಾಯಿಮರಿ ನಮ್ಮ ದಾಸನ ನೆನಪನ್ನು ನೀಡಬಹುದೇ ಹೊರತು ದಾಸನಾಗಲಾರ ಎಂಬ ಖಚಿತತೆ ನನಗಿದೆ.

ಒಲವಿನಿಂದ
ಬಾನಾಡಿ

2 comments:

 1. ನಮಸ್ತೆ...

  ನಿಮ್ಮ ಬ್ಲಾಗ್ ಸೊಗಸಾಗಿದೆ. ಚಿತ್ರ ಮತ್ತು ಬರಹಗಳು ಕೂಡ.ದಾಸನ ಕಥೆಯ ಹಿಂದಿನ ಮಾನವೀಯ ಆಯಾಮ ಎಷ್ಟೊಂದು ಚೆನ್ನಾಗಿದೆ.. ಹೀಗೆಯೇ ಬರೆಯುತ್ತಲಿರಿ..


  ಧನ್ಯವಾದಗಳು.
  ಜೋಮನ್.

  ReplyDelete
 2. ಪ್ರಿಯ ಜೋಮನ್,
  ನಿನ್ನ ಕಾಮೆಂಟ್‍ಗಳು ಬರಗಾಲದಲ್ಲಿ ಬಿದ್ದ 'ಮಳೆಹನಿ'ಯಂತೆ.
  ನಿನ್ನಷ್ಟು ಸೊಗಸಾಗಿಯಲ್ಲವಾದರೂ ಸಿಕ್ಕಷ್ಟು ಸಮಯದಲ್ಲಿ ಬರೆದುದನ್ನು ಕಂಡಿದ್ದಕ್ಕೆ ವಂದನೆಗಳು. ಮಳೆ ಹನಿಯುತ್ತಿರಲಿ.
  ಒಲವಿನಿಂದ
  ಬಾನಾಡಿ

  ReplyDelete