Wednesday, February 6, 2008

ಕೋಳಿಗಳ ಗೂಡು

ಸಂಜೆಯಾಯಿತೆಂದರೆ ಕೋಳಿಗಳನ್ನು ಗೂಡಿಗೆ ಹಾಕುವುದು ಒಂದು ದೊಡ್ಡ ಕೆಲಸವೇ. ಸುಮಾರು ನಾಲ್ಕು ಗಂಟೆ ಹೊತ್ತಿಗೆ ಕಟ್ಟಿದ್ದ ದೊಡ್ಡ ಕೋಳಿಗಳನ್ನು ಬಿಡುತ್ತಾರೆ. ಅದಕ್ಕಿಂತ ಮೊದಲೇ ಸ್ವತಂತ್ರವಾಗಿ ತೋಟ ಗದ್ದೆ ಎಂದು ತಿರುಗಾಡುತ್ತಿದ್ದ ಹೇಂಟೆ ಮತ್ತು ಸಣ್ಣ ಕೋಳಿಗಳು, ಅವುಗಳ ಮರಿಗಳು ಅಲ್ಲಿ ಇಲ್ಲಿ ಓಡಾಡುತ್ತಿರುತ್ತವೆ. ಸೂರ್ಯ ಕಂತಿದ ಎಂದಾಗುವಾಗ ಕೋಳಿಗಳನ್ನು ಕರೆಯಲು ಆರಂಭವಾಗುತ್ತದೆ. ತೋಟದ ಕೆಳಗಿನ ಐರಿನ್ ಬಾಯಮ್ಮ ತನ್ನ ಮನೆಯ ಕೋಳಿಗಳನ್ನು ಕೂಗಲು ಆರಂಭಿಸಿದರೆ, ನಾವು ನಮ್ಮ ಕೋಳಿಗಳನ್ನು ಇನ್ನೂ ದೊಡ್ಡ ಸ್ವರದಲ್ಲಿ ಕುವೋ, ಕುವೋ ಎಂದು ಕರೆಯುತ್ತೇವೆ. ಐರಿನ್‍ಳ ಮನೆಯ ಹುಂಜದೊಟ್ಟಿಗೆ ಸಖ್ಯ ಮಾಡಲು ಹೋಗಿದ್ದ ನಮ್ಮ ಹೇಂಟೆಯೋ ಅಥವಾ ಅವರ ಹೇಂಟೆಯ ಜತೆಗೆ ನಮ್ಮ ಮನೆಯ ಹುಂಜ ಹೋದುದೋ ಹೇಗಿದ್ದರೂ ಅದನ್ನು ಕಂಡು ಹಿಡಿದು ನಮ್ಮ ನಮ್ಮ ಕೋಳಿಗಳನ್ನು ಅವುಗಳ ಗೂಡಿಗೆ ಸೇರಿಸಬೇಕು. ಕೋಳಿಗಳು ಗೂಡಿಗೆ ಸೇರುವ ಮುಂಚೆ ಅಲ್ಲಿ ಇಲ್ಲಿ ಎಂದು ಓಡಾಟ ಮಾಡುತ್ತವೆ. ಸಂಜೆ ತಾನೆ ಬಿಟ್ಟ ಹುಂಜಗಳೋ ಇದ್ದ ತೆಂಗಿನ ಮರದ ಬುಡವನ್ನೋ, ಬಸಳೆ, ತೊಂಡೆಕಾಯಿ ಅಥವಾ ಹರಿವೆಯಂತಹ ತರಕಾರಿ ಗಿಡಗಳ ಬುಡವನ್ನೋ ತಮ್ಮ ಕಾಲಿನಿಂದ ಬಿಡಿಸಿ ಹುಳ ಹುಪ್ಪಟೆಗಳನ್ನು ಹುಡುಕುವುದನ್ನು ಇನ್ನೂ ನಿಲ್ಲಿಸಿರಲಾರದು. ಅವೆಲ್ಲವನ್ನೂ ಈಗಲೇ ಗೂಡಿಗೆ ಸೇರಿಸಬೇಕು.

No comments:

Post a Comment